Asianet Suvarna News Asianet Suvarna News

ಸಾಧನ ಫಾರೆಸ್ಟ್‌: ಪಾಂಡಿಚೆರಿ ಕಾಡಿನಲ್ಲೊಂದು ಜೀವನ ಪಾಠ

ನಾನು ಪುದುಚೆರಿಗೆ ಹೋಗಿದ್ದಾಗ, ಎಲ್ಲಾ ಪ್ರವಾಸಿ ಸ್ಥಳಗಳನ್ನು ನೋಡಿದ ಮೇಲೆ ಅಲ್ಲಿಂದ ನಾಲ್ಕು ಕಿಮೀ ದೂರದ ಆರೋವಿಲ್ಲೇ ಎಂಬ ಜಾಗದಲ್ಲಿ ‘ಸಾಧನಾ ಫಾರೆಸ್ಟ್’ ಇದೆ ಎಂಬ ವಿಷಯ ತಿಳಿಯಿತು. ಆದರೆ ಅದು ಏನು, ಹೇಗಿದೆ ಎಂಬ ಯಾವ ಸೂಚನೆಯೂ ನನಗಿದ್ದಿರಲಿಲ್ಲ. ಆದರೂ ಏನೋ ಒಂದು ರೀತಿಯ ಕುತೂಹಲದಿಂದ ಅಲ್ಲಿಗೆ ನನ್ನ ಪಯಣ ಬೆಳೆಸಿದೆ. ಧಾರಿಣಿ ಮಾಯಾ ಅವರ ಪ್ರವಾಸಿ ಕಥನ ಇಲ್ಲಿದೆ.

Sadhana Forest, A Life Lesson in Pondicherry Forest Vin
Author
First Published Jul 30, 2023, 11:54 AM IST

- ಧಾರಿಣಿ ಮಾಯಾ

ನಾನು ಪುದುಚೆರಿಗೆ ಹೋಗಿದ್ದಾಗ, ಎಲ್ಲಾ ಪ್ರವಾಸಿ ಸ್ಥಳಗಳನ್ನು ನೋಡಿದ ಮೇಲೆ ಅಲ್ಲಿಂದ ನಾಲ್ಕು ಕಿಮೀ ದೂರದ ಆರೋವಿಲ್ಲೇ ಎಂಬ ಜಾಗದಲ್ಲಿ ‘ಸಾಧನಾ ಫಾರೆಸ್ಟ್’ ಇದೆ ಎಂಬ ವಿಷಯ ತಿಳಿಯಿತು. ಆದರೆ ಅದು ಏನು, ಹೇಗಿದೆ ಎಂಬ ಯಾವ ಸೂಚನೆಯೂ ನನಗಿದ್ದಿರಲಿಲ್ಲ. ಆದರೂ ಏನೋ ಒಂದು ರೀತಿಯ ಕುತೂಹಲದಿಂದ ಅಲ್ಲಿಗೆ ನನ್ನ ಪಯಣ ಬೆಳೆಸಿದೆ.

ಆ ಜಾಗಕ್ಕೆ ತಲುಪುತ್ತಲೇ, ಮೊದಲು ಕಂಡದ್ದು ಒಂದು ದೊಡ್ಡ ಗುಡಿಸಿಲಿನಂತ ಬಿಡಾರ. ಮರದ ಬಂಬುಗಳಿಂದ ಹಾಗೂ ಒಣ ಗರಿಗಳಿಂದ ಇದನ್ನು ಮಾಡಲ್ಪಟ್ಟಿತ್ತು. ಒಳಗೆ ಏನೂ ಕಾಣಿಸದಿರಲೆಂದು ಸುತ್ತಲೂ ಬಣ್ಣಬಣ್ಣದ ಬಟ್ಟೆಗಳನ್ನು ಕಟ್ಟಿದ್ದರು. ಅದು ಎಂತಹ ಜಾಗ, ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುವ ನನ್ನ ಕಾತರ ಇಂಗಿಸಿಕೊಳ್ಳಲು ಯಾರನ್ನಾದರೂ ಕೇಳೋಣವೆಂದರೆ, ಅಲ್ಲಿ ಯಾರೂ ತಕ್ಷಣಕ್ಕೆ ಗೋಚರಿಸಲಿಲ್ಲ. ಕುತೂಹಲದಿಂದ ಆ ಬಣ್ಣದ ಬಟ್ಟೆಗಳನ್ನು ಸರಿಸಿ ಒಳಗೆ ಇಣುಕಿದೆ. ಅಲ್ಲಿ ನೆಲದ ಮೇಲೆ ಒಂದಷ್ಟು ಚಾಪೆಗಳು, ಅವುಗಳ ಮೇಲೊಂದಷ್ಟು ಪುಸ್ತಕಗಳು, ಹರವಿದ್ದ ಬಟ್ಟೆಗಳು ಕಂಡವು. ಅಲ್ಲಿನ ಸ್ಥಿತಿ ನೋಡಿದರೆ ಯಾರೋ ಅಲ್ಲಿ ವಾಸ್ತವ್ಯ ಹೂಡಿದಂತಿತ್ತು. ಮುಂದಡಿಯಿಟ್ಟಾಗ, ಇಂತಹುದೇ ಇನ್ನೂ ಅನೇಕ ಬೃಹತ್ ಬಿಡಾರಗಳು ಅಲ್ಲಲ್ಲಿ ಕಂಡು ಬಂದವು. ಅದರ ಪಕ್ಕದಲ್ಲೇ ಸೋಲಾರ್ ಪ್ಯಾನಲ್‌ಗಳಿದ್ದವು.

Amazing Couple: ಪ್ರವಾಸಕ್ಕಿಲ್ಲ ವಯಸ್ಸಿನ ಮಿತಿ, 96ರ ಹರೆಯದಲ್ಲಿ ವಿಮಾನವೇರಿದ ಜೋಡಿ!

ಒಳಹೊಕ್ಕಾಗ ಕೆಲ ಜನರು ಕಣ್ಣಿಗೆ ಬಿದ್ದರು. ಹಲವಾರು ವಿದೇಶೀಯರು ಒಂದೇ ಬಿಡಾರದಲ್ಲಿ ಒತ್ತೊತ್ತಾಗಿ ಚಾಪೆ ಹಾಸಿಕೊಂಡು ಹರಟುತ್ತಿದ್ದರು. ಮತ್ತೊಂದು ಪುಟ್ಟ ಬಿಡಾರದಲ್ಲಿ ಕೆಲವರು ತರಕಾರಿ ಹೆಚ್ಚುತ್ತಿದ್ದರು. ಪಕ್ಕದಲ್ಲೇ ಅಡುಗೆ ಒಲೆ ಹಾಗೂ ದೊಡ್ದ ತಪ್ಪಲಿಗಳಿದ್ದವು. ನಾನಿದ್ದಲ್ಲಿಗೆ ಒಬ್ಬ ವಿದೇಶಿ ಬಂದು ‘ಹಾಯ್’ ಎನ್ನುತ್ತಲೇ ತಮ್ಮ ಪರಿಚಯ ಮಾಡಿಕೊಂಡರು. ಅವರು ಅಲ್ಲೇ ಸುಮಾರು 15 ವರ್ಷಗಳಿಂದ ವಾಸ್ತವ್ಯ ಹೂಡಿದ್ದು, ಆ ಸ್ಥಳವನ್ನು, ಅಲ್ಲಿಗೆ ಬರುವ ಅತಿಥಿಗಳನ್ನು ನೋಡಿಕೊಳ್ಳುವವರಾಗಿದ್ದರು. ಅವರು ತುರ್ತಾಗಿ ಬೇರೆಡೆಗೆ ಹೋಗಬೇಕಾದ್ದರಿಂದ ಆತುರಾತುರವಾಗಿ ನಿರ್ಗಮಿಸಿದರು. ಅಲ್ಲಿ ಏನಾಗುತ್ತಿದೆ ಎಂದು ನನಗೆ ಇನ್ನೂ ಸರಿಯಾಗಿ ಅರ್ಥವಾಗದೆ, ನನ್ನ ಕುತೂಹಲದ ಬುಗ್ಗೆ ಮತ್ತಷ್ಟು ಚಿಮ್ಮಿತು. ನನಗೆ ಮೊದಲು ‘ಹಾಯ್’ ಹೇಳಿದವರೇ ಅವಿರಾಮ್ ರೋಜ಼ಿನ್. ಅಲ್ಲಿನ ‘ಸಾಧನ ಫಾರೆಸ್ಟ್’ನ ಹುಟ್ಟಿಗೆ ಕಾರಣಕರ್ತ ಎಂದು ನಂತರ ತಿಳಿಯಿತು. ಅಲ್ಲಿನ ಮತ್ತೋರ್ವ ವ್ಯಕ್ತಿ, ‘Hi, I am Shekar, manager of this place’ ಎಂದು ಸ್ವತಃ ಪರಿಚಯ ಮಾಡಿಕೊಂಡರು. ಅವರು ನನ್ನಂತೆ ಬಂದ ಇನ್ನೂ ಕೆಲವು ಮಂದಿಗೆ ಆ ಸ್ಥಳದ ಕುರಿತು ಹಾಗೂ ರೀತಿ, ರಿವಾಜನ್ನು ಹೇಳುತ್ತಾ ಹೋದರು.

2003ರಲ್ಲಿ ಯೋರಿತ್ ಮತ್ತು ಅವಿರಾಮ್ ರೋಜ಼ಿನ್ ಎಂಬೀರ್ವರು ಸ್ಥಾಪಿಸಿದ ಸಾಧನ ಫಾರೆಸ್ಟ್ ತಮಿಳು ನಾಡಿಗೆ ಸೇರಿದ ಆರೋವಿಲ್ಲೆಯ ಹೊರವಲಯದಲ್ಲಿರುವ ಸುಮಾರು ಎಪ್ಪತ್ತು ಎಕರೆಯಷ್ಟು ಜಾಗದಲ್ಲಿ ಹರಡಿಕೊಂಡಿದೆ. ಇವರ ಮುಖ್ಯ ಯೋಜನೆ ಹಾಗೂ ಉದ್ದೇಶ ಎಂದರೆ ಅರಣ್ಯ ಸಂರಕ್ಷಣೆ, ಹಸಿರಿನ ಪುನಃಸ್ಥಾಪನೆ (reforestation) ಹಾಗೂ ಜಲ ಸಂರಕ್ಷಣೆ. ಕಡಿಯಲ್ಪಟ್ಟ ಒಂದು ಮರದ ಬದಲಾಗಿ, ಆರು ಸಸಿಗಳನ್ನು ನೆಡುತ್ತಾರೆ. ಸಾಧನಾ ಫಾರೆಸ್ಟ್‌ನಲ್ಲಿ ಇದು ಒಂದು ಅಂತರರಾಷ್ಟೀಯ ಯೋಜನೆಯಾಗಿ ಪರಿಗಣಿಸಲಾಗಿದೆ. ಸರ್ಕಾರದಿಂದ ಯಾವುದೇ ರೀತಿಯ ಸಹಾಯಹಸ್ತ ಪಡೆಯುವುದಿಲ್ಲ. ಇಲ್ಲಿನ ವಿದ್ಯುತ್‌ಚ್ಛಕ್ತಿ ಹಾಗೂ ನೀರನ್ನು ಇವರೇ ಸ್ವತಃ ಪೂರೈಸಿಕೊಳ್ಳುತ್ತಾರೆ. ಪರಿಸರದಿಂದ ನೈಸರ್ಗಿಕವಾಗಿ ಪಡೆದ ವಸ್ತುಗಳನ್ನು ಪರಿಸರಕ್ಕೇ ನೀಡುವುದು ಇವರ ಬದುಕಿನ ರೀತಿ.

ಅತ್ಯದ್ಭುತವಾದ ಈ ದೇಶದಲ್ಲಿ ರೈಲು, ವಿಮಾನಾನೇ ಇಲ್ಲ, ಜನರು ಓಡಾಡೋದು ಹೇಗೆ?

ಇಲ್ಲಿ ಖಾಸಗಿ ಬಿಡಾರ ಹಾಗೂ ಸಾಮಾನ್ಯ ಬಿಡಾರಗಳು ಇವೆ. ದಿನಕ್ಕೆ ಐನೂರು ರೂಪಾಯಿ ಪಾವತಿಸಿ, ಯಾರು ಬೇಕಾದರೂ ಇಲ್ಲಿ ತಂಗಬಹುದು. ಇಲ್ಲಿ ಉಪಯೋಗಿಸುವ ಎಲ್ಲಾ ವಸ್ತುಗಳನ್ನು ಅಲ್ಲಿನವರೇ ತಯಾರಿಸುತ್ತಾರೆ. ಯಾವುದೂ ಕೃತಕವಲ್ಲ. ಅಡುಗೆ ಮಾಡಲು ಹಿಂದಿನ ಕಾಲದ ರೀತಿ ಸೌದೆ ಒಲೆಯ ಬಳಕೆ ಮಾಡುತ್ತಾರೆ, ಹಲ್ಲುಜ್ಜಲು ಇದ್ದಿಲು ಪುಡಿಯನ್ನು ಬಳಸುತ್ತಾರೆ. ಅವರವರು ಉಂಡ ಪಾತ್ರೆಯನ್ನು ಬೂದಿ ಹಾಗೂ ತೆಂಗಿನ ನಾರಿನಿಂದ ಉಜ್ಜಿ ತೊಳೆದು ಬಿಸಿಲಿನಲ್ಲಿ ಒಣಗಲು ಜೋಡಿಸಿಡಬೇಕು. ಎಂಥ ಹವಾಮಾನದಲ್ಲೂ ತಣ್ಣೀರು ಸ್ನಾನ. ಪ್ರತಿದಿನ ಒಂದೊಂದು ಕೆಲಸಕ್ಕೂ ಒಂದೊಂದು ಗುಂಪು ವಹಿಸಿಕೊಂಡಿರುತ್ತದೆ. ನೀರನ್ನು ಮಿತವಾಗಿ ಬಳಸಬೇಕು. ಹೀಗೆ ಒಂದಷ್ಟು ಕರಾರುಗಳಿಗೆ ಎಲ್ಲರೂ ಬದ್ಧರಾಗಿರಬೇಕು. ಇದನ್ನೆಲ್ಲಾ ನೋಡುತ್ತಾ ನನ್ನಲ್ಲಿ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ಳತೊಡಗಿದವು. ಎಲ್ಲದಕ್ಕೂ ಶೇಖರ್‌ ಸಮಾಧಾನದಿಂದ ನಗುನಗುತ್ತಲೇ ಉತ್ತರಿಸುತ್ತಿದ್ದರು.

ಅಲ್ಲೊಂದು ಲಿವಿಂಗ್ ರೂಮ್ ಎಂದು ಈಗ ಹೇಗೆ ಕರೆಯುತ್ತೇವೋ ಅಂತಹ ಒಂದು ದೊಡ್ಡ ಹಜಾರವಿದ್ದು, ಕೂರಲು ಎಲ್ಲೆಡೆ ಚಾಪೆ, ದಿಂಬುಗಳಿದ್ದವು. ಬಹುತೇಕ ವಿದೇಶೀಯರೇ ಇದ್ದುದರಿಂದ ಅವರ ಮಕ್ಕಳೆಲ್ಲಾ ಅಲ್ಲಿ ಬಣ್ಣಬಣ್ಣದ ಬಟ್ಟೆಗಳಲ್ಲಿ ಕಟ್ಟಿದ್ದ ತೂಗುಯ್ಯಾಲೆಯಲ್ಲಿ ಆಡುತ್ತಿದ್ದರು. ಇದು ನಮ್ಮ ಅಜ್ಜಿಯರು ಎಳೆ ಕಂದಮ್ಮಗಳಿಗಾಗಿ ಕಟ್ಟುತ್ತಿದ್ದ ಜೋಲಿಯನ್ನು ನೆನಪಿಗೆ ತರುವಂತಿತ್ತು. ಇಲ್ಲಿಗೆ ಬರುವ ವಿದೇಶಿ ಅತಿಥಿಗಳಿಗೆ ಒಂದರಿಂದ ಮೂರು ತಿಂಗಳವರೆಗೆ ಇಳಿದುಕೊಳ್ಳುವ ಅವಕಾಶವಿದ್ದು, ಭಾರತೀಯ ಅತಿಥಿಗಳಿಗೆ 2-3ದಿನಗಳ ವರೆಗೆ ಮಾತ್ರ ವಾಸ್ತವ್ಯ ಹೂಡಲು ಅವಕಾಶ. ಇಲ್ಲಿ ಇರುವಷ್ಟು ದಿನ ಮಕ್ಕಳಿಗೆ ನಿಸರ್ಗವೇ ಪಾಠಶಾಲೆ. ಪುಸ್ತಕದ ಬದನೆಕಾಯಿಯ ಉರು ಹೊಡೆವ ಪಾಠದಿಂದ ಈ ಮಕ್ಕಳಿಗೆ ಮುಕ್ತಿ. ಈ ಮಕ್ಕಳು ಅತೀ ಸಾಮಾನ್ಯ ಜೀವನ ಶೈಲಿಗೆ ತಮ್ಮನ್ನು ಒಗ್ಗಿಸಿಕೊಂಡು ಎಲ್ಲರೊಡನೆ ಕೂಡಿ ಆಟವಾಡುತ್ತಲೇ ಕಲಿಯುವಂಥಾ ಮುಕ್ತ ವಾತಾವರಣವನ್ನು ಇಲ್ಲಿ ಕಲ್ಪಿಸಿದ್ದಾರೆ. ಇಲ್ಲಿ ತಂಗುವ ಅತಿಥಿಗಳು ತಾವು ಕಲಿತ ವಿದ್ಯೆ, ಹವ್ಯಾಸ, ಹಾಡು, ನೃತ್ಯ, ವಾದ್ಯ ಸಂಗೀತವನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಇಲ್ಲಿರುವವರಿಗೆ ಉಚಿತ ವೈಫೈ ಸೌಲಭ್ಯವೂ ಇದೆ.

ಕೇರಳದ ಈ ಸುಂದರ ಹಳ್ಳಿಯೀಗ ಪ್ರವಾಸಿಗರ ಸ್ವರ್ಗ, ಊರವರಿಗೆ ಮಾತ್ರ ನರಕ!

ಶಹರಿನಲ್ಲಿ ಒಂದೇ ಕುಟುಂಬದ ಮೂರ‍್ನಾಲ್ಕು ಮಂದಿ ಒಗ್ಗಿಕೊಂಡು ಒಂದೇ ಸೂರಿನಡಿ ವಾಸಿಸಲು ನಖರಾ ಮಾಡುವ ಕಾಲವಿದು. ಅಂಥಾದ್ದರಲ್ಲಿ ಇಲ್ಲಿ ಪ್ರಪಂಚದ ನಾನಾ ಭಾಗದ, ನಾನಾ ಸಂಸ್ಕೃತಿ, ನಾನಾ ಭಾಷೆ, ನಾನಾ ಆಹಾರ ಮಾದರಿಗಳನ್ನು ಅನುಸರಿಸುವ ಜನ ಒಬ್ಬರಿಗೊಬ್ಬರು ಅನುಸರಿಸಿಕೊಂಡು ತಮ್ಮದೇ ಪ್ರಪಂಚ ಸೃಷ್ಟಿಸಿಕೊಂಡು ಸಹಬಾಳ್ವೆಯಿಂದ ಇರುತ್ತಾರೆ. ಇವರ ಉಡುಗೆ- ತೊಡುಗೆಗಳು ತೀರ ಸರಳ. ಇಲ್ಲಿ ಒಂದು ಗ್ರಂಥಾಲಯವಿದ್ದು, ಬಂದವರು ಕೂಡ ತಮ್ಮಲ್ಲಿರುವ ಪುಸ್ತಕವನ್ನು ಇಲ್ಲಿ ಇಡಬಹುದು. ಹಾಗೆಯೇ ತಾವು ಹೊರಡುವ ಸಮಯದಲ್ಲಿ ತಾವುಟ್ಟ ಬಟ್ಟೆಯನ್ನು ಇಲ್ಲಿಯೇ ಬಿಟ್ಟು, ಅದನ್ನು ಮುಂದೆ ಬರುವವರು ಉಪಯೋಗಿಸಲು ಅನುವು ಮಾಡಿಕೊಡುವ ಪರಿಪಾಠವಿದೆ. ಈ ಜಾಗದ ಹತ್ತಿರದಲ್ಲೇ ಒಂದು ಕೊಳವಿದೆ. ಅಲ್ಲಿ ಮೀಯಲು ಅವಕಾಶವಿದೆ.

ಇಲ್ಲಿ ಉಪಯೋಗಿಸುವುದು ಸಸ್ಯಾಹಾರಿ ಆಹಾರ ಮಾತ್ರ. ಇಲ್ಲಿ ಇರಬಯಸುವವರು ಮೂಲ ಆಹಾರ ಮತ್ತು ಜೀವನಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳಲು ಸಿದ್ಧರಿರಬೇಕು. ಯಾವ ಆಹಾರವನ್ನೂ ಬಿಸಾಡುವಂತಿಲ್ಲ. ಬಿಟ್ಟ ಆಹಾರಗಳನ್ನು ವಿಂಗಡಿಸಿ, ಕೆಲವನ್ನು ಸಾಕು ನಾಯಿಗಳಿಗೆ ಕೊಟ್ಟು ಮತ್ತೆ ಕೆಲವನ್ನು ಗೊಬ್ಬರವನ್ನಾಗಿಸಲು ಉಪಯೋಗಿಸುತ್ತಾರೆ. ಇಲ್ಲಿ ಒಮ್ಮೆಗೇ ಎಷ್ಟು ಮಂದಿ ಅತಿಥಿಗಳು ಬಂದರೂ, ಯಾರಿಗೂ ‘ನೋ’ ಅನ್ನುವ ಪರಿಪಾಠವಿಲ್ಲ. ಎಲ್ಲರನ್ನೂ ಇರಿಸಿಕೊಳ್ಳುವ ವಿಶಾಲ ಮನಸ್ಸು ಇಲ್ಲಿನವರಿಗಿದೆ. ಆದರೆ ಇಲ್ಲಿ ಇರಬಯಸುವ ಅತಿಥಿಗಳು ಮಾತ್ರ ಮೂಲಭೂತ ವಾಸ್ತವ್ಯಕ್ಕೆ ಸಿದ್ಧರಿರಬೇಕಷ್ಟೆ.

ಆರೋವಿಲ್ಲೆಗೆ ಹೊಸದಾಗಿ ಸೇರುವ ಅತಿಥಿಗಳಿಗೆ ಪ್ರತಿ ಶುಕ್ರವಾರ, ಆ ಜಾಗದ ರೀತಿ-ನೀತಿ, ಉದ್ದೇಶ, ವಿವರವಾದ ಪ್ರವಾಸ ಹಾಗೂ ಅದಕ್ಕೆ ಸಂಬಂಧಪಟ್ಟ ವೀಡಿಯೋವನ್ನು ತೋರಿಸುತ್ತಾರೆ. ರಾತ್ರಿ ಹೊತ್ತು ಈ ಬಿಡಾರಗಳ ಸುತ್ತಮುತ್ತ ಕಾಡುಪ್ರಾಣಿಗಳು ಬರುವ ಸಂಭವವೂ ಉಂಟು. ಎಂತಹ ಜೋರು ಮಳೆ ಬಂದರೂ ಎಲ್ಲೂ ನೀರು ಸೋರಿಕೆಯಾಗದಂತೆ ಈ ಗುಡಿಸಿಲುಗಳ ನಿರ್ಮಾಣವಾಗಿವೆ.

ಇದು ಪ್ರಪಂಚದ ಅತೀ ಪುಟ್ಟ ದೇಶ..ಇಲ್ಲಿರೋದು ಕೇವಲ 27 ಮಂದಿ!

ಇಲ್ಲಿರಲು ಬಯಸುವ ಮಂದಿ ಮೇಲು-ಕೀಳೆಂಬ ಭಾವನೆ ಇಟ್ಟುಕೊಳ್ಳದೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕು ಮತ್ತು ತಮ್ಮ ಸಹಚರರಿಗೂ ಸಹಾಯ ಹಸ್ತವನ್ನು ನೀಡಬೇಕು. ಆಳುಕಾಳಿನ ವ್ಯವಸ್ಥೆ ಇರುವುದಿಲ್ಲ. ಪ್ರತಿಯೊಬ್ಬನೂ ತಾನೇ ಆಳು, ತಾನೇ ಅರಸ. ಇದನ್ನೆಲ್ಲಾ ನೋಡುತ್ತಿದ್ದರೆ ಒಂದು ರೀತಿಯಲ್ಲಿ ಹಳ್ಳಿಯ ಜೀವನ ಮರುಕಳಿಸಿದಂತಾಗುವುದು. ಪೇಟೆಯ ಜೀವನದಿಂದ ಬೇಸತ್ತ ನಗರವಾಸಿಗಳು ಇಂತಹ ಒಂದು ವಾತಾವರಣದಲ್ಲಿ ಕನಿಷ್ಟ ಎರಡು ದಿನ ಕಳೆದರೂ ಮನ ಪ್ರಫುಲ್ಲವಾಗುವುದು ಖಚಿತ. ಇಲ್ಲಿ ತಮಗಾಗುವ ಅನುಭವದಿಂದಲೇ ಎಲ್ಲೂ ಕಲಿಸದ ಜೀವನ ಪಾಠವನ್ನು ಪ್ರತಿಯೊಬ್ಬರೂ ಕಲಿಯಬಹುದು. ಈ ಜಾಗವನ್ನು ನೋಡಲು ಬರುವ ಸಂದರ್ಶಕರಾಗಲಿ, ತಂಗುವ ಅತಿಥಿಗಳಾಗಲಿ ತಮಗೆ ಕೈಲಾದಷ್ಟು ಹಣವನ್ನು ದೇಣಿಗೆ ಪೆಟ್ಟಿಗೆಗೆ ಹಾಕಬಹುದು.

‘To be one with Nature’ ಎಂಬ ಧ್ಯೇಯವುಳ್ಳ ಯಾವುದೇ ವ್ಯಕ್ತಿ ಒಮ್ಮೆ ಇಲ್ಲಿ ಉಳಿದುಕೊಳ್ಳಲೇಬೇಕು. ಈ ಅನುಭವಕ್ಕಿಂತ ಮಿಗಿಲಾದ ಜೀವನಾನುಭವ ಮತ್ತೆಲ್ಲೂ ಕಾಣಸಿಗದು. ಇಲ್ಲಿಗೆ ಹೋಗಿ ಇದ್ದು ಬರಬೇಕೆನ್ನುವವರು ಮುಂಚಿತವಾಗಿ ಅವರೊಡನೆ ಇಮೇಲ್ ಮೂಲಕ ಸಂಪರ್ಕಿಸಬಹುದು. ಕರೋನಾ ಪಿಡುಗು ತೀವ್ರವಾಗಿದ್ದಾಗಲೂ ಇಲ್ಲಿಗೆ ಬರಲಿಚ್ಛಿಸಿದ್ದ ಜನರನ್ನು ತಡೆದಿರಲಿಲ್ಲ. ಎಲ್ಲಾ ಕಾರ್ಯಗಳೂ ಎಂದಿನಂತೆಯೇ ನಡೆಯುತ್ತಿತ್ತು.

‘ಸಾಧನಾ ಫಾರೆಸ್ಟ್’ ಆರೋವಿಲ್ಲೆಯಲ್ಲಿ ಬಿಟ್ಟರೆ, ಉತ್ತರ ಅಮೇರಿಕಾದ ಹೈಯಾಟಿ ಹಾಗೂ ಆಫ್ರಿಕಾದ ಕೀನ್ಯಾದಲ್ಲಿ ಮಾತ್ರ ಕಾಣಸಿಗುತ್ತದೆ. 2010ರಲ್ಲಿ ‘ಸಾಧನ ಫಾರೆಸ್ಟ್’ ರಾಷ್ಟ್ರಮಟ್ಟದ Humanitarian Water and Food Award ನಲ್ಲಿ ಮೂರನೆಯ ಸ್ಥಾನ ಗಳಿಸಿದೆ.

Follow Us:
Download App:
  • android
  • ios