‘ರಕ್ತದಾನ ಮಾಡಿ’ ಎಂದಕೂಡಲೇ ನೆಪಗಳನ್ನು ಕೊಟ್ಟು ಹಿಂದೇಟು ಹಾಕುವವರು, ಹಲವು ಬಾರಿ ಯೋಚನೆ ಮಾಡುವವರು, ನೆಗೆಟಿವ್‌ ವಿಚಾರಗಳನ್ನು ಹೇಳುವವರು ಹೆಚ್ಚಿದ್ದಾರೆ. 

ಬೆಂಗಳೂರು (ಜೂ.14): ‘ರಕ್ತದಾನ ಮಾಡಿ’ ಎಂದಕೂಡಲೇ ನೆಪಗಳನ್ನು ಕೊಟ್ಟು ಹಿಂದೇಟು ಹಾಕುವವರು, ಹಲವು ಬಾರಿ ಯೋಚನೆ ಮಾಡುವವರು, ನೆಗೆಟಿವ್‌ ವಿಚಾರಗಳನ್ನು ಹೇಳುವವರು ಹೆಚ್ಚಿದ್ದಾರೆ. ಅದರಲ್ಲೂ ಮಹಿಳೆಯರಿಗೂ ರಕ್ತದಾನಕ್ಕೂ ದೂರ ಎಂಬಂತಹ ವಾತಾವಣವಿದೆ. ಇವುಗಳ ಮಧ್ಯೆ ಬೆಂಗಳೂರಿನ ಮಹಿಳೆಯೊಬ್ಬರು ಬರೋಬ್ಬರಿ 106 ಬಾರಿ ರಕ್ತದಾನ ಮಾಡಿದ್ದಾರೆ!

ಎ ನೆಗೆಟಿವ್‌ ರಕ್ತ ಮಾದರಿ ಹೊಂದಿರುವ ಇವರ ಹೆಸರು ಆಶಾ ಸೂರ್ಯನಾರಾಯಣ. ಆರ್‌.ಟಿ.ನಗರದ ನಿವಾಸಿಯಾಗಿದ್ದು, ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ 51 ವರ್ಷವಾಗಿದ್ದು, ಕಳೆದ 27 ವರ್ಷಗಳಿಂದ ನಿರಂತರವಾಗಿ ವರ್ಷಕ್ಕೆ ಮೂರು ಅಥವಾ ನಾಲ್ಕು ಬಾರಿಯಂತೆ ರಕ್ತದಾನ ಮಾಡುತ್ತಾ ಬಂದಿದ್ದಾರೆ. ನಿರಂತರ ರಕ್ತದಾನದಿಂದ ಯಾವುದೇ ವಯೋಸಹಜ ಕಾಯಿಲೆಗಳೂ ಇಲ್ಲದೆ ಸಂಪೂರ್ಣ ಆರೋಗ್ಯವಾಗಿದ್ದಾರೆ. ಈ ಮೂಲಕ ರಕ್ತದಾನ ಪುರುಷರಿಗೆ ಮಾತ್ರ ಮೀಸಲು ಎನ್ನುವಂತೆ ವರ್ತಿಸಿದ ಸ್ತ್ರೀಯರಿಗೆ, ರಕ್ತದಾನ ಮಾಡುತ್ತೇನೆ ಎನ್ನುವವರಿಗೆ ಇವರು ಪ್ರೇರಣೆಯಾಗಿದ್ದಾರೆ.

ಕೆಂಪಕ್ಕಿಯೋ, ಬಿಳಿ ಅಕ್ಕಿಯೋ, ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಯಾವುದು ?

‘1994ರಲ್ಲಿ ಅಪರಿಚಿತರೊಬ್ಬರಿಗೆ ಮೊದಲ ಬಾರಿ ರಕ್ತದಾನ ಮಾಡಿದೆ. ಎರಡು ವರ್ಷಗಳ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಿಂದ ಕರೆ ಮಾಡಿ ರಕ್ತದಾನಕ್ಕೆ ಕೋರಿದರು. ಅಲ್ಲಿಗೆ ತೆರಳಿದ ಸಂದರ್ಭದಲ್ಲಿ ರೋಗಿಯ ಸ್ಥಿತಿಯನ್ನು ಕಂಡು ಅತ್ಯಂತ ನೋವಾಯಿತು. ರಕ್ತದಾನ ಮಾಡಿದ ಬಳಿಕ ಪೋಷಕರು ಒಂದು ಲಕ್ಷ ರು. ತಂದು ನನ್ನ ಕಾಲಿನ ಬಳಿ ಇಟ್ಟಾಗ ಏನು ಹೇಳಬೇಕು ಎಂದು ತೋಚದೆ ಹಣ ನಿರಾಕರಿಸಿ ಮನೆಗೆ ಬಂದೆ. ಬಳಿಕ ವೈದ್ಯರು ಕರೆ ಮಾಡಿ ರೋಗಿಯ ಜೀವ ಉಳಿಸಿದಿರಿ ಎಂದು ತಿಳಿಸಿದಾಗ ಸಾರ್ಥಕತೆ ಭಾವ ಮೂಡಿತು. ಎ ನೆಗೆಟಿವ್‌ ರಕ್ತ ಮಾದರಿಯಾದ್ದರಿಂದ ದಾನಿಗಳು ಸಿಗುವುದು ವಿರಳ ಎಂದು ತಿಳಿಯಿತು. ಅಂದಿನಿಂದಲೇ ನಿರಂತವಾಗಿ ರಕ್ತದಾನ ಮಾಡುತ್ತಾ ಬಂದಿದ್ದೇನೆ. ಯಾರಿಂದಲೂ ಹಣ, ನೆರವು ಪಡೆದಿಲ್ಲ. ದಾನದಿಂದ ಜೀವ ಉಳಿಸುತ್ತಿದ್ದೇನೆ ಎಂಬ ಸಾರ್ಥಕತೆ ಭಾವವೇ ನನಗೆ ಸಾಕು‘ ಎನ್ನುತ್ತಾರೆ ಆಶಾ.

ಮಹಿಳೆಯರು ತಪ್ಪು ಕಲ್ಪನೆಯಿಂದ ಹೊರಬನ್ನಿ: ಸಾಕಷ್ಟು ಮಹಿಳೆಯರು ರಕ್ತದಾನ ಮಾಡುವುದಿಲ್ಲ. ಋುತುಸ್ರಾವ ಆಗುವುದರಿಂದ ಮಹಿಳೆಯರು ರಕ್ತದಾನ ಮಾಡಬಾರದು ಎಂದು ತಪ್ಪು ಕಲ್ಪನೆ ಇದೆ. ಆದರೆ, ಮಹಿಳೆಯರಿಗೆ ಮಾಸಿಕ ಋುತುಸ್ರಾವದ ಸಂದರ್ಭದಲ್ಲಿ ಗರ್ಭಕೋಶದ ಒಳಪದರದ ಲೋಳೆಯು ದೇಹದಿಂದ ಹೊರಗೆ ಹೋಗುತ್ತದೆ. ಅದರಲ್ಲಿ ಕೆಂಪು ರಕ್ತ ಕಣಗಳು ಕಡಿಮೆ ಇರುತ್ತದೆ. ದೇಹದಲ್ಲಿ ರಕ್ತದ ಕೊರತೆ ಆಗಿರುವುದಿಲ್ಲ. ಮಹಿಳೆಯರು ರಕ್ತದಾನಕ್ಕೆ ಮುಂದಾದರೆ ರಕ್ತದ ಕೊರತೆ ನೀಗಲಿದೆ ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ.

ರಕ್ತದಾನಕ್ಕೆ ಸೀಮಿತವಾಗದ ಆಶಾ ಅವರು ಲಯನ್ಸ್‌ ಕ್ಲಬ್‌ ಸಂಜಯ್‌ ನಗರ ಮೂಲಕ ಇತರೆ ಸೇವಾಕಾರ್ಯಗಳನ್ನು ನಡೆಸುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ 26 ದೇಹ ದಹನ, 200 ಅಧಿಕ ಹಾಸಿಗೆ ವ್ಯವಸ್ಥೆ, 80 ಕೊರೋನಾ ರೋಗಿಗಳಿಗೆ ದಾನಿಗಳ ಸಂರ್ಪಕಿಸಿ ಪ್ಲಾಸ್ಮ ವ್ಯವಸ್ಥೆ ಮಾಡಿದ್ದಾರೆ. ಇವರ ಸೇವಾ ಕಾರ್ಯಗಳಿಗೆ ಹಲವು ಸಂಸ್ಥೆಗಳಿಂದ ಪ್ರಶಸ್ತಿ ನೀಡಿ, ಕೊರೋನಾ ವಾರಿಯರ್‌ ಎಂದು ಗೌರವಿಸಿವೆ.

ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿದ್ದರೆ ಮಾರಣಾಂತಿಕ ಸ್ಟ್ರೋಕ್ ಅಪಾಯ !

ಆರಂಭದಲ್ಲಿ ಮನೆಯವರು ಬೇಡ ಅನ್ನುತ್ತಿದ್ದರು: ಆರಂಭದಲ್ಲಿ ರಕ್ತದಾನ ಮಾಡಿ ಬಂದಾಗ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಮೊಬೈಲ್‌ ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿದ್ದ ದೂರವಾಣಿಗೆ ಯಾರಾದರೂ ಕರೆ ಮಾಡಿ ದಾನಕ್ಕೆ ಕೋರಿದರೆ ನನಗೆ ಮಾಹಿತಿ ನೀಡುತ್ತಿರಲಿಲ್ಲ. ಬಳಿಕ ಕಚೇರಿ ದೂರವಾಣಿ ಸಂಖ್ಯೆ ಕೊಟ್ಟು, ಕರೆ ಬಂದ ಕೂಡಲೇ ತೆರಳಿ ರಕ್ತ ನೀಡುತ್ತಿದ್ದೆ. ಸದ್ಯ ಕುಟುಂಬಸ್ಥರಿಗೆ ಮನವರಿಕೆಯಾಗಿದ್ದು, ಅವರೆಲ್ಲರೂ ದಾನಿಗಳಾಗಿದ್ದಾರೆ. ಮಗ 15 ಬಾರಿ, ಮಗಳು ಐದು ಬಾರಿ ರಕ್ತದಾನ ಮಾಡಿದ್ದಾರೆ ಎಂದು ಆಶಾ ತಿಳಿಸಿದರು.

ಜಯಪ್ರಕಾಶ್‌ ಎಂ. ಬಿರಾದಾರ್‌