Sri Lanka Economic Crisis ಅಧ್ಯಕ್ಷರ ಮನೆಯ ಮುಂದೆ ಹಿಂಸಾತ್ಮಕ ಪ್ರತಿಭಟನೆ, ದೇಶದಲ್ಲಿ ಡೀಸೆಲ್ ಖಾಲಿ!
ಅಧ್ಯಕ್ಷ ಗೋಟಬಯಾ ರಾಜಪಕ್ಸೆ ನಿವಾಸದ ಮುಂದೆ ಹಿಂಸಾತ್ಮಕ ಪ್ರತಿಭಟನೆ
ಪ್ರತಿಭಟನಾನಿರತ 45 ವ್ಯಕ್ತಿಗಳನ್ನು ಬಂಧಿಸಿದ ಪೊಲೀಸರು
ಇಡೀ ದೇಶದಲ್ಲಿ ಡೀಸೆಲ್ ಖಾಲಿ, ದಿನದ 13 ಗಂಟೆ ಇಡೀ ದೇಶಕ್ಕೆ ಕತ್ತಲು
ಕೊಲಂಬೊ (ಏ.1): ಕಳೆದ ಒಂದು ದಶಕದಲ್ಲಿ ಶ್ರೀಲಂಕಾ (Sri Lanka) ಎದುರಿಸಿರುವ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟು (Economic Crisis) ಇಡೀ ದೇಶವನ್ನು ಕತ್ತಲಿನತ್ತ ನೂಕಿದೆ. ದೇಶದಲ್ಲಿ ವಿದ್ಯುತ್ ಕಡಿತ ನಿರಂತರವಾಗಿರುವ ಕಾರಣ, ಇಡೀ ದೇಶ ಕತ್ತಲಿನಿಂದ ತುಂಬಿದ್ದು, ದೇಶದ ಜನರು ಕರಾಳ ಭವಿಷ್ಯವನ್ನು ಎದುರು ನೋಡಿದ್ದಾರೆ. ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬೆನ್ನಲ್ಲೇ ಅಧ್ಯಕ್ಷ ಗೋಟಬಯ ರಾಜಪಕ್ಸೆ (Gotabaya Rajapaksa) ಅವರ ನಿವಾಸದ ಹೊರಗೆ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ನಂತರ ಕೊಲಂಬೊದ ಹಲವು ಭಾಗಗಳಲ್ಲಿ ವಿಧಿಸಲಾದ ನೈಟ್ ಕರ್ಫ್ಯೂ ಅನ್ನು ಇಂದು ಬೆಳಿಗ್ಗೆ 5 ಗಂಟೆಗೆ ಹಿಂತೆಗೆದುಕೊಳ್ಳಲಾಯಿತು.
ಅದರೊಂದಿಗೆ ಇಡೀ ದೇಶದಲ್ಲಿ ಡೀಸೆಲ್ ಗೆ ಅಭಾವ ಎದುರಾಗಿದೆ. ಗುರುವಾರವೇ ಹೆಚ್ಚಿನ ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಡೀಸೆಲ್ ಸ್ಟಾಕ್ ಖಾಲಿಯಾಗಿದೆ. ದೇಶದಲ್ಲಿ ವಿದೇಶಿ ವಿನಿಮಯದ ಕೊರತೆಯಿಂದಾಗಿ ಇಂಧನ ಆಮದುಗಳಿಗೆ ಪಾವತಿ ಮಾಡಲು ಸರ್ಕಾರದಲ್ಲಿ ಹಣವಿಲ್ಲ. ಈ ಕಾರಣದಿಂದಾಗಿ 22 ಮಿಲಿಯನ್ ಜನಸಂಖ್ಯೆ ಇರುವ ದ್ವೀಪ ರಾಷ್ಟ್ರದಲ್ಲಿ ದಿನವೊಂದರಲ್ಲಿ ಅಂದಾಜು 13 ಗಂಟೆಗಳ ಕಾಲ ವಿದ್ಯುತ್ ಕಡಿತ ಉಂಟಾಗುತ್ತಿದೆ. 1948 ರಲ್ಲಿ ಸ್ವಾತಂತ್ರ್ಯ ಪಡೆದ ನಂತರದ ಕೆಟ್ಟ ಆರ್ಥಿಕ ಬಿಕ್ಕಟ್ಟಿಗೆ ಶ್ರೀಲಂಕಾದ ಜನತೆ ಈಗ ಸರ್ಕಾರವನ್ನು ದೂಷಿಸುತ್ತಿದ್ದಾರೆ.
ರಾಷ್ಟ್ರಪತಿ ನಿವಾಸದ ಮುಂದೆ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 45 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ‘‘ವಾಹನಗಳಿಗೆ ಬೆಂಕಿ ಹಚ್ಚಿದ ಸಂದರ್ಭದಲ್ಲಿ ಐವರು ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ’’ ಎಂದು ಅಧಿಕಾರಿಗಳು ತಿಳಿಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೊಲಂಬೊ ಉತ್ತರ, ದಕ್ಷಿಣ, ಕೊಲಂಬೊ ಸೆಂಟ್ರಲ್, ನುಗೆಗೋಡ, ಮೌಂಟ್ ಲ್ಯಾವಿನಿಯಾ ಮತ್ತು ಕೆಲನಿಯಾ ಪೊಲೀಸ್ ವಿಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಶ್ರೀಲಂಕಾದಲ್ಲಿ ಅಗಿರುವ ಇತ್ತೀಚಿನ ಬೆಳವಣಿಗೆಗಳು
1. ಗುರುವಾರ ರಾತ್ರಿ ನೂರಾರು ಪ್ರತಿಭಟನಾಕಾರರು ಬರೀ ಕತ್ತಲು ತುಂಬಿದ್ದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು ಮತ್ತು ರಾಜಧಾನಿ ಕೊಲಂಬೊದಲ್ಲಿರುವ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ಮನೆಯ ಹೊರಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ನಿವಾಸಕ್ಕೆ ನುಗ್ಗಲು ಪ್ರಯತ್ನಿಸಿದರಾದರೂ ಶಸ್ತ್ರಸಜ್ಜಿತ ಸೈನಿಕರು ಅವರನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿ ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾದರು. ಅದರ ಬಳಿಕ ಕೊಲಂಬೊದಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಶುಕ್ರವಾರ ಮುಂಜಾನೆ ತೆರವು ಮಾಡಲಾಗಿದೆ.
2. ಬುಧವಾರ, ಮಾರ್ಚ್ 30 ರಂದು, ಶ್ರೀಲಂಕಾವು ಜಲವಿದ್ಯುತ್ ಕೊರತೆಯಿಂದಾಗಿ ಮಾರ್ಚ್ ಮೊದಲ ವಾರದಲ್ಲಿ ಪ್ರತಿದಿನ ಏಳು ಗಂಟೆಗಳ ವಿದ್ಯುತ್ ಕಡಿತದಿಂದ, ದಾಖಲೆಯ 10 ಗಂಟೆಗಳ ದೈನಂದಿನ ವಿದ್ಯುತ್ ಕಡಿತವನ್ನು ವಿಧಿಸಲು ಆರಂಭಿಸಿತು. ಆದರೆ, ಕೆಲವೇ ದಿನಗಳ ಅಂತರದಲ್ಲಿ ಡೀಸೆಲ್ ನ ಕೊರತೆಯಿಂದಾಗಿ ಪ್ರಸ್ತುತ ದೇಶದಲ್ಲಿ 13 ಗಂಟೆಗಳ ವಿದ್ಯುತ್ ಕಡಿತವನ್ನು ಜಾರಿ ಮಾಡಲಾಗಿದೆ.
3. ಭಾರತವು 40,000 ಟನ್ ಡೀಸೆಲ್ ಸಹಾಯವನ್ನು ಕಳುಹಿಸಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಇದು ಈ ವರ್ಷದ ಆರಂಭದಲ್ಲಿ ಭಾರತವು ಇಂಧನಗಳನ್ನು ಖರೀದಿಸಲು ಶ್ರೀಲಂಕಾಗೆ ನೀಡಿದ 500 ಮಿಲಿಯನ್ ಅಮೆರಿಕನ್ ಡಾಲರ್ ಕ್ರೆಡಿಟ್ ಲೈನ್‌ಗೆ ಹೆಚ್ಚುವರಿಯಾಗಿರುತ್ತದೆ. ಶ್ರೀಲಂಕಾ ತನ್ನ ಪೆಟ್ರೋಲಿಯಂ ಅಗತ್ಯಗಳಲ್ಲಿ 100% ಆಮದು ಮಾಡಿಕೊಳ್ಳುತ್ತದೆ.
Sri Lanka: ದ್ವೀಪ ರಾಷ್ಟ್ರ ಲಂಕಾ ದಿವಾಳಿ: ಒಂದು ಹೊತ್ತಿನ ಊಟಕ್ಕೂ ಜನರ ಪರದಾಟ
4. ಅಕ್ಕಿ, ಗೋಧಿ, ಗೋಧಿ ಹಿಟ್ಟು, ಬೇಳೆಕಾಳುಗಳು, ಸಕ್ಕರೆ ಮತ್ತು ಔಷಧಿಗಳಂತಹ ಅಗತ್ಯ ವಸ್ತುಗಳ ಆಮದುಗಳನ್ನು ಪೂರೈಸಲು ಸಾಲವನ್ನು ವಿಸ್ತರಿಸುವುದಾಗಿ ಭಾರತವು ಶ್ರೀಲಂಕಾಕ್ಕೆ ಭರವಸೆ ನೀಡಿದೆ. ಈ ವರ್ಷದ ಆರಂಭದಲ್ಲಿ, ಭಾರತವು 2021 ರಲ್ಲಿ 1.5 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಚೈನೀಸ್ ಕರೆನ್ಸಿ ಸ್ವಾಪ್ ಸೌಲಭ್ಯದ ಜೊತೆಗೆ 400 ಮಿಲಿಯನ್ ಡಾಲರ್ ಕರೆನ್ಸಿ ಸ್ವಾಪ್ ಅನ್ನು ವಿಸ್ತರಣೆ ಮಾಡಿದೆ.
ಔಷಧಿ ಇಲ್ಲದೆ ಲಂಕಾದಲ್ಲಿ ಶಸ್ತ್ರಚಿಕಿತ್ಸೆ ಸ್ಥಗಿತ: ದ್ವೀಪ ರಾಷ್ಟ್ರಕ್ಕೆ ಭಾರತದ ನೆರವು!
5. ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ 18.7% ಕ್ಕೆ ತಲುಪಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆಹಾರ ಹಣದುಬ್ಬರವು ಮಾರ್ಚ್‌ನಲ್ಲಿ 30.2% ಕ್ಕೆ ತಲುಪಿತು, ಭಾಗಶಃ ಕರೆನ್ಸಿ ಅಪಮೌಲ್ಯೀಕರಣ ಮತ್ತು ಕಳೆದ ವರ್ಷದ ರಾಸಾಯನಿಕ ಗೊಬ್ಬರಗಳ ಮೇಲಿನ ನಿಷೇಧದಿಂದ ನಂತರ ಹಿಂತಿರುಗಿಸಲಾಯಿತು. ಹಣದುಬ್ಬರವು ಒಂದು ದಶಕದಲ್ಲಿ ಅತ್ಯಂತ ಕೆಟ್ಟ ಮಟ್ಟದಲ್ಲಿದೆ.