ನಿಮ್ಮ ಕಂಪನಿ ನಿಮ್ಮನ್ನು ಇಗ್ನೋರ್ ಮಾಡ್ತಿದೆ ಎನ್ನೋ ಲಕ್ಷಣಗಳಿವು!
ಕೆಲಸದ ಸ್ಥಳದಲ್ಲಿರುವ ಕೆಟ್ಟ ವಾತಾವರಣ ಸಿಬ್ಬಂದಿಯ ಮನಸ್ಥಿತಿ ಮೇಲೆ ಅಪಾರ ಪರಿಣಾಮ ಬೀರುತ್ತವೆ. ಒತ್ತಡದಿಂದ ಸೃಷ್ಟಿಯಾಗುವ ಸಮಸ್ಯೆ ಆರೋಗ್ಯವನ್ನು ಇನ್ನಿಲ್ಲದಂತೆ ಹದಗೆಡಿಸಬಹುದು. ಇದಕ್ಕೆಲ್ಲ ಮೂಲ ಕಾರಣ, ತನ್ನ ಉದ್ಯೋಗಿಗಳ ಬಗ್ಗೆ ಸಂಸ್ಥೆಯ ಅಗೌರವವೇ ಆಗಿರುತ್ತದೆ. ಇಂತಹ ಕಂಪೆನಿ ನಿಮ್ಮದಾಗಿದ್ದರೆ ಕೆಲಸಕ್ಕಿಂತ ಆರೋಗ್ಯ ಮುಖ್ಯ ಎನ್ನುವುದನ್ನು ಮರೆಯದಿರಿ.
ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸವೊಂದು ದಕ್ಕಿಬಿಟ್ಟರೆ ಜೀವನ ಸೆಟಲ್ ಎನ್ನುವ ಭಾವನೆ ಕೆಲ ಸಮಯದ ಹಿಂದಿತ್ತು. ಅಲ್ಲಿನ ವಾತಾವರಣ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುವ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ. ಆದರೆ, ಈಗ ಹಾಗಲ್ಲ. ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸ ದೊರೆತರೂ ಅಲ್ಲಿನ ವಾತಾವರಣ ಹೇಗಿದೆ ಎನ್ನುವುದನ್ನು ಪರಿಶೀಲನೆ ಮಾಡಿಯೇ ಸೇರಿಕೊಳ್ಳುವುದು ಹೊಸಯುಗದ ಯುವ ಜನರ ಅಭ್ಯಾಸ. ಇದಕ್ಕೆ ತಕ್ಕಂತೆ ಸಂಸ್ಥೆಗಳು ಸಹ ಸಾಕಷ್ಟು ಉತ್ತಮ ವಾತಾವರಣದಲ್ಲಿ ಕೆಲಸ ಮಾಡುವ ಗೌರವಯುತ ಸವಲತ್ತುಗಳನ್ನು ಸೃಷ್ಟಿಸಿವೆ. ಆದರೂ, ಕೆಲವು ಕಡೆ ಉದ್ಯೋಗಿಗಳನ್ನು ಅಗೌರವದಿಂದ ನೋಡುವ ಪರಿಸರವೂ ಇದ್ದೇ ಇರುತ್ತವೆ. ಗೌರವದಿಂದ ಜೀವಿಸಲು ಸಾಧ್ಯವಿಲ್ಲವಾದರೆ ಬದುಕು ಕೆಟ್ಟ ಕನಸಿನಂತೆ ಭಾಸವಾಗಬಹುದು. ಗೌರವ ಇಲ್ಲವಾದ ಕಡೆ ಕೆಲವೇ ಕ್ಷಣಗಳ ಕಾಲ ನಿಲ್ಲುವುದೂ ಕಷ್ಟವಾಗುತ್ತದೆ. ಕೆಲಸದ ಸ್ಥಳದಲ್ಲಿ ಉದ್ಯೋಗಿಗಳಿಗೆ ಮೌಲ್ಯ ನೀಡುವಂತಿದ್ದರೆ ಚೆನ್ನ. ಇಲ್ಲವಾದರೆ ಅದೇ ಒತ್ತಡದ ಮೂಲವಾಗುತ್ತದೆ. ಆ ಒತ್ತಡ ಯಾವ ಕಾರಣದಿಂದ ಮೂಡುತ್ತಿದೆ ಎನ್ನುವುದನ್ನು ಅರಿತುಕೊಳ್ಳಿ. ನಿಮ್ಮ ಸಂಸ್ಥೆ ನಿಮಗೆ ಮೌಲ್ಯ ನೀಡುತ್ತಿದೆಯೇ ಇಲ್ಲವೇ ಎನ್ನುವುದನ್ನು ಗುರುತಿಸಿಕೊಳ್ಳಿ. ಮೌಲ್ಯವಿಲ್ಲದ ಕಡೆ ಮತ್ತೆ ಮತ್ತೆ ಮುಳುಗುವ ಧೈರ್ಯ ಮಾತ್ರ ಮಾಡಲೇಬೇಡಿ.
• ನಿಮ್ಮ ಶ್ರಮ (Hard Work) ಗುರುತಿಸಲ್ಪಡೋದಿಲ್ಲ
ಯಾವುದೇ ಸಂಸ್ಥೆ (Corporation), ಕಚೇರಿಗಳಲ್ಲಿ (Office) ಎಲ್ಲ ಉದ್ಯೋಗಿಗಳೂ ಶ್ರಮಪಟ್ಟು ಕೆಲಸ ನಿರ್ವಹಿಸುತ್ತಾರೆ. ಅವರ ಶ್ರಮಕ್ಕೆ ಬೆಲೆ ನೀಡುವುದು ಸಂಸ್ಥೆಯ ಕೆಲಸ. ಯಾವುದಾದರೂ ಪ್ರಾಜೆಕ್ಟ್ (New Project) ಅಥವಾ ಹೊಸ ಆರಂಭಗಳು (Initiative) ನಿಮ್ಮ ವಿಚಾರದಿಂದ ಒಡಮೂಡಿದರೆ ಅದರ ಶ್ರೇಯಸ್ಸು (Credit) ನಿಮಗೇ ಸಲ್ಲಬೇಕು. ಇದನ್ನು ಹಲವು ವಿಧಗಳಲ್ಲಿ ವ್ಯಕ್ತಪಡಿಸಬಹುದು. ಆದರೆ, ಉತ್ತಮ ಉದ್ಯೋಗಿಗಳನ್ನು ಗುರುತಿಸಲು ಸಂಸ್ಥೆಗೆ ಆಸಕ್ತಿಯೇ ಇಲ್ಲವಾದರೆ ಕಷ್ಟ. ಅಧ್ಯಯನಗಳ ಪ್ರಕಾರ, ಜಾಗತಿಕವಾಗಿ ಪುರುಷರಿಗಿಂತ ಮಹಿಳೆಯರು ಈ ವಿಚಾರದಲ್ಲಿ ವಂಚನೆಗೆ ಒಳಗಾಗುತ್ತಿದ್ದಾರೆ.
Personality Tips: ವ್ಯಕ್ತಿತ್ವಕ್ಕೆ ತಕ್ಕಂತೆ ವೃತ್ತಿ ಆಯ್ಕೆ ಮಾಡಿಕೊಳ್ಳೋದು ಹೇಗೆ?
• ಚೌಕಾಸಿಗೆ (Negotiation) ಅವಕಾಶವಿಲ್ಲ
ಸಾಮಾನ್ಯವಾಗಿ ಉದ್ಯೋಗಿಗಳು ಏಕಕಾಲದಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ. ಅನಾರೋಗ್ಯ (Health Problem) ಸೇರಿದಂತೆ ಯಾವುದೋ ಖಾಸಗಿ ಕಾರಣದ ಹಿನ್ನೆಲೆಯಲ್ಲಿ ಜವಾಬ್ದಾರಿಗಳಿಂದ ಕೊಂಚ ಬಿಡುವು ಕೇಳಿದರೆ ಒಪ್ಪಿಕೊಳ್ಳದಿರುವುದು ಸಂಸ್ಥೆಯ ಮನೋಧರ್ಮವನ್ನು ತೋರಿಸುತ್ತದೆ. ಅಗತ್ಯವಿರುವಾಗ ಸಿಬ್ಬಂದಿಯ ಖಾಸಗಿ ಜೀವನಕ್ಕೂ (Private Life) ಬೆಂಬಲ ನೀಡುವ ಸಂಸ್ಥೆ ತನ್ನ ಉದ್ಯೋಗಿಗಳಿಗೆ (Employees) ಎಷ್ಟು ಮೌಲ್ಯ ನೀಡುತ್ತದೆ ಎನ್ನುವುದನ್ನು ವ್ಯಕ್ತಪಡಿಸುತ್ತದೆ. ಸಿಬ್ಬಂದಿ ಪರಸ್ಪರ ಮಾಡಿಕೊಳ್ಳುವ ಶಿಫ್ಟ್ ಹೊಂದಾಣಿಕೆ ಸೇರಿದಂತೆ ಹಲವು ಚಿಕ್ಕಪುಟ್ಟ ಬದಲಾವಣೆಗಳನ್ನು ಕಡ್ಡಾಯವಾಗಿ ನಿಷೇಧಿಸುವುದು ಕ್ರೂರತನವೆನಿಸುತ್ತದೆ.
• ಸ್ಯಾಲರಿ ಏರಿಕೆ (Salary Hike) ಇಲ್ಲವೇ ಇಲ್ಲ
ಒಂದೇ ಉದ್ಯೋಗದಲ್ಲಿ ಹಲವಾರು ವರ್ಷಗಳ ಕಾಲವಿದ್ದರೂ ನಿಮ್ಮ ಸಂಬಳದಲ್ಲಿ ಏರಿಕೆಯಾಗಿಲ್ಲ ಎನ್ನುವುದು ನಿಮಗೆ ಸಂಸ್ಥೆಯಲ್ಲಿ ಮೌಲ್ಯವಿಲ್ಲ ಎನ್ನುವುದನ್ನು ತೋರುತ್ತದೆ. ಸಂಬಳ ಹೆಚ್ಚಿಸಲು ಕೇಳಿನೋಡಿ. ಏರಿಕೆ ಮಾಡದಿದ್ದರೆ ಹೊಸ ಉದ್ಯೋಗದತ್ತ ಮುಖ ಮಾಡಲು ಅವಕಾಶವಾಗುತ್ತದೆ.
• ಕಡೆಗಣನೆ (Avoid)
ನಿಮ್ಮ ಬಾಸ್ ಯಾವತ್ತೂ ನಿಮ್ಮ ವಿಚಾರಗಳನ್ನು ಕಡೆಗಣಿಸುತ್ತಾರಾ? ಅಥವಾ ನಿಮ್ಮ ಎಲ್ಲ ಹೇಳಿಕೆಗಳನ್ನೂ ತಳ್ಳಿಹಾಕುತ್ತಾರಾ? ಅವರು ನಿಮಗೆ ಬೆಲೆ (Value) ನೀಡುತ್ತಿಲ್ಲ ಎನ್ನುವುದು ಇದರಿಂದ ತಿಳಿದುಬರುತ್ತದೆ. ಇದನ್ನು ಅತಿ ಸೂಕ್ಷ್ಮವಾಗಿ (Sensitive) ಸ್ವೀಕರಿಸಬೇಡಿ. ಆದರೆ, ಸಂಸ್ಥೆಯಲ್ಲಿ ಗುರುತಿಸಿಕೊಳ್ಳಲು ಇದರಿಂದ ಕಷ್ಟವಾಗುತ್ತದೆ. ನಿಮಗೆ ಪ್ರೊಮೋಷನ್ (Promotion) ಸಿಗದೇ ಇರಬಹುದು. ಇಂತಹ ಸಮಸ್ಯೆ ಎದುರಿಸುತ್ತಿದ್ದರೆ ಸನ್ನಿವೇಶ ನೋಡಿಕೊಂಡು ಮೇಲಧಿಕಾರಿಗಳ ಗಮನಕ್ಕೆ ತರುವುದು ಉತ್ತಮ.
ಆಧ್ಯಾತ್ಮವ ಅರಸಿ ಕೈ ತುಂಬಾ ಸಂಬಳ ನೀಡೋ ಐಟಿ ಜಾಬ್ ಬಿಟ್ಟು ಅರ್ಚಕ ವೃತ್ತಿಗಿಳಿದ ಟೆಕ್ಕಿ
• ಉದ್ಯೋಗಿಗಳ ಕ್ಷೇಮದ (Wellbeing) ಬಗ್ಗೆ ಅನಾದರ
ಕೆಲವು ಸಂಸ್ಥೆಗಳು ತಮ್ಮ ಉದ್ಯೋಗಿಗಳ ಕ್ಷೇಮದ ಬಗ್ಗೆ ಸಾಕಷ್ಟು ಗಮನ ಹರಿಸುತ್ತವೆ. ಅಗತ್ಯವಿರುವಾಗ ಮನೆಯಿಂದ ಕೆಲಸ ಮಾಡುವ ಅವಕಾಶ ನೀಡುತ್ತವೆ. ಯಾವಾಗಲಾದರೂ ತಜ್ಞರಿಂದ ವಿವಿಧ ವಿಚಾರಗಳ ಬಗ್ಗೆ ಆರೋಗ್ಯ, ಒತ್ತಡ ನಿವಾರಣೆ, ಕೌಶಲ ಹೆಚ್ಚಳದ ಬಗ್ಗೆ ಅರಿವು ಮೂಡಿಸಲು ಯತ್ನಿಸುತ್ತವೆ. ಉದ್ಯೋಗಿಗಳ ಕ್ಷೇಮದ ಬಗ್ಗೆ ಅನಾದರ ಹೊಂದಿರುವ ಕಂಪೆನಿಗಳು ಕೆಟ್ಟ ವಾತಾವರಣವನ್ನಷ್ಟೇ (Toxic Environment) ಹೊಂದಿರುತ್ತವೆ.