Mangaluru: ಸೌರ ಗ್ರಾಮವಾದ ಆರ್ಯಾಪು, ವಿದ್ಯುತ್‌ ಬಿಲ್‌ ಭಾರೀ ಉಳಿಕೆ!

ರಾಜ್ಯದ ಅನೇಕ ಗ್ರಾಪಂಗಳು ವಿದ್ಯುತ್‌ ಬಿಲ್‌ ಕಟ್ಟಲು ಸಾಧ್ಯವಾಗದೆ ಕೋಟ್ಯಂತರ ರುಪಾಯಿ ಬಾಕಿ ಉಳಿಸಿಕೊಂಡಿರುವಾಗ ಪುತೂರು ತಾಲೂಕಿನ ಆರ್ಯಾಪು ಗ್ರಾಪಂ ಮಾತ್ರ ಸೌರಶಕ್ತಿ ಬಳಕೆ ಮೂಲಕ ಸಾಂಪ್ರದಾಯಿಕ ವಿದ್ಯುತ್‌ ಬಳಕೆಯಲ್ಲಿ ಸಂಪೂರ್ಣ ಸ್ವಾವಲಂಬಿಯಾಗುವ ಹಾದಿಯಲ್ಲಿದೆ. 

Huge Electricity bill savings from Aryapu a solar village at mangaluru gvd

ಸಂದೀಪ್‌ ವಾಗ್ಲೆ

ಮಂಗಳೂರು (ಡಿ.10): ರಾಜ್ಯದ ಅನೇಕ ಗ್ರಾಪಂಗಳು ವಿದ್ಯುತ್‌ ಬಿಲ್‌ ಕಟ್ಟಲು ಸಾಧ್ಯವಾಗದೆ ಕೋಟ್ಯಂತರ ರುಪಾಯಿ ಬಾಕಿ ಉಳಿಸಿಕೊಂಡಿರುವಾಗ ಪುತೂರು ತಾಲೂಕಿನ ಆರ್ಯಾಪು ಗ್ರಾಪಂ ಮಾತ್ರ ಸೌರಶಕ್ತಿ ಬಳಕೆ ಮೂಲಕ ಸಾಂಪ್ರದಾಯಿಕ ವಿದ್ಯುತ್‌ ಬಳಕೆಯಲ್ಲಿ ಸಂಪೂರ್ಣ ಸ್ವಾವಲಂಬಿಯಾಗುವ ಹಾದಿಯಲ್ಲಿದೆ. ಇದೀಗ ಆರಂಭಿಕ ಹಂತದಲ್ಲಿ ತಿಂಗಳಿಗೆ ಏನಿಲ್ಲವೆಂದರೂ 50 ಸಾವಿರಗೂ ಅಧಿಕ ವಿದ್ಯುತ್‌ ಬಿಲ್‌ನ್ನು ಆರ್ಯಾಪು ಗ್ರಾಪಂ ಉಳಿತಾಯ ಮಾಡುತ್ತಿದೆ.

ಗ್ರಾಪಂ ವ್ಯಾಪ್ತಿಯ 165ರಷ್ಟು ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಸೌರಶಕ್ತಿ ಚಾಲಿತ ಪಂಪ್‌ಸೆಟ್‌ ಅಳವಡಿಸಲಾಗಿದೆ. ಗ್ರಾಪಂ ಕಟ್ಟಡ ಸೌರ ವಿದ್ಯುತ್‌ನಿಂದ ನಡೆಯುತ್ತಿದೆ. ಬೀದಿ ದೀಪಗಳು ಸೌರಶಕ್ತಿಯಿಂದ ಉರಿಯುತ್ತಿವೆ. ವಿಶೇಷವಾಗಿ ಸರ್ಕಾರಿ ಶಾಲೆಯೊಂದರಲ್ಲಿ ಸೌರಶಕ್ತಿ ಚಾಲಿತ ಸ್ಮಾರ್ಟ್‌ ತರಗತಿಯನ್ನೂ ಸ್ಥಾಪಿಸಲಾಗಿದೆ. ಈ ಬದಲಾವಣೆಯ ರೂವಾರಿ ಆರ್ಯಾಪು ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಯಾಗಿದ್ದ ನಾಗೇಶ್‌ ಎಂ, ಇತ್ತೀಚೆಗಷ್ಟೇ ಅವರಿಗೆ ವೇಣೂರಿಗೆ ವರ್ಗಾವಣೆಯಾಗಿದೆ.

ಅರಣ್ಯ ಸಿಬ್ಬಂದಿಗೆ ವನ್ಯಜೀವಿ ನಿರ್ವಹಣೆ ತರಬೇತಿಯೇ ಇಲ್ಲ

165 ಮನೆಗಳಿಗೆ ಸೋಲಾರ್‌ ನೀರು: ನಾಗೇಶ್‌ ಅವರು 2020ರಲ್ಲಿ ಮಡಂತ್ಯಾರು ಗ್ರಾಪಂನಲ್ಲಿ ಪಿಡಿಒ ಆಗಿದ್ದಾಗ ಸೌರಶಕ್ತಿ ಪಂಪ್‌ ಮೂಲಕ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಆರಂಭಿಸಿ ಯಶಸ್ವಿಯಾಗಿದ್ದರು. ಗ್ರಾಪಂವೊಂದು ಈ ಪ್ರಯೋಗ ಮಾಡಿದ್ದು ರಾಜ್ಯದಲ್ಲೇ ಮೊದಲು. ಬಳಿಕ ಈ ಕಾರ್ಯವನ್ನು ಆರ್ಯಾಪು ಗ್ರಾಮದಲ್ಲಿ ಮುಂದುವರಿಸಿದ್ದಾರೆ. ಆರ್ಯಾಪು ಗ್ರಾಪಂಗೆ ವರ್ಗಾವಣೆಯಾಗಿ ಬಂದ ನಂತರ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದ್ದ ಕೊಲ್ಯ ಪ್ರದೇಶದ 85 ಮನೆಗಳಿಗೆ 14ನೇ ಹಣಕಾಸು ಯೋಜನೆಯ ಉಳಿಕೆ ಅನುದಾನದಲ್ಲಿ ಸೋಲಾರ್‌ ಪಂಪ್‌ ಅಳವಡಿಸಿ ಯಶಸ್ವಿಯಾದರು. 

ನಂತರ ಕಲ್ಲರ್ಪೆ ಎಂಬಲ್ಲಿ ಸೆಪ್ಟೆಂಬರ್‌ನಲ್ಲಿ 82 ಮನೆಗಳಿಗೆ ಸೋಲಾರ್‌ ಪಂಪ್‌ ಅಳವಡಿಸಿದ್ದು, ಅದೂ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಮುಂದಿನ ಹಂತದಲ್ಲಿ ಕುರಿಯ ಗ್ರಾಮದ ಅಜಲಾಡಿ ಎಂಬಲ್ಲೂ ಸೌರಶಕ್ತಿ ವ್ಯವಸ್ಥೆಗೆ ಯೋಜನೆ ರೂಪಿಸಿಟ್ಟಿದ್ದಾರೆ. ಸೌರಶಕ್ತಿ ಪಂಪ್‌ಸೆಟ್‌ ವ್ಯವಸ್ಥೆ ಆರಂಭಿಸುವ ಮೊದಲು ಕೊಲ್ಯ ಮತ್ತು ಕಲ್ಲರ್ಪೆ ಎರಡೂ ಕಡೆ ತಿಂಗಳಿಗೆ ತಲಾ 18-20 ಸಾವಿರಗಳಷ್ಟುವಿದ್ಯುತ್‌ ಬಿಲ್‌ ಬರುತ್ತಿತ್ತು. ಇದೀಗ 500ಗಳಷ್ಟುಕನಿಷ್ಠ ವಿದ್ಯುತ್‌ ಬಿಲ್‌ ಮಾತ್ರ ಬರುತ್ತಿದೆ.

ಸೌರಶಕ್ತಿ ಸ್ಮಾರ್ಟ್‌ ಕ್ಲಾಸ್‌: ಆರ್ಯಾಪು ಗ್ರಾಪಂ ವ್ಯಾಪ್ತಿಯ ಸಂಟ್ಯಾರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೌರಶಕ್ತಿ ಚಾಲಿತ ಸ್ಮಾರ್ಟ್‌ ಕ್ಲಾಸ್‌ ರೂಂ ಅಳವಡಿಸಲಾಗಿದೆ. ಸೆಲ್ಕೊ ಕಂಪೆನಿಯ ಸಿಎಸ್‌ಆರ್‌ ನಿಧಿಯಡಿ ಇದನ್ನು ಸ್ಥಾಪಿಸಲಾಗಿದೆ. ಇದರಲ್ಲಿರುವ ಎಲ್ಲ ಉಪಕರಣಗಳು ಸೌರವಿದ್ಯುತ್‌ನಿಂದ ಕಾರ್ಯಾಚರಿಸುತ್ತಿವೆ. ಅಲ್ಲದೆ, ಗ್ರಾಪಂ ಕಟ್ಟಡದ ವಿದ್ಯುತ್‌ ಬೇಡಿಕೆಗೆ ಸೋಲಾರ್‌ ಚಾವಣಿ ಫಲಕಗಳನ್ನು ಅಳವಡಿಸಲಾಗಿದೆ. ಬೀದಿ ದೀಪ ಸರಿಯಾದ ಸಮಯದಲ್ಲಿ ಉರಿಯುವಂತೆ ಮಾಡಲು ಟೈಮರ್‌ ಅಳವಡಿಸಲಾಗಿದೆ. ಈ ಎಲ್ಲ ಉಪಕ್ರಮಗಳಿಂದ ಆರ್ಯಾಪು ಗ್ರಾಪಂ ಇದೀಗ ತಿಂಗಳಿಗೆ 50 ಸಾವಿರಗೂ ಅಧಿಕ ವಿದ್ಯುತ್‌ ಬಿಲ್‌ ಉಳಿತಾಯ ಮಾಡುತ್ತಿದೆ.

ಅನಿರುದ್ಧ್‌ ಬ್ಯಾನ್‌ಗೆ ಆಗ್ರಹ: ಇಂದು ಫಿಲಂ ಚೇಂಬರ್ ಸಭೆ

ಜೆಜೆಎಂನಲ್ಲಿ ಸೋಲಾರ್‌ ಪಂಪ್‌ಗೆ ವಿಶೇಷ ಅನುಮತಿ: ಪ್ರಸ್ತುತ ಆರ್ಯಾಪು ಗ್ರಾಮದಲ್ಲಿ 27 ಕುಡಿಯುವ ನೀರಿನ ಸ್ಥಾವರಗಳಿವೆ. ಇದರಲ್ಲಿ 2 ಸ್ಥಾವರಗಳು ಈಗಾಗಲೇ ಸೌರ ವಿದ್ಯುತ್‌ನಿಂದ ಕಾರ್ಯಾಚರಿಸುತ್ತಿವೆ. ಇದೇ ಮೊದಲ ಬಾರಿಗೆ ಜಲ ಜೀವನ್‌ ಮಿಷನ್‌ ಅಡಿ 8 ಸ್ಥಾವರಗಳಿಗೆ ಸೋಲಾರ್‌ ಪಂಪ್‌ಸೆಟ್‌ ಅಳವಡಿಸಲು ಆರ್ಯಾಪು ಗ್ರಾಪಂಗೆ ಸರ್ಕಾರದಿಂದ ವಿಶೇಷ ಅನುಮತಿ ದೊರೆತಿದೆ. ಪ್ರತಿಯೊಂದು ಗ್ರಾಪಂನಲ್ಲಿ ಇಂಥ ಕಾರ್ಯ ಸಾಧ್ಯವಾದರೆ ಭಾರೀ ವಿದ್ಯುತ್‌ ಬಿಲ್‌ ಹೊರೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

Latest Videos
Follow Us:
Download App:
  • android
  • ios