ನಮ್ಮ ಮೆಟ್ರೋ ಮತ್ತು ಸರ್ಕಾರಿ ಬಸ್‌ ದರ ಏರಿಕೆಗೆ ಗ್ರೀನ್‌ಪೀಸ್ ಇಂಡಿಯಾ ಖಂಡನೆ

ಬೆಂಗಳೂರು ಮೆಟ್ರೋ ದರ ಏರಿಕೆ ಪ್ರಸ್ತಾಪವನ್ನು ಗ್ರೀನ್‌ಪೀಸ್ ಇಂಡಿಯಾ ವಿರೋಧಿಸಿದೆ. ಸಾರ್ವಜನಿಕ ಸಾರಿಗೆಯನ್ನು ಕೈಗೆಟುಕುವಂತೆ ಇಡುವಂತೆ ಮತ್ತು ಸರ್ಕಾರದಿಂದ ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಅವರು ಒತ್ತಾಯಿಸಿದ್ದಾರೆ.

Greenpeace India condemns namma metro and government bus fare hike

ಬೆಂಗಳೂರು (ಜ.15): ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆಯು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪ್ರಸ್ತಾಪಿಸಿರುವ  ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯ ಪ್ರಸ್ತಾಪವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿದೆ. ಗ್ರೀನ್‌ಪೀಸ್ ಇಂಡಿಯಾವು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮತ್ತು ಕರ್ನಾಟಕ ಸಾರಿಗೆ ಇಲಾಖೆಗೆ ರಾಜ್ಯದಲ್ಲಿ ಸಾರಿಗೆದರ ಏರಿಕೆಯ ಕುರಿತಂತೆ ಪತ್ರ ಬರೆದಿದ್ದು, ನಮ್ಮ ಮೆಟ್ರೋ ಮತ್ತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಬಸ್ಸುಗಳಲ್ಲಿ ಪ್ರಸ್ತಾವಿತ ಪ್ರಯಾಣ ದರ ಹೆಚ್ಚಳವನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.

ಮೆಟ್ರೋ ರೈಲು ನಿಗಮವು ಪ್ರಸ್ತುತ ಪ್ರಯಾಣದರದಲ್ಲಿ ಶೇಕಡಾ 40 ರಿಂದ 45 ರಷ್ಟು  ಹೆಚ್ಚಳವನ್ನು ಪ್ರಸ್ತಾಪಿಸಿದೆ.  ಈ ಪ್ರಸ್ತಾಪವು ಜಾರಿಯಾದರೆ ಕನಿಷ್ಠ ದರವನ್ನು ₹15 ಕ್ಕೆ ಮತ್ತು ಗರಿಷ್ಠ ದರವನ್ನು ₹85 ಕ್ಕೆ ಹೆಚ್ಚಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಗ್ರೀನ್‌ಪೀಸ್‌ ಇಂಡಿಯಾವು ಜನವರಿ 5, 2025 ರಿಂದ ರಾಜ್ಯದಲ್ಲಿ ಜಾರಿಯಾಗಿರುವ 15  ಶೇಕಡಾ ಬಸ್ಸು ದರ ಏರಿಕೆಯನ್ನೂ ಹಿಂಪಡೆಯಲು ಆಗ್ರಹಿಸಿದೆ.

ಬಿಎಂಟಿಸಿ ಬಸ್ ಪಾಸ್ ದರ ಏರಿಕೆ; ಪರಿಷ್ಕೃತ ದರಪಟ್ಟಿ ನಾಳೆಯಿಂದ ಜಾರಿ!

ದರ ನಿಗದಿ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಹೆಚ್ಚಿಸಲಾಗುತ್ತಿರುವ ಈ ದರವನ್ನು, ಬೆಂಗಳೂರು ನಗರವು ತೀವ್ರ ಸಂಚಾರ ದಟ್ಟಣೆ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಕೈಗೆಟುಕುವ ಹಾಗು ಪರಿಣಾಮಕಾರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಗತ್ಯವನ್ನು ಎದುರು ನೋಡುತ್ತಿರುವ ಸಮಯದಲ್ಲಿ, ಪ್ರಸ್ತಾಪಿಸಿರುವುದು ವಿಪರ್ಯಾಸ. ಈ ಮೊದಲೇ ಎಂದರೆ 2017 ರಲ್ಲಿ ಹೆಚ್ಚಿಸಲಾಗಿದ್ದ ಮೆಟ್ರೋ ಪ್ರಯಾಣದರವು ಕಡಿಮೆ ಆದಾಯದ ವರ್ಗಗಳಿಗೆ   ಮೆಟ್ರೋ ಪ್ರಯಾಣವನ್ನು  ಕೈಗೆ ನಿಲುಕದಂತೆ ಮಾಡಿತ್ತು. ಇದೀಗ ಮತ್ತೆ ಜನಸಾಮಾನ್ಯರಿಗೆ ಮೆಟ್ರೋ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಿದೆ.

ನಮ್ಮ ಮೆಟ್ರೋ ನಗರದಲ್ಲಿನ ನಿವಾಸಿಗಳ ಜೀವನಾಡಿಯಾಗಿದೆ, ಇದು ಅವರಿಗೆ ಸಮರ್ಥ, ಕೈಗೆಟುಕುವ ಮತ್ತು ಸುಸ್ಥಿರ ಸಾರ್ವಜನಿಕ ಸಾರಿಗೆ ಸೌಲಭ್ಯವನ್ನು ಕಲ್ಪಿಸಿದೆ. ಬೆಂಗಳೂರು ನಗರವು ಈಗಾಗಲೇ ತೀವ್ರ ಸಂಚಾರ ದಟ್ಟಣೆಯನ್ನು ಎದುರಿಸುತ್ತಿರುವುದರಿಂದ, ನಗರದ ಸುಸ್ಥಿರ ಭವಿಷ್ಯಕ್ಕಾಗಿ  ಸಮರ್ಥ ಮತ್ತು ಎಲ್ಲರ ಕೈಗೆಟಕಬಲ್ಲ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅತ್ಯಗತ್ಯವಾಗಿ ಬೇಕಾಗಿದೆ.

ʻʻಸಂಚಾರ ದಟ್ಟಣೆ, ಹವಾಮಾನ ಬಿಕ್ಕಟ್ಟು, ಗಾಳಿಯ ಗುಣಮಟ್ಟ ಸುಧಾರಣೆಗೆ ನೆರವಾಗುವುದರೊಂದಿಗೆ,  ಜನಸಾಮಾನ್ಯರಿಗೆ ಎಟಕುವ ದರದಲ್ಲಿ ಸಾರಿಗೆ ಸೌಲಭ್ಯವನ್ನು ಒದಗಿಸುತ್ತ ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯು ಅವಿಭಾಜ್ಯ ಅಂಗವಾಗಿದೆ. ಆದರೆ  ನಮ್ಮ ಮೆಟ್ರೋವನ್ನು ಹೆಚ್ಚು ದುಬಾರಿಯನ್ನಾಗಿಸುವ  ಮೂಲಕ, ಸಾರಿಗೆಗಾಗಿ ಪ್ರಮುಖವಾಗಿ ಈ ಮೆಟ್ರೋ  ರೈಲನ್ನು ಅವಲಂಬಿಸಿರುವ ಕಡಿಮೆ ಆದಾಯದ ವರ್ಗದ ಜನರನ್ನು ಈ ಸೌಲಭ್ಯದಿಂದ ವಂಚಿತರಾಗುವಂತೆ ಮಾಡಲಾಗುತ್ತಿದೆ.  ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಈ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಿ ಎಲ್ಲರ ಕೈಗೆ ಎಟಕುವ ದರದಲ್ಲಿ ಸಾರಿಗೆ ದರವನ್ನು ನಿಗದಿಗೊಳಿಸಬೇಕಾಗಿದೆʼʼ ಎಂದು ಗ್ರೀನ್‌ಪೀಸ್‌ ಇಂಡಿಯಾದ ಕ್ಯಾಂಪೇನರ್‌/ಪ್ರಚಾರಕ ಆಕಿಜ್‌ ಫಾರೂಕ್‌ ಆಗ್ರಹಿಸಿದರು.

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ, ಹೆಚ್ಚಾಯ್ತು ಗ್ರಾಚ್ಯುಟಿ

ಇದಲ್ಲದೆ, ಮೆಟ್ರೋ ದರದ ಹೆಚ್ಚಳ ವಿವಿಧ ಆದಾಯದ ವರ್ಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.  ಹೆಚ್ಚಿನ ವರ್ಗಗಳಿಗೆ ಸಾರ್ವಜನಿಕ ಸಾರಿಗೆ ಕೇವಲ ಅನುಕೂಲತೆಯಲ್ಲ, ಬದಲಿಗೆ ಅದು ಅವರಿಗೆ  ಅವಶ್ಯಕತೆಯಾಗಿದೆ. ಈ ಸಮುದಾಯಗಳು ಈಗಾಗಲೇ  ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ನಲುಗುತ್ತಿವೆ ಇದರೊಂದಿಗೆ ಸಾರಿಗೆ ದರಗಳಲ್ಲಿನ ಯಾವುದೇ ಹೆಚ್ಚಳವು ಅವರ ಆರ್ಥಿಕ ಸಂಕಷ್ಟವನ್ನು ಇನ್ನಷ್ಟು ಹದಗೆಡಿಸುತ್ತದೆ.

ಪ್ರಯಾಣ ದರದಲ್ಲಿ 40-45 ಶೇಕಡಾರಷ್ಟು ಹೆಚ್ಚಳವು ಪ್ರಯಾಣಿಕರಿಗೆ ತೀವ್ರ ಆರ್ಥಿಕ ಹೊರೆಯನ್ನುಂಟು ಮಾಡುತ್ತದೆ, ಇದು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದ ಇಳಿಕೆಗೆ ಮತ್ತು ಖಾಸಗಿ ವಾಹನಗಳ ಬಳಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಇದರಿಂದಾಗಿ ಇಲ್ಲಿಯೂ ದೆಹಲಿಯ ಪರಿಸ್ಥಿತಿ ಪುನರಾವರ್ತನೆಗೊಳ್ಳಬಹುದು. ಅಲ್ಲಿ ಮೆಟ್ರೋ ದರ ಹೆಚ್ಚಳವು ಮೆಟ್ರೋ ಪ್ರಯಾಣಿಕರ ಪ್ರಮಾಣದಲ್ಲಿ ಗಣನೀಯ ಕುಸಿತಕ್ಕೆ ಕಾರಣವಾಯಿತು.

ಆಫ್-ಪೀಕ್ ಸಮಯದಲ್ಲಿ ಮತ್ತು ಭಾನುವಾರದಂದು ಪ್ರಸ್ತಾಪಿಸಲಾದ ರಿಯಾಯಿತಿಗಳು, ಹಾಗೆಯೇ ಸ್ಮಾರ್ಟ್‌ಕಾರ್ಡ್ ಮತ್ತು QR ಕೋಡ್ ಬಳಕೆದಾರರಿಗೆ ನಿಯಮಿತವಾಗಿ 5% ರಿಯಾಯಿತಿಗಳು ಶ್ಲಾಘನೀಯವಾಗಿದ್ದರೂ, ಹೆಚ್ಚಿನ ಪ್ರಮಾಣದ ಪ್ರಯಾಣಿಕರಿಗೆ ಒಟ್ಟಾರೆ ಪ್ರಯಾಣವೆಚ್ಚವನ್ನು  ಸಮರ್ಪಕವಾಗಿ ಸರಿದೂಗಿಸಲು ಈ ಕೊಡುಗೆಗಳಿಗೆ ಸಾಧ್ಯವಾಗುವುದಿಲ್ಲ.

ಆರ್ಥಿಕ ನೆರವು ಮತ್ತು ವಿಶೇಷ ಮೆಟ್ರೋ ನಿಧಿ ಮೀಸಲಿರಿಸಲು ಕರೆ
ಗ್ರೀನ್‌ಪೀಸ್ ಇಂಡಿಯಾ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ವಾರ್ಷಿಕ ಅನುದಾನಗಳನ್ನು ಪಡೆದುಕೊಳ್ಳುವ ಮೂಲಕ ವಿಶೇಷ ಮೆಟ್ರೋ ನಿಧಿಯನ್ನು ಮೀಸಲಿರಿಸುವುದನ್ನು ಆಗ್ರಹಿಸುತ್ತದೆ. ಈ ನಿಧಿಯನ್ನು ಮೆಟ್ರೋ ವ್ಯವಸ್ಥೆಯ ಕಾರ್ಯಾಚರಣೆ ಮತ್ತು ನಿರ್ವಹಣಾ ಅಗತ್ಯಗಳನ್ನು ಪೂರೈಸಲು ಬಳಸಬೇಕು, ಇದರಿಂದಾಗಿ ಪ್ರಯಾಣಿಕರ ಮೇಲೆ ಹೆಚ್ಚಿನ  ಹೊರೆ ಬೀಳುವುದನ್ನು ತಡೆಯಬಹುದು. ನಮ್ಮ ಮೆಟ್ರೋದ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳನ್ನು ಭರಿಸಲು  ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡರಿಂದಲೂ ಹೆಚ್ಚಿನ ಆರ್ಥಿಕ ನೆರವಿನ ಅಗತ್ಯವಿದೆ.

ಇದಲ್ಲದೆ, ನಗರವು ಫ್ಲೈಓವರ್‌ಗಳು ಮತ್ತು ಸುರಂಗ ರಸ್ತೆಗಳಂತಹ ಹಲವಾರು ಬೃಹತ್‌ ಮೂಲಸೌಕರ್ಯ ಯೋಜನೆಗಳನ್ನು ಯೋಜಿಸುತ್ತಿದೆ, ಇದು ಬೆಂಗಳೂರಿನಂತಹ ಬೆಳೆಯುತ್ತಿರುವ ನಗರದಲ್ಲಿ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸಾರ್ವಜನಿಕ ಸಾರಿಗೆ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವುದು ಮತ್ತು ಎಲ್ಲಾ ವರ್ಗದವರಿಗೂ ಅದರ ಲಭ್ಯತೆ ಯನ್ನು ಖಚಿತಪಡಿಸಿಕೊಳ್ಳುವುದು ಹೆಚ್ಚು ಸುಸ್ಥಿರ ಮತ್ತು ಮುಂದಾಲೋಚನೆಯ ವಿಧಾನವಾಗಿದೆ . ಈ ಮೂಲಕ ಬೆಂಗಳೂರನ್ನು ಸ್ವಚ್ಛ,  ದಟ್ಟಣೆ ಮುಕ್ತ ಮತ್ತು ಪರಿಸರ ಪ್ರಜ್ಞೆ ಹೊಂದಿರುವ ನಗರವನ್ನಾಗಿ ಪರಿವರ್ತಿಸಬಹುದು.

ಗ್ರೀನ್‌ಪೀಸ್ ಇಂಡಿಯಾದ ಬೇಡಿಕೆಗಳು:
ಪ್ರಸ್ತಾವಿತ ಪ್ರಯಾಣ ದರ ಹೆಚ್ಚಳವನ್ನು ಹಿಂಪಡೆಯಿರಿ: ನಮ್ಮ ಮೆಟ್ರೋಗೆ ಪ್ರಸ್ತಾವಿತ ಶೇ. 40-45 ರಷ್ಟು ದರ ಹೆಚ್ಚಳವನ್ನು ಮೆಟ್ರೋ ನಿಗಮ ನಿಯಮಿತವು (ಬಿಎಂಆರ್‌ಸಿಎಲ್) ತಕ್ಷಣವೇ ಹಿಂಪಡೆಯಬೇಕು ಮತ್ತು ಸಾರ್ವಜನಿಕ ಸಾರಿಗೆ ಎಲ್ಲರಿಗೂ ಕೈಗೆಟುಕುವಂತೆ ನೋಡಿಕೊಳ್ಳಲು ಪ್ರಸ್ತುತ ದರಗಳನ್ನೇ ಮುಂದುವರೆಸಬೇಕು ಎಂದು ಗ್ರೀನ್‌ಪೀಸ್‌ ಒತ್ತಾಯಿಸಿದೆ.

"ಸಾರ್ವಜನಿಕ ಸಾರಿಗೆಗೆ ಉತ್ತಮ ಹಣಕಾಸು ಸೌಲಭ್ಯ ಮತ್ತು ನಮ್ಮ ಮೆಟ್ರೋ ಸುಗಮ ಕಾರ್ಯಾಚರಣೆಗೆ ಮೀಸಲಾದ ವಿಶೇಷ ನಿಧಿಯ ಅಗತ್ಯವಿದೆ. ದರಗಳನ್ನು ಹೆಚ್ಚಿಸುವ ಬದಲು ಇಲಾಖೆಗಳು, ಮೆಟ್ರೋ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮೀಸಲಾದ ವಾರ್ಷಿಕ ಬಜೆಟ್ ಮತ್ತು ಆರ್ಥಿಕ ಬೆಂಬಲವನ್ನು ಪಡೆಯುವತ್ತ ಗಮನ ಹರಿಸಬೇಕಿದೆ" – ಎಂದು  ಗ್ರೀನ್‌ಪೀಸ್ ಇಂಡಿಯಾದ ಪ್ರಚಾರಕ ಶರತ್ ಎಂ.ಎಸ್, ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಮೆಟ್ರೋವನ್ನು ಜನಸಾಮಾನ್ಯರ ಕೈಗೆಟುಕುವಂತೆ ಮಾಡಿ: ನಮ್ಮ ಮೆಟ್ರೋ ಪ್ರಯಾಣ ದರಗಳನ್ನು ಇಳಿಸಲು ಕ್ರಮಗಳನ್ನು ಪರಿಚಯಿಸಿ ಮತ್ತು ಎಲ್ಲಾ ನಾಗರಿಕರಿಗೆ, ವಿಶೇಷವಾಗಿ ಕಡಿಮೆ ಆದಾಯದ ಗುಂಪುಗಳಿಗೆ ಮೆಟ್ರೋವನ್ನು ಬಳಸಲು ಪ್ರೇರೇಪಿಸಿ.
ವಿಶೇಷ ಮೆಟ್ರೋ ನಿಧಿಯನ್ನು ಮೀಸಲಿರಿಸಿ: ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡರಿಂದಲೂ ವಾರ್ಷಿಕ ಹಣಕಾಸಿನ ಅನುದಾನ ಪಡೆದು ಮೆಟ್ರೋ ಸಾರಿಗೆ ವ್ಯವಸ್ಥೆಗಾಗಿ ಮೀಸಲಾದ ನಿಧಿಯನ್ನು ರಚಿಸಿ. ಈ ನಿಧಿಯು ನಮ್ಮ ಮೆಟ್ರೋದ ಕಾರ್ಯಾಚರಣೆ, ನಿರ್ವಹಣೆ ಮತ್ತು ಮೂಲಸೌಕರ್ಯ ಅಗತ್ಯಗಳನ್ನು ಪೂರೈಸಲು ಮತ್ತು ಪ್ರಯಾಣಿಕರಿಗೆ ಹೊರೆಯಾಗದಂತೆ ಆರ್ಥಿಕ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮೀಸಲಾಗಿರಬೇಕು.

ಸಾರ್ವಜನಿಕ ಸಮಾಲೋಚನೆ ಮತ್ತು ಪ್ರತಿಕ್ರಿಯೆ: ಯಾವುದೇ ದರ ಹೆಚ್ಚಳವನ್ನು ಜಾರಿಗೆ ತರುವ ಮೊದಲು ಸಾರ್ವಜನಿಕ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಲು ಸಾಕಷ್ಟು ಸಮಯವನ್ನು ಮೀಸಲಿಡಬೇಕು. ಶುಲ್ಕ ಹೆಚ್ಚಳವು ಹೆಚ್ಚಿನ ಜನಸಂಖ್ಯೆಯ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾಗರಿಕ ಸಮಾಜ ಸಂಸ್ಥೆಗಳು (CSOs), ಹಕ್ಕು ಆಧಾರಿತ ಗುಂಪುಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಪಾಲುದಾರರೊಂದಿಗೆ ಸಾರ್ವಜನಿಕ ಸಮಾಲೋಚನೆಗಳನ್ನು ನಡೆಸಬೇಕೆಂದು ಗ್ರೀನ್‌ಪೀಸ್‌ ಇಂಡಿಯಾವು ಆಗ್ರಹಿಸಿದೆ.

Latest Videos
Follow Us:
Download App:
  • android
  • ios