Asianet Suvarna News Asianet Suvarna News

Karnataka assembly election: 5 ಕ್ಷೇತ್ರದಲ್ಲೂ ಹಾಲಿ ಶಾಸಕರೇ ಹುರಿಯಾಳು?

  • ಹಾಲಿ ಶಾಸಕರಿಗೆ ಆಯಾ ಪಕ್ಷಗಳ ಟಿಕೆಟ್‌ ಬಹುತೇಕ ಖಾತ್ರಿ
  • ಚಿಂತಾಮಣಿಯಲ್ಲಿ ಶಾಸಕ ಸ್ಥಾನಕ್ಕೆ ರೆಡ್ಡಿಗಳ ಕಾಳಗ
  • ಗೌರಿಬಿದನೂರಲ್ಲಿ ಜೈಪಾಲ್‌ ರೆಡ್ಡಿ ಮತ್ತೆ ಪ್ರತ್ಯಕ್ಷ
  • ಶಿಡ್ಲಘಟ್ಟಟಿಕೆಟ್‌ಗಾಗಿ ಸುಧಾಕರ್‌ಗೆ ಬೆನ್ನುಬಿದ್ದಿರುವ ರಾಜಣ್ಣ
The sitting MLAs are contesting in five constituencies at chikkaballapur rav
Author
First Published Dec 5, 2022, 9:07 AM IST

ಟಿಕೆಟ್‌ ಫೈಟ್‌

ಕಾಗತಿ ನಾಗರಾಜಪ್ಪ

ಚಿಕ್ಕಬಳ್ಳಾಪುರ (ಡಿ.5) : ಚಿಕ್ಕಬಳ್ಳಾಪುರ ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆ. ಆದರೆ, 2023ರ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಸಮಬಲದ ಹೋರಾಟ ನಡೆಸಲು ಸಜ್ಜಾಗಿವೆ. ಬಿಜೆಪಿಗೆ ಇಂದಿಗೂ ಜಿಲ್ಲೆಯಲ್ಲಿ ರಾಜಕೀಯವಾಗಿ ಭದ್ರ ನೆಲೆ ಇಲ್ಲ. ಆದರೆ, ಸಚಿವ ಡಾ.ಕೆ.ಸುಧಾಕರ್‌ ಸೇರ್ಪಡೆಯಿಂದ ಬಿಜೆಪಿಗೆ ಆನೆ ಬಲ ಬಂದಿದೆ. ಎಡಪಕ್ಷಗಳ ದಟ್ಟಪ್ರಭಾವ ಇರುವ ಬಾಗೇಪಲ್ಲಿಯಲ್ಲಿ ಮಾಜಿ ಶಾಸಕರಾಗಿದ್ದ ಜಿ.ವಿ.ಶ್ರೀರಾಮರೆಡ್ಡಿ ನಿಧನದ ನಂತರ ಚುನಾವಣೆ ಎದುರಿಸಲು ಸಿಪಿಎಂ ಸಿದ್ದವಾಗುತ್ತಿದೆ. ಐದು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಆಯಾ ಪಕ್ಷಗಳ ಟಿಕೆಟ್‌ ಬಹುತೇಕ ಖಾತ್ರಿಯಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ಗಿಂತ ಬಿಜೆಪಿ ಟಿಕೆಟ್‌ಗೆ ಬೇಡಿಕೆ ಹೆಚ್ಚಿದ್ದು, ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಕೆಲವು ಕ್ಷೇತ್ರಗಳಲ್ಲಿ ಪಕ್ಷೇತರರು ಕಣಕ್ಕಿಳಿಯಲು ಅಣಿಯಾಗುತ್ತಿದ್ದು, ಸಹಜವಾಗಿಯೆ ಮೂರೂ ಪಕ್ಷಗಳನ್ನು ಚಿಂತೆಗೀಡು ಮಾಡಿದೆ.

ಜಿಲ್ಲೆ: ಚಿಕ್ಕಬಳ್ಳಾಪುರ

ಹಾಲಿ ಬಲಾಬಲ:

  • ಕ್ಷೇತ್ರ:5
  • ಕಾಂಗ್ರೆಸ್‌:3
  • ಜೆಡಿಎಸ್‌:1
  • ಬಿಜೆಪಿ:1      

Ground Report:ದಕ್ಷಿಣ ಕನ್ನಡದ 'ಕೇಸರಿ' ಕೋಟೆಯಲ್ಲಿ ಈ ಬಾರಿ 'ಕೈ ಪಡೆ' ಪೈಪೋಟಿ

1.ಚಿಕ್ಕಬಳ್ಳಾಪುರ: ಸುಧಾಕರ್‌ ವಿರುದ್ದ ಕೈ ಅಭ್ಯರ್ಥಿ ಯಾರು?:

ಈ ಕ್ಷೇತ್ರ ದಶಕಗಳಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. 2004ರವರೆಗೂ ಮೀಸಲು ಕ್ಷೇತ್ರವಾಗಿದ್ದ ಚಿಕ್ಕಬಳ್ಳಾಪುರ, 2008ರ ನಂತರ ಸಾಮಾನ್ಯ ಕ್ಷೇತ್ರವಾಗಿದೆ. 2013, 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, 2 ಭಾರಿ ಗೆದ್ದಿದ್ದ ಸುಧಾಕರ್‌, 2018ರಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರಕ್ಕೆ ಸೆಡ್ಡು ಹೊಡೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ, 2019ರಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಸೇರಿ, ಆಗ ನಡೆದ ಉಪ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದರು. ಆ ಮೂಲಕ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲದ ಖಾತೆ ತೆರೆದರು. ಈ ಬಾರಿ ಸುಧಾಕರ್‌ ಬಿಜೆಪಿಯಿಂದಲೇ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.

ಇನ್ನು, 2019ರ ಉಪ ಚುನಾವಣೆಯಲ್ಲಿ ಚುನಾವಣಾ ಅಖಾಡದಿಂದ ಹಿಂದೆ ಸರಿದಿದ್ದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, 2023ರಲ್ಲಿ ಮತ್ತೆ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ. ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತ ನಂದಿ ಅಂಜಿನಪ್ಪ, 2023ರ ಸ್ಪರ್ಧೆಗೆ ನಿರಾಕರಿಸಿದ್ದಾರೆ. ವಿನಯ್‌ ಶ್ಯಾಮ್‌, ಯಲುವಹಳ್ಳಿ ರಮೇಶ್‌, ಕೆ.ಎನ್‌.ರಘು, ವಕೀಲ ನಾರಾಯಣಸ್ವಾಮಿ ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಹಾಕಿದ್ದಾರೆ. ಜೊತೆಗೆ, ಬೆಂಗಳೂರಿನ ರಕ್ಷಾ ರಾಮಯ್ಯ, ಮುಳಬಾಗಿಲಿನ ಮಾಜಿ ಶಾಸಕ ಕೊತ್ತನೂರು ಮಂಜುನಾಥ ಹೆಸರೂ ಕೂಡ ಕೇಳಿ ಬರುತ್ತಿದೆ.

2. ಚಿಂತಾಮಣಿ: ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ರೆಡ್ಡಿಗಳ ಕಾಳಗ:

ಜಿಲ್ಲೆಯಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಹೆಸರಾದ ಕ್ಷೇತ್ರ ಇದು. ಎಂ.ಸಿ.ಆಂಜನೇಯ ರೆಡ್ಡಿ, ಟಿ.ಕೆ. ಗಂಗರೆಡ್ಡಿ ಕುಟುಂಬಗಳು ಈ ಕ್ಷೇತ್ರದಲ್ಲಿ ಹಲವು ದಶಕಗಳ ಕಾಲ ತಮ್ಮ ರಾಜಕೀಯ ಪಾರುಪಾತ್ಯ ಸಾಧಿಸಿ, ಅಧಿಕಾರ ಅನುಭವಿಸಿವೆ. ಆದರೆ, 2013 ಹಾಗೂ 2018ರಲ್ಲಿ ಜೆ.ಕೆ.ಕೃಷ್ಣಾರೆಡ್ಡಿಯವರು ಜೆಡಿಎಸ್‌ನಿಂದ ಗೆದ್ದಿದ್ದು, ಈ ಬಾರಿಯೂ ಜೆಡಿಎಸ್‌ನಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.

Ticket Fight: ದಕ್ಷಿಣ ಕನ್ನಡ ಬಿಜೆಪಿ ಕೋಟೆಯಲ್ಲಿ ಕಾಂಗ್ರೆಸ್‌ ಪೈಪೋಟಿ

ಇನ್ನು, 2004, 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಸತತ 2 ಭಾರಿ ಶಾಸಕರಾಗಿದ್ದ ಕ್ಷೇತ್ರದ ಪ್ರಭಾವಿ ನಾಯಕ ಡಾ.ಎಂ.ಸಿ,ಸುಧಾಕರ್‌, 2013, 2018ರಲ್ಲಿ ಕಾಂಗ್ರೆಸ್‌ನ ‘ಬಿ’ ಫಾರಂ ತಿರಸ್ಕರಿಸಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಈಗ ಮತ್ತೆ ಸುಧಾಕರ್‌ ಅವರು ಕಾಂಗ್ರೆಸ್‌ ಸೇರಿದ್ದು, ಕೈ ಟಿಕೆಟ್‌ಗೆ ಯತ್ನಿಸಿದ್ದಾರೆ.

ಬಿಜೆಪಿಯಿಂದ ಸಚಿವ ಸುಧಾಕರ್‌ ಅವರ ಬಾವಮೈದ, ಕೋನಪಲ್ಲಿ ಸತ್ಯನಾರಾಯಣ ರೆಡ್ಡಿ ಹಾಗೂ ಎಂ.ಆರ್‌.ಬಾಬು ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಸುಧಾಕರ್‌ ಹೇಳಿದವರಿಗೆ ಇಲ್ಲಿ ಬಿಜೆಪಿಯ ‘ಬಿ’ ಫಾರಂ ಎನ್ನಲಾಗುತ್ತಿದೆ. ಮಾಜಿ ಸಚಿವ ಕೆ.ಎಂ.ಕೃಷ್ಣಾರೆಡ್ಡಿ ಹೆಸರಲ್ಲಿ ಕೆಎಂಕೆ ಟ್ರಸ್ಟ್‌ ಸ್ಥಾಪಿಸಿಕೊಂಡು ಸಮಾಜ ಸೇವೆ ಮಾಡುತ್ತಿರುವ ದೇವನಹಳ್ಳಿ ಮೂಲದ ವೇಣುಗೋಪಾಲ್‌ (ಗೋಪಿ) ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ನೋಡಬೇಕಿದೆ.

3. ಗೌರಿಬಿದನೂರು: ಶಿವಶಂಕರರೆಡ್ಡಿಯನ್ನು ಕಟ್ಟಿಹಾಕಲು ಬಿಜೆಪಿ ಯತ್ನ

ಹಾಲಿ ಶಾಸಕರಾಗಿರುವ ಎನ್‌.ಎಚ್‌.ಶಿವಶಂಕರರೆಡ್ಡಿಯವರು ಕಾಂಗ್ರೆಸ್‌ನಿಂದ ಸತತ 6ನೇ ಬಾರಿಗೆ ಶಾಸಕರಾಗಲು ಉತ್ಸುಕರಾಗಿದ್ದಾರೆ. ಸ್ಥಳೀಯರಾದ ಆರ್‌ಎಸ್‌ಎಸ್‌ ಹಿನ್ನೆಲೆ ಹೊಂದಿರುವ ಮಾನಸ ಆಸ್ಪತ್ರೆ ಗ್ರೂಪ್‌ನ ಅಧ್ಯಕ್ಷ ಡಾ.ಶಶಿಧರ್‌ ಅವರು ಬಿಜೆಪಿ ಟಿಕೆಟ್‌ಗೆ ಕರಸತ್ತು ನಡೆಸುತ್ತಿದ್ದಾರೆ. ಅವರ ಬೆನ್ನಿಗೆ ಆರ್‌ಎಸ್‌ಎಸ್‌ ಮುಖಂಡರಲ್ಲದ ರಾಜ್ಯ ದ್ರಾಕ್ಷಿ ಹಾಗೂ ವೈನ್‌ ಬೋರ್ಡ್‌ ಅಧ್ಯಕ್ಷ ರವಿ ನಾರಾಯಣರೆಡ್ಡಿ ನಿಂತಿದ್ದಾರೆ ಎನ್ನಲಾಗಿದೆ. ಇನ್ನು, ಕ್ಷೇತ್ರದಲ್ಲಿ ಕಾಂಗ್ರೆಸ್ಸನ್ನು ಕಟ್ಟಿಹಾಕಲು ಬಿಜೆಪಿಯ ಹುರಿಯಾಳನ್ನು ಹೊರಗಿನಿಂದ ತರುವ ಯತ್ನ ಕೂಡ ಬಿಜೆಪಿಯಲ್ಲಿ ನಡೆಯುತ್ತಿದೆ.

ಬೆಂಗಳೂರು ನಗರ ಜಿಪಂ ಸದಸ್ಯರಾಗಿದ್ದ ಕೆಂಪರಾಜು ಕೂಡ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದು, ಇವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್‌ರವರ ಪರೋಕ್ಷ ಬೆಂಬಲ ಇದೆ ಎನ್ನಲಾಗುತ್ತಿದೆ. 2013 ರಲ್ಲಿ ಬಿಜೆಪಿಯಿಂದ ಆಶ್ಚರ್ಯಕರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎರಡನೇ ಸ್ಥಾನ ಪಡೆದಿದ್ದ ಜೈಪಾಲ್‌ರೆಡ್ಡಿ ಮತ್ತೆ ಕ್ಷೇತ್ರದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ. ಅವರೂ ಕೂಡ ಟಿಕೆಟ್‌ ಆಕಾಂಕ್ಷಿ. 2018ರ ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪಮತಗಳ ಅಂತರದಿಂದ ಸೋತಿದ್ದ, ಜಿಪಂ ಮಾಜಿ ಅಧ್ಯಕ್ಷ, ಸಿ.ಆರ್‌.ನರಸಿಂಹಮೂರ್ತಿ ಅವರು ಎರಡನೇ ಬಾರಿಗೆ ಜೆಡಿಎಸ್‌ನಿಂದ ಸ್ಪರ್ಧಿಸುವುದು ಪಕ್ಕಾ ಆಗಿದೆ. ಇದೇ ವೇಳೆ, ಪಕ್ಷೇತರರಾಗಿ ಸ್ಪರ್ಧಿಸಲು ಕೆ.ಎಚ್‌.¶ೌಂಡೇಷನ್‌ ಅಧ್ಯಕ್ಷ ಪುಟ್ಟಸ್ವಾಮಿಗೌಡ ಸಜ್ಜಾಗಿದ್ದಾರೆ.

4. ಬಾಗೇಪಲ್ಲಿ: ಸುಬ್ಬಾರೆಡ್ಡಿಗೆ ಸಂಪಂಗಿ, ಸಿಪಿಎಂನದ್ದೇ ಚಿಂತೆ

ಬಾಗೇಪಲ್ಲಿ, ಸಿಪಿಎಂ ಹಾಗೂ ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿಯ ಕಣವಾಗಿದ್ದು, ಜೆಡಿಎಸ್‌ ಹಾಗೂ ಬಿಜೆಪಿ ಈವರೆಗೂ ಇಲ್ಲಿ ಖಾತೆ ತೆರೆದ ಇತಿಹಾಸವಿಲ್ಲ. 2013ರಲ್ಲಿ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 2ನೇ ಬಾರಿಗೆ ಗೆಲುವು ಸಾಧಿಸಿರುವ ಎಸ್‌.ಎನ್‌.ಸುಬ್ಬಾರೆಡ್ಡಿಯವರು ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಶಾಸಕ ಕಾಂಗ್ರೆಸ್‌ನ ಎನ್‌.ಸಂಪಂಗಿ ಕೂಡ ಕಾಂಗ್ರೆಸ್‌ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ.

ಎರಡು ಬಾರಿ ಸಿಪಿಎಂನಿಂದ ಶಾಸಕರಾಗಿದ್ದ ಜಿ.ವಿ.ಶ್ರೀರಾಮರೆಡ್ಡಿ ನಿಧನರಾಗಿದ್ದು, ಅವರ ಶಿಷ್ಯ ಡಾ.ಅನಿಲ್‌ ಕುಮಾರ್‌ ಸಿಪಿಎಂನಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಲು ಬೆಂಗಳೂರು ನಗರ ಜಿಪಂ ಅಧ್ಯಕ್ಷರಾಗಿದ್ದ ಮುನಿರಾಜು, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಉತ್ಸುಕರಾಗಿದ್ದು, ಯಾರಿಗೆ ಟಿಕೆಟ್‌ ಎನ್ನುವುದು ಸಚಿವ ಡಾ.ಕೆ.ಸುಧಾಕರ್‌ ಅವರ ತೀರ್ಮಾನದ ಮೇಲೆ ನಿರ್ಧಾರವಾಗಲಿದೆ. ಮತ್ತೊಂದೆಡೆ, ಸುಧಾಕರ್‌ ಕುಟುಂಬದವರೊಬ್ಬರು ಇಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತು ಪ್ರಬಲವಾಗಿ ಕೇಳಿ ಬರುತ್ತಿದೆ. ಡಿ.ಜೆ.ನಾಗರಾಜರೆಡ್ಡಿ ಅವರನ್ನು ಜೆಡಿಎಸ್‌ ಅಭ್ಯರ್ಥಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಈಗಾಗಲೇ ಘೋಷಿಸಿದ್ದಾರೆ.

5.ಶಿಡ್ಲಘಟ್ಟ: ರಾಜಣ್ಣಗೆ ಬಿಜೆಪಿ ಮಣೆ ಹಾಕುತ್ತಾ?

ಹಾಲಿ ಶಾಸಕರಾಗಿರುವ ಕಾಂಗ್ರೆಸ್‌ನ ಹಿರಿಯ ನಾಯಕ ವಿ.ಮುನಿಯಪ್ಪ ಮತ್ತೊಮ್ಮೆ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ. ಆದರೆ, ಅವರ ಬೆಂಬಲಿಗರಲ್ಲಿ ಕೆಲವರು ಮುನಿಯಪ್ಪ ಪುತ್ರ ಶಶಿಧರ್‌ಗೆ ಕಾಂಗ್ರೆಸ್‌ ಟಿಕೆಟ್‌ ಸಿಗಲಿ ಎನ್ನುತ್ತಿದ್ದಾರೆ. ಮತ್ತೊಂದೆಡೆ, ತಂದೆ, ಮಗನ ಜಗಳದ ನಡುವೆ ವೆಂಕಟೇಶ್‌ ಎಂಬುವರು ಕ್ಷೇತ್ರದ ಕೈ ಟಿಕೆಟ್‌ಗೆ ಅರ್ಜಿ ಸಲ್ಲಿಸಿರುವುದು ಕುತೂಹಲ ಕೆರಳಿಸಿದೆ. ಜೊತೆಗೆ, ಬೆಂಗಳೂರು ಉದ್ಯಮಿ ರಾಜೀವ್‌ ಗೌಡ ಕೂಡ ಕಾಂಗ್ರೆಸ್‌ ಟಿಕೆಟ್‌ಗೆ ಯತ್ನಿಸಿದ್ದಾರೆ.

ಆನಂದ್ ಮಾಮನಿ ನಿಧನದಿಂದ ತೆರವಾದ ಸ್ಥಾನಕ್ಕೆ ಶುರುವಾಯ್ತು ಟಿಕೆಟ್ ಫೈಟ್..!

ಇನ್ನು, 2018ರಲ್ಲಿ ಜೆಡಿಎಸ್‌ ಟಿಕೆಟ್‌ ಕೈ ತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್‌ ವಿರುದ್ಧ ಅಲ್ಪಮತಗಳ ಅಂತರದಿಂದ ಸೋತಿದ್ದ ಮೇಲೂರು ರವಿಕುಮಾರ್‌ಗೆ ಈ ಬಾರಿ ಜೆಡಿಎಸ್‌ ಟಿಕೆಟ್‌ ಖಚಿತವಾಗಿದೆ. 2013ರಲ್ಲಿ ಜೆಡಿಎಸ್‌ನಿಂದ ಶಾಸಕರಾಗಿದ್ದ ಎಂ.ರಾಜಣ್ಣ, 2018ರಲ್ಲಿ ಹೀನಾಯವಾಗಿ ಸೋತಿದ್ದು, ಸದ್ಯ ಬಿಜೆಪಿ ಟಿಕೆಟ್‌ಗಾಗಿ ಸಚಿವ ಸುಧಾಕರ್‌ ಬೆನ್ನು ಬಿದ್ದಿದ್ದಾರೆ. ಆದರೆ, ಬಿಜೆಪಿ, ರಾಜಣ್ಣಗೆ ಮಣೆ ಹಾಕುತ್ತಾ ಅಥವಾ ಇಲ್ಲವೇ ಹೊಸಬರಿಗೆ ಅವಕಾಶ ಕೊಡುತ್ತಾ ಕಾದು ನೋಡಬೇಕಿದೆ.

Follow Us:
Download App:
  • android
  • ios