ಸಾರಾಂಶ

ಚೀನಾದ ಬೈದು ಕಂಪನಿ ಪ್ರಾಣಿಗಳ ಭಾಷೆಯನ್ನು ಮಾನವ ಭಾಷೆಗೆ ಅನುವಾದಿಸುವ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದೆ. ಧ್ವನಿ, ಶರೀರ ಭಾಷೆ, ವರ್ತನೆ ವಿಶ್ಲೇಷಿಸಿ ಭಾವನೆಗಳನ್ನು ಗುರುತಿಸಿ ಅನುವಾದಿಸುವ ಈ ತಂತ್ರಜ್ಞಾನ ಇನ್ನೂ ಸಂಶೋಧನಾ ಹಂತದಲ್ಲಿದೆ. ಈ AI ಸಾಫ್ಟ್‌ವೇರ್ ಪ್ರಾಣಿ-ಮಾನವ ಸಂವಹನವನ್ನು ಸುಧಾರಿಸುವ ಗುರಿ ಹೊಂದಿದೆ. ಇದೇ ರೀತಿಯ ಪ್ರಯತ್ನಗಳು ಇತರೆಡೆಯೂ ನಡೆಯುತ್ತಿವೆ.

ಶ್ವಾನಗಳು ಕೇವಲ ಸಾಕುಪ್ರಾಣಿಗಳಲ್ಲ, ನಮ್ಮ ಪ್ರಪಂಚ. ನಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರಂತೆ. ಶ್ವಾನಗಳು ಬೊಗಳುವ ಮೂಲಕ ಮತ್ತು ತಮ್ಮ ಪ್ರೀತಿಯ ಸಂಕೇತಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತವೆ. ಆದರೆ, ನಿಮ್ಮ ನಾಯಿ ಬೊಗಳುವ ಶಬ್ದವನ್ನು ನೀವು ಮಾನವ ಭಾಷೆಗೆ ಅನುವಾದಿಸಲು ಸಾಧ್ಯವಾದರೆ ಹೇಗಿರುತ್ತದೆ. ಹೌದು, ಚೀನಾದ ಕಂಪನಿಯೊಂದು ಕೃತಕ ಬುದ್ಧಿಮತ್ತೆ ಸಾಫ್ಟ್‌ವೇರ್ (AI software)ಅನ್ನು ರಚಿಸಲು ಪ್ರಯತ್ನಿಸುತ್ತಿದೆ, ಅದರ ಮೂಲಕ ಇದು ಸಾಧ್ಯವಾಗುತ್ತದೆ.

ಈ AI ಮೂಲಕ ಪ್ರಾಣಿಗಳ ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ. ಈ ಕಂಪನಿಯು ಬೀಜಿಂಗ್‌ನಲ್ಲಿದ್ದು, ಕಂಪನಿಯ ಹೆಸರನ್ನು ಚೀನಾದ ಟೆಕ್ ದೈತ್ಯ ಕಂಪನಿ ಬೈದು (Baidu) ಎಂದು ಹೇಳಲಾಗುತ್ತದೆ. ಇದು ಪ್ರಾಣಿಗಳ ಧ್ವನಿಯನ್ನು ಮಾನವ ಭಾಷೆಗೆ ಅನುವಾದಿಸಲು ಹೊಸ ಎಐ (AI) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಈ ಪ್ರಾಜೆಕ್ಟ್ ಪ್ರಾಣಿಗಳ ಧ್ವನಿ, ಶರೀರದ ಭಾಷೆ, ವರ್ತನೆ ಮತ್ತು ಜೈವಿಕ ಸಂಕೇತಗಳನ್ನು ಸಂಗ್ರಹಿಸಿ, ಆ ಮಾಹಿತಿಯನ್ನು ವಿಶ್ಲೇಷಿಸಿ, ಪ್ರಾಣಿಯ ಭಾವನೆಗಳನ್ನು ಗುರುತಿಸಲು ಮತ್ತು ಅವುಗಳನ್ನು ಮಾನವ ಭಾಷೆಗೆ ಅನುವಾದಿಸಲು ಉದ್ದೇಶಿಸಿದೆ. ತಮ್ಮ ಸಾಕುಪ್ರಾಣಿಗಳು ಏನು ಹೇಳುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮಾಲೀಕರು ಕಷ್ಟಪಡುತ್ತಾರೆ, ಇದು ಹತಾಶೆಗೆ ಕಾರಣವಾಗುತ್ತದೆ ಎಂದು ಕಂಪನಿಯು ಗುರುತಿಸಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಪ್ರಾಣಿಗಳ ಶಬ್ದಗಳನ್ನು ಮಾನವ ಭಾಷೆಗೆ ಅನುವಾದಿಸುವ AI ಅನ್ನು ರಚಿಸಬೇಕೆಂದು ಅವರು ನಿರ್ಧರಿಸಿದರು. ಅವರು ಹೊಸ ಹೈಟೆಕ್ ಅನುವಾದ ವ್ಯವಸ್ಥೆಗಾಗಿ China National Intellectual Property Administration)ನಲ್ಲಿ ಪೇಟೆಂಟ್ ಸಲ್ಲಿಸಿದ್ದಾರೆ.   

ಅಷ್ಟಕ್ಕೂ ಈ AI ಸಾಫ್ಟ್‌ವೇರ್ ಹೇಗೆ ಕೆಲಸ ಮಾಡುತ್ತದೆ?
ಈ ಅನುವಾದ ಸಾಫ್ಟ್‌ವೇರ್, ಪ್ರಾಣಿಯಿಂದ ಅದರ ಧ್ವನಿ, ದೇಹ ಭಾಷೆ, ನಡವಳಿಕೆಯಲ್ಲಿನ ಬದಲಾವಣೆಗಳು ಮತ್ತು ಇತರ ಜೈವಿಕ ಸಂಕೇತಗಳನ್ನು ಒಳಗೊಂಡಂತೆ ವಿವಿಧ ಡೇಟಾವನ್ನು ಸಂಗ್ರಹಿಸುತ್ತದೆ. ಆ ನಂತರ AI ಚಾಲಿತ ಅಪ್ಲಿಕೇಶನ್ ಭಾವನೆಯನ್ನು ನಿರ್ಧರಿಸಲು ಡೇಟಾವನ್ನು ವಿಶ್ಲೇಷಿಸುತ್ತದೆ ಮತ್ತು ಅದನ್ನು ಜನರು ಆಯ್ಕೆ ಮಾಡಿದ ಭಾಷೆಗೆ ಪರಿವರ್ತಿಸುತ್ತದೆ. ಈ ಮೂಲಕ, ಪ್ರಾಣಿಗಳು ಮತ್ತು ಜನರ ನಡುವಿನ ಸಂವಹನ ಸುಧಾರಿಸುತ್ತದೆ ಮತ್ತು ಆಗ ಮೂಕ ಜೀವಿಗಳು ಏನು ಹೇಳುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ನಮಗೆ ಸುಲಭವಾಗುತ್ತದೆ.

ಇನ್ನೂ ಸಂಶೋಧನಾ ಹಂತದಲ್ಲಿದೆ ಈ AI ಸಾಫ್ಟ್‌ವೇರ್
"ಈ ಸಾಫ್ಟ್‌ವೇರ್ ಇನ್ನೂ ಸಂಶೋಧನಾ ಹಂತದಲ್ಲಿದೆ. ಆದರೆ ಇದು ಪ್ರಾಣಿಗಳೊಂದಿಗೆ ನೇರ ಸಂವಹನ ಸಾಧ್ಯವಾಗುವ ಭವಿಷ್ಯವನ್ನು ಸೂಚಿಸುತ್ತದೆ. AI ಕಂಪನಿಯಾಗಿ ನಾವು ನಿರಂತರವಾಗಿ ಹೊಸ ತಂತ್ರಜ್ಞಾನಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇವೆ" ಎಂದು ಬೈದು ವಕ್ತಾರರು ಹೇಳಿದ್ದಾರೆ. ಅವರ ಪ್ರಕಾರ, ಪೇಟೆಂಟ್ ಅನ್ನು ಡಿಸೆಂಬರ್‌ನಲ್ಲಿ ಸಲ್ಲಿಸಲಾಗಿತ್ತು, ಆದರೆ ಅದನ್ನು ಈ ವಾರದ ಆರಂಭದಲ್ಲಿಯೇ ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ. ಶೀಘ್ರದಲ್ಲೇ ಈ AI ಉಪಕರಣವು ಸಂಪೂರ್ಣವಾಗಿ ಸಿದ್ಧವಾಗಲಿದೆ ಮತ್ತು ಜನರಿಗೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ. ಈ ರೀತಿಯ ಪ್ರಯತ್ನಗಳು ಇತರ ಸಂಸ್ಥೆಗಳಲ್ಲಿಯೂ ನಡೆಯುತ್ತಿವೆ, ಉದಾಹರಣೆಗೆ Project CETI ಮತ್ತು Earth Species Project, ಇವುಗಳು ಪ್ರಾಣಿಗಳ ಸಂವಹನವನ್ನು ಎಐ ಬಳಸಿ ವಿಶ್ಲೇಷಿಸುತ್ತಿವೆ. ಈ ತಂತ್ರಜ್ಞಾನ ಯಶಸ್ವಿಯಾದರೆ, ಪ್ರಾಣಿಗಳ ಭಾವನೆಗಳನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗಬಹುದು, ಇದರಿಂದ ಮಾನವ-ಪ್ರಾಣಿ ಸಂವಹನದಲ್ಲಿ ಹೊಸ ಯುಗ ಆರಂಭವಾಗಬಹುದು. 

ಹಲವು ಅಪ್ಲಿಕೇಶನ್‌ಗಳು ಲಭ್ಯ
ಪ್ರಾಣಿಗಳ ಭಾಷೆಯನ್ನು ಭಾಷಾಂತರಿಸಲು ಹಲವು ಅಪ್ಲಿಕೇಶನ್‌ಗಳು ಲಭ್ಯವಿದೆ. ಕಂಪನಿಯೊಂದು ನಾಯಿಗಳು ಅಥವಾ ಇತರ ಪ್ರಾಣಿಗಳ ಭಾಷೆಯನ್ನು ಭಾಷಾಂತರಿಸಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ನೀವು ಪ್ಲೇ ಸ್ಟೋರ್‌ಗೆ ಹೋದರೆ, ಹೀಗೆ ಮಾಡುವುದಾಗಿ ಹೇಳಿಕೊಳ್ಳುವ ಹಲವು ಅಪ್ಲಿಕೇಶನ್‌ಗಳು ನಿಮಗೆ ಸಿಗುತ್ತವೆ. ಈ ಅಪ್ಲಿಕೇಶನ್‌ಗಳಲ್ಲಿ, ಪ್ರಾಣಿಗಳ ಧ್ವನಿಯನ್ನು ರೆಕಾರ್ಡ್ ಮಾಡಿದ ನಂತರ, ಪ್ರಾಣಿ ಏನು ಹೇಳಲು ಬಯಸುತ್ತದೆ ಎಂಬುದನ್ನು ಬರವಣಿಗೆಯ ಮೂಲಕ ತೋರಿಸುತ್ತದೆ. ಆದಾಗ್ಯೂ ಈ ಅಪ್ಲಿಕೇಶನ್‌ಗಳನ್ನು ಬಳಸುವ ಹೆಚ್ಚಿನ ಜನರು ಅವು ಸಂಪೂರ್ಣವಾಗಿ ಪರಿಣಾಮಕಾರಿಯಾಗಿಲ್ಲ ಎಂದು ಹೇಳುತ್ತಾರೆ.