ಮೊಂಡು ಕೈ ಹುಡುಗಿ ಬ್ಯಾಡ್ಮಿಂಟನ್ ಚಾಂಪಿಯನ್ ಆದ ಕತೆ
ಆಕೆಯ ಕೈ ಹುಟ್ಟಿನಿಂದಲೇ ಮೊಂಡು. ಆಕೆ ಕೇಳಿದ ಕನಿಕರದ ಮಾತುಗಳು ಅಷ್ಟಿಷ್ಟಲ್ಲ. ಆದರೆ ಆದರೆ ಆಕೆಯ ಭರವಸೆ ಆಕೆಯನ್ನು ಮುನ್ನಡೆಸಿದ್ದು ಎಲ್ಲಿಗೆ ಗೊತ್ತೆ?
ನನ್ನ ಕೈ ಹುಟ್ಟಿನಿಂದಲೇ ಮೊಂಡು. ಅದನ್ನು ನೋಡಿದವರೆಲ್ಲರೂ ಛೆಛೆ ಅನ್ನುವವರೇ. ನನ್ನ ಫ್ಯಾಮಿಲಿಟಯ ಹಲವು ಆಂಟಿಗಳು ಕೂಡ, ಅಯ್ಯೋ, ಈ ಹೆಣ್ಣು ಮಗಳಿಗೆ ಇಂಥ ಅವಸ್ಥೆ ದೇವರು ಕೊಡಬಾರದಿತ್ತು, ಹೀಗಿದ್ದರೆ ಇವಳನ್ನು ಯಾರು ಮದುವೆಯಾಗುತ್ತಾರೆ ಎಂದೆಲ್ಲ ನನ್ನ ಹಿಂದೆ ಲೊಚಗುಟ್ಟುತ್ತಿದ್ದರು. ನನ್ನ ಕ್ಲಾಸಿನಲ್ಲೂ ಕೂಡ ನನ್ನ ಸಹಪಾಠಿಗಳು ಹಿಂದಿನಿಂದ ತುಂಬಾ ಕನಿಕರದಿಂದ ಮಾತನಾಡುತ್ತಿದ್ದರು. ಈ ಮಾತುಗಳು ತುಂಬಾ ಹರ್ಟ್ ಮಾಡುತ್ತಿದ್ದವು. ಆದರೆ ದಿನ ಕಳೆದಂತೆ ನಾನು ದಪ್ಪ ಚರ್ಮದವಳಾದೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ.
ಆದರೆ ನನ್ನ ಅಪ್ಪ ಅಮ್ಮ ನನ್ನನ್ನ ತುಂಬಾ ಸ್ವತಂತ್ರವಾಗಿಯೇ ಬೆಳೆಸಿದರು. ನನ್ನ ಎಲ್ಲ ಕೆಲಸಗಳನ್ನೂ ನಾನೇ ಮಾಡಿಕೊಳ್ಳುತ್ತಿದ್ದೆ. ಪೆನ್ಸಿಲ್ ಶಾರ್ಪ್ ಮಾಡುವುದರಿಂದ ಹಿಡಿದು ಶೂಲೇಸ್ ಕಟ್ಟಿಕೊಳ್ಳುವವರೆಗೆ ಯಾವುದಕ್ಕೂ ಇನ್ನೊಬ್ಬರನ್ನು ಡಿಪೆಂಡ್ ಆಗಲಿಲ್ಲ. ಅವರು ನನ್ನಲ್ಲಿ ಆ ಮಟ್ಟಿನ ಆತ್ಮವಿಶ್ವಾಸವನ್ನು ತುಂಬಿದ್ದರು.
ನನ್ನ 13ನೇ ಬರ್ತ್‌ಡೇ ಸಂದರ್ಭದಲ್ಲಿ ಒಂದು ದಿನ ಒಂದು ಮಾಲ್‌ಗೆ ಖರೀದಿಗೆ ಹೋಗಿದ್ದೆವು. ಅಲ್ಲಿ ಒಬ್ಬ ವ್ಯಕ್ತಿ ನಮ್ಮನ್ನು ನಿಲ್ಲಿಸಿದರು. 'ಕೈಗೆ ಏನಾಗಿದೆ?' ಎಂದು ಪ್ರಶ್ನಿಸಿದರು. ನಾನು ಎಲ್ಲರಿಗೂ ನೀಡುವಂತೆ 'ಹುಟ್ಟಿನಿಂದಲೇ ಇದೆ' ಎಂದು ಉತ್ತರ ಕೊಟ್ಟೆ. ಅವರು ಸುಮ್ಮನೆ ಹೋಗಲಿಲ್ಲ. 'ನೀನು ಪ್ಯಾರಾ ಬ್ಯಾಡ್ಮಿಂಟನ್ ಬಗ್ಗೆ ಕೇಳಿದ್ದೀಯಾ? ನೀನು ಅದನ್ನು ಟ್ರೈ ಮಾಡಬೇಕು. ನೀನು ಅದ್ಭುತವನ್ನೇ ಸಾಧಿಸಬಹುದು..' ಎಂದು ಹೇಳಿ, ನನ್ನ ಕೈಗೆ ಅವರ ಒಂದು ಕಾರ್ಡ್ ಕೊಟ್ಟು ಹೋಗಿಬಿಟ್ಟರು.
ಆ ಮಾತು ನನ್ನಲ್ಲಿ ಉಳಿಯಿತು. ಈ ಹಿಂದೆ ಯಾರೂ ನನ್ನಲ್ಲಿ ಹಾಗೆ ಹೇಳಿರಲಿಲ್ಲ. ಆದರೆ ನಾನು ಅವರಿಗೆ ಕರೆ ಮಾಡಲಿಲ್ಲ.
ಮರುದಿನ ಶಾಲೆಯಲ್ಲಿ ಸ್ಪೋರ್ಟ್ಸ್ ಕಾಂಪಿಟಿಶನ್ ಇದ್ದವು. ನಾನು ಅದರಲ್ಲಿ ಭಾಗವಹಿಸಲು ಇಚ್ಛಿಸಿದೆ. ಆದರೆ ನನ್ನ ಟೀಚರ್ ನನ್ನನ್ನು ಬದಿಗೆಳೆದು, 'ಇದೆಲ್ಲ ನಿನಗೆ ಬೇಡ. ನೀನು ಇದರಲ್ಲಿ ಸ್ಪರ್ಧಿಸಲಾರೆ. ನಿನ್ನ ಸ್ಟಡಿ ಮೇಲೆ ಗಮನ ಹರಿಸು, ಕೊನೇ ಪಕ್ಷ ಅದರಲ್ಲಿ ನಿನ್ನ ಕೋಟಾ ಪಡೀಬಹುದು,' ಎಂದರು.
ಎಮರ್ಜೆನ್ಸಿ ಡಾಕ್ಟರ್ ಹೇಳಿದ ಕೊರೊನಾದ ಕತೆಗಳು..! ...
ಅಂದು ನಾನು ಹತಾಶಳಾಗಿ ಸುಮ್ಮನಾದೆ. ಆದರೆ ನಿಶ್ಚಯಿಸಿಬಿಟ್ಟಿದ್ದೆ. ಮನೆಗೆ ಬಂದ ಕೂಡಲೇ ಆ ಕಾರ್ಡ್ ಹುಡುಕಿ ಆ ವ್ಯಕ್ತಿಗೆ ಫೋನ್ ಮಾಡಿದೆ. ಅವರ ಹೆಸರು ಗೌರವ್. ಲಖನೌದಲ್ಲಿ ಅವರ ಪ್ಯಾರಾ ಸ್ಪೋರ್ಟ್ಸ್ ಸ್ಕೂಲ್ ಇದೆ. ಅಲ್ಲಿಗೆ ನನ್ನನ್ನು ಆಹ್ವಾನಿಸಿದರು. ಐದು ತಿಂಗಳಲ್ಲಿ ಅಲ್ಲಿದ್ದೆ. ಆದರೆ ನರ್ವಸ್ ಆಗಿದ್ದೆ. ಒಂದು ವೇಳೆ ನನ್ನ ಟೀಚರ್ ಹೇಳಿದ್ದೇ ನಿಜವಿದ್ದರೆ? ನಾನು ಸ್ಪೋರ್ಟ್ಸ್‌ನಲ್ಲಿ ಸಾಧನೆ ಮಾಡಲು ಸಾಧ್ಯ ಆಗದಿದ್ದರೆ? ಆದರೆ ಗೌರವ್ ಸರ್ ನನ್ನ ಅಳುಕು ಹೋಗಲಾಡಿಸಿದರು. ನನ್ನನ್ನು ತಿದ್ದಿದರು. ನನ್ನ ಡಯಟ್ ಬದಲಿಸಿದರು. ಪ್ರತಿನಿತ್ಯ ಕಠಿಣವಾದ ಟ್ರೇನಿಂಗ್ ಕೊಟ್ಟರು. ನಾನು ನನ್ನ ಜೀವನದ ಉದ್ದೇಶವನ್ನು ಕಂಡುಕೊಂಡಿದ್ದೆ.
ನನ್ನ ದಿನ ಬ್ಯಾಡ್ಮಿಂಟನ್‌ನಿಂದ ಆರಂಭವಾಗಿ ಬ್ಯಾಡ್ಮಿಂಟನ್ ಜೊತೆಗೆ ಮುಗಿಯುತ್ತಿತ್ತು. ಎರಡು ತಿಂಗಳ ಹಿಂದೆ ನಾನು ಬ್ಯಾಡ್ಮಿಂಟನ್ ಬ್ಯಾಟನ್ನೂ ಎತ್ತಿಯೇ ಗೊತ್ತಿದ್ದವಳಲ್ಲ. ಈಗ ಸರಾಗವಾಗಿ ಬ್ಯಾಡ್ಮಿಂಟನ್ ಚಾಂಪಿಯನ್‌ಗಳ ಜೊತೆಗೇ ಆಡಲು ಕಲಿತಿದ್ದೆ. ನಂತರ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಗೆದ್ದೆ. ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೂ ನನ್ನನ್ನು ಆಯ್ಕೆ ಮಾಡಲಾಯಿತು. 'ನಿನ್ನ ಟೈಮ್ ಬಂದೇ ಬರುತ್ತೆ ಅಂತ ನಂಗೆ ಗೊತ್ತಿತ್ತು!' ಎಂದು ನಕ್ಕರು. ನನ್ನ ತಾಯಿ ಆನಂದದಿಂದ ಅಳು ನಿಲ್ಲಿಸಲೇ ಇಲ್ಲ. ಹದಿನಾರನೇ ವಯಸ್ಸಿನಲ್ಲಿ ನಾನು ನಾಲ್ಕು ಪದಕಗಳನ್ನು ಗೆದ್ದಿದ್ದೆ.
ಮಕ್ಕಳಿಗೆ ಸೆಕ್ಸ್ ಪಾಠವೆಂದರೆ ಏನು ಹೇಳಿ ಕೊಡಬೇಕು, ಸ್ವಾತಿ ಹೇಳ್ತಾರೆ ಇಲ್ ಕೇಳಿ ...
ಇದೆಲ್ಲ ಆಗಿ ಎರಡು ವರ್ಷವಾಗಿದೆ. ನಾನು ಭಾರತವನ್ನು ಪ್ರತಿನಿಧಿಸುತ್ತಾ ಪ್ರಪಂಚವಿಡೀ ಸುತ್ತಾಡಿದ್ದೇನೆ. ಆದರೆ ನನ್ನ ಅತಿ ದೊಡ್ಡ ಆಸೆ ಎಂದರೆ ಪ್ಯಾರಾಲಿಂಪಿಕ್‌ನಲ್ಲಿ ಭಾಗವಹಿಸುವುದು! ನನ್ನ 18ರ ಈ ವಯಸ್ಸಿನಲ್ಲಿ ಭಾಗವಹಿಸಿದರೆ ನಾನು ಅತ್ಯಂತ ಕಿರಿಯ ಪ್ಯಾರಾಲಿಂಪಿಕ್ ಅಥ್ಲೀಟ್ ಎನಿಸಿಕೊಳ್ಳಬಲ್ಲೆ.
ಈಗ ಯಾರೂ ನನ್ನನ್ನು ಕನಿಕರದ ದೃಷ್ಟಿಯಿಂದ ನೋಡುವುದಿಲ್ಲ. ಬದಲು ಹೆಮ್ಮೆ, ಅಭಿಮಾನಪಡುತ್ತಾರೆ. ಅಂದು ನನ್ನ ಹಿಂದೆ ಮರುಕ ವ್ಯಕ್ತಪಡಿಸಿದ್ದ ಆಂಟಿಯರೇ ಇಂದು ನನ್ನ ಬಗ್ಗೆ ಅಭಿಮಾನದ ಮಾತಾಡುತ್ತಾರೆ. ಅದಕ್ಕೆ ಕಾರಣ ಗೌರವ್ ಸರ್, ನಾನು ಅದ್ಭುತ ಸೃಷ್ಟಿಸಬಲ್ಲೆ ಎಂದು ನನ್ನಲ್ಲಿ ನಂಬಿಕೆ ಇಟ್ಟದ್ದು. ಹಾಗೇ ನಾನು ಅವರಲ್ಲಿ ಮತ್ತು ನನ್ನಲ್ಲಿ ಇಟ್ಟ ಅಪಾರ ವಿಶ್ವಾಸ.
ಕೃಪೆ: ಹ್ಯೂಮನ್ಸ್ ಆಫ್ ಬಾಂಬೇ
ಸ್ಟ್ರಾಂಗ್ ಹೆಣ್ಣು ಮಗಳು ಎಂದಿಗೂ ಈ ತಪ್ಪುಗಳನ್ನು ಮಾಡೋದಿಲ್ಲ! ...