2024ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 6 ಪಿಎಸ್‌ಎಲ್‌ವಿ, 3 ಜಿಎಸ್‌ಎಲ್‌ವಿ ಮತ್ತು ಒಂದು ಎಲ್‌ಎಂವಿ ರಾಕೆಟ್‌ ಸೇರಿ 16 ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ

ನವದೆಹಲಿ (ಡಿ.9): 2024ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 6 ಪಿಎಸ್‌ಎಲ್‌ವಿ, 3 ಜಿಎಸ್‌ಎಲ್‌ವಿ ಮತ್ತು ಒಂದು ಎಲ್‌ಎಂವಿ ರಾಕೆಟ್‌ ಸೇರಿ, ವಿದೇಶಿ ರಾಕೆಟ್‌ಗಳೊಂದಿಗೆ 16 ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್‌, ತಂತ್ರಜ್ಞಾನಕ್ಕೆ ಸಹಾಯವಾಗುವ ಉಪಗ್ರಹಗಳ ಜೊತೆಗೆ ವ್ಯಾವಹಾರಿಕ ಉಪಗ್ರಹಗಳನ್ನು ಉಡಾವಣೆ ಮಾಡಲಿದೆ ಎಂದು ಹೇಳಿದ್ದಾರೆ.

ಒಂದು ಭೂ ಸರ್ವೇಕ್ಷಣಾ ಉಪಗ್ರಹ, 2 ತಂತ್ರಜ್ಞಾನ ಉಪಗ್ರಹ, 2 ವಾಣಿಜ್ಯ ಉಪಗ್ರಹ ಮತ್ತು 1 ಬಾಹ್ಯಾಕಾಶ ವಿಜ್ಞಾನ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಮೂಲಕ ಉಡಾವಣೆ ಮಾಡಲಾಗುತ್ತದೆ. ಜಿಎಸ್‌ಎಲ್‌ವಿ ರಾಕೆಟ್‌ ಹವಾಮಾನ ಉಪಗ್ರಹ, ದಿಕ್ಸೂಚಿ ಉಪಗ್ರಹ ಮತ್ತು ರಾಡಾರ್ ಉಪಗ್ರಹವನ್ನು ಕಕ್ಷೆಗೆ ತಲುಪಿಸಲಿದೆ. ಎಲ್‌ಎಂವಿ3 ರಾಕೆಟ್‌ ಎನ್‌ಎಸ್‌ಐಎಲ್‌ನ 1 ವಾಣಿಜ್ಯ ಉಪಗ್ರಹವನ್ನು ಕಕ್ಷಗೆ ತಲುಪಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಇದಲ್ಲದೇ ಈ ವರ್ಷದಲ್ಲಿ 2 ಬಾರಿ ಮಾನವ ರಹಿತ ಗಗನಯಾನ ಪರೀಕ್ಷೆ, ವಿವಿಧ ಹಂತಗಳಲ್ಲಿ ಗಗನಯಾನದಲ್ಲಿ ಮಾನವ ಸಂರಕ್ಷಣೆ ಪರೀಕ್ಷೆ, ರನ್‌ವೇ ಲ್ಯಾಂಡಿಂಗ್‌, ಮರುಬಳಕೆ ರಾಕೆಟ್‌ ಉಡಾವಣೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. 

- ಒಂದು ಎಲ್‌ಎಂವಿ3 ರಾಕೆಟ್‌ ಉಡಾವಣೆಗೂ ಯೋಜನೆ

- ಈ ವರ್ಷ 2 ಬಾರಿ ಮಾನವ ರಹಿತ ಗಗನಯಾನ ಪರೀಕ್ಷೆ

- ವಿವಿಧ ಹಂತಗಳಲ್ಲಿ ಗಗನಯಾನದಲ್ಲಿ ಮಾನವ ರಕ್ಷಣೆ ಪರೀಕ್ಷೆ

- ರನ್‌ವೇ ಲ್ಯಾಂಡಿಂಗ್‌, ಮರುಬಳಕೆ ರಾಕೆಟ್‌ ಉಡಾವಣೆ ಪರೀಕ್ಷೆ

ಗಗನಯಾನ ಯೋಜನೆಯ ಸ್ಪೇಸ್ ಕ್ಯಾಪ್ಸುಲ್‌ ಸಿಮ್ಯುಲೇಟರ್ ನಿರ್ಮಾಣಕ್ಕೆ ಬೋಯಿಂಗ್ - ಇಸ್ರೋ ಸಹಯೋಗ

ಚಂದ್ರಯಾನ 3 ನೌಕೆ ಮರಳಿ ಭೂಮಿಯ ಕಕ್ಷೆಗೆ
ವಿಕ್ರಂ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ ಅನ್ನು ಯಶಸ್ವಿಯಾಗಿ ಚಂದ್ರನ ದಕ್ಷಿಣದ ಧ್ರುವ ಮೇಲೆ ಇಳಿಸುವಲ್ಲಿ ನೆರವಾಗಿದ್ದ ಚಂದ್ರಯಾನ 3 ನೌಕೆ (ಪ್ರೊಪಲ್ಷನ್‌ ಮಾಡ್ಯೂಲ್‌) ಯನ್ನು ಚಂದ್ರನ ಕಕ್ಷೆಯಿಂದ ಮರಳಿ ಭೂಮಿಯ ಕಕ್ಷೆಗೆ ತರುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ನಡೆಸಲಾದ ಈ ಪ್ರಯೋಗವು ಭವಿಷ್ಯದಲ್ಲಿ ಚಂದ್ರನ ಮೇಲೆ ಇಳಿಯುವ ನೌಕೆಯನ್ನು ಮರಳಿ ಭೂಮಿಗೆ ಕರೆತರುವ, ಇಂಥ ಪ್ರಯೋಗಕ್ಕೆ ಬೇಕಾದ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲು ಮತ್ತು ಅವುಗಳ ಸಾಮರ್ಥ್ಯವನ್ನು ಪರೀಕ್ಷಿಸಲು, ಗುರುತ್ವಾಕರ್ಷಣೆ ನೆರವಿನಿಂದ ನಡೆಸಬಹುದಾದ ಸಂಚಾರದ ಪರೀಕ್ಷೆಗಳಿಗೆ ಬರೆದ ಯಶಸ್ವಿ ಮುನ್ನುಡಿ ಎಂದು ವಿಶ್ಲೇಷಿಸಲಾಗಿದೆ.

ಕಳೆದ ಜು.14ರಂದು ಎಲ್‌ವಿಎಂ3- ಎಂ4 ರಾಕೆಟ್‌ ಮೂಲಕ ಚಂದ್ರಯಾನ 3 ನೌಕೆಯನ್ನು ಗಗನಕ್ಕೆ ಉಡ್ಡಯನ ಮಾಡಲಾಗಿತ್ತು. ಆ.17ರಂದು ಲ್ಯಾಂಡರ್‌ ಮತ್ತು ರೋವರ್‌ ಚಂದ್ರಯಾನ 3 ನೌಕೆಯಿಂದ ಬೇರ್ಪಟ್ಟಿತ್ತು. ಬಳಿಕ ನೌಕೆ ಚಂದ್ರನ ಕಕ್ಷೆಯಲ್ಲೇ ಸುತ್ತುತ್ತಿದ್ದು, ಈ ವೇಳೆ ಅದರೊಳಗಿನ ಸ್ಪೆಕ್ಟ್ರೋ ಪೋಲಾರ್‌ಮೆಟ್ರಿ ಆಫ್‌ ಹ್ಯಾಬಿಟೆಬಲ್‌ ಪ್ಲಾನೆಟ್‌ ಅರ್ಥ್‌ (ಶೇಪ್‌) ಉಪಕರಣ ಬಳಸಿ ಹಲವು ಪ್ರಯೋಗಗಳನ್ನು ನಡೆಸಲಾಗಿತ್ತು.

ನಿಸಾರ್ ಮಿಷನ್​ಗೂ ಇದೆ ಡಾ. ಅಕ್ಷತಾ ಕೃಷ್ಣಮೂರ್ತಿ ಕೊಡುಗೆ: ಯೋಜನೆಯ ಮಹತ್ವ, ವಿವರ ಹೀಗಿದೆ..

ಈ ನಡುವೆ ಪೂರ್ವ ನಿರ್ಧರಿತ ಎಲ್ಲ ಪ್ರಯೋಗಗಳನ್ನು ನಡೆಸಿದ ಬಳಿಕವೂ ನೌಕೆಯಲ್ಲಿ 100 ಕೆಜಿಯಷ್ಟು ಇಂಧನ ಉಳಿದಿರುವುದನ್ನು ಗ್ರಹಿಸಿದ ಇಸ್ರೋ ವಿಜ್ಞಾನಿಗಳು ಮತ್ತೊಂದು ಕ್ಲಿಷ್ಟಕರ ಪ್ರಯೋಗಕ್ಕೆ ನಿರ್ಧರಿಸಿದರು. ಅದರಂತೆ ನೌಕೆಯನ್ನು ಭವಿಷ್ಯದ ಇನ್ನಷ್ಟು ಯೋಜನೆಗಳಿಗೆ ಅಗತ್ಯವಾದ ಮಾಹಿತಿ ಸಂಗ್ರಹಣೆಗಾಗಿ ಬಳಸಲು ನಿರ್ಧರಿಸಿದ ವಿಜ್ಞಾನಿಗಳು ಅದರಂತೆ ನೌಕೆಯಲ್ಲಿನ ಇಂಧನವನ್ನು ಉರಿಸಿ ಹಲವು ಹಂತಗಳಲ್ಲಿ ಕಕ್ಷೆ ಬದಲಾವಣೆ ಮೂಲಕ ಅಂತಿಮವಾಗಿ ಭೂಮಿಯ ಕಕ್ಷೆಗೆ ತಂದು ನಿಲ್ಲಿಸಿದ್ದಾರೆ.

ಈ ಪ್ರಕ್ರಿಯೆ ವೇಳೆ ನೌಕೆ ಚಂದ್ರನ ಕಕ್ಷೆಯಿಂದ ಚಂದ್ರನ ಮೇಲೆ ಅಪ್ಪಳಿಸದಂತೆ ಮತ್ತು ಭೂಮಿಯ ಕಕ್ಷೆಯಲ್ಲಿ ಇತರೆ ಉಪಗ್ರಹಗಳಿಗೆ ಡಿಕ್ಕಿ ಹೊಡೆಯದಂತೆ ವಿಜ್ಞಾನಿಗಳು ಎಚ್ಚರ ವಹಿಸಿದ್ದರು. ಅ.9ರಂದು ಈ ಕುರಿತ ಮೊದಲ ಕಕ್ಷೆ ಬದಲಾವಣೆ ಪ್ರಕ್ರಿಯೆ ನಡೆದು, ಬಳಿಕ ಹಲವು ಹಂತದ ಕಾರ್ಯಾಚರಣೆ ನಡೆಸಿ ನ.10ರಂದು ನೌಕೆ ಚಂದ್ರನ ಕಕ್ಷೆ ಬಿಟ್ಟು ಭೂಮಿಯ ಕಕ್ಷೆ ಪ್ರವೇಶಿಸಿದೆ. ಸದ್ಯ ನೌಕೆಯನ್ನು ಭೂಮಿಯಿಂದ 1.15 ಲಕ್ಷ ಕಿ.ಮೀನಿಂದ 1.54 ಲಕ್ಷ ಕಿ.ಮೀ ದೂರದ ಕಕ್ಷೆಯಲ್ಲಿ ಇರಿಸಲಾಗಿದೆ. ಪ್ರತಿ 13 ದಿನಕ್ಕೆ ಒಮ್ಮೆ ನೌಕೆ ಭೂಮಿಯನ್ನು ಸುತ್ತುಹಾಕುತ್ತಿದೆ.