ಗಿಫ್ಟ್‌ ರಾಜಕೀಯದ ಮೂಲಕ ರಾಜ್ಯದ ಗಮನ ಸೆಳೆಯುತ್ತಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರ ಜಿದ್ದಾಜಿದ್ದಿನ ಹೋರಾಟಕ್ಕೆ ಅಣಿಯಾಗುತ್ತಿದೆ. ಹಾಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಯತ್ನ ಮುಂದುವರಿಸಿದ್ದಾರೆ. 

ಶ್ರೀಶೈಲ ಮಠದ

ಬೆಳಗಾವಿ (ಫೆ.10): ಗಿಫ್ಟ್‌ ರಾಜಕೀಯದ ಮೂಲಕ ರಾಜ್ಯದ ಗಮನ ಸೆಳೆಯುತ್ತಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರ ಜಿದ್ದಾಜಿದ್ದಿನ ಹೋರಾಟಕ್ಕೆ ಅಣಿಯಾಗುತ್ತಿದೆ. ಹಾಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಯತ್ನ ಮುಂದುವರಿಸಿದ್ದಾರೆ. ಇವರಿಗೆ ಬೆನ್ನೆಲುಬಾಗಿ ನಿಂತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು, ಲಕ್ಷ್ಮೀ ಹೆಬ್ಬಾಳಕರ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. 

2018ರ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಪರ ಪ್ರಚಾರ ಮಾಡಿ, ಅವರನ್ನು ಗೆಲ್ಲಿಸಲು ಪ್ರಯತ್ನಪಟ್ಟಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ, ಈ ಬಾರಿ ಅವರನ್ನು ಸೋಲಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದು, ತಮ್ಮ ಬೆಂಬಲಿಗ, ನಾಗೇಶ ಮನ್ನೋಳಕರ ಅವರನ್ನು ಕಣಕ್ಕಿಳಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ತಳಮಟ್ಟದಿಂದ ತಮ್ಮ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಹೀಗಾಗಿ, ಬೆಳಗಾವಿ ವಿಧಾನಸಭಾ ಕ್ಷೇತ್ರ, ಬದ್ಧ ದ್ವೇಷಿಗಳ, ಇನ್ನೊಂದೆಡೆ ಜಾರಕಿಹೊಳಿ ಸಹೋದರರ ಸವಾಲಿಗೆ ಸಾಕ್ಷಿಯಾಗುತ್ತಿದೆ. ಹೈವೋಲ್ಟೇಜ್‌ ಕಣವಾಗಿ ಮಾರ್ಪಟ್ಟಿದೆ.

ಪಂಚರತ್ನ ರಥಯಾತ್ರೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರದ ಜತೆ ಬಿಜೆಪಿ ಮೇಲೆ ಎಚ್‌ಡಿಕೆ ಅಟ್ಯಾಕ್!

ಸುವರ್ಣ ವಿಧಾನಸೌಧ, ಸೂಳೇಬಾವಿ ಗ್ರಾಮದ ಮಹಾಲಕ್ಷ್ಮೀ, ಪಂತ ಬಾಳೇಕುಂದ್ರಿಯ ಪಂತ ಮಹಾರಾಜ ಹಾಗೂ ಯಳ್ಳೂರಿನ ರಾಜಹಂಸಗಡ ಶಿವಾಲಯದ ಪುಣ್ಯಕ್ಷೇತ್ರಗಳನ್ನು ಹೊಂದಿರುವುದು ಈ ಕ್ಷೇತ್ರದ ವಿಶೇಷ. ಮರಾಠಿ ಮತಗಳೇ ಇಲ್ಲಿ ನಿರ್ಣಾಯಕ. ಕ್ಷೇತ್ರದಲ್ಲಿ ಮರಾಠಿಗರು, ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಪ್ತಬಣದಲ್ಲಿ ಗುರುತಿಸಿಕೊಂಡಿರುವ, ಲಿಂಗಾಯತ ಸಮುದಾಯದ ಪ್ರಭಾವಿ ನಾಯಕಿಯಾಗಿರುವ ಲಕ್ಷ್ಮೀ ಹೆಬ್ಬಾಳಕರ ಅವರು ಪಕ್ಷಕ್ಕಿಂತ ಇಲ್ಲಿ ವೈಯಕ್ತಿಕ ವರ್ಚಸ್ಸು ವೃದ್ಧಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ, ಮರಾಠಿ ಪ್ರಭಾವ ಬಳಸಿಕೊಂಡು ತಮ್ಮ ರಾಜಕೀಯ ಭದ್ರಕೋಟೆ ಕಟ್ಟಿಕೊಂಡಿದ್ದಾರೆ.

ತಮ್ಮ ವಿರುದ್ಧ ವೈಯಕ್ತಿಕವಾಗಿ ನಿಂದನೆ ಮಾಡಿದರೂ ಜಾರಕಿಹೊಳಿ ಆರೋಪಗಳಿಗೆ ಪ್ರತಿಕ್ರಿಯೆ ನೀಡದೆ ಮೌನವಾಗಿರುವ ಹೆಬ್ಬಾಳಕರ, ಪ್ರತಿಹಳ್ಳಿಗೆ ಭೇಟಿ ನೀಡಿ, ನಾನು ನಿಮ್ಮ ಮನೆ ಮಗಳು ಎಂದು ಹಳದಿ ಕುಂಕುಮ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ತಮ್ಮ ವಿರೋಧಿಗಳ ಟೀಕೆಗಳಿಗೆ ಹೆಚ್ಚು ಪ್ರತಿಕ್ರಿಯಿಸದೆ ಇರುವುದರಿಂದ ಜನರ ಅನುಕಂಪ ದೊರೆತು, ಅದೇ ಮತಗಳಾಗಿ ಪರಿವರ್ತನೆ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಬಿಜೆಪಿಯಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿದ್ದು, ಮಾಜಿ ಶಾಸಕ ಸಂಜಯ ಪಾಟೀಲ, ಧನಂಜಯ ಜಾಧವ ಮತ್ತು ರಮೇಶ ಆಪ್ತ ನಾಗೇಶ ಮನ್ನೋಳಕರ ಪ್ರಬಲ ಆಕಾಂಕ್ಷಿಗಳು. ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ಮೇಯರ್‌ ಶಿವಾಜಿ ಸುಂಠಕರ ಇಲ್ಲವೇ ಮಾಜಿ ಶಾಸಕ ಮನೋಹರ ಕಿಣೇಕರ ಸ್ಪರ್ಧಿಸುವ ಸಾಧ್ಯತೆಗಳಿವೆ. ಜೆಡಿಎಸ್‌ ಇಲ್ಲಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ.

ಕ್ಷೇತ್ರ ಹಿನ್ನೆಲೆ: ಇದೊಂದು ದೊಡ್ಡ ಕ್ಷೇತ್ರ. ಈ ಕ್ಷೇತ್ರದ ವ್ಯಾಪ್ತಿಗೆ 110 ಹಳ್ಳಿಗಳು, 6 ಹೋಬಳಿ, 42 ಗ್ರಾಮ ಪಂಚಾಯಿತಿಗಳು, 31 ತಾಲೂಕು ಪಂಚಾಯಿತಿ ಮತ್ತು 7 ಜಿಲ್ಲಾ ಪಂಚಾಯಿತಿಗಳು ಬರುತ್ತವೆ. 1967ರಲ್ಲಿ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂತು. 1967ರಲ್ಲಿ ಕಾಂಗ್ರೆಸ್‌ನ ಸಿ.ಎಲ್‌.ಪಟ್ಟಣಶೆಟ್ಟಿವಿಧಾನಸಭೆಗೆ ಆಯ್ಕೆಯಾಗಿದ್ದರು. ಈವರೆಗೆ ಕಾಂಗ್ರೆಸ್‌, ಎಂಇಎಸ್‌, ಜನತಾದಳ, ಬಿಜೆಪಿ ತಲಾ ಮೂರು ಬಾರಿ ಆಯ್ಕೆಯಾಗಿವೆ. ರಾಷ್ಟ್ರೀಯ ಪಕ್ಷಗಳಿಗೆ ಸರಿಸಮನಾಗಿ ಇಲ್ಲಿ ಎಂಇಎಸ್‌ ಪೈಪೋಟಿ ನೀಡುತ್ತ ಬಂದಿದೆ.

ಪ್ರಧಾನಿ ಮೋದಿ ಅವರಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ: ಬಿಎಸ್‌ವೈ ಹೆಸರು ಮರೆತ್ರಾ ಸಿಎಂ ಬೊಮ್ಮಾಯಿ

ಜಾತಿ ಬಲಾಬಲ: ಕ್ಷೇತ್ರದಲ್ಲಿ ಮರಾಠಿಗರು, ಲಿಂಗಾಯತರದ್ದೇ ಪ್ರಾಬಲ್ಯ. ಒಟ್ಟು 2,40,255 ಮತದಾರರ ಪೈಕಿ, 40 ಸಾವಿರದಷ್ಟುಲಿಂಗಾಯತರಿದ್ದಾರೆ. ಮರಾಠರು, 1,15,000, ಮುಸ್ಲಿಮರು 19,000, ಕುರುಬರು 17, 000, ದಲಿತರು 25, 000, ಜೈನರು 7,000ದಷ್ಟಿದ್ದಾರೆ.