ಹುಲಿ ಸಂಖ್ಯೆಯಲ್ಲಿ ಮತ್ತೆ ಕರ್ನಾಟಕಕ್ಕೆ ನಂ.1 ಪಟ್ಟ?

ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಅಂದಾಜು ಶೇ.18-20 ರಷ್ಟುಹೆಚ್ಚಳವಾಗಿದ್ದು, ಒಟ್ಟಾರೆ ಸಂಖ್ಯೆ 630ಕ್ಕೆ ಏರಿಕೆಯಾಗಿರುವ ಸಾಧ್ಯತೆಗಳಿವೆ. ಮೊದಲ ಸ್ಥಾನದಲ್ಲಿರುವ ಮಧ್ಯಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಹುಲಿಗಳ ಸಾವು ಕಡಿಮೆ ಇದೆ. 

Karnataka State Again Become Number 1 In Tiger Population gvd

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು (ಜು.29): ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಅಂದಾಜು ಶೇ.18-20 ರಷ್ಟುಹೆಚ್ಚಳವಾಗಿದ್ದು, ಒಟ್ಟಾರೆ ಸಂಖ್ಯೆ 630ಕ್ಕೆ ಏರಿಕೆಯಾಗಿರುವ ಸಾಧ್ಯತೆಗಳಿವೆ. ಮೊದಲ ಸ್ಥಾನದಲ್ಲಿರುವ ಮಧ್ಯಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಹುಲಿಗಳ ಸಾವು ಕಡಿಮೆ ಇದೆ. ಹೀಗಾಗಿ 2022ರ ಹುಲಿ ಗಣತಿಯಲ್ಲಿ ಕರ್ನಾಟಕ ಮತ್ತೆ ಮೊದಲ ಸ್ಥಾನಕ್ಕೇರಿ ‘ಹುಲಿಗಳ ರಾಜಧಾನಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ತಜ್ಞರು ವಿಶ್ವಾಸ ಹೊಂದಿದ್ದಾರೆ.

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ದೇಶಾದ್ಯಂತ ಹುಲಿಗಳ ಗಣತಿ ನಡೆಸುತ್ತದೆ. 2010ರ ಗಣತಿಯಲ್ಲಿ ರಾಜ್ಯದಲ್ಲಿ 308 ಹುಲಿಗಳು ಮತ್ತು 2014ರ ಗಣತಿಯಲ್ಲಿ 406 ಹುಲಿಗಳು ಪತ್ತೆಯಾಗಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿತ್ತು. ಆದರೆ, 2018ರ ಗಣತಿಯಲ್ಲಿ ಕರ್ನಾಟಕದಲ್ಲಿ 524, ಮಧ್ಯಪ್ರದೇಶದಲ್ಲಿ 526 ಹುಲಿಗಳು ಪತ್ತೆಯಾಗಿದ್ದು, ಕೇವಲ ಎರಡು ಹುಲಿಗಳ ಅಂತರದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ ಕೈತಪ್ಪಿತ್ತು.

10 ವರ್ಷದಲ್ಲಿ ದೇಶದಲ್ಲಿ 1 ಸಾವಿರಕ್ಕೂ ಹೆಚ್ಚು ಹುಲಿಗಳ ಸಾವು..!

‘ಕರ್ನಾಟಕದಲ್ಲಿ 36 ಲಕ್ಷ ಹೆಕ್ಟೆರ್‌ ಅರಣ್ಯ ಪ್ರದೇಶವಿದ್ದು, ಬಂಡೀಪುರ, ನಾಗರಹೊಳೆ, ಕಾಳಿ, ಭದ್ರಾ, ಬಿಳಿಗಿರಿರಂಗನಬೆಟ್ಟಸೇರಿ ಐದು ಹುಲಿ ಸಂರಕ್ಷಿತ ಪ್ರದೇಶಗಳಿವೆ. ಬಂಡೀಪುರ, ನಾಗರಹೊಳೆ, ಭದ್ರಾದಲ್ಲಿ ಹುಲಿಗಳ ಸಂತತಿ ಹೆಚ್ಚಳಕ್ಕೆ ಕ್ರಮವಹಿಸಿದ್ದು ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕಲ್ಲಿ ಶೇ.18-20 ರಷ್ಟು(100ಕ್ಕೂ ಅಧಿಕ ಹುಲಿಗಳು) ಹೆಚ್ಚಳವಾಗಿವೆ. ಒಟ್ಟಾರೆ ಹುಲಿಗಳ ಸಂಖ್ಯೆ 630ಕ್ಕೂ ಅಧಿಕವಾಗಲಿದೆ ಎಂದು ನಿವೃತ್ತ ಪ್ರಧಾನ ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿ ಸಂಜಯ್‌ ಮೋಹನ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಮಧ್ಯಪ್ರದೇಶದಲ್ಲಿ ಹೆಚ್ಚು ಸಾವು: ಕಳೆದ ವಾರ ಬಿಡುಗಡೆಯಾದ ಪ್ರಸಕ್ತ ವರ್ಷದ ಎನ್‌ಟಿಸಿಎ ವರದಿಯಂತೆ ಮಧ್ಯಪ್ರದೇಶದಲ್ಲಿಯೇ ದೇಶದಲ್ಲಿ ಅತಿ ಹೆಚ್ಚು 27 ಹುಲಿಗಳು ಸಾವಿಗೀಡಾಗಿವೆ. ಕರ್ನಾಟದಲ್ಲಿ 15 ಹುಲಿಗಳು ಮೃತಪಟ್ಟಿವೆ. ಅಲ್ಲದೆ, 2021ರಲ್ಲಿ ಮಧ್ಯಪ್ರದೇಶಲ್ಲಿ 42, ಕರ್ನಾಟಕದಲ್ಲಿ 15 ಹುಲಿಗಳು ಪಾಣಬಿಟ್ಟಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಮೊದಲ ಸ್ಥಾನಕ್ಕೇರುವ ಸಾಧ್ಯತೆ ಇದೆ.

21 ಲಕ್ಷ ಪೋಟೊ ಸೆರೆ: ಎನ್‌ಟಿಸಿಎ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ಸ್ಥಳೀಯ ಅರಣ್ಯಾಧಿಕಾರಿಗಳ ಸಹಕಾರದಲ್ಲಿ ಕ್ಯಾಮರಾ ಟ್ರ್ಯಾಪ್‌ ಮೂಲಕ ಹುಲಿಗಳ ಮೌಲ್ಯಮಾಪನ ಮಾಡುತ್ತದೆ. 2018ರ ಗಣತಿ ವೇಳೆ ಕರ್ನಾಟಕದಲ್ಲಿ ಕ್ಯಾಮೆರಾಗಳ ಬಳಕೆ ಸಂಖ್ಯೆ ಕಡಿಮೆ ಇತ್ತು. ಆದರೆ, ಈ ಬಾರಿ ನಾಗರಹೊಳೆ, ಕಾಳಿ, ಭದ್ರಾ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಾವಿರಾರು ಕ್ಯಾಮೆರಾ ಬಳಿಸಿ 21 ಲಕ್ಷಕ್ಕೂ ಅಧಿಕ ಚಿತ್ರಗಳನ್ನು ಸೆರೆಹಿಡಿಯಲಾಗಿದ್ದು, ಡಾಟಾ ವಿಶ್ಲೇಷಣೆಗೆ ಕಳುಹಿಸಿಕೊಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

10 ವರ್ಷಗಳಲ್ಲಿ ದುಪ್ಪಟ್ಟು ಹುಲಿ: 2010ರಲ್ಲಿ ನಡೆದ ಹುಲಿ ಗಣತಿಯಲ್ಲಿ ರಾಜ್ಯದಲ್ಲಿ 300 ಹುಲಿಗಳಿದ್ದವು. ಸದ್ಯ ಅವುಗಳ ಸಂಖ್ಯೆ 600 ಗಡಿದಾಟಿದೆ ಎನ್ನಲಾಗುತ್ತಿದೆ. ಒಂದೇ ದಶಕದಲ್ಲಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ದುಪ್ಪಟ್ಟಾದಂತಾಗಿದೆ.

ರಾಜ್ಯದಲ್ಲಿ ಹುಲಿಗಳು
ಗಣತಿ ವರ್ಷ ಹುಲಿಗಳು

2010 300
2014 406
2018 524
2022     630 (ಅಂದಾಜು)

25ನೇ ವರ್ಷದಲ್ಲಿ ಅಸುನೀಗಿದ ವಿಶ್ವದ ಅತ್ಯಂತ ಹಿರಿಯ ಹುಲಿ!

ಕರ್ನಾಟಕದಲ್ಲಿ ಶೇ.18-20 ರಷ್ಟುಹುಲಿ ಸಂತತಿ ಹೆಚ್ಚಿದೆ. ಹೆಚ್ಚು ತಾಂತ್ರಿಕವಾಗಿ ಗಣತಿ ನಡೆಸಲಾಗಿದೆ. ಈ ಬಾರಿ ಹುಲಿ ಗಣತಿಯಲ್ಲಿ ಮೊದಲ ಸ್ಥಾನಕ್ಕೇರುವ ವಿಶ್ವಾಸವಿದೆ.
- ಸಂಜಯ್‌ ಮೋಹನ್‌, ನಿವೃತ್ತ ಪ್ರಧಾನ ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿ

Latest Videos
Follow Us:
Download App:
  • android
  • ios