2019ರಲ್ಲಿ ನಡೆದ ಚಂದ್ರಯಾನ-2 ವೈಫಲ್ಯಕ್ಕೆ ಕಾರಣವೇನು ಎಂಬುದನ್ನು ಪೂರ್ಣವಾಗಿ ಮನನ ಮಾಡಿಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಈ ಬಾರಿ ವಿನೂತನ ವೈಫಲ್ಯ ನಿಗ್ರಹ ವಿನ್ಯಾಸ ಮಾಡಿ ಚಂದ್ರಯಾನ-3ಕ್ಕೆ ಸಜ್ಜಾಗಿದೆ.

ಏನಿದು ಕಾರ‍್ಯತಂತ್ರ?

  • 2019ರಲ್ಲಿ ಚಂದ್ರಯಾನ-2 ವೇಳೆ ಲ್ಯಾಂಡರ್‌ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲೆ ಬಿದ್ದಿತ್ತು
  •  ಆಗ ‘ಯಶಸ್ವಿ ಉಡ್ಡಯನ ವಿನ್ಯಾಸ’ ತತ್ವ ಅಳವಡಿಸಿ ಲ್ಯಾಂಡರ್‌ ನಿರ್ಮಿಸಲಾಗಿತ್ತು
  •  ಚಂದ್ರಯಾನ-3ನಲ್ಲಿ ಏನೇನು ವೈಫಲ್ಯ ಆಗಬಹುದು ಎಂದು ಊಹಿಸಿ ಬೇರೆ ರೀತಿ ನೌಕೆ ನಿರ್ಮಾಣ
  •  ಈ ಸಲ ಚಂದ್ರನ ಮೇಲೆ ಎಲ್ಲಿ ಬೇಕಾದರೂ ಲ್ಯಾಂಡರ್‌ ಇಳಿಯುವಂತೆ ವ್ಯವಸ್ಥೆ

ನವದೆಹಲಿ: 2019ರಲ್ಲಿ ನಡೆದ ಚಂದ್ರಯಾನ-2 ವೈಫಲ್ಯಕ್ಕೆ ಕಾರಣವೇನು ಎಂಬುದನ್ನು ಪೂರ್ಣವಾಗಿ ಮನನ ಮಾಡಿಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಈ ಬಾರಿ ವಿನೂತನ ವೈಫಲ್ಯ ನಿಗ್ರಹ ವಿನ್ಯಾಸ ಮಾಡಿ ಚಂದ್ರಯಾನ-3ಕ್ಕೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜು.14ರ ಶುಕ್ರವಾರ ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಪಗ್ರಹ ಹೊತ್ತ ಎಲ್‌ವಿಎಂ 3 ರಾಕೆಟ್‌ ಆಗಸಕ್ಕೆ ನೆಗೆಯಲಿದೆ. ಈ ಮೂಲಕ ಚಂದ್ರನ ಮೇಲೆ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಲು ಮುನ್ನುಡಿ ಬರೆಯಲು ಅಣಿಯಾಗಿದೆ.

ಈ ಕುರಿತು ಸೋಮವಾರ ಪ್ರತಿಕ್ರಿಯೆ ನೀಡಿರುವ ಇಸ್ರೋ ಮುಖ್ಯಸ್ಥ ಎಸ್‌.ಸೋಮನಾಥ್‌, ‘ಈ ಬಾರಿ ನಾವು ಹೆಚ್ಚು ಇಂಧನ ಹೊಂದಿರುವ, ಹೆಚ್ಚು ಸುರಕ್ಷತಾ ಕ್ರಮಗಳನ್ನು ಒಳಗೊಂಡಿರುವ ಮತ್ತು ಲ್ಯಾಂಡರ್‌ ಇಳಿಯಲು ಹೆಚ್ಚಿನ ಸ್ಥಳಾವಕಾಶ ಕಲ್ಪಿಸಿರುವ ಯೋಜನೆಯನ್ನು ರೂಪಿಸಿದ್ದೇವೆ. ಈ ಹಿಂದೆಲ್ಲಾ ‘ಯಶಸ್ವಿ ಉಡ್ಡಯನದ ವಿನ್ಯಾಸ’ ಆಧರಿಸಿ ಹೊಸ ಯೋಜನೆ ರೂಪಿಸುತ್ತಿದ್ದೆವು. ಆದರೆ ಈ ಬಾರಿ ‘ವೈಫಲ್ಯ ಆಧರಿತ ವಿನ್ಯಾಸ’ ಮಾಡಿದ್ದೇವೆ. ಅಂದರೆ ಸೆನ್ಸರ್‌ ವೈಫಲ್ಯ, ಎಂಜಿನ್‌ ವೈಫಲ್ಯ, ಅಲ್ಗಾರಿದಮ್‌ ವೈಫಲ್ಯ, ಲೆಕ್ಕಾಚಾರ ವೈಫಲ್ಯ ಹೀಗೆ ಲ್ಯಾಂಡರ್‌ನಲ್ಲಿ ಏನೇನು ವೈಫಲ್ಯ ಆಗಬಹುದು? ವಿಫಲವಾದರೆ ಅದರ ಪರಿಣಾಮ ಏನು? ಅದನ್ನು ಸರಿಪಡಿಸುವುದು ಹೇಗೆ? ಎಂಬುದನ್ನು ಪ್ರಯೋಗ ಸಹಿತ ಅಧ್ಯಯನ ಮಾಡಿ ಸಂಭವನೀಯ ವೈಫಲ್ಯಗಳನ್ನು ಲೆಕ್ಕಾಚಾರ ಮಾಡಿ ಅವುಗಳಿಗೆ ಪರಿಹಾರ ಕಂಡುಕೊಂಡು ವಿನ್ಯಾಸ ಮಾಡಿದ್ದೇವೆ’ ಎಂದು ಹೇಳಿದ್ದಾರೆ.

Breaking: ಜುಲೈ 14 ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಡ್ಡಯನ: ಇಸ್ರೋ ಅಧಿಕೃತ ಘೋಷಣೆ

ಹೆಚ್ಚು ಶಕ್ತಿಶಾಲಿ, ವೈವಿಧ್ಯಮಯ:

ಚಂದ್ರಯಾನ-2ಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಇಂಧನ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ನಿಗದಿತ ಸ್ಥಳ ಬಿಟ್ಟು ಬೇರೆಡೆ ಲ್ಯಾಂಡಿಂಗ್‌ ಅನಿವಾರ್ಯವಾದರೆ ಬೇಕಾದೀತು ಎನ್ನುವ ಕಾರಣಕ್ಕೆ ಹೆಚ್ಚುವರಿ ಇಂಧನ ಅಳವಡಿಸಲಾಗಿದೆ. ಜೊತೆಗೆ ವಿಕ್ರಮ್‌ ಲ್ಯಾಂಡರ್‌ಗೆ ಹೆಚ್ಚುವರಿ ಸೋಲಾರ್‌ ಪ್ಯಾನೆಲ್‌ ಅಳವಡಿಸಲಾಗಿದೆ.

ಇನ್ನು ಈ ಹಿಂದಿನ ಉಡ್ಡಯನ ವೇಳೆ ಲ್ಯಾಂಡಿಂಗ್‌ಗೆ 500m 500m ಜಾಗ ನಿಗದಿ ಮಾಡಲಾಗಿತ್ತು. ಆದರೆ ಈ ಬಾರಿ 4 ಕಿಮೀ.*2.5 ಕಿ.ಮೀ.ನಷ್ಟು ವಿಶಾಲ ಸ್ಥಳವನ್ನು ನಿಗದಿ ಮಾಡಲಾಗಿದೆ. ಮೊದಲಿಗೆ ದಕ್ಷಿಣ ಧ್ರುವದ ಸನಿಹ ನಿರ್ದಿಷ್ಟಸ್ಥಳದಲ್ಲಿ ಇಳಿಸಲು ಯತ್ನಿಸಲಾಗುವುದು. ಒಂದು ವೇಳೆ ಅಲ್ಲಿ ಲ್ಯಾಂಡಿಂಗ್‌ಗೆ ತೊಂದರೆಯಾದರೆ ಅದೇ 4 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾದರೂ ಇಳಿಸಲಾಗುವುದು. ಇಂಥ ನಿರ್ಧಾರವನ್ನು ಸ್ವಯಂ ಕೈಗೊಳ್ಳುವ ವ್ಯವಸ್ಥೆಯನ್ನು ಉಪಗ್ರಹದಲ್ಲಿ ಅಳವಡಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್‌ ಮಾಹಿತಿ ನೀಡಿದರು.

ಆರ್ಟೆಮಿಸ್‌ ಒಪ್ಪಂದಕ್ಕೆ ಭಾರತ ಸಹಿ: 2024ರಲ್ಲಿ ಅಮೆರಿಕ ಜೊತೆ ಅಂತ​ರಿಕ್ಷ ಕೇಂದ್ರಕ್ಕೆ ಜಂಟಿ ಪ್ರಯಾಣ

ಮೋದಿ ಬರುತ್ತಾರಾ?:

ಚಂದ್ರಯಾನ-3 ಉಡ್ಡಯನ ನೋಡಲು ಪ್ರಧಾನಿ ನರೇಂದ್ರ ಮೋದಿ ಬರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಎಲ್ಲ ಗಣ್ಯರನ್ನೂ ಆಹ್ವಾನಿಸುತ್ತೇವೆ. ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು’ ಎಂದು ಸೋಮನಾಥ್‌ ಉತ್ತರಿಸಿದರು.