ಮಗುವಿಗೆ ಅಕ್ಷರಾಭ್ಯಾಸ ಮಾಡಿಸಲು ಶೃಂಗೇರಿಗೆ ಹೋಗಬೇಕಾ? ಹೀಗ್ ಮಾಡಿ
ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಅತ್ಯಂತ ಪ್ರಮುಖವಾದುದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶಾರದಾಂಬ ದೇವಾಲಯ. ವಿದ್ಯಾಧಿದೇವತೆಯಾದ ಸರಸ್ವತಿ ದೇವಿಯ ದೇವಸ್ಥಾನವಾಗಿರುವುದರಿಂದ, ಅಕ್ಷರಾಭ್ಯಾಸಕ್ಕೆ ಹೆಸರುವಾಸಿಯಾಗಿದೆ.. ಶೃಂಗೇರಿಗೆ ಹೋಗುವುದು ಹೇಗೆ, ಉಳಿದುಕೊಳ್ಳುವುದು ಎಲ್ಲಿ, ಈ ದೇವಸ್ಥಾನದ ವಿಶೇಷತೆಯೇನು ಅನ್ನೋ ಮಾಹಿತಿ ಇಲ್ಲಿದೆ.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಸಹ್ಯಾದ್ರಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ರಮಣೀಯ ಪರಿಸರದಲ್ಲಿರುವುದು ಪವಿತ್ರ ಶೃಂಗೇರಿ. ನಾಲ್ಕು ದಿಕ್ಕುಗಳಲ್ಲಿ ಅರಣ್ಯ , ಗಿರಿಗಳಿರುವುದರಿಂದ ಕ್ಷೇತ್ರವು ಪ್ರಶಾಂತವೂ, ಮನೋಹರವೂ ಆಗಿದೆ. ಶುದ್ಧ ಸ್ಪಟಿಕದಂತಹ ಜಲವುಳ್ಳಂತಹ ತುಂಗಾ ನದಿಯ ತೀರದಲ್ಲಿರುವ ಈ ಕ್ಷೇತ್ರವು ಸುತ್ತುವರೆದ ಪರ್ವತಶ್ರೇಣಿಯು ಋಷ್ಯಶೃಂಗ ಪರ್ವತವಾಗಿದೆ. ಶ್ರೀ ಮದ್ವರಾಮಾಯಣದಲ್ಲಿ ಉಲ್ಲೇಖ ಗೊಂಡಿರುವ ಮಹಾ ಮಹಿಮರಾದ ದೃಶ್ಯ ಶೃಂಗ ಮಹರ್ಷಿಗಳಿಂದ ಈ ಪ್ರದೇಶಕ್ಕೆ ಶೃಂಗಗಿರಿ ಅಥವಾ ಶೃಂಗೇರಿ ಎಂದು ಹೆಸರು ಬಂದಿದೆ. ಶೃಂಗೇರಿಯ ದೇವಾಲಯಗಳಲ್ಲಿ ಪ್ರಮುಖವಾದದ್ದು ಶ್ರೀಶಾರದಾ ದೇವಾಲಯ, ಶ್ರೀಆದಿಶಂಕರ ಭಗವತ್ಪಾದಾಚಾರ್ಯರು ಪುಣ್ಯಕ್ಷೇತ್ರವಾದ ಶೃಂಗೇರಿಗೆ ಬಂದು, ಇಲ್ಲಿಯ ಮನಮೋಹಕ ಪ್ರಶಾಂತ ವಾತಾವರಣವನ್ನು ಕಂಡು, ತಮ್ಮ ಮೊದಲ ಪೀಠವನ್ನು ಇಲ್ಲಿಯೇ ಸ್ಥಾಪಿಸಿದರು. ತುಂಗಾನದಿಯ ತೀರದಲ್ಲಿ ಕಲ್ಲುಬಂಡೆಯೊಂದರ ಮೇಲೆ ಶ್ರೀಚಕ್ರಯಂತ್ರವನ್ನು ಕೆತ್ತಿ ಅದರ ಮೇಲೆ ಶ್ರೀಗಂಧದ ಶಾರದಾಮ್ಮನವರ ಮೂರ್ತಿಯನ್ನು ಪ್ರತಿಷ್ಠಿಸಿದ್ದರು ಎಂದು ತಿಳಿದುಬಂದಿದೆ.
ಅಕ್ಷರಾಭ್ಯಾಸ
ವಿದ್ಯಾಧಿದೇವತೆಯಾದ ಸರಸ್ವತಿ ದೇವಿಯ ದೇವಸ್ಥಾನ (Temple)ವಾಗಿರುವುದರಿಂದ, ಅಕ್ಷರಾಭ್ಯಾಸಕ್ಕೆ ಹೆಸರುವಾಸಿಯಾಗಿದೆ. 2ರಿಂದ 5 ವರ್ಷದೊಳಗಿನ ಮಕ್ಕಳನ್ನು ಇಲ್ಲಿ ಕರೆದುಕೊಂಡು ಬಂದು ಓನಾಮ ಬರೆಸಿ ವಿದ್ಯಾಭ್ಯಾಸ ಆರಂಭಿಸಿದರೆ ವಿದ್ಯೆ ಚೆನ್ನಾಗಿ ನಡೆಯುತ್ತದೆ ಎಂಬ ನಂಬಿಕೆಯಿಂದ ಪೋಷಕರು (Parents) ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಅಕ್ಷರಾಭ್ಯಾಸಕ್ಕೆ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಶೃಂಗೇರಿ ದೇವಾಲಯದ ಮತ್ತೊಂದು ಬಹುದೊಡ್ಡ ಆಕರ್ಷಣೆ ಎಂದರೆ ಅದು ಮಠ. ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠಂ ಎಂದು ಕರೆಯಲಾಗುವ ಈ ಮಠವು ಸ್ಮಾರ್ತ ಸಂಪ್ರದಾಯವನ್ನು, ಅದ್ವಾಾತ ತತ್ವವನ್ನು ಅನುಸರಿಸುತ್ತದೆ. ಇಲ್ಲಿನ ಮಠಾಧೀಶರನ್ನು ಜಗದ್ಗುರುಗಳು, ಶಂಕರಾಚಾರ್ಯ ಮುಂತಾದ ಗೌರವಗಳಿಂದ ಕರೆಯಲಾಗುತ್ತದೆ.
ಬೆಂಗಳೂರಿನಿಂದ ಕೇದಾರನಾಥಕ್ಕೆ ಪ್ರಯಾಣ ವೆಚ್ಚ ಎಷ್ಟು? ಹೋಗೋದು ಹೇಗೆ?
ಶೃಂಗೇರಿ ದೇವಸ್ಥಾನದ ಮೀನುಗಳು
ದೇವಸ್ಥಾನದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಏಂದರೆ ನದಿಯಲ್ಲಿ ಇರುವ ಮೀನುಗಳು (Fish). ಹೌದು ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು ದೇವಿ ದರ್ಶನ ಪಡೆದು ಪಕ್ಕದಲ್ಲೇ ತುಂಗಾ ನದಿಯಲ್ಲಿರುವ ಮೀನುಗಳು ದರ್ಶನವನ್ನು ಪಡೆಯುತ್ತಾರೆ. ಈ ದೇವಸ್ಥಾನಕ್ಕೆ ಬರುವ ಭಕ್ತರು ಮೀನುಗಳನ್ನು ನೋಡದೇ ಹೋಗುವುದೇ ಇಲ್ಲ. ನದಿಯಲ್ಲಿರುವ ಮೀನುಗಳಿಗೆ ತಾವು ತಂದ ತಿಂಡಿಗಳನ್ನು ಹಾಕುತ್ತಾರೆ. ಈ ದ್ರಶ್ಯಗಳನ್ನು ನೋಡುವುದೇ ಒಂದು ರೀತಿಯಲ್ಲಿ ವಿಶೇಷವಾಗಿದೆ.
ದೇಶ-ವಿದೇಶಗಳಿಂದ ಬರುವ ಭಕ್ತರು
ಈ ದೇವಿ ದರ್ಶನ ಪಡೆಯುಲು ರಾಜ್ಯದಿಂದ ಮಾತ್ರ ಹೊರ ರಾಜ್ಯಗಳಿಂದಲೂ ಭಕ್ತರ (Devotees) ಆಗಮಿಸುತ್ತಾರೆ. ಸರಾಸರಿ ವರ್ಷಕ್ಕೆ 40ರಿಂದ 50 ಲಕ್ಷ ಭಕ್ತರು ದೇವಿ ದರ್ಶನ ಪಡೆಯುತ್ತಾರೆ. ವರ್ಷದಿಂದ ವರ್ಷಕ್ಕೆ ದೇವಸ್ಥಾನಕ್ಕೆ ಬರುವ ಭಕ್ತರು ಸಂಖ್ಯೆಯೂ ಹೆಚ್ಚಾಗಿದೆ. ಜೊತೆಗೆ ಇಲ್ಲಿನ ಮಲೆನಾಡಿನ ಪ್ರಕೃತಿ ಸೌಂದರ್ಯ ಸವಿದು ಆನಂದಿಸುತ್ತಾರೆ. ಇತಿಹಾಸಿಕವಾಗಿ ಸುಪ್ರಸಿದ್ಧ ಪಡೆದಿರುವ ಶೃಂಗೇರಿ ದೇವಸ್ಥಾನಕ್ಕೆ ಹೊಗಲು ಸಾರಿಗೆ ವ್ಯವಸ್ಥೆಯೂ ಕೂಡ ಉತ್ತಮವಾಗಿದೆ.
ಸಾರಿಗೆ ವ್ಯವಸ್ಥೆ :
ಬೆಂಗಳೂರು ಸೇರಿದಂತೆ ರಾಜ್ಯ ವಿವಿಧ ಕಡೆಗಳಿಂದ ಭಕ್ತರು ಶ್ರೀ ಮಠಕ್ಕೆ ಆಗಮಿಸುತ್ತಾರೆ. ಇಲ್ಲಿಗೆ ಭೇಟಿ ನೀಡುವ ಭಕ್ತರು ಸ್ವಂತ ವಾಹನದಲ್ಲೇ ಆಗಮಿಸುವುದು ಹೆಚ್ಚು. ಬೆಂಗಳೂರು ಸೇರಿದಂತೆ ರಾಜ್ಯ ವಿವಿಧಡೆಯಿಂದ 42 ಕೆ ಎಸ್ ಆರ್ ಟಿ ಸಿ ಬಸ್ ಗಳಿದ್ದು ಖಾಸಗಿ ಬಸ್ ಗಳು ಕೂಡ 30 ಕ್ಕೂ ಹೆಚ್ಚು ನಿತ್ಯ ಸಂಚಾರಿಸುತ್ತವೆ. ವಿಶಾಲವಾದಂತಹ ಪಾರ್ಕಿಂಗ್, ಶೌಚಾಲಯದ ವ್ಯವಸ್ಥೆಯೂ ಕೂಡ ಇದೆ.
ಫಾರಿನ್ ಟ್ರಿಪ್ ಹೋಗೋಕೆ ದುಡ್ಡು ಬೇಕಿಲ್ಲ, ಇಲ್ಲಿಗೆ ಹೋದ್ರೆ ನಿಮ್ಗೇ 71 ಲಕ್ಷ ರೂ. ಸಿಗುತ್ತೆ!
ವಸತಿ ಸೌಲಭ್ಯ :
ವರ್ಷದಿಂದ ವರ್ಷಕ್ಕೆ ಶ್ರೀ ಮಠಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಮಠದಿಂದಲೇ ಕಡಿಮೆ ದರದಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಿಲಾಗಿದೆ. ಶೃಂಗೇರಿ ಆಡಳಿತ ಮಂಡಳಿಯಿಂದ 6ಕ್ಕೂ ಹೆಚ್ಚು ಯಾತ್ರಿ ನಿವಾಸಗಳಿದ್ದು 700 ಕ್ಕೂ ಹೆಚ್ಚು ಕೊಠಡಿಗಳಿವೆ. ಒಂದು ರೂಮ್ ಗೆ 400 ರಿಂದ 500 ದರವನ್ನು ನಿಗದಿ ಮಾಡಿದ್ದು ಅದರಲ್ಲಿ 4ರಿಂದ 5 ಮಂದಿ ಉಳಿಯುವ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 6ರಿಂದ ಬಿಸಿನೀರಿನ ವ್ಯವಸ್ಥೆಯೂ ರೂಮ್ ಗಳಿಗೆ ಕಲ್ಪಿಸಲಾಗಿದೆ. ಬಂದ ಭಕ್ತರಿಗೆ ಕೊಠಡಿಗಳನ್ನು ನೀಡುವ ಉದ್ದೇಶದಿಂದ ಶ್ರೀ ಮಠದ ಮುಂಭಾಗದಲ್ಲಿ ದಿನ 24 ಗಂಟೆಯೂ ಕಾರ್ಯ ನಿರ್ವಹಿಸುವ ಕಛೇರಿಯನ್ನು ಕೂಡ ಓಪನ್ ಮಾಡಲಾಗಿದೆ. ಇನ್ನು ಶ್ರೀ ಮಠದ ಯಾತ್ರಿ ನಿವಾಸದ ಹೊರತಾಗಿಯೂ ಖಾಸಗಿ ವಸತಿಗೃಹಗಳು ಸಾಕಷ್ಟು ಸಂಖ್ಯೆಯಲ್ಲಿದೆ.
ನಿತ್ಯ ದಾಸೋಹ:
ಶೃಂಗೇರಿಗೆ ಬರುವ ಭಕ್ತರಿಗೆ ನಿತ್ಯ ಅನ್ನದಾಸೋಹ ನಡೆಯುತ್ತದೆ. ಮಧ್ನಾಹ್ಯ 12ರಿಂದ 2.30 ಮತ್ತು ರಾತ್ರಿ 7ರಿಂದ 8.30ರ ವರೆಗೂ ಬಂದಂತಹ ಭಕ್ತರಿಗೆ ಪ್ರಸಾದನಿಲಯದಲ್ಲಿ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜೊತೆಗೆ ವಿಶೇಷ ಸಂದರ್ಭವಾದ ನವರಾತ್ರಿಯ ಸಂದರ್ಭದಲ್ಲಿ ಭಕ್ತರಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆಯೂ ಇದೆ.
ನವರಾತ್ರಿ ವಿಶೇಷ:
ನವರಾತ್ರಿ ಸಮದಯಲ್ಲಿ ಹತ್ತು ದಿನಗಳ ಉತ್ಸವ ನಡೆಯುತ್ತದೆ. ಹತ್ತು ದಿನವೂ ದೇವಿಗೆ ವಿವಿಧ ಅಲಂಕಾರವನ್ನು ಮಾಡಲಾಗುತ್ತದೆ. ಕೊನೆಯ ದಿನ ಉಭಯ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ಶಾರದಾಂಬಾ ರಥೋತ್ಸವದ ಮೂಲಕ ನವರಾತ್ರಿ ಉತ್ಸವ ಸಂಪನ್ನವಾಗುತ್ತೆ. ನವರಾತ್ರಿ ಉತ್ಸವದ ದಿನಗಳಲ್ಲಿ ತನ್ನದೇ ಆದ ವಿಶಿಷ್ಯ ತೆ ಹೊಂದಿರುವ ಶೃಂಗೇರಿ ಶಾರದಾ ಪೀಠದಲ್ಲಿ ನಡೆಯುವ ರಥೋತ್ಸವ ಹಾಗು ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಭಾರೀ ಮಹತ್ವನ್ನು ಪಡೆದುಕೊಂಡಿದೆ. ವಿಶೇಷ ಪೋಷಾಕು, ರತ್ನಖಚಿತ ಕಿರೀಟ ಧಾರಣೆ ಮಾಡಿದ ಶ್ರೀಗಳು ಸ್ವರ್ಣ ಪಲ್ಲಕ್ಕಿಯನ್ನು ಏರಿದ ಬಳಿಕ ಮಠದ ಸಂಪ್ರದಾಯ, ಬಿರುದು ಬಾವಲಿ, ಜಾನಪದ ನೃತ್ಯ, ನಾಡಿನ ಸಂಸ್ಕೃತಿ, ಇತಿಹಾಸ ಬಿಂಬಿಸುವ ಸ್ಥಬ್ದ ಚಿತ್ರಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಸಾಗಲಿದೆ. ಶೃಂಗೇರಿಯಲ್ಲಿ ಶಾರದಾಂಬಾ ರಥೋತ್ಸವ ಹಾಗು ಶ್ರೀಗಳ ಪಲ್ಲಕ್ಕಿ ಉತ್ಸವ ಒಂದೇ ಸಂದರ್ಭದಲ್ಲಿ ನಡೆಯುವುದು ಇನ್ನೊಂದು ವಿಶೇಷವಾಗಿದೆ. ಹೀಗಾಗಿ ಈ ಸಂಭ್ರಮದ ಕ್ಷಣಗಳನ್ನು ಸಾಕ್ಷೀಕರಿಸಲು ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಕಣ್ತುಂಬಿಕೊಳ್ಳುತ್ತಾರೆ.