ಟ್ವಿಟರ್ ನಿಷೇಧ ಬೆನ್ನಲ್ಲೇ ನೈಜೀರಿಯಾ ಮೇಲೆ ಬೆಂಗಳೂರು ಮೂಲದ ಕೂ ಆ್ಯಪ್ ಕಣ್ಣು!
ತನ್ನ ಅಧ್ಯಕ್ಷರ ಟ್ವೀಟ್ ಡಿಲಿಟ್ ಮಾಡಿದ ಬೆನ್ನಲ್ಲೇ ನೈಜೀರಿಯಾ ಸರ್ಕಾರ ಟ್ವಿಟರ್ ಕಾರ್ಯಾಚರಣೆಯನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಮೈಕ್ರೊ ಬ್ಲಾಗಿಂಗ್ ಬಳಕೆದಾರರನ್ನು ತನ್ನತ್ತ ಸೆಳೆಯಲು ಬೆಂಗಳೂರು ಮೂಲದ ಮೈಕ್ರೊಬ್ಲಾಗಿಂಗ್ ಆಪ್ ಕೂ ಮುಂದಾಗಿದೆ. ಈ ಬಗ್ಗೆ ಕೂ ಸಂಸ್ಥಾಪದಕ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಟ್ವಿಟರ್ ತನ್ನ ನಿಮಯಗಳನ್ನು ಪಾಲನೆ ಮಾಡದ ಬಳಕೆದಾರರ ಖಾತೆಗಳನ್ನು ರದ್ದುಗೊಳಿಸುವುದನ್ನು ಮುಂದುವರಿಸಿದೆ. ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಡೋನಾಲ್ಡ್ ಟ್ರಂಪ್ ಅವರ ಖಾತೆಯನ್ನು ರದ್ದುಪಡಿಸಿದ್ದ ಟ್ವಿಟರ್ ಈಗ, ನೈಜೀರಿಯಾದ ಅಧ್ಯಕ್ಷ ಮುಹಮ್ಮದು ಬುಹಾರಿ ಅವರು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟ್ವೀಟ್ ಡಿಲಿಟ್ ಮಾಡಿದೆ.
ಟ್ವಿಟರ್ ತನ್ನ ರಾಷ್ಟ್ರದ ಅಧ್ಯಕ್ಷನ ಟ್ವೀಟ್ ಡಿಲಿಟ್ ಮಾಡುತ್ತಿದ್ದಂತೆ ನೈಜಿರಿಯಾ ಸರ್ಕಾರವು ಟ್ವಿಟರ್ ಕಾರ್ಯಾಚರಣೆನ್ನೇ ಸ್ಥಗಿತಗೊಳಿಸಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಕೆಲಸವನ್ನು ಬೆಂಗಳೂರು ಮೂಲದ ಮತ್ತೊಂದು ಮೈಕ್ರೋಬ್ಲಾಗಿಂಗ್ ಆಪ್ ಕೂ(Koo) ಮಾಡುತ್ತಿದೆ.
ಭುಗಿಲೆದ್ದ ಆಕ್ರೋಶ, ವಿಐಪಿಗಳ ‘ಬ್ಲೂ ಟಿಕ್’ ವಾಪಸ್, ಏನಿದು ಟ್ವೀಟರ್ ಮಸಲತ್ತು..?...
ನಮ್ಮಲ್ಲೂ ಟ್ವಿಟರ್ ಮತ್ತು ಕೇಂದ್ರ ಸರ್ಕಾರದ ನಡುವೆ ಸಂಘರ್ಷ ಜಾರಿಯಲ್ಲಿದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಡಿಜಿಟಲ್ ನಿಯಮಗಳನ್ನು ಪಾಲನೆ ಮಾಡುವಂತೆ ಸೂಚಿಸಲಾಗಿದೆ. ಆದರೆ, ಇದುವರೆಗೂ ಸೂಕ್ತ ರೀತಿಯ ಸ್ಪಂದನೆ ಸಿಗದಿರುವುದರಿಂದ ಕೇಂದ್ರ ಸರ್ಕಾರವು ಕೆಂಡಾಮಂಡಲವಾಗಿರುವುದು ಗೊತ್ತೇ ಇದೆ.
ಇತ್ತ ನೈಜೀರಿಯಾದಲ್ಲಿ ಅಲ್ಲಿನ ಸರ್ಕಾರವು ಟ್ವಿಟರ್ ಕಾರ್ಯಾಚರಣೆಯನ್ನು ನಿಷೇಧಿಸುತ್ತಿದ್ದಂತೆ ಬೆಂಗಳೂರು ಮೂಲದ ಕೂ ಆಪ್ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣನ್ ಅವರು ಟ್ವೀಟ್ ಮಾಡಿ, ಕೂಇಂಡಿಯಾ ಈಗ ನೈಜೀರಿಯಾದಲ್ಲಿ ಲಭ್ಯವಿದೆ. ನಾವು ಅಲ್ಲಿನ ಸ್ಥಳೀಯ ಭಾಷೆಯಲ್ಲೂ ಸೇವೆ ನೀಡಲಿದ್ದೇವೆ. ಏನು ಹೇಳುತ್ತೀರಿ ಎಂದು ಕೇಳಿದ್ದಾರೆ.
ಟ್ವಿಟರ್ ರೀತಿಯ ಕಾರ್ಯನಿರ್ವಹಣೆಯನ್ನು ಹೊಂದಿರುವ ಬೆಂಗಳೂರು ಮೂಲದ ಕೂ ಆಪ್ ಅನ್ನು ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್‌ನ ಹಳೆಯ ವಿದ್ಯಾರ್ಥಿ ರಾಧಾಕೃಷ್ಣನ್ ಮತ್ತು ಮಯಾಂಕ್ ಬಿಡವಟ್ಕಾ ಅವರು ಕಳೆದ ವರ್ಷ ಸ್ಥಾಪಿಸಿದ್ದಾರೆ.
ಈ ಕೂ ಆಪ್ ಈಗಾಗಲೇ 34 ಮಿಲಿಯನ್ ಡಾಲರ್ ನಿಧಿಯನ್ನು ಸಂಗ್ರಹಿಸಿದೆ ಇಲ್ಲಿಯವರೆಗೆ. ಕೂ ಆಪ್ ಎಷ್ಟು ಬಳಕೆದಾರರನ್ನು ಹೊಂದಿದೆ ಎಂಬುದನ್ನು ಕಂಪನಿ ಈವರೆಗೂ ಬಹಿರಂಗಪಡಿಸಿಲ್ಲ. ಆದರೆ, ಮುಂದಿನ ಎರಡು ವರ್ಷಗಳಲ್ಲಿ 10 ಕೋಟಿ ಬಳಕೆದಾರನ್ನು ಹೊಂದುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ.
ಭಾರತದಲ್ಲೂ ಅನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು, ಕ್ರೀಡಾಪಟುಗಳು, ಪತ್ರಕರ್ತರು ಸಾಮಾನ್ಯರು ಕೂ ಆಪ್ ಅನ್ನು ಈಗ ಬಳಸಲಾರಂಭಿಸಿದ್ದಾರೆ. ಸದಾ ವಿವಾದತ್ಮಾಕ ಟ್ವೀಟ್ ಮಾಡುತ್ತಿದ್ದ ನಟಿ ಕಂಗನಾ ರಣಾವತ್ ಖಾತೆಯನ್ನು ಟ್ವಿಟರ್ ನಿಷೇಧಿಸಿದ ಬಳಿಕ ಅವರು ಕೂ ಆಪ್‌ನಲ್ಲಿ ಸಕ್ರಿಯವಾಗುವುದಾಗಿ ಹೇಳಿದ್ದರು.
ಭಾರತದಲ್ಲಿ ಟ್ವಿಟರ್‌ಗೆ ಪೈಪೋಟಿ ನೀಡುವ ಪ್ರಯತ್ನ ಮಾಡುತ್ತಿರುವ ಕೂ ಆಪ್, ಸರ್ಕಾರ ಜಾರಿಗೆ ತಂದಿರುವ ಡಿಜಿಟಲ್ ನಿಯಮಗಳನ್ನು ಅನುಷ್ಠಾನಗೊಳಿಸುವ ಇಚ್ಛೆಯನ್ನು ಹೊಂದಿದೆ. ಆದಾಗ್ಯ, ಕೂ ಡೇಟಾ ಪ್ರೈವಸಿ ಮತ್ತು ಸೆಕ್ಯುರಿಟಿ ಸಂಬಂಧ ಇನ್ನೂ ಆತಂಕಗಳಿವೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.
ಪರಿಣಾಮ ನೆಟ್ಟಗಿರಲ್ಲ, ಟ್ವಿಟರ್‌ಗೆ ಕೇಂದ್ರ ಸರ್ಕಾರದ ಕೊನೆಯ ವಾರ್ನಿಂಗ್
ಆಗ್ನೇಯ ನೈಜೀರಿಯಾದಲ್ಲಿ ನಡೆಯುತ್ತಿರುವ ದಂಗೆ ಕುರಿತು ಎಚ್ಚರಿಕೆ ನೀಡುವ ಭರದಲ್ಲಿ ನೈಜೀರಿಯಾ ಅಧ್ಯಕ್ಷ ಬುಹಾರಿ, ನಾಗರಿಕ ಸಂಘರ್ಷದ ಬಗ್ಗೆ ಉಲ್ಲೇಖಿಸಿದ್ದರು. ಈ ಟ್ವೀಟ್ ತನ್ನ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದು ಟ್ವೀಟರ್ ಅಧ್ಯಕ್ಷರ ಟ್ವೀಟ್ ರದ್ದುಗೊಳಿಸಿತ್ತು.
ಇದಾದ ಎರಡು ದಿನಗಳ ಬಳಿಕ ನೈಜೀರಿಯಾದ ಮಾಹಿತಿ ಸಚಿವಾಲಯವು, ಅನಿರ್ದಿಷ್ಟಾವಧಿಯವರೆಗೆ ಟ್ವಟಿರ್ ಕಾರ್ಯಾಚರಣೆಯನ್ನು ನೈಜೀರಿಯಾದಲ್ಲಿ ಅಮಾನತ್ತಿನಲ್ಲಿಡಲಾಗಿದೆ. ನೈಜೀರಿಯಾದ ಸಾಂಸ್ಥಿಕ ಅಸ್ತಿತ್ವವನ್ನು ಹಾಳು ಮಾಡುವ ಸಾಮರ್ಥ್ಯವಿರುವ ಚಟುವಟಿಕೆಗಳಿಗೆ ಟ್ವಿಟರ್ ನಿರಂತರವಾಗಿ ಬಳಕೆಯಾಗುತ್ತಿರುವುದರಿಂದ ಟ್ವಿಟರ್ ಅನ್ನು ನಿಷೇಧಿಸಲಾಗುತ್ತಿದೆ ಎಂದು ಸರ್ಕಾರ ಹೇಳಿತ್ತು.
ನೈಜೀರಿಯಾದ ಸರ್ಕಾರದ ಕ್ರಮದ ವಿರುದ್ಧ ಟ್ವಿಟರ್‌ನಲ್ಲಿ ಪರ ಮತ್ತು ವಿರೋಧ ಚರ್ಚೆಗಳು ನಡೆದಿವೆ. ಇದೇ ವೇಳೆ, ಭಾರತದಲ್ಲಿ ಡಿಜಿಟಲ್ ನಿಯಮಗಳ ಪಾಲನೆ ಸಂಬಂಧ ಚರ್ಚೆಗಳು ಜೋರಾಗಿವೆ.
ಏತನ್ಮಧ್ಯೆ ಭಾರತ ಸರ್ಕಾರವು, ನಿಯಮಗಳನ್ನು ಜಾರಿಗೆ ಸಂಬಂಧ ಖಡಕ್ ಎಚ್ಚರಿಕೆಯನ್ನೂ ನೀಡಿದೆ. ಒಂದೊಮ್ಮೆ ಡಿಜಿಟಲ್ ನಿಯಮಗಳನ್ನು ಟ್ವಿಟರ್ ಜಾರಿಗೊಳಿಸಲು ಹಿಂಜರಿದರೆ, ನೈಜೀರಿಯಾ ರೀತಿಯಲ್ಲಿ ಭಾರತವು ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕು.
ಐಫೋನ್ ಗ್ರಾಹಕರು ತಮ್ಮ ನಿಷ್ಠೆ ಬದಲಿಸಿದ್ರಾ? ಆಂಡ್ರಾಯ್ಡ್‌ನತ್ತ ಲಗ್ಗೆ ಇಟ್ಟ ಬಳಕೆದಾರರು!