ಬೆಳಗಾವಿ ಜೈನಮುನಿ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಬೆಳಗಾವಿಯ ಕಾಮಕುಮಾರ ನಂದಿ ಮಹಾರಾಜ ಮುನಿಗಳ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ನೀಡಿದಾಗ ಮಾತ್ರ ಸಂಪೂರ್ಣ ಸತ್ಯ ಹೊರಬರುತ್ತದೆ.
ಹುಬ್ಬಳ್ಳಿ (ಜು.09): ಕಾಮಕುಮಾರ ನಂದಿ ಮಹಾರಾಜ ಹತ್ಯೆ ಖಂಡನೀಯವಾಗಿದ್ದು, ಇದು ಇತಿಹಾಸದಲೇ ಕ್ರೂರ ಘಟನೆಯಾಗಿದೆ. ಈ ಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ನೀಡಿದಾಗ ಮಾತ್ರ ಸಂಪೂರ್ಣ ಸತ್ಯ ಹೊರಬರುತ್ತದೆ. ರಾಜ್ಯದಲ್ಲಿ ಮುನಿಗಳ ವಿರುದ್ಧ ಸುಳ್ಳು ಹೇಳಿಕೆಗಳನ್ನು ಸೃಷ್ಟಿ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯ ವರೂರು ಆಶ್ರಮದ ಗುಣಧರನಂದಿ ಮಹಾರಾಜ್ ಜೈನಮುನಿಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಹಿರೇಕೋಡಿ ಆಶ್ರಮದ ಜೈನಮುನಿಗಳಿಗೆ ವಿದ್ಯುತ್ ಶಾಕ್ ಕೊಟ್ಟು, ಕೈ-ಕಾಲು ಕತ್ತರಿಸಿ ಬೋರ್‌ವೆಲ್‌ನಲ್ಲಿ ಹಾಕಿದ್ದಾರೆ. ಜೈನ ಸನ್ಯಾಸಿಗಳು ಕಾಲ್ನಡಿಗೆ ನಡೀತಾರೆ ಸರ್ವಸಂಗ ಪರೀತ್ಯಾಗ ಮಾಡ್ತಾರೆ. ಅವರನ್ನು ಹತ್ಯೆ ಮಾಡಿದ್ದು ಹೇಯ ಕೃತ್ಯವಾಗಿದೆ. ಇನ್ನು ಜೈನಮುನಿಗಳು ಕಾಣೆಯಾಗಿದ್ದಾರೆ ಅಂದಮೇಲೂ ಗಂಭೀರವಾಗಿ ತೆಗದುಕೊಂಡಿಲ್ಲ. ಪ್ರತಿಭಟನೆ ಮಾಡ್ತೀನಿ ಅಂದಾಗ ಗಂಭೀರವಾಗಿ ತೆಗೆದುಕೊಂಡರು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಬೆಳಗಾವಿ ಜೈನಮುನಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆ: ದೇಹ ತುಂಡರಿಸಿ ಗದ್ದೆಗೆ ಬೀಸಾಡಿದರು
ಸರ್ಕಾರದಿಂದ ಸುಳ್ಳು ಹೇಳಿಕೆ ಪಡೆಯಲು ಯತ್ನ: ಇನ್ನು ಜೈನಮುನಿಗಳು ಕಟ್ಟಡ ಕಟ್ಟಲು ದುಡ್ಡು ಕೊಟ್ಟಿದ್ದರು ಎಂದು ಮಾಹಿತಿ ಇದೆ. ಆದರೆ, ಬಡ್ಡಿ ವ್ಯವಹಾರ ಮಾಡುತ್ತಿದ್ದರು ಎಂದು ಹೇಳಿಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸರ್ಕಾರಕ್ಕೆ ಶೋಭೆ ತರುವ ಸಂಗತಿ ಅಲ್ಲ. ಇನ್ನು ಶಾಸಕ ಅಭಯ ಪಾಟೀಲ್ ಒತ್ತಾಯಿಸಿದಾಗ ಆರೋಪಿಯ ಹೆಸರು ಬಿಡುಗಡೆ ಮಾಡಿದರು. ಯಾರೇ ಮಾಡಿದರೂ ಅದು ಅಪರಾಧ. ಇದಕ್ಕೆ ಜಾತಿ ಇರಲ್ಲ. ಸರ್ಕಾರದ ನಿಲುವು ಸರಿ ಪಡಿಸಕೊಳ್ಳಬೇಕು ಎಂದು ಆಗ್ರಹಿಸಿದರು.
ಜೈನಮುನಿಗಳ ಭದ್ರತೆ ಕುರಿತು ಕೇಂದ್ರದಲ್ಲಿ ಚರ್ಚೆ: ಜೈನಮುನಿಗಳು ದೇಶಾದ್ಯಂತ ಪಾದಯಾತ್ರೆ ಕೈಗೊಂಡಾಗ ಭದ್ರತೆ ನೀಡುವಂತಹ ಬೇಡಿಕೆಗಳನ್ನು ಅಮಿತ್ ಶಾ ಅವರ ಗಮನಕ್ಕೆ ತರ್ತೇನೆ. ರಾಜ್ಯ ಸರ್ಕಾರಗಳು ಗಮನಕ್ಕೆ ತೆಗೆದುಕೊಳ್ಳಬೇಕು. ನಾನು ಕೇಂದ್ರ ಸರ್ಕಾರದಿಂದ ಸಂಪೂರ್ಣ ಪ್ರಯತ್ನ ಮಾಡ್ತೇವೆ. ಆಮರಣ ಉಪವಾಸ ಬೇಡ ಅಂತ ನಾನು ಮನವಿ ಮಾಡಿದ್ದೇನೆ. ಮುಂದಿನ ದಿನಗಲ್ಲಿ ನ್ಯಾಯ ಸಿಗದೇ ಇದ್ದಲ್ಲಿ ಎಲ್ಲರೂ ಕೂಡಿ ಪ್ರತಿಭಟನೆ ಮಾಡೋಣ ಎಂದರು.
ಮುನಿಗಳು, ಸ್ವಾಮೀಜಿಗಳು ಮುನಿಸಿಕೊಂಡರೆ ಸರ್ಕಾರಕ್ಕೆ ಶಾಪ: ಕರ್ನಾಟಕ ಸರ್ಕಾರ ಅತ್ಯಂತ ಸಂವೇದನ ಮಾಡುತ್ತೆ ಅನ್ನೋದು ಇದೆ. ಮುನಿಗಳು, ಸ್ವಾಮೀಜಿ ಗಳು ಈ ರೀತಿ ಮುನಿಸಿಕೊಂಡರೆ ಸರ್ಕಾರಕ್ಕೆ ಶಾಪ ಆಗುತ್ತದೆ. ಕೂಡಲೇ ಪ್ರಕರಣವನ್ನು ಸಿಬಿಐಗೆ ಕೊಡಿ. ಇನ್ನು ಯಾವುದೇ ಒಂದು ಕೃತ್ಯದಲ್ಲಿ ಸರ್ಕಾರ ಸಪೋರ್ಟ್ ಇರುತ್ತೆ ಅಂದಾಗ ಈ ರೀತಿ ವರ್ತನೆ ನಡೆಯುತ್ತದೆ. ಕ್ಷುಲ್ಲಕ ಹೇಳಿಕೆ ಕೊಡಿಸುವುದು ಮುನಿಗಳಿಗೆ ಮರ್ಯಾದೆ ಕೊಡುವಂತದ್ದಲ್ಲ ಎಂದು ಹೇಳಿದರು.
ಜೈನಮುನಿ ಹತ್ಯೆ ಕೇಸಲ್ಲಿ ಸರ್ಕಾರದ ಕಣ್ತೆರೆಸಿದ ಮಾಧ್ಯಮಗಳು: ಗುಣಧರನಂದಿ ಸ್ವಾಮೀಜಿ
ಸರ್ಕಾರದ ಕಣ್ತೆರೆಸಿದ ಮಾಧ್ಯಮಗಳು: ಬೆಳಗಾವಿ ಹಿರೇಕೋಡಿ ಜೈನಮುನಿ ಹತ್ಯೆ ಖಂಡಿಸಿ ನಿನ್ನೆಯಿಂದ ಅಮರಣಾಂತ ಉಪವಾಸ ಕೈಗೊಂಡಿರುವ ಹುಬ್ಬಳ್ಳಿಯ ವರೂರಿನ ಜೈನಮುನಿ ಗುಣಧರನಂದಿ ಮಾಹಾರಾಜ್ ಸ್ವಾಮೀಜಿ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಸಿ. ನಾಗರಾಜ್ ಛಬ್ಬಿ ಭೇಟಿ ಮಾಡಿ ಸಾಂತ್ವನ ಹೇಳಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗುಣಧರನಂದಿ ಮುನಿಗಳು, ಜೈನ ಮುನಿಗಳಿಗೆ ಅತ್ಯಂತ ಚಿತ್ರಹಿಂಸೆ ನೀಡಲಾಗಿದೆ. ಒಬ್ಬ ಜೈನಮುನಿಗೆ ಈ ರೀತಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ನಿಜಕ್ಕೂ ನೋವಿನ ಸಂಗತಿ. ಇಂತಹ ಘಟನೆಯಾದ್ರೂ ಸಹ ಸಿಎಂ ಯಾವುದೇ ಸ್ಪಂದನೆ ಮಾಡಿರಲಿಲ್ಲ. ಮಾದ್ಯಮಗಳ ಸಹಾಯದಿಂದ ಈ ಕೃತ್ಯ ಇದೀಗ ಬೆಳಕಿಗೆ ಬಂದಿದೆ. ಇದೀಗ ಸರ್ಕಾರ ಹಾಗೂ ಜನಪ್ರತಿನಿಧಿಗಳಿಂದ ಸ್ಪಂದನೆ ಸಿಗುತ್ತಿದೆ ಎಂದು ತಿಳಿಸಿದರು.