Asianet Suvarna News Asianet Suvarna News

Pro Kabaddi League ಪುಣೇರಿ ಪಲ್ಟಾನ್ ಮಡಿಲಿಗೆ ಚೊಚ್ಚಲ ಪ್ರೊ ಕಬಡ್ಡಿ ಕಿರೀಟ

ದ್ವಿತಿಯಾರ್ಧದಲ್ಲಿ ಹರ್ಯಾಣ ಪುಟಿದೆದ್ದು ತಿರುಗೇಟು ನೀಡಲಿದೆ ಎಂಬ ನಿರೀಕ್ಷೆ ಆರಂಭದಲ್ಲಿ ಹುಸಿಯಾಯಿತು. 23ನೇ ನಿಮಿಷದಲ್ಲಿ ಅಂಕಣದಲ್ಲಿ ಉಳಿದಿದ್ದ ಇಬ್ಬರನ್ನೂ ಔಟ್‌ ಮಾಡಿದ ಮೋಹಿತ್‌, ಆಲೌಟ್‌ ಮೂಲಕ ತಂಡಕ್ಕೆ 4 ಅಂಕದ ಉಡುಗೊರೆ ನೀಡಿದರು. ಆವಾಗ ಸ್ಕೋರ್‌ 18-11.

Puneri Paltan Clinch Maiden Pro Kabaddi Title With Thrilling Victory Over Haryana Steelers kvn
Author
First Published Mar 2, 2024, 9:21 AM IST

-ನಾಸಿರ್‌ ಸಜಿಪ, ಕನ್ನಡಪ್ರಭ 

ಹೈದರಾಬಾದ್‌(ಮಾ.03): ಪ್ರಬಲ ಎದುರಾಳಿಯೇ ಇಲ್ಲ ಎಂಬಂತೆ ಟೂರ್ನಿಯುದ್ದಕ್ಕೂ ಅಬ್ಬರಿಸಿ ಬೊಬ್ಬಿರಿದು ಪರಾಕ್ರಮ ಮೆರೆದ ಪುಣೇರಿ ಪಲ್ಟನ್‌ 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕಳೆದ ಬಾರಿ ಫೈನಲ್‌ನಲ್ಲಿ ಸೋತು ತಪ್ಪಿಸಿಕೊಂಡಿದ್ದ ಟ್ರೋಫಿಯನ್ನು ಈ ಬಾರಿ ಬಲಿಷ್ಠ ಹರ್ಯಾಣ ಸ್ಟೀಲರ್ಸ್‌ ವಿರುದ್ಧ ಗೆದ್ದು ತನ್ನದಾಗಿಸಿಕೊಂಡಿತು. ಶುಕ್ರವಾರ ಭರ್ಜರಿ ಪೈಪೋಟಿ, ರೋಚಕತೆಯನ್ನು ಕಟ್ಟಿಕೊಟ್ಟ ಫೈನಲ್‌ ಕದನದಲ್ಲಿ ಪುಣೆಗೆ 28-25 ಅಂಕಗಳ ಗೆಲುವು ಲಭಿಸಿತು. ಫೈನಲ್‌ಗೇರಿದ್ದ ಮೊದಲ ಪ್ರಯತ್ನದಲ್ಲೇ ಟ್ರೋಫಿ ತನ್ನದಾಗಿಸಿಕೊಳ್ಳುವ ಹರ್ಯಾಣದ ಕನಸು ಭಗ್ನಗೊಂಡಿತು.

ಭಾರಿ ಪೈಪೋಟಿ: ಫೈನಲ್‌ನಲ್ಲಿ ಖಾತೆ ತೆರೆಯಲು ಹರ್ಯಾಣ 6 ನಿಮಿಷಗಳನ್ನು ತೆಗೆದುಕೊಂಡರೂ ಅಂಕ ಗಳಿಕೆಯಲ್ಲೇನೂ ತಂಡ ಹಿಂದೆ ಬೀಳಲಿಲ್ಲ. ತಾವೇನು ಕಡಿಮೆ ಇಲ್ಲ ಎಂಬಂತೆ ಪ್ರಬಲ ಪೈಪೋಟಿ ನೀಡಿದ ಹರ್ಯಾಣ, 13ನೇ ನಿಮಿಷದಲ್ಲಿ ಅಂಕವನ್ನು 6-6ರಿಂದ ಸಮಬಲಗೊಳಿಸಿತು. ಆದರೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಪುಣೆ, ಯಾವ ಕ್ಷಣದಲ್ಲೂ ಸ್ಕೋರ್‌ನಲ್ಲಿ ಮುನ್ನಡೆ ಸಾಧಿಸಲು ಹರ್ಯಾಣಕ್ಕೆ ಅವಕಾಶ ನೀಡಲಿಲ್ಲ. 18 ನಿಮಿಷಗಳವರೆಗೂ ಇತ್ತಂಡಗಳ ಒಟ್ಟು ಅಂಕ 16 ದಾಟಿರಲಿಲ್ಲ ಎಂಬುದು ರೋಚಕತೆ ಎಷ್ಟಿತ್ತು ಎಂಬುದಕ್ಕೆ ಸಾಕ್ಷಿ. ಆದರೆ ಕೊನೆ 1 ನಿಮಿಷ ಬಾಕಿ ಇದ್ದಾಗ ಒಂದೇ ರೈಡಲ್ಲಿ 4 ಅಂಕ ಸಂಪಾದಿಸಿದ ಪುಣೆಯ ಪಂಕಜ್‌ ಮೊದಲಾರ್ಧಕ್ಕೆ ತಂಡ 13-10ರಲ್ಲಿ ಲೀಡ್‌ ಪಡೆಯಲು ನೆರವಾದರು.

ಡೋಪಿಂಗ್‌ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ಯುವೆಂಟಸ್ ಫುಟ್ಬಾಲ್ ತಾರೆ ಪೌಲ್ ಪೋಗ್ಬಾ 4 ವರ್ಷ ಬ್ಯಾನ್‌..!

ದ್ವಿತಿಯಾರ್ಧದಲ್ಲಿ ಹರ್ಯಾಣ ಪುಟಿದೆದ್ದು ತಿರುಗೇಟು ನೀಡಲಿದೆ ಎಂಬ ನಿರೀಕ್ಷೆ ಆರಂಭದಲ್ಲಿ ಹುಸಿಯಾಯಿತು. 23ನೇ ನಿಮಿಷದಲ್ಲಿ ಅಂಕಣದಲ್ಲಿ ಉಳಿದಿದ್ದ ಇಬ್ಬರನ್ನೂ ಔಟ್‌ ಮಾಡಿದ ಮೋಹಿತ್‌, ಆಲೌಟ್‌ ಮೂಲಕ ತಂಡಕ್ಕೆ 4 ಅಂಕದ ಉಡುಗೊರೆ ನೀಡಿದರು. ಆವಾಗ ಸ್ಕೋರ್‌ 18-11.

ಆ ಬಳಿಕ ಒತ್ತಡದಲ್ಲೇ ಆಡಿದ ಹರ್ಯಾಣ ಅಂಕದಲ್ಲಿನ ಅಂತರವನ್ನು ಕಡಿಮೆಗೊಳಿಸಿದ್ದು ಕೊನೆ ನಿಮಿಷದಲ್ಲಿ. ಆದರೆ ಪಂದ್ಯ ಅದಾಗಲೇ ಹರ್ಯಾಣದ ಕೈ ಜಾರಿ ಆಗಿತ್ತು. ಒಮ್ಮೆ ಕೂಡಾ ಅಂಕ ಗಳಿಕೆಯಲ್ಲಿ ಹರ್ಯಾಣಕ್ಕೆ ಲೀಡ್‌ ಕೊಡದ ಪುಣೆ ಅಧಿಕಾರಯುತವಾಗಿಯೇ ಪ್ರಶಸ್ತಿ ತನ್ನದಾಗಿಸಿಕೊಂಡಿತು. 9 ಅಂಕ ಗಳಿಸಿದ ಪಂಕಜ್‌, 5 ಅಂಕ ಗಳಿಸಿದ ಪಂಕಜ್‌ ಪುಣೆಯ ಗೆಲುವಿನ ರೂವಾರಿ ಎನಿಸಿಕೊಂಡರು. ಟೂರ್ನಿಯುದ್ದಕ್ಕೂ ಡಿಫೆನ್ಸ್‌ನಲ್ಲಿ ಅಬ್ಬರಿಸಿದ್ದ ನಾಯಕ ಜೈದೀಪ್‌, ಮೋಹಿತ್‌ ಫೈನಲ್‌ನಲ್ಲಿ ಒಂದೂ ಅಂಕ ಗಳಿಸದೆ ಇದ್ದಿದ್ದು ಹರ್ಯಾಣದ ಸೋಲಿಗೆ ಪ್ರಮುಖ ಕಾರಣವಾಯಿತು. ತಾರಾ ರೈಡರ್‌ ವಿನಯ್‌ ಗಳಿಸಿದ್ದು 3 ಅಂಕ ಮಾತ್ರ.

ಕರ್ನಾಟಕದ ಕೋಚ್‌ ರಮೇಶ್‌ಗೆ 3ನೇ ಕಪ್‌

ಕರ್ನಾಟಕದ ಬಿ.ಸಿ.ರಮೇಶ್‌ ಅವರು ಕೋಚ್‌ ಆಗಿ 3ನೇ ಪ್ರೊ ಕಬಡ್ಡಿ ಟ್ರೋಫಿ ತಮ್ಮದಾಗಿಸಿಕೊಂಡರು. ಈ ಮೊದಲು 2018ರಲ್ಲಿ ತಾವು ಸಹಾಯಕ ಕೋಚ್‌ ಆಗಿದ್ದಾಗ ಬೆಂಗಳೂರು ಬುಲ್ಸ್‌, 2019ರಲ್ಲಿ ಪ್ರಧಾನ ಕೋಚ್‌ ಆಗಿ ಬೆಂಗಾಲ್‌ ವಾರಿಯರ್ಸ್‌ ತಂಡಗಳು ಚಾಂಪಿಯನ್‌ ಆಗಿದ್ದವು. ಕಳೆದ ವರ್ಷ ಪುಣೇರಿ ರನ್ನರ್‌-ಅಪ್‌ ಆಗಿದ್ದಾಗಲೂ ತಂಡಕ್ಕೆ ರಮೇಶ್‌ ಮುಖ್ಯ ಕೋಚ್‌ ಆಗಿದ್ದರು.

Pro Kabaddi League: ಪುಣೇರಿ ಪಲ್ಟನ್ vs ಹರ್ಯಾಣ ಸ್ಟೀಲರ್ಸ್ ಫೈನಲ್ ಫೈಟ್

ಅಸ್ಲಂ ಶ್ರೇಷ್ಠ ಆಟಗಾರ ಆಶು ಶ್ರೇಷ್ಠ ರೈಡರ್‌

ಪುಣೆ ನಾಯಕ ಅಸ್ಲಂ ಇನಾಮ್ದಾರ್‌ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು. 23 ಪಂದ್ಯಗಳಲ್ಲಿ 276 ಅಂಕ ಸಂಪಾದಿಸಿದ ಡೆಲ್ಲಿ ತಂಡದ ಆಶು ಮಲಿಕ್‌ ಟೂರ್ನಿಯ ಶ್ರೇಷ್ಠ ರೈಡರ್‌ ಪ್ರಶಸ್ತಿ ಪಡೆದುಕೊಂಡರೆ, 24 ಪಂದ್ಯಗಳಲ್ಲಿ 99 ಟ್ಯಾಕಲ್‌ ಅಂಕ ಗಳಿಸಿದ ಪುಣೆಯ ಮೊಹಮದ್‌ರೆಜಾ ಶಾದ್ಲೂ ಶ್ರೇಷ್ಠ ಡಿಫೆಂಡರ್‌ ಗೌರವಕ್ಕೆ ಪಾತ್ರರಾದರು.

99 ಪಾಯಿಂಟ್ಸ್‌: ಶಾದ್ಲೂ ದಾಖಲೆ

99 ಟ್ಯಾಕಲ್‌ ಅಂಕ ಸಂಪಾದಿಸಿದ ಪುಣೆಯ ಶಾದ್ಲೂ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಟ್ಯಾಕಲ್‌ ಅಂಕ ಗಳಿಸಿದ ವಿದೇಶಿ ಆಟಗಾರ ಎನಿಸಿಕೊಂಡರು. ಒಟ್ಟಾರೆ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಟ್ಯಾಕಲ್‌ ಅಂಕ ಪಡೆದ ದಾಖಲೆ ಯು.ಪಿ.ಯೋಧಾಸ್‌ನ ನಿತೇಶ್‌ ಕುಮಾರ್‌ ಹೆಸರಲ್ಲಿದೆ. 2018ರಲ್ಲಿ ಅವರು 100 ಅಂಕ ಪಡೆದಿದ್ದರು.

₹03 ಕೋಟಿ: ಚಾಂಪಿಯನ್‌ ಪುಣೇರಿಗೆ ಸಿಕ್ಕ ಬಹುಮಾನ ಮೊತ್ತ 3 ಕೋಟಿ ರು.

₹1.8 ಕೋಟಿ: ರನ್ನರ್‌-ಅಪ್‌ ಹರ್ಯಾಣ 1.8 ಕೋಟಿ ರು. ತನ್ನದಾಗಿಸಿಕೊಂಡಿತು.

ಕಳೆದ ಬಾರಿ ಕಠಿಣ ಪರಿಶ್ರಮ ಪಟ್ಟರೂ ಟ್ರೋಫಿ ಗೆಲ್ಲಲು ಆಗಿರಲಿಲ್ಲ. ಆದರೆ ಈ ಬಾರಿ ಯಾವುದೇ ತಪ್ಪಾಗದಂತೆ ನೋಡಿಕೊಂಡು ಕಪ್‌ ಗೆದ್ದಿದ್ದೇವೆ. ಶಾದ್ಲೂ ನಮ್ಮ ಸೂಪರ್‌ಸ್ಟಾರ್‌. ಅಸ್ಲಂ, ಪಂಕಜ್ ಕೂಡಾ ಅಭೂತಪೂರ್ವ ಪ್ರದರ್ಶನ ನೀಡಿದರು. ತಂಡದ ಪ್ರತಿಯೊಬ್ಬರ ಪ್ರದರ್ಶನವೂ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

-ಬಿ.ಸಿ. ರಮೇಶ್‌, ಪುಣೇರಿ ಪಲ್ಟನ್‌ ಕೋಚ್‌
 

Follow Us:
Download App:
  • android
  • ios