ರೈಸಿ ದುರ್ಮರಣ: ಸವಾಲಿನ ಹಾದಿಯಲ್ಲಿ ಇರಾನಿನ ರಾಜಕಾರಣ
ಇಬ್ರಾಹಿಂ ರೈಸಿ ಸಾವಿನ ಬಳಿಕ, ಇರಾನಿನ ಮೊದಲ ಉಪಾಧ್ಯಕ್ಷರಾದ ಮೊಹಮ್ಮದ್ ಮೊಖ್‌ಬೆರ್ ಅವರು ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ. ಇರಾನಿನ ಕಾನೂನುಗಳ ಪ್ರಕಾರ, ಓರ್ವ ಶಾಶ್ವತ ನಾಯಕನನ್ನು ಆರಿಸಲು ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ಆದರೆ ತಜ್ಞರ ಪ್ರಕಾರ, ನಾಯಕತ್ವ ಬದಲಾವಣೆ ದೇಶದ ಮೇಲೆ ಕನಿಷ್ಠ ಪ್ರಭಾವ ಬೀರಲಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಮೇ 19, 2024ರಂದು, ಇರಾನ್ ಅಧ್ಯಕ್ಷರಾದ ಇಬ್ರಾಹಿಂ ರೈಸಿ ಮತ್ತು ಇರಾನ್ ವಿದೇಶಾಂಗ ಸಚಿವರಾದ ಹೊಸೇನ್ ಆಮಿರ್ ಅಬ್ದೊಲ್ಲಾಹಿಯಾನ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ವರ್ಜಾ಼ಕಾನ್ ಪ್ರದೇಶದ ಬಳಿ ಹವಾಮಾನ ವೈಪರೀತ್ಯದ ಕಾರಣದಿಂದ ಪತನಗೊಂಡಿತು. ಇಬ್ಬರು ನಾಯಕರೂ ಈ ಪತನದಲ್ಲಿ ಸಾವಿಗೀಡಾಗಿದ್ದಾರೆ ಎಂದು ಘೋಷಿಸಲಾಗಿದೆ. ಇರಾನಿನ ಸರ್ಕಾರಿ ಸ್ವಾಮ್ಯದ ಸುದ್ದಿ ಮಾಧ್ಯಮಗಳಾದ ಐಆರ್‌ಐಎನ್ಎನ್ ಮತ್ತು ಮೆಹರ್ ನ್ಯೂಸ್ ವಾಹಿನಿಗಳು ಇರಾನ್ ಅಧ್ಯಕ್ಷರಾದ ಇಬ್ರಾಹಿಂ ರೈಸಿ ಅವರು ಸಾವಿಗೀಡಾಗಿದ್ದಾರೆ ಎಂದು ವರದಿ ಮಾಡಿವೆ. ಅಧ್ಯಕ್ಷರು ಚಲಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡ ಸ್ಥಳದಲ್ಲಿ ಯಾರೊಬ್ಬ ಪ್ರಯಾಣಿಕರೂ ಜೀವಂತವಾಗಿಲ್ಲ ಎನ್ನಲಾಗಿದೆ.
ಇರಾನ್ ಅಧ್ಯಕ್ಷರು ಅಜ಼ರ್‌ಬೈಜಾನ್‌ಗೆ ಭೇಟಿ ನೀಡಿ, ಇರಾನ್‌ಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಮೂರು ಹೆಲಿಕಾಪ್ಟರ್‌ಗಳು ಮಂಜು ಮುಸುಕಿನ ವಾತಾವರಣದಲ್ಲಿ ಜೊತೆಯಾಗಿ ಸಂಚರಿಸುತ್ತಿದ್ದವು. ಈ ವೇಳೆ ಇರಾನಿನ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಕನಿಷ್ಠ 40 ರಕ್ಷಣಾ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದರೂ, ದಟ್ಟ ಮಂಜಿನಿಂದಾಗಿ ಗೋಚರಿಸುವಿಕೆ ಕಡಿಮೆಯಾಗಿದ್ದು, ಪರ್ವತ ಪ್ರದೇಶದಲ್ಲಿನ ಅಪಘಾತ ಸ್ಥಳವನ್ನು ತಲುಪುವುದು ಕಷ್ಟಕರವಾಗಿತ್ತು.
ಇರಾನ್ ಅಧ್ಯಕ್ಷ ಹೆಲಿಕಾಪ್ಟರ್ ದುರಂತದಲ್ಲಿ ಸಾವು: ಇಬ್ರಾಹಿಂ ರೈಸಿ ಸಾವು ಖಚಿತಪಡಿಸಿದ ಇರಾನ್ ಮಾಧ್ಯಮ
ರೈಸಿ ಅವರು ಅಜರ್‌ಬೈಜಾನ್ ಅಧ್ಯಕ್ಷರಾದ ಇಲ್‌ಹಮ್ ಅಲಿಯೆವ್ ಅವರೊಡನೆ ಕಿಜ಼್ ಕಲಾಸಿ ಅಣೆಕಟ್ಟು ಯೋಜನೆಗೆ ಚಾಲನೆ ನೀಡಿ, ಇರಾನ್‌ಗೆ ಮರಳುತ್ತಿದ್ದರು.
ಇರಾನ್ ಮೇಲೆ ಅಮೆರಿಕಾ ವಿಧಿಸಿರುವ ನಿರ್ಬಂಧಗಳ ಕಾರಣದಿಂದ, ಇರಾನ್‌ಗೆ ಸರ್ಕಾರಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ನಿರ್ವಹಣೆಗೆ ಅವಶ್ಯಕವಾದ ಬಿಡಿಭಾಗಗಳನ್ನು ಹೊಂದುವುದು ಕಷ್ಟಕರವಾಗಿದೆ. ಇದರಿಂದಾಗಿ ಇರಾನ್ ಇತ್ತೀಚೆಗೆ ಸಾಕಷ್ಟು ದೊಡ್ಡ ಪ್ರಮಾಣದ ಹೆಲಿಕಾಪ್ಟರ್ ಅಪಘಾತಗಳನ್ನು ಎದುರಿಸಿದೆ. ಕಳೆದ ವರ್ಷ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ, ಇರಾನಿನ ಯುವ ಮತ್ತು ಕ್ರೀಡಾ ಸಚಿವರು ಪವಾಡಸದೃಶವಾಗಿ ಪಾರಾಗಿದ್ದರು. ಅಪಘಾತದಲ್ಲಿ ಸಚಿವರ ಸಲಹೆಗಾರರು ಸಾವಿಗೀಡಾಗಿ, ಇತರ ಪ್ರಯಾಣಿಕರು ಗಾಯಗೊಂಡಿದ್ದರು. ಇನ್ನೊಂದು ಘಟನೆಯಲ್ಲಿ, ಪ್ರಾಂತೀಯ ಪೊಲೀಸ್ ಕಮಾಂಡರ್ ಒಬ್ಬರು ಅಧಿಕೃತ ಕಾರ್ಯದ ಸಂದರ್ಭದಲ್ಲಿ, ಪಶ್ಚಿಮ ಪ್ರಾಂತ್ಯದಲ್ಲಿ ನಡೆದ ಹೆಲಿಕಾಪ್ಟರ್ ಪತನದಲ್ಲಿ ಗಾಯಗೊಂಡಿದ್ದರು.
ಹಣಕಾಸಿನ ಕೊರತೆಯ ಕಾರಣದಿಂದ, ತನ್ನ ಹಲವಾರು ಹೆಲಿಕಾಪ್ಟರ್‌ಗಳು ಸಮರ್ಪಕ ನಿರ್ವಹಣೆ ಹೊಂದಲು ಸಾಧ್ಯವಾಗಿಲ್ಲ ಎಂದು ರೆಡ್ ಕ್ರೆಸೆಂಟ್ ವರದಿ ಮಾಡಿದೆ.
ಇಬ್ರಾಹಿಂ ರೈಸಿ ಸಾವಿನ ಬಳಿಕ, ಇರಾನಿನ ಮೊದಲ ಉಪಾಧ್ಯಕ್ಷರಾದ ಮೊಹಮ್ಮದ್ ಮೊಖ್‌ಬೆರ್ ಅವರು ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ. ಇರಾನಿನ ಕಾನೂನುಗಳ ಪ್ರಕಾರ, ಓರ್ವ ಶಾಶ್ವತ ನಾಯಕನನ್ನು ಆರಿಸಲು ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ಆದರೆ ತಜ್ಞರ ಪ್ರಕಾರ, ನಾಯಕತ್ವ ಬದಲಾವಣೆ ದೇಶದ ಮೇಲೆ ಕನಿಷ್ಠ ಪ್ರಭಾವ ಬೀರಲಿದೆ.
ಇರಾನಿನ ರಾಜಕಾರಣದ ಶಕ್ತಿಶಾಲಿ ವ್ಯಕ್ತಿಯಾದ ಇಬ್ರಾಹಿಂ ರೈಸಿಯವರನ್ನು ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಂಭಾವ್ಯ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿತ್ತು. ಇರಾನಿನ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಿದ್ದ ಇಬ್ರಾಹಿಂ ರೈಸಿ ಅವರನ್ನು 2021ರಲ್ಲಿ ಇರಾನ್ ಅಧ್ಯಕ್ಷರಾಗಿ ಚುನಾಯಿಸಲಾಗಿತ್ತು.
ನ್ಯಾಯಾಂಗ ಮತ್ತು ಧಾರ್ಮಿಕ ವಲಯಗಳಲ್ಲಿ ಆಳವಾದ ಸಂಪರ್ಕ ಹೊಂದಿರುವ ಸಂಪ್ರದಾಯವಾದಿ ರಾಜಕಾರಣಿಯಾದ ರೈಸಿ 2017ರಲ್ಲೂ ಇರಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಅವರು ಚುನಾವಣೆಯಲ್ಲಿ ಸೋಲು ಕಂಡಿದ್ದರು. ಬಳಿಕ 2021ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದರು.
ಕಳೆದ ಮೂರು ವರ್ಷಗಳ ಅಧಿಕಾರ ಅವಧಿಯಲ್ಲಿ, ರೈಸಿ ಮಹಿಳೆಯರ ವಸ್ತ್ರಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಕಠಿಣ ಕಾನೂನುಗಳನ್ನು ಜಾರಿಗೆ ತಂದು, ಸರ್ಕಾರ ವಿರೋಧಿ ಪ್ರತಿಭಟನೆಗಳನ್ನು ಉಡುಗಿಸಿದ್ದರು. ಅವರು ಮಧ್ಯ ಪೂರ್ವ ಪ್ರದೇಶದಲ್ಲಿ ಇರಾನಿನ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸಿ, ಈ ವರ್ಷ ಇಸ್ರೇಲ್ ಮೇಲಿನ ಮೊದಲ ನೇರ ದಾಳಿಗೆ ಆದೇಶ ನೀಡಿದ್ದರು.
ಓರ್ವ ಸಂಪ್ರದಾಯವಾದಿ ರಾಜಕಾರಣಿಯಾಗಿದ್ದ ರೈಸಿ, ಪ್ರಬಲ ಧಾರ್ಮಿಕ ನಂಬಿಕೆಗಳನ್ನು ಹೊಂದಿದ್ದರು.
ಇರಾನಿನ ನ್ಯಾಯಾಂಗವೆಂಬ ಅಧಿಕಾರ ಕೇಂದ್ರ
ಇಬ್ರಾಹಿಂ ರೈಸಿ ಇರಾನಿನ ಈಶಾನ್ಯ ದಿಕ್ಕಿನಲ್ಲಿರುವ ಮಶಾದ್ ನಗರದಲ್ಲಿ ಜನಿಸಿದರು. ರೈಸಿ ತನ್ನ ಹದಿಹರೆಯದಲ್ಲಿದ್ದಾಗ ಇರಾನಿಯನ್ ಕ್ರಾಂತಿ ಆರಂಭಗೊಂಡಿತು. 20ನೇ ವಯಸ್ಸಿಗೆ ರೈಸಿ ಕಾರಜ್‌ನಲ್ಲಿ ಪ್ರಾಸಿಕ್ಯೂಟರ್ ಆದರು.
ಅದಾದ ನಂತರದ ವರ್ಷಗಳಲ್ಲಿ, ರೈಸಿ ನೂತನವಾಗಿ ಸ್ಥಾಪನೆಯಾದ ಇಸ್ಲಾಮಿಕ್ ರಿಪಬ್ಲಿಕ್ ಅನ್ನು ಅದರ ವಿರೋಧಿಗಳೆದುರು ಬೆಂಬಲಿಸುತ್ತಾ, ಇರಾನಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೇಲೆ ಮೇಲೆ ಏರತೊಡಗಿದರು. ರೈಸಿ ಟೆಹರಾನ್‌ನ ಪ್ರಾಸಿಕ್ಯೂಟರ್, ಭ್ರಷ್ಟಾಚಾರ ವಿರೋಧಿ ಇಲಾಖೆಯ ಮುಖ್ಯಸ್ಥ, ಹಾಗೂ ಸ್ಪೆಷಲ್ ಕೋರ್ಟ್ ಫಾರ್ ದ ಕ್ಲರ್ಜಿಯ ಪ್ರಾಸಿಕ್ಯೂಟರ್ ಜನರಲ್ ಸೇರಿದಂತೆ ಇರಾನಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು.
ಕ್ಲರ್ಜಿಗಳೆಂದರೆ, ಧಾರ್ಮಿಕ ಪ್ರಾರ್ಥನಾ ಸೇವೆಗಳನ್ನು ನಿರ್ವಹಿಸಲು ಮತ್ತು ಸಾರ್ವಜನಿಕರಿಗೆ ಧಾರ್ಮಿಕ ಮಾರ್ಗದರ್ಶನ ನೀಡಲು ನೇಮಿಸಲ್ಪಟ್ಟವರಾಗಿದ್ದಾರೆ. ರಬ್ಬಿಗಳು, ಇಮಾಮರು ಇದಕ್ಕೆ ಉದಾಹರಣೆಯಾಗಿದ್ದಾರೆ.
ನ್ಯಾಯಾಂಗ ವ್ಯವಸ್ಥೆಯ ಮುಖ್ಯಸ್ಥರಾಗಿ ರೈಸಿ ಅವರು ಇರಾನ್ ಸರ್ಕಾರದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಹೊರಹೊಮ್ಮಿದರು. ರೈಸಿ ತನ್ನನ್ನು ತಾನು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಂದು ಬಿಂಬಿಸಿಕೊಂಡಿದ್ದರೂ, ಸರ್ಕಾರದೊಡನೆ ಭಿನ್ನಾಭಿಪ್ರಾಯ ಹೊಂದಿದ್ದವರನ್ನು ನಿವಾರಿಸುತ್ತಿದ್ದರು.
ಮಾನವ ಹಕ್ಕುಗಳ ಸಂಸ್ಥೆಗಳು ರೈಸಿ ಅವರು ರಾಜಕೀಯ ಪ್ರೇರಿತ ಹತ್ಯೆಗಳು ಮತ್ತು ನ್ಯಾಯಯುತವಲ್ಲದ ಬಂಧನಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿದ್ದವು. 1988ರ ಇರಾನ್ ಮತ್ತು ಇರಾಕ್ ಯುದ್ಧದ ಅಂತಿಮ ಹಂತದಲ್ಲಿ, ಖೊಮೇನಿ ಅವರ ಆದೇಶದ ಅನುಸಾರವಾಗಿ, ಇರಾನ್ ಸರ್ಕಾರವನ್ನು ವಿರೋಧಿಸಿದ ಜನರನ್ನು ಟೆಹರಾನ್ ಸಮೀಪದ ಜೈಲೊಂದರಲ್ಲಿ ಹತ್ಯೆಗೈದ ಗುಂಪಿನಲ್ಲಿ ರೈಸಿ ಅವರೂ ಭಾಗವಾಗಿದ್ದರು ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಆರೋಪಿಸಿತ್ತು.
ಈ ಕುರಿತು ರೈಸಿ ಅವರನ್ನು ಪ್ರಶ್ನಿಸಿದಾಗ, "ಓರ್ವ ನ್ಯಾಯಾಧೀಶ ಅಥವಾ ನ್ಯಾಯವಾದಿ ಜನರ ಸುರಕ್ಷತೆಯನ್ನು ಕಾಪಾಡಿದರೆ, ಅವರನ್ನು ಖಂಡಿತವಾಗಿಯೂ ಶ್ಲಾಘಿಸಬೇಕು. ನಾನು ನಿರ್ವಹಿಸಿದ ಪ್ರತಿಯೊಂದು ಹುದ್ದೆ ಮತ್ತು ಜವಾಬ್ದಾರಿಗಳಲ್ಲೂ ಮಾನವ ಹಕ್ಕುಗಳನ್ನು ರಕ್ಷಿಸಿದ್ದೇನೆ" ಎಂದು ರೈಸಿ ಹೇಳಿದ್ದರು.
ಸಾವಿರಾರು ಜನರನ್ನು ಹತ್ಯೆಗೈದ ಆರೋಪಗಳು ರೈಸಿ ಅವರ ಮೇಲಿದ್ದರೂ, ಇಂತಹ ಆರೋಪಗಳೇ ಅವರನ್ನು ಸಂಪ್ರದಾಯವಾದಿ ಇರಾನಿಯನ್ ಮತದಾರರಿಗೆ ಮೆಚ್ಚಿನ ಆಯ್ಕೆಯಾಗಿಸಿದವು ಎಂದು ಮಾನವ ಹಕ್ಕು ಸಂಸ್ಥೆಗಳು ಅಭಿಪ್ರಾಯ ಪಡುತ್ತವೆ.
2019ರಲ್ಲಿ, ಇರಾನಿಯನ್ ಸರ್ವೋಚ್ಚ ನಾಯಕನಿಂದ ನೇಮಕವಾಗಿದ್ದಾರೆ ಎಂಬ ಕಾರಣಕ್ಕೆ ಅಮೆರಿಕಾದ ಹಣಕಾಸು ಇಲಾಖೆ ರೈಸಿ ಅವರ ಮೇಲೆ ನಿರ್ಬಂಧಗಳನ್ನು ಹೇರಿತು. ಅಮೆರಿಕಾದ ಹಣಕಾಸು ಇಲಾಖೆ, ರೈಸಿ ಅವರ ಜಾಲ ಇರಾನಿನ ಜನರನ್ನು ಪ್ರತಿಬಂಧಿಸಿ, ಭಯೋತ್ಪಾದನೆಯನ್ನು ಬೆಂಬಲಿಸಿ, ಜಾಗತಿಕವಾಗಿ ಅಸ್ಥಿರತೆ ತರುವಂತಹ ನೀತಿಗಳನ್ನು ತಂದಿದೆ ಎಂದು ಆರೋಪಿಸಿತು. 2009ರ ವಿವಾದಾತ್ಮಕ ಚುನಾವಣೆಯ ಬಳಿಕ ನಡೆದ ಗ್ರೀನ್ ಮೂವ್‌ಮೆಂಟ್ ಪ್ರತಿಭಟನೆಗಳನ್ನು ದಮನಿಸಲು ಸರ್ಕಾರ ಕೈಗೊಂಡ ಕಠೋರ ಕ್ರಮಗಳಲ್ಲಿ ಮತ್ತು 1988ರ 'ಡೆತ್ ಕಮಿಷನ್'ನಲ್ಲೂ ರೈಸಿ ಭಾಗಿಯಾಗಿದ್ದರು ಎಂದು ಇಲಾಖೆ ಆರೋಪಿಸಿತ್ತು.
ರೈಸಿ: ಖಮೇನಿ ಆರಿಸಿದ ನಾಯಕ
2021ರ ಅಧ್ಯಕ್ಷೀಯ ಚುನಾವಣೆಯಲ್ಲಿ, ಕಡಿಮೆ ಆಕ್ರಮಣಕಾರಿ ನಾಯಕರಾದ ಹಸ್ಸನ್ ರೌಹಾನಿ ಅವರ ವಿರುದ್ಧ ರೈಸಿ ಅವರು ಗೆಲುವು ಸಾಧಿಸಿದ್ದು ಇರಾನಿನ ರಾಜಕಾರಣದಲ್ಲಿ ತೀವ್ರಗಾಮಿ ನಿಲುವಿನ ಪುನರಾಗಮನಕ್ಕೆ ಸಾಕ್ಷಿಯಾಗಿತ್ತು. ಇದು ತೀವ್ರಗಾಮಿ ನಾಯಕರು ಸರ್ಕಾರದ ಮೇಲೆ ಹಿಡಿತ ಸಾಧಿಸಿರುವುದನ್ನು ಪ್ರತಿನಿಧಿಸುತ್ತಿತ್ತು. ರೈಸಿ ಅವರನ್ನು ಖಮೇನಿಯವರ ಉತ್ತರಾಧಿಕಾರಿ ಎಂಬಂತೆ ಬಿಂಬಿಸಿದ್ದು ಮತ್ತು ಇರಾನಿನ ಧಾರ್ಮಿಕ ನಾಯಕತ್ವ ರೈಸಿಯನ್ನು ಬೆಂಬಲಿಸಿ, ಅವರ ವಿರೋಧಿಗಳನ್ನು ತಡೆದದ್ದು ಆಶ್ಚರ್ಯಕರ ಬೆಳವಣಿಗೆಯೇನೂ ಆಗಿರಲಿಲ್ಲ.
ಖಮೇನಿ ಅವರ ರೀತಿಯಲ್ಲೇ, ರೈಸಿ ಸಹ ಇರಾನ್ ಮತ್ತು ಇರಾನಿ ಸರ್ಕಾರದ ಮೂಲಭೂತ ತಳಹದಿಯಾಗಿ ಕಠಿಣವಾದ ಇಸ್ಲಾಮಿಕ್ ಕಾನೂನನ್ನು ಹೊಂದಬೇಕು ಎನ್ನುವುದನ್ನು ಪ್ರತಿಪಾದಿಸಿದ್ದರು.
ಹಸ್ಸನ್ ರೌಹಾನಿ ಅವರ ಸರ್ಕಾರ, 2015ರಲ್ಲಿ ಅಮೆರಿಕಾ ಸೇರಿದಂತೆ, ವಿವಿಧ ಶಕ್ತಿಶಾಲಿ ರಾಷ್ಟ್ರಗಳೊಡನೆ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ, ರೈಸಿ ಅಧ್ಯಕ್ಷರಾದ ಬಳಿಕ, ಅಮೆರಿಕಾ ಹಾಗೂ ಇತರ ಪಾಶ್ಚಾತ್ಯ ದೇಶಗಳೊಡನೆ ಮಾತುಕತೆ ನಡೆಸುವ ಕುರಿತು ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ.
ಕೋವಿಡ್-19 ಸಾಂಕ್ರಾಮಿಕದ ಬಾಧೆ, ಸರ್ಕಾರದ ವಿರುದ್ಧ ದಂಗೆ, ಪ್ರತಿಭಟನೆಗಳು, ನಿರ್ಬಂಧಗಳ ಕಾರಣದಿಂದ ಆರ್ಥಿಕ ಸಂಕಷ್ಟ, ಇಸ್ರೇಲ್ ಜೊತೆಗೆ ಹೆಚ್ಚುತ್ತಿದ್ದ ಉದ್ವಿಗ್ನತೆ ಹಾಗೂ ಪರಮಾಣು ಒಪ್ಪಂದವನ್ನು ಮರಳಿ ಚಾಲ್ತಿಗೆ ತರುವ ನಿಟ್ಟಿನಲ್ಲಿ ಸ್ಥಗಿತಗೊಂಡ ಮಾತುಕತೆಗಳಂತಹ ಸಂಕಷ್ಟದ ಸಂದರ್ಭದಲ್ಲಿ ರೈಸಿ ಅವರು ಇರಾನ್ ಅಧ್ಯಕ್ಷರಾಗಿ ನೇಮಕಗೊಂಡರು.
ಪ್ರತಿಭಟನೆಗಳಿಗೆ ಕ್ರೌರ್ಯದ ಪ್ರತ್ಯುತ್ತರ
ಮಾಶಾ ಅಮಿನಿ ಎಂಬ 22ರ ಹರೆಯದ ಯುವತಿ ಮಹಿಳೆಯರ ಕಟ್ಟುನಿಟ್ಟಿನ ವಸ್ತ್ರದ ನಿಯಮವನ್ನು ಪ್ರತಿಭಟಿಸಿ, ಬಂಧನಕ್ಕೊಳಗಾಗಿದ್ದಳು. ಅವಳು ಪೊಲೀಸ್ ವಶದಲ್ಲಿದ್ದಾಗಲೇ ಮೃತಪಟ್ಟಿದ್ದರಿಂದ ಇರಾನಿನಾದ್ಯಂತ ಪ್ರತಿಭಟನೆಗಳು ನಡೆದಿದ್ದವು. 1979ರ ಇರಾನಿಯನ್ ಕ್ರಾಂತಿಯ ಬಳಿಕ, ಇದು ಧಾರ್ಮಿಕ ನಾಯಕತ್ವಕ್ಕೆ ಎದುರಾದ ಅತಿದೊಡ್ಡ ಸವಾಲಾಗಿತ್ತು. ಸಾವಿರಾರು ಇರಾನಿಯನ್ನರು, ವಿಶೇಷವಾಗಿ ಮಹಿಳೆಯರು ಮತ್ತು ಯುವ ಜನರು ಬೀದಿಗೆ ಬಂದು, ದಬ್ಬಾಳಿಕೆ ಮತ್ತು ಆರ್ಥಿಕ ಸಂಕಷ್ಟಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ರೈಸಿ ಅವರ ನಾಯಕತ್ವದಲ್ಲಿ, ಇರಾನ್ ಸರ್ಕಾರ ಪ್ರತಿಭಟನೆಗಳನ್ನು ಅತ್ಯಂತ ತೀವ್ರವಾಗಿ ದಮನಿಸಿತು. ಇರಾನ್ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಮುಗಿಬಿದ್ದು, ದಾಳಿ ನಡೆಸಿದವು. ಇದರ ಪರಿಣಾಮವಾಗಿ, ನೂರಾರು ಪ್ರತಿಭಟನಾಕಾರರು ಸಾವನ್ನಪ್ಪಿ, ಸಾವಿರಾರು ಪ್ರತಿಭಟನಾಕಾರರು ಬಂಧನಕ್ಕೊಳಗಾದರು ಎಂದು ಮಾನವ ಹಕ್ಕು ಸಂಸ್ಥೆಗಳು ವರದಿ ಮಾಡಿವೆ.
ಇಸ್ರೇಲ್ ವಿರುದ್ಧ ಬಲ ಪ್ರದರ್ಶನ
ಇರಾನ್ ಮತ್ತು ಇಸ್ರೇಲ್‌ಗಳು ಕಳೆದ ಹಲವು ವರ್ಷಗಳಿಂದಲೂ ರಹಸ್ಯ ಕದನವನ್ನು ನಡೆಸುತ್ತಾ ಬಂದಿವೆ. ಆದರೆ, ಎಪ್ರಿಲ್ ತಿಂಗಳಲ್ಲಿ ಇರಾನ್ ಇಸ್ರೇಲ್ ವಿರುದ್ಧ ತನ್ನ ಮೊದಲ ನೇರ ಕಾರ್ಯಾಚರಣೆ ನಡೆಸಿ, 300ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಪ್ರಯೋಗಿಸಿತು.
ಹೆಲಿಕಾಪ್ಟರ್ ಅಪಘಾತ : ಇರಾನ್ ಅಧ್ಯಕ್ಷ ಬದುಕಿರುವ ಸಾಧ್ಯತೆ ಕಡಿಮೆ: ಇರಾನ್ ಮಾಧ್ಯಮ ವರದಿ
ಇರಾನ್ ತಾನು ನಡೆಸಿದ ದಾಳಿ, ಸಿರಿಯಾದ ರಾಜಧಾನಿ ಡಮಾಸ್ಕಸ್‌ನ ರಾಜತಾಂತ್ರಿಕ ಕಟ್ಟಡದ ಮೇಲೆ ಇಸ್ರೇಲ್ ಕೈಗೊಂಡ ವಾಯುದಾಳಿಗೆ ಪ್ರತೀಕಾರವಾಗಿದೆ ಎಂದಿತ್ತು. ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಮಿಲಿಟರಿಯ ಉನ್ನತ ನಾಯಕರು ಸಾವಿಗೀಡಾಗಿದ್ದರು. ಇರಾನ್ ತನ್ನ ಮೇಲೆ ಪ್ರಯೋಗಿಸಿದ ಕ್ಷಿಪಣಿ ಮತ್ತು ಡ್ರೋನ್‌ಗಳ ಪೈಕಿ 99%ವನ್ನು ತಾನು ತಡೆಗಟ್ಟಿರುವುದಾಗಿ ಇಸ್ರೇಲ್ ಹೇಳಿದೆ. ಇಸ್ರೇಲ್ ಪ್ರಸ್ತುತ ಗಾಜಾದಲ್ಲಿ ಯುದ್ಧ ನಿರತವಾಗಿದ್ದು, ಇರಾನ್ ನಡೆಸಿದ ದಾಳಿ ಒಂದು ರೀತಿಯಲ್ಲಿ ಅದರ ಶಕ್ತಿ ಪ್ರದರ್ಶನವಾಗಿದ್ದು, ಯುದ್ಧವನ್ನು ತೀವ್ರಗೊಳಿಸದಂತಹ ಪ್ರಯತ್ನವಾಗಿತ್ತು.