Asianet Suvarna News Asianet Suvarna News

ಎಚ್.ಡಿ.ಕುಮಾರಸ್ವಾಮಿಗೆ ಲೋಕಸಭಾ ಚುನಾವಣೆ ಹೊಸದಲ್ಲ: 6ನೇ ಸಲ ಸ್ಫರ್ಧೆ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದು ಖಚಿತವಾಗಿದೆ. 1996ರಲ್ಲಿ ಮೊದಲ ಬಾರಿಗೆ ಆಗಿನ ಕನಕಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಕುಮಾರಸ್ವಾಮಿ.
 

Lok Sabha election is not new for HD Kumaraswamy 6th time contest gvd
Author
First Published Mar 29, 2024, 6:03 AM IST

ವಿಜಯ್ ಕೇಸರಿ

ಚನ್ನಪಟ್ಟಣ (ಮಾ.29): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದು ಖಚಿತವಾಗಿದೆ. 1996ರಲ್ಲಿ ಮೊದಲ ಬಾರಿಗೆ ಆಗಿನ ಕನಕಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಕುಮಾರಸ್ವಾಮಿ, ಈವರೆಗೆ 5 ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆ ಪೈಕಿ 2 ಬಾರಿ ಗೆಲುವು ಸಾಧಿಸಿದ್ದರೆ, 3 ಬಾರಿ ಸೋತಿದ್ದಾರೆ. ಇದೀಗ 6ನೇ ಬಾರಿಗೆ ಮಂಡ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸಲು ತಯಾರಿ ನಡೆಸಿದ್ದಾರೆ.

ಮೊದಲ ಯತ್ನದಲ್ಲೇ ಗೆಲುವು: 1996ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ, ಮೊದಲ ಪ್ರಯತ್ನದಲ್ಲೇ 5 ಬಾರಿ ಕ್ಷೇತ್ರದಿಂದ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎನ್ನಿಸಿದ್ದ ಎಂ.ವಿ.ಚಂದ್ರಶೇಖರ್ ಮೂರ್ತಿ ಅವರನ್ನು ಪರಾಭವಗೊಳಿಸಿ ಸಂಸತ್ ಪ್ರವೇಶಿಸಿದರು. ಆನಂತರ 1998 ಮತ್ತು 1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಮತ್ತೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರಾದರೂ ಎರಡೂ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಎರಡೂ ಚುನಾವಣೆಯಲ್ಲಿ ಅವರು ಮೂರನೇ ಸ್ಥಾನಕ್ಕೆ ತೃಪ್ತರಾದರು.

ದುರಂಕಾರದ ಮಾತು ಬಿಟ್ಟು, ಕೊಡುಗೆ ನೀಡಿ: ಸಿಎಂ ಸಿದ್ದರಾಮಯ್ಯಗೆ ಎಚ್‌ಡಿಕೆ ಸಲಹೆ

ಬೆಂಗಳೂರು ಗ್ರಾಮಾಂತರದಲ್ಲಿ ಗೆಲುವು: 2009ರಲ್ಲಿ ಕನಕಪುರ ಕ್ಷೇತ್ರ ಮರುವಿಂಗಡನೆಯ ನಂತರ ರಚಿತಗೊಂಡ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೊದಲ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್ ವಿರುದ್ಧ 1.20 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿ ಎರಡನೇ ಬಾರಿಗೆ ಲೋಕಸಭೆ ಪ್ರವೇಶಿಸಿದರು. 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರಾಂತರ ಮಾಡಿದ ಕುಮಾರಸ್ವಾಮಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಲೋಕಸಭೆಗೆ ಪ್ರವೇಶಿಸಲು ಇದು ಅವರು ನಡೆಸಿದ 5ನೇ ಪ್ರಯತ್ನವಾಗಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂ.ವೀರಪ್ಪ ಮೊಯ್ಲಿ ಗೆಲುವು ಸಾಧಿಸಿದರೆ ಕುಮಾರಸ್ವಾಮಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಇದೀಗ ಮತ್ತೊಮ್ಮೆ ಲೋಕಸಭೆಯತ್ತ ಚಿತ್ತ ನೆಟ್ಟಿರುವ ಕುಮಾರಸ್ವಾಮಿ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಈಗಾಗಲೇ ಮೂರು ಲೋಕಸಭಾ ಕ್ಷೇತ್ರದಲ್ಲಿ 5 ಬಾರಿ ಸ್ಪರ್ಧೆ ಮಾಡಿ ಎರಡು ಗೆಲುವು ಸಾಧಿಸಿರುವ ಅವರು, ಇದೀಗ ನಾಲ್ಕನೇ ಲೋಕಸಭಾ ಕ್ಷೇತ್ರದತ್ತ ಮುಖಮಾಡಿದ್ದು, ಇದು ಅವರ 6ನೇ ಲೋಕಸಭಾ ಚುನಾವಣೆಯಾಗಿದೆ.

ಶಾಸಕರಾಗಿದ್ದಾಗಲೇ ಲೋಕಸಭೆಗೆ ಸ್ಪರ್ಧೆ ಮೊದಲಲ್ಲ: ಶಾಸಕರಾಗಿದ್ದಾಗಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು, ಲೋಕಸಭಾ ಸದಸ್ಯತ್ವ ಅವಧಿ ಉಳಿದಿರುವಂತೆಯೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಕುಮಾರಸ್ವಾಮಿ ಅವರಿಗೆ ಹೊಸತಲ್ಲ. ಅಲ್ಲದೆ, ಎರಡೂ ಚುನಾವಣೆಯನ್ನು ಒಟ್ಟಿಗೆ ಎದುರಿಸಿದ ಉದಾಹರಣೆಯೂ ಇದೆ. 1999ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರ ಹಾಗೂ ಸಾತನೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕುಮಾರಸ್ವಾಮಿ ಒಮ್ಮೆಗೆ ಸ್ಪರ್ಧಿಸಿ ಎರಡೂ ಕಡೆ ಸೋಲು ಅನುಭವಿಸಿದ್ದರು. ಇದಾದ ನಂತರ, 2009ರಲ್ಲಿ ರಾಮನಗರ ಕ್ಷೇತ್ರದ ಶಾಸಕರಾಗಿದ್ದಾಗಲೇ ಎದುರಾದ ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದರು. ಬಳಿಕ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

2013ರಲ್ಲಿ ಇನ್ನೂ ಒಂದು ವರ್ಷ ಲೋಕಸಭೆಯ ಅವಧಿ ಉಳಿದಿರುವ ಸಂದರ್ಭದಲ್ಲೇ ಎದುರಾದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ, ಗೆಲುವು ಸಾಧಿಸಿದರು. ನಂತರ, ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇನ್ನು 2014ರಲ್ಲಿ ಎದುರಾದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿದಾಗಲೂ ಕುಮಾರಸ್ವಾಮಿ ರಾಮನಗರದ ಶಾಸಕರಾಗಿದ್ದರು. ಇದೀಗ ಚನ್ನಪಟ್ಟಣದ ಶಾಸಕರಾಗಿರುವಾಗಲೇ ಮಂಡ್ಯ ಲೋಕಸಭಾ ಕ್ಷೇತ್ರದತ್ತ ಅವರು ಮುಖ ಮಾಡಿದ್ದಾರೆ.

ಲೋಕಸಭಾ ಚುನಾವಣಾ ಪ್ರಚಾರ ಚರ್ಚಿಸಲು 29ಕ್ಕೆ ಜಂಟಿ ಸಭೆ: ಎಚ್‌.ಡಿ.ಕುಮಾರಸ್ವಾಮಿ

ಎಚ್ಡಿಕೆ ಸ್ಪರ್ಧಿಸಿರುವ ಲೋಕ ಚುನಾವಣೆಗಳು:
ವರ್ಷ ಕ್ಷೇತ್ರ ಫಲಿತಾಂಶ
1996 ಕನಕಪುರ ಗೆಲುವು
1998 ಕನಕಪುರ ಸೋಲು
1999 ಕನಕಪುರ ಸೋಲು
2009 ಬೆಂ.ಗ್ರಾ. ಗೆಲುವು
2014 ಚಿಕ್ಕಬಳ್ಳಾಪುರ ಸೋಲು

Follow Us:
Download App:
  • android
  • ios