ಮುದಿಯಾಗಿದೆ ಫೇಸ್‌ಬುಕ್ಕು: ಸೋಷಿಯಲ್ ಮೀಡಿಯಾ ದಾರಿತಪ್ಪಿಸುತ್ತಿದೆ ಗೊತ್ತೇ?
ಯಾವ ಖರ್ಚೂ ಇಲ್ಲದೇ, ಲಕ್ಷಾಂತರ ಮಂದಿಯನ್ನು ತಲುಪುವುದು ಸಾಧ್ಯ ಅನ್ನುವುದನ್ನು ಸೋಷಿಯಲ್ ಮೀಡಿಯಾ ತೋರಿಸಿಕೊಟ್ಟಿತು. ನಾಟಕ ಪ್ರದರ್ಶನದ ಕುರಿತು ಫೇಸ್‌ಬುಕ್‌ನಲ್ಲಿ ಹಾಕುವ ಒಂದು ಪೋಸ್ಟ್ ನೂರಾರು ಮಂದಿಯನ್ನು ರಂಗಮಂದಿರಕ್ಕೆ ಕರೆತರುತ್ತಿತ್ತು.
ನೈನಾ ಆರ್ ಕಣ್ಣನ್
ನೀವೊಂದು ಸಿನಿಮಾ ಮಾಡಿದ್ದೀರಿ. ಅದರ ಬಗ್ಗೆ ಈ ಜಗತ್ತಿಗೆ ಹೇಳಬೇಕು ಅಂತ ನಿಮಗೆ ಆಸೆ. ಐವತ್ತು ವರ್ಷಗಳ ಹಿಂದೆ ನಿಮ್ಮ ಸಿನಿಮಾದ ಬಗ್ಗೆ ಜಗತ್ತಿಗೆ ತಿಳಿಸುವುದಕ್ಕೆ ಇದ್ದ ಮಾಧ್ಯಮ ದಿನಪತ್ರಿಕೆ, ಪತ್ರಿಕೆ. ಇವುಗಳಲ್ಲಿ ಜಾಹೀರಾತು ನೀಡಿದರೆ ಒಂದು ವರ್ಗದ ಮಂದಿಗೆ ತಿಳಿಯುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಸೈಕಲುಗಳಿಗೆ ಮೈಕು ಕಟ್ಟಿಕೊಂಡು ಪ್ರಚಾರ ಮಾಡುವುದು, ಕರಪತ್ರಗಳನ್ನು ಬೀದಿಯಲ್ಲೋ ಸಂತೆಯಲ್ಲೋ ಎಸೆಯುವುದರ ಮೂಲಕ ಜನರನ್ನು ತಲುಪಬಹುದಿತ್ತು. ನಾಟಕ ಸಂಸ್ಥೆಗಳೂ ಹೀಗೇ ಮಾಡುತ್ತಿದ್ದವು. ಕ್ರಮೇಣ ತಲುಪುವ ವಿಧಾನಗಳು ಬದಲಾದವು.
ಪೋಸ್ಟರ್ ಅಂಟಿಸುವುದು, ಹೋರ್ಡಿಂಗ್ ಏರಿಸುವುದು, ಟೆಲಿವಿಷನ್, ರೇಡಿಯೋಗಳಲ್ಲಿ ಜಾಹೀರಾತು ನೀಡುವುದು- ಇವೆಲ್ಲ ಜನಪ್ರಿಯವಾದವು. ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದು ಮುಂದುವರಿಯಿತು. ಇವೆಲ್ಲಕ್ಕೂ ಸಾಕಷ್ಟು ಹಣ ಖರ್ಚಾಗುತ್ತಿತ್ತು. ಎಲ್ಲರೂ ಎಲ್ಲಾ ಮಾಧ್ಯಮಗಳ ಮೂಲಕ ಜಾಹೀರಾತು ನೀಡುವುದು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಆಯಾ ಸಂಸ್ಥೆಗಳು ತಮ್ಮ ಯಥಾನುಶಕ್ತಿ ಜಾಹೀರಾತು ನೀಡುತ್ತಿದ್ದವು. ಶಕ್ತಿಶಾಲಿ ಸಂಸ್ಥೆಗಳು ವರ್ಲ್ಡ್ ಕಪ್ ಪ್ರಾಯೋಜನೆ ಮಾಡಿದರೆ, ಸಣ್ಣ ಸಂಸ್ಥೆಗಳು ಕಬಡ್ಡಿ ಆಟವನ್ನು ಪ್ರಾಯೋಜನೆ ಮಾಡಿ ಜನರನ್ನು ತಲುಪುತ್ತಿದ್ದವು. ಕಳೆದ ಒಂದೂವರೆ ದಶಕದಿಂದ ಈಚೆಗೆ ಹೊಸ ಮಾಧ್ಯಮವೊಂದು ಕಣ್ತೆರೆಯಿತು. ಯಾವ ಖರ್ಚೂ ಇಲ್ಲದೇ, ಲಕ್ಷಾಂತರ ಮಂದಿಯನ್ನು ತಲುಪುವುದು ಸಾಧ್ಯ ಅನ್ನುವುದನ್ನು ಸೋಷಿಯಲ್ ಮೀಡಿಯಾ ತೋರಿಸಿಕೊಟ್ಟಿತು.
ಮನೆ ಹಿತ್ತಲಿನಲ್ಲಿ ಪತ್ನಿಯ ಬೃಹತ್ ಪ್ರತಿಮೆ ಸ್ಥಾಪಿಸಿದ ಫೇಸ್‌ಬುಕ್ ಸಂಸ್ಥಾಪಕ ಜುಕರ್‌ಬರ್ಗ್
ನಾಟಕ ಪ್ರದರ್ಶನದ ಕುರಿತು ಫೇಸ್‌ಬುಕ್‌ನಲ್ಲಿ ಹಾಕುವ ಒಂದು ಪೋಸ್ಟ್ ನೂರಾರು ಮಂದಿಯನ್ನು ರಂಗಮಂದಿರಕ್ಕೆ ಕರೆತರುತ್ತಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ಒಂದು ವಿಡಿಯೋ ಯಾವುದೋ ಹಳ್ಳಿಗಾಡಿನ ಜಲಪಾತಕ್ಕೆ ಜನ ಮುಗಿಬೀಳುವಂತೆ ಮಾಡುತ್ತಿತ್ತು. ಹೀಗೆ ಪ್ರಚಾರದ ಮಟ್ಟು ಮತ್ತು ದಾರಿ ಎರಡೂ ಬದಲಾಗುತ್ತಾ ಹೋಯಿತು. ಇವತ್ತು ಬೆಂಗಳೂರಿನಲ್ಲಿ ನಡೆಯುವ ಮಾವಿನಹಣ್ಣಿನ ಮೇಳದ ಕುರಿತು ಯಾವ ಪತ್ರಿಕೆಯಲ್ಲೂ ಜಾಹೀರಾತು ಪ್ರಕಟ ಆಗುವುದಿಲ್ಲ. ಯಾವುದೇ ಟೆಲಿವಿಷನ್, ರೇಡಿಯೋ ಮಾವಿನಹಣ್ಣಿನ ಮೇಳದ ಬಗ್ಗೆ ಹೇಳುವುದಿಲ್ಲ. ಆದರೂ ಮಾವಿನಹಣ್ಣಿನ ಮೇಳಕ್ಕೆ ಲಕ್ಷಾಂತರ ಮಂದಿ ಧಾವಿಸುತ್ತಾರೆ.
ಅವರನ್ನು ಪತ್ರಿಕಾ ಜಾಹೀರಾತುಗಳಿಗಿಂತ ಹೆಚ್ಚು ಸಮರ್ಥವಾಗಿ ಇನ್‌ಸ್ಟಾಗ್ರಾಮ್ ತಲುಪಿರುತ್ತದೆ. ಯಾವ ಅಂಗಡಿಯಲ್ಲಿ ಬಟ್ಟೆಗಳು ಅಗ್ಗ, ಸಿಂಗಪುರಕ್ಕೆ ಹೋದವರು ಎಲ್ಲಿ ಶಾಪಿಂಗ್ ಮಾಡಬೇಕು, ಕಾಲು ನೋವಿಗೆ ಒಳ್ಳೆಯ ಔಷಧಿ ಯಾವುದು, ತುರುವೇಕೆರೆಯಲ್ಲಿ ಒಳ್ಳೆಯ ಮಟನ್ ಬಿರಿಯಾನಿ ಎಲ್ಲಿ ಸಿಗುತ್ತದೆ ಎಂಬ ಮಾಹಿತಿಗಳೆಲ್ಲ ಸೋಷಲ್ ಮೀಡಿಯಾದಲ್ಲಿ ದೊರೆಯುತ್ತವೆ. ಇವತ್ತು ವಿವಾದಾತ್ಮಕ ವರದಿಗಳಿಗೆ ಕೂಡ ಪತ್ರಿಕೆ, ಟೆಲಿವಿಷನ್‌ಗಳಂಥ ಮಾಧ್ಯಮಗಳು ಬೇಕಾಗಿಲ್ಲ. ಯೂಟ್ಯೂಬು ಸಂದರ್ಶನಗಳಲ್ಲಿ ಬೇಕಾದ್ದು ಮಾತಾಡಬಹುದು. ಇನ್‌ಸ್ಟಾ ಲೈವ್‌ಗಳಲ್ಲಿ ಲೈವ್ ಬಂದು ಸಮಜಾಯಿಷಿ ನೀಡಬಹುದು. ಫೇಸ್‌ಬುಕ್ ಲೈವ್‌ಗಳಲ್ಲಿ ಪ್ರಸಾರ ಮಾಡಬಹುದು.
ಇದರಿಂದಾಗಿ ಮಹಾಜನತೆಯನ್ನು ತಲುಪುವುದು ಸುಲಭವೂ ಅಗ್ಗವೂ ಆಗಿದೆ ಎಂದು ಭಾವಿಸುವುದರಲ್ಲಿ ತಪ್ಪೇನಿಲ್ಲ. ಸೋಷಲ್ ಮೀಡಿಯಾ ಇಲ್ಲದ ದಿನಗಳಲ್ಲಿ ಯಾವುದೋ ಕೊಂಪೆಯಲ್ಲಿದ್ದ ಹೋಟೆಲಿನ ಬಗ್ಗೆ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಇದ್ದುಕೊಂಡು ಕಾದಂಬರಿ ಬರೆದು ಪ್ರಕಟಿಸಿದ ಲೇಖಕನಿಗೆ ಓದುಗರನ್ನು ತಲುಪಲು ದಾರಿಗಳೇ ಇರಲಿಲ್ಲ. ಯಾರಾದರೂ ಅಪಪ್ರಚಾರ ಮಾಡಿದರೆ ಸಮರ್ಥಿಸಿಕೊಳ್ಳಲು ವೇದಿಕೆಗಳೇ ಇರಲಿಲ್ಲ. ಈಗ ಎಲ್ಲರಿಗೂ ಎಲ್ಲವೂ ಲಭ್ಯ.
ಇದರಿಂದಾಗಿ ಪರಿಸ್ಥಿತಿ ಸುಧಾರಿಸಿದೆ. ವ್ಯಾಪಾರ ಅಧಿಕಗೊಂಡಿದೆ, ಪುಸ್ತಕಗಳ ಮಾರಾಟ ಮಿತಿಮೀರಿದೆ. ಸಿನಿಮಾಗಳು ಬಹಳ ಚೆನ್ನಾಗಿ ಓಡುತ್ತಿವೆ ಎಂದು ಯಾರಾದರೂ ಭಾವಿಸಿದರೆ ಅದು ಸುಳ್ಳು ಅನ್ನುತ್ತದೆ ಸಮೀಕ್ಷೆ. ಅಮೆರಿಕಾದ ಸಂಸ್ಥೆ ನಡೆಸಿದ ಸರ್ವೆಯಿಂದ ಗೊತ್ತಾದ ಸಂಗತಿಯೆಂದರೆ 2014-15ರಲ್ಲಿ ಶೇಕಡಾ 71ರಷ್ಟು ತರುಣ ತರುಣಿಯರ ನಡುವೆ ಫೇಸ್ ಬುಕ್ ಜನಪ್ರಿಯವಾಗಿತ್ತು. ಫೇಸ್ ಬುಕ್ಕಿನಲ್ಲಿ ಒಂದು ಪೋಸ್ಟ್ ಹಾಕಿದರೆ ಅದನ್ನು ನೋಡುತ್ತಿದ್ದವರ ಪೈಕಿ ಶೇ,71ರಷ್ಟು ಮಂದಿ ಹದಿಹರೆಯದವರೇ ಆಗಿದ್ದರು. 2023ರ ಹೊತ್ತಿಗೆ ಅದು ಶೇ.31ಕ್ಕೆ ಇಳಿದಿದೆ. 2024ರ ಹೊತ್ತಿಗೆ ಶೇ. 9ಕ್ಕೆ ಕುಸಿಯಲಿದೆ.
ಸೋಷಲ್ ಮೀಡಿಯಾ ಕೂಡ ಮುದಿಯಾಗುತ್ತದೆ ಅನ್ನುವುದಕ್ಕೆ ಇದು ಸಾಕ್ಷಿ. ಇದರಂತೆಯೇ ಬ್ಲಾಗ್‌ಗಳು, ವೆಬ್ ಪೋರ್ಟಲ್‌ಗಳು, ಆನ್‌ಲೈನ್ ಪತ್ರಿಕೆಗಳು ಕೂಡ ಹದಿಹರೆಯದವರ ಸರಹದ್ದಿನಿಂದ ಆಚೆಗಿವೆ. ಏಪ್ರಿಲ್ 24ರಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ ಇನ್‌ಸ್ಟಾಗ್ರಾಮ್ ನೋಡುವವರ ಪೈಕಿ ಶೇ.32ರಷ್ಟು ಮಂದಿ 18-24ರ ವಯಸ್ಸಿನವರು. ಶೇ. 30.6ರಷ್ಟು ಮಂದಿ 24-34ರ ವಯಸ್ಸಿಗೆ ಸೇರಿದವರು. ಅಮೆರಿಕಾದಲ್ಲಿ 13-17 ವಯೋಮಾನದ ಶೇ.59ರಷ್ಟು ಮಂದಿ ಇನ್‌ಸ್ಟಾಗ್ರಾಮ್ ಮೂಲಕವೇ ಮಾಹಿತಿ, ಮನರಂಜನೆ, ಸಲಹೆ ಪಡೆಯುತ್ತಾರೆ. ಅವರು ಜಗತ್ತಿನ ಬೇರೆ ಯಾವುದೇ ಸುದ್ದಿಮೂಲಗಳನ್ನೂ ನೋಡುವುದಿಲ್ಲ.
ಇನ್‌ಸ್ಟಾಗ್ರಾಮ್‌ನ ಜನಪ್ರಿಯತೆಯನ್ನೂ ಮೀರಿ ಇವತ್ತು ಜನಪ್ರಿಯತೆ ಗಳಿಸಿರುವುದು ಯೂಟ್ಯೂಬು. 13-17 ವಯಸ್ಸಿನ ತರುಣ-ತರುಣಿಯರ ನಡುವೆ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದ್ದು ಇಷ್ಟು. ಶೇ.91ರಷ್ಟು ಮಂದಿ ಯೂಟ್ಯೂಬ್ ನೋಡುತ್ತಾರೆ. ಅವರ ಪೈಕಿ ಶೇ,71ರಷ್ಟು ಮಂದಿ ಪ್ರತಿದಿನವೂ ಯೂಟ್ಯೂಬ್‌ಗೆ ಹಣಿಕಿಹಾಕುತ್ತಾರೆ. ಇನ್‌ಸ್ಟಾಗ್ರಾಮ್ ಬಳಸುವವರು ಕನಿಷ್ಟ ತಿಂಗಳಿಗೆ ಒಂದೋ ಎರಡೋ ಪೋಸ್ಟ್, ಫೋಟೋ, ರೀಲ್, ಸ್ಟೋರಿ ಹಾಕುತ್ತಾರೆ. ಆದರೆ ಯೂಟ್ಯೂಬ್ ನೋಡುವವರು ಕೇವಲ ಮನರಂಜನೆ ಮತ್ತು ಸುದ್ದಿಗಾಗಿಯೇ ಬರುವವರು. ಅವರ ಪೈಕಿ ಹೆಚ್ಚಿನವರು ಏನನ್ನೂ ಅಪ್‌ಲೋಡ್ ಮಾಡುವುದಿಲ್ಲ. ಫೇಸ್‌ಬುಕ್ಕು ಮೇಷ್ಟರ ಥರ ಕೆಲಸ ಮಾಡುತ್ತದೆ, ಇನ್‌ಸ್ಟಾಗ್ರಾಮ್ ಗೆಳೆಯನ ಥರ ಕಾಣಿಸುತ್ತದೆ, ಯೂಟ್ಯೂಬ್ ಥೇಟರಿನ ಥರ ಭಾಸವಾಗುತ್ತದೆ ಎಂಬುದನ್ನು ಹದಿಹರೆಯದ ಜೀವಗಳು ಅರ್ಥಮಾಡಿಕೊಂಡಿವೆ. ಆ ಕಾರಣಕ್ಕಾಗಿಯೇ ಝೆನ್ ಜೆಡ್ ಮತ್ತು ಜೆನ್ ಆಲ್ಫಾಗೆ ಸೇರಿದವರು ಫೇಸ್‌ಬುಕ್ಕಿನತ್ತ ಸುಳಿಯುವುದೂ ಇಲ್ಲ.
ಫೇಸ್‌ಬುಕ್, ಇನ್‌ಸ್ಟಾ ಮತ್ತು ಯೂಟ್ಯೂಬ್ ಹೇಗೆ ದಾರಿತಪ್ಪಿಸುತ್ತವೆ ಅನ್ನುವುದನ್ನು ಅರ್ಥಮಾಡಿಕೊಳ್ಳದೇ ಹೋದರೆ ಸೋಲು ಖಚಿತ. ಇವತ್ತು ಈ ಮೂರೂ ಮಾಧ್ಯಮಗಳನ್ನು ವ್ಯಾಪಾರಕ್ಕೆ ಬಳಸಿಕೊಳ್ಳಲಾಗುತ್ತವೆ. ಇಲ್ಲಿ ಅಭಿಪ್ರಾಯಗಳು ಮಾರಾಟವಾಗುತ್ತವೆ. ಈ ಕ್ಷೇತ್ರದಲ್ಲಿ ಪರಿಣತರಿಗಿಂತ ಅನುಭವಿಗಳಿಗೇ ಹೆಚ್ಚು ಆದ್ಯತೆ. ಖ್ಯಾತ ವೈದ್ಯ ಹೇಳಿದ್ದಕ್ಕಿಂತ, ನೋವಿನಿಂದ ಮುಕ್ತನಾದ ರೋಗಿ ಹೇಳುವ ಮಾತಿಗೇ ಬೆಲೆ. ಹಾಗೆಯೇ, ಯಾರು ಹೇಳಿದ್ದು ಯಾವ ವಯಸ್ಸಿನವರನ್ನು ತಲುಪುತ್ತದೆ ಅನ್ನುವುದು ಕೂಡ ಗಣನೆಗೆ ಬರುತ್ತದೆ. ಸಿನಿಮಾ ಚೆನ್ನಾಗಿದೆ ಅಂತ ಅದೇ ಉದ್ಯಮದಲ್ಲಿರುವ ಮತ್ತೊಬ್ಬ ಹೇಳಿದರೆ ನಂಬಿಕೆ ಕಡಿಮೆ. ಯಾರೋ ಪ್ರೇಕ್ಷಕ ಹೇಳಿದಾಗ ನಂಬಿಕೆ ಜಾಸ್ತಿ. ಹೋಟೆಲು ಚೆನ್ನಾಗಿದೆ ಎನ್ನುವುದನ್ನು ಗ್ರಾಹಕರೇ ಹೇಳಿದಾಗಲೇ ಮನದಟ್ಟಾಗುವುದು.
ಟ್ರಿಪ್ ರೋಡ್ ಮ್ಯಾಪ್ ಮೂಲಕವೇ ಗೆಳತಿಗೆ ವಿಲ್ ಯು ಮ್ಯಾರಿ ಮೀ ಪ್ರಪೋಸ್: ಮುಂದೇನಾಯ್ತು?
ಹೀಗಾಗಿ ಇಲ್ಲಿ ಸೆಲೆಬ್ರಿಟಿಗಳಿಗೆ ಬೆಲೆಯಿದೆ, ಅವರ ಮಾತುಗಳಿಗಿಲ್ಲ. ದೊಡ್ಡ ಸೆಲೆಬ್ರಿಟಿಗೆ ಹಣಕೊಟ್ಟು ಜಾಹೀರಾತು ಮಾಡಿಸಿದರೆ ಗಿಟ್ಟುವುದಿಲ್ಲ. ಶ್ರೀಸಾಮಾನ್ಯ ತನಗೆ ತೋಚಿದ್ದು ಹೇಳಿದ್ದೇ ಮನಸ್ಸಿಗೆ ನಾಟುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಯಾವುದು ಯಾರಿಗೆ ತಲುಪುತ್ತದೋ ಅವರಿಗೆ ತಲುಪುವುದಿಲ್ಲ ಅನ್ನುವುದನ್ನು ಸೋಷಲ್ ಮೀಡಿಯಾ ಸುಳ್ಳಾಗಿಸಿದೆ. ಆದರೆ, ಇನ್‌ಸ್ಟಾದಲ್ಲಿ ಹಾಕಬೇಕಾದ ಸುದ್ದಿಯನ್ನು ಫೇಸ್‌ಬುಕ್ಕಲ್ಲೂ, ಫೇಸ್‌ಬುಕ್ಕಲ್ಲಿ ಮಾಡಬೇಕಾದ ವಾದವನ್ನು ಯೂಟ್ಯೂಬಲ್ಲೂ ಮಾಡಿದರೆ ತೋಪಾಗುವುದು ಖಚಿತ.