10KM ಪ್ರಯಾಣಕ್ಕೆ 29 ನಿಮಿಷ, ಜಗತ್ತಿನ ಕಿಕ್ಕಿರಿದ ನಗರಗಳ ಪಟ್ಟಿಯಲ್ಲಿ ಇದು ಬೆಂಗಳೂರಿನ ಸ್ಥಾನ!
2022ರಲ್ಲಿ ಜಗತ್ತಿನ ಅತ್ಯಂತ ಕಿಕ್ಕಿರಿದ ನಗರಗಳ ಪಟ್ಟಿ ಬಿಡುಗಡೆಯಾಗಿದೆ. ಇಂಗ್ಲೆಂಡ್‌ನ ಲಂಡನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರು 2ನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಪ್ರತಿ 10 ಕಿಲೋಮೀಟರ್ ಪ್ರಯಾಣಕ್ಕೆ 29 ನಿಮಿಷ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ನವದೆಹಲಿ (ಫೆ.16): ನೆದರ್ಲೆಂಡ್ಸ್‌ನ ಲೊಕೇಷನ್ ಟೆಕ್ನಾಲಜಿ ಸ್ಪೆಷಲಿಸ್ಟ್ ಸಂಸ್ಥೆ ಟಾಮ್ ಟಾಮ್ ಪ್ರಕಟಿಸಿದ 2022ರ ಜಗತ್ತಿನ ಅತ್ಯಂತ ಕಿಕ್ಕಿರಿದ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರು 2ನೇ ಸ್ಥಾನದ ಕುಖ್ಯಾತಿ ಪಡೆದುಕೊಂಡಿದೆ. ಇಂಗ್ಲೆಂಡ್‌ನ ಲಂಡನ್‌ನ ನಗರ ಅಗ್ರಸ್ಥಾನದಲ್ಲಿದೆ. ಬೆಂಗಳೂರಿನ ಬಿಬಿಎಂಪಿ ವಲಯದಲ್ಲಿ ಇರುವ ಟ್ರಾಫಿಕ್‌ನ ಆಧಾರದಲ್ಲಿ ಟ್ರಾಫಿಕ್ ಇಂಡೆಕ್ಸ್‌ಅನ್ನು ಟಾಮ್ ಟಾಮ್ ಪ್ರಕಟಿಸಿದೆ. ಬೆಂಗಳೂರಿನ ಸಿಬಿಡಿ ಪ್ರದೇಶದಲ್ಲಿ (ಕೇಂದ್ರ ವಾಣಿಜ್ಯ ಜಿಲ್ಲಾ ಪ್ರದೇಶ) ಪ್ರತಿ 10 ಕಿಲೋಮೀಟರ್ ಪ್ರಯಾಣಕ್ಕೆ ಬರೋಬ್ಬರಿ 29 ನಿಮಿಷ 10 ಸೆಕೆಂಡ್‌ಗಳು ಬೇಕಾಗುತ್ತದೆ. ಇನ್ನು ಪೀಕ್ ಹವರ್‌ಗಳಲ್ಲಿ ಬೆಂಗಳೂರು ನಗರದಲ್ಲಿ ಗಂಟೆಗೆ ಗರಿಷ್ಠ 18 ಕಿಲೋಮೀಟರ್ ವೇಗದಲ್ಲಿ ಹೋಗಲು ಮಾತ್ರವೇ ಸಾಧ್ಯವಾಗಲಿದೆ. 2021ರಲ್ಲಿ ಬೆಂಗಳೂರಿನ ಸಿಬಿಡಿ ಪ್ರದೇಶದಲ್ಲಿ ಗಂಟೆಗೆ 14ಕಿ.ಮೀ ವೇಗದಲ್ಲಿ ಹೋಗಬೇಕಾದ ಕಷ್ಟದ ಪರಿಸ್ಥಿತಿ ಇತ್ತು ಎಂದು ಟಾಮ್ ಟಾಮ್ ವರದಿಯಲ್ಲಿ ತಿಳಿಸಿದೆ. ಈ ವರದಿಯ ಪ್ರಕಾರ ಲಂಡನ್ ಜಗತ್ತಿನ ಅತ್ಯಂತ ಕಿಕ್ಕಿರಿದ ನಗರ ಎನಿಸಿಕೊಂಡಿದೆ. ಲಂಡನ್ ನಗರದ ನಿವಾಸಿಗಳು ಪ್ರತಿ 10 ಕಿಲೋಮೀಟರ್ ಪ್ರಯಾಣಕ್ಕೆ 36 ನಿಮಿಷ 20 ಸೆಕೆಂಡ್ ಸಮಯ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.
ಸಿಟಿ ಸೆಂಟರ್ ವಿಭಾಗದಲ್ಲಿ ಐರ್ಲೆಂಡ್ ದೇಶದ ಡುಬ್ಲಿನ್ ನಗರ ಮೂರನೇ ಸ್ಥಾನದಲ್ಲಿದ್ದರೆ, ಜಪಾನ್‌ನ ದೇಶದ ಸ್ಯಾಪ್ಪರೋ ಹಾಗೂ ಇಟಲಿಯ ಮಿಲಾನ್ ನಂತರದ ಸ್ಥಾನಗಳಲ್ಲಿವೆ. ಭಾರತದ ಪುಣೆ ನಗರ ಆರನೇ ಸ್ಥಾನದಲ್ಲಿದ್ದರೆ, ದೆಹಲಿ (34) ಹಾಗೂ ಮುಂಬೈ(47) ನಗರಗಳು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಡುಬ್ಲಿನ್ ನಗರದಲ್ಲಿ ಪ್ರತಿ 10 ಕಿಲೋಮೀಟರ್ ಪ್ರಯಾಣಕ್ಕೆ 28 ನಿಮಿಷ 30 ಸೆಕೆಂಡ್ ಬೇಕಾಗಿದ್ದರೆ, ಸ್ಯಾಪ್ಪರೋದಲ್ಲಿ ಇದೇ ದೂರದ ಪ್ರಯಾಣಕ್ಕೆ 27 ನಿಮಿಷ 40 ಸೆಕೆಂಡ್ ಬೇಕಾಗುತ್ತದೆ, ಮಿಲಾನ್‌ನಲ್ಲಿ 27 ನಿಮಿಷ 30 ಸೆಕೆಂಡ್ ಬೇಕಾಗುತ್ತದೆ ಎಂದು ಹೇಳಲಾಗಿದೆ.
ಇನ್ನು ಮೆಟ್ರೋ ಏರಿಯಾ ವಿಭಾಗದ ಟ್ರಾಫಿಕ್‌ನಲ್ಲಿ ಬೆಂಗಳೂರು ಐದನೇ ಸ್ಥಾನದಲ್ಲಿದೆ. ಕೊಲಂಬಿಯಾದ ಐಷಾರಾಮಿ ನಗರ ಬಗೋಟಾ ಅಗ್ರಸ್ಥಾನದಲ್ಲಿದ್ದರೆ, ಮನಿಲಾ, ಸ್ಯಾಪ್ಪರೋ ಹಾಗೂ ಲಿಮಾ ನಗರಗಳು ನಂತರದ ಸ್ಥಾನಗಳಲ್ಲಿವೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈ 6ನೇ ಸ್ಥಾನದಲ್ಲಿದ್ದರೆ, ನಗೋಯಾ, ಪುಣೆ, ಟೋಕಿಯೋ ಹಾಗೂ ಬುಚಾರೆಸ್ಟ್ ನಂತರದ ಸ್ಥಾನಗಳಲ್ಲಿವೆ. ಮೆಟ್ರೋಪಾಲಿಟಿನ್ ನಗರದ ಟ್ರಾಫಿಕ್‌ಗಳಲ್ಲಿ ಪ್ರತಿ 10 ಕಿಲೋಮೀಟರ್ ಪ್ರಯಾಣಕ್ಕೆ ಬೆಂಗಳೂರಿಗರು 23 ನಿಮಿಷ 40 ಸೆಕೆಂಡ್ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ. ಈ ವೇಳೆ ಅವರ ಸರಾಸರಿ ವೇಗ ಗಂಟೆಗೆ 22 ಕಿಲೋಮೀಟರ್ ಆಗಿರಲಿದೆ.
ಸಿಟಿ ಸೆಂಟರ್ ನಗರ ಪ್ರದೇಶವಾಗಿದ್ದು, ನಗರದ ಅತ್ಯಂತ ಜನನಿಬಿಡ ಭಾಗಗಳನ್ನು ಒಳಗೊಂಡ 5 ಕಿ.ಮೀ ಪ್ರದೇಶದ ದಟ್ಟಣೆಯನ್ನು ಅಳೆಯುತ್ತದೆ. ಮೆಟ್ರೋ ಪ್ರದೇಶವು ಇಡೀ ಪ್ರದೇಶದ ದಟ್ಟಣೆಯನ್ನು ಅಳೆಯುತ್ತದೆ, ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನೂ ಕೂಡ ಸೇರಿಸಿಕೊಳ್ಳುತ್ತದೆ. ಬೆಂಗಳೂರು 2021 ರಲ್ಲಿ 10ನೇ ಅತಿ ಹೆಚ್ಚು ಜನದಟ್ಟಣೆಯ ನಗರವಾಗಿತ್ತು ಮತ್ತು 2020 ರಲ್ಲಿ ಆರನೇ ಸ್ಥಾನದಲ್ಲಿತ್ತು. ಆ ವರ್ಷಗಳಲ್ಲಿ, ನಗರವನ್ನು ಸಿಟಿ ಸೆಂಟರ್ ಮತ್ತು ಮೆಟ್ರೋ ಪ್ರದೇಶಗಳಾಗಿ ವಿಭಜನೆ ಮಾಡಿರಲಿಲ್ಲ.
2022ರ ಅಕ್ಟೋಬರ್ 15 ಕೆಟ್ಟ ದಿನ: ಇನ್ನು ಬೆಂಗಳೂರಿಗರ ಪಾಲಿಗೆ 2022ರ ಅಕ್ಟೋಬರ್ 15ರ ಶನಿವಾರ ಅತ್ಯಂತ ಕೆಟ್ಟ ಟ್ರಾಫಿಕ್ ದಿನ ಎಂದು ಹೇಳಲಾಗಿದೆ. ಅಂದು ಪ್ರತಿ 10 ಕಿಲೋಮೀಟರ್ ಪ್ರಯಾಣಕ್ಕಾಗಿ ಬೆಂಗಳೂರಿಗರು 33 ನಿಮಿಷ 50 ಸೆಕೆಂಡ್ ವ್ಯಯ ಮಾಡಿದ್ದರು. ಆದರೆ, ಕಳೆದ ವರ್ಷ ಬೆಂಗಳೂರಿನಲ್ಲಿ ಸರಾಸರಿ ಪ್ರಯಾಣದ ಸಮಯ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಪ್ರತಿ 10 ಕಿಲೋಮೀಟರ್ ಪ್ರಯಾಣಕ್ಕೆ ಸರಾಸರಿ ಸಮಯ 40 ಸೆಕೆಂಡ್ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ವಾಹನ ಸವಾರರಿಗೆ ಗುಡ್ ನ್ಯೂಸ್: ಟ್ರಾಫಿಕ್ ನಿಯಮ ಉಲ್ಲಂಘನೆ- ಶೇ.50 ದಂಡ ವಿನಾಯಿತಿ ಅವಧಿ ವಿಸ್ತರಣೆ
ಬೆಂಗಳೂರಿಗರು 260 ಗಂಟೆಗಳನ್ನು (10 ದಿನಗಳು) ಡ್ರೈವಿಂಗ್‌ನಲ್ಲಿ ಮತ್ತು 134 ಗಂಟೆಗಳನ್ನು ಟ್ರಾಫಿಕ್ ಸಲುವಾಗಿ ವ್ಯಯ ಮಾಡುತ್ತಿದ್ದಾರೆ. ಇಂಗಾಲ ಹೊರಸೂಸುವಿಕೆಯಲ್ಲಿ (ವಾರ್ಷಿಕ) 1009kg CO2 ಹೊರಸೂಸಲ್ಪಟ್ಟಿದೆ ಮತ್ತು ದಟ್ಟಣೆಯ ಕಾರಣದಿಂದಾಗಿ 275kg ಇಂಗಾಲ ಹೊರಬಿದ್ದಿದೆ. ಶುಕ್ರವಾರದಂದು ಸಂಜೆ 6 ರಿಂದ 7 ಗಂಟೆಯವರೆಗೆ ಕೆಟ್ಟ ಜನದಟ್ಟಣೆಯ ಸಮಯ. 10 ಕಿಮೀ ಚಾಲನೆಗೆ ಸರಾಸರಿ 37 ನಿಮಿಷ 20 ಸೆಕೆಂಡುಗಳಾಗಿದೆ.
Bengaluru: ಐಟಿ-ಬಿಟಿ ಸಿಟಿಯಲ್ಲಿ ಎಮ್ಮೆಗಳ ಟ್ರಾಫಿಕ್ : ಎಮ್ಮೆಗಳ ವಿರುದ್ಧ ದೂರು ನೀಡಿದ ಇಂಜಿನಿಯರ್‌ಗಳು
ಒಂದು ದಿನ ಮನೆಯಿಂದ ಕೆಲಸ ಮಾಡುವುದರಿಂದ (ಶುಕ್ರವಾರ) 52 ಗಂಟೆಗಳ ಸಮಯವನ್ನು ಮತ್ತು ವರ್ಷಕ್ಕೆ 201 ಕೆಜಿ CO2 ಹೊರಸೂಸುವಿಕೆಯನ್ನು ಉಳಿಸಬಹುದು ಎಂದು ವರದಿ ಹೇಳಿದೆ. ಮೂರು ದಿನಗಳ ವರ್ಕ್ ಫ್ರಮ್ ಹೋಮ್‌ನಿಂದ (ಶುಕ್ರವಾರ, ಸೋಮವಾರ, ಗುರುವಾರ) 157 ಗಂಟೆಗಳು ಮತ್ತು 603 ಕೆಜಿ CO2 ಅನ್ನು ಉಳಿಸುತ್ತದೆ. ಬೆಳಗಿನ ದಟ್ಟಣೆಯಲ್ಲಿ, ಬೆಂಗಳೂರಿಗರು ಪ್ರತಿ 10 ಕಿಮೀ ಪ್ರಯಾಣಕ್ಕೆ 15 ನಿಮಿಷಗಳನ್ನು ಮತ್ತು ಸಂಜೆ 10 ಕಿಮೀ ಪ್ರಯಾಣಕ್ಕೆ 20 ನಿಮಿಷಗಳನ್ನು ಕಳೆಯುತ್ತಿದ್ದಾರೆ.