ವಾಷಿಂಗ್ಟನ್‌(ಜೂ.01): ಕಪ್ಪು ವರ್ಣೀಯ ವ್ಯಕ್ತಿ ಜಾಜ್‌ರ್‍ ಫ್ಲೋಯ್ಡ್‌ ಸಾವು ಖಂಡಿಸಿ ಅಮೆರಿಕದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟುವ್ಯಾಪಕವಾಗಿದೆ. ಪ್ರತಿಭಟನೆ ಜೊತೆಗೆ ಭಾರಿ ಪ್ರಮಾಣದ ಹಿಂಸಾಚಾರ, ದೊಡ್ಡ ದೊಡ್ಡ ಮಳಿಗೆಗಳ ಲೂಟಿ, ತಡೆಯಲು ಬಂದವರ ಹತ್ಯೆಯಂಥ ಘಟನೆಗಳು ನಡೆಯುತ್ತಿದ್ದು, ಅಮೆರಿಕದ ಹಲವು ನಗರಗಳನ್ನು ಅಗ್ನಿಕುಂಡದಂತೆ ಮಾಡಿದೆ.

ಹಿಂಸಾಚಾರ ತಡೆಗೆ ಹೇರಿರುವ ಕಫ್ರ್ಯೂ ಉಲ್ಲಂಘಿಸಿ 30ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಸಾವಿರಾರು ಜನ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದರ ನಡುವೆಯೇ ದುಷ್ಕರ್ಮಿಗಳು ಗುಂಪು, ಮನೆ, ಕಟ್ಟಡ, ವಾಹನಗಳಿಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಹಚ್ಚುವ ಮೂಲಕ ವಿಕೃತಿ ಮೆರೆಯುತ್ತಿವೆ.

ಅಮೆರಿಕದಲ್ಲಿ ಜನಾಂಗೀಯ ಕಿಚ್ಚು ಧಗಧಗ!

ಮತ್ತೊಂದೆಡೆ ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಪ್ರಸಿದ್ಧ ಬ್ರಾಂಡ್‌ ಸ್ಟೋರ್‌ಗಳಲ್ಲಿ ಲೂಟಿಯಂಥ ಕೃತ್ಯಗಳೂ ಭಾರೀ ಪ್ರಮಾಣದಲ್ಲಿ ನಡೆದಿವೆ. ಡಲ್ಲಾಸ್‌ನಲ್ಲಿ ಮಳಿಗೆಯೊಂದನ್ನು ಲೂಟಿ ಮಾಡಿದ ಗುಂಪೊಂದು, ಅದನ್ನು ತಡೆಯಲು ಬಂದ ಅಂಗಡಿ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಇನ್ನು ವಾಷಿಂಗ್ಟನ್‌ ಡಿಸಿಯಲ್ಲಿನ ಐಫೋನ್‌ ಮಳಿಗೆಯನ್ನು ದುಷ್ಕರ್ಮಿಗಳ ಗುಂಪು ಕೆಲವೇ ನಿಮಿಷಗಳಲ್ಲಿ ಲೂಟಿ ಮಾಡಿಕೊಂಡು ಪರಾರಿಯಾಗಿದೆ. ಇನ್ನು ಎರಡು ಪ್ರಕರಣಗಳಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ, ಹಿಂಸಾಚಾರದ ದೃಶ್ಯಗಳ ವರದಿ ಹೋಗಿದ್ದ ಪತ್ರಕರ್ತರ ಮೇಲೂ ದಾಳಿ ನಡೆಸಲಾಗಿದೆ. ಇನ್ನು ಲಾಸ್‌ ಏಂಜಲೀಸ್‌ನಲ್ಲಿ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹಾರಿಸಿದ ರಬ್ಬರ್‌ ಗುಂಡು, ಖ್ಯಾತ ನಟ ಕೆಂಡ್ರಿಕ್‌ ಸ್ಯಾಂಪ್ಸನ್‌ಗೆ ತಗುಲಿದ ಘಟನೆಯೂ ನಡೆದಿದೆ.

ಹಿಂಸಾಚಾರ ತಡೆಯಲು ಹಲವು ಪ್ರದೇಶಗಳಲ್ಲಿ ನ್ಯಾಷನಲ್‌ ಗಾರ್ಡ್ಸ್ಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಕಳೆದ ಗುರುವಾರದಿಂದೀಚೆಗೆ ಹಿಂಸೆಯಲ್ಲಿ ತೊಡಗಿದ್ದ 1500ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಫೋಯ್ಡ್‌ ಹತ್ಯೆಗೆ ಕಾರಣವೆಂಬ ಆರೋಪ ಹೊತ್ತಿರುವ ಡೆರಿಕ್‌ ಚುವಿನ್‌ ಬಂಧನದ ಬೆನ್ನಲ್ಲೇ, ಘಟನೆ ನಡೆದಾಗ ಆತನ ಜೊತೆಯಲ್ಲಿದ್ದ ಇನ್ನೂ ನಾಲ್ವರು ಪೊಲೀಸರು ಹುದ್ದೆಯಿಂದ ವಜಾ ಮಾಡಲಾಗಿದೆ.

ಲೈವ್‌ ಚಾಟ್‌ ವೇಳೆಯೇ ಅಮೆರಿಕ ಪತ್ರಕರ್ತ ಅರೆಸ್ಟ್‌!

ಕೊರೋನಾ ಹೆಚ್ಚಳ ಭೀತಿ:

ಈ ನಡುವೆ ಪ್ರತಿಭಟನಾಕಾರರು ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಸಾವಿರಾರು ಸಂಖ್ಯೆಯಲ್ಲಿ ಬೀದಿಗೆ ಬಂದಿರುವುದು ದೇಶದಲ್ಲಿ ಮತ್ತೊಂದು ಸುತ್ತಿನಲ್ಲಿ ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಹಬ್ಬುವ ಭೀತಿಗೂ ಕಾರಣವಾಗಿದೆ.