ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ೨೬ ಸಾವಿರ ಎಕರೆ ಹಬ್ಬಿ, ೨೦೦೦ ಮನೆಗಳು ಭಸ್ಮವಾಗಿ, ೪.೮ ಲಕ್ಷ ಕೋಟಿ ನಷ್ಟ ಉಂಟಾಗಿದೆ. ಹಾಲಿವುಡ್ ಹಿಲ್ಸ್‌ ಸೇರಿದಂತೆ ಹಲವು ಖ್ಯಾತನಾಮರ ಮನೆಗಳಿಗೂ ಬೆಂಕಿ ತಗುಲಿದೆ. ಹಾಲಿವುಡ್ ಎಂಬ ಹೆಸರು ರಿಯಲ್ ಎಸ್ಟೇಟ್ ಉದ್ಯಮದಿಂದ ಹುಟ್ಟಿಕೊಂಡು, ಚಿತ್ರರಂಗದ ಕೇಂದ್ರವಾಗಿ ಬೆಳೆಯಿತು. ಮಾರ್ಕೆಟಿಂಗ್ ಮಹತ್ವವನ್ನು ಹಾಲಿವುಡ್‌ನ ಉದಯ ಸಾರುತ್ತದೆ.

ಆರ್‌. ಕೇಶವಮೂರ್ತಿ

ಹಾಲಿವುಡ್‌... ಈ ಹೆಸರು ಕೇಳದವರಿಲ್ಲ. ಪ್ರತಿಯೊಬ್ಬ ಸಿನಿಮಾ ಪ್ರೇಮಿಯಲ್ಲೂ ಬಣ್ಣದ ಕನಸುಗಳನ್ನು ಬಿತ್ತುವ ಹೆಸರಿದು. ಇಂಥ ಹೆಸರಿನ ಪ್ರದೇಶ ಈಗ ಬೆಂಕಿಗೆ ತುತ್ತಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್‌ ಏಂಜಲೀಸ್‌ನಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು 26 ಸಾವಿರ ಎಕರೆಗೆ ಹಬ್ಬಿ, 2000 ಮನೆಗಳನ್ನು ಭಸ್ಮಗೊಳಿಸಿ, 4.8 ಲಕ್ಷ ಕೋಟಿ ರು. ನಷ್ಟ ಉಂಟು ಮಾಡಿದೆ.

ಅಂದಹಾಗೆ ಹಾಲಿವುಡ್‌ ಚಿತ್ರರಂಗದ ಹೃದಯಭಾಗವೇ ಆಗಿರುವ, ಲಾಸ್‌ ಏಂಜಲೀಸ್‌ ಪ್ರದೇಶಕ್ಕೆ ಸ್ಟಾರ್‌ ಇಮೇಜ್‌ ಕೊಟ್ಟಿರುವ ಜನಪ್ರಿಯ ನಟರು ನೆಲೆಸಿರುವ, ಸಿನಿಮಾ ಸ್ಟುಡಿಯೋ, ನಿರ್ಮಾಣ ಸಂಸ್ಥೆಗಳನ್ನು ಒಳಗೊಂಡಿರುವ ಹಾಲಿವುಡ್‌ ಹಿಲ್ಸ್‌ ಪ್ರದೇಶಕ್ಕೂ ಈ ಕಾಡ್ಗಿಚ್ಚು ತನ್ನ ಕೋಪ ತೋರಿಸಿದೆ. ಈಗಾಗಲೇ ಈ ಕಾಡ್ಗಿಚ್ಚಿನಿಂದ ಬಿಲ್ಲಿ ಕ್ರಿಸ್ಟಲ್‌, ಮ್ಯಾಂಡಿ ಮೋರ್‌, ಜೇಮೀ ಲೀ ಕರ್ಟಿಸ್ ಮುಂತಾದ ಹಾಲಿವುಡ್ ಖ್ಯಾತ ನಾಮರು ಜತೆಗೆ ಬಾಲಿವುಡ್‌ ನಟಿ ನೋರಾ ಫತೇಹಿ ಮನೆಯೂ ಬೆಂಕಿಗೆ ತುತ್ತಾಗಿದೆ.

ಲಾಸ್‌ ಏಂಜಲೀಸ್‌ನಲ್ಲಿ ಕಾಣಿಸಿಕೊಂಡ ಈ ಬೆಂಕಿಯ ಕೆಂಡಗಳು, ಪ್ಯಾನ್ ವರ್ಲ್ಡ್ ಹೀರೋನಂತೆ ಜಗತ್ತಿನಾದ್ಯಂತ ಸದ್ದು ಮಾಡಿ ಎಲ್ಲರ ಗಮನ ಸೆಳೆಯುವುದಕ್ಕೆ ಹಾಲಿವುಡ್‌ ಎನ್ನುವ ಪ್ರತಿಷ್ಠಿತ ಹೆಸರು ಕೂಡ ಕಾರಣ. ಕಾಡ್ಗಿಚ್ಚಿಗೂ ಖ್ಯಾತಿ ತಂದು ಕೊಟ್ಟ ಈ ಹಾಲಿವುಡ್ ಎನ್ನುವ ಹೆಸರು ಹುಟ್ಟಿಕೊಂಡಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದಾಗ ಕಣ್ಣ ಮುಂದೆ ಬರುವುದು ಮರಭೂಮಿ, ಬಯಲು ಪ್ರದೇಶ ಮತ್ತು ರಿಯಲ್ ಎಸ್ಟೇಟ್ ಬೋರ್ಡ್ ಎಂದರೆ ನಿಮಗೆ ಅಚ್ಚರಿ ಆಗಬಹುದು. ಹಾಗಾದರೆ ಈ ಹಾಲಿವುಡ್ ಎನ್ನುವ ಹೆಸರು ಹೇಗೆ ಬಂತೆನ್ನುವ ವಿವರಣೆಗಳ ಒಳ ಹೊಕಿದ್ದರೆ...

ಅಗ್ನಿ ದುರಂತದಲ್ಲಿ ನಾನು ಬದುಕಿದ್ದೇ ಪವಾಡ: ಬಾಲಿವುಡ್ ನಟಿ ಪ್ರೀತಿ ಜಿಂಟಾ ಭಾವುಕ ನುಡಿ ಕೇಳಿ...

ಅದು 1887. ಲಾಸ್‌ ಏಂಜಲೀಸ್‌ ಬಳಿ ಬಹು ದೊಡ್ಡ ವಿಶಾಲವಾದ ಬಯಲು ಪ್ರದೇಶ (ranch) ಇತ್ತು. ಇದು ಹಾರ್ವೆ ಹೆಂಡ್ರಸನ್ ವಿಲ್ ಕಾಕ್ಸ್ (harvey hendrson wilcox) ಎನ್ನುವ ಉದ್ಯಮಿಗೆ ಸೇರಿದ ಜಾಗ. ಈ ಜಾಗವನ್ನು ಏನು ಮಾಡಬೇಕೆಂದು ಯೋಚಿಸಿದ ಹಾರ್ವೆಗೆ ನೆನಪಾಗಿದ್ದು ರಿಯಲ್ ಎಸ್ಟೇಟ್ ಮ್ಯಾಗ್ನೇಟ್ ವಿಟ್ಲೆ (whitley) ಎನ್ನುವ ವ್ಯಕ್ತಿ. ಈತನ ಜತೆ ಸೇರಿಕೊಂಡು ಹಾರ್ವೆ, ತನ್ನ ಒಡೆತನದ ಆ ಬಯಲು ಪ್ರದೇಶವನ್ನು ಲೇಔಟ್ ಮಾಡಲು ನಿರ್ಧರಿಸಿದ. ಅವತ್ತಿಗೆ ಲಾಸ್‌ ಏಂಜಲೀಸ್‌ ಎಂಬುದು ಡೆಸರ್ಟ್‌ (desert) ಏರಿಯಾ. ಮರಳು ಪ್ರದೇಶದ ಪಕ್ಕ ಲೇಔಟ್ ಮಾಡಿದರೆ ಇಲ್ಲಿ ಯಾರು ಸೈಟ್ಸ್‌ ಕೊಳ್ಳುತ್ತಾರೆ ಎನ್ನುವ ಅನುಮಾದಲ್ಲೇ ಪ್ಲಾಟ್ಸ್ ನಿರ್ಮಿಸುವ ಕೆಲಸದಲ್ಲಿ ಬ್ಯುಸಿಯಾದ ಹಾರ್ವೆ. ಮತ್ತೊಂದು ಕಡೆ ರಿಯಲ್‌ ಎಸ್ಟೇಟ್‌ ಏಜೆಂಟ್‌ ವಿಟ್ಲೆ ಹಲವು ರೀತಿಯಲ್ಲಿ ಇದನ್ನು ಮಾರ್ಕೆಟ್ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದ. ‘ಇದು ಮರುಭೂಮಿಯಲ್ಲ, ಇಲ್ಲಿ ಗಿಡ-ಮರಗಳು ಬರುತ್ತಿವೆ’, ‘ವೆಲ್ತ್‌ ಆಂಡ್‌ ಪಾಪುಲರ್‌ ರೆಸಿಡೆನ್ಸಿಯಲ್‌ ಏರಿಯಾ ಇದು’ ಹೇಳುತ್ತಾ ಸೈಟ್ಸ್‌ಗಳನ್ನು ವಿಟ್ಲೆ ಮಾರಾಟ ಮಾಡಲು ಆರಂಭಿಸಿದ.

ಆದರೆ, ಏನೇ ಸರ್ಕಸ್‌ ಮಾಡಿದರೂ ನಿರೀಕ್ಷಿಸಿದಂತೆ ಫಲಿತಾಂಶ ಬರುತ್ತಿರಲಿಲ್ಲ. ಆಗ ಹಾರ್ವೆ ಪತ್ನಿ ಈ ಪ್ರಾಜೆಕ್ಟ್‌ಗೆ ಒಂದು ಕೊಟ್ಟಳು. ಆ ಹೆಸರೇ ಹಾಲಿವುಡ್‌ (hollywood). ಅಂದರೆ ದ ಲ್ಯಾಂಡ್‌ ಆಫ್ ಹಾಲಿ ಬುಷ್ (the land of holly bush) ಎಂದರ್ಥ. ‘ಇಲ್ಲಿ ಗಿಡ-ಮರಗಳು ಬರುತ್ತಿವೆ’ ಎನ್ನುವುದು ಆ ದಿನಗಳಲ್ಲಿ ಸೈಟ್ಸ್‌ಗಳ ಸೇಲಿಂಗ್ ಪಾಯಿಂಟ್ ಆದರೂ ಹಾಲಿವುಡ್ ಎನ್ನುವ ಹೆಸರು ಎಲ್ಲರ ಆಕರ್ಷಣೆಗೆ ಕಾಣರಣವಾಯಿತು. ಅಲ್ಲದೆ ಈ ಹೆಸರನ್ನು ದೊಡ್ಡ ಗಾತ್ರದಲ್ಲಿ ಮಾಡಿಸಿ ಲೇಔಟ್ ಪಕ್ಕದಲ್ಲೇ ಇದ್ದ ಬೆಟ್ಟದ ಮೇಲೆ ಸ್ಥಾಪಿಸಿದ. ಇದೇ ಬೆಟ್ಟವನ್ನು ಈಗ ಹಾಲಿವುಡ್‌ ಹಿಲ್ಸ್ ಅಂತಾರೆ.

ಹೀಗೆ 1887ನಲ್ಲಿ ಶುರುವಾದ ಹಾಲಿವುಡ್‌ ಹೆಸರಿನ ಲೇಔಟ್ ಅನ್ನು 1910ರಲ್ಲಿ ಅಲ್ಲಿನ ಸರ್ಕಾರ ಮುನ್ಸಿಪಾಲಿಟಿಗೆ ಸೇರಿಸಿತು. ಅದೇ ಹೊತ್ತಿಗೆ ಇಲ್ಲಿ ಹೆಚ್ಚಾಗಿ ಸೈಟ್ಸ್ ಖರೀದಿ ಮಾಡಲು ಶುರು ಮಾಡಿದ್ದು ಅಲ್ಲಿನ ಸಿನಿಮಾ ಮಂದಿ. ಮುಂದೆ ಸಿನಿಮಾ ಸ್ಟುಡಿಯೋಗಳು ಇಲ್ಲಿಗೆ ಬರಲಾರಂಭಿಸಿದವು, ನಿರ್ಮಾಣ ಸಂಸ್ಥೆಗಳು ಕಛೇರಿಗಳನ್ನು ತೆರೆಯಲಾರಂಭಿಸಿದರು. ನೋಡ ನೋಡುತ್ತಿದ್ದಂತೆಯೇ ಸೆಲೆಬ್ರಿಟಿಗಳ ನೆಲೆ, ಸ್ಟುಡಿಯೋ, ನಿರ್ಮಾಣ ಸಂಸ್ಥೆಗಳ ಪ್ರದೇಶವಾಗಿ, ಚಿತ್ರೀಕರಣದ ತಾಣವಾಗಿ ಹಾಲಿವುಡ್‌ ಜನಪ್ರಿಯ ಆಗೋಯಿತು. ಸಿನಿಮಾ ಮಾಡಬೇಕು ಅಂದರೆ ಹಾಲಿವುಡ್ ಅತ್ಯುತ್ತಮ ಜಾಗ ಎನ್ನುವ ಮಟ್ಟಕ್ಕೆ ಜನಪ್ರಿಯವಾಯಿತು.

ಕಾಡ್ಗಿಚ್ಚಿನಿಂದ ನಟಿ ಪ್ರಿಯಾಂಕಾ ಮತ್ತು ನಟಿ ನೋರಾ ಜಸ್ಟ್ ಮಿಸ್; ಶೂಟಿಂಗ್ ಸ್ಟುಡಿಯೋಗಳೆಲ್ಲಾ ಭಸ್ಮ

ನಮ್ಮ ರಾಜ್ಯದ ಯಾವುದೇ ಮೂಲೆಯಿಂದ ಬಂದು ಹೋಗಲು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿರುವ ಮೆಜೆಸ್ಟಿಕ್ ಹತ್ತಿರ ಇದೆ ಎನ್ನುವ ಕಾರಣಕ್ಕೆ ಬೆಂಗಳೂರಿನ ಗಾಂಧಿನಗರ, ನಮ್ಮ ಕನ್ನಡ ಚಿತ್ರರಂಗದ ಹೆಬ್ಬಾಗಿಲುನಂತೆ ಬದಲಾಯಿತಲ್ಲ, ಹಾಗೆಯೇ ಈ ಹಾಲಿವುಡ್‌ ಪ್ರದೇಶದಲ್ಲಿ ಸಿನಿಮಾ ಕೆಲಸಗಳು ಶುರುವಾಗಿ, ಸಿನಿಮಾ ಮಂದಿ ನೆಲೆಯಾಗಲು ಎರಡು ಕಾರಣಗಳಿವೆ. ಈ ಪೈಕಿ ಮೊದಲ ಕಾರಣದ ಹೆಸರು, ವಿಜ್ಞಾನಿ ಥಾಮಸ್ ಆಲ್ವಾ ಎಡಿಷನ್ (thomas alva edison). ಈ ವಿಜ್ಞಾನಿಗೂ ಬಣ್ಣದ ಲೋಕಕ್ಕೂ ಏನು ನಂಟು ಎಂದರೆ ಈ ಥಾಮಸ್ ಅವರ ಬಳಿ ಟೆಲಿಗ್ರಾಫ್‌, ಟೆಲಿಫೋನ್‌, ಮೈಕ್ರೋಪೋನ್‌, ಮೋಷನ್‌ ಪಿಕ್ಚರ್‌... ಹೀಗೆ 21 ವರ್ಷಕ್ಕೇ ಥಾಮಸ್‌ ಆಲ್ವಾ ಎಡಿಷನ್‌ ಅವರು ಒಂದು ಸಾವಿರಕ್ಕೂ ಹೆಚ್ಚು ಹೆಸರುಗಳ ಪೇಟೆಂಟ್ ಮಾಡಿಸಿಕೊಂಡಿದ್ದರು. ಆಗ ಯಾರೇ ಮೋಷನ್ ಪಿಕ್ಟರ್ ಮಾಡಬೇಕೆಂದರೆ ಈ ವಿಜ್ಞಾನಿ ಬಳಿ ರೈಟ್ಸ್ ತೆಗೆದುಕೊಳ್ಳಬೇಕಿತ್ತು. ಪ್ರತಿ ಚಿತ್ರಕ್ಕೂ ಇವರ ಬಳಿ ಅನುಮತಿ ಕೇಳಬೇಕೆಂದರೆ ನಿರ್ಮಾಪಕರಿಗೆ ಸಿಟ್ಟು ಬರೋದು. ಆದರೆ, ಈ ರೂಲ್ಸ್‌ ಹಾಲಿವುಡ್‌ನಲ್ಲಿ ನೆಲೆಸಿದವರಿಗೆ ಅನ್ವಯಿಸುತ್ತಿರಲಿಲ್ಲ. ಆಗಲೇ ಅಮೆರಿಕದಲ್ಲಿ ಒಂದು ಘೋಷಣೆ ಹುಟ್ಟಿಕೊಂಡಿತು. ‘if you want to make movies, go to hollywood. its the best place to make movies’ ಎಂದು. ಮತ್ತೊಂದು ಕಾರಣ ಬಿಸಿಲು ವಾತಾವರಣದಿಂದ ಕೂಡಿದ ಬೆಚ್ಚಗಿನ ಈ ಭೂಪ್ರದೇಶ (warm and sunny weather, tarrain) ಸಿನಿಮಾ ಮೇಕಿಂಗ್ ನೆರವಾಗಿ, ಚಿತ್ರೀಕರಣದ ಚಟುವಟಿಕೆಗಳಿಗೆ ಹೇಳಿ ಮಾಡಿಸಿದಂತಿತ್ತು. ಹೀಗೆ ಹಾಲಿವುಡ್‌ ಮುಂದೆ ಜಗತ್ತಿನ ಸಿನಿಮಾ ಮಂದಿಯ ಸ್ವರ್ಗ ಎನಿಸಿಕೊಂಡಿತು.

ನಂತರದ ದಿನಗಳಲ್ಲಿ ಈ ಹೆಸರನ್ನು ಸ್ಫೂರ್ತಿಯಾಗಿಟ್ಟುಕೊಂಡು ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರು ಹಿಂದಿ ಚಿತ್ರರಂಗಕ್ಕೆ ಬಾಲಿವುಡ್ ಎಂದು ಹೆಸರಿಟ್ಟರು. ಅಮಿತಾಭ್ ಬಚ್ಚನ್ ಅವರು ಖನ್ನಾ ಕೊಟ್ಟ ಹೆಸರಿಗೆ ಆಗ ವಿರೋಧ ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ, ರಾಜೇಶ್ ಖನ್ನಾ ನಾಮಕರಣ ಮಾಡಿದ ಬಾಲಿವುಡ್‌ ಎನ್ನುವ ಹೆಸರನ್ನು ಮಾಧ್ಯಮಗಳು ಹೆಚ್ಚು ಬಳಸಿದ್ದರಿಂದ ಹಿಂದಿ ಚಿತ್ರರಂಗ ಬಾಲಿವುಡ್‌ ಅಂತಲೇ ಜನಪ್ರಿಯಗೊಂಡಿತು. ಮುಂದೆ ತೆಲುಗು ಚಿತ್ರರಂಗ ಟಾಲಿವುಡ್‌, ತಮಿಳು ಚಿತ್ರರಂಗ ಕಾಲಿವುಡ್‌, ಮಲಯಾಳಂ ಚಿತ್ರರಂಗ ಮಾಲಿವುಡ್‌ ಎನ್ನುವ ನೇಮ್‌ ಬೋರ್ಡ್‌ಗಳನ್ನು ಹಾಕಿಕೊಂಡರು. ಕೊರಿಯನ್ ಚಿತ್ರರಂಗಕ್ಕೂ ಈ ಹೆಸರು ಸ್ಫೂರ್ತಿಯಾಗಿ ಅವರು ತಮ್ಮ ಬಣ್ಣದ ಜಗತ್ತಿಗೆ ‘hollyuwood’ ಅಂತ ಹೆಸರಿಟ್ಟುಕೊಂಡರು. ಪಾಕಿಸ್ತಾನದವರು ಲಾಲಿವುಡ್‌ (lollywood) ಅಂತ ಕರೆದುಕೊಂಡರು. ಆದರೆ, ನೆನಪಿಡಿ ಇಂಗ್ಲಿಷ್ ಸಿನಿಮಾಗಳೆಲ್ಲ ಹಾಲಿವುಡ್‌ ವ್ಯಾಪ್ತಿಗೆ ಬರಲ್ಲ. ಅಂದರೆ ಯುಕೆ, ಕೆನಡಿಯನ್ ಚಿತ್ರೋದ್ಯಮ ಹಾಲಿವುಡ್ ಅಲ್ಲ.

ಶತಮಾನದ ಭೀಕರ ಕಾಳ್ಗಿಚ್ಚಿಗೆ ಹಾಲಿವುಡ್​ ಅಂತ್ಯ? ಕಣ್ಣೆದುರೇ ಸೆಲೆಬ್ರಿಟಿಗಳ ಮನೆಗಳು ಧಗಧಗ- ವಿಡಿಯೋಗಳು ವೈರಲ್​

ಇನ್ನೂ ನಮ್ಮ ಕನ್ನಡ ಚಿತ್ರರಂಗಕ್ಕೆ ಸ್ಯಾಂಡಲ್‌ವುಡ್‌ ಎನ್ನುವ ಹೆಸರು ಬರಲು ಹಾಲಿವುಡ್‌ ಸ್ಫೂರ್ತಿ ಆಗಿರಲಿಕ್ಕಿಲ್ಲ. ಯಾಕೆಂದರೆ ನಮ್ಮ ನಾಡು ಶ್ರೀಗಂಧದ ಬೀಡು. ಸರಿ, ಇದೆಲ್ಲವೂ ಬದಗಿಟ್ಟು ನೋಡಿದರೆ ಹಾಲಿವುಡ್‌ ಎಂಬುದು ಒಂದು ರಿಯಲ್‌ ಎಸ್ಟೇಟ್‌ ಬೋರ್ಡ್‌! ಅದು ಎಲ್ಲರಿಗೂ ಕಾಣಿಸೋ ರೀತಿ ಆ ಬೆಟ್ಟದ ಮೇಲೆ ದೊಡ್ಡ ಗಾತ್ರದ ಅಕ್ಷರಗಳಲ್ಲಿ ಇಟ್ಟಿದ್ದರಿಂದ ಪ್ರಸಿದ್ದಿಗೆ ಬಂದು ಅದರ ಭವಿಷ್ಯನೇ ಬದಲಾಯಿತು. ನಮ್ಮ ಬೆಂಗಳೂರಿನಲ್ಲಿರುವ ಗಾಂಧಿನಗರ, ಸದಾಶಿವನಗರ, ನಾಗಭಾವಿಯಂತೆ ಹಾಲಿವುಡ್ ಪ್ರದೇಶ ಖ್ಯಾತ ತಾರೆಗಳ ವಾಸದ ನೆಲೆಯಾಗಿ, ಸಿನಿಮಾ ಜಗತ್ತಿನ ರಾಣಿ ಆಯಿತು.

ಲಾಸ್ಟ್‌ ಸೀನ್‌: ರಿಯಲ್‌ ಎಸ್ಟೇಟ್‌ ಮಂದಿ ಮಾತ್ರವಲ್ಲ, ಎಲ್ಲರೂ ತಿಳಿಯಬೇಕಿರುವುದು ಏನೆಂದರೆ ಏನೇ ಉದ್ಯಮ, ವೆಂಚರ್ ಶುರು ಮಾಡಿದರೂ ಅದಕ್ಕೆ ನಿಮ್ಮ ಮಾರ್ಕೆಟಿಂಗ್, ಹೆಸರಿನ ಜತೆಗೆ ಸೈಜ್ ಆಫ್ ದಿ ಬೋರ್ಡ್ ಮ್ಯಾಟರ್ ಮುಖ್ಯ ಆಗುತ್ತದೆ. ಏನೇ ಹೆಸರಿಟ್ಟರೂ ದೊಡ್ಡದಾಗಿ ಇಡಿ. ಮತ್ತು ಎಲ್ಲರಿಗೂ ಕಾಣಿಸುವಂತೆ ಬರೆಸಿ. ಆ ಹಿಲ್ಸ್ ಮೇಲಿರುವ ಹಾಲಿವುಡ್ ಅಕ್ಷರಗಳಂತೆ.

(ಪೂರಕ ಮಾಹಿತಿ: ನಿರ್ದೇಶಕ ಪೂರಿ ಜಗನ್ನಾಥ ಅವರ ಪಾಡ್‌ ಕಾಸ್ಟ್‌)

ಲಾಸ್ ಏಂಜಲಿಸ್ ಕಾಡ್ಗಿಚ್ಚಿಗೆ ಮನೆ ಕಳೆದುಕೊಂಡ ಹಾಲಿವುಡ್ ಸೆಲೆಬ್ರಿಟಿಗಳಿವರು