Asianet Suvarna News Asianet Suvarna News

ಪಿಎಂ ಸೂರ್ಯಘರ್ ಯೋಜನೆಯಲ್ಲಿ ಭರ್ಜರಿ ಸಬ್ಸಿಡಿ, ಫ್ರಿ ವಿದ್ಯುತ್ ಜೊತೆ ಆದಾಯಕ್ಕೆ ಅರ್ಜಿ ಸಲ್ಲಿಕೆ ಹೇಗೆ?

ಪ್ರಧಾನಿ ಮೋದಿ ಮಹತ್ವಾಕಾಂಕ್ಷಿ ಸೂರ್ಯ ಘರ್ ಯೋಜನೆ ಮೂಲಕ ಉಚಿತ ವಿದ್ಯುತ್ ಪಡೆಯುವುದು ಮಾತ್ರವಲ್ಲ, ಆದಾಯವನ್ನೂ ಗಳಿಸಲು ಸಾಧ್ಯವಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿದ್ದು, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಕೆ ಹೇಗೆ? 

Free electricity income and subsidy how to apply PM surya ghar yojana ckm
Author
First Published Sep 21, 2024, 11:47 AM IST | Last Updated Sep 21, 2024, 11:47 AM IST

ನವದೆಹಲಿ(ಸೆ.21) ಸೌರ ವಿದ್ಯುತ್ ಬಳಕೆ ಉತ್ತೇಜಿಸುವ ಮೂಲಕ ಉಚಿತ ವಿದ್ಯುತ್ ಹಾಗೂ ಆದಾಯ ಮೂಲ ನೀಡುವ ಮಹತ್ವಾಕಾಂಕ್ಷಿ ಪ್ರಧಾನಿ ಸೂರ್ಯ ಘರ್ ಯೋಜನೆ ಯಾರಿಗೆ ಬಂದಿದೆ. ಪ್ರತಿ ತಿಂಗಳು 300 ಯುನಿಟ್ ಉಚಿತ ವಿದ್ಯುತ್ ಮೂಲಕ ಬರೋಬ್ಬರಿ 1 ಕೋಟಿ ಮನೆಗೆ ಸೌಲಭ್ಯ ಒದಗಿಸುವ ಈ ಯೋಜನೆ ಲಾಭವನ್ನು ಸುಲಭವಾಗಿ ಪಡೆಯಲು ಸಾಧ್ಯವಿದೆ.ಮನೆಯ ಮೇಲೆ ಸೌರಫಲಕ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಹಾಗೂ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಅದರಿಂದಲೂ ಆದಾಯಗಳಿಸುವ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಭರ್ಜರಿ ಸಬ್ಸಿಡಿಯನ್ನು ನೀಡುತ್ತಿದೆ. ಈಗಾಗಲೇ 1.3 ಕೋಟಿ ಮಂದಿ ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಮನೆಯ ಮೇಲ್ಛಾವಣಿಯಲ್ಲಿ ಸೌರಫಲಕ ಅಳವಡಿಸಿ ಇದರಿಂದ ಮನೆಗೆ ಬೇಕಾಗುವ ವಿದ್ಯುತ್ ಪಡೆಯಲು ಹಾಗೂ ಹೆಚ್ಚುವರಿ ವಿದ್ಯುತ್‌ನ್ನು ಮಾರಾಟ ಮಾಡಲು ಈ ಯೋಜನೆ ಅನುವು ಮಾಡಿಕೊಡುತ್ತದೆ.  ಉಚಿತ ವಿದ್ಯುತ್ ಹಾಗೂ ಆದಾಯ ಎರಡನ್ನೂ ಈ ಯೋಜನೆ ಮೂಲಕ ಪಡೆಯಲು ಸಾಧ್ಯವಿದೆ. ಸೌರಫಲಕ ಅಳವಡಿಕೆ ಸೇರಿದಂತೆ ಇದಕ್ಕೆ ಪೂರಕ ವಿದ್ಯುತ್ ವ್ಯವಸ್ಥೆಗಳಿಗೆ ಹೆಚ್ಚಿನ ಖರ್ಚುಗಳಿಲ್ಲ. 1 ಕಿಲೋವ್ಯಾಟ್ ಅಳವಡಿಕೆ ವೆಚ್ಚ ಸರಿಸುಮಾರು 90,000 ರೂಪಾಯಿ, ಇನ್ನು 2 ಕಿಲೋವ್ಯಾಟ್‌ಗೆ 1.5 ಲಕ್ಷ ರೂಪಾಯಿ ಹಾಗೂ 3 ಕಿಲೋವ್ಯಾಟ್‌ಗೆ 2 ಲಕ್ಷ ರೂಪಾಯಿ ವೆಚ್ಚವಾಗಲಿದೆ.

 ಕರ್ನಾಟಕದ 40 ಕೆರೆಗಳಲ್ಲಿ ಸೌರ ವಿದ್ಯುತ್‌ ಉತ್ಪಾದನೆಗೆ ಸಿದ್ಧತೆ..!

ಇಷ್ಟು ಮೊತ್ತ ವೆಚ್ಚ ಮಾಡಿ ಸೌರಫಲಕ ಹಾಕಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಸಬ್ಸಿಡಿ ಮೊತ್ತವನ್ನು ಬಳಕೆದಾರನ ಖಾತೆಗೆ ಜಮೆ ಮಾಡಲಿದೆ. ಒಂದು ಕಿಲೋವ್ಯಾಟ್ ಸೌರಫಲಕ ವ್ಯವಸ್ಥೆ ಅಳವಡಿಸಿದರೆ ಕೇಂದ್ರ ಸರ್ಕಾರ 18,000 ರೂಪಾಯಿ ಸಬ್ಸಿಡಿ ನೀಡಲಿದೆ. ಇನ್ನು 2 ಕಿಲೋವ್ಯಾಟ್‌ಗೆ 30,000 ರೂಪಾಯಿ ಹಾಗೂ 3 ಕಿಲೋವ್ಯಾಟ್‌ಗೆ 78,000 ರೂಪಾಯಿ ಸಬ್ಸಿಡಿ ನೀಡಲಿದೆ.

ಉಚಿತ ವಿದ್ಯುತ್ ಜೊತೆಗೆ ಹೆಚ್ಚುವರಿ ವಿದ್ಯುತ್‌ನ್ನು ಸ್ಥಳೀಯ ಬೆಸ್ಕಾಂ, ಹೆಸ್ಕಾಂ ಅಥವಾ ಇತರ ಕೆಇಬಿ ಸಂಸ್ಥೆಗೆ ಮಾರಾಟ ಮಾಡಲು ಈ ವ್ಯವಸ್ಥೆ ಅನುವು ಮಾಡಿಕೊಡುತ್ತದೆ. ಇದರಿಂದ ಬಳಕೆದಾರರು ಆದಾಯವನ್ನೂ ಗಳಿಸಲು ಸಾಧ್ಯವಿದೆ. 

ಅರ್ಜಿ ಸಲ್ಲಿಕೆ:
ಇದಕ್ಕೆ ಯಾರೂ ಬೇಕಾದರೂ ಅರ್ಜಿ ಸಲ್ಲಿಕೆ ಮಾಡಬಹುದು. ಸಬ್ಸಿಡಿ ಪಡೆಯಲು ಗರಿಷ್ಠ ಪೇಲೋಡ್ ಶೇಕಡಾ 85 ರಷ್ಟು ಮೀರಿರಬಾರದು ಅಷ್ಟೇ. ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರದ ಅಧಿಕೃತ ಪಿಎಂ ಘರ್ ಮುಕ್ತ್ ಬಿಜಿಲಿ ಯೋಜನೆ ಅಧಿಕೃತ ವೆಬ್‌ಸೈಟ್(https://www.pmsuryaghar.gov.in/) ಮೂಲಕ ಸುಲಭವಾಗಿ ಸಲ್ಲಿಕೆ ಮಾಡಬಹುದು.

ಯೋಜನೆ ಲಾಭ ಪಡೆಯಲು ಬಯಸಿದವರು ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ ಕೆಲ ಅಗತ್ಯ ಮಾಹಿತಿ ಹಾಗೂ ದಾಖಲೆ ಸಲ್ಲಿಸಬೇಕು. ಪ್ರಮುಖವಾಗಿ ವಿದ್ಯುತ್ ಗ್ರಾಹಕರ ಸಂಖ್ಯೆ, ಮೊಬೈಲ್ ಸಂಖ್ಯೆ, ಇಮೇಲ್, ವಿದ್ಯುತ್ ವಿತರಣಾ ಕಂಪನಿ ಸೇರಿದಂತೆ ಅಗತ್ಯ ಮಾಹಿತಿ ದಾಖಲಿಸಿ ರೂಫ್ ಟಾಪ್ ಸೋಲಾರ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕು. 

 DISCOMನಲ್ಲಿ ಅದಿಕೃತಗೊಳಿಸಿರುವ ಡೀಲರ್‌ನಿಂದ ಸೋಲಾರ್ ಪ್ಯಾನಲ್ ಖರೀದಿಸಿ ಅಳವಡಿಸಿಕೊಳ್ಳಬೇಕು. ಅಳವಡಿಕೆ ಬಳಿಕ ನಿಮ್ಮ ಸೋಲಾರ್ ಘಟಕದ ವಿವರಗಳೊಂದಿಗೆ ನೆಟ್ ಮೀಟರ್‌ಗೆ ಮನವಿ ಸಲ್ಲಿಸಬೇಕು.  ಈ ಎಲ್ಲಾ ಪರಿಶೀಲನೆ ಬಳಿಕ ಕಮಿಷನಿಂಗ್ ವರದಿ ಬರಲಿದೆ. ಈ ವರದಿ ಬಳಿಕ ಬ್ಯಾಂಕ್ ಖಾತೆ ವಿವರ, ರದ್ದು ಮಾಡಿರುವ ಚೆಕ್ ಸೇರಿದಂತೆ ಇತರ ಮಾಹಿತಿಗಳನ್ನು ನೀಡಬೇಕು. ಈ ವೇಳೆ ನೀವು ನೀಡಿದ ಬ್ಯಾಂಕ್ ಖಾತೆಗೆ ಯೋಜನೆಯ ಸಬ್ಸಿಡಿ ಮೊತ್ತವನ್ನು ಕೇಂದ್ರ ಸರ್ಕಾರ ಜಮೆ ಮಾಡಲಿದೆ.

‘ಪಿಎಂ ಕುಸುಮ್‌’ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆ ನಂ.1: ರಾಜ್ಯದಲ್ಲಿ 18,000 ರೈತರಿಂದ ಅರ್ಜಿ ಸಲ್ಲಿಕೆ

Latest Videos
Follow Us:
Download App:
  • android
  • ios