ಕಿವುಡರ ಒಲಿಂಪಿಕ್ಸ್ ಸಾಧಕರಿಗೆ ಪ್ರಧಾನಿ ನರೇಂದ್ರ ಮೋದಿ ಔತಣ
* 24ನೇ ಕಿವುಡರ ಒಲಿಂಪಿಕ್ಸ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದ ಭಾರತ
* ಸಾಧನೆ ತೋರಿದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಭೋಜನ ಕೂಟ
* ಭಾರತ ಈ ಬಾರಿ 8 ಚಿನ್ನ, 1 ಬೆಳ್ಳಿ, 8 ಕಂಚು ಗೆದ್ದು ಸಾರ್ವಕಾಲಿಕ ಪ್ರದರ್ಶನ ತೋರಿದೆ
ನವದೆಹಲಿ(ಮೇ.22): ಬ್ರೆಜಿಲ್‌ನಲ್ಲಿ ನಡೆದ 24ನೇ ಕಿವುಡರ ಒಲಿಂಪಿಕ್ಸ್‌ನಲ್ಲಿ (Deaflympics 2021) ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ಕ್ರೀಡಾಪಟುಗಳಿಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ತಮ್ಮ ನಿವಾಸದಲ್ಲಿ ಭೋಜನ ಕೂಟ ಏರ್ಪಡಿಸಿದರು. ಈ ವೇಳೆ ಕ್ರೀಡಾಪಟುಗಳ ಜೊತೆ ಸಂವಾದ ನಡೆಸಿದ ಅವರು, ನೀವು ದೇಶದ ವೈಭವ ಹೆಚ್ಚಿಸಿದ್ದೀರಿ ಮತ್ತು ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದೀರಿ ಎಂದು ಶ್ಲಾಘಿಸಿದರು.
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕಿವುಡರ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ ನಮ್ಮ ಚಾಂಪಿಯನ್ನರ ಜತೆ ಮಾತುಕತೆ ನಡೆಸಿದ್ದನ್ನು ನಾನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಅಥ್ಲೀಟ್‌ಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು ಹಾಗೂ ನಾನು ಅವರಲ್ಲಿನ ಕ್ರೀಡೆಯ ಬಗೆಗಿನ ಆಸಕ್ತಿ ಹಾಗೂ ಉತ್ಸಾಹವನ್ನು ಗಮನಿಸಿದೆ. ಎಲ್ಲರಿಗೂ ಶುಭವಾಗಲಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಒಲಿಂಪಿಕ್ಸ್‌ನ ಅನುಭವಗಳನ್ನು ಪ್ರಧಾನಿ ಜೊತೆ ಹಂಚಿಕೊಂಡ ಕ್ರೀಡಾಪಟುಗಳು ತಮ್ಮ ಹಸ್ತಾಕ್ಷರ ಇರುವ ಜೆರ್ಸಿ ಹಾಗೂ ಶಾಲುವನ್ನು ಅವರಿಗೆ ಉಡುಗೊರೆಯಾಗಿ ನೀಡಿದರು. ಈ ವೇಳೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡಾ ಉಪಸ್ಥಿತರಿದ್ದರು.
ಸಾರ್ವಕಾಲಿಕ ಶ್ರೇಷ್ಠ ಸಾಧನೆ: ಭಾರತ ಈ ಬಾರಿ 8 ಚಿನ್ನ, 1 ಬೆಳ್ಳಿ, 8 ಕಂಚು (ಒಟ್ಟು 17 ಪದಕ) ಗೆದ್ದು ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿದೆ. ಈ ಹಿಂದೆ ಒಂದು ಆವೃತ್ತಿಯಲ್ಲಿ ಭಾರತ ಗೆದ್ದ ಗರಿಷ್ಠ ಪದಕಗಳ ದಾಖಲೆ 7. 1993, 1997, 2005ರಲ್ಲಿ ಭಾರತ ತಲಾ 7 ಪದಕಗಳನ್ನು ಗೆದ್ದಿತ್ತು.
ಥಾಯ್ಲೆಂಡ್ ಓಪನ್: ಹೊರಬಿದ್ದ ಸಿಂಧು
ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಮಾಜಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಶನಿವಾರ 43 ನಿಮಿಷಗಳ ಕಾಲ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಟೋಕಿಯೋ ಒಲಿಂಪಿಕ್ಸ್ (Tokyo Olympics) ಚಾಂಪಿಯನ್, ವಿಶ್ವ ನಂ.4 ಚೀನಾದ ಚೆನ್ ಯು ಫೀ ವಿರುದ್ಧ 17-21, 16-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು.
ಆರಂಭದಲ್ಲಿ ಸಿಂಧು ಮೇಲುಗೈ ಸಾಧಿಸಿದ್ದರೂ ಬಳಿಕ ಚೆನ್ ಪ್ರಾಬಲ್ಯ ಸಾಧಿಸಿ ಫೈನಲ್ ಪ್ರವೇಶಿಸಿದರು. ಕೊನೆ ಬಾರಿ 2019ರಲ್ಲಿ ವರ್ಲ್ಡ್ ಟೂರ್ ಫೈನಲ್ಸ್‌ನ ಮುಖಾಮುಖಿಯಲ್ಲೂ ಸಿಂಧು, ಚೆನ್‌ಗೆ ಶರಣಾಗಿದ್ದರು.
ಆರ್ಚರಿ ವಿಶ್ವಕಪ್: ಭಾರತ ಕಾಂಪೌಂಡ್ ತಂಡಕ್ಕೆ ಚಿನ್ನ
ಗ್ವಾಂಗ್‌ಜು(ದ.ಕೊರಿಯಾ): ಭಾರತ ಪುರುಷರ ಕಾಂಪೌಂಡ್ ಆರ್ಚರಿ ತಂಡ ದ.ಕೊರಿಯಾದಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. ಶನಿವಾರ ಫೈನಲ್‌ನಲ್ಲಿ ಅಭಿಷೇಕ್ ವರ್ಮಾ, ಅಮನ್ ಸೈನಿ, ರಜತ್ ಚೌಹಾಣ್ ಅವರಿದ್ದ ಭಾರತ ತಂಡ ಫ್ರಾನ್ಸ್ ವಿರುದ್ಧ 232-230ರಲ್ಲಿ ಗೆದ್ದು ಚಿನ್ನ ತನ್ನದಾಗಿಸಿಕೊಂಡಿತು.
ಥಾಯ್ಲೆಂಡ್ ಓಪನ್‌ನಲ್ಲಿ ಪಿ ವಿ ಸಿಂಧು ಸೆಮಿಫೈನಲ್‌ಗೆ ಲಗ್ಗೆ
ಏಪ್ರಿಲ್‌ನಲ್ಲಿ ಟರ್ಕಿಯಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್‌ನಲ್ಲೂ ಫ್ರಾನ್ಸ್ ವಿರುದ್ಧ ಗೆದ್ದಿದ್ದ ಭಾರತಕ್ಕೆ ಇದು ಸತತ 2ನೇ ಚಿನ್ನ. ಇನ್ನು ಪುರುಷರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಮೋಹನ್ ಭಾರದ್ವಾಜ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. ಕೂಟದಲ್ಲಿ ಭಾರತ ಕಾಂಪೌಂಡ್ ಮಿಶ್ರ ತಂಡ, ಕಾಂಪೌಂಡ್ ಮಹಿಳಾ ತಂಡ, ರೀಕವ್‌ರ್ ಮಹಿಳಾ ತಂಡ ಕಂಚು ಜಯಿಸಿದೆ.