KSRP Police: ರಾಜ್ಯದ ದಢೂತಿ ಪೊಲೀಸರು ಈಗ ಫುಲ್ ಸ್ಲಿಮ್..!
* ರಾಜ್ಯದ ಸಶಸ್ತ್ರ ಮೀಸಲು ಪಡೆಯಲ್ಲಿ ‘ಆರೋಗ್ಯಕರ ಬೆಳವಣಿಗೆ’
* ವ್ಯಸನ ತೊರೆದ 200 ಮಂದಿ
* ಕೆಎಸ್‌ಆರ್‌ಪಿಯಲ್ಲಿ ತೂಕ ಇಳಿಸಿಕೊಂಡ ಪೊಲೀಸರು
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಮಾ.01): ಒಂದು ವರ್ಷದ ಅವಧಿಯಲ್ಲಿ ರಾಜ್ಯ ಸಶಸ್ತ್ರ ಮೀಸಲು ಪಡೆ (KSRP)ಯ ಎರಡು ಸಾವಿರ ಪೊಲೀಸರು(Police) ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದರೆ, 200 ಮಂದಿ ವ್ಯಸನ ಮುಕ್ತರಾಗಿದ್ದಾರೆ. ಇದರ ಪರಿಣಾಮ ಕೆಎಸ್‌ಆರ್‌ಪಿ ಪೊಲೀಸರ ಸಾವಿನ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ.
ಈ ಬದಲಾವಣೆ ಹಿಂದಿನ ಪ್ರೇರಕ ಶಕ್ತಿ ಕೆಎಸ್‌ಆರ್‌ಪಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್(Alok Kumar). ಕೆಎಸ್‌ಆರ್‌ಪಿ ಕಾರ್ಯಭಾರ ಹೊತ್ತ ಕೆಲವೇ ದಿನಗಳಲ್ಲಿ ಪೊಲೀಸರ ಆರೋಗ್ಯದ(Health) ವಿಚಾರವಾಗಿ ಅವರು ಹೆಚ್ಚಿನ ಗಮನಹರಿಸಿದರು. ಪ್ರತಿ ವರ್ಷ ನಾನಾ ಕಾಯಿಲೆಗಳಿಗೆ ತುತ್ತಾಗಿ ಸರಾಸರಿ 50ಕ್ಕೂ ಹೆಚ್ಚಿನ ಪೊಲೀಸರು ಸಾವಿಗೀಡಾಗುತ್ತಿದ್ದದ್ದು ಕಳವಳ ಮೂಡಿಸಿತ್ತು. ಈ ಸಮಸ್ಯೆ ಪರಿಹಾರಕ್ಕೆ ಮುಂದಾದ ಎಡಿಜಿಪಿ, ಕೆಎಸ್‌ಆರ್‌ಪಿ ಪೊಲೀಸರ ‘ಫಿಟ್ನೆಸ್’ಗೆ(Ftness) ಹೆಚ್ಚಿನ ಆದ್ಯತೆ ನೀಡಿದರು.
ತೂಕ ಇಳಿಸಿ ಟ್ರಿಮ್ ಆಗಲು ಪೊಲೀಸರಿಗೆ ಗಡುವು : ಡೇಟ್ ಫಿಕ್ಸ್ ಮಾಡಿದ್ರು
ಒಂದು ವರ್ಷದ ಬಳಿಕ ಅವರ ಪ್ರಯತ್ನಕ್ಕೆ ಫಲಿತಾಂಶ ಸಿಕ್ಕಿದ್ದು, ದಢೂತಿ ದೇಹ ಕರಗಿಸಿಕೊಂಡು ಫಿಟ್ ಆಗಿ ಎರಡು ಸಾವಿರ ಪೊಲೀಸರು ಮಿಂಚುತ್ತಿದ್ದಾರೆ. ಇತ್ತ ರಾಜ್ಯದ ವಿವಿಧ ವ್ಯಸನ ಮುಕ್ತ ಕೇಂದ್ರದಲ್ಲಿ ವೇತನಸಹಿತ ರಜೆಯೊಂದಿಗೆ ಮೂರು ತಿಂಗಳು ‘ಚಿಕಿತ್ಸೆ’ (Treatment) ಪಡೆದು 200 ಮಂದಿ ವ್ಯಸನ ಮುಕ್ತರಾಗಿದ್ದಾರೆ. ಇನ್ನುಳಿದ 57 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ ಸಂಕಷ್ಟದ ಕಾಲದಲ್ಲೂ ಭದ್ರತೆ ಹೊಣೆ ನಿಭಾಯಿಸಿದ ಕೆಎಸ್‌ಆರ್‌ಪಿಯಲ್ಲಿ 2020ರ ವರ್ಷಕ್ಕಿಂತ 2021ರಲ್ಲಿ ಸಾವಿನ ಪ್ರಮಾಣದಲ್ಲಿ ಕಡಿಮೆ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯ ಸಶಸ್ತ್ರ ಮೀಸಲು ಪಡೆಯಲ್ಲಿ 14 ಸಾವಿರ ಮಂದಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದು, ಫಿಟ್ನೆಸ್ ವಿಚಾರವು ದೊಡ್ಡ ಸಮಸ್ಯೆಯಾಗಿತ್ತು. 2020ರಲ್ಲಿ ವಿವಿಧ ಕಾಯಿಲೆಗೆ ತುತ್ತಾಗಿ 50 ಪೊಲೀಸರು ಮೃತಪಟ್ಟಿದ್ದರು(Death). ಹೀಗಾಗಿ ಸಿಬ್ಬಂದಿ ಆರೋಗ್ಯ ಕಾಳಜಿಗೆ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕಿತ್ತು. ಅಲ್ಲದೆ ಫಿಟ್ನೆಸ್ ಕಾಪಾಡಿಕೊಂಡು ಬೇರೆಯವರಿಗೆ ಮಾದರಿಯಾಗಬೇಕಾದ ಕೆಎಸ್‌ಆರ್‌ಪಿ ಸಿಬ್ಬಂದಿಗೆ ಫಿಟ್ನೆಸ್ ಎಂಬುದು ದೂರದ ಮಾತು ಎನ್ನುವಂತಾಗಿತ್ತು ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಇದೆಲ್ಲಾ ಹೇಗೆ ಸಾಧ್ಯವಾಯ್ತು?:
ಅನಾರೋಗ್ಯ ವಿಚಾರವಾಗಿ (ಎ) ಆರೋಗ್ಯವಂತ, (ಬಿ) ಸಾಧಾರಣ ಹಾಗೂ (ಸಿ) ಗಂಭೀರ ಹೀಗೆ ಎಬಿಸಿ ಎಂದು ಮೂರು ಭಾಗಗಳಾಗಿ ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ವಿಭಾಗಿಸಲಾಯಿತು. ಗಂಭೀರವಾದ ಕಾಯಿಲೆಗಳಿಗೆ ತುತ್ತಾದ ಸಿಬ್ಬಂದಿ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಯಿತು. ಅವರಿಗೆ ಕರ್ತವ್ಯ ನಿಯೋಜನೆಯಲ್ಲಿ ಸಹ ರಿಯಾಯಿತಿ ನೀಡಲಾಯಿತು. ಮದ್ಯ, ಧೂಮಪಾನ ಹಾಗೂ ತಂಬಾಕು ಸೇವನೆಯನ್ನು ಕೆಎಸ್‌ಆರ್‌ಪಿ ಪಡೆಯಲ್ಲಿ ಕಡ್ಡಾಯವಾಗಿ ನಿಷೇಧಿಸಲಾಯಿತು. ವ್ಯಸನಿಗಳಾಗಿದ್ದವರನ್ನು ಗುರುತಿಸಿ ಮೂರು ತಿಂಗಳು ವೇತನ ಸಹಿತ ರಜೆ ನೀಡಿ ವ್ಯಸನ ಮುಕ್ತ ಕೇಂದ್ರಗಳಲ್ಲಿ ಆರೈಕೆ ಮಾಡಲಾಯಿತು. ಅಲ್ಲದೆ ಫಿಟ್ನೆಸ್ ಕಾಪಾಡಿಕೊಳ್ಳದೆ ಹೋದರೆ ಮುಂಬಡ್ತಿ ಕೊಡಲ್ಲ ಎಂದು ಹೇಳಲಾಯಿತು. ಕಳೆದ ವರ್ಷ 2557 ಬೊಜ್ಜುಧಾರಿಗಳಿದ್ದರು. ಈಗ ಆ ಸಂಖ್ಯೆ 557ಕ್ಕಿಳಿದಿದೆ. ಅದೇ ರೀತಿ 200 ಮಂದಿ ವ್ಯಸನ ಮುಕ್ತರಾಗಿದ್ದಾರೆ. 2020ರಲ್ಲಿ 50 ಮಂದಿ ಮೃತಪಟ್ಟಿದ್ದರೆ, 2021ರಲ್ಲಿ 34 ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಪೊಲೀಸರು ಫಿಟ್ನೆಸ್‌ಗೆ ಆದ್ಯತೆ ನೀಡಿದ್ದಕ್ಕೆ ಈಗ ಫಲಿತಾಂಶ ಸಿಕ್ಕಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಕೊರೋನಾ ಗೆದ್ದ ಬಳಿಕವೂ ಮಾನವೀಯತೆ ಮೆರೆದ KSRP ಪೊಲೀಸ್ರು
ಪ್ರತಿ ಸಿಬ್ಬಂದಿಯ ವೈದ್ಯಕೀಯ ವೆಚ್ಚವನ್ನು ಇಲಾಖೆ ಭರಿಸುತ್ತದೆ. ಪ್ರತಿ ವರ್ಷ ಆರೋಗ್ಯ ತಪಾಸಣೆ(Health Checkup) ನಡೆಸಲಾಗುತ್ತದೆ. ಯಾರಾದರೂ ತೊಂದರೆಗೆ ಸಿಲುಕಿದರೆ ಕೂಡಲೇ ಸ್ಪಂದಿಸಲಾಗುತ್ತದೆ. ಈಗ ಗಂಭೀರ ಸ್ವರೂಪದ ಕಾಯಿಲೆಯಿಂದ 157 ಮಂದಿ ಬಳಲುತ್ತಿದ್ದು, ಅವರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈಗ 557 ಮಂದಿಗೆ ಮಾತ್ರ ಬೊಜ್ಜು
ಫಿಟ್ನೆಸ್, ವ್ಯಸನ ಮುಕ್ತಿ ಕಾರ್ಯಕ್ರಮ ಹಾಗೂ ಶಿಸ್ತು ಜಾರಿಗೊಳಿಸಲು ಮುಂದಾದಾಗ ಕೆಎಸ್‌ಆರ್‌ಪಿ ಸಿಬ್ಬಂದಿ ವರ್ಗದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಈ ಅಪಸ್ವರಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದರಿಂದ ಫಲಿತಾಂಶ ಸಿಕ್ಕಿದೆ. ಕಳೆದ ವರ್ಷ 2557 ಬೊಜ್ಜುಧಾರಿಗಳಿದ್ದರು. ಈಗ ಆ ಸಂಖ್ಯೆ 557ಕ್ಕಿಳಿದಿದೆ ಅಂತ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.