ರಾಜಧಾನಿ ಗೆಲ್ಲಲು ಬಿಜೆಪಿ, ಕಾಂಗ್ರೆಸ್‌ ಜಿದ್ದಾಜಿದ್ದಿ ಕದನ: ಬೆಂಗಳೂರಿನ 3 ಕಡೆ ಜೆಡಿಎಸ್‌ನಿಂದ ಪೈಪೋಟಿ

ರಾಜಧಾನಿ ಬೆಂಗಳೂರು ಮತ್ತು ಹೊರವಲಯ ಸೇರಿದಂತೆ ಒಟ್ಟು 32 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಗಳಿಸುವ ಪಕ್ಷಕ್ಕೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವುದು ಸಹಜವಾಗಿಯೇ ಸುಲಭವಾಗುತ್ತದೆ. 

To win Bengaluru BJP Congress are in a stubborn battle JDS is competing on 3 sides gvd

ಬೆಂಗಳೂರು (ಮೇ.07): ರಾಜಧಾನಿ ಬೆಂಗಳೂರು ಮತ್ತು ಹೊರವಲಯ ಸೇರಿದಂತೆ ಒಟ್ಟು 32 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಗಳಿಸುವ ಪಕ್ಷಕ್ಕೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವುದು ಸಹಜವಾಗಿಯೇ ಸುಲಭವಾಗುತ್ತದೆ. ಸದ್ಯದ ಬಲಾಬಲ ಪ್ರಕಾರ ಬಿಜೆಪಿ 15, ಕಾಂಗ್ರೆಸ್‌ 13 ಮತ್ತು ಜೆಡಿಎಸ್‌ 3 ಸ್ಥಾನಗಳನ್ನು ಹೊಂದಿದ್ದು, ಒಬ್ಬ ಪಕ್ಷೇತರರಿದ್ದಾರೆ. ಈ ಬಾರಿ ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮೂರ್ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್‌ ಕೂಡ ಪೈಪೋಟಿ ನೀಡುತ್ತಿರುವುದರಿಂದ ಅಲ್ಲಿ ತ್ರಿಕೋನ ಸ್ಪರ್ಧೆ ಕಾಣಬಹುದಾಗಿದೆ. ಹಾಲಿ ಇರುವ ಶಾಸಕರ ಪೈಕಿ ಮುಕ್ಕಾಲು ಭಾಗದಷ್ಟುಜನರು ಮತ್ತೆ ಗೆಲ್ಲುವ ಸಾಧ್ಯತೆ ಕಂಡು ಬರುತ್ತಿರುವುದು ಗಮನಾರ್ಹ. ಈ ಹಾಲಿ ಶಾಸಕರು ಪಕ್ಷ ಮೀರಿ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು, ಪ್ರಭಾವ ಹೊಂದಿರುವುದೂ ಇದಕ್ಕೆ ಪ್ರಮುಖ ಕಾರಣವಾಗಿರಬಹುದು.

ಯಶವಂತಪುರ
ಒಕ್ಕಲಿಗ ಅಭ್ಯರ್ಥಿಗಳ ತ್ರಿಕೋನ ಸ್ಪರ್ಧೆ:
ನಗರ ಹಾಗೂ ಅರೆ ಗ್ರಾಮೀಣ ಪ್ರದೇಶಗಳ ಸಂಗಮವಾಗಿರುವ ಕ್ಷೇತ್ರದಲ್ಲಿ ಪ್ರತೀ ಬಾರಿ ಒಕ್ಕಲಿಗ ಹುರಿಯಾಳುಗಳ ನಡುವೆಯೇ ಜಿದ್ದಾಜಿದ್ದಿ ಹೋರಾಟ ನಡೆಯುತ್ತದೆ. ಹಾಲಿ ಶಾಸಕ ಹಾಗೂ ಸಚಿವ ಎಸ್‌.ಟಿ.ಸೋಮಶೇಖರ್‌ ಬಿಜೆಪಿ ಅಭ್ಯರ್ಥಿ. 2013 ಮತ್ತು 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಸೋಮಶೇಖರ್‌, 2019ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡು ಭಾರೀ ಮತಗಳ ಅಂತರದಿಂದ ಜಯಿಸಿದ್ದರು. ಈ ಮೂರೂ ಬಾರಿ ಜೆಡಿಎಸ್‌ನಿಂದ ಪ್ರಬಲ ಪೈಪೋಟಿ ನೀಡಿದ್ದ ಜವರಾಯಿಗೌಡರು ಮತ್ತೆ ಅದೇ ಪಕ್ಷದಿಂದ 4ನೇ ಬಾರಿಗೆ ಅದೃಷ್ಟಪರೀಕ್ಷೆಗಿಳಿದಿದ್ದಾರೆ. ಕಾಂಗ್ರೆಸ್‌ನಿಂದ ಬಾಲರಾಜಗೌಡ ಅಭ್ಯರ್ಥಿ. ಮೂರೂ ಪಕ್ಷಗಳ ಒಕ್ಕಲಿಗ ಅಭ್ಯರ್ಥಿಗಳ ನಡುವೆ ತ್ರಿನೋನ ಸ್ಪರ್ಧೆ ಏರ್ಪಟ್ಟಿದೆ. ಒಕ್ಕಲಿಗ ಮತಗಳೇ ಹೆಚ್ಚಾಗಿರುವ ಕ್ಷೇತ್ರದಲ್ಲಿ 2ನೇ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಲಿಂಗಾಯತರು ಮತ್ತು ಪರಿಶಿಷ್ಟಮತಗಳೇ ನಿರ್ಣಾಯಕ. ಎಸ್‌.ಟಿ.ಸೋಮಶೇಖರ್‌ ಅವರು ಅಭಿವೃದ್ಧಿ ಕಾರ್ಯಗಳ ಮೇಲೆ ಮತ ಕೇಳುತ್ತಿದ್ದಾರೆ. ಜೆಡಿಎಸ್‌ನ ಜವರಾಯಿಗೌಡ ಸಾಂಪ್ರದಾಯಿಕವಾಗಿ ಒಕ್ಕಲಿಗರ ಮತಗಳ ಶ್ರೀರಕ್ಷೆಯ ಜತೆಗೆ ಮೂರು ಬಾರಿ ಸೋಲಿನ ಅನುಕಂಪದ ಅಲೆಯಲ್ಲಿ ಗೆದ್ದು ಬರುವ ಪ್ರಯತ್ನದಲ್ಲಿದ್ದಾರೆ. ಬಾಲರಾಜಗೌಡ ಆಡಳಿತ ವಿರೋಧಿ ಅಲೆ ಹಾಗೂ ತಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳನ್ನಿಟ್ಟುಕೊಂಡು ಮತಯಾಚಿಸುತ್ತಿದ್ದಾರೆ.

ಬೆಲೆಯೇರಿಕೆ, ಬಿಜೆಪಿ ಭ್ರಷ್ಟಾಚಾರವೇ ಎಲೆಕ್ಷನ್ ವಿಷಯ: ಸತೀಶ್‌ ಜಾರಕಿಹೊಳಿ

ಶಿವಾಜಿನಗರ
ಕಾಂಗ್ರೆಸ್‌ ಕೋಟೆಗೆ ಬಿಜೆಪಿ ಲಗ್ಗೆ ಇಡುತ್ತಾ?:
ಹಿಂದು, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿ ಎಲ್ಲ ಧರ್ಮೀಯರು ಹಾಗೂ ಕನ್ನಡ, ತೆಲುಗು, ತಮಿಳು ಸೇರಿದಂತೆ ಬಹು ಭಾಷಾ ಜನರ ಸಂಗಮ ಶಿವಾಜಿನಗರ ಕ್ಷೇತ್ರದಲ್ಲಿ ಪ್ರತೀ ಬಾರಿಯಂತೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಇದು ಕಾಂಗ್ರೆಸ್‌ನ ಭದ್ರಕೋಟೆ. ಕಾಂಗ್ರೆಸ್‌ನಿಂದ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದ ಆರ್‌.ರೋಷನ್‌ ಬೇಗ್‌ 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಕರಿಸಿದ್ದರಿಂದ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಯಿತು. ಉಪ ಚುನಾವಣೆಯಲ್ಲಿ ಎಐಸಿಸಿ ನಾಯಕ ರಾಹುಲ್‌ ಗಾಂಧಿ ಆಪ್ತ ರಿಜ್ವಾನ್‌ ಅರ್ಷದ್‌ಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ಕು ಗೆದ್ದು ಬಂದರು. ಈಗ ಅವರೇ ಕಾಂಗ್ರೆಸ್‌ ಅಭ್ಯರ್ಥಿ. ಎಚ್‌.ಚಂದ್ರು ಎಂಬ ಹೊಸಮುಖವನ್ನು ಬಿಜೆಪಿ ಕಣಕ್ಕಿಳಿಸಿದೆ. ಜೆಡಿಎಸ್‌ ಈ ಬಾರಿ ಆಟಕ್ಕೇ ಇಲ್ಲ. ಏಕೆಂದರೆ ಆ ಪಕ್ಷದ ಅಭ್ಯರ್ಥಿಯ ನಾಮಪತ್ರವೇ ತಿರಸ್ಕೃತವಾಗಿದೆ. ಇವರ ನಡುವೆ ಆಮ್‌ ಆದ್ಮಿ ಪಕ್ಷ ಕ್ಷೇತ್ರದಲ್ಲಿ ಪರಿಚಿತರಾದ ಪ್ರಕಾಶ್‌ ನೆಡುಗುಂಡಿ ಅವರನ್ನು ಅಭ್ಯರ್ಥಿಯಾಗಿಸಿದೆ. ಕಳೆದ 3 ವರ್ಷಗಳಲ್ಲಿ ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿದ್ದೇನೆ. ಇದೇ ನನಗೆ ಶ್ರೀರಕ್ಷೆಯಾಗಲಿದೆ ಎಂಬ ವಿಶ್ವಾಸದಲ್ಲಿ ರಿಜ್ವಾನ್‌ ಮತ ಯಾಚಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಚಂದ್ರು ನಾನು ಹಲವು ವರ್ಷಗಳಿಂದ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಕೋವಿಡ್‌ ಸಮಯದಲ್ಲಿ ನೆರವಾಗಿದ್ದೇನೆ. ಜನರು ನನ್ನನ್ನು ಗೆಲ್ಲಿಸಿದರೆ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಭರವಸೆ ನೀಡುತ್ತಿದ್ದಾರೆ.

ಪುಲಕೇಶಿನಗರ
ಇಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ:
ಹಾಲಿ ಶಾಸಕ ಹಾಗೂ ಬಿಎಸ್‌ಪಿ ಅಭ್ಯರ್ಥಿ ಅಖಂಡ ಶ್ರೀನಿವಾಸಮೂರ್ತಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಎ.ಸಿ.ಶ್ರೀನಿವಾಸ್‌ ನಡುವೆ ನೇರ ಹೋರಾಟ ಇದೆ. ಕಳೆದ ಚುನಾವಣೆಯಲ್ಲಿ 80 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿಲ್ಲ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರೇ ನಿರ್ಣಾಯಕ. ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡದಂತೆ ವಿರೋಧಿಸಿದ್ದೇ ಟಿಕೆಟ್‌ ಕೈತಪ್ಪಲು ಕಾರಣ ಎನ್ನಲಾಗಿದೆ. ಈ ಬಾರಿ ಎ.ಸಿ.ಶ್ರೀನಿವಾಸ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿದೆ. ಟಿಕೆಟ್‌ ಸಿಗದ ಕಾರಣ ಅಖಂಡ ಶ್ರೀನಿವಾಸಮೂರ್ತಿ ಸಡ್ಡು ಹೊಡೆದು ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಪ್ರಸನ್ನಕುಮಾರ್‌ ಬದಲಿಗೆ ವಿ.ಅನುರಾಧಾ ಅವರಿಗೆ ಜೆಡಿಎಸ್‌ ಟಿಕೆಟ್‌ ನೀಡಿದೆ. ಇಲ್ಲಿ ಕಾಂಗ್ರೆಸ್‌ನ ಎ.ಸಿ.ಶ್ರೀನಿವಾಸ್‌ ಮತ್ತು ಬಿಎಸ್‌ಪಿ ಅಭ್ಯರ್ಥಿ ಅಖಂಡ ಶ್ರೀನಿವಾಸ ನಡುವೆ ನೇರ ಹಣಾಹಣಿ ಇದೆ. ಇದೇ ಮೊದಲ ಬಾರಿಗೆ ಎಎಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಒಟ್ಟು 15 ಹುರಿಯಾಳುಗಳು ಚುನಾವಣಾ ಕಣದಲ್ಲಿ ಇದ್ದಾರೆ. ಮುಸ್ಲಿಂ ಮತ್ತು ಪರಿಶಿಷ್ಟಜಾತಿ ಮತ್ತು ಪಂಗಡದ ಮತದಾರರೇ ಇಲ್ಲಿ ನಿರ್ಣಾಯಕ.

ಸರ್ವಜ್ಞನಗರ
ಹ್ಯಾಟ್ರಿಕ್‌ ವೀರ ಜಾಜ್‌ರ್‍ಗೆ ಬಿಜೆಪಿ ಸವಾಲ್‌:
ಮೊದಲಿನಿಂದಲೂ ಕಾಂಗ್ರೆಸ್‌ ಭದ್ರಕೋಟೆ. ಹಾಲಿ ಶಾಸಕ ಕೆ.ಜೆ.ಜಾಜ್‌ರ್‍ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದು ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 2013ರ ಚುನಾವಣೆಯಲ್ಲಿ ಎದುರಾಳಿಯಾಗಿದ್ದ ಬಿಜೆಪಿಯ ಪದ್ಮನಾಭರೆಡ್ಡಿ ಈ ಬಾರಿಯೂ ಅಖಾಡದಲ್ಲಿದ್ದಾರೆ. 2018ರಲ್ಲಿ ಪದ್ಮನಾಭರೆಡ್ಡಿ ಬದಲಿಗೆ ಬಿಜೆಪಿ ಎಂ.ಎನ್‌.ರೆಡ್ಡಿ ಅವರನ್ನು ಕಣಕ್ಕೆ ಇಳಿಸಿದ್ದರೂ ಗೆಲುವು ದಕ್ಕಲಿಲ್ಲ. ಆದ್ದರಿಂದ ಈಗ ಮತ್ತೆ ಪದ್ಮನಾಭರೆಡ್ಡಿ ಅವರಿಗೆ ಟಿಕೆಟ್‌ ಕೊಟ್ಟಿದೆ. ಈ ಕ್ಷೇತ್ರದಲ್ಲಿ ಮುಸ್ಲಿಮರು, ಪರಿಶಿಷ್ಟಜಾತಿ ಮತ್ತು ಪಂಗಡ, ಕ್ರಿಶ್ಚಿಯನ್ನರು ಪ್ರಾಬಲ್ಯರಿದ್ದಾರೆ. ಅಲ್ಪಸಂಖ್ಯಾತ ಕ್ರಿಶ್ಚಿಯನ್‌ ಸಮುದಾಯದ ಜಾಜ್‌ರ್‍ ಅವರನ್ನು ನಾಲ್ಕನೇ ಬಾರಿ ಈ ಕ್ಷೇತ್ರದ ಮತದಾರರು ಕೈ ಹಿಡಿಯುತ್ತಾರೋ ಇಲ್ಲವೋ ಎಂಬುದು ಕುತೂಹಲ ಕೆರಳಿಸಿದೆ. ಬಿಜೆಪಿ ಅಭ್ಯರ್ಥಿ ಪದ್ಮನಾಭರೆಡ್ಡಿ ಈ ಬಾರಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಅಷ್ಟೇನೂ ಬಲ ಇಲ್ಲದ ಜೆಡಿಎಸ್‌ ಮೊಹಮ್ಮದ್‌ ಮುಸ್ತಫಾ ಅವರನ್ನು ಕಣಕ್ಕಿಳಿಸಿದ್ದು, ಅಲ್ಪಸಂಖ್ಯಾತರ ಪಡೆಯುವ ತಂತ್ರಗಾರಿಕೆ ಹೆಣೆದಿದೆ. ಈ ನಡುವೆ ಆಮ್‌ ಆದ್ಮಿ ಪಕ್ಷ ಕೂಡ ಪ್ರಬಲ ಪೈಪೋಟಿ ನೀಡುತ್ತಿದೆ. ಕ್ಷೇತ್ರದಲ್ಲಿ 15 ಸ್ಪರ್ಧಾಳುಗಳು ಕಣದಲ್ಲಿದ್ದಾರೆ. ಇಲ್ಲೇನಿದ್ದರೂ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಇದೆ.

ಶಾಂತಿನಗರ
ವಿರೋಧಿ ಅಲೆ ತಡೆಯುತ್ತಾರಾ ಹ್ಯಾರಿಸ್‌?:
ಕಾಂಗ್ರೆಸ್ಸಿನ ಭದ್ರ ಕೋಟೆಗಳಲ್ಲಿ ಒಂದಾಗಿದೆ. ಹಾಲಿ ಶಾಸಕ ಎನ್‌.ಎ.ಹ್ಯಾರಿಸ್‌ ನಾಲ್ಕನೇ ಬಾರಿಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದಾರೆ. ಬಿಜೆಪಿಯಿಂದ ಕೆ.ಶಿವಕುಮಾರ್‌, ಎಎಪಿಯಿಂದ ನಿವೃತ್ತ ಕೆಎಎಸ್‌ ಅಧಿಕಾರಿ ಕೆ.ಮಥಾಯ್‌, ಜೆಡಿಎಸ್‌ನಿಂದ ಎಚ್‌.ಮಂಜುನಾಥ್‌ ಸೇರಿದಂತೆ 10 ಹುರಿಯಾಳುಗಳು ಅಖಾಡದಲ್ಲಿದ್ದಾರೆ. ಕ್ಷೇತ್ರದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಮತದಾರರೇ ಹೆಚ್ಚಿದ್ದು ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯದ ಮತದಾರರು ಇಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರದ ಜನರಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ಹೀಗಿದ್ದರೂ ಈ ಬಾರಿಯೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಇದೆ. ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ತನಗೆ ಶ್ರೀರಕ್ಷೆ ಎಂದು ಪಕ್ಷದ ಅಭ್ಯರ್ಥಿ ಬಲವಾಗಿ ನಂಬಿದ್ದಾರೆ. ಈ ಬಾರಿ ಆಡಳಿತ ವಿರೋಧಿ ಅಲೆಯಿದೆ. ಆದರೆ ಕಳೆದ 15 ವರ್ಷಗಳಿಂದ ಕ್ಷೇತ್ರದ ಜನರ ನಾಡಿಮಿಡಿತ ಅರಿತಿದ್ದೇನೆ. ಅಭಿವೃದ್ಧಿ ಪರವಾದ ತನಗೆ ಮತದಾರರು ಮತ್ತೊಮ್ಮೆ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವನ್ನು ಕಾಂಗ್ರೆಸ್‌ ಅಭ್ಯರ್ಥಿ ಹೊಂದಿದ್ದಾರೆ.

ಬಸವನಗುಡಿ
ಕೋಟೆ ಉಳಿಸಿಕೊಳ್ಳಲು ಬಿಜೆಪಿ ಕಸರತ್ತು:
ಬಿಜೆಪಿಯ ಭದ್ರಕೋಟೆಯಾಗಿರುವ ಬಸವನಗುಡಿ ಕ್ಷೇತ್ರದಲ್ಲಿ ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ತುಸು ಹೆಚ್ಚಿನ ಹಣಾಹಣಿ ಏರ್ಪಟ್ಟಿದೆ. ಕಳೆದ ಮೂರು ವಿಧಾನಸಭೆ ಚುನಾವಣೆಯಿಂದ ಸತತವಾಗಿ ಕಮಲ ಅರಳಿರುವ ಈ ಕ್ಷೇತ್ರವನ್ನು ನಾಲ್ಕನೆಯ ಬಾರಿಗೆ ತನ್ನ ಮುಡಿಗೇರಿಸಲು ಬಿಜೆಪಿ ಸ್ವಲ್ಪ ಜಾಸ್ತಿಯೇ ಬೆವರು ಹರಿಸಬೇಕಾಗಿದೆ. ಆಡಳಿತಾರೂಢ ಬಿಜೆಪಿಯಿಂದ ಎಲ್‌.ಎ. ರವಿ ಸುಬ್ರಹ್ಮಣ್ಯ, ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್‌ ಹಾಗೂ ಜೆಡಿಎಸ್‌ನಿಂದ ಅರಮನೆ ಶಂಕರ್‌, ಆಮ್‌ ಆದ್ಮಿ ಪಾರ್ಟಿಯಿಂದ ಸತ್ಯಲಕ್ಷ್ಮೇರಾವ್‌, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಎಲ್‌. ಜೀವನ್‌ ಸೇರಿದಂತೆ ಒಟ್ಟು 12 ಜನ ಕಣದಲ್ಲಿದ್ದಾರೆ. 1994ರಿಂದ ಬಿಜೆಪಿ ಭದ್ರಕೋಟೆಯಾಗಿರುವ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಹರಸಾಹಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಭಾವ ಸಾಕಷ್ಟುಇದೆ. ಹೀಗಾಗಿ ಅರಮನೆ ಶಂಕರ್‌ ಸಹ ಸಾಕಷ್ಟುಪೈಪೋಟಿ ಕೊಡುತ್ತಿದ್ದಾರೆ. ಇಡೀ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಮತಗಳೇ ನಿರ್ಣಾಯಕ. ಇವರನ್ನು ಹೊರತುಪಡಿಸಿದರೆ ಒಕ್ಕಲಿಗರು ಹೆಚ್ಚಿದ್ದಾರೆ. ಉಳಿದ ಸಮುದಾಯಗಳು ಚುನಾವಣೆಯ ಮೇಲೆ ಪರಿಣಾಮ ಬೀರುವಷ್ಟುಇಲ್ಲ. ಬಿಜೆಪಿಯನ್ನು ಪ್ರಬಲವಾಗಿ ಬೆಂಬಲಿಸುತ್ತಾ ಬಂದಿರುವ ಮತದಾರರು ಅಭ್ಯರ್ಥಿಗಿಂತ ಹೆಚ್ಚಾಗಿ ಪಕ್ಷದ ಮುಖ ನೋಡಿ ಮತ ಹಾಕುವುದು ಈ ಕ್ಷೇತ್ರದ ವಿಶೇಷ.

ಚಿಕ್ಕಪೇಟೆ
ಬಿಜೆಪಿ, ಕಾಂಗ್ರೆಸ್‌ ಮಧ್ಯೆ ಜಿದ್ದಾಜಿದ್ದಿ:
ಈ ಹಿಂದಿನ ಚುನಾವಣೆಯಂತೆ ಬಿಜೆಪಿಯ ಉದಯ್‌ ಗರುಡಾಚಾರ್‌ ಹಾಗೂ ಕಾಂಗ್ರೆಸ್‌ನ ಆರ್‌.ವಿ. ದೇವರಾಜ್‌ ನಡುವೆ ಈ ಬಾರಿಯೂ ನೇರ ಸ್ಪರ್ಧೆ ಕಂಡು ಬಂದಿದೆ. ಜೆಡಿಎಸ್‌ನಿಂದ ಇಮ್ರಾನ್‌ ಪಾಷಾ, ಆಮ್‌ ಆದ್ಮಿ ಪಾರ್ಟಿಯಿಂದ ಬ್ರಿಜೇಶ್‌ ಕಾಳಪ್ಪ, ಬಿಎಸ್‌ಪಿಯಿಂದ ಅರುಣ್‌ ಪ್ರಸಾದ್‌, ಕಾಂಗ್ರೆಸ್‌ ಟಿಕೆಟ್‌ ಸಿಗದೇ ಪಕ್ಷೇತರರಾಗಿ ಸ್ಪರ್ಧಿಸಿರುವ ಕೆಜಿಎಫ್‌ ಬಾಬು ಅಲಿಯಾಸ್‌ ಯೂಸುಫ್‌ ಶರೀಫ್‌ ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2018ರ ಚುನಾವಣೆಯಲ್ಲಿ ಉದಯ್‌ ಗರುಡಾಚಾರ್‌ ಕೇವಲ ಏಳೆಂಟು ಸಾವಿರ ಮತಗಳ ಅಂತರದಿಂದ ಆರ್‌.ವಿ. ದೇವರಾಜ್‌ ವಿರುದ್ಧ ಜಯ ಗಳಿಸಿದ್ದರು, ಹೀಗಾಗಿ ಕಾಂಗ್ರೆಸ್‌ ದೇವರಾಜ್‌ ಅವರನ್ನೇ ಮತ್ತೊಮ್ಮೆ ಕಣಕ್ಕಿಳಿಸುವ ಮೂಲಕ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಸಾಕಷ್ಟುಬೆವರು ಹರಿಸುತ್ತಿದೆ. ಉದಯ್‌ ಗರುಡಾಚಾರ್‌ ಅವರು ತಮ್ಮ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆಜಿಎಫ್‌ ಬಾಬು ಎಲ್ಲ ಸಮುದಾಯದವರ ಜೊತೆ ತಮ್ಮ ಉದಾರ ಕೊಡುಗೆಗಳಿಂದ ಹತ್ತಿರವಾಗಿದ್ದಾರೆ. ಆದರೆ ಎಷ್ಟರ ಮಟ್ಟಿಗೆ ಇವು ಮತವಾಗಿ ಪರಿವರ್ತನೆಯಾಗುತ್ತದೆ ಎಂಬುದು ಮಾತ್ರ ಫಲಿತಾಂಶ ಬಂದ ಮೇಲೆ ಗೊತ್ತಾಗಬೇಕು. ಮುಸ್ಲಿಮರ ಮತ ಸುಮಾರು 60 ಸಾವಿರಕ್ಕಿಂತ ಹೆಚ್ಚು ಇದೆ. ಪರಿಶಿಷ್ಟರು, ಲಿಂಗಾಯತ ಸಮುದಾಯ ಹಾಗೂ ತಮಿಳು ಭಾಷಿಕರು ಸಾಕಷ್ಟುಇದ್ದಾರೆ.

ಬಿಟಿಎಂ ಲೇಔಟ್‌
ರಾಮಲಿಂಗಾರೆಡ್ಡಿಗೆ ಬಿಜೆಪಿ ಟಕ್ಕರ್‌:
ಬೆಂಗಳೂರಿನ ಹಿರಿಯ ರಾಜಕಾರಣಿ ರಾಮಲಿಂಗಾರೆಡ್ಡಿ ಪ್ರತಿನಿಧಿಸುವ ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿಯಿದೆ. ಒಕ್ಕಲಿಗ, ರೆಡ್ಡಿ ಸಮುದಾಯ ಹಾಗೂ ವಲಸಿಗ ಮತದಾರರೇ ಹೆಚ್ಚಿರುವ ಬಿಟಿಎಂ ಲೇಔಟ್‌ನಲ್ಲಿ ರಾಮಲಿಂಗಾರೆಡ್ಡಿ ನಾಲ್ಕನೇ ಬಾರಿಗೆ ಗೆಲುವು ಸಾಧಿಸಲು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಶ್ರೀಧರ್‌ ರೆಡ್ಡಿ, ಜೆಡಿಎಸ್‌ನಿಂದ ಎಂ. ವೆಂಕಟೇಶ್‌ ಅಭ್ಯರ್ಥಿ. ಕ್ಷೇತ್ರದಲ್ಲಿ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ. ಬಿಜೆಪಿಯ ಶ್ರೀಧರ್‌ ರೆಡ್ಡಿ ಅವರು ರಾಮಲಿಂಗಾ ರೆಡ್ಡಿ ಅವರಿಗೆ ಪ್ರಬಲ ಎದುರಾಳಿಯಾಗಿದ್ದಾರೆ. ರಾಷ್ಟ್ರೀಯ ನಾಯಕ ಅಮಿತ್‌ ಶಾ ರೋಡ್‌ ಶೋ ಕೂಡ ನಡೆಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ರಾಮಲಿಂಗಾ ರೆಡ್ಡಿ ಅವರಿಗೆ ಉತ್ತಮ ವಾತಾವರಣವಿದೆ ಎಂಬ ಮಾತುಗಳಿವೆ. ಆದರೂ, ಬಿಜೆಪಿ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುವತ್ತ ಕಾರ್ಯಪ್ರವೃತ್ತವಾಗಿದೆ. ಅದಕ್ಕಾಗಿಯೇ ಈವರೆಗೆ ಇದ್ದಂತಹ ಹೊಂದಾಣಿಕೆ ರಾಜಕಾರಣಕ್ಕೆ ಬ್ರೇಕ್‌ ಹಾಕಿರುವ ಬಿಜೆಪಿ, ರಾಮಲಿಂಗಾರೆಡ್ಡಿ ವಿರುದ್ಧ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಸ್ಥಳೀಯ ಮುಖಂಡರು, ಮಾಜಿ ಕಾರ್ಪೋರೇಟರ್‌ಗಳಿಗೆ ಸೂಚಿಸಿದೆ. ಇದಕ್ಕೆ ಪ್ರತಿಯಾಗಿ ರಾಮಲಿಂಗಾರೆಡ್ಡಿ ಕೂಡ ಬೆಂಬಲಿಗರೊಂದಿಗೆ ಸೇರಿ ಹಗಲಿರುಳು ಪ್ರಚಾರದಲ್ಲಿ ತೊಡಗಿದ್ದಾರೆ.

ಹೆಬ್ಬಾಳ
ಹೆಬ್ಬಾಳ ವಿಧಾನಸಭಾ ಕ್ಷೇತ್ರ:
ಕಾಂಗ್ರೆಸ್‌ ಶಾಸಕ ಬಿ.ಎಸ್‌. ಸುರೇಶ್‌ (ಬೈರತಿ ಸುರೇಶ್‌) ಎದುರಾಳಿಯಾಗಿ ಬಿಜೆಪಿಯ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಪುತ್ರ ಕೆ.ಎಸ್‌. ಕಟ್ಟಾಜಗದೀಶ್‌ ಕಣದಲ್ಲಿದ್ದಾರೆ. ಅಲ್ಪ ಸಂಖ್ಯಾತ ಮತಗಳು ಗಮನಾರ್ಹ ಪ್ರಮಾಣದಲ್ಲಿರುವ ಕ್ಷೇತ್ರದಲ್ಲಿ ಜೆಡಿಎಸ್‌ ಸಯ್ಯದ್‌ ಮೊಹಿದ್‌ ಅಲ್ತಾಫ್‌ ಅವರನ್ನು ಕಣಕ್ಕಿಳಿಸಿದೆ. ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿರುವ ಕ್ಷೇತ್ರದಲ್ಲಿ ಜೆಡಿಎಸ್‌ ಉಪಸ್ಥಿತಿ ಹೊರತಾಗಿಯೂ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಗೆಲುವಿಗಾಗಿ ತೀವ್ರ ಹಣಾಹಣಿಯಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ತಂದ 340 ಕೋಟಿ ರು. ಅನುದಾನ ಮತ್ತು ಕೋಟ್ಯಂತರ ರು. ಸ್ವಂತ ಹಣ ವ್ಯಯಿಸಿ ಕಳೆದ ಐದು ವರ್ಷಗಳಲ್ಲಿ ಮಾಡಿದ ಕಾಮಗಾರಿಗಳನ್ನು ಬಿಂಬಿಸುವ ಹಾಗೂ 5 ವರ್ಷದ ಮುನ್ನೋಟವನ್ನೂ ನೀಡುವ ಮೂಲಕ ಅಬ್ಬರದ ಪ್ರಚಾರದಲ್ಲಿ ಸುರೇಶ್‌ ತೊಡಗಿದ್ದಾರೆ. ಬಿಜೆಪಿ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು 2018ರಲ್ಲಿ ತೆಕ್ಕೆಗೆ ತೆಗೆದುಕೊಂಡ ಸುರೇಶ್‌ ದಾಖಲೆ ಮತಗಳಿಂದ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಬಿಜೆಪಿ ಸುರೇಶ್‌ ಗೆಲುವಿಗೆ ಬ್ರೇಕ್‌ ಹಾಕಿ ಮತ್ತೆ ಕ್ಷೇತ್ರ ವಶಕ್ಕೆ ಪಡೆಯುವ ಸಾಹಸಕ್ಕೆ ಕೈ ಹಾಕಿದೆ. ಮೇಲ್ನೋಟಕ್ಕೆ ಸುರೇಶ್‌ ಪರವಾಗಿರುವ ಈ ಕ್ಷೇತ್ರದಲ್ಲಿ ಆರ್‌ಎಸ್‌ಎಸ್‌ ಸಕ್ರಿಯವಾಗಿರುವುದರಿಂದ ಮತ್ತು ಜೆಡಿಎಸ್‌ ಮಾಡುವ ಮತ ವಿಭಜನೆ ಫಲಿತಾಂಶದ ಮೇಲೆ ಪರಿಣಾಮ ಬೀರುವುದೇ ಎಂಬ ಕುತೂಹಲವಿದೆ.

ದಾಸರಹಳ್ಳಿ
ಕಾಂಗ್ರೆಸ್ಸಿಗೆ ಖಾತೆ ತೆರೆಯುವ ತವಕ:
ಕಾರ್ಮಿಕ ವರ್ಗವೇ ಹೆಚ್ಚಾಗಿರುವ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಉಂಟಾಗಿದೆ. ಹಾಲಿ ಶಾಸಕ ಆರ್‌. ಮಂಜುನಾಥ್‌ ಅವರು ಮತ್ತೊಮ್ಮೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಮಾಜಿ ಶಾಸಕ ಎಸ್‌. ಮುನಿರಾಜು ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ತೀವ್ರ ಪೈಪೋಟಿ ಬಳಿಕ ಟಿಕೆಟ್‌ ಗಿಟ್ಟಿಸಿದ ಕಾಂಗ್ರೆಸ್‌ ಅಭ್ಯರ್ಥಿ ಜಿ. ಧನಂಜಯ ಅಬ್ಬರದ ಪ್ರಚಾರದ ಮೂಲಕ ಗಮನ ಸೆಳೆದಿದ್ದಾರೆ. ಹೀಗಾಗಿ ಕಳೆದ ಬಾರಿ ಬಿಜೆಪಿ ಹಾಗೂ ಜೆಡಿಎಸ್‌ನ ನಡುವೆ ನೇರ ಪೈಪೋಟಿ ಉಂಟಾಗಿದ್ದ ಕ್ಷೇತ್ರ ಈ ಬಾರಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. 2008 ರಿಂದ ಎರಡು ಬಾರಿ ಬಿಜೆಪಿ, ಒಂದು ಬಾರಿ ಜೆಡಿಎಸ್‌ ಗೆದ್ದಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ ಇನ್ನೂ ಖಾತೆ ತೆರೆದಿಲ್ಲ. ಆಮ್‌ ಆದ್ಮಿ ಪಕ್ಷದ ಕೀರ್ತನ್‌ಕುಮಾರ್‌ ಸೇರಿದಂತೆ 17 ಮಂದಿ ಕಣದಲ್ಲಿದ್ದರೂ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ತೀವ್ರ ಹಣಾಹಣಿಗಿಳಿದಿವೆ. ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಲು ಸಾಕಷ್ಟುಶ್ರಮಿಸಿದ್ದು, ನ್ಯಾಯಾಲಯಕ್ಕೆ ಹೋಗಿ ಅನುದಾನಕ್ಕೆ ಹೋರಾಡಿದ್ದೇನೆ. ಅಭಿವೃದ್ಧಿ ದೃಷ್ಟಿಯಿಂದ ಜನ ನನ್ನ ಕೈ ಹಿಡಿಯಲಿದ್ದಾರೆ ಎಂದು ಜೆಡಿಎಸ್‌ ಅಭ್ಯರ್ಥಿ ವಿಶ್ವಾಸದಲ್ಲಿದ್ದರೆ, 10 ವರ್ಷದ ಅಭಿವೃದ್ಧಿ ನೋಡಿ ಜನ ಮತ ಹಾಕಲಿದ್ದಾರೆ ಎಂಬ ನಂಬಿಕೆಯಲ್ಲಿ ಮುನಿರಾಜು ಇದ್ದಾರೆ. ಇವರಿಬ್ಬರ ನಡುವೆ ಜಿ. ಧನಂಜಯ ಕಾಂಗ್ರೆಸ್‌ಗೆ ಕ್ಷೇತ್ರದಲ್ಲಿ ಮೊದಲ ಗೆಲುವು ತಂದುಕೊಡುವ ಇರಾದೆ ವ್ಯಕ್ತಪಡಿಸಿದ್ದಾರೆ.

ರಾಜರಾಜೇಶ್ವರಿ ನಗರ
ಮುನಿರತ್ನ, ಕುಸುಮಾ ರೋಚಕ ಫೈಟ್‌:
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಎಚ್‌. ಕುಸುಮಾ ನಡುವೆ ತೀವ್ರ ಪೈಪೋಟಿ ಸೃಷ್ಟಿಯಾಗಿದೆ. ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ವಿ. ನಾರಾಯಣಸ್ವಾಮಿ ಸ್ಪರ್ಧಿಸಿದ್ದು, ಒಟ್ಟು 14 ಮಂದಿ ಕಣದಲ್ಲಿದ್ದಾರೆ. ಕಳೆದ ಬಾರಿಯ ಉಪ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ ಭಾರೀ ಅಂತರದಿಂದ ಸೋತಿದ್ದ ಕುಸುಮಾ ಸತತವಾಗಿ ಕ್ಷೇತ್ರದಲ್ಲಿ ಜನ ಸಂಪರ್ಕ ಕಾಯ್ದುಕೊಂಡಿದ್ದಾರೆ. ಸತತ ಒಡನಾಟದ ಜತೆಗೆ ಸಂಸದ ಡಿ.ಕೆ. ಸುರೇಶ್‌ ಬೆಂಬಲದೊಂದಿಗೆ ಒಕ್ಕಲಿಗ ಸಮುದಾಯವನ್ನು ಒಟ್ಟುಗೂಡಿಸಲು ಯಶಸ್ವಿಯಾಗಿದ್ದಾರೆ. ಜತೆಗೆ ಬಿಜೆಪಿಯ ಇಬ್ಬರು ಮಾಜಿ ಸದಸ್ಯರನ್ನೂ ಪಕ್ಷಕ್ಕೆ ಎಳೆದುಕೊಂಡಿದ್ದಾರೆ. ಇನ್ನು ಮುನಿರತ್ನ ಅವರು ಮೂರು ಬಾರಿ ಶಾಸಕರಾಗಿ ನಡೆಸಿರುವ ಅಭಿವೃದ್ಧಿ ಕಾಮಗಾರಿಗಳು, ಕೊರೋನಾ ವೇಳೆ ಜನರ ಕಷ್ಟಗಳಿಗೆ ಸ್ಪಂದಿಸಿರುವುದನ್ನು ಮುಂದಿಟ್ಟುಕೊಂಡು ಮತ ಬೇಟೆಯಲ್ಲಿ ತೊಡಗಿದ್ದಾರೆ. ಇದರ ನಡುವೆ ಮತದಾರರ ಪಟ್ಟಿಹಗರಣ, ಟೆಂಡರ್‌ ಹಗರಣ ಸೇರಿದಂತೆ ವಿವಿಧ ವಿಚಾರಗಳಿಗೆ ಇಬ್ಬರೂ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಪದೇ ಪದೇ ಗಲಾಟೆಗಳು ಮರುಕಳಿಸುತ್ತಲೇ ಇವೆ. ಹೀಗಾಗಿ ರೋಚಕವಾಗಿ ಬದಲಾಗಿರುವ ಕಣದಲ್ಲಿ ಕಾಂಗ್ರೆಸ್‌ ಅಥವಾ ಬಿಜೆಪಿ ಇಬ್ಬರಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ತೀವ್ರ ಕುತೂಹಲ ಹುಟ್ಟು ಹಾಕಿದೆ.

ಚಾಮರಾಜಪೇಟೆ
ಅನುಭವಿ ಜಮೀರ್‌, ಹೊಸಮುಖ ಭಾಸ್ಕರ್‌:
ಬೆಂಗಳೂರಿನಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಚಾಮರಾಜಪೇಟೆಯೂ ಒಂದು. ಇಲ್ಲಿ ಬಿಜೆಪಿಯಿಂದ ಮಾಜಿ ಪೊಲೀಸ್‌ ಅಧಿಕಾರಿ ಭಾಸ್ಕರ್‌ ರಾವ್‌, ಕಾಂಗ್ರೆಸ್‌ನಿಂದ ಹಾಲಿ ಶಾಸಕ ಜಮೀರ್‌ ಅಹಮದ್‌, ಜೆಡಿಎಸ್‌ನಿಂದ ಗೋವಿಂದ ರಾಜು, ಆಮ್‌ ಆದ್ಮಿ ಪಕ್ಷದಿಂದ ಜಗದೀಶ್‌ ಚಂದ್ರ ಸಿ. ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ. ನಗರ ಪೊಲೀಸ್‌ ಆಯುಕ್ತರಾಗಿದ್ದ ಭಾಸ್ಕರ್‌ ರಾವ್‌, ಸ್ವಯಂ ನಿವೃತ್ತಿ ಪಡೆದು ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿ ರಾಜ್ಯ ಉಪಾಧ್ಯಕ್ಷರಾಗಿದ್ದರು. ಬದಲಾದ ಸನ್ನಿವೇಶದಲ್ಲಿ ಎಎಪಿ ತ್ಯಜಿಸಿ ಕಮಲ ಹಿಡಿದ ಅವರು ಇದೀಗ ‘ನುರಿತ’ ರಾಜಕಾರಣಿ ಜಮೀರ್‌ ಅಹಮದ್‌ ಅವರ ವಿರುದ್ಧ ‘ಹೋರಾಟ’ ನಡೆಸಬೇಕಿದೆ. ಕಳೆದ ಬಾರಿ ಬಿಜೆಪಿಯಿಂದ ಎಂ.ಲಕ್ಷಿ ್ಮೕನಾರಾಯಣ ಅವರನ್ನು ಕಣಕ್ಕಿಳಿಸಿದ್ದು ರನ್ನರ್‌ ಅಪ್‌ ಆಗಿದ್ದರು. ಈ ಬಾರಿ ಭಾಸ್ಕರ್‌ ರಾವ್‌ ಪಕ್ಷ ಸೇರ್ಪಡೆಗೊಂಡಿದ್ದರಿಂದ ಬಿಜೆಪಿ ಟಿಕೆಟ್‌ ನೀಡಲಾಗಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಕ್ಷೇತ್ರದಲ್ಲಿ 2008 ಮತ್ತು 2013 ರ ವಿಧಾನಸಭಾ ಚುನಾವಣೆಯಲ್ಲಿ ಜಮೀರ್‌ ಅಹಮದ್‌ ಖಾನ್‌ ಜೆಡಿಎಸ್‌ನಿಂದ ಸ್ಪರ್ಧಿಸಿ ಜಯಗಳಿಸಿದ್ದು, 2018ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಸತತ ನಾಲ್ಕನೇ ಜಯದ ಕನವರಿಕೆಯಲ್ಲಿರುವ ಜಮೀರ್‌ ಅಹಮದ್‌ ಅವರಿಗೆ ಭಾಸ್ಕರ್‌ ರಾವ್‌ ಅಡ್ಡಗಾಲು ಹಾಕುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಗಾಂಧಿನಗರ
ಡಬಲ್‌ ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ದಿನೇಶ್‌:
ಕಾಂಗ್ರೆಸ್‌ ಪ್ರಾಬಲ್ಯವಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ದಿನೇಶ್‌ ಗುಂಡೂರಾವ್‌ ಬರೋಬ್ಬರಿ 6ನೇ ಬಾರಿಗೆ ಸತತ ಜಯದ ನಿರೀಕ್ಷೆಯಲ್ಲಿದ್ದಾರೆ. 1999ರಿಂದಲೂ ಕಾಂಗ್ರೆಸ್‌ನಿಂದ ದಿನೇಶ್‌ ಗುಂಡೂರಾವ್‌ ಸತತವಾಗಿ ಜಯ ಗಳಿಸುತ್ತಾ ಬಂದಿದ್ದು, ಈ ಬಾರಿ ಶತಾಯಗತಾಯ ಇವರನ್ನು ಕಟ್ಟಿಹಾಕಲೇಬೇಕೆಂದು ಬಿಜೆಪಿ ಪ್ರಯತ್ನಿಸುತ್ತಿದೆ. ಸುಭಾಷ್‌ನಗರ ಮತ್ತು ಓಕಳೀಪುರಂನಲ್ಲಿ ಕೆಳವರ್ಗದ ಮತದಾರರ ಸಂಖ್ಯೆ ಹೆಚ್ಚಿದೆ. ಮತ್ತೊಂದೆಡೆ, ಚಲನಚಿತ್ರ ನಿರ್ಮಾಣ ಸಂಸ್ಥೆಗಳು, ವಾಣಿಜ್ಯ ಚಟುವಟಿಕೆಗಳ ಕ್ಷೇತ್ರ ಇದಾಗಿದೆ. ಬಿಜೆಪಿಯಿಂದ ಮಾಜಿ ಸಚಿವ ರಾಮಚಂದ್ರಗೌಡ ಅವರ ಪುತ್ರ ಸಪ್ತಗಿರಿಗೌಡ ಅವರನ್ನು ಕಣಕ್ಕಿಳಿಸಲಾಗಿದೆ. ಕಳೆದ ಬಾರಿಯೂ ಸ್ಪರ್ಧಿಸಿದ್ದ ಸಪ್ತಗಿರಿಗೌಡ 10 ಸಾವಿರಕ್ಕೂ ಅಧಿಕ ಮತಗಳಿಂದ ದಿನೇಶ್‌ ಗುಂಡೂರಾವ್‌ ವಿರುದ್ಧ ಪರಾಭವಗೊಂಡಿದ್ದರು. ಆದ್ದರಿಂದ ಹೇಗಾದರೂ ಮಾಡಿ ಪಕ್ಷದ ಅಭ್ಯರ್ಥಿಯನ್ನು ದಡ ಸೇರಿಸಲೇಬೇಕು ಎಂದು ಬಿಜೆಪಿಯಿಂದ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೃಷ್ಣಯ್ಯ ಶೆಟ್ಟಿಟಿಕೆಟ್‌ ಸಿಗದಿದ್ದರಿಂದ ಬಂಡಾಯವೆದ್ದು ಕಣಕ್ಕಿಳಿದಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ ಗೋಪಿನಾಥ್‌, ಜೆಡಿಎಸ್‌ನಿಂದ ವಿ.ನಾರಾಯಣಸ್ವಾಮಿ ಕಣದಲ್ಲಿದ್ದಾರೆ.

ಬ್ಯಾಟರಾಯನಪುರ
ಕೃಷ್ಣ ಬೈರೇಗೌಡಗೆ ಬಿಜೆಪಿ ಸಡ್ಡು:
ಬೆಂಗಳೂರಿನ ಅತಿದೊಡ್ಡ ಕ್ಷೇತ್ರ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮದ ಸ್ವರ್ಗ ಎಂಬ ಹೆಗ್ಗಳಿಕೆ ಇರುವ ‘ಬ್ಯಾಟರಾಯನಪುರ’ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳಲ್ಲೊಂದು. ಹಾಗಾಗಿ ಇಲ್ಲಿ ಪ್ರತೀ ಬಾರಿಯೂ ಒಕ್ಕಲಿಗ ಅಭ್ಯರ್ಥಿಗಳ ನಡುವೆಯೇ ಗೆಲುವಿಗಾಗಿ ಹೋರಾಟ ನಡೆಯುತ್ತದೆ. ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆಯೇ ಪ್ರಬಲ ಪೈಪೋಟಿ ನಡೆಯಲಿದೆ. ಜೆಡಿಎಸ್‌ ಕೂಡ ಇಬ್ಬರಿಗೂ ಪೈಪೋಟಿ ನೀಡಿ ಗೆದ್ದು ಬರುವ ತವಕದಲ್ಲಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕೃಷ್ಣ ಬೈರೇಗೌಡ ಗೆಲುವಿನ ನಾಗಾಲೋಟದ ಹುಮ್ಮಸ್ಸಿನಲ್ಲಿದ್ದಾರೆ. ಕಾಂಗ್ರೆಸ್‌ ಕಟ್ಟಿಹಾಕಲು ಬಿಜೆಪಿ ಮತ್ತು ಜೆಡಿಎಸ್‌ ಎರಡೂ ಪಕ್ಷಗಳು ಹೊಸ ಮುಖಗಳನ್ನು ಈ ಬಾರಿ ಕಣಕ್ಕಿಳಿಸಿವೆ. 2018ರಲ್ಲೇ ಕಾಂಗ್ರೆಸ್‌ ಗೆಲುವಿನ ಓಟಕ್ಕೆ ತಡೆ ನೀಡಲು ಭಾರೀ ಪೈಪೋಟಿ ನೀಡಿದ್ದ ಬಿಜೆಪಿ ಈ ಬಾರಿ ಕವಿಕಾ ಪ್ರಧಾನ ಕಾರ್ಯದರ್ಶಿಯಾಗಿದ್ದ ತಮ್ಮೇಶ್‌ಗೌಡ ಅವರನ್ನು ಕಣಕ್ಕಿಳಿಸಿದೆ. ಅವರು ತಮ್ಮ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಜೆಡಿಎಸ್‌ ಪಿ.ನಾಗರಾಜ್‌ ಗೌಡ ಅವರಿಗೆ ಟಿಕೆಟ್‌ ನೀಡಿದ್ದು ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಮೂರೂ ಪಕ್ಷಗಳ ನಡುವೆ ಹಂಚಿಹೋಗುತ್ತವೆ. ಒಕ್ಕಲಿಗರ ನಂತರದ ಸ್ಥಾನದಲ್ಲಿರುವ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ಹಾಗೂ ಮುಸ್ಲಿಂ ಸಮುದಾಯದ ಮತಗಳೇ ಇಲ್ಲಿ ನಿರ್ಣಾಯಕ.

ಹೊಸಕೋಟೆ
ಮುಯ್ಯಿ ತೀರಿಸುವ ತವಕದಲ್ಲಿ ಎಂಟಿಬಿ:
ಕುತೂಹಲ ಕೆರಳಿಸಿರುವ ಹೊಸಕೋಟೆ ಕ್ಷೇತ್ರದಲ್ಲಿ ನಗರಾಭಿವೃದ್ಧಿ ಸಚಿವ ಎಂಟಿಬಿ ನಾಗರಾಜ್‌ ಮತ್ತು ಹಾಲಿ ಶಾಸಕ ಶರತ್‌ ಬಚ್ಚೇಗೌಡ ನಡುವೆ ತೀವ್ರ ಪೈಪೋಟಿ ಇದೆ. ಜೆಡಿಎಸ್‌ ಅಭ್ಯರ್ಥಿ ಕಣದಲ್ಲಿ ಇಲ್ಲದಿರುವುದು ನೇರಾನೇರ ಜಿದ್ದಾಜಿದ್ದಿಗೆ ಕಾರಣವಾಗಿದೆ. ಕಾಂಗ್ರೆಸ್‌ನಲ್ಲಿದ್ದ ಎಂಟಿಬಿ ನಾಗರಾಜ್‌ ಅವರು ರಾಜೀನಾಮೆ ನೀಡಿ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಆದರೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಬಚ್ಚೇಗೌಡ ಪುತ್ರ ಶರತ್‌ ಬಚ್ಚೇಗೌಡ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. ಬಳಿಕ ಕಾಂಗ್ರೆಸ್‌ ಸೇರ್ಪಡೆಗೊಂಡು ಇದೀಗ ಪುನಃ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ. ಕಳೆದ ಬಾರಿ ಪರಾಭವಗೊಂಡಿದ್ದ ನಾಗರಾಜ್‌ ಈ ಸಲ ‘ಮುಯ್ಯಿ’ ತೀರಿಸುವ ತವಕದಲ್ಲಿದ್ದಾರೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ನಾಗರಾಜ್‌ ಮತ್ತು ಬಿಜೆಪಿಯಿಂದ ಶರತ್‌ ಬಚ್ಚೇಗೌಡ ಮುಖಾಮುಖಿಯಾಗಿದ್ದು, ನಾಗರಾಜ್‌ ಜಯಗಳಿಸಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲೂ ಎದುರಾಳಿಗಳಾಗಿದ್ದು, ಇದೀಗ ಪುನಃ ಮುಖಾಮುಖಿಯಾಗಿದ್ದಾರೆ. ಆದರೆ, ಪಕ್ಷ ಮಾತ್ರ ಅದಲು ಬದಲಾಗಿವೆ. ಹೊಸಕೋಟೆ ವಿಧಾನ ಸಭಾ ಕ್ಷೇತ್ರವು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದೆ. ಆದರೆ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ದೇವನಹಳ್ಳಿ
ಮುನಿಯಪ್ಪಗೆ ಬಂಡಾಯದ ಬಿಸಿ:
ಒಕ್ಕಲಿಗ, ದಲಿತ ಮತದಾರರು ಹೆಚ್ಚಿರುವ, ಜೆಡಿಎಸ್‌ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ದೇವನಹಳ್ಳಿ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪ ಬಿಜೆಪಿಯಿಂದ, ಹಾಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಪಕ್ಷದೊಳಗಿನ ಬಂಡಾಯದ ನಡುವೆಯೇ ಕಾಂಗ್ರೆಸ್‌ನಿಂದ ಕೆ.ಎಚ್‌. ಮುನಿಯಪ್ಪ ಸ್ಪರ್ಧಿಸಿದ್ದಾರೆ. ಮೂರೂ ಪಕ್ಷದ ಅಭ್ಯರ್ಥಿಗಳು ಸಮಬಲದ ಪೈಪೋಟಿ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ನ ಮತಬ್ಯಾಂಕ್‌ ಹೆಚ್ಚಿರುವ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲಿ ನಿಸರ್ಗ ನಾರಾಯಣಸ್ವಾಮಿ ಉತ್ಸಾಹದಲ್ಲಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಪರವಾದ ಮತದಾರರು ಅಷ್ಟಾಗಿ ಇಲ್ಲದಿದ್ದರೂ 2013ರಲ್ಲಿ ಶಾಸಕರಾಗಿದ್ದ ಪಿಳ್ಳ ಮುನಿಶಾಮಪ್ಪ ಅವರು ಕಣಕ್ಕಿಳಿದಿರುವುದರಿಂದ ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಅವರಿಗೆ ಬಂಡಾಯದ ಬಿಸಿ ಜೋರಾಗಿ ತಟ್ಟುತ್ತಿದೆ. ಬಿಬಿಎಂಪಿ ಮಾಜಿ ಕಾರ್ಪೋರೇಟರ್‌ ಆನಂದಕುಮಾರ್‌ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್‌ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದಾರೆ. ಅದರ ಜತೆಗೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಈ ಹಿಂದೆ ‘ಗೋ ಬ್ಯಾಕ್‌ ಕೆಎಚ್‌ಎಂ’ ಅಭಿಯಾನವನ್ನೂ ನಡೆಸಿದ್ದರು. ಕೆ.ಎಚ್‌. ಮುನಿಯಪ್ಪ ಬಂಡಾಯ ಶಮನದ ಕೆಲಸ ಮಾಡಿದ್ದು, ಕಾರ್ಯಕರ್ತರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಅದು ಸಫಲವಾದರೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಖಚಿತ. ಯಾರೇ ಗೆದ್ದರೂ ಗೆಲುವಿನ ಅಂತರ ಕಡಿಮೆಯಿರುವ ಸಾಧ್ಯತೆ.

ಯಲಹಂಕ
ವಿಶ್ವನಾಥ್‌ಗೆ ಹೊಸಬರ ಪೈಪೋಟಿ:
ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಎಂದು ಕಾಣಿಸಿದರೂ ಬಿಜೆಪಿ ಅಲೆ ಕಾಣುತ್ತಿದೆ. ಸತತ ಮೂರು ಬಾರಿ ಗೆಲುವು ಬಾರಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿರುವ ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರಿಗೆ ಪ್ರತಿ ವಿಧಾನಸಭಾ ಚುನಾವಣೆಯಲ್ಲಿಯೂ ಹೊಸಬರು ಎದುರಾಳಿಯಾಗಿದ್ದಾರೆ. ಈ ಬಾರಿ ವಿಶ್ವನಾಥ್‌ ವಿರುದ್ಧ ಕಾಂಗ್ರೆಸ್‌ನಿಂದ ಕೇಶವ ರಾಜಣ್ಣ, ಜೆಡಿಎಸ್‌ನಿಂದ ಎಂ.ಮುನೇಗೌಡ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ 20 ಅಭ್ಯರ್ಥಿಗಳು ಇದ್ದಾರೆ. ವಿಶ್ವನಾಥ್‌ ಅವರಿಗೆ ಈ ಚುನಾವಣೆ ಅಂದುಕೊಂಡಷ್ಟುಸುಲಭವಾಗಿಲ್ಲ. ವಿರೋಧಿಗಳು ಎಲ್ಲ ಪಟ್ಟುಗಳನ್ನು ಹಾಕುತ್ತಿದ್ದು, ವಿಶ್ವನಾಥ್‌ ಅವುಗಳನ್ನು ಒಂದೊಂದಾಗಿ ಎದುರಿಸಿ ಹೊರಬರುವ ಪ್ರಯತ್ನ ಮಾಡುತ್ತಿದ್ದಾರೆ. 2008ರಿಂದ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿರುವ ವಿಶ್ವನಾಥ್‌ ಗೆಲುವಿನ ವಿಶ್ವಾಸ ಹೊಂದಿದ್ದಾರೆ. ಕಳೆದ ಎರಡು ಬಾರಿ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್‌ ಈ ಬಾರಿ ಸ್ಪರ್ಧೆ ನೀಡಲು ಮುಂದಾಗಿದೆ. ಕಾಂಗ್ರೆಸ್‌ ಸಹ ವಿಶ್ವನಾಥ್‌ ಅವರನ್ನು ಸೋಲಿಸಲು ತಂತ್ರಗಾರಿಕೆ ಹೆಣೆದಿದೆ. ಕೇಶವ ರಾಜಣ್ಣ ಅವರು ಕೋವಿಡ್‌ ಸಮಯದಿಂದಲೂ ಜನರ ಸಂಕಷ್ಟಕ್ಕೆ ಸ್ಪಂದಿಸಿ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದಾರೆ. ಇದು ಮತದಾರರನ್ನು ಸೆಳೆಯಲು ಕಾಂಗ್ರೆಸ್‌ಗೆ ಅನುಕೂಲವಾಗಲಿದೆ. ಆದರೂ, ಕ್ಷೇತ್ರದ ಅಭಿವೃದ್ಧಿಯೇ ವಿಶ್ವನಾಥ್‌ಗೆ ಶ್ರೀರಕ್ಷೆಯಾಗಿದೆ.

ಕೆ.ಆರ್‌.ಪುರ
ಬೈರತಿ ಮಣಿಸಲು ಕಾಂಗ್ರೆಸ್‌ ಫೈಟ್‌:
ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇದೆ. ಸಿಪಿಎಂಗೆ ಜೆಡಿಎಸ್‌ ಬೆಂಬಲ ಸೂಚಿಸಿದೆ. ಹೀಗಾಗಿ ಜೆಡಿಎಸ್‌ ಅಭ್ಯರ್ಥಿ ವೆಂಕಟಾಚಲಪತಿ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರಿಗೆ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಮೋಹನ್‌ ತೀವ್ರ ಸ್ಪರ್ಧೆ ನೀಡಲು ಸಜ್ಜಾಗಿದ್ದಾರೆ. ಜೆಡಿಎಸ್‌ ಬೆಂಬಲ ನೀಡಿರುವುದರಿಂದ ಸಿಪಿಐಎಂ ಸಹ ಪೈಪೋಟಿ ನೀಡಲಿದೆ. 2008ರಲ್ಲಿ ರಚನೆಯಾದ ಕ್ಷೇತ್ರವು ಐದನೇ ಚುನಾವಣೆಯನ್ನು ಎದುರಿಸುತ್ತಿದೆ. ಮೊದಲಿಗೆ ಬಿಜೆಪಿಯಿಂದ ನಂದೀಶ್‌ ರೆಡ್ಡಿ ಗೆಲುವು ಸಾಧಿಸಿದ್ದರು. 2013ರಲ್ಲಿ ಬೈರತಿ ಬಸವರಾಜ ತಮ್ಮ ತೆಕ್ಕೆಗೆ ಕ್ಷೇತ್ರವನ್ನು ಪಡೆದು ಕಾಂಗ್ರೆಸ್‌ ಖಾತೆ ತೆರೆದರು. ನಂತರ 2018ರಲ್ಲಿಯೂ ಗೆಲುವು ಸಾಧಿಸಿದರು. 2019ರಲ್ಲಿ ಬಿಜೆಪಿಗೆ ಸೇರ್ಪಡೆಯಾದ್ದರಿಂದ ಉಪಚುನಾವಣೆ ಎದುರಿಸಬೇಕಾಯಿತು. ಉಪಚುನಾವಣೆಯಲ್ಲಿ ಕ್ಷೇತ್ರ ಬಿಜೆಪಿ ಪಾಲಾಯಿತು. ಬೈರತಿ ಸತತ ಮೂರನೇ ಬಾರಿ ಗೆಲುವು ಸಾಧಿಸಿದರು. ಕಾಂಗ್ರೆಸ್‌ ಡಿ.ಕೆ.ಮೋಹನ್‌ ಅವರು ಬಿಜೆಪಿ ಶಾಸಕಿ ಪೂರ್ಣಿಮಾ ಅವರ ಸಂಬಂಧಿಯಾಗಿದ್ದಾರೆ. ಬಿಜೆಪಿಗೆ ತೀವ್ರ ಪೈಪೋಟಿ ನೀಡಲು ಮೋಹನ್‌ ಕಸರತ್ತು ನಡೆಸಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ವೆಂಕಟಾಚಲಪತಿ ಚುನಾವಣಾ ನಿವೃತ್ತಿ ಘೋಷಣೆ ಮಾಡಿರುವುದರಿಂದ ಕಣದಲ್ಲಿ 11 ಅಭ್ಯರ್ಥಿಗಳು ಉಳಿದಿದ್ದಾರೆ.

ಮಲ್ಲೇಶ್ವರ
ಸಚಿವ ಅಶ್ವತ್ಥಗೆ ಬ್ರಾಹ್ಮಣ ಎದುರಾಳಿ:
ಬೆಂಗಳೂರಿನ ಅತ್ಯಂತ ಹಳೆಯ ಬಡಾವಣೆಗಳಲ್ಲಿ ಒಂದಾಗಿರುವ ಇದು, ಪ್ರತಿಷ್ಠಿತ ಕ್ಷೇತ್ರವೂ ಹೌದು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಪ್ರತಿನಿಧಿಸುತ್ತಿರುವ ಕ್ಷೇತ್ರ ಇದಾಗಿದ್ದು, ಬಿಜೆಪಿಯ ಭದ್ರಕೋಟೆಯನ್ನಾಗಿಸಿಕೊಂಡಿದ್ದಾರೆ. ಇವರಿಗೆ ಈ ಬಾರಿ ಸಡ್ಡು ಹೊಡೆಯಲು ಕಾಂಗ್ರೆಸ್‌ ರಾಜಕೀಯ ತಂತ್ರ ರೂಪಿಸಿದೆ. ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಬ್ರಾಹ್ಮಣ ಸಮುದಾಯವು ಹೆಚ್ಚಿದೆ. ಹೀಗಾಗಿ ಕಾಂಗ್ರೆಸ್‌ ಪಕ್ಷ ಬ್ರಾಹ್ಮಣ ಸಮುದಾಯದ ಅನೂಪ್‌ ಅಯ್ಯಂಗಾರ್‌ ಅವರಿಗೆ ಟಿಕೆಟ್‌ ನೀಡಿದೆ. ಕ್ಷೇತ್ರದಲ್ಲಿ ಬಿಜೆಪಿ ನೆಲೆಯೂರಲು ಶ್ರಮ ಹಾಕಿದ್ದ ಪ್ರಕಾಶ್‌ ಅಯ್ಯಂಗಾರ್‌ ಅವರ ಸಂಬಂಧಿಯಾಗಿರುವ ಅನೂಪ್‌ಗೆ ಕಾಂಗ್ರೆಸ್‌ ಟಿಕೆಟ್‌ ನೀಡಿರುವುದರಿಂದ ಈ ಬಾರಿ ಚುನಾವಣೆ ಕುತೂಹಲ ಕೆರಳಿಸಿದೆ. 2008ರಿಂದ ಸತತ ಮೂರು ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಬಾರಿಸಿರುವ ಅಶ್ವತ್ಥ ನಾರಾಯಣ ನಾಲ್ಕನೇ ಬಾರಿಯೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಜೆಡಿಎಸ್‌ ಉತ್ಕಷ್‌ರ್‍ ಎಂಬ ಹೊಸಬಗೆ ಮಣೆ ಹಾಕಿದೆ. ಬಿಜೆಪಿಯ ಮತಗಳು ವಿಭಜನೆಯಾಗುವ ಆತಂಕ ಇದೆ. ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಜತೆಗೆ ಎಎಪಿ, ಬಿಎಸ್‌ಪಿ, ಎನ್‌ಪಿಪಿ ಸ್ಪರ್ಧಿಸಿವೆ. ಮಾನ್ಯತೆ ಇಲ್ಲದ ನೋಂದಾಯಿತ ಪಕ್ಷದಿಂದ ಮೂವರು, ಇಬ್ಬರು ಪಕ್ಷೇತರರು ಅದೃಷ್ಟಪರೀಕ್ಷೆಗಿಳಿದಿದ್ದಾರೆ.

ಮಹದೇವಪುರ
ಲಿಂಬಾವಳಿ ಪತ್ನಿ ವರ್ಸಸ್‌ ನಾಗೇಶ್‌:
ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ರಚನೆಯಾದ ಮಹದೇವಪುರ ವಿಧಾನಸಭಾ ಕ್ಷೇತ್ರವು ಬಿಜೆಪಿಯ ಹಿಡಿತದಲ್ಲಿಯೇ ಇದೆ. ಮೂರು ಚುನಾವಣೆಯನ್ನು ಎದುರಿಸಿರುವ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಅರವಿಂದ ಲಿಂಬಾವಳಿಗೆ ಈ ಬಾರಿ ಪಕ್ಷದ ಹೈಕಮಾಂಡ್‌ ಬ್ರೇಕ್‌ ಹಾಕಿದೆ. ಲಿಂಬಾವಳಿ ಪತ್ನಿ ಮಂಜುಳಾ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಮಂಜುಳಾ ಅವರಿಗೆ ಪತಿಯ ಬೆಂಬಲವೇ ಆನೆ ಬಲ. ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಅವರನ್ನು ಕರೆ ತಂದ ಕಾಂಗ್ರೆಸ್‌, ತನ್ನ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇದೆ. ಮಾಜಿ ಸಚಿವರಾಗಿ ನಾಗೇಶ್‌ ತಮ್ಮದೇ ವರ್ಚಸ್ಸನ್ನು ಬೆಳೆಸಿಕೊಂಡಿದ್ದಾರೆ. ಮುಳುಬಾಗಿಲು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ನಾಗೇಶ್‌ಗೆ ಮಹದೇವಪುರ ಕ್ಷೇತ್ರ ಹೊಸದು. ಆದರೂ ಮೀಸಲು ಕ್ಷೇತ್ರವಾಗಿರುವುದರಿಂದ ದಲಿತ ಸಮುದಾಯದ ಮತಗಳನ್ನು ಇಬ್ಬರೂ ಹೇಗೆ ಹಂಚಿಕೊಳ್ಳಲಿದ್ದಾರೆ ಎಂಬುದು ಮುಂದಿರುವ ಸವಾಲಾಗಿದೆ. ಜೆಡಿಎಸ್‌ ಪಕ್ಷವು ಆರ್‌ಪಿಐ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ. ಕ್ಷೇತ್ರದಲ್ಲಿ ಈ ಬಾರಿ 15 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಸಿ.ವಿ.ರಾಮನ್‌ನಗರ
ರಘು ಮಣಿಸಲು ಕೈ, ಆಪ್‌ ಯತ್ನ:
ಒಂದು ರೀತಿಯಲ್ಲಿ ‘ಮಿನಿ ಭಾರತ’ದಂತಿರುವ ಸಿ.ವಿ.ರಾಮನ್‌ನಗರದಲ್ಲಿ ಬಿಜೆಪಿ ಬೇರೂರಿದೆ. ಮೂರು ಚುನಾವಣೆಯಲ್ಲಿಯೂ ಬಿಜೆಪಿ ಶಾಸಕ ಎಸ್‌.ರಘು ಗೆಲುವು ಸಾಧಿಸಿಕೊಂಡು ಬಂದಿದ್ದಾರೆ. ಪ್ರತಿ ಬಾರಿಯೂ ಕಾಂಗ್ರೆಸ್‌ ಸಡ್ಡು ಹೊಡೆಯುತ್ತಿದೆ. ಕಾಂಗ್ರೆಸ್‌ನಿಂದ ಎಸ್‌.ಆನಂದ್‌ ಕುಮಾರ್‌ ಕಣಕ್ಕಿಳಿದಿದ್ದಾರೆ. ಇದರ ಜತೆಗೆ ಈ ಬಾರಿ ಎಎಪಿಯಿಂದಲೂ ಪ್ರಬಲ ಅಭ್ಯರ್ಥಿಯಾಗಿರುವ ಮೋಹನ್‌ ದಾಸರಿ ಸ್ಪರ್ಧಿಸಿದ್ದಾರೆ. ರಘು ಅವರ ಗೆಲುವಿನ ನಾಗಾಲೋಟಕ್ಕೆ ಈ ಬಾರಿ ಬ್ರೇಕ್‌ ಹಾಕಲು ಕಾಂಗ್ರೆಸ್‌ ಮತ್ತು ಎಎಪಿ ಕಸರತ್ತು ನಡೆಸಿವೆ. ಜೆಡಿಎಸ್‌ ಪಕ್ಷ ಆರ್‌ಪಿಐ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ. ಯಾವುದೇ ಅಭ್ಯರ್ಥಿಗಳಿಗೆ ಪೈಪೋಟಿ ನೀಡಲು ಸಜ್ಜಾಗಿರುವ ರಘು ಅವರು ನಾಲ್ಕನೇ ಬಾರಿ ಗೆಲುವು ಸಾಧಿಸುವ ವಿಶ್ವಾಸದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಕ್ಷೇತ್ರದಲ್ಲಿ ರಕ್ಷಣಾ ವಲಯ ಮತ್ತು ವಾಯುಸೇವೆಗೆ ಸಂಬಂಧಿಸಿದ ಕಚೇರಿಗಳು ಇವೆ. ಹೀಗಾಗಿ ಎಲ್ಲಾ ರಾಜ್ಯದ ಜನರು ಕ್ಷೇತ್ರದಲ್ಲಿದ್ದಾರೆ. ರಘು ಅವರು ಪ್ರತಿ ಚುನಾವಣೆಯಲ್ಲಿ ತಮ್ಮ ಮತಗಳ ಅಂತರವನ್ನು ಹೆಚ್ಚಿಸಿಕೊಂಡು ಬಂದಿದ್ದಾರೆ. ಈ ಬಾರಿಯೂ ಅದೇ ಹೋರಾಟ ನಡೆಸುವ ಹುಮ್ಮಸಿನಲ್ಲಿ ಮುನ್ನುಗ್ಗಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಲು ಕಾಂಗ್ರೆಸ್‌, ಎಎಪಿ, ಜೆಡಿಎಸ್‌ ಬೆಂಬಲಿತ ಆರ್‌ಪಿಐ ಸೇರಿದಂತೆ ಕಣದಲ್ಲಿರುವ 10 ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ.

ರಾಜಾಜಿನಗರ
ಸುರೇಶ್‌ ಕುಮಾರ್‌ಗೆ ಪುಟ್ಟಣ್ಣ ಸಡ್ಡು:
ಬಿಜೆಪಿಯ ಹಿರಿಯ ನಾಯಕ, ಬ್ರಾಹ್ಮಣ ಸಮುದಾಯದ ಎಸ್‌.ಸುರೇಶ್‌ ಕುಮಾರ್‌ ಪ್ರತಿನಿಧಿಸುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಎಂದಿನಂತೆ ಈ ಬಾರಿಯೂ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರಾನೇರ ಪೈಪೋಟಿ ಏರ್ಪಟ್ಟಿದ್ದರೂ ಜೆಡಿಎಸ್‌ ಸುಮ್ಮನೆಯೇನೂ ಕುಳಿತಿಲ್ಲ. ಬಿಜೆಪಿಯ ಹುರಿಯಾಳಾಗಿ ಈವರೆಗೆ ಏಳು ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸುರೇಶ್‌ ಕುಮಾರ್‌, ಎರಡು ಬಾರಿ ಸೋಲುಂಡು ಐದು ಬಾರಿ ಗೆಲುವಿನ ಮಾಲೆ ಧರಿಸಿದ್ದಾರೆ. ಕಳೆದ ಮೂರು ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿ ‘ಹ್ಯಾಟ್ರಿಕ್‌ ಹೀರೋ’ ಎನಿಸಿದ್ದಾರೆ. ಇದೀಗ ಎಂಟನೇ ಬಾರಿ ತಮ್ಮ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ. ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಗುಡ್‌ ಬೈ ಹೇಳಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ಒಕ್ಕಲಿಗ ಸಮುದಾಯದ ಪುಟ್ಟಣ್ಣಗೆ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಆರಂಭದಲ್ಲಿ ಸ್ಥಳೀಯ ಕಾಂಗ್ರೆಸ್ಸಿಗರ ವಿರೋಧ ಎದುರಿಸಿದ ಪುಟ್ಟಣ್ಣ ಬಳಿಕ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಜೆಡಿಎಸ್‌ನಿಂದ ಅಭ್ಯರ್ಥಿಯಾಗಿ ಒಕ್ಕಲಿಗ ಸಮುದಾಯದ ಡಾ.ಆಂಜನಪ್ಪ ಅಖಾಡಕ್ಕೆ ಧುಮುಕಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಮತ ಬ್ಯಾಂಕ್‌ ಚೆನ್ನಾಗಿದೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳೂ ಇವೆ. ಇದರ ಜತೆಗೆ ಪುಟ್ಟಣ್ಣ ಎಷ್ಟುಮತ ಸೆಳೆಯುತ್ತಾರೆ ಎಂಬುದು ಗೆಲುವಿಗೆ ಪ್ರಮುಖವಾಗುತ್ತದೆ. ಕ್ಷೇತ್ರದಲ್ಲಿ ಜೆಡಿಎಸ್‌ನ ಮತಗಳು ದೊಡ್ಡ ಪ್ರಮಾಣದಲ್ಲಿ ಇಲ್ಲ. ಜೆಡಿಎಸ್‌ನ ಡಾ.ಆಂಜನಪ್ಪ ಗೆಲುವು ಅಷ್ಟುಸುಲಭವಾಗಿಲ್ಲ. ಅಂತಿಮವಾಗಿ ಈ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ.

ಬೊಮ್ಮನಹಳ್ಳಿ
ಸತೀಶ್‌ ರೆಡ್ಡಿ ಜತೆ ಉಮಾಪತಿ ಕದನ:
ಬಿಜೆಪಿಯ ‘ಭದ್ರಕೋಟೆ’ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ. ಹಾಲಿ ಶಾಸಕ ಬಿಜೆಪಿಯ ಎಂ.ಸತೀಶ್‌ ರೆಡ್ಡಿ ಸತತ ಮೂರು ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಹೀರೋ ಎಂಬ ಖ್ಯಾತಿ ಗಳಿಸಿದ್ದಾರೆ. ಈ ಬಾರಿ ಮತ್ತೆ ಬಿಜೆಪಿ ರಣಕಲಿಯಾಗಿ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಸತೀಶ್‌ ರೆಡ್ಡಿಗೆ ಟಕ್ಕರ್‌ ನೀಡಲು ಕಾಂಗ್ರೆಸ್‌ ಈ ಬಾರಿ ಚಲನಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡಗೆ ಟಿಕೆಟ್‌ ಕೊಟ್ಟು ಚುನಾವಣಾ ಕಣಕ್ಕಿಳಿಸಿದೆ. ಜೆಡಿಎಸ್‌ ಅಭ್ಯರ್ಥಿಯಾಗಿ ಕೆ.ನಾರಾಯಣ ರಾಜು ಅಖಾಡಕ್ಕೆ ಇಳಿದಿದ್ದಾರೆ. ಮೂರು ಪ್ರಮುಖ ಪಕ್ಷಗಳು ಅಖಾಡದಲ್ಲಿ ಇದ್ದರೂ ಅಂತಿಮವಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿ ಏರ್ಪಡುವುದು ಖಚಿತವಾಗಿದೆ. ಈಗಾಗಲೇ ಮೂರು ಬಾರಿ ಶಾಸಕರಾಗಿರುವ ಬಿಜೆಪಿಯ ಸತೀಶ್‌ ರೆಡ್ಡಿ ಕ್ಷೇತ್ರದಲ್ಲಿ ಬಿಗಿ ಹಿಡಿತ ಸಾಧಿಸಿದ್ದಾರೆ. ಕಾಂಗ್ರೆಸ್‌ನ ಉಮಾಪತಿ ಶ್ರೀನಿವಾಸಗೌಡ ಪ್ರಥಮ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದರೂ ಕ್ಷೇತ್ರದಲ್ಲಿ ಮಿಂಚಿನಂತೆ ಸಂಚರಿಸಿ ಮತಬೇಟೆಯಾಡುತ್ತಿದ್ದಾರೆ. ಎದುರಾಳಿಗಳ ವಿರೋಧಿಗಳಿಗೆ ಗಾಳ ಹಾಕಿ ತಮ್ಮತ್ತ ಸೆಳೆದುಕೊಂಡು ಗೆಲುವಿಗೆ ರಣತಂತ್ರ ಹೆಣೆಯುತ್ತಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ ಮತ ಬ್ಯಾಂಕ್‌ ಹೇಳಿಕೊಳ್ಳುವಂತಿಲ್ಲ. ಅಭ್ಯರ್ಥಿಯ ವರ್ಚಸ್ಸಿನ ಮೇರೆಗೆ ಕೊಂಚ ಮತ ಪಡೆಯಬಹುದಾದರೂ ಗೆಲುವು ಕಷ್ಟಸಾಧ್ಯ. ಒಟ್ಟಿನಲ್ಲಿ ಈ ಬಾರಿ ಬಜೆಪಿ-ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.

ಬೆಂಗಳೂರು ದಕ್ಷಿಣ
ಬಿಜೆಪಿ 4ನೇ ಗೆಲುವು ತಡೆಗೆ ವಿಪಕ್ಷ ಯತ್ನ:
ಈ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಎಂ.ಕೃಷ್ಣಪ್ಪ 2008ರಿಂದ ಸತತವಾಗಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆರ್‌.ಕೆ.ರಮೇಶ್‌ ಮತ್ತು ಜೆಡಿಎಸ್‌ ಅಭ್ಯರ್ಥಿಯಾಗಿ ಎಚ್‌.ಪಿ.ರಾಜಗೋಪಾಲ ರೆಡ್ಡಿ ಸ್ಪರ್ಧಿಸಿದ್ದಾರೆ. ಹಾಗಾಗಿ ಈ ಬಾರಿ ಬಿಜೆಪಿಯ ಎಂ.ಕೃಷ್ಣಪ್ಪ ಅವರಿಗೆ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. ಕ್ಷೇತ್ರದಲ್ಲಿ ಬಿಜೆಪಿ ವೋಟ್‌ ಬ್ಯಾಂಕ್‌ ಉತ್ತಮವಾಗಿದ್ದರೂ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಜತೆಗೆ ಅಭ್ಯರ್ಥಿ ಆರ್‌.ಕೆ.ರಮೇಶ್‌ ಅವರ ವೈಯಕ್ತಿಕ ವರ್ಚಸ್ಸು ಉತ್ತಮವಾಗಿದೆ. ಹೀಗಾಗಿ ಈ ಬಾರಿ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಹೋರಾಟ ನಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್‌ನ ರಮೇಶ್‌ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಜೆಡಿಎಸ್‌ನ ರಾಜಗೋಪಾಲ ರೆಡ್ಡಿ ಸಹ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಸತತ ಮೂರು ಬಾರಿ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಬಿಜೆಪಿಯ ಎಂ.ಕೃಷ್ಣಪ್ಪ ಈ ಬಾರಿಯೂ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಲು ರಣತಂತ್ರ ಹೆಣೆದು ಕಾರ್ಯ ರೂಪಕ್ಕೆ ತಂದಿದ್ದಾರೆ.

ಈ ಬಾರಿ ಸಮೀಕ್ಷೆಗಳೆಲ್ಲಾ ಉಲ್ಟಾ ಹೊಡೆಯುತ್ತವೆ: ಎಚ್‌.ಡಿ.ಕುಮಾರಸ್ವಾಮಿ

ವಿಜಯನಗರ
ಕಾಂಗ್ರೆಸ್‌-ಬಿಜೆಪಿ ಸಮಬಲದ ಫೈಟ್‌:
ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರ ಕೋಟೆ. 2008ರಲ್ಲಿ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದು, ಈವರೆಗೂ ನಡೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಹಾಲಿ ಶಾಸಕ ಮಾಜಿ ಸಚಿವ ಎಂ.ಕೃಷ್ಣಪ್ಪ ಸತತ ಮೂರು ಬಾರಿ ಗೆಲುವು ಸಾಧಿಸಿ ‘ಹ್ಯಾಟ್ರಿಕ್‌ ಹೀರೋ’ ಎನಿಸಿದ್ದಾರೆ. ಈ ಬಾರಿ ಕಾಂಗ್ರೆಸ್‌ನಿಂದ ಮತ್ತೆ ಎಂ.ಕೃಷ್ಣಪ್ಪ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಎಚ್‌.ರವೀಂದ್ರ ಅಖಾಡದಲ್ಲಿದ್ದಾರೆ. ಜೆಡಿಎಸ್‌ ಈ ಬಾರಿ ಯಾವುದೇ ಅಭ್ಯರ್ಥಿಯನ್ನು ಕ್ಷಣಕ್ಕೆ ಇಳಿಸಿಲ್ಲ. ಹೀಗಾಗಿ ಈ ಬಾರಿ ಕಾಂಗ್ರೆಸ್‌-ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ. ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಕಾಂಗ್ರೆಸ್‌ನ ಎಂ.ಕೃಷ್ಣಪ್ಪ ಗೆಲುವು ಸಾಧಿಸಿದ್ದರು. ತೀವ್ರ ಪೈಪೋಟಿ ನೀಡಿದ್ದ ಬಿಜೆಪಿಯ ರವೀಂದ್ರ ಮತ್ತೆ ಕೃಷ್ಣಪ್ಪ ವಿರುದ್ಧ ತೊಡೆತಟ್ಟಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಪೈಪೋಟಿಗೆ ಬಿದ್ದವರಂತೆ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಬಾರಿ ನಗರದ ಹೈ ವೋಲ್ಟೇಜ್‌ ಕ್ಷೇತ್ರಗಳಲ್ಲಿ ವಿಜಯನಗರ ಕ್ಷೇತ್ರವೂ ಒಂದಾಗಲಿದೆ. ಸದ್ಯಕ್ಷೆ ಕ್ಷೇತ್ರದಲ್ಲಿ ಸಮಬಲದ ವಾತಾವರಣವಿದೆ. ಅಂತಿಮವಾಗಿ ವಿಜಯಲಕ್ಷ್ಮೇ ಯಾರ ಕೈ ಹಿಡಿಯಲಿದ್ದಾಳೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಜಯನಗರ
ಬಿಜೆಪಿ ಮುನಿಸೇ ತೊಡಕು:
ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಜಯನಗರವನ್ನು ಬಿಜೆಪಿ 2008 ಮತ್ತು 2013ರಲ್ಲಿ ತನ್ನದಾಗಿಸಿಕೊಂಡಿತ್ತು. ಅದಕ್ಕೆ ಕಾರಣ ಅಭ್ಯರ್ಥಿಯಾಗಿದ್ದ ಬಿ.ಎನ್‌.ವಿಜಯಕುಮಾರ್‌. ಆದರೆ, 2018ರ ಚುನಾವಣೆಗೆ ಕೆಲದಿನಗಳ ಮೊದಲು ವಿಜಯಕುಮಾರ್‌ ಅವರು ಅಕಾಲಿಕ ನಿಧನ ಹೊಂದಿದ್ದರಿಂದ ಅವರ ಸಹೋದರ ಬಿ.ಎನ್‌.ಪ್ರಹ್ಲಾದ್‌ ಅತ್ಯಲ್ಪ ಮತಗಳ ಅಂತರದಲ್ಲಿ ಸೋಲುಂಡರು. ಈಗ ಕಾಂಗ್ರೆಸ್‌ನಿಂದ ಹಾಲಿ ಶಾಸಕಿ ಸೌಮ್ಯರೆಡ್ಡಿ, ಬಿಜೆಪಿಯಿಂದ ಬಿಬಿಎಂಪಿ ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿ, ಜೆಡಿಎಸ್‌ನಿಂದ ಕಾಳೇಗೌಡ ಸೇರಿದಂತೆ 15 ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆಯೇ ನೇರ ಸ್ಪರ್ಧೆ ಇದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಕೆಲವು ಮುಖಂಡರು ಉದ್ದೇಶ ಪೂರ್ವಕವಾಗಿ ಕೆಲಸ ಮಾಡದೇ ಇದ್ದುದರಿಂದ ಈ ಕ್ಷೇತ್ರ ಕಳೆದುಕೊಳ್ಳಬೇಕಾಯಿತು ಎಂಬುದು ಆ ಪಕ್ಷದಿಂದಲೇ ಕೇಳಿಬಂದಿರುವ ಮಾತು. ಈಗ ಮತ್ತೊಮ್ಮೆ ಕ್ಷೇತ್ರವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಬಿಜೆಪಿ ತೀವ್ರ ಪ್ರಯತ್ನ ಮಾಡುತ್ತಿದೆ. ಆದರೆ, ಈಗ ಕಾಂಗ್ರೆಸ್‌ ಕ್ಷೇತ್ರದಲ್ಲಿ ಗಟ್ಟಿಗೊಂಡಿದೆ. ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲೂ ಅಪಸ್ವರ ಕೇಳಿಬಂದಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ರಮೇಶ್‌ ಅವರಿಗೆ ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಅವರ ಅಪಾರ ಸಂಖ್ಯೆಯ ಬೆಂಬಲಿಗರು ಮುನಿಸಿಕೊಂಡಿದ್ದಾರೆ. ಈ ಮುನಿಸು ಮತದಾನದ ದಿನದವರೆಗೂ ಮುಂದುವರೆದಲ್ಲಿ ಕಾಂಗ್ರೆಸ್‌ನ ಸೌಮ್ಯರೆಡ್ಡಿ ಮತ್ತೊಮ್ಮೆ ಜಯಭೇರಿ ಬಾರಿಸುವುದರಲ್ಲಿ ಅನುಮಾನವಿಲ್ಲ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios