* ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಭರ್ಜರಿ ಪ್ರದರ್ಶನ*  ವಿಶ್ವ ನಂ.1 ಜಪಾನಿನ ಅಕಾನೆ ಯಮಗುಚಿ ವಿರುದ್ದ ಸಿಂಧುಗೆ ಭರ್ಜರಿ ಜಯ* ಜಪಾನಿನ ಅಕಾನೆ ವಿರುದ್ದ ಗೆದ್ದ ಸಿಂಧುಗೆ ಸೆಮೀಸ್‌ನಲ್ಲಿ ಚೈನಾ ಆಟಗಾರ್ತಿ ಎದುರಾಳಿ

ಬ್ಯಾಂಕಾಕ್‌: ಮಾಜಿ ವಿಶ್ವ ಚಾಂಪಿಯನ್‌, ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು (PV Sindhu) ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (Thailand Open Badminton Tournament) ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶುಕ್ರವಾರ 51 ನಿಮಿಷಗಳ ಕಾಲ ನಡೆದ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸಿಂಧು, ವಿಶ್ವ ನಂ.1 ಜಪಾನಿನ ಅಕಾನೆ ಯಮಗುಚಿ (Akane Yamaguchi) ವಿರುದ್ಧ 21-​15, 20-​22, 21-​13 ಅಂತರದಲ್ಲಿ ಗೆಲುವು ಸಾಧಿಸಿದರು. ಮೊದಲ ಸುತ್ತಿನಲ್ಲಿ ಸಿಂಧು ಪ್ರಾಬಲ್ಯ ಸಾಧಿಸಿದರೂ, 2ನೇ ಸುತ್ತಲ್ಲಿ ಯಮಗುಚಿ ತಿರುಗೇಟು ನೀಡಿದರು. ನಿರ್ಣಾಯಕ ಘಟ್ಟದಲ್ಲಿ ಮತ್ತೆ ಮೇಲುಗೈ ಸಾಧಿಸಿದ ಸಿಂಧು ಪಂದ್ಯ ಗೆದ್ದರು.

ಇದರೊಂದಿಗೆ ಹಾಲಿ ವಿಶ್ವ ಚಾಂಪಿಯನ್‌ ಯಮಗುಚಿ ವಿರುದ್ಧ ಸಿಂಧು ತಮ್ಮ ಗೆಲುವಿನ ಓಟವನ್ನು 14-9ಕ್ಕೆ ಏರಿಸಿದ್ದಾರೆ. ಸೆಮೀಸ್‌ನಲ್ಲಿ ಸಿಂಧು ಒಲಿಂಪಿಕ್ಸ್‌ ಚಾಂಪಿಯನ್‌, ಚೀನಾದ ಚೆನ್‌ ಯು ಫೀ ವಿರುದ್ಧ ಸೆಣಸಾಡಲಿದ್ದಾರೆ.

ಮಹಿಳಾ ಹಾಕಿ ಫೈವ್ಸ್‌: ಭಾರತಕ್ಕೆ ರಾಜಾನಿ ನಾಯಕಿ

ನವದೆಹಲಿ: ಚೊಚ್ಚಲ ಆವೃತ್ತಿಯ ಮಹಿಳಾ ಎಫ್‌ಐಎಚ್‌ ಹಾಕಿ ಫೈವ್ಸ್‌ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದ್ದು, ರಾಜಾನಿ ಎತಿಮರ್ಪು ತಂಡವನ್ನು ಮುನ್ನಡೆಸಲಿದ್ದಾರೆ. . ಸ್ವಿಜರ್‌ಲೆಂಡ್‌ನ ಲುಸ್ಸಾನೆಯಲ್ಲಿ ಜೂ.4, 5ರಂದು ನಡೆಯಲಿರುವ ಟೂರ್ನಿಯಲ್ಲಿ ಭಾರತ, ಉರುಗ್ವೆ, ಪೋಲೆಂಡ್‌, ದ.ಆಫ್ರಿಕಾ ಮತ್ತು ಸ್ವಿಜರ್‌ಲೆಂಡ್‌ ವಿರುದ್ಧ ಆಡಲಿವೆ. 

Mini Olympics: ಅಥ್ಲೆಟಿಕ್ಸ್‌ನಲ್ಲಿ ಮೋನಿಶ್, ಸ್ವರಾಗೆ ಚಿನ್ನ

ಮಹಿಮಾ ಚೌಧರಿ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಡಿಫೆಂಡರ್‌ಗಳಾದ ರಶ್ಮಿತಾ ಮಿನ್ಜ್, ಅಜ್ಮಿನಾ ಕೌರ್‌, ವೈಷ್ಣವಿ ಪಾಲ್ಕೆ, ಪ್ರೀತಿ, ಫಾರ್ವರ್ಡ್ಸ್ಗಳಾದ ಮರಿಯಾನ ಕುಜೂರ್‌, ಮುಮ್ತಾಜ್‌ ಖಾನ್‌, ರುತಜಾ ಕೂಡಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸುಮನ್‌ ದೇವಿ ಮತ್ತು ರಾಜ್ವಿಂದರ್‌ ಕೌರ್‌ ಮೀಸಲು ಆಟಗಾರರಾಗಿ ತಂಡದೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ.

ಹಾಕಿ ಏಷ್ಯಾ ಕಪ್‌ ಆಡಲು ಜರ್ಕಾತಕ್ಕೆ ತೆರಳಿದ ಭಾರತ

ಬೆಂಗಳೂರು: ಮೇ 23ರಿಂದ ಜೂನ್‌ 1ರ ವರೆಗೆ ನಡೆಯಲಿರುವ ಹಾಕಿ ಏಷ್ಯಾ ಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹಾಲಿ ಚಾಂಪಿಯನ್‌ ಭಾರತ ತಂಡ ಶುಕ್ರವಾರ ಇಂಡೋನೇಷ್ಯಾದ ಜಕಾರ್ತಕ್ಕೆ ಪ್ರಯಾಣ ಬೆಳೆಸಿತು. ಭಾರತ ‘ಎ’ ಗುಂಪಿನಲ್ಲಿ ಜಪಾನ್‌, ಪಾಕಿಸ್ತಾನ ಹಾಗೂ ಇಂಡೋನೇಷ್ಯಾದ ಜೊತೆ ಸ್ಥಾನ ಪಡೆದಿದ್ದು, ಸೋಮವಾರ ಮೊದಲ ಪಂದ್ಯದಲ್ಲಿ ಪಾಕ್‌ ವಿರುದ್ಧ ಆಡಲಿದೆ.

ಫುಟ್ಬಾಲ್‌ನಲ್ಲಿ ಬೆಂಗ್ಳೂರು ತಂಡಗಳು ಚಾಂಪಿಯನ್‌

ಬೆಂಗಳೂರು: 2ನೇ ಆವೃತ್ತಿ ಕರ್ನಾಟಕ ಮಿನಿ ಒಲಿಂಪಿಕ್ಸ್‌ನ ಫುಟ್ಬಾಲ್‌ನಲ್ಲಿ ಬೆಂಗಳೂರು ಹಾಗೂ ಬೆಂಗಳೂರು ನಗರ ತಂಡಗಳು ಕ್ರಮವಾಗಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿವೆ. ಶುಕ್ರವಾರ ನಡೆದ ಬಾಲಕರ ಫೈನಲ್‌ನಲ್ಲಿ ಬೆಂಗಳೂರು ತಂಡ ಮೈಸೂರನ್ನು ಸೋಲಿಸಿದರೆ, ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ನಗರ ತಂಡ ಬೆಂಗಳೂರು ಗ್ರಾಮಾಂತರ ವಿರುದ್ಧ ಗೆಲುವು ಸಾಧಿಸಿತು.

ಅಥ್ಲೆಟಿಕ್ಸ್‌ ಬಾಲಕರ 600 ಮೀ. ಓಟದಲ್ಲಿ ಧಾರವಾಡದ ಸೆಯ್ಯದ್‌ ಸಬೀರ್‌, ಬಾಲಕಿಯರ ವಿಭಾಗದಲ್ಲಿ ಶಿವಮೊಗ್ಗದ ಅನಘ್ರ್ಯ ಚಿನ್ನ ಗೆದ್ದರು. 800 ಮೀ. ಹರ್ಡಲ್ಸ್‌ನಲ್ಲಿ ಕನಕಪುರದ ಚಂದನ್‌ ಹಾಗೂ ಬೆಂಗಳೂರಿನ ಹರ್ಷಿತಾ ಕ್ರಮವಾಗಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಬಂಗಾರಕ್ಕೆ ಮುತ್ತಿಕ್ಕಿದರು. ಬಾಲಕರ ಖೋ-ಖೋ ಸ್ಪರ್ಧೆಯಲ್ಲಿ ವಿಜಯನಗರ, ಬಾಲಕಿಯ ವಿಭಾಗದಲ್ಲಿ ಬೆಳಗಾಗಿ ಚಾಂಪಿಯನ್‌ ಆಯಿತು. ಬ್ಯಾಡ್ಮಿಂಟನ್‌ ಬಾಲಕರ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಅಭಿನವ್‌, ಬಾಲಕಿಯರ ಸಿಂಗಲ್ಸ್‌ನಲ್ಲಿ ಮೈಸೂರಿನ ಜಾಡೆ ಅನಿಲ್‌ ಚಿನ್ನ ಪಡೆದರು. ರೈಫಲ್‌ ಶೂಟಿಂಗ್‌ನ 10 ಮೀ. ಏರ್‌ ಪಿಸ್ತೂಲ್‌ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಜೊನಾಥನ್‌ ಅಂಥೋನಿ, ಬಾಲಕಿಯರ 10 ಮೀ. ಪಿಸ್ತೂಲ್‌ನಲ್ಲಿ ಬೆಂಗಳೂರಿನ ತ್ರಿಷ್ನಾ ಧಮ್ನೇಕರ್‌ ಬಂಗಾರ ಗೆದ್ದರು.

ಲಾನ್‌ ಟೆನಿಸ್‌ ಬಾಲಕರ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ತನುಷ್‌, ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ಸಾಯಿ ಜಾನ್ವಿ, ಬಾಲಕಿಯರ ಡಬಲ್ಸ್‌ನಲ್ಲಿ ಬೆಂಗಳೂರಿನ ಅನ್ವಿ-ಮೇಘನಾ ಚಾಂಪಿಯನ್‌ ಆದರು.