Asianet Suvarna News Asianet Suvarna News

ನೆರೆ ಸಂತ್ರಸ್ತರಿಗೆ ನೇಪಾಳ ರಾಯಭಾರಿ ಕಚೇರಿ ಸಿಬ್ಬಂದಿ ನೆರವು

ನೇಪಾಳದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ವ್ಯಕ್ತಿಯೊಬ್ಬರು ಕೊಡಗಿನ ನೆರೆ ಸಂತ್ರಸ್ತರಿಗೆ ನೆರವಾಗಿದ್ದಾರೆ. ಡಾ.ಕೊಟ್ರಸ್ವಾಮಿ ಸ್ವತಃ ವಿರಾಜಪೇಟೆ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಿ ನೊಂದವರಲ್ಲಿ ಧೈರ್ಯ ತುಂಬಿದ್ದಾರೆ.

Person from embassy of India in nepal helps kodagu flood victims
Author
Bangalore, First Published Oct 15, 2019, 12:05 PM IST

ಮಡಿಕೇರಿ(ಅ.15): ವರ್ಷಗಳ ಹಿಂದೆ ತಾನು ಕರ್ತವ್ಯ ನಿರ್ವಹಿಸಿದ್ದ ಜಿಲ್ಲೆಯ ಮಳೆ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿ ನೇಪಾಳದಲ್ಲಿ ರಾಯಭಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಸ್ವತಃ ವಿರಾಜಪೇಟೆ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಿ ನೊಂದವರಲ್ಲಿ ಧೈರ್ಯ ತುಂಬಿದ್ದಾರೆ. ಇವರು ಡಾ.ಕೊಟ್ರಸ್ವಾಮಿ, ಉತ್ತರ ಕರ್ನಾಟಕದವರು. ಮೂಲತಃ ಪಶು ವೈದ್ಯರು. ವರ್ಷಗಳ ಹಿಂದೆ ಬಳ್ಳಾರಿಯಿಂದ ಕೊಡಗಿಗೆ ಪಶು ವೈದ್ಯನಾಗಿ ಕರ್ತವ್ಯಕ್ಕೆ ಬಂದಿದ್ದರು. ಆಗ ಕೆದಮುಳ್ಳೂರು ಗ್ರಾಮದಲ್ಲಿ ಐದಾರು ವರ್ಷ ಸೇವೆ ಸಲ್ಲಿಸಿದ್ದರು.

ಲಂಚ ಪಡೆಯುತ್ತಿದ್ದ ತಹಸೀಲ್ದಾರ್‌ ರೆಡ್‌ಹ್ಯಾಂಡ್‌ ಆಗಿ ಎಸಿಬಿ ಬಲೆಗೆ..!

ನಂತರ ಐಎಎಸ್‌ ಪರೀಕ್ಷೆ ತೇರ್ಗಡೆಯಾಗಿ ವಿದೇಶಾಂಗ ಸೇವೆಗೆ ಆಯ್ಕೆಯಾದರು. ಇದೀಗ ನೇಪಾಳದ ರಾಯಭಾರ ಕಚೇರಿಯಲ್ಲಿ ಅಪರ ನಿರ್ದೇಶಕರಾಗಿದ್ದಾರೆ. ಆದರೆ ತಾನು ಕೆಲಸ ಮಾಡಿದ ಊರಿನ ನೆನಪು ಮರೆತಿಲ್ಲ.

ಕೊಡಗಿನ ವಿರಾಜಪೇಟೆ ತಾಲೂಕನ ತೋರ ಗ್ರಾಮದಲ್ಲಿ ಭೂ ದುರಂತದ ವಿಚಾರ ಕೇಳಿ ತೀವ್ರ ನೋವಾಯಿತು. ಅದಕ್ಕಾಗಿ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಲು ಬಂದಿದ್ದೇನೆ. ಹಿಂದಿನ ವರ್ಷವೇ ಕೊಡಗಿಗೆ ಬರಬೇಕು, ಮಳೆ ಅನಾಹುತಕ್ಕೆ ಒಳಗಾದ ಜನರನ್ನು ನೋಡಬೇಕು ಅಂದುಕೊಂಡಿದ್ದರೂ ಬರಲಾಗಲಿಲ್ಲ ಎಂದು ಡಾ.ಕೊಟ್ರಸ್ವಾಮಿ ಸೋಮವಾರ ತೋರ ಗ್ರಾಮಕ್ಕೆ ಆಗಮಿಸಿದ ಸಂದರ್ಭ ಮಾಹಿತಿ ನೀಡಿದ್ದಾರೆ.

ಮಡಿಕೇರಿ: ಶಾಸಕರ ಕೈತೋಟದಿಂದಲೇ ಕಳವು

ಈ ಸಂದರ್ಭ ಅವರು ತೋರ ಗ್ರಾಮದಲ್ಲಿ ಸಂತ್ರಸ್ತರಿಗೆ 55 ಸಾವಿರ ರು. ವೈಯಕ್ತಿಕ ಪರಿಹಾರ ವಿತರಿಸಿದ್ದಾರೆ. ಪರಿಹಾರ ವಿತರಣೆ ವೇಳೆ ಹಾಜರಿದ್ದ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಕೊಡಗಿನಲ್ಲಿ ಈ ರೀತಿಯ ದುರಂತಗಳನ್ನು ಯಾರೂ ನಿರೀಕ್ಷಿಸಿರಲಿಲ್ಲ. ಕೊಡಗಿನಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಅನಾಹುತಗಳಾಗುತ್ತಿರುವುದು ನೋವಿನ ವಿಚಾರ. ಕೊಡಗಿನಲ್ಲಿ ಇಂದು ಮಳೆ ಎಂದರೆ ಬೆಚ್ಚಿ ಬಿಳುವ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.

ಮಂಡ್ಯದಲ್ಲಿ ಅಕ್ರಮವಾಗಿ ಮಾರಾಟವಾಗ್ತಿದೆ ಕೇರಳದ ಲಾಟರಿ ಟಿಕೆಟ್..!

ತಾ.ಪಂ. ಸದಸ್ಯಮಾಳೇಟಿರ ಪ್ರಶಾಂತ್‌ ಮಾತನಾಡಿ, ಕೊಟ್ರಸ್ವಾಮಿ ಇಲ್ಲಿ ವೈದ್ಯರಾಗಿ ಉತ್ತಮ ಸೇವೆ ನೀಡಿ ಜನರ ಪ್ರೀತಿ ಪಾತ್ರರಾಗಿದ್ದು, ನಂತರ ಉನ್ನತ ಅಧಿಕಾರಿಯಾಗಿ ತೆರಳಿದರೂ ಸಹ, ಗ್ರಾಮದ ಜನರ ಮೇಲೆ ಪ್ರೀತಿ ಹೊಂದಿದ್ದಾರೆ. ಈಗ ಅವರು ತೋರ ಗ್ರಾಮಕ್ಕೆ ಬಂದು ಜನರಿಗೆ ಸಾಂತ್ವನ ಹೇಳಿ ನಮ್ಮ ಜೊತೆ ಬೆರೆತಿರುವುದು ಅವರ ಸರಳ , ಸಜ್ಜನಿಕೆಗೆ ಸಾಕ್ಷಿಯಾಗಿದೆ ಎಂದರು.

ತನ್ನವರನ್ನು ಕಳೆದುಕೊಂಡ ಪ್ರಭು ಕುಮಾರ್‌, ಪರಮೇಶ್ವರ ಕುಟಂಬಕ್ಕೆ, ಮನೆ ಕಳೆದುಕೊಂಡ ಭಾಗ್ಯಶ್ರೀ, ಲಿಂಗಯ್ಯ ಹಾಗೂ ದುರಂತದ ವೇಳೆ ಮನೆಯಲ್ಲಿ ಸಿಲುಕಿ ಗಾಯಗೊಂಡ ಹರೀಶ್‌ ಅವರಿಗೆ ಒಟ್ಟು 55 ಸಾವಿರ ರು. ವೈಯಕ್ತಿಕ ಪರಿಹಾರ ನೀಡಿದರು.

ಪ್ರಯಾಣಿಕರ ಗಮನಕ್ಕೆ: ಹಾಸನ-ಬೆಂಗಳೂರಿನ ಈ ಬಸ್ ಕೆಟ್ಟು ನಿಂತಿದೆ

ವಿರಾಜಪೇಟೆ ಪಶುವೈದ್ಯ ಡಾ.ಶಾಂತೇಶ್‌, ಪಶುವೈದ್ಯರಾದ ಡಾ.ಸಂತೋಷ್‌, ಪಾಲಂಗಾಲದ ಬೆಳೆಗಾರರಾದ ರಾಮ್‌ ಪ್ರಸಾದ್‌, ಸ್ಥಳಿಯ ಪ್ರಮುಖ ಮಾಳೇಟಿರ ಸುಬ್ಬಯ್ಯ ಉಪಸ್ಥಿತರಿದ್ದರು.

Follow Us:
Download App:
  • android
  • ios