Asianet Suvarna News Asianet Suvarna News

ಬೆಂಗಳೂರು: ಪಾಲಿಕೆಯಿಂದ ತ್ಯಾಜ್ಯ ವಿಲೇವಾರಿಗೆ ಲ್ಯಾಂಡ್‌ ಬ್ಯಾಂಕ್

ಮುಂದಿನ ಎರಡರಿಂದ ಮೂರು ದಶಕಗಳು ರಾಜಧಾನಿ ಬೆಂಗಳೂರಿನಲ್ಲಿ ಉತ್ಪಾದನೆ ಆಗುವ ಘನತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿಗೆ ‘ಲ್ಯಾಂಡ್‌ ಬ್ಯಾಂಕ್‌’ ಸ್ಥಾಪಿಸುವುದಕ್ಕೆ ಬಿಬಿಎಂಪಿ ಇದೀಗ ಮುಂದಾಗಿದೆ. ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ವರ್ಷದಿಂದ ವರ್ಷಕ್ಕೆ ನಗರದ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಗರದಲ್ಲಿ ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣವೂ ಹೆಚ್ಚಾಗುತ್ತಿದೆ.

Land bank for waste disposal by BBMP corporation at bengaluru rav
Author
First Published Oct 30, 2023, 10:48 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಅ.30) :  ಮುಂದಿನ ಎರಡರಿಂದ ಮೂರು ದಶಕಗಳು ರಾಜಧಾನಿ ಬೆಂಗಳೂರಿನಲ್ಲಿ ಉತ್ಪಾದನೆ ಆಗುವ ಘನತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿಗೆ ‘ಲ್ಯಾಂಡ್‌ ಬ್ಯಾಂಕ್‌’ ಸ್ಥಾಪಿಸುವುದಕ್ಕೆ ಬಿಬಿಎಂಪಿ ಇದೀಗ ಮುಂದಾಗಿದೆ. ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ವರ್ಷದಿಂದ ವರ್ಷಕ್ಕೆ ನಗರದ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಗರದಲ್ಲಿ ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣವೂ ಹೆಚ್ಚಾಗುತ್ತಿದೆ.

ಸದ್ಯ ನಗರದಲ್ಲಿ ಉತ್ಪಾದನೆ ಆಗುತ್ತಿರುವ ಕಸದ ಪ್ರಮಾಣ ಸುಮಾರು ಐದು ಸಾವಿರ ಟನ್‌ ತಲುಪಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ನಗರ ಬೆಳವಣಿಗೆ ದೃಷ್ಟಿಯಲ್ಲಿಟ್ಟುಕೊಂಡು ಬಿಬಿಎಂಪಿಯೂ ಘನತ್ಯಾಜ್ಯ ವಿಲೇವಾರಿಗೆ ಲ್ಯಾಂಡ್‌ ಬ್ಯಾಂಕ್‌ ಸ್ಥಾಪಿಸುವುದಕ್ಕೆ ಮುಂದಾಗಿದೆ. ಇನ್ನು ನಗರದ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳು ನಿಗದಿತ ಪ್ರಮಾಣ ಲ್ಯಾಂಡ್‌ ಬ್ಯಾಂಕ್‌ ಇಟ್ಟುಕೊಳ್ಳಬೇಕೆಂದು ಕೇಂದ್ರ ಸರ್ಕಾರದ ಘನತ್ಯಾಜ್ಯ ವಿಲೇವಾರಿ ನಿಯಮ ಕಾಯ್ದೆಯಲ್ಲಿ ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯು ಲ್ಯಾಂಡ್‌ ಬ್ಯಾಂಕ್‌ ಸ್ಥಾಪಿಸುವುದಕ್ಕೆ ನಿರ್ಧರಿಸಿದೆ.

ಬಿಬಿಎಂಪಿ ವ್ಯಾಪ್ತಿಯ ಪಬ್, ಬಾರ್ ಪರಿಶೀಲನೆ; ನಿಯಮ ಪಾಲಿಸದ 5 ಉದ್ದಿಮೆಗಳಿಗೆ ಬೀಗ

ಭೂಮಿಗಾಗಿ ಪತ್ರ:

ಬಿಬಿಎಂಪಿಗೆ ಸುತ್ತಮುತ್ತ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಅನುಕೂಲವಾದ ಭೂಮಿಯ ಲಭ್ಯತೆ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರು, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ರಾಮನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ನಾಲ್ಕು ದಿಕ್ಕಿನಲ್ಲಿ ಭೂಮಿ ಮೀಸಲು?

ಬಿಬಿಎಂಪಿ 800 ಚದರ ಕಿಲೋ ಮೀಟರ್‌ ವ್ಯಾಪ್ತಿ ಹೊಂದಿದೆ. ಸದ್ಯ ಬೆಂಗಳೂರಿನಲ್ಲಿ ಉತ್ಪಾದನೆ ಆಗುತ್ತಿರುವ ತ್ಯಾಜ್ಯವನ್ನು ನಗರದ ಉತ್ತರ ದಿಕ್ಕಿನಲ್ಲಿರುವ ಮಿಟಗಾನಹಳ್ಳಿಯ ಭೂಭರ್ತಿ ಕ್ವಾರಿಗೆ ಸಾಗಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ನಗರದ ಬೆಳೆದಂತೆ ಮುಂದಿನ ದಿನಗಳಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕಸ ಸಾಗಿಸುವುದು ಇನ್ನಷ್ಟು ದುಸ್ತರವಾಗಲಿದೆ. ಹಾಗಾಗಿ, ನಗರದ ನಾಲ್ಕು ದಿಕ್ಕುಗಳಲ್ಲಿಯೂ ಲ್ಯಾಂಡ್‌ ಬ್ಯಾಂಕ್‌ ಸ್ಥಾಪಿಸುವುದಕ್ಕೆ ನಿರ್ಧರಿಸಲಾಗಿದೆ.

ಬಾಕ್ಸ್...

52 ಎಕರೆ ಮಂಜೂರು

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಪೈಕಿ ಈಗಾಗಲೇ ಬೆಂಗಳೂರು ನಗರ ಜಿಲ್ಲಾಡಳಿತವೂ ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿಗೆ ಒಟ್ಟು 52 ಎಕರೆ ಜಾಗವನ್ನು ಕಾಯ್ದಿರಿಸುವಂತೆ ಸಂಬಂಧಪಟ್ಟ ತಹಸೀಲ್ದಾರ್‌ಗೆ ನಿರ್ದೇಶಿಸಿದೆ.

ಕಾಯ್ದಿರಿಸಿದ ಮೂರು ಜಾಗಗಳು ಆನೇಕಲ್‌ ತಾಲೂಕಿನ ಜಿಗಣಿ ಹೋಬಳಿ ವ್ಯಾಪ್ತಿಗೆ ಸೇರಿವೆ. ಹುಲಿಮಂಗಲ ಗ್ರಾಮದಲ್ಲಿ 16.06 ಎಕರೆ, ಮಹಾಂತಲಿಂಗಾಪುರದಲ್ಲಿ 18.34 ಎಕರೆ ಹಾಗೂ ಎಸ್. ಬಿಂಗೀಪುರದಲ್ಲಿ 7 ಎಕರೆ ಕಾಯ್ದಿಸಲಾಗಿದೆ. ಈ ಎಲ್ಲಾ ಜಾಗಗಳು ಕಲ್ಲು ಗಣಿಗಾರಿಕೆಯ ಕ್ವಾರಿಗಳಾಗಿವೆ. ಇದೀಗ ಅನುಪಯುಕ್ತವಾಗಿವೆ.

ಉಪನಗರ ರೈಲು ಯೋಜನೆಗೆ ವೃಕ್ಷಗಳ ಮಾರಣಹೋಮ: 2000ಕ್ಕೂ ಹೆಚ್ಚಿನ ಮರಗಳನ್ನ ಕತ್ತರಿಸಲು K-RIDE ಪ್ರಸ್ತಾಪ

ಬಿಬಿಎಂಪಿಗೆ ಷರತ್ತಿನ ಮೇಲೆ ಭೂಮಿ

ಬಿಬಿಎಂಪಿಯು ಪ್ರಸ್ತಾವಿಸಿದಂತೆ ಜಮೀನನ್ನು ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವುದಕ್ಕೆ ಅಲ್ಲದೇ ಇನ್ನಾವುದೇ ಬೇರೆ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ. ಜಮೀನಿನಲ್ಲಿ ವಿನಾಷಕಾರಿ ಕಾಮಗಾರಿ ನಡೆಸುವಂತಿಲ್ಲ. ಈ ಜಮೀನು ಒತ್ತುವರಿ ಆಗದಂತೆ ತಂತಿ ಬೇಲಿ ಹಾಕಿಕೊಂಡು ಸಂರಕ್ಷಣೆ ಮಾಡುವ ಜವಾಬ್ದಾರಿ ಬಿಬಿಎಂಪಿಯ ಅಧಿಕಾರಿಗಳದ್ದಾಗಿರುತ್ತದೆ ಎಂಬ ಷರತ್ತುಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಧಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿಗೆ ಜಾಗ ನೀಡುವಂತೆ ಬಿಬಿಎಂಪಿಯು ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಈಗಾಗಲೇ 52 ಎಕೆರೆ ಜಮೀನನ್ನು ಕಾಯ್ದಿರಿಸಿ ಆದೇಶಿಸಲಾಗಿದೆ.

-ಕೆ.ದಯಾನಂದ್‌, ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ

ಘನತ್ಯಾಜ್ಯ ವಿಲೇವಾರಿ ಕಾಯ್ದೆಗೆ ಅನುಗುಣವಾಗಿ ಲ್ಯಾಂಡ್‌ ಬ್ಯಾಂಕ್‌ ಸ್ಥಾಪಿಸಲಾಗುತ್ತಿದೆ. ಈಗಾಗಲೇ ಕಸ ಹಾಕಿರುವ ಜಾಗಗಳನ್ನು ಮತ್ತೆ ಕಸ ವಿಲೇವಾರಿಗೆ ಬಳಕೆ ಮಾಡುವುದಕ್ಕೆ ಸುತ್ತಮುತ್ತಲಿನ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಭೂಮಿ ಪಡೆಯಲಾಗುತ್ತಿದೆ.

-ಡಾ। ಹರೀಶ್‌ ಕುಮಾರ್‌, ವಿಶೇಷ ಆಯುಕ್ತ, ಬಿಬಿಎಂಪಿ ಘನತ್ಯಾಜ್ಯ ವಿಭಾಗ

Follow Us:
Download App:
  • android
  • ios