Asianet Suvarna News Asianet Suvarna News

Padma Awards 2024: ವೆಂಕಯ್ಯನಾಯ್ಡು, ನಟ ಮಿಥುನ್‌ ಚಕ್ರವರ್ತಿ, ಗಾಯಕಿ ಉಷಾ ಸೇರಿ ಹಲವರಿಗೆ ಪದ್ಮ ಪ್ರಶಸ್ತಿ ಗೌರವ

ಮಾಜಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಸುಲಭ್‌ ಶೌಚಾಲಯ ಅಭಿಯಾನದ ರೂವಾರಿ ಬಿಂದೇಶ್ವರ್‌ ಪಾಠಕ್‌, ನಟ ಮಿಥುನ್‌ ಚಕ್ರವರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ 106 ಮಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಪದ್ಮ ಪ್ರಶಸ್ತಿ ನೀಡಿ ಪುರಸ್ಕರಿಸಿದರು. 

Padma awards 2024 Venkaiah Naidu Mithun Chakraborty Ram Naik receive prestigious honour from President Droupadi Murmu gvd
Author
First Published Apr 23, 2024, 7:03 AM IST

ನವದೆಹಲಿ (ಏ.23): ಮಾಜಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಸುಲಭ್‌ ಶೌಚಾಲಯ ಅಭಿಯಾನದ ರೂವಾರಿ ಬಿಂದೇಶ್ವರ್‌ ಪಾಠಕ್‌, ನಟ ಮಿಥುನ್‌ ಚಕ್ರವರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ 106 ಮಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಪದ್ಮ ಪ್ರಶಸ್ತಿ ನೀಡಿ ಪುರಸ್ಕರಿಸಿದರು. ಬಿಂದೇಶ್ವರ್‌ ಪಾಠಕ್‌ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಮತ್ತು ಪ್ರಖ್ಯಾತ ಭರತನಾಟ್ಯ ಕಲಾವಿದೆ ಪದ್ಮ ಸುಬ್ರಹ್ಮಣ್ಯಮ್‌ ಅವರಿಗೆ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು.

ನಟ ಮಿಥುನ್‌ ಚಕ್ರವರ್ತಿ, ಗಾಯಕಿ ಉಷಾ ಉತ್ತುಪ್‌, ಉತ್ತರಪ್ರದೇಶದ ಮಾಜಿ ರಾಜ್ಯಪಾಲರಾದ ರಾಮ್‌ ನಾಯಕ್‌ ಹಾಗೂ ಖ್ಯಾತ ಉದ್ಯಮಿ ಸೀತಾರಾಂ ಜಿಂದಾಲ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕದ ಟೆನ್ನಿಸ್‌ ಆಟಗಾರ ರೋಹನ್‌ ಬೋಪಣ್ಣ, ಉದ್ಯಮಿ ಹಾಗೂ ಸಮಾಜ ಸೇವಕಿ ಕಿರಣ್ ನಾಡಾರ್‌ ಸೇರಿ ಹಲವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

2024ರ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ, ರಾಜ್ಯದ 8 ಮಂದಿಗೆ ಪದ್ಮಶ್ರೀ, ಒಬ್ಬರಿಗೆ ಪದ್ಮಭೂಷಣ ಗೌರವ!

ಗಣರಾಜ್ಯೋತ್ಸವದ ಮುನ್ನಾದಿನ 6 ಜೋಡಿಗಳೂ ಸೇರಿದಂತೆ 132 ಮಂದಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ಅದರ ಪೈಕಿ ಸೋಮವಾರ 106 ಮಂದಿಗೆ ಪ್ರಶಸ್ತಿ ನೀಡಲಾಗಿದ್ದು, ಉಳಿದವರಿಗೆ ಮುಂದಿನ ವಾರದಲ್ಲಿ ಪ್ರಶಸ್ತಿ ನೀಡುವುದಾಗಿ ರಾಷ್ಟ್ರಪತಿ ಭವನ ಪ್ರಕಟಿಸಿದೆ. ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ, ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಉಪಸ್ಥಿತರಿದ್ದರು.

ನೃತ್ಯ ಮಾಡುತ್ತಲೇ ಪ್ರಶಸ್ತಿ ಸ್ವೀಕರಿಸಿದ ದ್ರೋಣಾ: ಅಸ್ಸಾಂ ಮೂಲದ ಜಾನಪದ ಕಲಾವಿದೆ ದ್ರೋಣಾ ಭುಯ್ಯಾನ್‌ ತಾವು ಸಾಧನೆ ಮಾಡಿರುವ ದೇವಭಾನಿ ನೃತ್ಯ ಮಾಡುತ್ತಲೇ ಕೆಂಪು ಹಾಸಿನ ಮೇಲೆ ನಡೆದು ಬಂದು ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.

ರಾಜ್ಯದ ಸೀತಾರಾಂ, ಚಂದ್ರಶೇಖರ್‌ಗೆ ಪದ್ಮ ಪ್ರಶಸ್ತಿ ಪ್ರದಾನ: ಸೋಮವಾರ ದೆಹಲಿಯಲ್ಲಿ ಖ್ಯಾತ ಉದ್ಯಮಿ ಸೀತಾರಾಂ ಜಿಂದಾಲ್‌ಗೆ ಪದ್ಮಭೂಷಣ ಪ್ರಶಸ್ತಿ, ಖ್ಯಾತ ಮನೋವೈದ್ಯ ಸಿ.ಆರ್‌.ಚಂದ್ರಶೇಖರ್‌ಗೆ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ಪ್ರದಾನ ಮಾಡಿ ಗೌರವಿಸಿದರು.

ಸುಧಾಮೂರ್ತಿ, ಎಸ್‌ಎಲ್ ಭೈರಪ್ಪ ಸೇರಿ ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ ಮುರ್ಮು!

ಬೋಪಣ್ಣ ಪದ್ಮಶ್ರೀ ಗರಿ: ಭಾರತದ ಹಿರಿಯ ಟೆನಿಸಿಗ, ಕರ್ನಾಟಕದ ರೋಹಣ್ ಬೋಪಣ್ಣ ಅವರಿಗೆ ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಹಸ್ತಾಂತರಿಸಿದರು. ಬೋಪಣ್ಣ 2019ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.

Follow Us:
Download App:
  • android
  • ios