Asianet Suvarna News Asianet Suvarna News

ಮೈಸೂರು ಪ್ರವಾಸೋದ್ಯಮಕ್ಕೆ ದಸರೆಯೇ ಬ್ರ್ಯಾಂಡ್‌!

ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಉಂಟಾಗಿದ್ದರಿಂದ ಈ ಬಾರಿಯ ದಸರೆ ಏನೋ, ಹೇಗೋ? ಎಂಬ ಆತಂಕವಿತ್ತು. ಆದರೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನಿರ್ದೇಶನದ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅದ್ಧೂರಿ ದಸರೆಗೆ ಟೊಂಕಕಟ್ಟಿನಿಂತರು. ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಹಲವರು ಅವರಿಗೆ ‘ಸಾಥ್‌’ ನೀಡಿದರು.

dasara is brand to mysore tourism
Author
Bangalore, First Published Oct 10, 2019, 3:14 PM IST

ಮೈಸೂರು(ಅ.10): ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ‘ದಸರೆಯೇ ಬ್ರ್ಯಾಂಡ್‌’ ಎಂಬುದು ಮತ್ತೊಮ್ಮೆ ಸಾಬೀತಾಯಿತು. ದಸರೆಯ ಆರಂಭಕ್ಕೂ ಮೊದಲೇ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ನಡೆಯಿತು.

ನಂತರ ಚಲನಚಿತ್ರೋತ್ಸವ, ಆಹಾರ ಮೇಳ, ಕುಸ್ತಿ ಪಂದ್ಯಾವಳಿ, ಸಿಎಂ ಕಪ್‌ ಕ್ರೀಡಾಕೂಟ, ಪುಸ್ತಕ ಮೇಳ, ಫಲಪುಷ್ಪ ಪ್ರದರ್ಶನ, ಮಹಿಳಾ ದಸರಾ, ಮಕ್ಕಳ ದಸರಾ, ಪಾರಂಪರಿಕ ನಡಿಗೆ, ಸೈಕ್ಲೋಥಾನ್‌, ಯೋಗ ದಸರೆ, ರೈತ ದಸರಾ, ಪಂಚ ಕವಿಗೋಷ್ಟಿ, ಮತ್ಸ್ಯಮೇಳ, ಯುವ ದಸರಾ, ಚಿತ್ರ ತಯಾರಿಕಾ ಕಾರ್ಯಾಗಾರ, ವಿಶೇಷ ಮಕ್ಕಳ ಪ್ರತಿಭಾ ಪ್ರದರ್ಶನ, ಹಾಫ್‌ ಮ್ಯಾರಥಾನ್‌, ಶ್ವಾನಗಳ ಪ್ರದರ್ಶನ, ಹಾಸ್ಯೋತ್ಸವ, ಪೊಲೀಸ್‌ ಸಮೂಹ ವಾದ್ಯವೃಂದ, ಕರಕುಶಲ ಕಲೆ ಪ್ರದರ್ಶನ, ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ, ದಸರಾ ದರ್ಶನ, ಜಾನಪದ ಸಿರಿ, ವೈಮಾನಿಕ ಪ್ರದರ್ಶನ, ಪಾರಂಪರಿಕ ಕಾರುಗಳ ಪ್ರದರ್ಶನ, ಪಾರಂಪರಿಕ ಆಟಗಳ ಸ್ಪರ್ಧೆ, ಹೊಸ ಉಂಡುವಾಡಿ ಬಳಿ ಸಾಹಸ ಕ್ರೀಡೋತ್ಸವ, ಪ್ಯಾರಾ ಮೋಟರಿಂಗ್‌, ಬಲೂನ್‌ ಏರ್‌ ಶೋ, ರಂಗಾಯಣದಲ್ಲಿ ರಂಗೋತ್ಸವ ಕಾರ್ಯಕ್ರಮಗಳು ಜರುಗಿದವು.

ಅರಮನೆ ಹೊರತುಪಡಿಸಿ, ಪುರಭವನ, ಚಿಕ್ಕಗಡಿಯಾರ ವೃತ್ತ, ಕಲಾಮಂದಿರ, ಕಿರುರಂಗಮಂದಿರ, ಜಗನ್ಮೋಹನ ಅರಮನೆ, ವೀಣೆ ಶೇಷಣ್ಣ ಭವನ, ನಾದಬ್ರಹ್ಮ ಸಂಗೀತ ಸಭಾ- ಹೀಗೆ ಇತರೆ ಸಪ್ತ ವೇದಿಕೆಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹೆಲಿ ರೈಡ್‌, ಪ್ಯಾಕೇಜ್‌ ಟೂರ್‌, ಹಸಿರು ಮತ್ತು ಚಿತ್ರಸಂತೆ, ತೆರೆದ ಬಸ್‌ ಸಂಚಾರದ ವ್ಯವಸ್ಥೆ ಮಾಡಿತ್ತು.

ಯಾರೇ ಮಾಡಿದರೂ ಜನ ಬರ್ತಾರೆ!

ಜಿಲ್ಲಾಡಳಿತ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಸಂಘಟಿಸಲಿ, ಬಿಡಲಿ ದಸರೆಯ ಸಂದರ್ಭದಲ್ಲಂತೂ ಪ್ರವಾಸಿಗರಂತೂ ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ. ಈ ಬಾರಿ ಸಾಲು ಸಾಲು ರಜೆಗಳು ಬಂದಿದ್ದರಿಂದ ಮೊದಲ ದಿನದಿಂದಲೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು.

ಆಯುಧಪೂಜೆ ಮತ್ತು ವಿಜಯದಶಮಿಯಂದು ಇರಲಿ ದಸರೆಗೆ ಚಾಲನೆ ಸಿಕ್ಕ ದಿನ (ಸೆ.29) ಭಾನುವಾರವಾಗಿದ್ದರಿಂದ ಮೈಸೂರಿನಲ್ಲಿ ಎಲ್ಲಿ ನೋಡಿದರಲ್ಲಿ ಜನ ಹಾಗೂ ವಾಹನಗಳ ದಟ್ಟಣೆ. ಮೊದಲೆಲ್ಲಾ ಪರಿಸ್ಥಿತಿ ಈ ರೀತಿ ಇರಲಿಲ್ಲ. ದಸರೆಗೆ ಪ್ರವಾಸಿಗರನ್ನು ಸೆಳೆಯಲು ಏನೆಲ್ಲಾ ‘ಸರ್ಕಸ್‌’ ಮಾಡಬೇಕಿತ್ತು. ಈಗ ಅದ್ಯಾವುದು ಬೇಕಿಲ್ಲ. ದಸರೆ ಇದೆ ಎಂದರೇ ಸಾಕು, ಪ್ರವಾಸಿಗರು ಮೈಸೂರಿನತ್ತ ಮುಖ ಮಾಡುತ್ತಿದ್ದಾರೆ.

ಪ್ರತಾಪ್‌ ಸಿಂಹನ್ನ ನಂಬಬೇಡ, ಹುಷಾರಾಗಿರು: ಸಚಿವ ಸೋಮಣ್ಣಗೆ ಸಿದ್ದು ಎಡ್ವೈಸ್..!

ಮೈಸೂರು ದೇಶದ ಪ್ರಮುಖ ಪ್ರವಾಸಿ ಕೇಂದ್ರ. ದಸರೆಯಲ್ಲಿ ಮಾತ್ರವಲ್ಲದೇ ವರ್ಷವಿಡಿ ಕೂಡ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಅದರಲ್ಲೂ ವಾರಾಂತ್ಯಗಳಲ್ಲಿ ಪ್ರವಾಸಿಗರು ಹೆಚ್ಚು. ಅರಮನೆ ಹಾಗೂ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡುವವರ ಅಂಕಿ ಅಂಶಗಳನ್ನು ತೆಗೆದುಕೊಂಡಲ್ಲಿ ಇದು ಗೊತ್ತಾಗುತ್ತದೆ. ಜನತೆಗೆ ದಸರೆಯ ಬಗ್ಗೆ ಇನ್ನೂ ಆಕರ್ಷಣೆ ಹೋಗಿಲ್ಲ ಎಂಬುದಕ್ಕೆ ದೇಶ- ವಿದೇಶಗಳಿಂದ ಹರಿದು ಬಂದ ಜನಸಾಗರವೇ ಸಾಕ್ಷಿಯಾಗಿದೆ.

ದೇಶಾದ್ಯಂತ ದಸರೆಯನ್ನು ಬೇರೆ ಬೇರೆ ಹೆಸರಿನಲ್ಲಿ ಆಚರಿಸಿದರೂ ಮೈಸೂರು ದಸರೆಗೆ ಇರುವ ವಿಶ್ವವಿಖ್ಯಾತಿ ಇನ್ನೂ ಕಳೆಗುಂದಿಲ್ಲ ರಾಜಮನೆತನದವರು ನವರಾತ್ರಿಯ ಸಂದರ್ಭದಲ್ಲಿ ನಡೆಸುವ ಖಾಸಗಿ ದರ್ಬಾರ್‌, ಸ್ವರ್ಣಖಚಿತ ಸಿಂಹಾಸನ, 750 ಕೆಜಿ ತೂಕದ ಚಿನ್ನದ ಅಂಬಾರಿ, ವಿಜಯದಶಮಿಯ ದಿನ ನಡೆಯುವ ಜಂಬೂಸವಾರಿಯ ಆಕರ್ಷಣೆಯೇ ಅಂಥದ್ದು.

ಆಕರ್ಷಿಸಿದ ದೀಪಾಲಂಕಾರ

ಈ ಬಾರಿಯ ಮೆರವಣಿಗೆಯಲ್ಲಿನ ಸಾಂಸ್ಕೃತಿಕ ತಂಡಗಳು, ಸ್ತಬ್ಧ ಚಿತ್ರಗಳು ಗಮನ ಸೆಳೆದವು. ಆದರೆ ಅರಮನೆ ಆವರಣದಲ್ಲಿ ಜಂಬೂಸವಾರಿ ವ್ಯವಸ್ಥಿತವಾಗಿರಲಿಲ್ಲ. ಕನ್ನಡ ಪುಸ್ತಕ ಮೇಳದಲ್ಲಿ ವ್ಯಾಪಾರ ಸರಿಯಾಗಿ ನಡೆಯಲಿಲ್ಲ ಎಂಬುದು ಪ್ರಕಾಶಕರ ದೂರು.

ಪ್ರಮುಖ ರಸ್ತೆ ಹಾಗೂ ವೃತ್ತಗಳು, ಪಾರಂಪರಿಕ ಕಟ್ಟಡ ಪುರಭವನಕ್ಕೆ ಮಾಡಿದ್ದ ದೀಪಾಲಂಕಾರ ಗಮನ ಸೆಳೆದವು. ದೊಡ್ಡಕೆರೆ ಮೈದಾನದಲ್ಲಿ ದಸರಾ ವಸ್ತು ಪ್ರದರ್ಶನÜ ಆರಂಭವಾಗಿದ್ದು, ಬಹುತೇಕ ಮಳಿಗೆಗಳು ಖಾಲಿ ಇವೆ. ಕುಪ್ಪಣ್ಣ ಉದ್ಯಾನದಲ್ಲಿ ನಡೆದ ದಸರಾ ಫಲಪುಷ್ಪ ಪ್ರದರ್ಶನ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ನಡೆದ ಆಹಾರ ಮೇಳ ಈ ಬಾರಿಯೂ ಕ್ಲಿಕ್‌ ಆಗಿದೆ. ಆದರೆ ಲಲಿತಮಹಲ್‌ ಮೈದಾನದಲ್ಲಿ ನಡೆದ ಆಹಾರ ಮೇಳಕ್ಕೆ ಪ್ರಚಾರ ಹೆಚ್ಚಿರಲಿಲ್ಲ. ಸ್ವಚ್ಛತಾ ಸಮಿತಿಯವರು ನಗರವನ್ನು ಸುಂದರವಾಗಿಡಲುಹಗಲು- ರಾತ್ರಿ ಕೆಲಸ ಮಾಡಿದರು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಖಾಸಗಿ ದರ್ಬಾರ್‌ , ಆಯುಧಪೂಜೆ ಎಂದಿನಂತೆ ಸಾಂಪ್ರದಾಯಿಕವಾಗಿ ನಡೆಸಿದರು.

ಹೊಸ ಜೋಡೆತ್ತು ಸೋಮಣ್ಣ- ಪ್ರತಾಪ್‌ ಸಿಂಹ!

ಈ ಬಾರಿಯ ದಸರೆಯ ಯಶಸ್ಸು ಜಿಲ್ಲಾ ಉಸ್ತುವಾರಿಯನ್ನು ಹೊತ್ತಿರುವ ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಮಾತ್ರವಲ್ಲದೇ ಸಂಸದ ಪ್ರತಾಪ್‌ ಸಿಂಹ ಅವರಿಗೂ ಸಲ್ಲುತ್ತದೆ. ಹಿರಿಯ ರಾಜಕಾರಣಿಯಾದ ಸೋಮಣ್ಣಗೆ ಉಸ್ತುವಾರಿ ಮಂತ್ರಿಯಾಗಿ ಮೊದಲ ದಸರಾ. ಸಂಸದರಾಗಿ ಪ್ರತಾಪ್‌ಗೆ ಆರನೇ ದಸರೆಯಾದರೂ ತಮ್ಮ ಬಿಜೆಪಿ ಸರ್ಕಾರ ಇರುವಾಗ ಮೊದಲ ದಸರಾ. ರಾಜ್ಯದಲ್ಲಿ ದಸರೆಗೆ ಮುನ್ನ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಹೀಗಾಗಿ ಈ ಬಾರಿಯೂ ಉತ್ತರ ಕರ್ನಾಟಕದ ಪ್ರಕೃತಿ ವಿಕೋಪ, ರಾಜಕೀಯ ಪಕ್ಷಗಳವರ ಅಸಹಕಾರ, ಹುಣಸೂರು ಉಪ ಚುನಾವಣೆಯ ನೀತಿ ಸಂಹಿತೆಯ ಬಿಸಿ- ಹೀಗೆ ನಾನಾ ಅಡ್ಡಿ ಆತಂಕಗಳು ಎದುರಾದರೂ ಎಲ್ಲವೂ ಮಾಯವಾದವು. ಉಪ ಚುನಾವಣೆ ಮುಂದಕ್ಕೆ ಹೋಯಿತು. ಹೀಗಾಗಿ ಎದೆಗುಂದದೆ ಉತ್ತಮವಾಗಿ ನಡೆಸಿದರು. ತಮ್ಮ ಮನೆಯ ಕಾರ್ಯಕ್ರಮದಂತೆ ಹಗಲುರಾತ್ರಿ ಅವಿರತವಾಗಿ ಓಡಾಡಿದರು.

ಜಂಬೂಸವಾರಿ ಹೊರಗೆ ಓಕೆ, ಅರಮನೆ ಅಂಗಳದಲ್ಲಿ ಗೊಂದಲ ಯಾಕೆ?

ಬಲರಾಮ ದ್ವಾರದಲ್ಲಿ ನಂದೀಧ್ವಜ ಪೂಜೆ ಮುಗಿದು, ಸಿಎಂ ಆದಿಯಾಗಿ ಗಣ್ಯರು ಅರಮನೆ ಅಂಗಳಕ್ಕೆ ಬರುತ್ತಿದ್ದಂತೆಯೇ ಮೆರವಣಿಗೆ ಹೊರಟಿತು. ಇದರಿಂದ ಈ ಬಾರಿ ಮೆರವಣಿಗೆ ಸಾಗಲು ಯಾವುದೇ ತೊಂದರೆಯಾಗಲಿಲ್ಲ. ಆದರೆ ಮೆರವಣಿಗೆ ಸಾಗುವ ಮಾರ್ಗದಲ್ಲಿ ಬ್ಯಾರಿಕ್ಯಾಡ್‌ ಅಳವಡಿಸಿ, ಸ್ತಬ್ಧ ಚಿತ್ರ ಮತ್ತು ಕಲಾತಂಡಗಳನ್ನು ಹೊರತುಪಡಿಸಿ, ಮೆರವಣಿಗೆ ಸಮಿತಿಯ ಸದಸ್ಯರು ಸೇರಿದಂತೆ ಇತರೆ ಯಾರನ್ನು ಬಿಡಬಾರದಿತ್ತು.

ಮೈಸೂರು: ದಸರಾ ಗಜಪಡೆಗೆ ಸಮೂಹ ವಿಶ್ರಾಂತಿ

ಆದರೆ ಈ ಬಾರಿ ಈ ರೀತಿಯಾಗಲಿಲ್ಲ. ಮೆರವಣಿಗೆ ಸಮಿತಿಯವರ ಜೊತೆಗೆ ಇತರೆ ಸಮಿತಿಯವರು, ಛಾಯಾಗ್ರಾಹಕರು ಸೇರಿಕೊಂಡು ಅರಮನೆ ಆಂಗಳದಲ್ಲಿ ಮೆರವಣಿಗೆಯ ಶಿಸ್ತು ಹಾಳು ಮಾಡಿದರು. ನಿಖರವಾಗಿ ಹೇಳಬೇಕೆಂದರೆ ಉಪ ಸಮಿತಿಯವರು ನೀಡುವ ಗುರುತಿನ ಚೀಟಿ ಆಧಾರದ ಮೇಲೆ ಅರಮನೆ ಒಳಗೆ ಪ್ರವೇಶವನ್ನೇ ನೀಡುವಂತಿಲ್ಲ. ಅರಮನೆ ಅಂಗಳ ಪ್ರವೇಶಿಸಬೇಕಾದರೆ ನಿಗದಿಪಡಿಸಿದ ಪಾಸ್‌ ಇರಲೇಬೇಕು. ಮೆರವಣಿಗೆ ಮಾರ್ಗದಲ್ಲಿ ಅಡ್ಡಾಡುತ್ತಿದ್ದವರ ಬಳಿ ಅದ್ಯಾವುದು ಇದ್ದಂತೆ ಕಂಡು ಬರಲಿಲ್ಲ.

ತೂಕ ಹೆಚ್ಚಿಸಿಕೊಂಡ ದಸರಾ ಆನೆಗಳು

ಕೆಲವರು ಹಳೆಯ ಗುರುಚಿನ ಚೀಟಿಗೆ ಟ್ಯಾಗ್‌ ಸಿಕ್ಕಿಸಿಕೊಂಡು ಓಡಾಡುತ್ತಿದ್ದರೂ ಪೊಲೀಸರು ಕೇಳಲಿಲ್ಲ. ಪೊಲೀಸರಲ್ಲೂ ಕೆಲವರು ತಮ್ಮ ಮೊಬೈಲ್‌ನಲ್ಲಿ ಮೆರವಣಿಗೆ ಸೆರೆ ಹಿಡಿಯುವಲ್ಲಿ ಬಿಜಿಯಾಗಿದ್ದರು!. ಡಾ,ಎಂ.ಎ. ಸಲೀಂ ಅವರು ಪೊಲೀಸ್‌ ಆಯುಕ್ತರಾಗಿದ್ದಾಗ ಮೆರವಣಿಗೆಗೆ ತಂದ ಶಿಸ್ತನ್ನು ಪಾಲಿಸದಿದ್ದಲ್ಲಿ ಜಂಬೂ ಸವಾರಿ ಎಂಬುದು ಸಂತೆಯೇ ಜಾತ್ರೆಯೋ ಎಂಬಂತೆ ಆಗುವುದರಲ್ಲಿ ಅನುಮಾನವೇ ಇಲ್ಲ.

ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ ಬದಲು ಪ್ರೇಮ ನಿವೇದನೆ ವಿವಾದ!

ಕಳೆದೆರಡು ವರ್ಷಗಳಿಂದ ಕ್ರಮವಾಗಿ ಡಿ. ದೇವರಾಜ ಅರಸು ರಸ್ತೆ ಹಾಗೂ ಕೃಷ್ಣರಾಜ ಬುಲ್‌ವಾರ್ಡ್‌ ರಸ್ತೆಯಲ್ಲಿ ಓಪನ್‌ ಸ್ಟ್ರೀಟ್‌ ಪೆಸ್ಟಿವಲ್‌ ಏರ್ಪಡಿಸಲಾಗಿತ್ತು. ಕಳೆದ ವರ್ಷವಂತೂ ಅತಿರೇಕಕ್ಕೆ ಹೋಗಿ, ಮಹಿಳೆಯರ ಮೇಲೆ ಲೈಂಗಿಕ ಕಿರುಕುಳಗಳು ನಡೆದ ಪ್ರಕರಣಗಳು ವರದಿಯಾಗಿ, ಮೈಸೂರಿನ ಮಾನ ಹರಾಜಾಗಿತ್ತು. ಈ ಬಾರಿ ಅದಕ್ಕೆ ಆಸ್ಪದ ನೀಡದೇ ಅಲ್ಲಿ ಹಸಿರು ಸಂತೆ ಹಾಗೂ ಚಿತ್ರಸಂತೆ ಏರ್ಪಡಿಸಿದ್ದು ಉತ್ತಮ ನಿರ್ಧಾರ. ಆದರೆ ಈ ಬಾರಿ ಯುವದಸರೆಯಲ್ಲಿ ರಾರ‍ಯಪರ್‌ ಚಂದನ್‌ಶೆಟ್ಟಿಹಾಗೂ ನಿವೇದಿತಾ ಗೌಡ ಪ್ರೇಮ ನಿವೇದನೆ ಪ್ರಕರಣ ವಿವಾದಕ್ಕೆ ಕಾರಣವಾಯಿತು. ಈ ರೀತಿ ವಿವಾದ ಆಗದಂತೆ ಎಚ್ಚರವಹಿಸಬೇಕು

‘ನಾಡಹಬ್ಬ’ದಲ್ಲಿ ಎಲ್ಲರೂ ಇರಲಿ..

‘ನಾಡಹಬ್ಬ’ ದಸರೆ ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ. ಹೀಗಾಗಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು, ಸಂಘ, ಸಂಸ್ಥೆಗಳು ಸೇರಿ ಆಚರಿಸಬೇಕು. ಆದರೆ ಈ ಬಾರಿ ಸ್ಥಳೀಯ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನವರು ಬಹುತೇಕ ಗೈರುಹಾಜರಾದರು. ದಸರೆಯ ಹತ್ತು ದಿನಗಳಲ್ಲಿ ಜಿ.ಟಿ. ದೇವೇಗೌಡ, ಕೆ.ಟ. ಶ್ರೀಕಂಠೇಗೌಡ, ಸಂದೇಶ್‌ ನಾಗರಾಜ್‌ ಆರಂಭದಲ್ಲಿ, ತನ್ವೀರ್‌ಸೇಠ್‌ ಮೊದಲ ಹಾಗೂ ಕೊನೆಯ ದಿನ ಪಂಜಿನ ಕವಾಯತಿನಲ್ಲಿ ಮಾತ್ರ ಕಾಣಿಸಿಕೊಂಡರು. ಅಧಿಕಾರೇತರ ಉಪ ಸಮಿತಿಗಳನ್ನು ರಚಿಸಿ, ಮುಖಂಡರು, ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಎಲ್ಲೆಲ್ಲೂ ಬಿಜೆಪಿಯರೇ ಕಂಡು ಬಂದರು. ಆದರೆ ಬಿಜೆಪಿಯ ಸಂಸದ ವಿ. ಶ್ರೀನಿವಾಸಪ್ರಸಾದ್‌ ಮತ್ತಿತರರು ದೂರ ಉಳಿದರು. ಮುಂಬರುವ ವರ್ಷಗಳಲ್ಲಿ ಆಳುವ ಸರ್ಕಾರ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾಡಹಬ್ಬ ಆಚರಿಸಬೇಕು.

ಸಂಚಾರ ನಿರ್ವಹಣೆ ಓಕೆ

ಮೂರ್ನಾಲ್ಕು ದಿನಗಳು ಹೊರತುಪಡಿಸಿದರೆ ಉಳಿದಂತೆ ಸಂಚಾರ ನಿರ್ವಹಣೆ ಉತ್ತಮವಾಗಿತ್ತು. ಹಿಂದೆ ಕೆಲವು ವರ್ಷಗಳು ಮಾಡಿದಂತೆ ಆಯಾ ಮಾರ್ಗದ ಬಸ್ಸುಗಳನ್ನು ಆಯಾ ರಸ್ತೆಯ ಗಡಿಯಲ್ಲೇ ನಿಲ್ಲಿಸಲಿಲ್ಲ. ವಾಹನ ಸಂಚಾರ ದಟ್ಟಣೆ ಇರುವಾಗ ಸಿಗ್ನಲ್‌ ಆಫ್‌ ಮಾಡಿ, ನಿರ್ವಹಣೆ ಮಾಡಿದ್ದು ಫಲ ನೀಡಿತು.

ಪಾಸ್‌ ರದ್ದು ಮಾಡಿ, ಟಿಕೆಟ್‌ ಮಾರಾಟ ಮಾಡಿ

ಲಕ್ಷಾಂತರ ಜನರು ಸೇರುವ ದಸರೆಯಲ್ಲಿ ಪ್ರತಿವರ್ಷ ಆಗುತ್ತಿರುವ ಗೊಂದಲಗಳ ನಿವಾರಣೆ ಆಗಬೇಕು. ಪದೇ ಪದೇ ಮರುಕಳಿಸಬಾರದು. ಶಿಷ್ಟಾಚಾರದ ಪ್ರಕಾರ ಯಾರಿಗೆ ಪಾಸ್‌ ಕೊಡಬೇಕೋ ಅವರಿಗೆ ಮಾತ್ರ ಕೊಟ್ಟು, ಕರ್ತವ್ಯನಿರತರನ್ನು ಹೊರತುಪಡಿಸಿ, ಉಳಿದವನ್ನೆಲ್ಲಾ ಟಿಕೆಟ್‌ ರೂಪದಲ್ಲಿ ಮಾರಾಟ ಮಾಡಬೇಕು. ಗೋಲ್ಡ್‌ ಕಾರ್ಡ್‌ ಹೊರತುಪಡಿಸಿ, ಇತರೆ ಟಿಕೆಟ್‌ಗಳಿಗೆ 250, 500, 750, 1000 ರು. ನಿಗದಿ ಮಾಡಬೇಕು. ಮುಂಚಿತವಾಗಿಯೇ ಮಾರಾಟ ಮಾಡುವುದರಿಂದ ಬೇರೆ ಬೇರೆ ರಾಜ್ಯಗಳ ಹಾಗೂ ದೇಶಗಳ ಜನ ಖರೀದಿಸಲು ಅವಕಾಶವಾಗುತ್ತದೆ. ಈ ರೀತಿ ಮಾಡುವುದರಿಂದ ದಸರೆಯನ್ನು ಪ್ರವಾಸೋದ್ಯಮದ ಚಿಮ್ಮು ಹಲಗೆಯಾಗಿ ಪರಿವರ್ತಿಸಿಕೊಂಡು, ಸೆಪ್ಟಂಬರ್‌- ಅಕ್ಟೋಬರ್‌ನಿಂದ ಡಿಸೆಂಬರ್‌- ಜನವರಿವರೆಗೆ ಮೈಸೂರಿಗೆ ಪ್ರವಾಸಿಗರನ್ನು ಸೆಳೆಯಬಹುದು.

ನಾನು ಇಲ್ಲಿಂದ ಹೋಗಲ್ಲ ಬಿಟ್ಟುಬಿಡಿ..! ಚೈನ್ ಕಿತ್ತುಕೊಂಡು ಓಡಿದ ಲಕ್ಷ್ಮೀ ಆನೆ!

ಸ್ಥಳೀಯರು ಬೇಕಾದರೆ ದುಡ್ಡುಕೊಟ್ಟು ಖರೀದಿಸಿ, ತಮ್ಮ ಕಡೆಯವರಿಗೆ ಕೊಡಲಿ. ಈ ರೀತಿ ಮಾಡುವುದರಿಂದ ಪಾಸ್‌ಗಾಗಿ ಸ್ಥಳೀಯರು ಹಾಕುವ ಒತ್ತಡ ಕಡಿಮೆಯಾಗುತ್ತದೆ ಒತ್ತಡದಿಂದಾಗಿಯೇ ಪಾಸುಗಳ ಸಂಖ್ಯೆಯನ್ನು ಹಂತ ಹಂತವಾಗಿ 10 ಸಾವಿರದಿಂದ 35 ಸಾವಿರವರೆಗೆ ಏರಿಸಿಕೊಂಡು ಬರಲಾಗಿದೆ. ಕೇವಲ ಅರಮನೆ ಅಂಗಳದಲ್ಲಿ ಕುಳಿತು ನೋಡುವ ಸಾವಿರಾರು ಮಂದಿಗೆ ದಸರೆ ಮಾಡಬೇಕೇ? ಅಥವಾ ಹೊರಗೆ ನಿಂತು ನೋಡುವ ಲಕ್ಷಾಂತರ ಮಂದಿಗಾಗಿ ದಸರೆ ಮಾಡಬೇಕೆ?. ಹೊರಗೆ ದಸರೆ ನೋಡುವಾಗ ಆಗುತ್ತಿರುವ ಕಿರಿಕಿರಿಯಿಂದ ಒಮ್ಮೆ ಬರುವ ಪ್ರವಾಸಿಗರು ಮತ್ತೊಮ್ಮೆ ಬರುವರೋ ಆಲೋಚಿಸಿ. ದಸರೆಯ ಕಾರ್ಯಕ್ರಮಗಳನ್ನು ಮುಂಚಿತವಾಗಿ ಫೈನಲ್‌ ಮಾಡಬೇಕು.

-ಅಂಶಿ ಪ್ರಸನ್ನಕುಮಾರ್‌

Follow Us:
Download App:
  • android
  • ios