ಬೆಂಗಳೂರು[ನ.19]: ರಾಜ್ಯದಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಕಾರಣರಾದ ಅಧಿಕಾರಿಗಳಿಗೆ ದಂಡ ವಿಧಿಸುವ ಸಂಬಂಧ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಅದರ ಪ್ರಕಾರ, ನಗರ ಪಾಲಿಕೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿದ ಅಧಿಕಾರಿಗಳಿಗೆ 25 ಸಾವಿರ ರು.ನಿಂದ ಒಂದು ಲಕ್ಷ ರು.ವರೆಗೂ ದಂಡ ವಿಧಿಸುವ ಅವಕಾಶ ಕಲ್ಪಿಸಲಾಗಿದೆ.

ಇದುವರೆಗೆ ತಪ್ಪಿತಸ್ಥ ಅಧಿಕಾರಿಗಳಿಗೆ ದಂಡ ವಿಧಿಸುವ ಯಾವುದೇ ನಿಯಮ ಇರಲಿಲ್ಲ. ಈ ಸಂಬಂಧ ವಕೀಲ ಎಸ್‌.ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ದಂಡ ವಿಧಿಸುವ ಅಧಿಸೂಚನೆ ಹೊರಡಿಸಲೇಬೇಕೆಂದು ಸರ್ಕಾರಕ್ಕೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಸದರಿ ಅಧಿಸೂಚನೆಯನ್ನು ಸರ್ಕಾರಿ ವಕೀಲರು ಸೋಮವಾರ ವಿಚಾರಣೆ ವೇಳೆ ನ್ಯಾಯಾಲಯದ ಗಮನಕ್ಕೆ ತಂದರು.

ಅಕ್ರಮ ಕಟ್ಟಡ ತೆರವು ಮಾಡೋಕೆ ಬಿಬಿಎಂಪಿ ಹತ್ರ ಹಣ ಇಲ್ವಂತೆ..!

ಸರ್ಕಾರದ ಪರ ವಕೀಲ ಪಿ.ಬಿ. ಅಚ್ಚಪ್ಪ ಅವರು, ಪಾಲಿಕೆಗಳು ಹಾಗೂ ಪುರಸಭೆಗಳಿಗೆ ಪ್ರತ್ಯೇಕವಾಗಿ ನ.16ರಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎನ್‌.ಕೆ. ಲಕ್ಷ್ಮೇಸಾಗರ್‌ ಹೊರಡಿಸಿರುವ ಅಂತಿಮ ಅಧಿಸೂಚನೆ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಪಾಲಿಕೆ ಅಧಿಕಾರಿಗಳಿಗೆ ದಂಡ ಹೇಗೆ?:

ಕರ್ನಾಟಕ ಪೌರ ನಿಗಮ ಕಾಯ್ದೆ- 1976ರ ಸೆಕ್ಷನ್‌ 321 (ಬಿ) ಪ್ರಕಾರ, ಪಾಲಿಕೆಗಳ ಹಂತದಲ್ಲಿ ಸಂಬಂಧಪಟ್ಟಅಧಿಕಾರಿಯು ತನ್ನ ಅಧಿಕಾರಾವಧಿ ಮತ್ತು ಅಧಿಕಾರ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ತಡೆಯಲು ವಿಫಲವಾದ ಬಗ್ಗೆ ದೂರು ಬಂದರೆ ಅಥವಾ ಆಯುಕ್ತರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ ಬಳಿಕ ದಂಡ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

ಪಾಲಿಕೆಗಳ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ತಪ್ಪು ಎಸಗಿದ ಅಧಿಕಾರಿಗಳಿಗೆ 25 ಸಾವಿರ ರು.ಗೆ ಕಡಿಮೆ ಇಲ್ಲದಂತೆ ಮತ್ತು 50 ಸಾವಿರ ರು. ಗೆ ಮೀರದಂತೆ ದಂಡ ವಿಧಿಸಬಹುದು. ಎರಡನೇ ತಪ್ಪಿಗೆ 50 ಸಾವಿರ ರು.ಗೆ ಕಡಿಮೆ ಇಲ್ಲದಂತೆ ಮತ್ತು ಒಂದು ಲಕ್ಷ ರು.ಗೆ ಮೀರದಂತೆ ದಂಡ ವಿಧಿಸಬಹುದು. ಮೂರನೇ ಮತ್ತು ಅದರ ನಂತರದ ಪ್ರತಿ ತಪ್ಪಿಗೆ ಆಯುಕ್ತರು ಕಾಯ್ದೆಯ ಸೆಕ್ಷನ್‌ 90ರಡಿ ಶಿಸ್ತು ಕ್ರಮ ಜರುಗಿಸಬಹುದು. ದಂಡ ಪಾವತಿಸಿದ ಅಧಿಕಾರಿಯು ನೀಡಿದ್ದ ಕಟ್ಟಡ ಯೋಜನಾ ಮಂಜೂರಾತಿಗೆ ಅನುಮೋದನೆ ನೀಡುವಂತಿಲ್ಲ. ಸಂತ್ರಸ್ತ ಅಥವಾ ಬಾಧಿತ ಅಧಿಕಾರಿಯು ಸಂಬಂಧಪಟ್ಟಪ್ರಾದೇಶಿಕ ಆಯುಕ್ತರಿಗೆ 30 ದಿನಗಳಲ್ಲಿ ಮನವಿ ಸಲ್ಲಿಸಬೇಕು. ಆ ಅಧಿಕಾರಿಗೆ ಶೋಕಾಸ್‌ ನೋಟಿಸ್‌ ನೀಡಿ ಅವರ ವಾದ ಕೇಳಿ, ಮನವಿ ಸಲ್ಲಿಸಿದ 45 ದಿನಗಳಲ್ಲಿ ಮನವಿಯನ್ನು ಇತ್ಯರ್ಥಪಡಿಸಬೇಕು. ಪ್ರಾದೇಶಿಕ ಆಯುಕ್ತರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ತಿಳಿಸಿದೆ.

ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಅಧಿಕಾರಿಗಳಿಗೆ ದಂಡ

ಪುರಸಭೆ ಅಧಿಕಾರಿಗಳಿಗೆ ಪ್ರತ್ಯೇಕ ದಂಡ:

ಅದೇ ರೀತಿ ಪುರಸಭೆಗೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ ಕರ್ನಾಟಕ ಪೌರಸಭೆಗಳ ಕಾಯ್ದೆ-1964ರ ಸೆಕ್ಷನ್‌ 187 ಬಿ ಪ್ರಕಾರ, ಪುರಸಭೆಗಳ ಹಂತದಲ್ಲಿ ಸಂಬಂಧಪಟ್ಟಅಧಿಕಾರಿಯು ತನ್ನ ಅಧಿಕಾರಾವಧಿ ಮತ್ತು ಅಧಿಕಾರ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ತಡೆಯಲು ವಿಫಲವಾದ ಬಗ್ಗೆ ದೂರು ಬಂದರೆ ಅಥವಾ ಜಿಲ್ಲಾಧಿಕಾರಿ ಇಲ್ಲವೇ ಮುಖ್ಯಾಧಿಕಾರಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ ಬಳಿಕ ದಂಡ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಪುರಸಭೆಗಳ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ತಪ್ಪು ಎಸಗಿದರೆ 10 ಸಾವಿರ ರು.ಗೆ ಕಡಿಮೆ ಇಲ್ಲದಂತೆ ಮತ್ತು 25 ಸಾವಿರ ರು. ಗೆ ಮೀರದಂತೆ ದಂಡ ವಿಧಿಸಬಹುದು. ಎರಡನೇ ತಪ್ಪಿಗೆ 25 ಸಾವಿರ ರು.ಗೆ ಕಡಿಮೆ ಇಲ್ಲದಂತೆ ಮತ್ತು 50 ಸಾವಿರ ರು.ಗೆ ಮೀರದಂತೆ ದಂಡ ವಿಧಿಸಬಹುದು. ಮೂರನೇ ಮತ್ತು ಅದರ ನಂತರದ ಪ್ರತಿ ತಪ್ಪಿಗೆ ಆಯುಕ್ತರು ಕಾಯ್ದೆಯ ಸೆಕ್ಷನ್‌ 342ರಡಿ ಶಿಸ್ತು ಕ್ರಮ ಜರುಗಿಸಬಹುದು. ದಂಡ ಪಾವತಿಸಿದ ಅಧಿಕಾರಿಯು ನೀಡಿದ್ದ ಕಟ್ಟಡ ಯೋಜನಾ ಮಂಜೂರಾತಿಗೆ ಅನುಮೋದನೆ ನೀಡುವಂತಿಲ್ಲ. ಸಂತ್ರಸ್ತ ಅಥವಾ ಬಾಧಿತ ಅಧಿಕಾರಿಯು ಸಂಬಂಧಪಟ್ಟಜಿಲ್ಲಾಧಿಕಾರಿಗೆ 30 ದಿನಗಳಲ್ಲಿ ಮನವಿ ಸಲ್ಲಿಸಬೇಕು. ಆ ಅಧಿಕಾರಿಗೆ ಶೋಕಾಸ್‌ ನೋಟಿಸ್‌ ನೀಡಿ ಅವರ ವಾದ ಕೇಳಿ, ಮನವಿ ಸಲ್ಲಿಸಿದ 45 ದಿನಗಳಲ್ಲಿ ಮನವಿಯನ್ನು ಇತ್ಯರ್ಥಪಡಿಸಬೇಕು. ಜಿಲ್ಲಾಧಿಕಾರಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ವಿಚಾರಣೆ ಮುಂದೂಡಿಕೆ:

ಸರ್ಕಾರಿ ವಕೀಲರು ಈ ಅಧಿಸೂಚನೆ ವಿಚಾರವನ್ನು ನ್ಯಾಯಾಲಯಕ್ಕೆ ಗಮನಕ್ಕೆ ತಂದಾಗ, ಅಧಿಸೂಚನೆ ಹೊರಡಿಸುವಾಗ ಅನುಸರಿಸುವ ಪ್ರಕ್ರಿಯೆಯನ್ನು ಈ ಪ್ರಕರಣದಲ್ಲಿ ಸಮರ್ಪಕವಾಗಿ ಅನುಸರಿಸಲಾಗಿಲ್ಲ ಎಂದು ಅರ್ಜಿದಾರ ಉಮಾಪತಿ ಆಕ್ಷೇಪಿಸಿದರು.

ಸರ್ಕಾರಿ ಅಧಿಕಾರಿಗಳಿಗೆ ವಿಧಿಸುವ ದಂಡಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿರುವ ಬಗ್ಗೆ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಯಾವುದೇ ಮಾಹಿತಿ ಇಲ್ಲ. ಕರಡು ನಿಯಮಗಳ ಅಧಿಸೂಚನೆ ಪ್ರಕಟಗೊಂಡ ಬಗ್ಗೆ ಜನರಿಗೆ ಮಾಹಿತಿಯೂ ಇಲ್ಲ. ಗೆಜೆಟ್‌ನ ಪ್ರತಿಯೊಂದನ್ನು ಕೋರ್ಟ್‌ಗೆ ಸಲ್ಲಿಸಿ ರಾಜ್ಯ ಸರ್ಕಾರವು ನ್ಯಾಯಾಲಯದ ದಾರಿ ತಪ್ಪಿಸುತ್ತಿದೆ. ಕರಡು ನಿಯಮಗಳನ್ನು ಅಧಿಸೂಚನೆ ಬಗ್ಗೆ ಯಾರಿಗೂ ತಿಳಿಯದೇ ಇದ್ದಾಗ, ಅಧಿಸೂಚನೆ ಪ್ರಕಟಿಸಲು ಹೇಗೆ ಸಾಧ್ಯ ಎಂದು ಆಕ್ಷೇಪಿಸಿದರು.

ಆ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕರಡು ನಿಯಮಗಳನ್ನು ಪ್ರಶ್ನಿಸಲು ಅನುಮತಿ ನೀಡಲಾಗುವುದು. ಆ ಕುರಿತು ಮೂಲ ಅರ್ಜಿಯಲ್ಲಿ ಮಾರ್ಪಾಡು ಮಾಡುವಂತೆ ಅರ್ಜಿದಾರರಿಗೆ ಸೂಚಿಸಿತು.

ಅದಕ್ಕೆ ಅರ್ಜಿದಾರರು ಒಪ್ಪಿದ ಹಿನ್ನೆಲೆಯಲ್ಲಿ ಕರಡು ನಿಯಮಗಳನ್ನು ಪ್ರಶ್ನಿಸಿ ಮೂರು ವಾರಗಳಲ್ಲಿ ತಿದ್ದುಪಡಿ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಿತು.

ದಂಡ ಹೇಗೆ, ಎಷ್ಟು?

- ಅಕ್ರಮ ಬಗ್ಗೆ ದೂರು ಬಂದರೆ ಅಥವಾ ಸ್ವಯಂಪ್ರೇರಿಕ ದೂರು ದಾಖಲಿಸಿ ಕ್ರಮಕ್ಕೆ ಸೂಚನೆ

- ನಗರಪಾಲಿಕೆಗಳ ವ್ಯಾಪ್ತಿಯ ಅಧಿಕಾರಿಗಳಿಗೆ 25000 ರು.ನಿಂದ 1 ಲಕ್ಷ ರು.ವರೆಗೂ ದಂಡ

- ಪುರಸಭೆಗಳ ವ್ಯಾಪ್ತಿಯಲ್ಲಾದರೆ 10000 ರು.ನಿಂದ 50000 ರು. ವರೆಗೂ ದಂಡಕ್ಕೆ ಅವಕಾಶ

- 3 ಅಥವಾ ಅದಕ್ಕಿಂತ ಹೆಚ್ಚು ಬಾರಿ ತಪ್ಪು ಮಾಡಿದ ಅಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ಅವಕಾಶ

ಖಾಸಗಿ ಕಟ್ಟಡದಲ್ಲಿ ಸರ್ಕಾರಿ ಹಾಸ್ಟೆಲ್: ದುಪ್ಪಟ್ಟು ಬಾಡಿಗೆ ಕಟ್ಟುತ್ತಿದೆ ಸರ್ಕಾರ!