Bengaluru Roads: ಹೊರ ಹೋದರೆ ಮನೆಗೆ ಬರೋದೇ ಅನುಮಾನ

ಪ್ರಯಾಣ (Travel) ಮತ್ತು ಪ್ರವಾಸ ಭಯ ಹುಟ್ಟಿಸುತ್ತದೆ. ರಸ್ತೆಗಳು (Road) ಕುಲಗೆಟ್ಟಿವೆ. ದಾರಿಗಳು ಕಂಗೆಟ್ಟಿವೆ. ನಗರ (Town) ಪ್ರದಕ್ಷಿಣೆ ಮತ್ತು ಜಗದ ಪ್ರದಕ್ಷಿಣೆ ಎರಡೂ ಎಲ್ಲಾ ಅರ್ಥಗಳಲ್ಲೂ ದುಬಾರಿ (Costly)ಯಾಗಿರುವ ಪರಿಸ್ಥಿತಿಯನ್ನು ಲೇಖಕಿ ವಿವರಿಸಿದ್ದಾರೆ.

Travel Experience In Bangalore Roads

- ನಳಿನಿ ಟಿ. ಭೀಮಪ್ಪ, ಧಾರವಾಡ

ಇತ್ತೀಚೆಗೆ ಪ್ರಯಾಣ (Travel) ಎಂದರೆ ಸಾಕು ಕುತ್ತಿಗೆಗೇ ಬರುತ್ತದೆ. ಮನೆಯಲ್ಲಿ ಕಾರು, ಸ್ಕೂಟಿ, ಬೈಕು ಏನೇ ಇದ್ದರೂ ಕೆಲವೊಮ್ಮೆ ಆಟೋದಲ್ಲಿ ಅಥವಾ ಸಾರ್ವಜನಿಕ ಸಾರಿಗೆಗಳಲ್ಲಿ ಹೋಗಿಬಿಡುವುದೇ ಸುರಕ್ಷಿತ ಎನಿಸುತ್ತದೆ. ಯಾವ ಏರಿಯಾದಲ್ಲಿ (Area) ರಸ್ತೆ ಮಾಡಲು ಅಗೆದಿರುತ್ತಾರೋ, ತಗ್ಗು, ಗುಂಡಿ ಅಥವಾ ಮ್ಯಾನ್‌ಹೋಲ್‌ ಬಾಯಿ ಬಿಟ್ಟುಕೊಂಡು ಎಲ್ಲಿ ಬಲಿಗೆ ಕಾಯ್ತಿರುತ್ತೋ, ಯಾವ ರೋಡಿನಲ್ಲಿ (Road) ಜೆಸಿಬಿ ದೈತ್ಯನ ಹಾಗೆ ಅಡ್ಡ ಹಾಕಿರುತ್ತೋ, ಎಲ್ಲಿ ರಿಪೇರಿ ನಡೆದಿರುತ್ತೋ, ಮತ್ತೆಲ್ಲಿ ನೀರಿಗೆ, ಗಟಾರಿಗೆ, ಯುಜಿಡಿ ಡ್ರೈನೇಜ್‌ಗೆ ಅಗೆದು ಮರೆತು ಬಿಟ್ಟಿರುತ್ತಾರೋ

ಯಾರಿಗೆ ಗೊತ್ತು. ಹತ್ತು ನಿಮಿಷ ತಗಲುವ ಪ್ರಯಾಣಕ್ಕೆ ಕನಿಷ್ಟಅರ್ಧ ಗಂಟೆಯಾದರೂ ಸುತ್ತು ಹಾಕಬೇಕಾಗುತ್ತದೆ. ಜೊತೆಗೆ ಅವೈಜ್ಞಾನಿಕ ಹಂಪುಗಳು. ಕೆಲವೆಡೆ ಅವು ಇವೆ ಎನ್ನುವುದು ಗೊತ್ತಾಗದಷ್ಟುಪುಟ್ಟದಾಗಿರುತ್ತವೆ, ಮತ್ತೆ ಕೆಲವೆಡೆ ಹೆಚ್ಚು ಕಡಿಮೆ ಮಣ್ಣಿನ ದಿಬ್ಬದಷ್ಟುಎತ್ತರವಿರುತ್ತವೆ. ದ್ವಿಚಕ್ರ ವಾಹನವನ್ನು ಹೇಗಾದರೂ ತೂರಿಸಿಕೊಂಡು, ಹಾರಿಸಿಕೊಂಡು ಹೋಗಬಹುದೇನೋ, ಕಾರಂತೂ ಸೀದಾ ತಳ ಡ್ಯಾಮೇಜ್‌ (Damage) ಆಗಿಯೇ ಮುಂದೆ ಹೋಗುವುದು. ಆ ಹಂಪುಗಳಿಗೆ ಬಿಳಿ ಬಣ್ಣನಾದ್ರೂ ಬಳಿದಿರುತ್ತಾರಾ?...ಊಹೂಂ... ಕತ್ತಲಲ್ಲಿ ಎಷ್ಟೋ ಕಡೆ ಅವು ಇರುವುದೇ ಗೊತ್ತಾಗುವುದಿಲ್ಲ. ಎತ್ತೆತ್ತೆತ್ತಿ ಹಾಕುವಾಗ ಹೈಜಂಪ್‌ ಮಾಡಿಕೊಂಡು ಹೋಗುವಾಗಿನ ಅನುಭವ. ಬಿದ್ದು ಎಷ್ಟುಜನ ಕಾಲು, ಕೈ ಮುರಿದುಕೊಂಡೋ, ಬೆನ್ನುಮೂಳೆಗೆ ತೊಂದರೆಯಾಗಿಯೋ ಆಸ್ಪತ್ರೆಗೆ ಅಲೆಯುತ್ತಿರುವ ಉದಾಹರಣೆಗಳು ಸಾಕಷ್ಟು ಕಣ್ಣ ಮುಂದಿವೆ.

Travel Tips : ಹುಡುಗಿಯರಿಗೆ ಸುರಕ್ಷಿತ ಈ ಪ್ರವಾಸಿ ತಾಣ

ಅದೇನೋ ಹೇಳ್ತಾರಲ್ಲ, ದಿನಾ ಕಳ್ಳತನ (Theft) ಮಾಡುವ ಕಳ್ಳ ಸಿಕ್ಕಿಹಾಕಿಕೊಳ್ಳುವುದಿಲ್ಲ, ಅಪರೂಪಕ್ಕೆ ಮಾಡಿದವರು ಬೇಗ ಸಿಕ್ಕಿಹಾಕಿಕೊಳ್ತಾರೆ ಅಂತಾ. ಹಾಗೆ ಪ್ರತೀದಿನ ಗಾಡಿಯ ಇನ್ಶೂರೆನ್ಸು, ಲೈಸನ್ಸ್‌, ಎಮಿಷನ್‌ ಸರ್ಟಿಫಿಕೇಟು ಅಂತ ಎಲ್ಲಾ ಡಾಕ್ಯುಮೆಂಟ್ಸ್‌ ಇಟ್ಟುಕೊಂಡು ಹೋದಾಗ ಟ್ರಾಫಿಕ್‌ ಪೋಲೀಸರ ಕೈಗೆ ಸಿಗೆ ಬೀಳೋದಿಲ್ಲ, ಎಂದೋ ಒಂದು ದಿನ ಅಕಸ್ಮಾತ್ತಾಗಿ ಮರೆತುಹೋದಾಗಲೇ ಸಿಕ್ಕಿಹಾಕ್ಕೊಳ್ಳೋದು. ಅದೇ ಈ ಮೊಬೈಲ್‌ನಲ್ಲಿ ಮಾತನಾಡುತ್ತಾ ದ್ವಿಚಕ್ರ ವಾಹನಗಳನ್ನು ಯದ್ವಾ ತದ್ವಾ ಓಡಿಸುವವರು, ಯುವಜನತೆ, ಅದರಲ್ಲೂ ಅಪ್ರಾಪ್ತ ವಯಸ್ಕರು ಸಿಗ್ನಲ್‌ (Signal) ಜಂಪ್‌ ಮಾಡಿ, ಅತಿವೇಗವಾಗಿ ವಾಹನ ಚಲಾಯಿಸುವವರು, ಜೊತೆಗೆ ಮೂರ್ನಾಲ್ಕು ಜನ ದ್ವಿಚಕ್ರಗಳಲ್ಲಿ ಪ್ರಯಾಣ ಮಾಡುವವರು ಪೋಲೀಸರ ಕಣ್ಣಿಗೆ ಬೀಳದ ಹಾಗೆ ಆರಾಮಾಗಿ ನುಸುಳಿಕೊಂಡು ಹೋಗುತ್ತಿರುತ್ತಾರೆ.

ಇದು ನಗರದೊಳಗಿನ ಸ್ಥಿತಿಯಾದರೆ ಹೈವೇಗಳ (Highway) ಪ್ರಯಾಣ ಮತ್ತೊಂದು ರೀತಿಯ ಸವಾಲು. ಮುಂದಿನ ಗಾಡಿಗಳನ್ನು ಎರಡೂ ಬದಿಯಿಂದ ಓವರ್‌ಟೇಕ್‌ (Overtake) ಮಾಡುವ ಶೂರರೇ ಹೆಚ್ಚು. ಅದರಲ್ಲೂ ದ್ವಿಚಕ್ರ ಸವಾರರದೇ ಮೇಲುಗೈ. ಇನ್ನು ಆ ದ್ವಿಚಕ್ರ ವಾಹನಗಳ ಮೇಲೆ ನಾಲ್ಕೈದು ಜನರ ಸಂಸಾರವೇ ಕುಳಿತು, ಜೊತೆಗೆ ಅವರಿಗಿಂತ ಹೆಚ್ಚು ತೂಕದ ನಾಲ್ಕಾರು ಲಗೇಜುಗಳನ್ನು ಹೊತ್ತು ಪ್ರಯಾಣಿಸುತ್ತಿರುತ್ತಾರೆ. ಕತ್ತಲಲ್ಲಿ ಪ್ರಯಾಣ ಮಾಡುವಾಗಲಂತೂ ಎಷ್ಟುಎಚ್ಚರಿಕೆಯಿಂದ ಗಾಡಿ ಓಡಿಸಿದರೂ ಕಡಿಮೆಯೇ. ಕೆಲವು ವಾಹನಗಳಿಗೆ ಮುಂದಿನ ಲೈಟಿದ್ದರೆ ಹಿಂದಿನ ಲೈಟಿರುವುದಿಲ್ಲ, ಹಿಂದಿನದು ಇದ್ದರೆ ಮುಂದಿನದು ಕೈಕೊಟ್ಟಿರುತ್ತದೆ.

Travel Tips : ಬೇಸಿಗೆ ಪ್ರಯಾಣದ ವೇಳೆ ಹೆಚ್ಚಾಗುವ ಮೋಷನ್ ಸಿಕ್ನೆಸ್ ಗೆ ಇಲ್ಲಿದೆ ಮದ್ದು

ದೊಡ್ಡ ದೊಡ್ಡ ಭಾರದ ವಾಹನ (Vehicle)ಗಳಂತೂ ಕೆಲವಕ್ಕೆ ಹಿಂದಿನ ಭಾಗದಲ್ಲಿ ಲೈಟೂ ಇರುವುದಿಲ್ಲ, ರೇಡಿಯಮ್‌ ಟೇಪು ಕೂಡಾ ಹಚ್ಚಿರುವುದಿಲ್ಲ. ಮತ್ತೆ ಕೆಲವು ಹಿಂಬದಿಯಲಿ ದೊಡ್ಡ ದೊಡ್ಡ ಕಬ್ಬಿಣದ ಸರಳುಗಳು ಅಥವಾ ಮರದ ದಿಮ್ಮಿಗಳನ್ನು ಹೇರಿಕೊಂಡು ಹೊರಟಿರುತ್ತವೆ. ಅವು ವಾಹನಗಳನ್ನು ದಾಟಿ ಹೊರಕ್ಕೆ ಚಾಚಿ ಅಪಾಯಕ್ಕೆ ಆಹ್ವಾನ ನೀಡುತ್ತಿರುತ್ತವೆ. ಅದರ ಅತೀ ಸಮೀಪ ಹೋದ ಮೇಲೆಯೇ ಗೊತ್ತಾಗುವುದು. ಇದರಿಂದಲೇ ಎಷ್ಟೋ ಅಪಘಾತಗಳು (Accident) ಸಂಭವಿಸುವುದುಂಟು.

ಕೆಲವು ದೊಡ್ಡ ದೊಡ್ಡ ಲಾರಿಗಳು, ಸಣ್ಣಪುಟ್ಟಲಗೇಜ್‌ ವಾಹನಗಳು ತಮ್ಮ ಮಿತಿಗಿಂತ ನಾಲ್ಕೈದು ಪಟ್ಟು ಭಾರ ಹೊತ್ತು ತುಂಬಿದ ಬಸುರಿಯ ಹಾಗೆ ವಾಲಾಡುತ್ತಾ ಸಾಗುತ್ತಿರುತ್ತವೆ. ಎಣ್ಣೆ ಹಾಕಿದ ಡ್ರೈವರುಗಳ ಪ್ರಭಾವ ವಾಹನಗಳ ಮೇಲಾಗುತ್ತದೆಯೇನೋ ಯಾರಿಗೆ ಗೊತ್ತು. ಯಾವಾಗ ಯಾವ ಕಡೆಗೆ ವಾಲಿ ಬೀಳುತ್ತದೆಯೋ ಅಂತ ಹಿಂದೆ ಬರುವ ವಾಹನಗಳ ಸವಾರರು ಮೈಯೆಲ್ಲಾ ಕಣ್ಣಾಗಿ ಗಾಡಿ ಓಡಿಸಬೇಕಾಗುತ್ತದೆ.

ಮಳೆಗಾಲದಲ್ಲಿ, ಮಂಜು ಬೀಳುವ ಸಂದರ್ಭಗಳಲ್ಲಿ ಬೆಳ್ಬೆಳಿಗ್ಗೆ ಬೇಗನೆ ಹೊರಟರೆ ಸರಿಯಾಗಿ ರಸ್ತೆಯೂ ಕಾಣದೆ, ಎದುರು ಬರುವ ವಾಹನಗಳೂ ಕಾಣದೆ ಲೈಟು ಹಾಕಿಕೊಂಡು ಹೋಗುವ ಪರಿಸ್ಥಿತಿ. ನಲವತ್ತು ಕಿಮೀಗಿಂತ ವೇಗವಾಗಿ ಹೋಗಲು ಸಾಧ್ಯವೇ ಇಲ್ಲ. ಅಂದಾಜಿನ ಮೇಲೆ ತಿರುವುಗಳನ್ನು ಗುರುತಿಸುತ್ತ, ಚಕ್ಕಡಿ ಗಾಡಿ ಚಲಿಸಿದಂತೆ ಸಾಗಬೇಕು. ಅಲ್ಲಲ್ಲಿ ‘ಕಾಮಗಾರಿ ನಡೆಯುತ್ತಿದೆ, ನಿಧಾನವಾಗಿ ಚಲಿಸಿ’ ಎನ್ನುವ ಬೋರ್ಡ್‌ ಕಾಣಸಿಗುತ್ತದೆ. ಒಮ್ಮೆ ಈ ರಸ್ತೆ, ಒಮ್ಮೆ ಆ ರಸ್ತೆ, ಒಟ್ಟಿನಲ್ಲಿ ಏನೋ ಒಂದು ಕಾಮಗಾರಿ ನಡೆಯುತ್ತಲೇ ಇರುತ್ತದೆ. ಮುಗಿಯುವುದಕ್ಕೆ ಅದೆಷ್ಟುವರ್ಷಗಳನ್ನು ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ.

Travel Tips : ಪ್ರವಾಸ ಥ್ರಿಲ್ ಆಗಿರ್ಬೇಕೆಂದ್ರೆ ಈ ಆಹಾರದಿಂದ ದೂರವಿರಿ

ಯಾರ ಗಾಡಿ ಎಲ್ಲಿ ಕೈಕೊಡುತ್ತೋ ದೇವರೇ ಬಲ್ಲ. ಅಲ್ಲಲ್ಲಿ ಅಫಘಾತಕ್ಕೀಡಾದ ವಾಹನಗಳು ವಿವಿಧ ಯೋಗಾಸನ ಭಂಗಿಗಳಲ್ಲಿ ಮೊಗಚಿ ಬಿದ್ದಿರುವುದು, ಟೋಯಿಂಗ್‌ ಗಾಡಿಗಳು ಅವುಗಳನ್ನು ಎಳೆದುಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿ ಕಣ್ಣಿಗೆ ಬೀಳುತ್ತಿರುತ್ತದೆ. ಇನ್ನು ನಾಯಿ, ಹಾವು ಹಸು, ಎಮ್ಮೆ, ಕುದುರೆ ದಾರಿಗೆ ಅಡ್ಡ ಬರುವುದುಂಟು. ವಾಹನಗಳಿಂದ ಗುದ್ದಿಸಿಕೊಂಡು ಕೆಲವೊಮ್ಮೆ ಹೈವೇನಲ್ಲೇ ಸತ್ತುಬಿದ್ದಿರುತ್ತವೆ. ಯಾರಿಗೂ ನಿಲ್ಲಿಸಿ ನೋಡುವಷ್ಟೂಪುರುಸೊತ್ತು ಇರುವುದಿಲ್ಲ. ಒಂದರ ಮೇಲೊಂದು ವಾಹನಗಳು ಅವುಗಳ ಮೇಲೇ ಹಾದು ಹೋಗುವುದರಿಂದ ಹಪ್ಪಳ ಲಟ್ಟಿಸಿದ ಹಾಗೆ ರಸ್ತೆಗೇ ಅಂಟಿಕೊಂಡು ಒಣಗಿ ಹೋಗಿರುತ್ತವೆ.

ಇನ್ನು ಅಲ್ಲಲ್ಲಿ ಟೋಲ್‌ಗಳು ನವ ವಧುವನ್ನು ಗಂಡನ ಮನೆಯಲ್ಲಿ ಮನೆ ತುಂಬಿಸಿಕೊಳ್ಳುವಾಗ ನಾದಿನಿ ಬಾಗಿಲಿಗೆ ಕೈ ಅಡ್ಡ ಹಾಕಿ ನಿಲ್ಲಿಸಿ ಹಣ ಕೇಳಿದಂತೆ, ಕೋಲು ಅಡ್ಡ ಹಾಕಿ ನಿಲ್ಲಿಸಿ, ಹಣ ಸಂದಾಯವಾದ ಮೇಲೆಯೇ ತೆರೆಯುವುದು. ಅಕ್ಕ ಪಕ್ಕ ಬಂಧು ಬಳಗ ಸೇರಿದಂತೆ, ಅಷ್ಟುಕಡಿಮೆ ಸಮಯದಲ್ಲೇ ಹೂ ಮಾರುವವರು, ಕಡಲೆ, ಸೌತೆ, ಪೇರೂ, ಮಜ್ಜಿಗೆ, ಶೇಂಗಾ ಮಾರುವವರು ಸುತ್ತುವರೆದಿರುತ್ತಾರೆ. ಜೊತೆಗೆ ಅನಿರೀಕ್ಷಿತ ನೆಂಟರಂತೆ ಚಪ್ಪಾಳೆ ಹೊಡೆಯುವ ಮಂಗಳಮುಖಿಯರೂ ಇದ್ದಕ್ಕಿದ್ದಂತೆ ಪ್ರತ್ಯಕ್ಷ. ಟೋಲ್‌ ಹಣ ಕಟ್ಟಿದರೂ ಕೆಲವು ಕಡೆ ರಸ್ತೆಗಳು ಸಿಂಗಲ್‌ ಲೇನೇ! ದೊಡ್ಡ ವಾಹನದ ಹಿಂದೆ ಸಿಕ್ಕಿಹಾಕಿಕೊಂಡರೆ ಮುಗಿಯಿತು ಕಥೆ, ಗಂಟೆಗಟ್ಟಲೆ ಸಮಯ ಹಾಳು.

ಅದೇನಾದ್ರೂ ಇರಲಿ, ನಮ್ಮ ಪ್ರಯಾಣವೇ ನಮಗೆ ಚಂದ. ವಿದೇಶದಲ್ಲಿನ ಹಾಗೆ ನೋ ಟ್ರಾಫಿಕ್‌ ಜಾಮ್‌, ನೈಸ್‌ ರಸ್ತೆಯಲ್ಲಿನ ಪ್ರಯಾಣದಲ್ಲಿ ಏನು ಸ್ವಾರಸ್ಯವಿದೆ ಹೇಳಿ?... ಇಲ್ಲಿ ಬಿಟ್ಟೆ, ಅಲ್ಲಿ ಮುಟ್ಟಿದೆ ಎನ್ನುವುದನ್ನು ಬಿಟ್ಟರೆ ಹೇಳಿಕೊಳ್ಳುವುದಕ್ಕೆ ಬೇರೇನೂ ಇರುವುದಿಲ್ಲ. ಅದೇ ನಮ್ಮಲ್ಲಿ, ಪಯಣದ ಶುರುವಿನ ಜೊತೆಗೆ ಗಮ್ಯ ತಲುಪುವಷ್ಟರಲ್ಲಿ ಅದೆಷ್ಟೋ ಅನುಭವಗಳಿಗೆ ಈಡಾಗುತ್ತಾ ಸಾಗುತ್ತೇವೆ. ನಮ್ಮ ಜನ ಎಷ್ಟೇ ರೋಸಿ ಹೋಗಿದ್ದರೂ ಇಂತಹ ಪ್ರಯಾಣವೇ ಹೆಚ್ಚು ಖುಷಿ ಕೊಡೋದು... ಅಲ್ವಾ?

Latest Videos
Follow Us:
Download App:
  • android
  • ios