ನೊವೆ ಮೆಸ್ಟೊ (ಜು.21): ಭಾರತದ ತಾರಾ ಅಥ್ಲೀಟ್ ಹಿಮಾ ದಾಸ್, ಜೆಕ್ ಗಣರಾಜ್ಯದ ವೆಲ್ಕಾ ಸಿನಾ ಮೆಜಿನರೊಡನಿ ಅಥ್ಲೆಟಿಕ್ಸ್ ಕೂಟದ ಮಹಿಳೆಯರ ವಿಭಾಗದ 400 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ಹಿಮಾ 52.88 ಸೆ.ಗಳಲ್ಲಿ ಗುರಿ ಪೂರ್ಣಗೊಳಿಸಿ 2ನೇ ಸ್ಥಾನದೊಂದಿಗೆ ಫೈನಲ್ ಗೇರುವ ಮೂಲಕ ಚಿನ್ನ ಜಯಿಸುವ ವಿಶ್ವಾಸ ಮೂಡಿಸಿದ್ದರು. ಈ ಹಿಂದಿನ 4 ಚಿನ್ನದ ಪದಕವನ್ನು ಹಿಮಾ 200 ಮೀ. ಓಟದಲ್ಲಿ ಪಡೆದಿದ್ದರು. ಆದರೆ ಈ ಬಾರಿ 400 ಮೀ. ಓಟದಲ್ಲಿ ಹಿಮಾ ಚಿನ್ನದ ಸಾಧನೆ ಮಾಡಿದ್ದಾರೆ. 

ಹಿಮಾದಾಸ್ ಸಾಧನೆ ಕೊಂಡಾಡಿದ ಅಮುಲ್..!

ಹಿಮಾ 400 ಮೀ. ಓಟದಲ್ಲಿ ವೈಯಕ್ತಿಕ ಗರಿಷ್ಠ 50.79 ಸೆ. ಆಗಿದೆ. ಈ ಕೂಟದಲ್ಲಿ ಹಿಮಾ ಹೆಚ್ಚಿನ ಅವಧಿ ತೆಗೆದುಕೊಂಡು ಗುರಿ ಪೂರ್ಣ ಗೊಳಿಸಿದರು. ವಿಶ್ವ ಚಾಂಪಿಯನ್‌ಶಿಪ್ ಅರ್ಹತೆಗೆ 51.80 ಸೆ. ಗಳಲ್ಲಿ ನಿಗದಿತ 400 ಮೀ. ಗುರಿಯನ್ನು ಪೂರ್ಣ ಗೊಳಿಸಬೇಕಿತ್ತು. ಈ ಅವಕಾಶವನ್ನು ಹಿಮಾ ದಾಸ್ ಕೊಂಚದರಲ್ಲಿ ತಪ್ಪಿಸಿಕೊಂಡರು. ಜುಲೈ 2 ರಿಂದ ಜುಲೈ 20ರ ಅವಧಿಯಲ್ಲಿ ಹಿಮಾ 5 ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ. 

15 ದಿನಗಳಲ್ಲಿ ನಾಲ್ಕನೇ ಚಿನ್ನ ಗೆದ್ದ ಹಿಮಾ ದಾಸ್..!

ಜುಲೈ 2 ರಂದು ಪೋಲೆಂಡ್‌ನಲ್ಲಿ ನಡೆದಿದ್ದ ಪೋಜ್ನಾನ್ ಅಥ್ಲೆಟಿಕ್ಸ್ ಗ್ರ್ಯಾನ್ ಪ್ರಿ ಕೂಟದ 200 ಮೀ. ಸ್ಪರ್ಧೆ ಯಲ್ಲಿ ಹಿಮಾ 23.65 ಸೆ.ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದಿದ್ದರು. ಬಳಿಕ ಜು.7 ರಂದು ಪೋಲೆಂಡ್‌ನಲ್ಲಿ ನಡೆದಿದ್ದ ಕುಟ್ನೋ ಅಥ್ಲೆಟಿಕ್ಸ್ ಕೂಟದ 200 ಮೀ. ಓಟದಲ್ಲಿ ಹಿಮಾ ದಾಸ್ 23.97 ಸೆ.ಗಳಲ್ಲಿ ಗುರಿ ಯನ್ನು ಪೂರ್ಣಗೊಳಿಸಿ ಚಿನ್ನದ ಪದಕ ಜಯಿಸಿದ್ದರು. ನಂತರ ಜು. 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದಿದ್ದ ಕ್ಲಾಡ್ನೋ ಅಥ್ಲೆಟಿಕ್ಸ್ ಕೂಟದ 200 ಮೀ. ಸ್ಪರ್ಧೆ ಯಲ್ಲಿ 23.43 ಸೆ.ಗಳಲ್ಲಿ ಗುರಿ ಮುಟ್ಟಿ ಹಿಮಾ 3ನೇ ಚಿನ್ನ ಜಯಿಸಿದ್ದರು. ಜು.17 ರಂದು ಜೆಕ್ ಗಣರಾಜ್ಯ ದಲ್ಲಿ ನಡೆದಿದ್ದ ಟಬೂರ್ ಗ್ರ್ಯಾನ್ ಪ್ರಿ ಅಥ್ಲೆಟಿಕ್ಸ್ ಕೂಟದ 200 ಮೀ. ಓಟದಲ್ಲಿ 23.25 ಸೆ.ಗಳಲ್ಲಿ ಗುರಿ ತಲುಪಿ ಚಿನ್ನ ಜಯಿಸಿದರು. ಇದು ಕೂಡ ಕೇವಲ 15 ದಿನಗಳಲ್ಲಿ 4 ಚಿನ್ನ ಗೆದ್ದ ಸಾಧನೆಯನ್ನು ಹಿಮಾ ಮಾಡಿದ್ದರು. 

ಇದರಲ್ಲಿ ಹಿಮಾ ಜೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕ್ಸ್ ಕೂಟದಲ್ಲಿ 3 ಚಿನ್ನ, ಪೋಲೆಂಡ್‌ನಲ್ಲಿ 2 ಚಿನ್ನ ಗೆದ್ದಿದ್ದಾರೆ. ಈ ಋತುವಿನಲ್ಲಿ ಹಿಮಾ ದಾಸ್ 400 ಮೀ. ಓಟದಲ್ಲಿ ಮೊದಲ ಚಿನ್ನ ಗೆದ್ದಿದ್ದಾರೆ. ಏಪ್ರಿಲ್‌ನಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 400 ಮೀ. ಓಟದಲ್ಲಿ ಹಿಮಾ ಪದಕ ಜಯಿಸುವಲ್ಲಿ ವಂಚಿತರಾಗಿದ್ದರು.