Asianet Suvarna News Asianet Suvarna News

ಬುದ್ಧ ಬೌಲ್‌ನ ಕೌತುಕ: ಸಮತೋಲನ ಆಹಾರದ ಸಾತ್ವಿಕ ತಟ್ಟೆ!

ಅಡುಗೆ ಮಾಡೋದು ಒಂದು ಕಲೆ. ಇದರಲ್ಲಿ ಯಾರಿಗೂ ಅನುಮಾನವೇ ಇಲ್ಲ. ಮಾಡಿದ ರುಚಿ ರುಚಿಯಾದ ಆಹಾರವನ್ನು ತಿನ್ನುವುದೂ ಒಂದ ಕಲೆ. ಡೆನ್ಮಾರ್ಕ್‌ನಲ್ಲಿ ಸಿಗೋ ಬುದ್ಧ ಬೌಲ್ ಹೇಗಿರುತ್ತೆ?

vegan food bhuddha bowl food system in denmark restaurant menu card travelogue
Author
First Published Jun 12, 2024, 3:35 PM IST

- ಡಾ.ಪದ್ಮಿನಿ ನಾಗರಾಜು

ನಾವು ಡೆನ್ಮಾರ್ಕ್‌ನ ರಾಜಧಾನಿ ಕೋಪನ್‍ ಹೇಗನ್‍ನಿಂದ ಲಿಂಫ್‌ ಜೋರ್ಡ್‌ ಡಾಲ್ಫಿನ್ ಸಫಾರಿ ನೋಡಿ ಅಲ್ಲಿಂದ ಕೋಪನ್ ಹೇಗನ್‍ಗೆ ಮರುದಿನ ತಲುಪಿದಾಗ ಮಧ್ಯಾಹ್ನ 12 ಗಂಟೆ ಆಗಿತ್ತು. ಮೊದಲೇ ಹುಡುಕಿಟ್ಟಿದ್ದ ಹೋಟೆಲ್‍ಗೆ ಹೋದರೆ ಅಲ್ಲಿ ಭಾನುವಾರದಂದು ಸಂಜೆ ಮಾತ್ರ ತೆಗೆಯುವುದು ಎಂದು ತಿಳಿಯಿತು. ಹತ್ತಿರದಲ್ಲೇ ಇದ್ದ ವೀಗನ್ ಹೋಟೆಲನ್ನು ವಿನೀತ್ ಪತ್ತೆ ಮಾಡಿದ. ಸಾಕಷ್ಟು ಜನರು ವೀಗನ್ ರೆಸ್ಟೊರೆಂಟ್‍ನಲ್ಲಿ ಸೇರಿದ್ದರು.

ಮೆನು ಕಾರ್ಡಿನಲ್ಲಿ ವೀಗನ್ ಆಹಾರಗಳ ಜೊತೆ ‘ಬುದ್ಧ ಬೌಲ್’ ಎಂದು ಬರೆದಿತ್ತು. ನಾನು ಕುತೂಹಲದಿಂದ ಹಾಗೆಂದರೇನು ಎಂದು ಮಗಳು ಅಮೂಲ್ಯಳನ್ನು ಕೇಳಿದೆ. ‘ಅದೊಂದು ಬ್ಯಾಲೆನ್ಸ್ ಬೌಲ್, ನಿನಗೆ ತರಿಸಲೇ?’ ಎಂದು ಕೇಳಿದಳು.

ನಾನು ಕುತೂಹಲದಿಂದಲೇ, ‘ಅರ್ಡರ್ ಮಾಡು’ ಎಂದೆ. ಸುಮಾರು ಅರ್ಧಗಂಟೆ ಕಾಯುವಿಕೆಯ ನಂತರ ಬುದ್ಧ ಬೌಲ್ ಬಂತು. ಬ್ರೌನ್ ರೈಸ್, ತಾಜಾ ತರಕಾರಿಗಳು, ಹಸಿರು ಎಲೆಗಳು, ಮೊಳಕೆ ಕಟ್ಟಿದ ಧಾನ್ಯಗಳು, ರುಚಿಕರವಾದ ಸಸ್ಯಮೂಲದ ಸಾಸ್, ಕೆಲವು ಹಣ್ಣಿನ ಹೋಳುಗಳು, ಸಣ್ಣ ಹೋಳು ಉಪ್ಪಿನಕಾಯಿಯನ್ನು ಒಳಗೊಂಡ ಸಮತೋಲನ ತಟ್ಟೆ ನನ್ನ ಮುಂದಿತ್ತು. ಅವೆಲ್ಲವನ್ನು ಒಂದರ ಪಕ್ಕ ಒಂದನ್ನು ಜೋಡಿಸಿಡಲಾಗಿತ್ತು. ಮೇಲೆ ಎಳ್ಳಿನಿಂದ ಅಲಂಕರಿಸಲಾಗಿತ್ತು.

ವೈರಲ್ ಹುಳುಗಳ ಬರ್ಗರ್; 'ಮೊದಲು ನೀವದನ್ನು ತಿನ್ನಿ ನಂತರ ಅವು ನಿಮ್ಮನ್ನು ತಿನ್ನುತ್ತವೆ!'

ಅಡುಗೆ ಮಾಡುವುದರೊಂದಿಗೆ ಅದನ್ನು ಆಕರ್ಷಣೀಯವಾಗಿ ನೀಡುವುದೂ ಕೂಡ ಒಂದು ಕಲೆ. ನೋಡುತ್ತಿದ್ದಂತೆ ಮನಸ್ಸಿಗೆ ಖುಷಿ ಕೊಡುವ ಈ ಬೌಲ್‍ನ್ನು ತಿನ್ನುವುದೂ ಒಂದು ಜಾಣ್ಮೆ. ಅದನ್ನು ಹೇಗೆ ತಿನ್ನಬಹುದು ಎಂದು ಯೋಚಿಸುತ್ತಿದ್ದಾಗ ಮಗಳು ತಿನ್ನುವುದಕ್ಕೆ ಸಹಾಯ ಮಾಡಿದಳು. ಪ್ರತಿದಿನ ಆಹಾರದಲ್ಲಿ ಅಕ್ಕಿ, ದ್ವಿದಳ ಧಾನ್ಯಗಳು, ತರಕಾರಿ, ಪ್ರೋಟಿನ್, ಕಾರ್ಬೋಹೈಡ್ರೇಟ್ ಇವೆಲ್ಲವೂ ಸಮತೋಲನದಲ್ಲಿ ಸೇವಿಸಬೇಕಾಗಿರುವುದರಿಂದ ಅಂತಹ ಆರೋಗ್ಯಕರ ಆಹಾರವೆಂದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಬುದ್ಧ ಬೌಲ್ ಪ್ರಸಿದ್ಧಿ ಪಡೆದಿದೆ.

ಇದು ಒಂದೊಂದು ಪ್ರಾಂತ್ಯದಲ್ಲಿ ಕೊಂಚ ಬದಲಾವಣೆಯೊಂದಿಗೆ ದೊರೆಯುತ್ತದೆ. ಅಕ್ಕಿ ಬದಲು ಕ್ವಿನೋವ, ಬಾರ್ಲಿ ಅಥವಾ ಬುಲ್ಗರ್‌ಗಳನ್ನು ಧಾನ್ಯವೆಂದು ಬಳಸಲಾಗುತ್ತದೆ. ಜೊತೆಗೆ ಆಯಾ ಭಾಗದಲ್ಲಿ ಸಿಗುವ ತರಕಾರಿಗಳು, ಹಣ್ಣುಗಳು, ಸೊಪ್ಪುಗಳನ್ನು, ಹುರಿದ ತೆಂಗಿನಕಾಯಿ, ಗೆಣಸು, ಬ್ರೊಕೋಲಿ, ಫಲಾಫಲ್, ಡ್ರೈಫ್ರೂಟ್ಸ್‌ಗಳನ್ನೂ ಸೇರಿಸಲಾಗುತ್ತದೆ. ಆಯಾ ಪ್ರಾಂತ್ಯದಲ್ಲಿ ದೊರೆಯುವ ಧಾನ್ಯಗಳನ್ನು ಮೊಳಕೆ ಬರೆಸಿ ಉಪಯೋಗಿಸಬಹುದು. ಜೊತೆಗೆ ಎಳ್ಳು, ಪೆಪಿಟಾಸ್ ಅಥವಾ ಚಿಯಾ ಬೀಜಗಳನ್ನು ಮೇಲೆ ಅಲಂಕಾರವಾಗಿ ಕೂಡ ಬಳಸುತ್ತಾರೆ.

ಜಗತ್ತಿನಾದ್ಯಂತ ಸಸ್ಯಹಾರಿ ಆಹಾರಕ್ಕೆ ಪ್ರಸಿದ್ಧಿ ಪಡೆದಿರುವ ಬುದ್ಧ ಬೌಲ್‍ಗೆ ಆ ಹೆಸರು ಬರಲು ಪ್ರಮುಖ ಕಾರಣ ಸಮತೋಲನ ಆಹಾರ ಎನ್ನುವ ಕಾರಣಕ್ಕೆ. ಬುದ್ಧ ತನ್ನ ಬೊಧನೆಗಳಲ್ಲಿ ಸಮತೋಲನವನ್ನು ವಿವರಿಸಿದ ಎನ್ನುವುದು ಒಂದು ಕಾರಣ. ಮತ್ತೊಂದು ಕಾರಣ ಬುದ್ಧ ತನ್ನ ಭಿಕ್ಷಾಪಾತ್ರೆಯನ್ನು ಹಿಡಿದು ಹಳ್ಳಿ ಹಳ್ಳಿಗೆ ಹೋಗುವಾಗ ಪ್ರತಿ ಮನೆಯವರೂ ಆತನಿಗೆ ಆಹಾರ ನೀಡಲು ಕಾಯುತ್ತಿದ್ದರಂತೆ. ಆತ ಎಲ್ಲರ ಮನೆಯಿಂದ ಅವರ ಮನೆಯವರು ಕೊಟ್ಟ ಆಹಾರವನ್ನು ಸ್ವಲ್ಪ ಸ್ವಲ್ಪವೇ ಪಡೆಯುತ್ತಿದ್ದನಂತೆ. ಇಂತಹ ಅನೇಕ ಕತೆಗಳು ಈ ಆಹಾರ ಪದ್ಧತಿಗೆ ಈ ಹೆಸರು ಬರಲು ಕಾರಣ. ಇಂದಿಗೂ ಜೈನ ಶ್ವೇತಾಂಬರ ಸನ್ಯಾಸಿಗಳು ಹೀಗೆ ಮನೆ ಮನೆಯಿಂದ ಭಿಕ್ಷೆ ಬೇಡಿ ಅಹಾರ ಸೇವಿಸುತ್ತಾರೆ.

ಇನ್ನೂ 40 ಆಗಿಲ್ಲ, ಆಗ್ಲೇ ಬಿಳಿ ಕೂದ್ಲು ಶುರುವಾಯ್ತಾ? ಇದು ಇಲ್ಗೇ ನಿಲ್ಬೇಕಂದ್ರೆ ಈ ಆಹಾರ ತಿನ್ನಿ..

ನಾವು ತಿನ್ನುವ ಆಹಾರವು ಸತ್ವಯುತವಾಗಿರಬೇಕು. ಅದರಿಂದ ನಮ್ಮ ದೇಹಕ್ಕೆ ಪ್ರೋಟಿನ್, ಕಾರ್ಬೋ, ಮಿನರಲ್ಸ್, ವಿಟಮಿನ್ಸ್, ಫ್ಯಾಟ್ಸ್ ಇವೆಲ್ಲವೂ ಸಮತೋಲನದಲ್ಲಿ ಸಿಗಬೇಕು. ಅಂತಹ ಎಲ್ಲವನ್ನು ನಾವು ತಿನ್ನುವ ಒಂದು ಬೌಲ್‍ನಿಂದ ನಮ್ಮ ದೇಹಕ್ಕೆ ಸಿಗುವುದರಿಂದ ಬುದ್ಧ ಬೌಲ್ ವಿದೇಶಗಳಲ್ಲಿ ಸಸ್ಯಹಾರಿಗಳಿಗೆ ಅತ್ಯಂತ ಪ್ರಿಯವಾಗಿದೆ.

ಅಮೆರಿಕಾದ ಬಿಸಿನೆಸ್ ಮಹಿಳೆ, ಲೇಖಕಿ, ದೂರದರ್ಶನಗಳಲ್ಲಿ ಪ್ರಸಿದ್ಧರಾಗಿರುವ ಮಾರ್ಥ ಹೆಲೆನ್ ಸ್ಟೀವರ್ಟ್‌ 2013ರಲ್ಲಿ ಪ್ರಕಟಿಸಿದ ‘ಮೀಟ್‍ಲೆಸ್’ ಎಂಬ ಅಡುಗೆ ಪುಸ್ತಕದಲ್ಲಿ ಮೊದಲ ಬಾರಿಗೆ ‘ಬುದ್ಧ ಬೌಲ್’ ಎಂಬ ಆಹಾರ ಪದ್ಧತಿ ಬಗ್ಗೆ ಪ್ರಸ್ತಾಪಿಸಿದಳು. ಇದು ‘ಜಾಯ್ ಫುಲ್ ಬ್ಯಾಲೆನ್ಸ್‌’ ಎನ್ನುವುದು ಆಕೆಯ ಕಲ್ಪನೆ.

ಪುಸ್ತಕ ಪ್ರಕಟವಾದ ನಂತರ ಇದು ಅತ್ಯಂತ ಜನಪ್ರಿಯವಾಯಿತು. ಈ ಬೌಲ್‍ಗೆ ಗ್ರೇನ್ ಬೌಲ್, ಹ್ಯಾಪಿ ಬೌಲ್, ಮೆಕ್ರೊ ಬೌಲ್, ಅಥವಾ ಪವರ್ ಬೌಲ್ ಎನ್ನುವ ಅನೇಕ ಹೆಸರುಗಳೂ ಇವೆ. ರೆಸ್ಟೋರೆಂಟ್‍ಗಳು ಮಾರ್ಕೆಟಿಂಗ್ ತಂತ್ರವಾಗಿ ಬುದ್ಧನ ಹೆಸರನ್ನು ತಂದಿವೆ ಎನ್ನುವ ಆರೋಪವೂ ಇದೆ.

ಆರೋಗ್ಯಕರವಾಗಿ ತೂಕ ಹೆಚ್ಚಿಸ್ಬೇಕಾ? ಈ 8 ಹಣ್ಣುಗಳನ್ನು ಪ್ರತಿ ದಿನ ಸೇವಿಸಿ

ಭಾರತದಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಈ ಬುದ್ಧ ಬೌಲ್ ಸಮತೋಲನದ ಆಹಾರ ಪ್ರಿಯರಿಗೆ ಇಷ್ಟವಾಗುವುದರಲ್ಲಿ ಆಶ್ಚರ್ಯವೇನಿಲ್ಲ. ಒಟ್ಟಿನಲ್ಲಿ ನಾವು ತಿನ್ನುವ ಆಹಾರವು ದೇಹಕ್ಕೆ ಶಕ್ತಿಯನ್ನು ನೀಡಬೇಕು, ತಿನ್ನಲು ಖುಷಿ ನೀಡಬೇಕೆಂಬ ಕಲ್ಪನೆಯಂತೂ ಅದ್ಭುತ.

Follow Us:
Download App:
  • android
  • ios