ಎಕ್ಸ್‌ಪ್ರೆಸ್ ವೇ ಆಯ್ತು, ಇದೀಗ ಬೆಂಗಳೂರು, ಮೈಸೂರು ನಡುವೆ 4 ಲೇನ್‌ ರೈಲ್ವೆ ಮಾರ್ಗಕ್ಕೆ ಸಮೀಕ್ಷೆ!

 ಪ್ರಯಾಣಿಕರ ದಟ್ಟಣೆ ನಿವಾರಣೆ, ಸರಕು ಸಾಗಣಿಕೆ ಹೆಚ್ಚಳದ ಉದ್ದೇಶಕ್ಕಾಗಿ ನೈಋತ್ಯ ರೈಲ್ವೆಯು ಬೆಂಗಳೂರು ಸಂಪರ್ಕಿಸುವ ಮಾರ್ಗವೂ ಸೇರಿ ಒಟ್ಟಾರೆ ಹನ್ನೆರಡು ರೈಲ್ವೆ ಮಾರ್ಗಗಳ ಜೋಡಿಹಳಿ ಹಾಗೂ ನಾಲ್ಕು ಹಳಿ ನಿರ್ಮಾಣಕ್ಕೆ ಹೆಜ್ಜೆ ಇಟ್ಟಿದ್ದು, ಅಂತಿಮ ಸ್ಥಳ ಸಮೀಕ್ಷೆಗೆ ಮುಂದಾಗಿದೆ.

Survey for 4 lane railway line between Bangalore, Mysore bengaluru rav

ಬೆಂಗಳೂರು (ಡಿ.12) :  ಪ್ರಯಾಣಿಕರ ದಟ್ಟಣೆ ನಿವಾರಣೆ, ಸರಕು ಸಾಗಣಿಕೆ ಹೆಚ್ಚಳದ ಉದ್ದೇಶಕ್ಕಾಗಿ ನೈಋತ್ಯ ರೈಲ್ವೆಯು ಬೆಂಗಳೂರು ಸಂಪರ್ಕಿಸುವ ಮಾರ್ಗವೂ ಸೇರಿ ಒಟ್ಟಾರೆ ಹನ್ನೆರಡು ರೈಲ್ವೆ ಮಾರ್ಗಗಳ ಜೋಡಿಹಳಿ ಹಾಗೂ ನಾಲ್ಕು ಹಳಿ ನಿರ್ಮಾಣಕ್ಕೆ ಹೆಜ್ಜೆ ಇಟ್ಟಿದ್ದು, ಅಂತಿಮ ಸ್ಥಳ ಸಮೀಕ್ಷೆಗೆ ಮುಂದಾಗಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಿನ ರಸ್ತೆ ಸಾರಿಗೆ ಮೇಲಿನ ಒತ್ತಡ ನಿವಾರಣೆ ದೃಷ್ಟಿಯಿಂದ ಈ ಯೋಜನೆ ಮಹತ್ವ ಪಡೆದಿದೆ. ಅಂತಿಮ ಸ್ಥಳ ಸಮೀಕ್ಷೆ ಬಳಿಕ ಕಾರ್ಯಸಾಧು ನೋಡಿಕೊಂಡು ರೈಲ್ವೆ ಮಂಡಳಿ ಒಪ್ಪಿಗೆ ನೀಡಿದರಷ್ಟೇ ಈ ಯೋಜನೆ ಮುಂದುವರಿಯಲಿದೆ. ಒಟ್ಟಾರೆ ₹38 ಕೋಟಿ ವೆಚ್ಚದಲ್ಲಿ ಹನ್ನೆರಡು ರೈಲುಗಳ ಜೋಡಿಹಳಿ ಹಾಗೂ ನಾಲ್ಕುಹಳಿಗಳನ್ನು ಸಮೀಕ್ಷೆ ಮಾಡಲು ಯೋಜಿಸಲಾಗಿದ್ದು, 24 ತಿಂಗಳಲ್ಲಿ ಸಮೀಕ್ಷೆ ಮುಗಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ನೈಋತ್ಯ ರೈಲ್ವೆ ಉನ್ನತ ಮೂಲಗಳು ತಿಳಿಸಿವೆ.

ಬರ ನಿರ್ವಹಣೆಗೆ ಕೇಂದ್ರ ಸರ್ಕಾರಕ್ಕೆ ಮೂರು ಪತ್ರ ಬರೆದ್ರೂ ಸಹಕರಿಸುತ್ತಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ

ಯಾವ್ಯಾವ ಮಾರ್ಗ?

ಬೆಂಗಳೂರು-ತುಮಕೂರು (70 ಕಿ.ಮೀ.), ಬೆಂಗಳೂರು-ಮೈಸೂರು (137 ಕಿ.ಮೀ.), ಘಟ್ಟ ಪ್ರದೇಶ ಸೇರಿದಂತೆ ಬಂಗಾರಪೇಟೆ-ಜೋಲಾರಪೇಟೈ (72 ಕಿ.ಮೀ.), ಹುಬ್ಬಳ್ಳಿ-ಹೊಸಪೇಟೆ (143 ಕಿ.ಮೀ.) ಹಾಗೂ ಚಾಮರಾಜನಗರ-ಮೈಸೂರು (60 ಕಿ.ಮೀ.) ಮಾರ್ಗವನ್ನು ಜೋಡಿಹಳಿಯಿಂದ ನಾಲ್ಕು ಹಳಿಗೆ ಹೆಚ್ಚಿಸಲು ಆರಂಭಿಕ ಹೆಜ್ಜೆ ಇಡಲಾಗಿದೆ.

ಇನ್ನು ಒಂದೇ ಹಳಿ ಇರುವ ಹೊಸಪೇಟೆ-ವ್ಯಾಸ ಕಾಲೋನಿ (58 ಕಿ.ಮೀ.), ಹಾಸನ-ಕುಣಿಗಲ್‌-ಚಿಕ್ಕಬಾಣಾವರ (166 ಕಿ.ಮೀ.), ಗಿಣಿಗೇರಾ-ರಾಯಚೂರು (166 ಕಿ.ಮೀ.), ವ್ಯಾಸ ಕಾಲೋನಿ-ಕೊಟ್ಟೂರು-ಅಮರಾವತಿ ಕಾಲೋನಿ (196 ಕಿ.ಮೀ.), ಮಾಲ್ಗೂರು -ಮದಕ್ಷಿರ- ಹಿರಿಯೂರು ಹೊಸ ಮಾರ್ಗದ ಡಬ್ಲಿಂಗ್‌ (110 ಕಿ.ಮೀ.) ಹಾಗೂ ಗದಗ-ವಾಡಿ (257 ಕಿ.ಮೀ.) ನಡುವೆ ಜೋಡಿಹಳಿ ರೂಪಿಸಲು ಅಂತಿಮ ಸ್ಥಳ ಸಮೀಕ್ಷೆಗೆ ನೈಋತ್ಯ ರೈಲ್ವೆ ಟೆಂಡರ್‌ ಕರೆದಿದೆ.

ಯಾಕೆ ಅಗತ್ಯ?

ಬೆಂಗಳೂರು-ಮೈಸೂರು ಮಧ್ಯೆ ಸರಕಿಗಿಂತ ಹೆಚ್ಚು ಪ್ರಯಾಣಿಕರ ದಟ್ಟಣೆ ನಿಯಂತ್ರಣ ದೃಷ್ಟಿಯಿಂದ ಜೋಡಿ ಮಾರ್ಗ ಅಗತ್ಯ. ಇದನ್ನು ಮುಂದೆ ಸಬ್‌ಅರ್ಬನ್‌ ರೈಲಿಗೂ ಬಳಸಿಕೊಳ್ಳಬಹುದು. ಅಲ್ಲದೆ ಸರಕು ರೈಲನ್ನು ಒಂದು ಮಾರ್ಗದಲ್ಲಿ ಸಂಚರಿಸಿ, ಪ್ಯಾಸೆಂಜರ್‌ ರೈಲನ್ನು ಎರಡನೇ ಟ್ರ್ಯಾಕ್‌ ಹಾಗೂ 3-4ನೇ ಲೈನ್‌ನಲ್ಲಿ ಎಕ್ಸ್‌ಪ್ರೆಸ್‌, ಸೂಪರ್‌ಫಾಸ್ಟ್‌ ರೈಲುಗಳನ್ನು ಓಡಿಸಲು ಅವಕಾಶ ಸಿಗುತ್ತದೆ.

ಶತಾಬ್ದಿ, ವಂದೇ ಭಾರತ್‌ ರೈಲನ್ನು ನೂತನ ಟ್ರ್ಯಾಕ್‌ಗಳಲ್ಲಿ ಓಡಿಸುವುದರಿಂದ ಹೆಚ್ಚಿನ ಅನುಕೂಲ ಆಗಲಿದೆ. ಬೆಂಗಳೂರು-ತುಮಕೂರು, ಬೆಂಗಳೂರು-ಬಂಗಾರಪೇಟೆ ಮಾರ್ಗದಲ್ಲೂ ನಾಲ್ಕು ಹಳಿ ಅಗತ್ಯವಿದೆ. ಅರ್ಧ, ಮುಕ್ಕಾಲು ಗಂಟೆಗೆ ಈ ಮಾರ್ಗದಲ್ಲಿ ರೈಲು ಸಂಚರಿಸುವಂತಾದರೆ ಮಹಾನಗರ ಬೆಂಗಳೂರಿನ ರಸ್ತೆ ಸಾರಿಗೆ ಮೇಲಿನ ಒತ್ತಡ ನಿವಾರಣೆ ಆಗಲಿದೆ ಎಂದು ರೈಲ್ವೆ ಸಾರಿಗೆ ತಜ್ಞರು ಹೇಳಿದ್ದಾರೆ.

ಹಾಗೆ ನೋಡಿದರೆ, ಗಿಣಿಗೇರಾ-ರಾಯಚೂರು, ಕುಡುಚಿ-ಬಾಗಲಕೋಟೆ, ತುಮಕೂರು-ರಾಯದುರ್ಗ, ತುಮಕೂರು- ಚಿತ್ರದುರ್ಗ ರೈಲ್ವೆ ಮಾರ್ಗ ಯೋಜನೆ ಕಾಮಗಾರಿ ಹಲವು ವರ್ಷದಿಂದ ಕುಂಟುತ್ತಿವೆ. ಇವಕ್ಕೆ ಭೂಸ್ವಾದೀನ ಸಮಸ್ಯೆಗಳು ಕಾಡುತ್ತಿವೆ. ಇತ್ತ ಮೈಸೂರು-ಚಾಮರಾಜನಗರ ಹಾಗೂ ಮೈಸೂರು-ಹಾಸನ- ಅರಸಿಕೆರೆ ಜೋಡಿ ಮಾರ್ಗ ಆಗಬೇಕು. ಅದರಂತೆ ಹಾಸನ- ಮಂಗಳೂರು ಮಾರ್ಗ ಕೂಡ ಡಬ್ಲಿಂಗ್‌ ಆಗಬೇಕು. ಆದರೆ, ಸುಬ್ರಹ್ಮಣ್ಯ ಸಕಲೇಶಪುರದ ಘಟ್ಟಪ್ರದೇಶ ಹಿನ್ನೆಲೆಯಲ್ಲಿ ಭೂಸ್ವಾದೀನ, ಅರಣ್ಯನಾಶದ ಆತಂಕವೂ ಇರುವುದರಿಂದ ಇಲ್ಲಿ ಜೋಡಿಮಾರ್ಗ ನಿರ್ಮಾಣ ಕಷ್ಟ ಎನ್ನುತ್ತಾರೆ ತಜ್ಞರು.

ಸಮೀಕ್ಷೆ

ಜೋಡಿಹಳಿ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂಸ್ವಾದೀನ, ನದಿ ಮೇಲಿನ ಸೇತುವೆಗಳ ನಿರ್ಮಾಣ, ಹೈಟೆನ್ಷನ್‌ ವಿದ್ಯುತ್‌ ಲೈನ್‌ಗಳನ್ನು ಗುರುತಿಸಿಕೊಳ್ಳುವುದು, ತಿರುವುಗಳನ್ನು ಗುರುತಿಸಿಕೊಳ್ಳುವುದು ಸೇರಿ ಹಲವು ವಿಚಾರ ಕಂಡುಕೊಳ್ಳಲು ಅಂತಿಮ ಸ್ಥಳ ಸಮೀಕ್ಷೆ ನಡೆಯಲಿದೆ. ಜೊತೆಗೆ ಪ್ರಯಾಣಿಕರ ಅಗತ್ಯತೆ ಹಾಗೂ ಸರಕು ಸಾಗಣೆ ಪ್ರಮಾಣದಂತಹ ಸಾಧಕ ಬಾಧಕ ತಿಳಿದು ನೈಋತ್ಯ ರೈಲ್ವೆಯು ರೈಲ್ವೆ ಮಂಡಳಿಗೆ ವರದಿ ಸಲ್ಲಿಸಲಿದೆ.

 

ಬೆಂ-ಮೈಸೂರು ಎಕ್ಸ್‌ಪ್ರೆಸ್ ರಸ್ತೆಯಲ್ಲಿ ದಿವ್ಯಾಂಗರ ಐಡಿಗಿಲ್ಲ ಬೆಲೆ; ಟೋಲ್‌ ಸಿಬ್ಬಂದಿ ನಿರ್ಲಕ್ಷ್ಯ!

ಅಂತಿಮ ಸ್ಥಳ ಸಮೀಕ್ಷೆ ಬಳಿಕ ಎಷ್ಟು ಯೋಜನೆ ಕಾಮಗಾರಿ ಹಂತಕ್ಕೆ ತಲುಪುತ್ತದೆ ಎಂಬುದು ಮುಖ್ಯ. ಬೆಂಗಳೂರು-ತುಮಕೂರು ಹಾಗೂ ಬೆಂಗಳೂರು-ಮೈಸೂರು ನಡುವೆ ಜೋಡಿಹಳಿ ನಿರ್ಮಾಣ ತೀರಾ ಅಗತ್ಯವಿದೆ.

-ಕೃಷ್ಣಪ್ರಸಾದ್‌, ರೈಲ್ವೆ ಸಾರಿಗೆ ತಜ್ಞ-

Latest Videos
Follow Us:
Download App:
  • android
  • ios