Asianet Suvarna News Asianet Suvarna News

ಕೋಮುವಾದ ಚುನಾವಣೆ ದಿಕ್ಕನ್ನೇ ಬದಲಿಸಿದೆ: ಬಿ.ಆರ್.ಪಾಟೀಲ್

ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವ ನಾವು ಚುನಾವಣೆಯಲ್ಲಿ ನಿರ್ಭೀತರಾಗಿ ಮತ ಚಲಾಯಿಸಬೇಕು ಎಂದು ಹೇಳಲಾಗುತ್ತಿದೆ. ಆದರೆ, ಇಂದು ಹಣ, ಹೆಂಡ, ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ‌ ಎಂದು ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ 

Communalism has Changed the Direction of Elections Congress MLA BR Patil grg
Author
First Published Feb 18, 2024, 12:48 PM IST

ಶಿವಮೊಗ್ಗ(ಫೆ.18): ವ್ಯಕ್ತಿವಾದ, ಜಾತಿವಾದ, ಕೋಮುವಾದಗಳು ಚುನಾವಣೆ ದಿಕ್ಕನ್ನೇ ಬದಲಿಸಿವೆ ಎಂದು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಹೇಳಿದರು. ನಗರದ ಪ್ರೆಸ್ ಟ್ರಸ್ಟ್‌ನ ಪತ್ರಿಕಾ ಭವನದಲ್ಲಿ ಶನಿವಾರ ಜಿಲ್ಲಾ ಜಾಗೃತಿ ಮತದಾರರ ವೇದಿಕೆ ವತಿಯಿಂದ ಆಯೋಜಿಸಿದ್ದ ‘ಚುನಾವಣೆ ಸುಧಾರಣೆ’ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವ ನಾವು ಚುನಾವಣೆಯಲ್ಲಿ ನಿರ್ಭೀತರಾಗಿ ಮತ ಚಲಾಯಿಸಬೇಕು ಎಂದು ಹೇಳಲಾಗುತ್ತಿದೆ. ಆದರೆ, ಇಂದು ಹಣ, ಹೆಂಡ, ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ‌ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆ ಸಮಾಜವಾದಿಗಳ ತವರು‌ ಎಂದು ಕರೆಯಲಾಗುತ್ತದೆ. ಆದರೆ, ಇಂದು ಇಲ್ಲೂ ಬೇರೆ ವಾತಾವರಣ ಇದೆ. ಒಂದು ಹಣ, ಧರ್ಮದ ಆಧಾರದಲ್ಲಿ ಮತ ಹಾಕುವ ಪರಿಪಾಠ ಬೆಳೆದುಬಂದಿದೆ. ಇಂದಿನ ಚುನಾವಣೆ ವ್ಯವಸ್ಥೆ ಹೀಗೆ ಮುಂದುವರಿದರೆ, ಮುಂದೆ ಗ್ರಾಮ ಪಂಚಾಯಿತಿಯಲ್ಲೂ ಸಾಮಾನ್ಯ ಕಾರ್ಯಕರ್ತ ಗೆಲ್ಲದ ಪರಿಸ್ಥಿತಿ ಉಲ್ಬಣಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸವಳಂಗ ರಸ್ತೆಯಲ್ಲಿ ನಮ್ಮಪ್ಪಂದು ಯಾವ ಆಸ್ತಿ ಇಲ್ಲ: ಆಯನೂರು ಮಂಜುನಾಥ್

ಆಮಿಷಗಳ ದರ್ಬಾರು:

ಚುನಾವಣೆ ಸಂದರ್ಭ ಅಭ್ಯರ್ಥಿಯಲ್ಲಿ ಅಭಿವೃದ್ಧಿ ಚಿಂತನೆ, ಜನಪರ ಕಾಳಜಿ ನೋಡಿ ಮತ ಚಲಾಯಿಸಬೇಕಿತ್ತು. ಆದರೆ, ನಾವು ಅಭ್ಯರ್ಥಿ ಎಷ್ಟು ಹಣ ಕೊಡುತ್ತಿದ್ದಾನೆ ಎಂದು ನೋಡುತ್ತಿದ್ದೇವೆ. ಯಾರು ಹೆಚ್ಚು ಹಣ, ಹೆಂಡ ಕೊಡುತ್ತಾರೆ ಅವರಿಗೆ ಓಟು ಎನ್ನುತ್ತಿದ್ದೇವೆ. ಪಕ್ಷಗಳು ಕೂಡ ಟಿಕೆಟ್‌ ನೀಡುವ ಸಂದರ್ಭ ಎಷ್ಟು ಖರ್ಚು ಮಾಡಲು ಸಿದ್ಧವಾಗಿದ್ದಿ ಎಂದು ಕೇಳಿಯೇ ಟಿಕೆಟ್‌ ನೀಡಲಾಗುತ್ತದೆ. ಹೀಗಾಗಿ, ಚುನಾವಣೆಯಲ್ಲಿ ಗೆಲ್ಲಲು ದುಡ್ಡೇ ಪ್ರಧಾನ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಇದರಿಂದ ಮುಂದೆ ಸದನದಲ್ಲಿ ಬಡವರು, ರೈತರ ಪರ ಮಾತನಾಡುವವರೇ ಇಲ್ಲವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಸಂವಿಧಾನ ನೀತಿ ಪಾಲಿಸಬೇಕು:

ಸಾಲ ಮನ್ನಾ ಮಾಡಿ ದೇಶ ಬಿಟ್ಟು ಓಡಿಹೋಗುವವರ ಸಾಲ ಮನ್ನಾ ಮಾಡುವ ಸರ್ಕಾರಗಳು, ರೈತರ ಸಾಲ ಮನ್ನಾ ಮಾಡಲು ಹಿಂದೆ, ಮುಂದೆ ನೋಡುವಂತಾಗಿದೆ. ಬಡವರು ಓದುವ ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಸಂಖ್ಯೆಯ ಶಿಕ್ಷಕರ ಹುದ್ದೆ ಖಾಲಿ‌ ಉಳಿದಿವೆ. ಇದರಿಂದ ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಸಿಗಲು ಹೇಗೆ ಸಾಧ್ಯ? ಯಾರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಯಾರು ಜನ ಪರವಾಗಿ ಇರುತ್ತಾರೆಯೋ ಅಂಥವರು ಚುನಾವಣೆಯಲ್ಲಿ ಆಯ್ಕೆಯಾಗಬೇಕು. ಗಾಂಧಿ ಹುಟ್ಟಿದ ನಾಡಿನಲ್ಲಿ ಹಿಂಸೆ ನಡೆಯಬಾರದು ಎಂದರೆ ಸಂವಿಧಾನವನ್ನು ಪಾಲನೆ ಮಾಡುವ ಅಗತ್ಯವಿದೆ ಎಂದರು.

ಇಂದು ಜಾತಿ, ಧರ್ಮದ ಹೆಸರಿನಲ್ಲಿ ದೊಡ್ಡ ಕುತಂತ್ರಗಳು ನಡೆಯುತ್ತಿವೆ. ಸಂಘ ಪರಿಹಾರದವರು ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಯಾಗಿ ಇಟ್ಟುಕೊಂಡು ಕೂತಿದ್ದಾರೆ. ಅವರು ಸೂಚಿಸಿದವರ ವಿಷಯಗಳು ಪಠ್ಯದಲ್ಲಿ ಬರುತ್ತಿವೆ. ಜನರ ಸಮಸ್ಯೆಗಳನ್ನು ಚರ್ಚೆ ಮಾಡಬೇಕಾದ ಸದನ ಸರಿಯಾಗಿ ನಡೆಯುತ್ತಿಲ್ಲ. ಸದನದ ಅವಧಿಯನ್ನು ಕಡಿತಗೊಳಿಸಲಾಗುತ್ತಿದೆ. ನಡೆಯುವ ಅವಧಿಯಲ್ಲಿಯೂ ಗಲಾಟೆ ಗದ್ದಲಗಳೇ ಸದ್ದು ಮಾಡುತ್ತಿವೆ. ಇದು ಅಪಾಯಕಾರಿ. ಕನಿಷ್ಠ ಪಕ್ಷ 100 ದಿನ ಸದನ ನಡೆಯುವಂತಾಗಬೇಕು. ಸ್ಥಳೀಯ ಸರ್ಕಾರಗಳನ್ನು ಕುಗ್ಗಿಸಿ, ಎಲ್ಲ ಅಧಿಕಾರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜಾಗೃತ ಮತದಾರರ ವೇದಿಕೆ ಸಂಚಾಲಕ ಕೆ.ಸಿ.ಬಸವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಪ್ರತಿಜ್ಞಾವಿಧಿ ಬೋಧಿಸಿದರು. ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್‌ ಕಾರ್ಯಕ್ರಮ ನಿರೂಪಿಸಿದರು. ಗ್ರಾಮೀಣ ಬ್ಯಾಂಕ್‌ ನಿವೃತ್ತ ಅಧ್ಯಕ್ಷ ಕೆ.ಆರ್‌.ಲಿಂಗಪ್ಪ, ನಿವೃತ್ತ ವಾರ್ತಾಧಿಕಾರಿ ಬಿ.ಎಸ್‌. ತಿಮ್ಮೋಲಿ, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ರಾಜ್ಯಾಧ್ಯಕ್ಷೆ ಬಿ.ಪ್ರೇಮಾ ಮತ್ತಿತರರು ಇದ್ದರು.

ಚುನಾವಣಾ ಸುಧಾರಣೆ ನಿರಂತರ ಇರಬೇಕು

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್‌ ಯಡಗೆರೆ ಮಾತನಾಡಿ, ಇಂದು ಚುನಾವಣಾ ಭ್ರಷ್ಟಚಾರ ಎಂಬುದು ತಳಮಟ್ಟದಲ್ಲೇ ಶುರುವಾಗಿದೆ. ದುಡ್ಡು ಕೊಟ್ಟರೆ ಮಾತ್ರ ಮತ ಹಾಕುತ್ತೇವೆ ಎಂದು ಮತದಾರರೇ ಹೇಳುವ ದುಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆಯೂ ಚುನಾವಣೆ ಸುಧಾರಣೆ ಪ್ರಯತ್ನ ನಿರಂತವಾಗಿದ್ದರೆ ಮುಂದೊಂದು ದಿನ ಅದಕ್ಕೆ ಫಲ‌‌ ಸಿಕ್ಕೇ ಸಿಗುತ್ತದೆ ಎಂಬ ಆಶಾ ಮನೋಭಾವ ಬೆಳೆಸಿಕೊಳ್ಳಬೇಕು. ನಾವು ನಮ್ಮ ನೆರೆ ಹೊರೆಯವರೊಂದಿಗೆ ಯೋಗ್ಯ ಮತದಾನದ ಬಗ್ಗೆ ಚರ್ಚೆ ಮಾಡುತ್ತಾ ಹೋದರೆ ಮುಂದೊಂದು ದಿನ ಇದು‌ ಫಲಕೊಡುತ್ತದೆ ಎಂದು ತಿಳಿಸಿದರು.

ದೇಶ ವಿಭಜನೆ ಮಾಡಿದ ಕಾಂಗ್ರೆಸ್ಸಿಂದ ಪಾಠ ಕಲಿಯಬೇಕಿಲ್ಲ: ಸಂಸದ ಬಿ.ವೈ.ರಾಘವೇಂದ್ರ

ಇದೇ ನನ್ನ ಕೊನೆ ಚುನಾವಣೆ: ಪಾಟೀಲ್‌

ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇಲ್ಲ. ಈಗಿನ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವೇ ಇಲ್ಲ. ಇದೇ ನನ್ನ ಕೊನೆಯ ಚುನಾವಣೆಯಾಗಬಹುದು ಎಂದು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್‌. ಪಾಟೀಲ್‌ ಹೇಳಿದರು.

ಚುನಾವಣೆಯಲ್ಲಿ ಹಣವೇ ಪ್ರಧಾನ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾ.ಪಂ. ಚುನಾವಣೆಯಲ್ಲಿ ಕೂಡ ಸ್ಪರ್ಧಿಸುವುದು ಸುಲಭದ ಮಾತಲ್ಲ. ಲಕ್ಷ ಲಕ್ಷ ರು. ಖರ್ಚು ಮಾಡಬೇಕು. ಇಂತಹ ವ್ಯವಸ್ಥೆಯಲ್ಲಿ ನಮ್ಮಂತಹವರು ಹೇಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು? ಜನರ ಪರವಾಗಿ ಸದನದಲ್ಲಿ ಮಾತನಾಡುವವರಿಗೆ ಬೆಲೆಯಿಲ್ಲ. ಬದಲಾಗಿ ಕ್ಷೇತ್ರದ ಮದುವೆ, ಮುಂಜಿ, ಸಾವಿನ ಮನೆಗೆ ನಿತ್ಯ ಭೇಟಿ ಕೊಡುವವರು ಮಾತ್ರ ಗೆಲ್ಲುತ್ತಿದ್ದಾರೆ ಎಂದು ಬೇಸರಿಸಿದರು.

Follow Us:
Download App:
  • android
  • ios