ಬಂದೇಬಿಟ್ಟಿತು 5ಜಿ, ಇನ್ನು ಸಂಪರ್ಕ ಈಜಿ!
ಮೊನ್ನೆ ಮೊನ್ನೆ, ದೇಸಿ 5ಜಿ ನೆಟ್ವರ್ಕಿನ ಮೂಲಕ ಫೋನ್ ಕರೆ ಮಾಡಿದ ಸುದ್ದಿ ಬಂದಿತ್ತು. ಅಂದರೆ 5ಜಿ ದೂರದಲ್ಲಿಲ್ಲ ಅನ್ನುವುದು ಖಾತ್ರಿಯಾಯಿತು. ನಮ್ಮ ಮನೆಯ ಹೊಸಿಲು ದಾಟುವುದಕ್ಕೆ ಇನ್ನು ಬಹಳ ಸಮಯವೇನೂ ಬೇಕಾಗಿಲ್ಲ. ಇಂಥ ಹೊತ್ತಲ್ಲಿ 5ಜಿ ಅಂದರೇನು ಅನ್ನುವುದನ್ನು ಈ ಬರಹದಲ್ಲಿ ವಿವರಿಸಲಾಗಿದೆ.
ಮಧು ವೈ.ಎನ್.
ತೊಂಭತ್ತರ ದಶಕದಲ್ಲಿ ಬಂದ ಮೊಬೈಲ್ ಫೋನು ಮತ್ತು ಸಂಬಂಧಿತ ತಂತ್ರಜ್ಞಾನ ಹಂತಹಂತವಾಗಿ ಬೆಳೆಯುತ್ತ ಹೋಯಿತು. ಹಳೇ ಸಿನಿಮಾಗಳಲ್ಲಿ ನೋಡಿರುತ್ತೀರ, ಶ್ರೀಮಂತನು ತನ್ನ ದೊಡ್ಡ ಮನೆಯ ಅಂಗಳದ ಹುಲ್ಲುಹಾಸಿನ ಮೇಲೆ ಅತ್ತಿಂದಿತ್ತ ಓಡಾಡುತ್ತ ಆಂಟೆನಾ ಇರುವ ಇಷ್ಟುದಪ್ಪ ಗಾತ್ರದ ಫೋನಿನಲ್ಲಿ ಮಾತಾಡುತ್ತಿರುತ್ತಾನೆ. ಮಾತು ಮುಗಿದಾಗ ಆಂಟೆನಾ ಒಳಗೆ ತಳ್ಳಿ ಟೀಪಾಯಿ ಮೇಲಿಡುತ್ತಾನೆ. ಅದನ್ನು ಜನ 1ಜಿ ಎಂದು ಕರೆದರು. ಮೊದಲನೇ ಜನರೇಶನ್ನು ಎಂದು. ಅದರಲ್ಲಿ ಒಂದು ಫೋನಿನಿಂದ ಇನ್ನೊಂದು ಫೋನಿಗೆ ಮಾತುಗಳನ್ನು ಮಾತ್ರ ಕಳಿಸಬಹುದಿತ್ತು.
ಇಪ್ಪತ್ತೊಂದನೇ ಶತಮಾನದ ಶುರುವಿನಲ್ಲಿ ಎಲ್ಲರ ಕೈಗೆ ಮೊಬೈಲ್ ಬಂದುಬಿಟ್ಟವು. ಅದರಲ್ಲಿ ಕೇವಲ ಮಾತಾಡುವುದಷ್ಟೇ ಅಲ್ಲದೆ ಎಸ್ಸೆಮ್ಮೆಸ್ ಕೂಡ ಕಳಿಸಬಹುದಾಗಿತ್ತು. ಅರ್ಥಾತ್ ಮಾತಿನ ಹೊರತಾದ ಡೇಟಾ ಅನ್ನು ಕಳಿಸುವ ತಂತ್ರಜ್ಞಾನ. ಅದನ್ನು 2ಜಿ, ಎರಡನೇ ಜನರೇಶನ್ನು ಎಂದು ಕರೆದರು. ಇದು ಸಾಧ್ಯವಾಗಿದ್ದು ಮಾತನ್ನಾಗಲಿ ಡೇಟಾವನ್ನಾಗಲಿ ಡಿಜಿಟಲ್ ಸಿಗ್ನಲ್ಲಾಗಿ ಪರಿವರ್ತಿಸಿದ್ದರಿಂದ. 1ಜಿನಲ್ಲಿ ಮಾತು ಒಂದು ಫೋನಿಂದ ಇನ್ನೊಂದು ಫೋನಿಗೆ ಅನಲಾಗ್ ರೂಪದಲ್ಲಿ ಹೋಗುತ್ತಿತ್ತು. ವ್ಯತ್ಯಾಸ ಕಲ್ಪಿಸಿಕೊಳ್ಳಲು ಮುಳ್ಳುಗಳಿರುವ ವಾಚು ಮತ್ತು ಮುಳ್ಳಿಲ್ಲದ ಸಂಖ್ಯೆಗಳನ್ನು ಮಿಣುಕುವ ವಾಚುಗಳನ್ನು ಊಹಿಸಿಕೊಳ್ಳಿ. ಅಷ್ಟುದೊಡ್ಡ ತಂತ್ರಜ್ಞಾನಿಕ ವ್ಯತ್ಯಾಸ. ಹಾಗಾಗಿಯೇ ಸಾಮಾನ್ಯನೂ ಮೊಬೈಲ್ ಫೋನು ಬಳಸುವಂತಾಗಿದ್ದು. ಆಗ ಯುರೋಪಿನ ತಂತ್ರಜ್ಞರು ಸೇರಿಕೊಂಡು ಜಿಎಸ್‌ಎಂ ಎಂಬ ವೈರ್‌ಲೆಸ್ ಪ್ರೊಟೊಕಾಲುಗಳನ್ನು ರೂಪಿಸಿದರು. ಪ್ರೊಟೊಕಾಲ್ ಎಂದರೆ ಒಂದು ಫೋನಿಂದ ಇನ್ನೊಂದು ಫೋನಿಗೆ ಮಾಹಿತಿ ಹೇಗೆ ಯಾವ ರೂಪದಲ್ಲಿ ರವಾನೆಯಾಗಬೇಕು ಎಂಬ ಒಪ್ಪಿತ ತಂತ್ರಜ್ಞಾನದ ನಿಯಮಗಳು. ಖಾಸಗಿ ಕಂಪನಿಗಳು ಈ ಪ್ರೊಟೊಕಾಲನ್ನು ಬಳಸಿ ಹೊಸ ಹೊಸ ಫೋನು, ಸಿಮ್ಮು, ಟವರು ಮುಂತಾದವನ್ನು ತಯಾರಿಸುತ್ತಾರೆ. ಪ್ರೊಟೊಕಾಲು ಎಂಬುದು ಇರದಿದ್ದರೆ ಎಲ್ಲರೂ ಅವರವರಿಗೆ ಬೇಕಾದ ರೀತಿ ಫೋನು ಸಿಮ್ಮು ಟವರು ಮಾಡಿಕೊಂಡಿದ್ದರೆ ನೋಕಿಯಾ ಫೋನಿಂದ ರಿಲಯನ್ಸ್ ಫೋನಿಗೆ ಅಥವಾ ಏರ್ಟೆಲ್ ಸಿಮ್ಮಿಂದ ಜಿಯೋ ಸಿಮ್ಮಿಗೆ ಕಾಲ್ ಮಾಡಲು ಆಗುತ್ತಿರಲಿಲ್ಲ.
ಜಿಎಸ್‌ಎಂ ಫೋನುಗಳ ನಂತರ ಜಿಪಿಆರ್‌ಎಸ್ ಫೋನುಗಳು ಬಂದವು. ಅದೇ ನೋಕಿಯಾದ ಬಣ್ಣ ಬಣ್ಣ ಪರದೆಯ ಫೋನುಗಳು- ಅದರಲ್ಲಿ ನೀವು ಮೊಟ್ಟಮೊದಲ ಬಾರಿಗೆ ಇಂಟರ್ನೆಟ್ ನೋಡಬಹುದಿತ್ತು. ತೆಳ್ಳನೆಯ ಗೂಗಲ್ ಪೇಜು ವಿಕಿಪೀಡಿಯ ಪೇಜು ತೆರೆಯಬಹುದಿತ್ತು. ಅರ್ಥಾತ್ ಇಲ್ಲಿ ಸ್ವಲ್ಪ ಸ್ಪೀಡು ಜಾಸ್ತಿಯಾಯಿತು. ಎಸ್ಸೆಮ್ಮೆಸ್ ಅಷ್ಟೇ ಅಲ್ಲದೆ ಇಂಟರ್ನೆಟ್ ನೋಡಬಹುದಿತ್ತು. ತೀರ ಯೂಟ್ಯೂಬ್ ನೋಡುವ ಲೆವೆಲ್ಲಿಗಲ್ಲ. ಇದನ್ನು 2.5ಜಿ ಎಂದರು. ಎರಡೂವರೆ ಜನರೇಶನ್ನು. ಆನಂತರ ನಿಮ್ಮ ಫೋನಿನ ಪರದೆ ಮೂಲೆಯಲ್ಲಿ ಟವರ್ ಸಿಗ್ನಲ್ ತೋರಿಸ್ತದಲ್ಲ ಅಲ್ಲಿ ‘ಎಡ್ಜ್ ’ ಇಂಗ್ಲೀಷು ಪದ ಕಾಣಿಸಿಕೊಳ್ಳಲಾರಂಭಿಸಿತು. ಅದು ಜಿಪಿಆರ್‌ಎಸ್ ಅನ್ನು ಉತ್ತಮಗೊಳಿಸಿದ ತಂತ್ರಜ್ಞಾನ. ಅದನ್ನು 2.7ಜಿ ಎಂದು ಕರೆದರು.
ಐಐಟಿ ಮದ್ರಾಸ್‌ನಲ್ಲಿ 5G ಕಾಲ್ ಯಶಸ್ವಿಯಾಗಿ ಪರೀಕ್ಷಿಸಿದ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್
ಆನಂತರ 3ಜಿ ಬಂತು. ಇದರಲ್ಲಿ ನೀವು ಪೂರ್ಣ ಪ್ರಮಾಣದ ವೆಬ್‌ಸೈಟುಗಳನ್ನು ನೋಡಬಹುದಿತ್ತು. ಅರ್ಥಾತ್ ವೆಬ್‌ಸೈಟಿನ ಬಣ್ಣಬಣ್ಣದ ಫೋಟೋಗಳು ಮೊಬೈಲ್ ಪರದೆ ಮೇಲೆ ಅಚ್ಚುಕಟ್ಟಾಗಿ ಕಾಣಿಸಲಾರಂಭಿಸಿದವು. ಮೊಟ್ಟಮೊದಲ ಬಾರಿಗೆ ಸಿನಿಮಾಗಳನ್ನು ಡೌನ್‌ಲೋಡ್ ಮಾಡುವ ಸಾಹಸಕ್ಕೆ ಇಳಿದಿರಿ. ರಾತ್ರಿ ಡೌನ್‌ಲೋಡ್ ಕೊಟ್ಟರೆ ಬೆಳಗ್ಗೆ ಅಷ್ಟೊತ್ತಿಗೆ ಡೌನ್‌ಲೋಡ್ ಆಗಿರುತ್ತಿತ್ತು. ಫೋನು ಸ್ಮಾರ್ಚ್‌ಫೋನಾಯಿತು. ಸ್ಕ್ರೀನು ಟಚ್‌ಸ್ಕ್ರೀನಾಯಿತು. ಆನಂತರ ಬಂದದ್ದೇ 4ಜಿ. ನಾವು ಈಗ ಬಳಸುತ್ತಿರುವುದು. ಇದನ್ನು ಎಲ್‌ಟಿಇ(ಲಾಂಗ್ ಟಮ್‌ರ್ ಎವಲ್ಯೂಷನ್) ಎಂದೂ ಕರೆಯುತ್ತಾರೆ. ನಿಮ್ಮ ಫೋನಿನ ಪರದೆ ಮೇಲೆ ಟವರ್ ಸಿಗ್ನಲ್ ತೋರಿಸುವ ಜಾಗದಲ್ಲಿ ಎಲ್‌ಟಿಇ ಎಂಬ ಪದ ಅಚ್ಚಾಗಿರುವುದನ್ನು ಗಮನಿಸಿರುತ್ತೀರಿ. ತಂತ್ರಜ್ಞಾನ ದೃಷ್ಟಿಯಿಂದ 3ಜಿಯಿಂದ 4ಜಿ ದೊಡ್ಡ ಮಟ್ಟದ ಜಂಪು. ಏಕ್ದಂ ಲೈವ್ ಟಿವಿ ಚಾನೆಲ್ಲುಗಳು ಮೊಬೈಲ್ ಪರದೆ ಮೇಲೆ ಬರಲಾರಂಭಿಸಿದವು. ಟಿವಿಗಳಲ್ಲಿ ಇಂಟರ್ನೆಟ್ ಮೂಲಕ ಸಿನಿಮಾ ನೋಡಲು ಸಾಧ್ಯವಾಯಿತು. ವಾಟ್ಸಾಪು ವಿಡಿಯೋ ಕಾಲ್ ಮೂಲಕ ಮುಖ ಮುಖ ನೋಡಿಕೊಂಡು ಮಾತಾಡುವಂತಾಯಿತು. ಸಿಗ್ನಲ್ ಇರೋ ಕಡೆ ಹೋಗಿ ನಿಂತು ಹಲೋ ಹಲೋ ಎಂದು ತಡವರಿಸಿ ಮಾತಾಡುತ್ತಿದುದರಿಂದ ಹಿಡಿದು ದಿನಕ್ಕೆ ನೂರು ಎಸ್ಸೆಮ್ಮೆಸ್ ಆಫರಿಂದ ಹಿಡಿದು ಇಂದು ನೇರ ಮುಖ ನೋಡಿಕೊಂಡು ಮಾತಾಡುವ ತನಕ ಮುಂದುವರೆದಿದ್ದೇವೆ. ಇಪ್ಪತ್ತು ವರುಷಗಳ ಪ್ರಯಾಣ.
2030ರ ವೇಳೆಗೆ ಭಾರತದಲ್ಲಿ 6G ನೆಟ್‌ವರ್ಕ್ ಪ್ರಾರಂಭಿಸುವ ಗುರಿ: ಪ್ರಧಾನಿ ನರೇಂದ್ರ ಮೋದಿ
ಆಯ್ತಲ್ಲ, ಇನ್ನೇನು ಲೈವ್ ಟಿವಿ ನೋಡಬಹುದು, ವಿಡಿಯೋ ಕಾಲ್ ಮಾಡಬಹುದು, ಇನ್ನೆಷ್ಟುಸುಧಾರಣೆ ಸಾಧ್ಯ ಈ ತಂತ್ರಜ್ಞಾನದಲ್ಲಿ ಎಂದು ನೀವು ಕೇಳಬಹುದು. ಅದು ಸ್ವಲ್ಪ ಮಟ್ಟಿಗೆ ನಿಜವೆನಿಸಿದರೂ ಸಾಕಷ್ಟುಸುಧಾರಣೆ ಸಾಧ್ಯವಿದೆ. ಹೇಗೆ ಇಪ್ಪತ್ತು ವರುಷಗಳ ಹಿಂದೆ ನಮ್ಮ ವಾಯ್‌್ಸ ಕಾಲ್ ಅತ್ಯಂತ ಕಳಪೆ ಇತ್ತೋ ಹಾಗೆ ಇಂದು ನಮ್ಮ ವಿಡಿಯೋ ಕಾಲ್ ಕಳಪೆ ಮಟ್ಟಇದೆ. ನಮಗಿನ್ನೂ ಆಕಡೆಯವರ ಅಚ್ಚುಕಟ್ಟಾದ ಮುಖ ನೋಡಲು ಆಗಿಲ್ಲ. ನಮ್ಮ ಅಮೆಜಾನು, ನೆಟ್‌ಫ್ಲಿಕ್ಸು, ಯೂಟ್ಯೂಬುಗಳು ಕೆಲವೊಮ್ಮೆ ರೌಂಡ್ ಹೊಡೆಯಲು ಶುರು ಮಾಡುತ್ತವೆ. ಸಿನಿಮಾ ಕ್ಲಾರಿಟಿ ಬರಲ್ಲ. ಗೂಗಲ್ ಸಚ್‌ರ್ ಹೊಡೆದು ಲಿಂಕ್ ಓಪನ್ ಮಾಡಿದರೆ ಎರಡು ಮೂರು ಸೆಕೆಂಡಾದರೂ ಬಿಳಿ ಪರದೆ ಕಾಣಿಸಿಕೊಳ್ಳುತ್ತದೆ.
5ಜಿ ಬಂದರೆ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿವೆ. ಅಷ್ಟೇ ಅಲ್ಲ, 5ಜಿ ಬಳಸಿಕೊಂಡು ಹೊಸ ಹೊಸ ತಂತ್ರಜ್ಞಾನ ಸಾಧ್ಯತೆಗಳು ತೆರೆದುಕೊಳ್ಳಲಿವೆ. 3ಜಿಯಿಂದ 4ಜಿ ಹೇಗೆ ದೊಡ್ಡ ಜಂಪೋ ಹಾಗೆ 4ಜಿಯಿಂದ 5ಜಿ ದೊಡ್ಡ ಜಂಪು. ಒಂದು ಸೆಕೆಂಡಿನಲ್ಲಿ ಪೂರ್ತಿ ಸಿನಿಮಾ ಡೌನ್‌ಲೋಡ್ ಆಗಲಿದೆ. ವೆಬ್‌ಸೈಟುಗಳು ಕಣ್ಣು ಮಿಟುಕಿಸುವುದರಲ್ಲಿ ತೆರೆದುಕೊಳ್ಳಲಿವೆ. ವಿಡಿಯೋ ಕಾಲಿನಲ್ಲಿ ನುಣಪಾದ ಮುಖ ಕಾಣಲಿದೆ. ಮುಂಬರುವ ದಿನಗಳಲ್ಲಿ ವಿಡಿಯೋ ಕಾಲ್‌ನÜ ಆ ಕಡೆಯ ವ್ಯಕ್ತಿಯ ಇಡೀ ದೇಹದ ಅಮೂರ್ತ ರೂಪ ನಿಮ್ಮೆದುರು ನಿಂತರೂ ಅಚ್ಚರಿಯಿಲ್ಲ! ಅರ್ಥಾತ್ ತ್ರೀಡಿ ಕಾಲ್. ಹಾಗೇನೇ ಸಿನಿಮಾದಲ್ಲಿನ ಪಾತ್ರಗಳು ನಿಮ್ಮ ನಡುಮನೆಯಲ್ಲಿ ಅತ್ತಿಂದಿತ್ತ ಅಡ್ಡಾಡಿದರೂ ಅಚ್ಚರಿ ಪಡಬೇಕಿಲ್ಲ! ಮನೆಯಲ್ಲೆ ತ್ರೀಡಿ ಸಿನಿಮಾ! ಆರ್‌ಟಿಓನವರು ನಿಮ್ಮ ನಿಮ್ಮ ಕಾರುಗಳಲ್ಲಿ ಇಂತಹದ್ದೊಂದು ಬಾಕ್ಸುಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಾನೂನು ಕಡ್ಡಾಯ ಮಾಡಬಹುದು- ಆ ಬಾಕ್ಸನ್ನು ಅಳವಡಿಸಿಕೊಂಡರೆ ನಮ್ಮ ಕಾರುಗಳು ರಸ್ತೆ ಮೇಲೆ ಓಡುವಾಗ ಸುತ್ತಲಿನ ಕಾರುಗಳೊಂದಿಗೆ ಪರಸ್ಪರ ಮಾತಾಡಿಕೊಳ್ಳಬಹುದು! ಯಾರು ಯಾರಿಗೆ ಸೈಡು ಕೊಡಬೇಕು ಎಂದು ಅವೇ ಒಂದು ಅಂಡರ್‌ಸ್ಟಾಂಡಿಂಗಿಗೆ ಬರಬಹುದು! ಹಾಗಾದರೆ ಏನಪ್ಪ ಇದು 5ಜಿ?
ನೆಲದಲ್ಲಿ ಹೂಳಿರುವ ವಯರುಗಳನ್ನು ಬದಲಾಯಿಸುತ್ತಾರೋ, ಈಗಿರುವ ಟವರುಗಳನ್ನು ಕಿತ್ತು ಹೊಸ ಟವರು ನೆಡುತ್ತಾರೋ? ನಮ್ಮ ಈಗಿನ ಮೊಬೈಲುಗಳನ್ನು ಮಾರಿ ಹೊಸದು ಕೊಂಡುಕೊಳ್ಳಬೇಕೋ?
ಮೊದಲಿಗೆ ಹೇಗೆ ಒಂದು ಮೊಬೈಲಿಂದ ಇನ್ನೊಂದು ಮೊಬೈಲಿಗೆ ಕಾಲ್ ಹೋಗುತ್ತದೆ ಅರ್ಥ ಮಾಡಿಕೊಳ್ಳೋಣ. ನೀವು ಕರ್ನಾಟಕದ ಯಾವುದೋ ಹಳ್ಳಿಯಲ್ಲಿದ್ದೀರಿ. ಅಮೆರಿಕಾದ ಮಗ/ಮಗಳಿಗೆ ಫೋನ್ ಮಾಡುತ್ತೀರಿ. ನಿಮ್ಮ ಮೊಬೈಲ್ ಸದಾ ಸ್ಥಳೀಯ ಟವರಿನೊಂದಿಗೆ ಕನೆಕ್ಟ್ ಆಗಿರುತ್ತದೆ. ಒಂದೂರಿಂದ ಇನ್ನೊಂದೂರಿಗೆ ಹೋದರೆ ಆ ಕನೆಕ್ಷನ್ ಈ ಟವರಿಂದ ಆ ಟವರಿಗೆ ಬದಲಾಗುತ್ತಿರುತ್ತದೆ. ನೀವು ವೇಗದ ರೈಲಿನಲ್ಲಿ ಫೋನಲ್ಲಿ ಮಾತಾಡಿಕೊಂಡು ಹೋಗುತ್ತಿದ್ದರೂ ಈ ಕನೆಕ್ಷನ್ ಟವರಿಂದ ಟವರಿಗೆ ಜಂಪ್ ಹೊಡಿತಿರ್ತದೆ. ನಿಮ್ಮ ಮೊಬೈಲು ಸದ್ಯಕ್ಕೆ ಯಾವ ಟವರಿನ ಸಂಪರ್ಕದಲ್ಲಿದೆಯೆಂಬ ಮಾಹಿತಿ ಹಲವು ಟವರುಗಳ ಕೇಂದ್ರ ಸ್ಥಾನದಲ್ಲಿ ಸದಾ ಅಪ್‌ಡೇಟ್ ಆಗುತ್ತಿರುತ್ತದೆ.
ನೀವು ಅಮೆರಿಕಾ ನಂಬರು ಡಯಲ್ ಮಾಡಿದಾಗ ಆ ಮನವಿ ಸ್ಥಳೀಯ ಟವರಿಗೆ ಹೋಗುತ್ತದೆ, ವೈರ್‌ಲೆಸ್ ಸಿಗ್ನಲ್ ರೂಪದಲ್ಲಿ. ಟವರುಗಳು ನೆಲದೊಳಗಿನ ಕೇಬಲ್ಲುಗಳ ಮೂಲಕ ಒಂದಕ್ಕೊಂದು ಕನೆಕ್ಟ್ ಆಗಿರುತ್ತವೆ. ಹಾಗಾಗಿ ಆ ಟವರಿಂದ ನಿಮ್ಮ ಮನವಿ ಕೇಬಲ್ಲುಗಳ ಮೂಲಕ ಸಮುದ್ರ ತೀರ ತಲುಪಿ ಸಮುದ್ರದೊಳಗಿನ ಕೇಬಲ್ ಮೂಲಕ ಅಮೆರಿಕಾ ತಲುಪಿ ಅಲ್ಲಿಂದ ಸ್ಥಳೀಯ ಟವರ್ ಮುಟ್ಟಿಅಲ್ಲಿನ ಟವರಿಂದ ತಿರುಗಾ ವೈರ್‌ಲೆಸ್ ಸಿಗ್ನಲ್ಲಾಗಿ ನಿಮ್ಮ ಮಗ/ಮಗಳ ಫೋನು ತಲುಪುತ್ತದೆ. ಇದೆಲ್ಲ ಕ್ಷಣ ಮಾತ್ರದಲ್ಲಿ ಆಗುತ್ತದೆ ಎಂಬುದೇ ತಂತ್ರಜ್ಞಾನದ ಸೋಜಿಗ. ಮೊಬೈಲಿಂದ ಟವರಿಗೆ ಸಿಗ್ನಲ್ಲು ಗಾಳಿ ಮೂಲಕ ಹೋಗ್ತದಲ್ಲ ಅದು ಎಲೆಕ್ಟ್ರೋಮ್ಯಾಗ್ನೆಟಿಕ್ ಅಲೆಗಳ ರೂಪದಲ್ಲಿರುತ್ತದೆ. ಅದಕ್ಕೆಂದು ನಿರ್ದಿಷ್ಟಫ್ರೀಕ್ವೆನ್ಸಿಗಳು ಇರುತ್ತವೆ. ಆಕಾಶವಾಣಿಗೊಂದು, ರೇಡಿಯೋ ಮಿರ್ಚಿಗೊಂದು ಇದ್ದಂತೆ ಟವರ್ ಮತ್ತು ಮೊಬೈಲ್ ಪ್ರತ್ಯೇಕ ಫ್ರೀಕ್ವೆನ್ಸಿಯ ಒಪ್ಪಂದಕ್ಕೆ ಬಂದಿರುತ್ತವೆ. 5ಜಿನಲ್ಲಿ ಈ ಫ್ರೀಕ್ವೆನ್ಸಿಯನ್ನು ವಿಸ್ತರಿಸಲಿದ್ದಾರೆ. ಅಧಿಕ ಸ್ಥಾಯಿಯ ಫ್ರೀಕ್ವೆನ್ಸಿಗಳನ್ನು ಉಪಯೋಗಿಸಕೊಳ್ಳಲಾಗುತ್ತದೆ. ಇವನ್ನು ಮಿಲಿಮೀಟರ್ ವೇವ್ ಎನ್ನುತ್ತಾರೆ. ಹಾಗೆಂದರೆ ತೀಕ್ಷ$್ಣತೆ ಹೆಚ್ಚಿದ ಅಲೆಗಳು, ಇಲ್ಲಿತನಕ ಸ್ಯಾಟಲೈಟ್ ಫೋನುಗಳಲ್ಲಿ ಬಳಕೆಯಾಗ್ತಿದ್ದ ಫ್ರೀಕ್ವೆನ್ಸಿಗಳು ಇನ್ನು ಮುಂದೆ ಮಾಮೂಲಿ ಮೊಬೈಲಿನಲ್ಲೂ ಬಳಕೆಯಾಗಲಿವೆ. ಈ ಕಾರಣಕ್ಕೆ ಜನಸಾಮಾನ್ಯರಲ್ಲಿ 5ಜಿ ಎಂದರೆ ಹೈ ರೇಡಿಯೇಶನ್ನು ಎಂಬ ಭೀತಿ ಹುಟ್ಟಿಕೊಂಡಿರುವುದು.
ನೆಕ್ಸ್ಟ್ ಜೆನ್ ಕಮ್ಯುನಿಕೇಷನ್ ತಂತ್ರಜ್ಞಾನಕ್ಕೆ ಸ್ಯಾಮ್ಸಂಗ್‌ನಿಂದ 6ಜಿ ಫೋರಮ್!
ಎರಡನೆಯ ಸುಧಾರಣೆಯಂದರೆ- ಸದ್ಯಕ್ಕೆ ಬಿಜಿ ಏರಿಯಾಗಳಲ್ಲಿ ಉದಾಹರಣೆಗೆ ಮಾಲ್‌ನಲ್ಲಿ ಕೆಲವೊಮ್ಮೆ ನಿಮಗೆ ನೆಟ್ವರ್ಕ್ ಬಿಜಿ ಎಂದು ಬರುತ್ತದೆ. ಕಾಲ್ ಕಟ್ ಮಾಡಿ ಮರು ಪ್ರಯತ್ನಿಸಿದಾಗ ಕನೆಕ್ಟ್ ಆಗುತ್ತದೆ. ಏನಾಯ್ತು ಎಂದರೆ ಒಂದು ಟವರ್‌ಗೆ ಒಟ್ಟಿಗೆ ಇಷ್ಟುಫೋನಿಗೆ ಕನೆಕ್ಟ್ ಆಗಬಹುದು ಎಂಬ ಮಿತಿಯಿರುತ್ತದೆ. ಆ ಮಿತಿ ಮೀರಿದಾಗ ನೆಟ್ವರ್ಕ್ ಬಿಜಿ ಎಂದು ಬರುತ್ತದೆ. ಇನ್ಯಾರದೋ ಕಾಲ್ ಮುಗಿದಾಗ ಆ ಜಾಗ ನಿಮಗೆ ಸಿಗುತ್ತದೆ. 5ಜಿನಲ್ಲಿ ಈ ಮಿತಿ ನೂರ್ಪಟ್ಟು ಹೆಚ್ಚಲಿದೆ. ಆದ್ದರಿಂದ ಕೇವಲ ಫೋನ್ ಮಾತ್ರವಲ್ಲದೆ ನಿಮ್ಮ ಕಾರು, ವಾಚು, ಲಗೇಜು ಬ್ಯಾಗು- ಯಾವುದೆಲ್ಲ ಇಂಟರ್ನೆಟ್ಟಿಗೆ ಕನೆಕ್ಟ್ ಆಗಲು ಸಾಧ್ಯವಿದೆಯೊ ಅದೆಲ್ಲವೂ ಕನೆಕ್ಟ್ ಆಗುತ್ತವೆ. ನೆಟ್ವರ್ಕ್ ಬಿಜಿ ಎಂಬುದು ಮರೆಯಾಗಲಿದೆ. ಈ ಕಾರಣದಿಂದಲೇ 5ಜಿ ಬಂದರೆ ಇಂಟರ್ನೆಟ್ ಆಫ್ ಥಿಂಗ್‌್ಸ ಎಂಬ ತಂತ್ರಜ್ಞಾನ ಸಹ ಅತಿಯಾಗಿ ಬೆಳೆಯಲಿದೆ. ಕ್ಲೌಡ್ ನಿಮ್ಮ ಮನೆ ಮನೆ ಬಾಗಿಲು ತಲುಪಲಿದೆ. ನಿಮ್ಮ ತೂಕದ ಕಂಪ್ಯೂಟರು, ಲ್ಯಾಪ್‌ಟಾಪು ಹಳೆ ಕಾಲದ ವಸ್ತುಗಳಾಗಲಿವೆ. ಕಂಪ್ಯೂಟರಲ್ಲಿ ಏನೇನು ಕೆಲಸ ಮಾಡುತ್ತಿದ್ದರೋ ಅದೆಲ್ಲ ಕ್ಲೌಡ್‌ನಲ್ಲಿ ಮಾಡಬಹುದಾಗಿದೆ. ಮನೆಯಲ್ಲಿ ಒಂದು ಬ್ರೌಸರು ಓಪನ್ ಮಾಡಬಲ್ಲ ಹಗೂರ ಲ್ಯಾಪ್‌ಟಾಪು ಇದ್ದರೆ ಸಾಕು.
ಮೂರನೆಯ ವ್ಯತ್ಯಾಸ- ಹೈ ಫ್ರೀಕ್ವೆನ್ಸಿ ಬಳಸುವುದರಿಂದ ಈಗಿನ ಕೆಲವಾರು ದೊಡ್ಡ ಟವರುಗಳ ಜೊತೆಗೆ ಹಲವಾರು ಸಣ್ಣ ಟವರು ಬಳಸಬೇಕಾಗುತ್ತದೆ. ಕಾರಣ ಹೈ ಫ್ರೀಕ್ವೆನ್ಸಿ ಅಲೆಗಳು ಲೋ ಫ್ರೀಕ್ವೆನ್ಸಿ ಅಲೆಗಳಷ್ಟುಬಾಗುವುದಿಲ್ಲ. ಹಾಗಾಗಿ ಅವು ಮರ ಗಿಡ ಕಟ್ಟಡ ಗುಡ್ಡ ದಾಟಿ ದೂರದ ದೊಡ್ಡ ಟವರು ಮುಟ್ಟಲಾರವು. ಈ ಸಣ್ಣ ಟವರುಗಳನ್ನು ಟವರು ಅನ್ನುವುದಕ್ಕಿಂತ ಸೆಲ್ಲುಗಳು ಎನ್ನುತ್ತಾರೆ. ಅಲ್ಲಲ್ಲೇ ಒಂದೊಂದು ಕರೆಂಟಿನ ಕಂಬಕ್ಕೆ ಸಿಗಿಸಿದಂತೆ.
ಇನ್ನು ಹೊರಗಿನವರಿಗೆ ಅರ್ಥಮಾಡಿಸಲು ಕಷ್ಟವಿರುವ ಒಂದಷ್ಟುತಂತ್ರಜ್ಞಾನ ಸುಧಾರಣೆಗಳು 5ಜಿನಲ್ಲಿದ್ದಾವೆ. ಆಗಲೇ ಪ್ರೊಟೊಕಾಲು ಎಂದೆನಲ್ಲ ಅದರಲ್ಲಿ ಮಾಡಿಕೊಂಡಿರುವ ಸುಧಾರಣೆಗಳು. ಈ ಸುಧಾರಣೆಗಳಿಂದ ಜನಸಾಮಾನ್ಯರಿಗೆ ಒಂದು ಅನನುಕೂಲವಾಗಲಿದೆ. ಈಗಿನ ಫೋನುಗಳು 5ಜಿ ಸುಧಾರಣೆಗಳಿಗೆ ಅನುಗುಣವಾಗಿ ತಯಾರಿಯಾಗಿಲ್ಲ. ಹಾಗಾಗಿ ನೀವು ಬಹುತೇಕ ಹೊಸ ಫೋನ್ ಕೊಂಡುಕೊಳ್ಳಬೇಕಾದೀತು. ಹೊಸ ಫೋನ್ ಕೊಳ್ಳಲು ಮನಸು ತುಡಿಯುತ್ತಿದ್ದರೆ ಇದಕ್ಕಿಂತ ಒಳ್ಳೆ ಕಾರಣ ಇನ್ನೊಂದಿಲ್ಲ ಅಲ್ಲವೇ!
ಹೊಸ ಹೊಸ ತಂತ್ರಜ್ಞಾನ ಕಂಡುಹಿಡಿಯುವುದಕ್ಕೂ ಅದು ಜನರನ್ನು ತಲುಪುವುದಕ್ಕೂ ಒಂದಷ್ಟುವರುಷಗಳು ಹಿಡಿಯುತ್ತದೆ. ಉದಾಹರಣೆಗೆ ನಾವು ಈಗ ಬಳಸುತ್ತಿರುವ 4ಜಿ ತಂತ್ರಜ್ಞಾನ 2005ನೇ ಇಸವಿಯಲ್ಲಿಯೇ ಮೊಳಕೆಯೊಡೆಯಲಾರಂಭಿಸಿತು. ಅರ್ಥಾತ್ ನಾವಿನ್ನೂ ಆಗ ನೋಕಿಯಾ ಫೋನಿನಲ್ಲಿ ಎಸ್ಸೆಮ್ಮೆಸ್ ಕಳುಹಿಸುತ್ತಿದ್ದ 2ಜಿ ಕಾಲ. ಲವರ್ ಬಾಯ್‌ಗಳು ಒಂದೇ ರಾತ್ರಿಗೆ ನೂರು ಎಸ್ಸೆಮ್ಮೆಸ್ ಖಾಲಿ ಮಾಡಿ ಪರಿತಪಿಸುತ್ತಿರುವಾಗಲೇ ದೂರದಲ್ಲಿ ವಿಜ್ಞಾನಿಗಳು ಮುಂದೊಂದು ದಿನ ಇದೇ ಪ್ರೇಮಿಗಳು ವಿಡಿಯೋ ಕಾಲ್ ಮೂಲಕ ಮುತ್ತು ಕೊಡಲು ಸಾಧ್ಯವಾಗಬಲ್ಲ 4ಜಿ ತಂತ್ರಜ್ಞಾನ ಸಿದ್ಧಪಡಿಸುತ್ತಿದ್ದರು! ಅಂದರೆ ಯೋಚಿಸಿ ಇಂದು ನಾವು 5ಜಿ ಎಂದು ಉತ್ಸುಕರಾಗಿ ಕಾಯುತ್ತಿರಲು ದೂರದಲ್ಲಿ ವಿಜ್ಞಾನಿಗಳು ನಮಗಾಗಿ ಆಗಲೇ ಏನೆಲ್ಲ ಪ್ಲಾನ್ ಮಾಡಿರಬಹುದೆಂದು, 6ಜಿ, 7ಜಿ ಹೆಸರಿನಲ್ಲಿ!