ಚಬಹಾರ್ ಬಂದರು: ಅಮೆರಿಕಾದ ನಿರ್ಬಂಧಗಳ ಕರಿನೆರಳಿನಡಿ ಮುಂದುವರಿದಿದೆ ಭಾರತ - ಇರಾನ್ ಸ್ನೇಹ ಬಂಧ
ನೂತನ ಒಪ್ಪಂದದ ಅನುಸಾರವಾಗಿ ಇಂಡಿಯಾ ಪೋರ್ಟ್ ಗ್ಲೋಬಲ್ ಲಿಮಿಟೆಡ್ (ಐಪಿಜಿಎಲ್) ಚಬಹಾರ್ ಬಂದರಿನ ಶಾಹಿದ್ ಬಹೆಷ್ತಿ ಟರ್ಮಿನಲ್ ಅನ್ನು ಮೇಲ್ದರ್ಜೆಗೇರಿಸಲು ಅಂದಾಜು 120 ಮಿಲಿಯನ್ ಡಾಲರ್ ಹೂಡಿಕೆ ನಡೆಸಲಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಬೆಂಗಳೂರು(ಮೇ.15): ಮೇ. 13, ಸೋಮವಾರದಂದು ಭಾರತದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವರಾದ ಸರ್ಬಾನಂದ ಸೋನೋವಾಲ್ ಅವರು ಇರಾನ್‌ಗೆ ಭೇಟಿ ನೀಡಿ, ಅಲ್ಲಿನ ಚಬಹಾರ್ ಬಂದರಿನ ಕಾರ್ಗೋ ಮತ್ತು ಕಂಟೇನರ್ ಟರ್ಮಿನಲ್‌ಗಳನ್ನು ದೀರ್ಘಾವಧಿಗೆ ಭಾರತ ನಿರ್ವಹಿಸುವ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಒಪ್ಪಂದಕ್ಕೆ ಸಹಿ ಹಾಕಿದ ಮರುದಿನವೇ ಅಮೆರಿಕಾ ಇದಕ್ಕೆ ತನ್ನ ಕಳವಳಗಳನ್ನು ವ್ಯಕ್ತಪಡಿಸಿದ್ದು, ಸಂಭಾವ್ಯ ನಿರ್ಬಂಧಗಳ ಅಪಾಯದ ಕುರಿತು ಭಾರತವನ್ನು ಎಚ್ಚರಿಸಿದೆ. ನೂತನವಾಗಿ ನವದೆಹಲಿಯ ಬೆಂಬಲಿತ ಇಂಡಿಯಾ ಪೋರ್ಟ್ ಗ್ಲೋಬಲ್ ಲಿಮಿಟೆಡ್ (ಐಪಿಜಿಎಲ್) ಹಾಗೂ ಇರಾನಿನ ಪೋರ್ಟ್ಸ್ ಆ್ಯಂಡ್ ಮಾರಿಟೈಮ್ ಆರ್ಗನೈಸೇಶನ್ (ಪಿಎಂಒ) ನಡುವೆ ನೆರವೇರಿದ ನೂತನ ಹತ್ತು ವರ್ಷಗಳ ಒಪ್ಪಂದ, ಹಿಂದಿನ 2016ರ ಒಪ್ಪಂದವನ್ನು ನವೀಕರಿಸುತ್ತದೆ. ಹಿಂದೆ ಈ ಒಪ್ಪಂದವನ್ನು ಪ್ರತಿ ವರ್ಷವೂ ನವೀಕರಿಸುವ ಅವಶ್ಯಕತೆ ಇತ್ತು. ಆದರೆ, ನೂತನ ಆವೃತ್ತಿಯ ಒಪ್ಪಂದದಿಂದಾಗಿ, ಮೂರು ವರ್ಷಗಳಿಗೊಂದು ಸಮಾಲೋಚನೆ ಮತ್ತು ಹತ್ತು ವರ್ಷಗಳ ಬಳಿಕ ನವೀಕರಣ ನಡೆಯಲಿದೆ.
ಪೆಟ್ರೋಲ್ ದರದಲ್ಲಿ ಸ್ಥಿರತೆ ಹೊಂದಲು ನೆರವಾದ ಭಾರತ ಸರ್ಕಾರದ ಸ್ಥಿರ ವಿದೇಶಾಂಗ ನೀತಿಗಳು
120 ಮಿಲಿಯನ್ ಡಾಲರ್ ಹೂಡಿಕೆ
ನೂತನ ಒಪ್ಪಂದದ ಅನುಸಾರವಾಗಿ ಇಂಡಿಯಾ ಪೋರ್ಟ್ ಗ್ಲೋಬಲ್ ಲಿಮಿಟೆಡ್ (ಐಪಿಜಿಎಲ್) ಚಬಹಾರ್ ಬಂದರಿನ ಶಾಹಿದ್ ಬಹೆಷ್ತಿ ಟರ್ಮಿನಲ್ ಅನ್ನು ಮೇಲ್ದರ್ಜೆಗೇರಿಸಲು ಅಂದಾಜು 120 ಮಿಲಿಯನ್ ಡಾಲರ್ ಹೂಡಿಕೆ ನಡೆಸಲಿದೆ.
ಇರಾನಿನ ವಿದೇಶಾಂಗ ಸಚಿವರಾದ ಹೊಸ್ಸೇನ್ ಆಮಿರಬ್ದೊಲ್ಲಾಹಿಯಾನ್ ಅವರಿಗೆ ಪತ್ರ ಬರೆದಿರುವ ಭಾರತದ ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ಅವರು, ಗಲ್ಫ್ ಆಫ್ ಒಮಾನ್‌ನಲ್ಲಿ ಚಬಹಾರ್ ಬಂದರಿನ ಅಭಿವೃದ್ಧಿಗೆ ನೆರವಾಗಲು ಭಾರತ 250 ಮಿಲಿಯನ್ ಡಾಲರ್ ಮೌಲ್ಯದ ಸಾಲದ ನೆರವು (ಕ್ರೆಡಿಟ್ ಲೈನ್) ಒದಗಿಸುವುದಾಗಿ ತಿಳಿಸಿದ್ದಾರೆ.
ಭಾರತದ ವಿದೇಶಾಂಗ ಸಚಿವರು ಬರೆದಿರುವ ಪತ್ರವನ್ನು ಭಾರತದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವರಾದ ಸರ್ಬಾನಂದ ಸೋನೋವಾಲ್ ಅವರು ನೇರವಾಗಿ ಇರಾನಿಯನ್ ವಿದೇಶಾಂಗ ಸಚಿವರಾದ ಹೊಸ್ಸೇನ್ ಆಮಿರಬ್ದೊಲ್ಲಾಹಿಯಾನ್ ಅವರಿಗೆ ಹಸ್ತಾಂತರಿಸಿದ್ದಾರೆ.
ನೂತನ ಒಪ್ಪಂದಕ್ಕೆ ಸಹಿ ಹಾಕಿದ ಕೆಲ ಸಮಯದಲ್ಲೇ, ಅಮೆರಿಕಾದ ಸ್ಟೇಟ್ ಇಲಾಖೆಯ ವಕ್ತಾರರೊಬ್ಬರು ಮಾಧ್ಯಮಗಳೊಡನೆ ಮಾತನಾಡುತ್ತಾ, ಇರಾನ್ ಜೊತೆ ವ್ಯವಹರಿಸುವ ಸಂಸ್ಥೆಯ ಮೇಲೆ ನಿರ್ಬಂಧ ಹೇರಲು ಅಮೆರಿಕಾ ತೀವ್ರ ಪ್ರಯತ್ನಗಳನ್ನು ನಡೆಸಲಿದೆ ಎಂದಿದ್ದರು.
ನಾವು ನಿರ್ಬಂಧಗಳನ್ನು ಹೇರುವುದನ್ನು ಮುಂದುವರಿಸುತ್ತೇವೆ: ಅಮೆರಿಕ
"ಚಬಹಾರ್ ಬಂದರಿಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ನೀತಿಯ ಗುರಿಗಳು ಮತ್ತು ಇರಾನ್ ಜೊತೆಗಿನ ದ್ವಿಪಕ್ಷೀಯ ಸಂಬಂಧಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಭಾರತ ಸರ್ಕಾರವೇ ನಿರ್ಧರಿಸಬೇಕು. ಆದರೆ, ಇರಾನ್‌ಗೆ ಸಂಬಂಧಿಸಿದಂತೆ ಅಮೆರಿಕಾದ ನಿರ್ಬಂಧಗಳು ಇಂದಿಗೂ ಚಾಲ್ತಿಯಲ್ಲಿವೆ. ನಾವು ನಿರ್ಬಂಧಗಳನ್ನು ಹೇರುವುದನ್ನು ಮುಂದುವರಿಸುತ್ತೇವೆ" ಎಂದು ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಮುಖ್ಯ ಉಪ ವಕ್ತಾರರಾದ ವೇದಾಂತ್ ಪಟೇಲ್ ಹೇಳಿಕೆ ನೀಡಿದ್ದಾರೆ.
ವೇದಾಂತ್ ಪಟೇಲ್ ಅವರು, ಇರಾನ್ ಜೊತೆಗೆ ಉದ್ಯಮ ಒಪ್ಪಂದಗಳಿಗೆ ಸಹಿ ಹಾಕುವ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳು ತಾವು ಎದುರಿಸಬೇಕಾಗಿ ಬರುವ ನಿರ್ಬಂಧಗಳು ಮತ್ತು ಸಂಭಾವ್ಯ ತೊಂದರೆಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಂತಹ ನಿರ್ಬಂಧಗಳಿಗೆ ಭಾರತವೂ ಹೊರತಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಯುಎಸ್ ಕಾಂಗ್ರೆಷನಲ್ ರಿಸರ್ಚ್ ಸರ್ವಿಸಸ್ (ಸಿಆರ್‌ಎಸ್) ನೀಡಿರುವ ಒಂದು ವರದಿಯ ಪ್ರಕಾರ, ಇರಾನ್ ವಿರುದ್ಧ ಅಮೆರಿಕಾ ವಿಧಿಸುವ ನಿರ್ಬಂಧಗಳು ಶಕ್ತಿ ಸಂಪನ್ಮೂಲ, ಬ್ಯಾಂಕಿಂಗ್, ಸಾಗಾಣಿಕೆ, ನಿರ್ಮಾಣ, ಗಣಿಗಾರಿಕೆ, ಉತ್ಪಾದನೆ ಮತ್ತು ರಕ್ಷಣೆ ಸೇರಿದಂತೆ ವಿವಿಧ ವಲಯಗಳ ಮೇಲೆ ಪ್ರಭಾವ ಬೀರುತ್ತವೆ ಎಂದಿದೆ. ಆದರೆ, ಅಮೆರಿಕಾದ ನಿರ್ಬಂಧಗಳು ಚಬಹಾರ್ ಬಂದರಿನಿಂದ ಮಾನವೀಯ ನೆಲೆಯ ಸಹಾಯ ಒದಗಿಸುವುದಕ್ಕೆ ಅಡ್ಡಿ ಮಾಡುವುದಿಲ್ಲ. ಇಂದಿನ ತನಕ ಭಾರತ ಚಬಹಾರ್ ಬಂದರನ್ನು ಸದುಪಯೋಗ ಪಡಿಸಿಕೊಂಡು, ಬಹುತೇಕ 2.5 ಟನ್‌ಗಳಷ್ಟು ಗೋಧಿಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿ, ಕಾಬೂಲ್‌ಗೆ ತನ್ನ ಆಹಾರದ ಕೊರತೆಯನ್ನು ನಿಭಾಯಿಸಲು ನೆರವಾಗಿದೆ.
ನಿವೃತ್ತ ಕಮಡೋರ್, ನ್ಯಾಷನಲ್ ಮಾರಿಟೈಮ್ ಫೌಂಡೇಷನ್ (ಎನ್ಎಂಎಫ್) ಪ್ರಾದೇಶಿಕ ನಿರ್ದೇಶಕರಾದ ಶೇಶಾದ್ರಿ ವಾಸನ್ ಅವರು, 7,200 ಕಿಲೋಮೀಟರ್ ವ್ಯಾಪ್ತಿಯ ಇಂಟರ್ನ್ಯಾಷನಲ್ ನಾರ್ತ್ ಸೌತ್ ಟ್ರಾನ್ಸ್‌ಪೋರ್ಟ್ ಕಾರಿಡಾರ್ (ಐಎನ್ಎಸ್‌ಟಿಸಿ) ಭಾರತ ಮತ್ತು ಇತರ ಆಗ್ನೇಯ ಏಷ್ಯಾದ ರಾಷ್ಟ್ರಗಳನ್ನು ಮಧ್ಯ ಏಷ್ಯಾ ಮತ್ತು ಅದರಾಚೆಗೆ ಸಂಪರ್ಕಿಸಲಿದೆ ಎಂದಿದ್ದು, ಈ ಕಾರಿಡಾರ್ 'ಸಿಲ್ಕ್ ರೋಡ್'ಗೆ ಸೂಕ್ತ ಪರ್ಯಾಯ ಮಾರ್ಗವಾಗಲಿದೆ ಎಂದಿದ್ದಾರೆ.
ಇಂಟರ್ನ್ಯಾಷನಲ್ ನಾರ್ತ್ ಸೌತ್ ಟ್ರಾನ್ಸ್‌ಪೋರ್ಟ್ ಕಾರಿಡಾರ್ (ಐಎನ್ಎಸ್‌ಟಿಸಿ) ಹದಿಮೂರು ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಅವೆಂದರೆ: ಭಾರತ, ಇರಾನ್, ರಷ್ಯಾ, ಟರ್ಕಿ, ಅಜರ್‌ಬೈಜಾನ್, ಕಜಕಿಸ್ತಾನ್, ಅರ್ಮೇನಿಯಾ, ಬೆಲಾರಸ್, ತಜಕಿಸ್ತಾನ್, ಕಿರ್ಗಿಸ್ತಾನ್, ಒಮಾನ್, ಉಕ್ರೇನ್ ಮತ್ತು ಸಿರಿಯಾಗಳಾಗಿದ್ದು, ಬಲ್ಗೇರಿಯಾ ವೀಕ್ಷಕ ಸದಸ್ಯನಾಗಿ ಇದರ ಭಾಗವಾಗಿದೆ.
ಬಾಹ್ಯಾಕಾಶದ ಗಡಿಗಳಾಚೆ: ಭಾರತದ 2047ರ ಮುನ್ನೋಟ
ಐಎನ್ಎಸ್‌ಟಿಸಿ ಒಂದು ವಿಶಿಷ್ಟ ಸಾಗಾಣಿಕಾ ಜಾಲವನ್ನು ಆಲೋಚಿಸಿದ್ದು, ಇದು ಭಾರತದ ಮುಂಬೈಯಿಂದ ಆರಂಭಗೊಳ್ಳುತ್ತದೆ. ಮುಂಬೈಯಿಂದ ಸರಕುಗಳು ಸಮುದ್ರದ ಮೂಲಕ ಇರಾನಿನ ಚಬಹಾರ್‌ನಲ್ಲಿನ ಶಾಹಿದ್ ಬಹೆಷ್ತಿ ಬಂದರಿಗೆ ರವಾನಿಸಲ್ಪಡುತ್ತವೆ. ಅಲ್ಲಿಂದ ಸರಕುಗಳನ್ನು ಭೂ ಮಾರ್ಗದ ಮೂಲಕ ಇರಾನಿನ ಕ್ಯಾಸ್ಪಿಯನ್ ಸಮುದ್ರದ ಬಳಿಯ ಬಂದರ್ ಇ ಅಂಜಾ಼ಲಿಗೆ ರವಾನಿಸಲಾಗುತ್ತದೆ. ಬಳಿಕ ಕ್ಯಾಸ್ಪಿಯನ್‌ನಿಂದ ರಷ್ಯಾದ ಅಸ್ತ್ರಾಖಾನ್‌ಗೆ ಸಾಗಿಸಲಾಗುತ್ತದೆ. ಅಂತಿಮ ಹಂತದ ಸಾಗಾಣಿಕೆಯಲ್ಲಿ ರಷ್ಯನ್ ರೈಲ್ವೇ ಜಾಲವನ್ನು ಬಳಸಿಕೊಂಡು, ರಷ್ಯಾದೊಳಗೆ ಮತ್ತು ಯುರೋಪ್‌ನ ಇತರ ಭಾಗಗಳಿಗೆ ಸರಕುಗಳನ್ನು ಸಾಗಿಸಲಾಗುತ್ತದೆ.
ಸಾಗಾಣಿಕಾ ಸಮಯ 40%ದಷ್ಟು ಕಡಿಮೆ
ಈ ನೂತನ ಕಾರಿಡಾರ್ ಸಾಗಾಣಿಕಾ ಸಮಯವನ್ನು ಅಂದಾಜು 40%ದಷ್ಟು ಕಡಿಮೆಗೊಳಿಸುವ ನಿರೀಕ್ಷೆಗಳಿವೆ. ಪ್ರಸ್ತುತ 45-60 ದಿನಗಳು ತಗಲುವ ಈ ಸಾಗಾಣಿಕೆ, ನೂತನ ಕಾರಿಡಾರ್ ಮೂಲಕ ಕೇವಲ 25-30 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಸಾಂಪ್ರದಾಯಿಕ ಸೂಯೆಜ್ ಕಾಲುವೆ ಮಾರ್ಗಕ್ಕೆ ಹೋಲಿಸಿದರೆ, ನೂತನ ಕಾರಿಡಾರ್ ಸಾಗಾಣಿಕಾ ವೆಚ್ಚವನ್ನು 30%ದಷ್ಟು ಕಡಿಮೆಗೊಳಿಸಿ, ಆ ಮೂಲಕ ಇದು ಅತ್ಯಂತ ದಕ್ಷ ಮತ್ತು ಕಡಿಮೆ ವೆಚ್ಚದ ಮಾರ್ಗ ಎನಿಸಲಿದೆ.
ಶೇಶಾದ್ರಿ ವಾಸನ್ ಅವರು ಚೀನಾದ ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್‌ಗೆ (ಬಿಆರ್‌ಐ) ಪರ್ಯಾಯವಾದ ಈ ನೂತನ ಕಾರಿಡಾರ್ ಅಮೆರಿಕಾದ ಹಿತಾಸಕ್ತಿಗಳಿಗೆ ಪೂರಕವಾಗಿದೆ ಎನ್ನುವುದನ್ನು ಅಮೆರಿಕಾ ಅರ್ಥ ಮಾಡಿಕೊಳ್ಳಬೇಕು ಎಂದಿದ್ದು, ಇದು ಜಾಗತಿಕ ಹಿತಾಸಕ್ತಿಗಳಿಗೂ ನೆರವಾಗಲಿದೆ ಎಂದಿದ್ದಾರೆ.
ಅಮೆರಿಕಾ ಇರಾನ್ ಜೊತೆಗಿನ ಮಿಲಿಟರೇತರ ವ್ಯಾಪಾರಗಳಿಗೆ ನಿರ್ಬಂಧ ಹೇರದು ಎಂದು ಅವರು ಆಶಾ ಭಾವನೆ ವ್ಯಕ್ತಪಡಿಸಿದ್ದು, ಅದರಲ್ಲೂ ಭಾರತ ಈ ಯೋಜನೆಗೆ ಬೆಂಬಲವಾಗಿರುವುದನ್ನು ಅಮೆರಿಕಾ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.