Asianet Suvarna News Asianet Suvarna News

ಕರ್ನಾಟಕದ ಮೊದಲ ಗ್ಯಾಸ್‌ ಆಧಾರಿತ ವಿದ್ಯುತ್‌ ಸ್ಥಾವರ ಶುರು, 2030ಕ್ಕೆ ರಾಜ್ಯದಲ್ಲಿ 60000 ಮೆ.ವ್ಯಾ. ಕರೆಂಟ್‌ ಉತ್ಪಾದನೆ: ಸಿಎಂ

ರಾಜ್ಯದಲ್ಲಿ ಸದ್ಯ 34,639 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಬೇಸಿಗೆಯಲ್ಲಿ 16-17 ಸಾವಿರ ಮೆಗಾವ್ಯಾಟ್ ಮತ್ತು ಮಳೆಗಾಲದಲ್ಲಿ 15-16 ಸಾವಿರ ಮೆಗಾವ್ಯಾಟ್ ಯೂನಿಟ್ ವಿದ್ಯುತ್‌ಗೆ ಬೇಡಿಕೆ ಇದೆ. ಕಳೆದ ವರ್ಷ ತೀವ್ರ ಬರಗಾಲವಿದ್ದರೂ ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ಯಶಸ್ವಿಯಾಗಿದ್ದೇವೆ. ಭವಿಷ್ಯದ ಬೇಡಿಕೆಯನ್ನು ಗಮದಲ್ಲಿಟ್ಟುಕೊಂಡು ಬಜೆಟ್‌ನಲ್ಲಿ ಘೋಷಿಸಿದಂತೆ 2030ರ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವನ್ನು 60 ಸಾವಿರ ಮೆಗಾವ್ಯಾಟ್‌ಗೆ ಹೆಚ್ಚಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ 

60000 MW Electricity generation in Karnataka by 2030 Says CM  Siddaramaiah grg
Author
First Published Sep 25, 2024, 6:42 AM IST | Last Updated Sep 25, 2024, 6:42 AM IST

ಬೆಂಗಳೂರು(ಸೆ.25):  ವಿದ್ಯುತ್‌ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ 2030ಕ್ಕೆ ರಾಜ್ಯದಿಂದ 60 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಗುರಿ ಇಟ್ಟುಕೊಂಡಿದ್ದು, ಇದಕ್ಕಾಗಿ ವಿವಿಧ ಮೂಲಗಳಿಂದ ಉತ್ಪಾದನೆಯ ಕಾರ್ಯಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಸ್ಥಾಪಿಸಿರುವ ರಾಜ್ಯದ ಮೊಟ್ಟ ಮೊದಲ 370 ಮೆಗಾವ್ಯಾಟ್ ಸಾಮರ್ಥ್ಯದ ಅನಿಲ ಆಧಾರಿತ ಯಲಹಂತ ಸಂಯುಕ್ತ ವಿದ್ಯುತ್ ಸ್ಥಾವರವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಜೊತೆಗೂಡಿ ಉದ್ಘಾಟಿಸಿ ಅವರು ಮಾತನಾಡಿದರು.

ಪಿಎಂ ಸೂರ್ಯಘರ್ ಯೋಜನೆಯಲ್ಲಿ ಭರ್ಜರಿ ಸಬ್ಸಿಡಿ, ಫ್ರಿ ವಿದ್ಯುತ್ ಜೊತೆ ಆದಾಯಕ್ಕೆ ಅರ್ಜಿ ಸಲ್ಲಿಕೆ ಹೇಗೆ?

ರಾಜ್ಯದಲ್ಲಿ ಸದ್ಯ 34,639 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಬೇಸಿಗೆಯಲ್ಲಿ 16-17 ಸಾವಿರ ಮೆಗಾವ್ಯಾಟ್ ಮತ್ತು ಮಳೆಗಾಲದಲ್ಲಿ 15-16 ಸಾವಿರ ಮೆಗಾವ್ಯಾಟ್ ಯೂನಿಟ್ ವಿದ್ಯುತ್‌ಗೆ ಬೇಡಿಕೆ ಇದೆ. ಕಳೆದ ವರ್ಷ ತೀವ್ರ ಬರಗಾಲವಿದ್ದರೂ ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ಯಶಸ್ವಿಯಾಗಿದ್ದೇವೆ. ಭವಿಷ್ಯದ ಬೇಡಿಕೆಯನ್ನು ಗಮದಲ್ಲಿಟ್ಟುಕೊಂಡು ಬಜೆಟ್‌ನಲ್ಲಿ ಘೋಷಿಸಿದಂತೆ 2030ರ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವನ್ನು 60 ಸಾವಿರ ಮೆಗಾವ್ಯಾಟ್‌ಗೆ ಹೆಚ್ಚಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದರು.

ಛತ್ತೀಸ್‌ಗಢದ ಗೋದ್ನಾದಲ್ಲಿ 1600 ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರ, ಶರಾವತಿಯಲ್ಲಿ 2,000 ಮೆಗಾವ್ಯಾಟ್, ವಾರಾಹಿಯಲ್ಲಿ 1500 ಮೆಗಾವ್ಯಾಟ್‌ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಘಟಕ ಸ್ಥಾಪನೆ, ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಸೇರಿ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೂ ಆದ್ಯತೆ ನೀಡಲಾಗುವುದು. ಒಟ್ಟಾರೆ ಶೀಘ್ರವೆ 10,000 ಮೆಗಾವ್ಯಾಟ್‌ ವಿದ್ಯುತ್‌ ಘಟಕ ಉತ್ಪಾದನೆ ಮಾಡಲಾಗುವುದು ಎಂದು ಹೇಳಿದರು.
ಯಲಹಂಕ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರದ ಎಲ್ಲಾ ಉದ್ಯೋಗಿಗಳಿಗೆ ₹5000 ಬೋನಸ್ ನೀಡಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಕುಸುಮ್‌ಗೆ ರಾಜ್ಯದ ಯೋಜನೆ ಪ್ರೇರಣೆ: 

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ನಾವು ಅಧಿಕಾರದಲ್ಲಿದ್ದಾಗ ರಾಜ್ಯ ಸ್ಮರಿಸಿಕೊಳ್ಳುವಂತಹ ಅಭಿವೃದ್ಧಿಯ ಸಾಕ್ಷಿಗುರುತು ಸ್ಥಾಪಿಸಿದ್ದೇವೆ. ಪಾವಗಡ ಸೋಲಾರ್‌ ಪಾರ್ಕ್‌ ಮಾಡಿದ್ದು ಇತಿಹಾಸ. ಭೂಮಿಯನ್ನು ಲೀಸ್‌ ಪಡೆದು ಯೋಜನೆ ಮಾಡುತ್ತಿರುವುದು ಮಾದರಿ. ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್‌ ವಿದ್ಯುತ್‌ ಪೂರೈಸುವ ಕೇಂದ್ರದ ಕುಸುಮ್‌ ಯೋಜನೆಗೂ ರಾಜ್ಯವೇ ಪ್ರೇರಣೆ ಎಂದು ಹೇಳಿದರು.  ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು. ಈ ಯೋಜನೆಯಿಂದ 400 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದನೆ ಸಾಧ್ಯ ಎಂದು ತಿಳಿಸಿದರು.

ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, 2500 ಕೋಟಿ ಬಂಡವಾಳ ಹೂಡಿದ್ದರೂ ಈ ಯೋಜನೆ ಮುಚ್ಚಲ್ಪಟ್ಟಿತ್ತು. ಸರ್ಕಾರದ ಇಚ್ಛಾಶಕ್ತಿಯಿಂದ ಇದನ್ನು ಅನುಷ್ಠಾನ ಮಾಡಿದ್ದೇವೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇಲ್ಲಿ ಹೆಚ್ಚು ಶಬ್ದಮಾಲಿನ್ಯ ಆಗದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರಿಗರೇ ಗಮನಿಸಿ ನಾಳೆ ಈ ಏರಿಯಾಗಳಲ್ಲಿ ಕರೆಂಟು ಇರೊಲ್ಲ!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ನಸೀರ್ ಅಹ್ಮದ್, ಶಾಸಕ ಎಸ್.ಆರ್.ವಿಶ್ವನಾಥ್, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಅಜಯ್ ಸಿಂಗ್, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಇದ್ದರು.

370 ಮೆಗಾವ್ಯಾಟ್ ಸಾಮರ್ಥ್ಯದ ಸ್ಥಾವರ

ಅನಿಲ (ಗ್ಯಾಸ್‌ ಟರ್ಬೈನ್‌) ಮತ್ತು ನೀರಿನ ಹಬೆಯ (ಸ್ಟೀಮ್‌ ಟರ್ಬೈನ್‌) ಸಂಯೋಜಿತ ವಿದ್ಯುತ್‌ ಸ್ಥಾವರ ಇದಾಗಿದೆ. ಎರಡೂ ಮೂಲಗಳಿಂದ ಕ್ರಮವಾಗಿ 236.82 ಮೆ.ವ್ಯಾ. ಮತ್ತು 133.225 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಆಗಲಿದೆ. ₹2500 ಕೋಟಿ ವೆಚ್ಚದಲ್ಲಿ ಈ ಸ್ಥಾವರ ನಿರ್ಮಾಣವಾಗಿದೆ.

Latest Videos
Follow Us:
Download App:
  • android
  • ios