ಸಾರಾಂಶ

ಕಬ್ಬನ್ ಪಾರ್ಕ್‌ನಲ್ಲಿ ಊಟ, ಫೋಟೋಶೂಟ್, ಗುಂಪು ಸೇರುವಿಕೆ ನಿಷೇಧಿಸಿ ಹೊಸ ನಿಯಮ ಜಾರಿಯಾಗಿದೆ. ಹಿರಿಯ ನಾಗರಿಕರು ಇದನ್ನು ವಿರೋಧಿಸಿ, ಪರ್ಯಾಯ ಮಾರ್ಗಗಳ ಬಗ್ಗೆ ಪ್ರಶ್ನಿಸಿದ್ದಾರೆ. ಮಕ್ಕಳಿಗೆ ಪ್ರಕೃತಿಯ ಅನುಭವ ಕಲಿಸುವುದು ಹೇಗೆ, ಫೋಟೋಶೂಟ್‌ಗೆ ನಿಗದಿತ ಸ್ಥಳ, ನಿಷೇಧಕ್ಕಿಂತ ಜವಾಬ್ದಾರಿಯ ಅರಿವು ಮೂಡಿಸುವ ಅಗತ್ಯತೆ ಒತ್ತಿ ಹೇಳಿದ್ದಾರೆ.

ಬೆಂಗಳೂರು (ಮೇ 12): ನಗರದ ಹೃದಯ ಭಾಗದಲ್ಲಿರುವ ಕುಬ್ಬನ್ ಪಾರ್ಕ್‌ ಬಗ್ಗೆ ಪ್ರತಿ ಕೆಲವು ತಿಂಗಳಿಗೆ ಸುದ್ದಿಗಳಲ್ಲೊಂದು ಹೊಸ ನಿಯಮದ ಸುದ್ದಿ ಬರುತ್ತಲೇ ಇರುತ್ತದೆ. ಈ ಸಲದ ನಿಯಮಗಳ ಪಟ್ಟಿ ಸ್ವಲ್ಪ ಹೆಚ್ಚು ಕಟ್ಟುನಿಟ್ಟಿನಂತೆಯೇ ತೋರುತ್ತಿದೆ. ಈ ಪಾರ್ಕ್‌ನಲ್ಲಿ ಊಟ ಮಾಡಬಾರದು, ಫೋಟೋಶೂಟ್ ಅಥವಾ ರೀಲ್ಸ್ ಚಿತ್ರೀಕರಣ ನಡೆಸಬಾರದು. ಚೆಂಡು, ತಟ್ಟೆ ಎಸೆತದಂತಹ ಫ್ರಿಸ್ಬಿ ಸೇರಿ ಅಥವಾ ಇತರರಿಗೆ ವಸ್ತುಗಳು ತಾಗುವಂತಹ ಆಟವಾಡಬಾರದು, 20 ಜನಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ ಎಂಬ ನಿಯಮ ಹೇರಲಾಗಿದೆ.

ಈ ಹೊಸ ನಿಯಮಗಳನ್ನು ನೋಡಿದ ಹಿರಿಯ ಬೆಂಗಳೂರಿಗೊಬ್ಬರು ತಮ್ಮ ಆಕ್ರೋಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಈ ನಿಯಮಗಳನ್ನು ತಯಾರಿಸುವವರು ಯಾರು? ಎಂಬ ಪ್ರಶ್ನೆಯಿಂದಲೇ ಅವರು ತಮ್ಮ ಆಕ್ರೋಶ ಹಿರಹಾಕಲು ಶುರುಮಾಡುತ್ತಾರೆ. ಕೆಲವೊಂದು ಚಟುವಟಿಕೆಗಳು ಇತರರಿಗೆ ಕಿರಿಕಿರಿ ಉಂಟುಮಾಡಬಹುದು ಎಂಬ ಕಾರಣಕ್ಕೆ ಹೀಗೆ ನಿಷೇಧ ಹೇರುವುದನ್ನು ಅವರು ಕಡ್ಡಿ ಮುರಿದಂತೆ ಖಂಡನೆ ಮಾಡಿದ್ದಾರೆ. ಕಬ್ಬನ್ ಪಾರ್ಕ್‌ನೊಳಗಿನ ಈ ಎಲ್ಲ ನಿಷೇಧಗಳು ಉದ್ಯಾನವನದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬ ಹೆಸರಿನಲ್ಲಿ ನಿಯಮಗಳನ್ನು ಮಾಡುತ್ತಿರುವುವುದು ಆಶ್ಚರ್ಯಕ್ಕೆ ಕಾರಣವಾಗಿದೆ ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರು ಹಿರಿಯ ನಾಗರೀಕರ ಪ್ರಶ್ನೆಗಳಿವು:

  • ಈ ಸಮಸ್ಯೆಗಳನ್ನು ಬೇರೆ ರೀತಿಯಿಂದ ಸದುಪಾಯವಾಗಿ ನಿಭಾಯಿಸಲಾಗುವುದಿಲ್ಲವೇ?
  • ಏಕೆ ಈ ನಿಷೇಧಗಳು ಎಲ್ಲದರ ಮೇಲೆ ಬೇಕು?
  • ಇಡೀ ಜಗತ್ತಿನ ಉದ್ಯಾನವನಗಳು ಇದೇ ರೀತಿಯ ನಿಯಮಗಳನ್ನು ಪಾಲಿಸುತ್ತವೆಯಾ?
  • ನಮ್ಮ ಬೆಂಗಳೂರು ನಾಗರಿಕರು ಕಳೆದ ಕೆಲವು ದಶಕಗಳಲ್ಲಿ ನಿಯಂತ್ರಣ ಮಾಡಲಾರದಷ್ಟು ಹಠಮಾರಿಗಳು ಆಗಿದ್ದಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಪೋಷಕರಾಗಿ ನಾವು ಮಕ್ಕಳಿಗೆ ಏನು ಕಲಿಸಬೇಕು?
ಸಾಮಾನ್ಯವಾಗಿ ಪಾರ್ಕ್‌ಗೆ ಮಕ್ಕಳನ್ನು ಕರೆದುಕೊಂಡು ಹೋಗುವುದಕ್ಕೆ ಒಂದು ದಿನದ ಪಿಕ್ನಿಕ್ ಅನ್ನು ಆಯೋಜನೆ ಮಾಡುತ್ತೇವೆ. ಮಕ್ಕಳಿಗೆ ನಾವು ಚಂದದ ಪಿಕ್ನಿಕ್ ಅಭ್ಯಾಸವನ್ನು ಮೈಗೂಡಿಸಬೇಕು ಎಂದರೆ ಪಿಕ್ನಿಕ್ ಹೋಗುವಾಗ ಮಕ್ಕಳ ಕೆಲವು ಹಾನಿಯನ್ನುಂಟು ಮಾಡದ ಆಟದ ವಸ್ತುಗಳನ್ನು ತೆಗೆದುಕೊಂಡು ಹೋಗುವುದು, ಅಲ್ಲಿ ಹಾಸಿಗೆ ಹಾಕಿ ಕುಳಿತುಕೊಳ್ಳುವುದು, ಕೆಲಹೊತ್ತು ಪುಸ್ತಕ ಓದುವುದು, ಮರ ಬೆಳವಣಿಗೆ ಮತ್ತು ಮನುಷ್ಯರ ಸಂಚಾರ ನೋಡುವುದು, ಕಾಫಿ ಕುಡಿಯುತ್ತಾ ರಜೆಯ ದಿನವನ್ನು ನೆಮ್ಮದಿಯಾಗಿ ಕಳೆಯುವುದು. ಇದೆಲ್ಲವನ್ನು ಮಕ್ಕಳಿಗೆ ಕಲಿಸಬೇಕಲ್ಲವೇ? ಹೀಗೆ ನಿಷೇಧ ಹೇರಿದರೆ ಮಕ್ಕಳಿಗೆ ಕಲಿಸುವುಸಾದರೂ ಏನು ಎಂದು ಕೇಳಿದ್ದಾರೆ.

ಫೋಟೋ ಶೂಟ್‌ಗೆ ನಿಗದಿತ ಸ್ಥಳ ಗುರುತಿಸಿ:
ಇನ್ನು ಸುಂದರವಾದ ಕಬ್ಬನ್ ಪಾರ್ಕ್‌ನಲ್ಲಿ ಪೋಟೋಶೂಟ್‌ಗಳಿಗಾಗಿ ನಿಗದಿತ ಸ್ಥಳವನ್ನು ಒದಗಿಸಬಹುದಾದ ಸಾಧ್ಯತೆಗಳ ಬಗ್ಗೆ ಅವರು ಚಿಂತನೆ ನಡೆಸುತ್ತಾರೆ. ಸಾರ್ವಜನಿಕರು ಕುಳಿತಿರುವ ಸ್ಥಳದಲ್ಲಿ ಫೋಟೋ ಶೂಟ್ ಮಾಡಿ ತೊಂದರೆ ಉಂಟಾಗಬಾರದು ಎಂದರೆ ಎಲ್ಲೆಲ್ಲೂ ಫೋಟೋಶೂಟ್ ನಡೆಯುವುದನ್ನು ತಡೆಗಟ್ಟಿ ಒಂದು ನಿಗದಿತ ಸ್ಥಳವನ್ನು ಇದಕ್ಕೆ ಗುರುತಿಸಿ. ಅಲ್ಲಿಗೆ ಅಗತ್ಯವಿದ್ದರೆ ಶುಲ್ಕವನ್ನೂ ಪಡೆಯಬಹುದು ಎಂಬ ಸಲಹೆ ನೀಡಿದ್ದಾರೆ.

ಪಾರ್ಕ್‌ಗಳು ನಗರದ ಉಸಿರಾಟದ ಅಂಗಾಂಗಗಳು
ಈ ಹಸಿರು ತೋಟಗಳು ನಗರಕ್ಕೆ ಉಸಿರಾಡುವ ಅಂಗಾಂಗಗಳಾಗಿವೆ. ಆದರೆ, ಇಲ್ಲಿಗೆ ಬರುವ ಜನರಿಗೆ ಬೇಕಾಬಿಟ್ಟಿ ನಿಯಮಗಳನ್ನು ಮಾಡಿದರೆ ಹೇಗೆ? ನಗರದಲ್ಲಿ ನಾವು ಉತ್ತಮವಾದ ಜೀವನ ನಡೆಸುವುದಕ್ಕೆ ಪಾರ್ಕ್‌ಗಳನ್ನು ಬಳಕೆ ಮಾಡದಿದ್ದರೆ ಹೇಗೆ? ನಮ್ಮ ಮಕ್ಕಳು ತಮ್ಮ ಬಾಲ್ಯದ ನೆನಪನ್ನು ಹೇಗೆ ಕಟ್ಟಿಕೊಳ್ಳಬೇಕು? ಮುಂದಿನ ಪೀಳಿಗೆಗಳಿಗೆ ಏನು ಹೇಳಿಕೊಡಬೇಕು? ಭಾನುವಾರದ ಬೆಳಿಗ್ಗೆ ಪಾರ್ಕ್‌ನಲ್ಲಿ ಓಡಾಡುವುದು, ಕೇಕ್ ತಿನ್ನುವುದು, ರಸ್ನಾ ಕುಡಿಯುವುದು, ಮನೆಯಲ್ಲಿ ಓದುವುದು – ಈ ಎಲ್ಲವು ಬದುಕಿನ ಖುಷಿಯನ್ನು ತುಂಬುವ ಅನುಭವಗಳು ಆಗಲು ಸಾಧ್ಯವೇ ಎಂದು ಕೇಳಿದ್ದಾರೆ.

ಇಂದು ನಾವು ಯುವಜನತೆಯನ್ನು ಹವಾನಿಯಂತ್ರಿತ (ಏರ್ ಕಂಡಿಷನ್) ಮಾಲ್‌ಗಳಲ್ಲಿ ಹೆಚ್ಚು ಸಮಯ ಕಳೆಯುವ ಪ್ರಜೆಯನ್ನಾಗಿ ರೂಪಿಸುತ್ತಿದ್ದೇವೆ. ಅವರು ಮರ, ಹೂ, ಪಕ್ಷಿಗಳ ವೈವಿಧ್ಯತೆಯ ಸೌಂದರ್ಯವನ್ನೂ ಅರಿಯದೇ ಬಾಳಿದರೆ ಹೇಗೆ? ಇಂತಹ ಪ್ಲಾಸ್ಟಿಕ್ ಸಂಸ್ಕೃತಿಯ ಮಧ್ಯೆ ಪ್ರಕೃತಿಯ ಒಡನಾಟವನ್ನು ಕಳೆದುಕೊಳ್ಳಬಾರದು. ಎಲ್ಲರಿಗೂ ಸಾರ್ವಜನಿಕ ಸ್ಥಳದಲ್ಲಿ ಶಿಸ್ತು ಪಾಲನೆ ಅಗತ್ಯ. ಪಾರ್ಕ್ ಅನ್ನು ಶುದ್ಧವಾಗಿ ಇಟ್ಟುಕೊಳ್ಳುವುದು, ಇತರರಿಗೆ ತೊಂದರೆ ನೀಡದಂತೆ ನಡೆದುಕೊಳ್ಳುವುದು ಹಾಗೂ ಭದ್ರತೆಯ ಒದಗಿಸುವುದು ಒಂದು ಕಾರ್ಯವಾಗಿದೆ. ಆದರೆ, ಈ ಎಲ್ಲವನ್ನೂ ನಿಷೇಧಿಸುವುದೇ ಏಕೈಕ ಮಾರ್ಗವೆ? ನಿಷೇಧಕ್ಕಿಂತ ಜವಾಬ್ದಾರಿಯ ಅರಿವು, ಸಂವೇದನೆ ಮೂಡಿಸುವುದು, ನೈತಿಕ ಶಿಕ್ಷಣ ನೀಡಿದರೆ ಜನರು ಸಹಜವಾಗಿ ಉದ್ಯಾನದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.