ಪಾಸ್ವರ್ಡ್ ಆಯ್ಕೆ ಮಾಡ್ಬೇಕಾದ್ರೆ ಇರಲಿ ಎಚ್ಚರ, ಹೀಗಂತೂ ಮಾಡ್ಲೇಬೇಡಿ…!
ಸಾಮಾನ್ಯವಾಗಿ ಹಲವಾರು ಡಿಜಿಟಲ್ ಸೇವೆಗಳನ್ನು ಬಳಸುವಾಗ ಅವುಗಳಿಗೆ ಪಾಸ್ವರ್ಡ್‌ಗಳು ಬೇಕೇಬೇಕು. ಕೆಲವರು ಒಂದೊಂದಕ್ಕೆ ಒಂದೊಂದು ಪಾಸ್ವರ್ಡ್‌ಗಳನ್ನು ಕೊಟ್ಟುಕೊಂಡಿದ್ದರೆ, ಮತ್ತೆ ಕೆಲವರು ಗೊಂದಲವಾಗುವುದರಿಂದ ಬಹುತೇಕ ಎಲ್ಲದಕ್ಕೂ ಒಂದೇ ರೀತಿಯ ಪಾಸ್ವರ್ಡ್‌ಗಳನ್ನು ಕೊಟ್ಟಿರುತ್ತಾರೆ. ಆದರೆ, ಇದೇ ಹ್ಯಾಕರ್ಸ್ ಜಗತ್ತಿಗೆ ಪ್ಲಸ್ ಆಗುತ್ತದೆ ಎಂಬುದನ್ನು ನೆನಪಿಡಿ. ಹೀಗಾಗಿ ನಾವು ಏನೆಲ್ಲ ತಪ್ಪುಗಳನ್ನು ಮಾಡುತ್ತೇವೆ. ಯಾವ ಬಗ್ಗೆ ಎಚ್ಚರಿಕೆಯಿಂದರಬೇಕು ಎಂಬುದರ ಬಗ್ಗೆ ನೋಡೋಣ.
ಡಿಜಿಟಲ್ ಇಂಡಿಯಾದಲ್ಲಿ ಈಗ ಎಲ್ಲರೂ ಸ್ಮಾರ್ಟ್. ಪ್ರತಿಯೊಂದಕ್ಕೂ ಡಿಜಿಟಲ್ ಮಾಧ್ಯಮ ಬೇಕೇ ಬೇಕು ಎನ್ನುವಂತಾಗಿರುವ ಈ ಕಾಲದಲ್ಲಿ ಎಷ್ಟೇ ಎಚ್ಚರವಹಿಸಿದರೂ ಕೆಲವೊಮ್ಮೆ ಹ್ಯಾಕ್‌ಗಳಾಗಿ ಅಮೂಲ್ಯ ದಾಖಲೆಗಳು, ಹಣ ದುರುಪಯೋಗ ಪ್ರಕರಣಗಳು ಸೇರಿದಂತೆ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹೀಗಾಗಿ ಪಾಸ್ವರ್ಡ್ ಹಾಗೂ ಪಿನ್‌ಗಳು ಎಲ್ಲ ರೀತಿಯ ಡಿಜಿಟಲ್ ಸೇವೆಗಳಾದ ಇ-ಮೇಲ್, ಸೋಷಿಯಲ್ ಮೀಡಿಯಾ, ಬ್ಯಾಂಕಿಂಗ್, ಇ-ಕಾಮರ್ಸ್ ಆ್ಯಪ್‌ಗಳಿಗೆ ಬೇಕೇ ಬೇಕು. ಆದರೆ, ಇದರ ಆಯ್ಕೆ ಮಾಡುವಾಗ ಮಾತ್ರ ನಾವು ಎಡವುತ್ತೇವೆ. ಹಾಗಾದರೆ, ನಾವು ಮಾಡುವ ತಪ್ಪುಗಳೇನು..? ಯಾವ ರೀತಿ ಮಾಡಬಾರದು ಎಂಬುದನ್ನು ನೋಡೋಣ…
ಹಳೇ ಪಾಸ್ವರ್ಡ್ ಬೇಡ
ಕೆಲವರು ಒಂದೆರಡು ಇಲ್ಲವೇ ಮೂರು ಪಾಸ್ವರ್ಡ್‌ಗಳನ್ನು ಮಾತ್ರ ತಮ್ಮ ತಲೆಯಲ್ಲಿಟ್ಟುಕೊಂಡಿರುತ್ತಾರೆ. ಹೊಸ ಪಾಸ್ವರ್ಡ್ ಸೆಟ್ ಮಾಡುವಾಗ ಇಲ್ಲವೇ ಬದಲಾಯಿಸುವಾಗ ಅವುಗಳನ್ನೇ ಮತ್ತೆ ಮತ್ತೆ ಬಳಸುತ್ತಾರೆ. ಇದರಿಂದ ಹ್ಯಾಕ್‌ಗಳಾಗಬಹುದು. ಕಾರಣ, ಹ್ಯಾಕರ್ಸ್‌ಗಳಿಗೆ ಡಾರ್ಕ್ ನೆಟ್ ಮೂಲಕ ಎಕ್ಸ್ ಪೈರಿ ಆಗಿರುವ ಪಾಸ್ವರ್ಡ್‌ಗಳು ಸಿಗುವ ಸಾಧ್ಯತೆ ಇರುತ್ತದೆ.
ಇದನ್ನು ಓದಿ: ಭಾರತದಲ್ಲಿಯೇ ಶುರುವಾಗುತ್ತೆ ಆ್ಯಪಲ್ ಆನ್‌ಲೈನ್ ಸ್ಟೋರ್!
ಇಲ್ಲೆಲ್ಲ ಸೇವ್ ಮಾಡಿ ಇಡ್ಬೇಡಿ
ಬಹುತೇಕರಿಗೆ ಮರೆತರೆ ಎಂಬ ಭಯ ಇರುವ ಹಿನ್ನೆಲೆಯಲ್ಲಿ ಪಾಸ್ವರ್ಡ್‌ಗಳನ್ನು ಜಿ-ಮೇಲ್, ಗೂಗಲ್ ಡಾಕ್ಸ್ ಇಲ್ಲವೇ ಇನ್ನಿತರ ಆನ್‌ಲೈನ್ ಸರ್ವಿಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಪಿ ಮಾಡಿ ಸೇವ್ ಮಾಡಿಟ್ಟುಕೊಳ್ಳುವ ರೂಢಿ ಇರುತ್ತದೆ. ಆದರೆ, ಇದು ನಿಜವಾಗಿಯೂ ಸೇಫಾ..? ಇಲ್ಲ ಎನ್ನುತ್ತಾರೆ ತಜ್ಞರು. ಈ ರೀತಿ ಮಾಡಲೇಬಾರದು.
ಒಂದೇ ಪಾಸ್ವರ್ಡ್
ಎಲ್ಲ ಪ್ರಮುಖ ಆನ್‌ಲೈನ್ ಸರ್ವಿಸ್‌ಗಳಿಗೆ ಒಂದೇ ಪಾಸ್ವರ್ಡ್‌ಗಳನ್ನು ಕೆಲವರು ಇಟ್ಟುಕೊಳ್ಳುತ್ತಾರೆ. ಇದರಿಂದ ಸುಲಭವಾಗಿ ಹ್ಯಾಕ್ ಮಾಡಬಹುದಾಗಿದೆ. ಹಾಗಾಗಿ ಬೇರೆ ಬೇರೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಪ್ರತ್ಯೇಕ ಪಾಸ್ವರ್ಡ್‌ಗಳನ್ನು ಹೊಂದಿದರೆ ಸೇಫ್.
ಬ್ರೌಸರ್ ನಲ್ಲಿ ಸೇವಿಂಗ್ ಕೊಡ್ಲೇಬೇಡಿ
ಇನ್ನು ಕೆಲವರು ಮನೆಯ ಸಿಸ್ಟಮ್ ಇಲ್ಲವೇ ಆಫೀಸ್‌ನ ಡೆಸ್ಕ್‌ಟಾಪ್‌ಗಳಲ್ಲಿ ಕೆಲವೊಂದು ಡಿಜಿಟಲ್ ಸೇವೆಗಳಿಗೆ (ಕ್ರೋಮ್ ಇಲ್ಲವೇ ಇನ್ನಿತರ ಬ್ರೌಸರ್‌ಗಳಲ್ಲಿ) ಸೇವ್ ಪಾಸ್ವರ್ಡ್ ಆಯ್ಕೆಯನ್ನು ಕೊಟ್ಟಿರುತ್ತಾರೆ. ಇದು ಸಹ ಬಹಳ ತೊಂದರೆ ಕೊಡಲಿದ್ದು, ಈ ಬ್ರೌಸರ್ ಮೂಲಕ ನೀವೇನಾದರೂ ನಕಲಿ (ಹ್ಯಾಕರ್ಸ್ ಗಳ) ವೆಬ್‌ಸೈಟ್‌ಗಳಿಗೆ ಅಪ್ಪಿತಪ್ಪಿ ಭೇಟಿ ನೀಡಿದರೂ ಪಾಸ್ವರ್ಡ್‌ಗಳ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಅಥೆಂಟಿಕೇಶನ್ ಹೆಚ್ಚಿರಲಿ
ಎರಡು ರೀತಿಯ ಅಥೆಂಟಿಕೇಶನ್‌ಗಳನ್ನು ಹೊಂದುವುದು ಬಹಳ ಮುಖ್ಯವಾಗುತ್ತದೆ. ಹೀಗೆ ನಿಮ್ಮ ಎರಡು ರೀತಿಯ ಪಾಸ್ವರ್ಡ್‌ಗಳನ್ನು ದಾಟಿ ದತ್ತಾಂಶವನ್ನು ಭೇದಿಸುವುದು ಹ್ಯಾಕರ್ಸ್‌ಗಳಿಗೆ ಸ್ವಲ್ಪ ಕಷ್ಟವಾದೀತು.
ಪ್ರಮುಖ ದಿನಗಳು ಬೇಡ
ನಿಮ್ಮ ಹುಟ್ಟಿದ ದಿನ, ಮದುವೆ ವಾರ್ಷಿಕೋತ್ಸವ ಸೇರಿದಂತೆ ಪ್ರಮುಖ ದಿನಗಳನ್ನು ಪಾಸ್ವರ್ಡ್‌ಗಳನ್ನಾಗಿ ಆಯ್ಕೆ ಮಾಡುವುದು ಒಳ್ಳೆಯದಲ್ಲ. ಇದರಿಂದ ಹ್ಯಾಕರ್ಸ್‌ಗಳಿಗೆ ಸುಲಭ ರೀತಿಯಲ್ಲಿ ಪಾಸ್ವರ್ಡ್‌ಗಳು ತುತ್ತಾಗುತ್ತವೆ.
ಇದನ್ನು ಓದಿ: ಅಂಡಮಾನ್-ನಿಕೋಬಾರ್‌ನಲ್ಲೂ ಈಗ ಸಿಗುತ್ತೆ ಹೈಸ್ಪೀಡ್ 4ಜಿ ಇಂಟರ್ನೆಟ್.
ಹೆಸರುಗಳನ್ನು ಇಟ್ಟುಕೊಳ್ಳೋದು ಒಳ್ಳೆಯದಲ್ಲ
ನಿಮ್ಮ ಹೆಸರೋ, ಕುಟುಂಬದವರದ್ದೋ, ಸ್ನೇಹಿತರದ್ದೋ, ಇಲ್ಲವೇ ಯಾವುದೋ ಪ್ರಮುಖ ವ್ಯಕ್ತಿಗಳದ್ದೋ, ಇಲ್ಲವೇ ಕಾರು, ವಿಮಾನಗಳ ಕಂಪನಿಗಳ ಹೆಸರುಗಳು, ಹೀಗೆ ಇಂಥವನ್ನು ಇಟ್ಟುಕೊಂಡರೆ ಹ್ಯಾಕ್ ಮಾಡಲು ಸುಲಭವಾಗುತ್ತದೆ. ಈ ರೀತಿಯಾಗಿಟ್ಟುಕೊಂಡಿದ್ದರೆ ಕೂಡಲೇ ಬದಲಾಯಿಸಿಕೊಳ್ಳಿ.
ಮೊಬೈಲ್ ಸಂಖ್ಯೆ ಹಾಕಿದರೆ ಹೇಗೆ?
ಕೆಲವರು ಮಾಡುವ ಬಹುದೊಡ್ಡ ತಪ್ಪು ಇದೇ ಆಗಿದೆ. ತಮ್ಮ ಇಲ್ಲವೇ ಕುಟುಂಬದವರ ಮೊಬೈಲ್ ಸಂಖ್ಯೆಗಳನ್ನು ಇಟ್ಟುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದಲೂ ಅಪಾಯ ಜಾಸ್ತಿ.
ಆಗಾಗ ಪಾಸ್ವರ್ಡ್ ಬದಲಾಯಿಸದಿದ್ದರೆ?
ಆಗಾಗ ಪಾಸ್ವರ್ಡ್ ಅನ್ನು ಬದಲಾಯಿಸುತ್ತಿರಬೇಕು ಎಂಬ ಸಲಹೆಗಳು ಕೇಳಿಬರುತ್ತಲೇ ಇರುತ್ತವೆ. ಒಂದು ವೇಳೆ ಹೀಗೆ ಬದಲಾಯಿಸದಿದ್ದರೆ ಆ ಪಾಸ್ವರ್ಡ್‌ನ ಸಾಮರ್ಥ್ಯ ದುರ್ಬಲವಾಗಿ ಹ್ಯಾಕರ್‌ಗಳ ಪಾಲಾಗಬಹುದು.
ಇದನ್ನು ಓದಿ: ನಿಮ್ಮ ಮೊಬೈಲ್‌ನಲ್ಲಿ ಹೀಗಾಗುತ್ತಿದ್ದರೆ ಹ್ಯಾಕ್ ಆಗಿದೆ ಎಂದರ್ಥ..!
ಆಧಾರ್, ಪಾನ್ ನಂಬರ್ ಕೊಟ್ಟರೆ..?
ಆಧಾರ್ ಸಂಖ್ಯೆ, ಪಾನ್ ಸಂಖ್ಯೆ ಸೇರಿದಂತೆ ಕೆಲವು ಸಾಮಾಜಿಕ ಗುರುತಿನ ಚೀಟಿಗಳು ಹೊರಗೆ ಎಲ್ಲರಿಗೂ ಲಭ್ಯ ಇರುವ ಕಾರಣ, ಅವುಗಳ ಸಂಖ್ಯೆಯನ್ನು ಪಾಸ್ವರ್ಡ್‌ಗಳನ್ನಾಗಿ ಬಳಸಿದರೆ ಹ್ಯಾಕಿಂಗ್ ಮತ್ತಷ್ಟು ಸುಲಭವಾಗುತ್ತದೆ. ಹಾಗಾಗಿ ಪಾಸ್ವರ್ಡ್ಗಳ ಆಯ್ಕೆಯಲ್ಲಿ ಬಹಳ ಎಚ್ಚರಿಕೆ ವಹಿಸಿ ಸಾಧ್ಯವಾದಷ್ಟು ಹೊಸತನ್ನು, ಸಂಬಂಧವಿಲ್ಲದಂತೆ ಇಟ್ಟುಕೊಳ್ಳುವುದು ಉತ್ತಮ.