ಖಾಸಗಿ ಬಾಹ್ಯಾಕಾಶ ಉದ್ದಿಮೆಗೆ ಉತ್ತೇಜನ: ಇನ್-ಸ್ಪೇಸ್ ಹೆಗಲೇರಿ ಪಿಎಸ್ಎಲ್‌ವಿ-ಸಿ60 ಸ್ಪೇಡೆಕ್ಸ್‌ನಲ್ಲಿ ಯಶಸ್ಸು ಕಂಡ ಎನ್‌ಜಿಇಗಳು

ಡಿಸೆಂಬರ್ 30 ರಂದು ಶ್ರೀಹರಿಕೋಟಾದಿಂದ ಇಸ್ರೋದ ಪಿಎಸ್ಎಲ್‌ವಿ-ಸಿ60 / ಸ್ಪೇಡೆಕ್ಸ್ ಯೋಜನೆಯ ಮೂಲಕ ಖಾಸಗಿ ಕಂಪನಿಗಳ 10 ಪೇಲೋಡ್‌ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಈ ಪೇಲೋಡ್‌ಗಳು ಪಿಒಇಎಂ-4 ಮಾಡ್ಯುಲ್‌ನ ಭಾಗವಾಗಿದ್ದು, ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿವೆ.

Boost for private space industry NGEs that achieved success in  PSLV-C60 Spadex san

10-9-8-7-6-5-4-3 (ರಾಕೆಟ್‌ನ ತಳಭಾಗದಿಂದ ಬೆಂಕಿ ಹೊರ ಚಿಮ್ಮುತ್ತದೆ) - 2-1-ಜೀರೋ!

ಎಲ್ಲರೂ ಮಂತ್ರಮುಗ್ಧರಾಗಿ ನೋಡುತ್ತಿರುವಂತೆ, ಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ, ಎಲ್ಲ ಹಂತಗಳೂ ಯಶಸ್ವಿಯಾಗಿ ಆರಂಭಗೊಂಡು, ಶ್ರೀಹರಿಕೋಟಾದಿಂದ ಡಿಸೆಂಬರ್ 30ರ ರಾತ್ರಿ 10 ಗಂಟೆಯ ವೇಳೆಗೆ ಇಸ್ರೋದ ಪಿಎಸ್ಎಲ್‌ವಿ-ಸಿ60 / ಸ್ಪೇಡೆಕ್ಸ್ ಯೋಜನೆ ಯಶಸ್ವಿಯಾಗಿ ಉಡಾವಣೆಗೊಂಡಿತು.

ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಷನ್ ಆ್ಯಂಡ್ ಆಥರೈಸೇಷನ್ ಸೆಂಟರ್ (ಇನ್-ಸ್ಪೇಸ್, ಖಾಸಗಿ ಸಂಸ್ಥೆಗಳಿಗೆ ಬಾಹ್ಯಾಕಾಶ ಸಂಬಂಧಿತ ಕಾರ್ಯಾಚರಣೆಗಳನ್ನು ನಡೆಸಲು ನೆರವಾಗುವ, ಬಾಹ್ಯಾಕಾಶ ಇಲಾಖೆಯಡಿ ಕಾರ್ಯಾಚರಿಸುವ ಸ್ವತಂತ್ರ ಸಂಸ್ಥೆ) ತಾನು ಭಾರತದ ಖಾಸಗಿ ಕಂಪನಿಗಳು ಮತ್ತು ಸಂಸ್ಥೆಗಳಿಗೆ (ನಾನ್ ಗವರ್ನಮೆಂಟ್ ಎಂಟಿಟೀಸ್ ಅಥವಾ ಎನ್‌ಜಿಇ) ಬಾಹ್ಯಾಕಾಶದಲ್ಲಿ ಹತ್ತು ಪೇಲೋಡ್‌ಗಳನ್ನು ಸಿದ್ಧಗೊಳಿಸಿ, ಅವುಗಳನ್ನು ಕಾರ್ಯಾಚರಿಸಲು ಸಹಾಯ ಮಾಡಿರುವುದಾಗಿ ಡಿಸೆಂಬರ್ 31, ಮಂಗಳವಾರದಂದು ಹೇಳಿಕೆ ನೀಡಿದೆ.

ಈ ಪೇಲೋಡ್‌ಗಳು ಇಸ್ರೋದ ಪಿಎಸ್ಎಲ್‌ವಿ-ಸಿ60 / ಸ್ಪೇಡೆಕ್ಸ್ ಯೋಜನೆಯ ಅಂಗವಾದ ಪಿಒಇಎಂ-4 ಮಾಡ್ಯುಲ್‌ನ ಭಾಗವಾಗಿದ್ದು, ಶ್ರೀಹರಿಕೋಟಾದಿಂದ ಡಿಸೆಂಬರ್ 30ರ ರಾತ್ರಿ 10 ಗಂಟೆಯ ವೇಳೆಗೆ ಉಡಾವಣೆಗೊಂಡವು.

ನಿನ್ನೆ ಉಡಾವಣೆಗೊಂಡ ಈ ಯೋಜನೆ, ಬಾಹ್ಯಾಕಾಶದಲ್ಲಿ 350 ಕಿಲೋಮೀಟರ್ ಎತ್ತರ ಮತ್ತು 55 ಡಿಗ್ರಿ ಕೋನದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಂಡಿದೆ. ಈ ಪ್ರಯೋಗಕ್ಕಾಗಿ, ಈಗಾಗಲೇ ತನ್ನ ಮುಖ್ಯ ಉದ್ದೇಶವನ್ನು ಪೂರ್ಣಗೊಳಿಸಿರುವ ರಾಕೆಟ್‌ನ ಪಿಎಸ್4 ಹಂತವನ್ನು ಮಾರ್ಪಾಡುಗೊಳಿಸಿ, ಪಿಎಸ್ಎಲ್‌ವಿ ಆರ್ಬಿಟಲ್ ಎಕ್ಸ್‌ಪರಿಮೆಂಟಲ್ ಮಾಡ್ಯುಲ್ (ಪಿಒಇಎಂ-4) ಎಂದು ಹೆಸರು ಪಡೆದಿರುವ ವೇದಿಕೆಯನ್ನು ಬಳಸಿಕೊಳ್ಳಲಾಗಿದೆ.

ಸ್ಫೂರ್ತಿ ತುಂಬಿದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ: ಶ್ರೀಹರಿಕೋಟಾದಲ್ಲಿ ನಡೆದ ಉಡಾವಣೆಯ ಸಂದರ್ಭದಲ್ಲಿ, ಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಉಪಸ್ಥಿತರಿದ್ದರು. ಅವರ ನಿರಂತರ ಬೆಂಬಲ ಮತ್ತು ಸ್ಫೂರ್ತಿ ಬಿಜಿಎಸ್ ಅರ್ಪಿತ್ ಪೇಲೋಡ್ ನಿರ್ಮಾಣದ ಹಿಂದಿನ ಪ್ರೇರಕ ಶಕ್ತಿಯಾಗಿತ್ತು. ಸ್ವಾಮೀಜಿಯವರ ಜೊತೆ, ಎಸ್‌ಜೆಸಿಐಟಿ ಪ್ರಾಂಶುಪಾಲರಾದ ಡಾ.ಜಿ.ಟಿ.ರಾಜು, ಮಾರ್ಗದರ್ಶಕರಾದ ದೃತ್ವಾನ್ ಸ್ಪೇಸ್‌ ಲ್ಯಾಬ್‌ನ ಮುಖ್ಯಸ್ಥ, ಎಸ್‌ಜೆಸಿಐಟಿ ಸಹಾಯಕ ಪ್ರೊಫೆಸರ್‌ ಶ್ರೀಹರಿ ಹಾರ್ತಿ (Mr. Shreehari Harthi), ಯೋಜನೆಯಲ್ಲಿ ಕಾರ್ಯಾಚರಿಸಿದ ಇಸಿಇ, ಎಎಸ್‌ಇ, ಸಿಎಸ್‌ಇಯ 12 ವಿದ್ಯಾರ್ಥಿಗಳ ತಂಡ ಉಡಾವಣೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಉಡಾವಣೆಯ ವೀಕ್ಷಣೆ ಮತ್ತು ಸ್ವಾಮೀಜಿಯವರ ಉಪಸ್ಥಿತಿ ಹೊಸ ಸ್ಫೂರ್ತಿ ನೀಡಿ, ಭವಿಷ್ಯದ ಯೋಜನೆಗಳಿಗೆ ಹೊಸ ಉತ್ಸಾಹ ನೀಡಿತು.

ಸ್ವಾಮೀಜಿಯವರನ್ನು ಇಸ್ರೋ ಅಧ್ಯಕ್ಷರಾದ ಡಾ. ಎಸ್ ಸೋಮನಾಥ್ ಅವರು ಹೃತ್ಪೂರ್ವಕವಾಗಿ ಬರಮಾಡಿಕೊಂಡರು. ಇಸ್ರೋದ ಮಾಜಿ ಅಧ್ಯಕ್ಷರಾದ ಡಾ. ಕಿರಣ್ ಕುಮಾರ್ ಅವರೂ ಉಪಸ್ಥಿತರಿದ್ದು, ಸ್ವಾಮೀಜಿಯವರೊಡನೆ ಮಾತುಕತೆ ನಡೆಸಿದರು. ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಎಕ್ಸಿಕ್ಯುಟಿವ್ ಚೇರ್ಮನ್ ಆದ ರಾಜೇಶ್ ಕಾಲ್ರಾ ಅವರೂ ಈ ಮಹತ್ವದ ಉಡಾವಣೆಗೆ ಸಾಕ್ಷಿಯಾಗಿದ್ದರು.

ಪಿಒಇಎಂ ಎಂದರೇನು?: ಪಿಒಇಎಂ ಒಂದು ಸೃಜನಶೀಲ ವೇದಿಕೆಯಾಗಿದ್ದು, ಪಿಎಸ್ಎಲ್‌ವಿ ರಾಕೆಟ್‌ನ ನಾಲ್ಕನೇ ಹಂತಕ್ಕೆ ಒಂದು ಹೊಸದಾದ ಉದ್ದೇಶವನ್ನು ಒದಗಿಸಿದೆ. ತನ್ನ ಮುಖ್ಯ ಗುರಿಯನ್ನು ಪೂರ್ಣಗೊಳಿಸಿದ ಬಳಿಕ, ರಾಕೆಟ್‌ನ ನಾಲ್ಕನೇ ಹಂತವನ್ನು ಕಕ್ಷೆಯಲ್ಲಿ ಒಂದು ಪ್ರಾಯೋಗಿಕ ಮಾಡ್ಯುಲ್ ಆಗಿ ಬಳಸಿಕೊಂಡು, ಸಾಂಪ್ರದಾಯಿಕ ವೈಜ್ಞಾನಿಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಭೂಮಿಯ ಸುತ್ತಲೂ ಪರಿಭ್ರಮಣೆ ನಡೆಸುವ ಸಂದರ್ಭದಲ್ಲಿ, ಪಿಒಇಎಂ-4 ಹಲವು ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಯೋಗಗಳನ್ನು ಕೈಗೊಳ್ಳುತ್ತದೆ.

ಪಿಒಇಎಂ ವಿದ್ಯುತ್ ಪೂರೈಕೆ, ಸಂವಹನ ವ್ಯವಸ್ಥೆ, ಮತ್ತು ಕಮಾಂಡ್ ಬೆಂಬಲದಂತಹ ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಇವುಗಳು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದನ್ನು ಸುಲಭವಾಗಿಸುತ್ತವೆ.

ಈಗಾಗಲೇ ಲಭ್ಯರುವ ಸಂಪನ್ಮೂಲಗಳನ್ನೇ ಬಳಸಿಕೊಳ್ಳುವುದರಿಂದ, ಇದು ವಿವಿಧ ಸಂಶೋಧನಾ ಚಟುವಟಿಕೆಗಳನ್ನು ನಡೆಸಲು ಕಡಿಮೆ ವೆಚ್ಚದಾಯಕವಾದ ಆಯ್ಕೆಯಾಗಿದೆ.

ಪಿಎಸ್ಎಲ್‌ವಿ ಆರ್ಬಿಟಲ್ ಎಕ್ಸ್‌ಪರಿಮೆಂಟಲ್ ಮಾಡ್ಯುಲ್ (ಪಿಒಇಎಂ) ಇಸ್ರೋದ ಉತ್ತಮ ಪರಿಹಾರವಾಗಿದ್ದು, ಭಾರತೀಯ ಸ್ಟಾರ್ಟಪ್‌ಗಳು, ಕಾಲೇಜುಗಳು ಮತ್ತು ಸಂಶೋಧನಾ ಗುಂಪುಗಳಿಗೆ ಪೂರ್ಣ ಪ್ರಮಾಣದ ಉಪಗ್ರಹವನ್ನು ಉಡಾವಣೆಗೊಳಿಸದೆಯೇ ತಮ್ಮ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಅವಕಾಶ ಮಾಡಿಕೊಡುತ್ತದೆ. ಈ ಪ್ರಾಯೋಗಿಕ ವೇದಿಕೆಯನ್ನು ಬಳಸಲು ಅವಕಾಶ ಮಾಡಿಕೊಡುವ ಮೂಲಕ, ಹೆಚ್ಚಿನ ಸಂಸ್ಥೆಗಳಿಗೆ ಬಾಹ್ಯಾಕಾಶ ವಲಯದಲ್ಲಿ ಭಾಗವಹಿಸಲು ಅನುಕೂಲ ಕಲ್ಪಿಸಲಾಗುತ್ತಿದೆ.

ಇನ್-ಸ್ಪೇಸ್ ಸಂಸ್ಥೆ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಿ, ಆ ಮೂಲಕ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮ ಪ್ರಗತಿ ಸಾಧಿಸುವಂತೆ ಮಾಡುವ ಗುರಿ ಹೊಂದಿದೆ.

"ಪಿಒಇಎಂ-4 ನಂತಹ ಯೋಜನೆಗಳು ಸರ್ಕಾರೇತರ ಸಂಸ್ಥೆಗಳಿಗೆ (ಎನ್‌ಜಿಇಗಳು) ತಮ್ಮ ಬಾಹ್ಯಾಕಾಶ ಸಂಬಂಧಿತ ಉಪಕರಣಗಳನ್ನು ಪರೀಕ್ಷಿಸಲು ಮತ್ತು ಸಿದ್ಧಪಡಿಸಲು ಬಹುಮುಖ್ಯ ಪಾತ್ರ ವಹಿಸುತ್ತವೆ. ಆ ಮೂಲಕ ಭವಿಷ್ಯದಲ್ಲಿ ಅವುಗಳಿಗೆ ಉಪಗ್ರಹಗಳನ್ನು ಉಡಾವಣೆಗೊಳಿಸುವ ಸಾಮರ್ಥ್ಯ ಗಳಿಸುವಂತೆ ಉತ್ತೇಜಿಸುತ್ತವೆ" ಎಂದು ಇನ್-ಸ್ಪೇಸ್ ಅಧ್ಯಕ್ಷರಾದ ಡಾ. ಪವನ್ ಗೋಯೆಂಕಾ ಹೇಳಿದ್ದಾರೆ.

ಯೋಜನೆಯಲ್ಲಿ ಮಿನುಗಿದ ಕರ್ನಾಟಕದ ಪೇಲೋಡ್‌ಗಳು: ಪಿಎಸ್ಎಲ್‌ವಿ-ಸಿ60 ಸ್ಪೇಡೆಕ್ಸ್ ಯೋಜನೆಯಲ್ಲಿ ಒಟ್ಟು 24 ಪಿಒಇಎಂ-4 ಪೇಲೋಡ್‌ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದು, ಅವುಗಳು ವಿವಿಧ ವೈಜ್ಞಾನಿಕ ಮತ್ತು ತಾಂತ್ರಿಕ ಯೋಜನೆಗಳಿಗೆ ನೆರವು ನೀಡಲಿವೆ.

ಉಡಾವಣೆಗೊಂಡ 24 ಪೇಲೋಡ್‌ಗಳ ಪೈಕಿ, 10 ಪೇಲೋಡ್‌ಗಳನ್ನು ಸರ್ಕಾರೇತರ ಸಂಸ್ಥೆಗಳು (ಎನ್‌ಜಿಇಗಳು) ಸಿದ್ಧಪಡಿಸಿವೆ. ಅವುಗಳಲ್ಲಿ ನಾಲ್ಕು ಪೇಲೋಡ್‌ಗಳು ಕರ್ನಾಟಕದ ಕೊಡುಗೆಗಳಾಗಿವೆ. ಇವುಗಳಲ್ಲಿ, ಆದಿಚುಂಚನಗಿರಿ ಮಠದ ಎಸ್‌ಜೆಸಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಚಿಕ್ಕಬಳ್ಳಾಪುರ ಅಭಿವೃದ್ಧಿ ಪಡಿಸಿರುವ ಬಿಜಿಎಸ್ ಅರ್ಪಿತ್ (ಅಮೆಚೂರ್ ರೇಡಿಯೋ ಪೇಲೋಡ್ ಫಾರ್ ಇನ್ಫಾರ್ಮೇಶನ್ ಟ್ರಾನ್ಸ್‌ಮಿಶನ್), ಆರ್‌ವಿಸ್ಯಾಟ್-1 ಪೇಲೋಡ್, ರುದ್ರ 1.0 ಎಚ್‌ಪಿಜಿಪಿ, ಹಾಗೂ ಗ್ಯಾಲಾಕ್ಸ್ ಐ ಸ್ಪೇಸ್ ಸಲ್ಯುಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಜಿಎಲ್ಎಕ್ಸ್-ಎಸ್‌ಕ್ಯು ಪೇಲೋಡ್‌ಗಳು ಸೇರಿವೆ.

ಬಿಜಿಎಸ್ ಅರ್ಪಿತ್ ಪೇಲೋಡ್: ಬಿಜಿಎಸ್ ಅರ್ಪಿತ್ ಪೇಲೋಡನ್ನು ಚಿಕ್ಕಬಳ್ಳಾಪುರದ ಎಸ್‌ಜೆಸಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಸ್‌ಜೆಸಿಐಟಿ) ಅಭಿವೃದ್ಧಿ ಪಡಿಸಿದೆ. ಈ ಸಂಸ್ಥೆಯನ್ನು, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿರ್ವಹಿಸುತ್ತಿದೆ. ಎಸ್‌ಜೆಸಿ ಸಂಸ್ಥೆ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಆಶೀರ್ವಾದ ಮತ್ತು ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿದೆ.

ಈ ಪೇಲೋಡ್ ಒಂದು ಹಲವು ರೀತಿಯ ಸಂದೇಶಗಳನ್ನು ಕಳುಹಿಸುವ ಟ್ರಾನ್ಸ್‌ಮಿಟರ್ ರೀತಿಯದಾಗಿದ್ದು, ಯಾವುದೇ ಉಪಗ್ರಹದಿಂದ ಭೂಮಿಗೆ ಧ್ವನಿ, ಅಕ್ಷರ, ಮತ್ತು ಛಾಯಾಚಿತ್ರಗಳನ್ನು ಎಫ್ಎಂ ಮಾಡ್ಯುಲೇಷನ್ ಮತ್ತು ವಿಎಚ್ಎಫ್ ಬ್ಯಾಂಡ್ ಮೂಲಕ ಕಳುಹಿಸಬಲ್ಲದು. ಈ ಪೇಲೋಡನ್ನು ಜಗತ್ತಿನಾದ್ಯಂತ ಅಮೆಚೂರ್ ರೇಡಿಯೋ ಉಪಗ್ರಹ ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

ರುದ್ರ 1.0 ಎಚ್‌ಪಿಜಿಪಿ ಪೇಲೋಡ್: ಬೆಲಾಟ್ರಿಕ್ಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಎಂಬ ಬಾಹ್ಯಾಕಾಶ ಸ್ಟಾರ್ಟಪ್‌ ಸಂಸ್ಥೆ ರುದ್ರ 1.0 ಎಚ್‌ಪಿಜಿಪಿ ಪೇಲೋಡನ್ನು ಅಭಿವೃದ್ಧಿ ಪಡಿಸಿದೆ. ಈ ಪೇಲೋಡ್ ಅತ್ಯುತ್ತಮ ಪ್ರದರ್ಶನ ನೀಡುವ ಪರಿಸರ ಸ್ನೇಹಿ ಪ್ರೊಪಲ್ಷನ್ ವ್ಯವಸ್ಥೆಯನ್ನು ಪ್ರದರ್ಶಿಸುವ ಗುರಿ ಹೊಂದಿದೆ. ಸ್ಥಿರವಾದ ಥ್ರಸ್ಟರ್ ದಹನವನ್ನು (ನಿರಂತರ ಮತ್ತು ಸ್ಥಿರವಾದ ಇಂಜಿನ್ ಕಾರ್ಯಾಚರಣೆ) ಕನಿಷ್ಠ 50 ಸೆಕೆಂಡುಗಳ ಕಾಲ ನಿರ್ವಹಿಸಿ, ಈ ಕಾರ್ಯಾಚರಣೆಯ ಸಮಯದಲ್ಲಿ ಪ್ರೊಪಲ್ಷನ್ ವ್ಯವಸ್ಥೆಯ ಥರ್ಮಲ್ ವರ್ತನೆಯನ್ನು (ಪ್ರೊಪಲ್ಷನ್ ವ್ಯವಸ್ಥೆ ಹೇಗೆ ಉಷ್ಣತೆಯನ್ನು ನಿರ್ವಹಿಸುತ್ತದೆ ಮತ್ತು ಹಂಚುತ್ತದೆ) ಅಧ್ಯಯನ ಮಾಡುವುದು ರುದ್ರ 1.0 ಎಚ್‌ಪಿಜಿಪಿ ಪೇಲೋಡಿನ ಉದ್ದೇಶವಾಗಿದೆ.

ಇಸ್ರೋ ಬಾಹ್ಯಾಕಾಶ ನಿಲ್ದಾಣಗಳ ಡಾಕಿಂಗ್‌ ಪ್ರಯೋಗ: ಇದರ ಯಶಸ್ಸಿನಲ್ಲಿದೆ ಭಾರತದ ಶ್ರೇಯಸ್ಸು

ಗ್ಯಾಲಾಕ್ಸ್ ಐ ಸಂಸ್ಥೆಯ ಜಿಎಲ್ಎಕ್ಸ್-ಎಸ್‌ಕ್ಯು ಪೇಲೋಡ್: ಗ್ಯಾಲಾಕ್ಸ್ ಐ ಸ್ಪೇಸ್ ಸಲ್ಯುಷನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ಜಿಎಲ್ಎಕ್ಸ್-ಎಸ್‌ಕ್ಯು ಪೇಲೋಡನ್ನು ಬಾಹ್ಯಾಕಾಶದಲ್ಲಿ ಹೇಗೆ ಸಿಂಥೆಟಿಕ್ ಅಪರ್ಚರ್ ರೇಡಾರ್ (ಎಸ್ಎಆರ್) ಛಾಯಾಚಿತ್ರಗಳನ್ನು ಸೃಷ್ಟಿಸಿ, ಸೆರೆಹಿಡಿದು, ಸಂಸ್ಕರಿಸಲಾಗುತ್ತದೆ ಎಂಬುದನ್ನು ಪರೀಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಎಸ್ಎಆರ್ ತಂತ್ರಜ್ಞಾನ ಉಪಗ್ರಹಗಳಿಗೆ ಮೋಡ ಮುಸುಕಿದ್ದಾಗಲೂ, ರಾತ್ರಿಯ ಸಮಯದಲ್ಲೂ ಮಾಮೂಲಿ ಕ್ಯಾಮರಾಗಳ ಬದಲು ರೇಡಾರ್ ಸಂಕೇತಗಳ ಮೂಲಕ ಭೂಮಿಯ ಮೇಲ್ಮೈಯ ವಿಸ್ತೃತ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಅವಕಾಶ ಮಾಡಿಕೊಡುತ್ತದೆ. ಈ ಪರೀಕ್ಷೆಯ ಮೂಲಕ, ಎಸ್ಎಆರ್ ತಂತ್ರಜ್ಞಾನ ಬಾಹ್ಯಾಕಾಶದ ಪರಿಸ್ಥಿತಿಗಳಲ್ಲಿ ಸಮರ್ಥವಾಗಿ ಕಾರ್ಯಾಚರಿಸುವುದನ್ನು ಖಾತ್ರಿಪಡಿಸುತ್ತದೆ.

'ಮಹಾರತ್ನ' ಎಚ್ಎಎಲ್ ಇನ್ನಷ್ಟು ಸಾಧನೆ ಮೆರೆಯಲಿ: 85ನೇ ಸಂಸ್ಥಾಪನಾ ದಿನದಂದು ಯದುವೀರ್ ಒಡೆಯರ್ ಶ್ಲಾಘನೆ

ಆರ್‌ವಿಸ್ಯಾಟ್-1 ಪೇಲೋಡ್: ಆರ್‌ವಿಸ್ಯಾಟ್-1 ಪೇಲೋಡನ್ನು ಆರ್‌ವಿ ಇಂಜಿನಿಯರಿಂಗ್ ಕಾಲೇಜ್ ಅಭಿವೃದ್ಧಿ ಪಡಿಸಿದೆ. ಈ ಪೇಲೋಡ್, ಬ್ಯಾಕ್ಟೆರಾಯ್ಡ್ಸ್ ಥೀಟಾಯೊಟ ಒಮಿಕ್ರಾನ್ ಎಂಬ ಕರುಳಿನ ಬ್ಯಾಕ್ಟೀರಿಯಾ ಬಾಹ್ಯಾಕಾಶ ಹೇಗೆ ಬೆಳೆಯುತ್ತವೆ ಎಂಬುದನ್ನು ಅಧ್ಯಯನ ನಡೆಸಲಿದೆ. ಈ ಪೇಲೋಡ್, ಬಾಹ್ಯಾಕಾಶದ ಸನ್ನಿವೇಶಗಳಲ್ಲಿ ಪ್ರಿಬಯಾಟಿಕ್ಸ್‌ಗಳನ್ನು (ಉಪಯುಕ್ತ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗುವ ಸಂಯುಕ್ತಗಳು) ಬಳಸಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಗಮನಿಸಿ, ಭೂಮಿಯಲ್ಲಿನ ಅವುಗಳ ಬೆಳವಣಿಗೆಯೊಡನೆ ಹೋಲಿಸಿ ನೋಡುತ್ತದೆ. ಈ ಪ್ರಯೋಗ, ಬಾಹ್ಯಾಕಾಶದಲ್ಲಿ ಮಾನವ ದೇಹ ಹೇಗೆ ಕಾರ್ಯಾಚರಿಸುತ್ತದೆ ಎಂಬುದರ ಕುರಿತು ಮಹತ್ವದ ಮಾಹಿತಿಗಳನ್ನು ನೀಡಿ, ಭವಿಷ್ಯದ ಸುದೀರ್ಘ ಬಾಹ್ಯಾಕಾಶ ಯೋಜನೆಗಳಲ್ಲಿ ಗಗನಯಾತ್ರಿಗಳ ಆರೋಗ್ಯ ಕಾಪಾಡಲು ನೆರವಾಗಲಿದೆ.

Latest Videos
Follow Us:
Download App:
  • android
  • ios