5G Internet: 5ಜಿ ತರಂಗ ಹರಾಜಿಗೆ ಕೇಂದ್ರದ ಅನುಮತಿ, ಕೆಲವೇ ದಿನಗಳಲ್ಲಿ ಹೈಸ್ಪೀಡ್‌ ಇಂಟರ್‌ನೆಟ್‌ ಲಭ್ಯ

Centre approves 5G Spectrum Auction: ಇನ್ನು ಕೆಲವೇ ದಿನಗಳಲ್ಲಿ ಶರವೇಗದ ಇಂಟರ್‌ನೆಟ್‌ ದೇಶದ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ 5G ತರಂಗ ಹರಾಜಿಗೆ ಅನುಮತಿ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಸೇವೆ ಆರಂಬವಾಗುವ ನಿರೀಕ್ಷೆಯಿದೆ. 

union cabinet approved 5g spectrum auction 5g service to be available soon

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ 5ಜಿ ತರಂಗ ಹರಾಜಿಗೆ ಅನುಮತಿ ನೀಡಲಾಗಿದೆ. ಈ ಮೂಲಕ ದೇಶದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಅತಿ ಹೆಚ್ಚು ವೇಗದ ಅಂತರ್ಜಾಲ ಸೌಲಭ್ಯ ಲಭ್ಯವಾಗಲಿದೆ. ತರಂಗಗಳ ಹಂಚಿಕೆಯ ಸಂಬಂಧ ಟೆಲಿಕಮ್ಯುನಿಕೇಷನ್‌ ಇಲಾಖೆ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಅನುಮತಿ ಕೋರಿ ವರದಿ ಸಲ್ಲಿಸಿತ್ತು. ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಇದಕ್ಕೆ ಮನ್ನಣೆ ಸಿಕ್ಕಿದೆ. ಡಿಜಿಟಲ್‌ ಇಂಡಿಯಾ ಗಟ್ಟಿಗೊಳಿಸುವ ಹಾದಿಯಲ್ಲಿ ಇದೊಂದು ಹೊಸ ಕ್ರಾಂತಿಯಾಗಲಿದೆ ಎಂದು ಸರ್ಕಾರ ಅಭಿಪ್ರಾಯ ಪಟ್ಟಿದೆ. ವೇಗದ ಇಂಟರ್‌ನೆಟ್‌ ಸೌಲಭ್ಯದಿಂದ ಡಿಜಿಟಲ್‌ ಇಂಡಿಯಾ ಕನಸಿಗೆ ಇನ್ನಷ್ಟು ಶಕ್ತಿ ಸಿಗಲಿದೆ ಎಂದು ಅಭಿಪ್ರಾಯಪಡಲಾಗಿದೆ. 

ಮೊಬೈಲ್‌ ಬ್ರಾಡ್‌ಬ್ಯಾಂಡ್‌ ದೇಶದ ಬಹುತೇಕ ಜನರಿಗೆ ದೈನಂದಿನ ಚಟುವಟಿಕೆಯಲ್ಲಿ ಅತ್ಯಮೂಲ್ಯವಾಗಿದೆ. 4G ಸೇವೆ ಭಾರತದಲ್ಲಿ ಆರಂಭವಾದಾಗಿನಿಂದ, ದೇಶಾದ್ಯಂತ ಜನರ ಎಷ್ಟೋ ಕೆಲಸಗಳಿಗೆ, ಮನರಂಜನೆಗೆ ಮೊಬೈಲ್‌ ಅಂತರ್ಜಾಲವೇ ಮೂಲವಾಗಿದೆ. 2015ರಲ್ಲಿ 4G ಸೇವೆ ದೇಶದಲ್ಲಿ ಆರಂಭವಾಯಿತು. ಅದಾದ ನಂತರ ಡಿಜಿಟಲ್‌ ಕ್ರಾಂತಿಯೇ ದೇಶದಲ್ಲಿ ಸೃಷ್ಟಿಯಾಯಿತು. 2014ರವರೆಗೆ ಮೊಬೈಲ್‌ ಅಂತರ್ಜಾಲ ಬಳಸುವವರ ಸಂಖ್ಯೆ ಕೇವಲ 10 ಕೋಟಿಯಾಗಿತ್ತು. ಆದರೆ 4G ಸೇವೆ ಆರಂಭವಾದ ನಂತರ 80 ಕೋಟಿ ಬಳಕೆದಾರರು ಸೃಷ್ಟಿಯಾಗಿದ್ದಾರೆ. 

ಮೊಬೈಲ್‌ ಬ್ಯಾಂಕಿಂಗ್‌ ವ್ಯವಸ್ಥೆ, ಆನ್‌ಲೈನ್‌ ವಿದ್ಯೆ, ಟೆಲೆಮೆಡಿಸಿನ್‌, ಇ-ರೇಷನ್‌ ಕಾರ್ಡ್‌ ಸೇರಿದಂತೆ ಹಲವು ಸೇವೆಗಳು 4G ಬಂದ ನಂತರ ಎಲ್ಲರಿಗೂ ಮೊಬೈಲ್‌ನಲ್ಲೇ ಲಭ್ಯವಾಗಿದೆ. ಇನ್ನು ಕೆಲವೇ ದಿನದಲ್ಲಿ 5G ಸೇವೆ ಕೂಡ ಆರಂಭವಾಗಲಿದ್ದು, ಅಂತರ್ಜಲ ಕ್ಷೇತ್ರದಲ್ಲಿ ಇನ್ನೊಂದು ಕ್ರಾಂತಿಗೆ ಕಾರಣವಾಗಲಿದೆ. 

ಇದನ್ನೂ ಓದಿ: ಐಐಟಿ ಮದ್ರಾಸ್‌ನಲ್ಲಿ 5G ಕಾಲ್ ಯಶಸ್ವಿಯಾಗಿ ಪರೀಕ್ಷಿಸಿದ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್

ಇಂಟರ್‌ನೆಟ್‌ ಬೆಳೆದ ಬಗೆ:
ಇಪ್ಪತ್ತೊಂದನೇ ಶತಮಾನದ ಶುರುವಿನಲ್ಲಿ ಎಲ್ಲರ ಕೈಗೆ ಮೊಬೈಲ್‌ ಬಂದುಬಿಟ್ಟವು. ಅದರಲ್ಲಿ ಕೇವಲ ಮಾತಾಡುವುದಷ್ಟೇ ಅಲ್ಲದೆ ಎಸ್ಸೆಮ್ಮೆಸ್‌ ಕೂಡ ಕಳಿಸಬಹುದಾಗಿತ್ತು. ಅರ್ಥಾತ್‌ ಮಾತಿನ ಹೊರತಾದ ಡೇಟಾ ಅನ್ನು ಕಳಿಸುವ ತಂತ್ರಜ್ಞಾನ. ಅದನ್ನು 2ಜಿ, ಎರಡನೇ ಜನರೇಶನ್ನು ಎಂದು ಕರೆದರು. ಇದು ಸಾಧ್ಯವಾಗಿದ್ದು ಮಾತನ್ನಾಗಲಿ ಡೇಟಾವನ್ನಾಗಲಿ ಡಿಜಿಟಲ್‌ ಸಿಗ್ನಲ್ಲಾಗಿ ಪರಿವರ್ತಿಸಿದ್ದರಿಂದ. 1ಜಿನಲ್ಲಿ ಮಾತು ಒಂದು ಫೋನಿಂದ ಇನ್ನೊಂದು ಫೋನಿಗೆ ಅನಲಾಗ್‌ ರೂಪದಲ್ಲಿ ಹೋಗುತ್ತಿತ್ತು. ವ್ಯತ್ಯಾಸ ಕಲ್ಪಿಸಿಕೊಳ್ಳಲು ಮುಳ್ಳುಗಳಿರುವ ವಾಚು ಮತ್ತು ಮುಳ್ಳಿಲ್ಲದ ಸಂಖ್ಯೆಗಳನ್ನು ಮಿಣುಕುವ ವಾಚುಗಳನ್ನು ಊಹಿಸಿಕೊಳ್ಳಿ. ಅಷ್ಟುದೊಡ್ಡ ತಂತ್ರಜ್ಞಾನಿಕ ವ್ಯತ್ಯಾಸ. ಹಾಗಾಗಿಯೇ ಸಾಮಾನ್ಯನೂ ಮೊಬೈಲ್‌ ಫೋನು ಬಳಸುವಂತಾಗಿದ್ದು. ಆಗ ಯುರೋಪಿನ ತಂತ್ರಜ್ಞರು ಸೇರಿಕೊಂಡು ಜಿಎಸ್‌ಎಂ ಎಂಬ ವೈರ್‌ಲೆಸ್‌ ಪ್ರೊಟೊಕಾಲುಗಳನ್ನು ರೂಪಿಸಿದರು. ಪ್ರೊಟೊಕಾಲ್‌ ಎಂದರೆ ಒಂದು ಫೋನಿಂದ ಇನ್ನೊಂದು ಫೋನಿಗೆ ಮಾಹಿತಿ ಹೇಗೆ ಯಾವ ರೂಪದಲ್ಲಿ ರವಾನೆಯಾಗಬೇಕು ಎಂಬ ಒಪ್ಪಿತ ತಂತ್ರಜ್ಞಾನದ ನಿಯಮಗಳು. ಖಾಸಗಿ ಕಂಪನಿಗಳು ಈ ಪ್ರೊಟೊಕಾಲನ್ನು ಬಳಸಿ ಹೊಸ ಹೊಸ ಫೋನು, ಸಿಮ್ಮು, ಟವರು ಮುಂತಾದವನ್ನು ತಯಾರಿಸುತ್ತಾರೆ. ಪ್ರೊಟೊಕಾಲು ಎಂಬುದು ಇರದಿದ್ದರೆ ಎಲ್ಲರೂ ಅವರವರಿಗೆ ಬೇಕಾದ ರೀತಿ ಫೋನು ಸಿಮ್ಮು ಟವರು ಮಾಡಿಕೊಂಡಿದ್ದರೆ ನೋಕಿಯಾ ಫೋನಿಂದ ರಿಲಯನ್ಸ್‌ ಫೋನಿಗೆ ಅಥವಾ ಏರ್ಟೆಲ್‌ ಸಿಮ್ಮಿಂದ ಜಿಯೋ ಸಿಮ್ಮಿಗೆ ಕಾಲ್‌ ಮಾಡಲು ಆಗುತ್ತಿರಲಿಲ್ಲ.

ಇದನ್ನೂ ಓದಿ: ಬಂದೇಬಿಟ್ಟಿತು 5ಜಿ, ಇನ್ನು ಸಂಪರ್ಕ ಈಜಿ!

ಜಿಎಸ್‌ಎಂ ಫೋನುಗಳ ನಂತರ ಜಿಪಿಆರ್‌ಎಸ್‌ ಫೋನುಗಳು ಬಂದವು. ಅದೇ ನೋಕಿಯಾದ ಬಣ್ಣ ಬಣ್ಣ ಪರದೆಯ ಫೋನುಗಳು- ಅದರಲ್ಲಿ ನೀವು ಮೊಟ್ಟಮೊದಲ ಬಾರಿಗೆ ಇಂಟರ್ನೆಟ್‌ ನೋಡಬಹುದಿತ್ತು. ತೆಳ್ಳನೆಯ ಗೂಗಲ್‌ ಪೇಜು ವಿಕಿಪೀಡಿಯ ಪೇಜು ತೆರೆಯಬಹುದಿತ್ತು. ಅರ್ಥಾತ್‌ ಇಲ್ಲಿ ಸ್ವಲ್ಪ ಸ್ಪೀಡು ಜಾಸ್ತಿಯಾಯಿತು. ಎಸ್ಸೆಮ್ಮೆಸ್‌ ಅಷ್ಟೇ ಅಲ್ಲದೆ ಇಂಟರ್ನೆಟ್‌ ನೋಡಬಹುದಿತ್ತು. ತೀರ ಯೂಟ್ಯೂಬ್‌ ನೋಡುವ ಲೆವೆಲ್ಲಿಗಲ್ಲ. ಇದನ್ನು 2.5ಜಿ ಎಂದರು. ಎರಡೂವರೆ ಜನರೇಶನ್ನು. ಆನಂತರ ನಿಮ್ಮ ಫೋನಿನ ಪರದೆ ಮೂಲೆಯಲ್ಲಿ ಟವರ್‌ ಸಿಗ್ನಲ್‌ ತೋರಿಸ್ತದಲ್ಲ ಅಲ್ಲಿ ‘ಎಡ್ಜ್‌ ’ ಇಂಗ್ಲೀಷು ಪದ ಕಾಣಿಸಿಕೊಳ್ಳಲಾರಂಭಿಸಿತು. ಅದು ಜಿಪಿಆರ್‌ಎಸ್‌ ಅನ್ನು ಉತ್ತಮಗೊಳಿಸಿದ ತಂತ್ರಜ್ಞಾನ. ಅದನ್ನು 2.7ಜಿ ಎಂದು ಕರೆದರು.
ಆನಂತರ 3ಜಿ ಬಂತು. ಇದರಲ್ಲಿ ನೀವು ಪೂರ್ಣ ಪ್ರಮಾಣದ ವೆಬ್‌ಸೈಟುಗಳನ್ನು ನೋಡಬಹುದಿತ್ತು. ಅರ್ಥಾತ್‌ ವೆಬ್‌ಸೈಟಿನ ಬಣ್ಣಬಣ್ಣದ ಫೋಟೋಗಳು ಮೊಬೈಲ್‌ ಪರದೆ ಮೇಲೆ ಅಚ್ಚುಕಟ್ಟಾಗಿ ಕಾಣಿಸಲಾರಂಭಿಸಿದವು. ಮೊಟ್ಟಮೊದಲ ಬಾರಿಗೆ ಸಿನಿಮಾಗಳನ್ನು ಡೌನ್‌ಲೋಡ್‌ ಮಾಡುವ ಸಾಹಸಕ್ಕೆ ಇಳಿದಿರಿ. ರಾತ್ರಿ ಡೌನ್‌ಲೋಡ್‌ ಕೊಟ್ಟರೆ ಬೆಳಗ್ಗೆ ಅಷ್ಟೊತ್ತಿಗೆ ಡೌನ್‌ಲೋಡ್‌ ಆಗಿರುತ್ತಿತ್ತು. ಫೋನು ಸ್ಮಾರ್ಚ್‌ಫೋನಾಯಿತು. ಸ್ಕ್ರೀನು ಟಚ್‌ಸ್ಕ್ರೀನಾಯಿತು. ಆನಂತರ ಬಂದದ್ದೇ 4ಜಿ. ನಾವು ಈಗ ಬಳಸುತ್ತಿರುವುದು. ಇದನ್ನು ಎಲ್‌ಟಿಇ(ಲಾಂಗ್‌ ಟಮ್‌ರ್‍ ಎವಲ್ಯೂಷನ್‌) ಎಂದೂ ಕರೆಯುತ್ತಾರೆ. ನಿಮ್ಮ ಫೋನಿನ ಪರದೆ ಮೇಲೆ ಟವರ್‌ ಸಿಗ್ನಲ್‌ ತೋರಿಸುವ ಜಾಗದಲ್ಲಿ ಎಲ್‌ಟಿಇ ಎಂಬ ಪದ ಅಚ್ಚಾಗಿರುವುದನ್ನು ಗಮನಿಸಿರುತ್ತೀರಿ. ತಂತ್ರಜ್ಞಾನ ದೃಷ್ಟಿಯಿಂದ 3ಜಿಯಿಂದ 4ಜಿ ದೊಡ್ಡ ಮಟ್ಟದ ಜಂಪು. ಏಕ್ದಂ ಲೈವ್‌ ಟಿವಿ ಚಾನೆಲ್ಲುಗಳು ಮೊಬೈಲ್‌ ಪರದೆ ಮೇಲೆ ಬರಲಾರಂಭಿಸಿದವು. ಟಿವಿಗಳಲ್ಲಿ ಇಂಟರ್ನೆಟ್‌ ಮೂಲಕ ಸಿನಿಮಾ ನೋಡಲು ಸಾಧ್ಯವಾಯಿತು. ವಾಟ್ಸಾಪು ವಿಡಿಯೋ ಕಾಲ್‌ ಮೂಲಕ ಮುಖ ಮುಖ ನೋಡಿಕೊಂಡು ಮಾತಾಡುವಂತಾಯಿತು. ಸಿಗ್ನಲ್‌ ಇರೋ ಕಡೆ ಹೋಗಿ ನಿಂತು ಹಲೋ ಹಲೋ ಎಂದು ತಡವರಿಸಿ ಮಾತಾಡುತ್ತಿದುದರಿಂದ ಹಿಡಿದು ದಿನಕ್ಕೆ ನೂರು ಎಸ್ಸೆಮ್ಮೆಸ್‌ ಆಫರಿಂದ ಹಿಡಿದು ಇಂದು ನೇರ ಮುಖ ನೋಡಿಕೊಂಡು ಮಾತಾಡುವ ತನಕ ಮುಂದುವರೆದಿದ್ದೇವೆ. ಇಪ್ಪತ್ತು ವರುಷಗಳ ಪ್ರಯಾಣ.

ಇದನ್ನೂ ಓದಿ: 2030ರ ವೇಳೆಗೆ 6G ಆರಂಭ, ಆದರೆ ಸ್ಮಾರ್ಟ್‌ಫೋನ್ಸ್ ಮಾತ್ರ ಇರಲ್ಲ: ನೋಕಿಯಾ ಸಿಇಓ ಹೀಗಂದಿದ್ಯಾಕೆ?

ಆಯ್ತಲ್ಲ, ಇನ್ನೇನು ಲೈವ್‌ ಟಿವಿ ನೋಡಬಹುದು, ವಿಡಿಯೋ ಕಾಲ್‌ ಮಾಡಬಹುದು, ಇನ್ನೆಷ್ಟುಸುಧಾರಣೆ ಸಾಧ್ಯ ಈ ತಂತ್ರಜ್ಞಾನದಲ್ಲಿ ಎಂದು ನೀವು ಕೇಳಬಹುದು. ಅದು ಸ್ವಲ್ಪ ಮಟ್ಟಿಗೆ ನಿಜವೆನಿಸಿದರೂ ಸಾಕಷ್ಟುಸುಧಾರಣೆ ಸಾಧ್ಯವಿದೆ. ಹೇಗೆ ಇಪ್ಪತ್ತು ವರುಷಗಳ ಹಿಂದೆ ನಮ್ಮ ವಾಯ್‌್ಸ ಕಾಲ್‌ ಅತ್ಯಂತ ಕಳಪೆ ಇತ್ತೋ ಹಾಗೆ ಇಂದು ನಮ್ಮ ವಿಡಿಯೋ ಕಾಲ್‌ ಕಳಪೆ ಮಟ್ಟಇದೆ. ನಮಗಿನ್ನೂ ಆಕಡೆಯವರ ಅಚ್ಚುಕಟ್ಟಾದ ಮುಖ ನೋಡಲು ಆಗಿಲ್ಲ. ನಮ್ಮ ಅಮೆಜಾನು, ನೆಟ್‌ಫ್ಲಿಕ್ಸು, ಯೂಟ್ಯೂಬುಗಳು ಕೆಲವೊಮ್ಮೆ ರೌಂಡ್‌ ಹೊಡೆಯಲು ಶುರು ಮಾಡುತ್ತವೆ. ಸಿನಿಮಾ ಕ್ಲಾರಿಟಿ ಬರಲ್ಲ. ಗೂಗಲ್‌ ಸಚ್‌ರ್‍ ಹೊಡೆದು ಲಿಂಕ್‌ ಓಪನ್‌ ಮಾಡಿದರೆ ಎರಡು ಮೂರು ಸೆಕೆಂಡಾದರೂ ಬಿಳಿ ಪರದೆ ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: OPPO K10 5G: ಕೈಗೆಟುಕುವ ಬೆಲೆಯಲ್ಲಿ ಪವರ್-ಪ್ಯಾಕ್ಡ್ 5G ಸ್ಮಾರ್ಟ್‌ಫೋನ್

5ಜಿ ಬಂದರೆ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿವೆ. ಅಷ್ಟೇ ಅಲ್ಲ, 5ಜಿ ಬಳಸಿಕೊಂಡು ಹೊಸ ಹೊಸ ತಂತ್ರಜ್ಞಾನ ಸಾಧ್ಯತೆಗಳು ತೆರೆದುಕೊಳ್ಳಲಿವೆ. 3ಜಿಯಿಂದ 4ಜಿ ಹೇಗೆ ದೊಡ್ಡ ಜಂಪೋ ಹಾಗೆ 4ಜಿಯಿಂದ 5ಜಿ ದೊಡ್ಡ ಜಂಪು. ಒಂದು ಸೆಕೆಂಡಿನಲ್ಲಿ ಪೂರ್ತಿ ಸಿನಿಮಾ ಡೌನ್‌ಲೋಡ್‌ ಆಗಲಿದೆ. ವೆಬ್‌ಸೈಟುಗಳು ಕಣ್ಣು ಮಿಟುಕಿಸುವುದರಲ್ಲಿ ತೆರೆದುಕೊಳ್ಳಲಿವೆ. ವಿಡಿಯೋ ಕಾಲಿನಲ್ಲಿ ನುಣಪಾದ ಮುಖ ಕಾಣಲಿದೆ. ಮುಂಬರುವ ದಿನಗಳಲ್ಲಿ ವಿಡಿಯೋ ಕಾಲ್‌ನÜ ಆ ಕಡೆಯ ವ್ಯಕ್ತಿಯ ಇಡೀ ದೇಹದ ಅಮೂರ್ತ ರೂಪ ನಿಮ್ಮೆದುರು ನಿಂತರೂ ಅಚ್ಚರಿಯಿಲ್ಲ! ಅರ್ಥಾತ್‌ ತ್ರೀಡಿ ಕಾಲ್‌. ಹಾಗೇನೇ ಸಿನಿಮಾದಲ್ಲಿನ ಪಾತ್ರಗಳು ನಿಮ್ಮ ನಡುಮನೆಯಲ್ಲಿ ಅತ್ತಿಂದಿತ್ತ ಅಡ್ಡಾಡಿದರೂ ಅಚ್ಚರಿ ಪಡಬೇಕಿಲ್ಲ! ಮನೆಯಲ್ಲೆ ತ್ರೀಡಿ ಸಿನಿಮಾ! ಆರ್‌ಟಿಓನವರು ನಿಮ್ಮ ನಿಮ್ಮ ಕಾರುಗಳಲ್ಲಿ ಇಂತಹದ್ದೊಂದು ಬಾಕ್ಸುಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಾನೂನು ಕಡ್ಡಾಯ ಮಾಡಬಹುದು- ಆ ಬಾಕ್ಸನ್ನು ಅಳವಡಿಸಿಕೊಂಡರೆ ನಮ್ಮ ಕಾರುಗಳು ರಸ್ತೆ ಮೇಲೆ ಓಡುವಾಗ ಸುತ್ತಲಿನ ಕಾರುಗಳೊಂದಿಗೆ ಪರಸ್ಪರ ಮಾತಾಡಿಕೊಳ್ಳಬಹುದು! ಯಾರು ಯಾರಿಗೆ ಸೈಡು ಕೊಡಬೇಕು ಎಂದು ಅವೇ ಒಂದು ಅಂಡರ್‌ಸ್ಟಾಂಡಿಂಗಿಗೆ ಬರಬಹುದು!

 

union cabinet approved 5g spectrum auction 5g service to be available soon

 

union cabinet approved 5g spectrum auction 5g service to be available soon

union cabinet approved 5g spectrum auction 5g service to be available soon

Latest Videos
Follow Us:
Download App:
  • android
  • ios