Praveen Nettaru Murder Case: ಅಂತಿಮ ಯಾತ್ರೆ ವೇಳೆ ಭುಗಿಲೆದ್ದ ಬಿಜೆಪಿ ಕಾರ್ಯಕರ್ತರ ಆಕ್ರೋಶ

  • ಪ್ರವೀಣ್ ಹತ್ಯೆ ಖಂಡಿಸಿ ಬೆಳ್ಳಾರೆಯಲ್ಲಿ ಕಲ್ಲು ತೂರಾಟ
  • ಲಾಠಿ ಪ್ರಹಾರಕ್ಕೆ ಕಾರ್ಯಕರ್ತರಿಗೆ ಗಾಯ
  • ಜನಪ್ರತಿನಿಧಿಗಳ ಮೇಲೆ ಆಕ್ರೋಶ
  • ಸ್ಥಳಕ್ಕೆ ಎಡಿಜಿಪಿ ಭೇಟಿ
Praveen Nettaru Murder Case Outrage of BJP workers erupted rav

ಪುತ್ತೂರು ಜು.28: ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಪಾರ್ಥಿವ ಶರೀರ ಮೆರವಣಿಗೆ ಬುಧವಾರ ಕೆಲವು ಅಹಿತಕರ ಘಟನೆಗೆ ಸಾಕ್ಷಿಯಾಯಿತು. ಬಿಜೆಪಿ ನಾಯಕರ ವಿರುದ್ಧವೇ ಕಾರ್ಯಕರ್ತರ ವ್ಯಾಪಕ ಆಕ್ರೋಶ ತಿರುಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕಾರನ್ನು ಹಾನಿಗೊಳಿಸಲು ಯತ್ನಿಸಿದ ವಿದ್ಯಮಾನ ನಡೆಯಿತು. ಮಸೀದಿ ಬಳಿ ಕಲ್ಲು ತೂರಾಟಕ್ಕೆ ಯತ್ನಿಸಿದ ಕಾರಣ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ನಾಲ್ಕೈದು ಮಂದಿ ಗಾಯಗೊಂಡ ಘಟನೆ ನಡೆಯಿತು.

ಪ್ರವೀಣ್‌(Praveen Nettaru ) ಪಾರ್ಥಿವ ಶರೀರದ ಮೆರವಣಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಿಂದ ಹೊರಡುವ ಮುನ್ನ ಬೊಳುವಾರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌(KSRTC BUS)ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ನಿಂತಿಕಲ್‌ನಲ್ಲಿ ಪಾರ್ಥೀವ ಶರೀರದ ಮೆರವಣಿಗೆ ಫೋಟೋ ತೆಗೆಯುತ್ತಿದ್ದ ಭಿನ್ನಮತೀಯರೊಬ್ಬರ ದ್ವಿಚಕ್ರ ವಾಹನ ಧ್ವಂಸಗೊಳಿಸಲಾಗಿದೆ. ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಇರಿಸಿದ ಬೆಳ್ಳಾರೆ ಪೇಟೆಯಲ್ಲಿ ಬಸ್‌ ನಿಲ್ದಾಣದ ಎದುರಿನ ಮೊಬೈಲ್‌ ಅಂಗಡಿಯ ಗಾಜನ್ನು ಉದ್ರಿಕ್ತರು ಪುಡಿಗೈದಿದ್ದಾರೆ. ಸಮೀಪದ ಮಸೀದಿ ಬಳಿಯ ಮಟನ್‌ ಸ್ಟಾಲ್‌ಗೆ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಪೊಲೀಸರು ಲಾಠಿ ಚಾಜ್‌ರ್‍ ನಡೆಸಿ ಗುಂಪನ್ನು ಚದುರಿಸಿದ್ದಾರೆ. ಲಾಠಿ ಚಾಜ್‌ರ್‍ ನಡೆಸಿದ ವೇಳೆ ನಾಲ್ಕೈದು ಮಂದಿ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಪ್ರವೀಣ್‌ ಹತ್ಯೆಯಲ್ಲಿ ಕೇರಳ ಮತಾಂಧ ಸಂಘಟನೆಗಳ ನಂಟು ಶಂಕೆ

ಜನಪ್ರತಿನಿಧಿಗಳಿಗೆ ಘೇರಾವ್‌, ಮುತ್ತಿಗೆ:

ಬೆಳ್ಳಾರೆ ಬಸ್‌ ನಿಲ್ದಾಣದಲ್ಲಿ ಪ್ರವೀಣ್‌ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಈ ವೇಳೆ ಅಲ್ಲಿಗೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್‌(Nalin Kumar Kateelu), ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌(Minister Sunil Kumar), ಸಚಿವ ಅಂಗಾರ(Minister angara), ಶಾಸಕ ಸಂಜೀವ ಮಠಂದೂರು(MLA Sanjeev mathandooru) ಆಗಮಿಸಿದರು. ಇವರೆಲ್ಲರೂ ಮೃತ ಪ್ರವೀಣ್‌ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸುತ್ತಿದ್ದಂತೆ ಕಾರ್ಯಕರ್ತರ ಗುಂಪು ನುಗ್ಗಿ ತಡವಾಗಿ ಬಂದಿರುವುದಕ್ಕೆ ಧಿಕ್ಕಾರ ಕೂಗುತ್ತಾ ಅಲ್ಲಿಂದ ತೆರಳುವಂತೆ ಆಗ್ರಹಿಸಿತು.

ಅಷ್ಟರಲ್ಲಿ ಆರ್‌ಎಸ್‌ಎಸ್‌ ಮುಖಂಡ ಡಾ.ಪ್ರಭಾಕರ ಭಟ್‌ ಕಲ್ಲಡ್ಕ(RSS Leader Prabhakara bhat Kalladka) ಆಗಮಿಸಿ, ಉದ್ರಿಕ್ತ ಕಾರ್ಯಕರ್ತನ್ನು ಸಮಾಧಾನಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಂಟಾರು ರವೀಶ ತಂತ್ರಿ(Kuntaaru raveesh tantri) ಸೇರಿದಂತೆ ಬಿಜೆಪಿ ಸ್ಥಳೀಯರ ಮುಖಂಡರು ಮನವಿ ಮಾಡಿದರೂ ಆಕ್ರೋಶಿತ ಗುಂಪು ಇದನ್ನು ಕೇಳಿಸಿಕೊಳ್ಳುವ ಸಹನೆ ಹೊಂದಿರಲಿಲ್ಲ. ಸುಮಾರು ಒಂದು ಗಂಟೆ ಕಾಲ ಉದ್ರಿಕ್ತ ಕಾರ್ಯಕರ್ತರು ಈ ಜನಪ್ರತಿನಿಧಿಗಳಿಗೆ ಮುತ್ತಿಗೆ ಹಾಕಿ ಧಿಕ್ಕಾರ ಘೋಷಣೆ ಕೂಗಿದರು. ನಳಿನ್‌ ಕುಮಾರ್‌, ಅಂಗಾರ, ಸುನಿಲ್‌ ಕುಮಾರ್‌, ಸಂಜೀವ ಮಠಂದೂರು ಅವರಿಗೆ ಅಲ್ಲಿದ್ದ ಮುಖಂಡರು ರಕ್ಷಣೆ ಒದಗಿಸಿದರು. ಕೊನೆಗೆ ಪೊಲೀಸ್‌ ಭದ್ರತೆಯಲ್ಲಿ ಇವರನ್ನು ಅಲ್ಲಿಂದ ಕಳುಹಿಸಲಾಯಿತು.

ಮಗನ ಉತ್ತರಕ್ರಿಯೆಗೆ ಮುನ್ನ ಗಲ್ಲು ಶಿಕ್ಷೆ ವಿಧಿಸಿ’: ಪ್ರವೀಣ್‌ ತಾಯಿ ಕಣ್ಣೀರು

ಸಂಸದ ಕಾರು ಹಾನಿಗೆ ಯತ್ನ:

ಪಾರ್ಥಿವ ಶರೀರದ ಮೆರವಣಿಗೆ ಬೆಳ್ಳಾರೆ ಬಸ್‌ ನಿಲ್ದಾಣಕ್ಕೆ ತಲುಪಿದಾಗ ಅಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಅಷ್ಟರಲ್ಲಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕಾರು ಗುಂಪಿನ ಮಧ್ಯೆ ಸಿಲುಕಿಕೊಂಡಿತ್ತು. ಬಿಜೆಪಿ ಮುಖಂಡ ಪ್ರವೀಣ್‌ನ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಬೆಳಗ್ಗೆಯೇ ಬಂದಿಲ್ಲ ಎಂದು ತೀವ್ರ ಅಸಮಾಧಾನಗೊಂಡಿದ್ದ ಕಾರ್ಯಕರ್ತರ ಗುಂಪು ಆಕ್ರೋಶಗೊಂಡಿತ್ತು.

ಆಕ್ರೋಶಿತರು ನಳಿನ್‌ ಕುಮಾರ್‌ ಕಟೀಲ್‌ ಅವರ ಸರ್ಕಾರಿ ಕಾರನ್ನು ಮಗುಚಿ ಹಾಕಲು ಯತ್ನಿಸಿದರು. ಕಾರಿನ ಸುತ್ತ ಸೇರಿದ ಕಾರ್ಯಕರ್ತರು ಕಾರನ್ನು ಮಗುಚಿ ಹಾಕಲು ವಿಫಲ ಯತ್ನ ನಡೆಸಿದರು. ಅಲ್ಲದೆ ಕಾರನ್ನು ಪಂಕ್ಚರ್‌ಗೊಳಿಸಿದರು. ಇದರಿಂದಾಗಿ ಕ್ಷಣ ಕಾಲ ಸ್ಥಳದಲ್ಲಿ ಉದ್ರಿಕ್ತ ಪರಿಸ್ಥಿತಿ ಉಂಟಾಯಿತು. ಬಳಿಕ ಬಿಜೆಪಿ ಸ್ಥಳೀಯ ಮುಖಂಡರು ಹಾಗೂ ಪೊಲೀಸರು ಆಗಮಿಸಿ ಕಾರ್ಯಕರ್ತರನ್ನು ಎಚ್ಚರಿಕೆ ನೀಡಿ ಚದುರಿಸಿ ಕಾರು ಮುಂದೆ ಚಲಿಸಲು ಅವಕಾಶ ಮಾಡಿಕೊಟ್ಟರು.

ಕಲ್ಲು ತೂರಾಟ, ಲಾಠಿ ಪ್ರಹಾರ: ಬೆಳ್ಳಾರೆ ಬಸ್‌ ನಿಲ್ದಾಣದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು ಧಿಕ್ಕಾರ ಘೋಷಣೆ ಕೂಗುತ್ತಾ ಮತ್ತಷ್ಟುಆಕ್ರೋಶಗೊಳ್ಳುತ್ತಿದ್ದಂತೆ ಜನಪ್ರತಿನಿಧಿಗಳು ಅಲ್ಲಿಂದ ಕಾಲ್ಕಿತ್ತರು. ಇದರಿಂದ ಆಕ್ರೋಶ ಕಟ್ಟೆಯೊಡೆದು ಅಹಿತಕರ ಘಟನೆಗೆ ಮುಂದಾದರು. ಪೇಟೆ ಸಮೀಪದ ಮಸೀದಿ ಬಳಿ ಮಟನ್‌ ಸ್ಟಾಲ್‌ಗೆ ಕಲ್ಲು ತೂರಾಟ ನಡೆಸಲಾಯಿತು. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತು. ಪರಿಸ್ಥಿತಿ ನಿಯಂತ್ರಿಸಲು ಎಸ್ಪಿ ಋುಷಿಕೇಶ್‌ ಭಗವಾನ್‌ ನೇತೃತ್ವದಲ್ಲಿ ಪೊಲೀಸ್‌ ತಂಡ ಶ್ರಮಿಸಿದರೂ ಕೊನೆಯಲ್ಲಿ ಲಾಠಿ ಪ್ರಹಾರ ನಡೆಸಲಾಯಿತು. ಈ ವೇಳೆ ನಾಲ್ಕೈದು ಮಂದಿ ಕಾರ್ಯಕರ್ತರು ಗಾಯಗೊಂಡರು. ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು.

ಮನೆಗೆ ಶಾಸಕ ಹರೀಶ್‌ ಪೂಂಜ ಭೇಟಿ: ಮೃತ ಪ್ರವೀಣ ನೆಟ್ಟಾರು ಮನೆಗೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದರು. ಆರ್‌ಎಸ್‌ಎಸ್‌ ಮುಖಂಡ ನ.ಸೀತಾರಾಮ, ಹಿಂದೂ ಜಾಗರಣಾ ವೇದಿಕೆ ಮುಖಂಡ ಜಗದೀಶ್‌ ಕಾರಂತ್‌ ಸೇರಿದಂತೆ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಪ್ರವೀಣ್‌ ಅವರ ಮೃತ ಶರೀರವನ್ನು ಅವರ ಮನೆಯ ಅಂಗಳದಲ್ಲೇ ದಹನ ಮಾಡಲಾಯಿತು. ಪ್ರವೀಣ್‌ ಅಮರ್‌ ರಹೇ ಘೋಷಣೆ ಮುಗಿಲು ಮುಟ್ಟಿತ್ತು.

ಘಟನಾ ಸ್ಥಳಕ್ಕೆ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಸಂಜೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು.

ಸಹನೆ ಕಟ್ಟೆಯೊಡೆದದ್ದು ಹೇಗೆ?

ಪ್ರತಿ ಬಾರಿ ಇಂತಹ ಹತ್ಯೆಗಳು ನಡೆದಾಗ ಹಿಂದೂ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಸಹನೆಯಿಂದ ವರ್ತಿಸುವುದು ಕ್ರಮ. ಆದರೆ ಈ ಬಾರಿ ಇದಕ್ಕೆ ವ್ಯತಿರಿಕ್ತವಾಗಿ ಜನಪ್ರತಿನಿಧಿಗಳನ್ನೇ ಗುರಿಯಾಗಿಸಿ ಆಕ್ರೋಶಿತ ವರ್ತನೆ ತೋರಿಸಿರುವುದು ಪಕ್ಷದ ಮುಖಂಡರನ್ನೇ ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮಾಡಿದೆ.

ಇಂತಹ ಘಟನೆಗಳು ನಡೆದಾಗ ಜನಪ್ರತಿನಿಧಿಯಾದವರು ತಕ್ಷಣ ಸ್ಥಳಕ್ಕೆ ಧಾವಿಸಿ ಸಾಂತ್ವನ ಹೇಳಬೇಕು ಎಂಬುದು ಕಾರ್ಯಕರ್ತರ ಸಹಜ ಆಕಾಂಕ್ಷೆ. ಆದರೆ ಪ್ರವೀಣ್‌ ಹತ್ಯೆ ಮಂಗಳವಾರ ರಾತ್ರಿ ನಡೆದಿದ್ದು, ಬುಧವಾರ ಬೆಳಗ್ಗೆ ವರೆಗೂ ಬಿಜೆಪಿ ಜನಪ್ರತಿನಿಧಿಗಳ ಸುಳಿವೇ ಇರಲಿಲ್ಲ. ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡುತ್ತಾರೆ ಎಂಬ ಸುದ್ದಿ ಹರಡಿ ಕೊನೆಗೆ ಅಲ್ಲಿಯೂ ಕುಟುಂಬಸ್ಥರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ವಿದ್ಯಮಾನ ನಡೆಯಿತು.

ಬಳಿಕ ನಗರ ಸಭಾ ಅಧ್ಯಕ್ಷ ಜೀವಂಧರ ಜೈನ್‌ ಹಾಗೂ ಆರ್‌ಎಸ್‌ಎಸ್‌ ಮುಖಂಡ ರವೀಂದ್ರ ಪೇರಾಲು ಅವರು ಪ್ರವೀಣ್‌ನ ಕುಟುಂಬಸ್ಥರನ್ನು ಸಮಾಧಾನಪಡಿಸಿ ಶವವನ್ನು ನೆಟ್ಟಾರಿಗೆ ಕೊಂಡೊಯ್ಯುವಂತೆ ಮನ ಒಲಿಸುವಲ್ಲಿ ಸಫಲರಾದರು. ಪಾರ್ಥಿವ ಶರೀರದ ಮೆರವಣಿಗೆ ಪುತ್ತೂರಿನಿಂದ ಹೊರಡುವಾಗ ಬೆಳ್ತಂಗಡಿ ಶಾಸಕ ಹರೀಶ ಪೂಂಜ ಬಿಟ್ಟರೆ ಬೇರೆ ಯಾವುದೇ ಶಾಸಕರು, ಸಂಸದರು, ಸಚಿವರು ಇರಲಿಲ್ಲ. ಇದು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸುವಂತೆ ಮಾಡಿತ್ತು. ಶಾಸಕ ಹರೀಶ್‌ ಪೂಂಜ ಅವರು ಬೆಳ್ಳಾರೆಯಲ್ಲಿ ಮೆರವಣಿಗೆಯಲ್ಲಿ ಕೂಡ ಭಾಗವಹಿಸಿದ್ದರಲ್ಲದೆ, ಮೃತನ ಮನೆಗೂ ತೆರಳಿ ಸಾಂತ್ವನ ಹೇಳಿರುವುದು ಗಮನಾರ್ಹವಾಗಿತ್ತು.

50 ಲಕ್ಷ ರು. ಪರಿಹಾರಕ್ಕೆ ಚಿಂತನೆ:

ಬಿಜೆಪಿ ಸೇರಿದಂತೆ ಸಂಘ ಪರಿವಾರ ಸಂಘಟನೆಗಳಿಂದ ಮೃತ ಪ್ರವೀಣ್‌ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ 50 ಲಕ್ಷ ರು. ಮೊತ್ತ ನೀಡಲು ಚಿಂತಿಸಲಾಗಿದೆ ಎಂದು ಆರ್‌ಎಸ್‌ಎಸ್‌ ಪ್ರಾಂತ ಸಹ ಪ್ರಚಾರ ಪ್ರಮುಖ್‌ ನ.ಸೀತಾರಾಮ(Pramukh seetaram) ತಿಳಿಸಿದ್ದಾರೆ. ಪ್ರವೀಣ್‌ ಮನೆಯಲ್ಲಿ ಅಂತ್ಯಸಂಸ್ಕಾರಕ್ಕೆ ಮುನ್ನ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ಇಂತಹ ಘಟನೆ ಮರುಕಳಿಸದಂತೆ ಪೊಲೀಸ್‌ ಇಲಾಖೆ ಹಾಗೂ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.

ಕಾಣಿಯೂರಿನಲ್ಲಿ ಪ್ರವೀಣ್‌ ಪಾರ್ಥಿವ ಶರೀರ ಮೆರವಣಿಗೆ ವೇಳೆ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ಕೇಸರಿ ಬಾವುಟ ಹಿಡಿದು ಅಂತಿಮ ನಮನ ಸಲ್ಲಿಸಿದರು. ಅಲ್ಲದೆ ಮೃತರ ಕುಟುಂಬಕ್ಕೆ ಸ್ವಯಂ ಆಗಿ ಹುಂಡಿಯಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದ ದೃಶ್ಯ ಕಂಡುಬಂತು.

ಮೆರವಣಿಗೆಯಲ್ಲಿ ಜನಸಾಗರ :

ಪುತ್ತೂರು ಸರ್ಕಾರಿ ಆಸ್ಪತ್ರೆಯಿಂದ ಬೆಳಗ್ಗೆ 9.50ಕ್ಕೆ ಹೊರಟ ಪಾರ್ಥೀವ ಶರೀರ ಮೆರವಣಿಗೆ ಒಂದೂವರೆ ಕಿ.ಮೀ. ದೂರದ ದರ್ಭೆ ತಲುಪಲು ಒಂದು ಗಂಟೆ ತೆಗೆದುಕೊಂಡಿತ್ತು. ಸವಣೂರು, ಕಾಣಿಯೂರು, ನಿಂತಿಕಲ್‌ ಮೂಲಕ ಬೆಳ್ಳಾರೆ ತಲುಪಿದಾಗ 12.50 ಆಗಿತ್ತು. ಬರೋಬ್ಬರಿ 20 ಕಿ.ಮೀ. ದೂರವನ್ನು ಕ್ರಮಿಸಲು ಮೂರು ಗಂಟೆ ಬೇಕಾಯಿತು. ಬೆಳ್ಳಾರೆಯಿಂದ ಮೂರು ಕಿ.ಮೀ. ದೂರದ ನೆಟ್ಟಾರಿನ ಮನೆಗೆ ತಲುಪುವಾಗ 2.30 ಗಂಟೆ ಕಳೆದಿತ್ತು. ಬಳಿಕ ಅಲ್ಲಿ ವಿಧಿವಿಧಾನ ಪೂರೈಸಿ 3.45ರ ಸುಮಾರಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

‘ಫ್ಲೈಟ್‌ನಲ್ಲಿ ಬರುವುದು ಯಾಕೆ ಮದುವೆಗಾ?

ಕುಟುಂಬಸ್ಥರು, ಸ್ಥಳೀಯರ ಆಕ್ರೋಶ: ಪ್ರವೀಣ್‌ ಮಂಗಳವಾರ ರಾತ್ರಿ ಮೃತಪಟ್ಟಿದ್ದರೂ ಅಂತಿಮ ಯಾತ್ರೆ ಆರಂಭದ ವರೆಗೂ ಶಾಸಕರು, ಸಚಿವರು, ಸಂಸದರು ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ಭೇಟಿ ನೀಡಿಲ್ಲ ಎಂದು ಪ್ರವೀಣ್‌ ನೆಟ್ಟಾರು ಅವರ ಕುಟುಂಬಸ್ಥರು ಹಾಗೂ ಸ್ಥಳೀಯರು ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರವೀಣ್‌ ಅವರ ಕುಟುಂಬಕ್ಕೆ ಇನ್ನು ಯಾರಿದ್ದಾರೆ: ಹಿಂದುತ್ವಕ್ಕಾಗಿ ಪ್ರಾಣ ಅರ್ಪಿಸಿದ ಪ್ರವೀಣ್‌ ಅವರನ್ನು ನೋಡಲು ಇಲ್ಲಿಯ ತನಕ ಯಾರೂ ಬಂದಿಲ್ಲ. ನಮ್ಮ ಎಂಎಲ್‌ಎ ಎಲ್ಲಿ? ಇದು ಯಾವ ಹಿಂದುತ್ವ? ಹಿಂದುತ್ವಕ್ಕಾಗಿ ಸತ್ತರೆ ಇಲ್ಲಿ ಕೇಳುವವರು ಯಾರೂ ಇಲ್ಲ’ ಎಂದು ಅವರು ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಕೆಲ ಸ್ಥಳೀಯ ಮುಖಂಡರು ಅವರನ್ನು ಸಮಾಧಾನ ಪಡಿಸಲು ಯತ್ನಿಸಿ ‘ಶಾಸಕರು ಫ್ಲೈಟ್‌ನಲ್ಲಿ ಬರುತ್ತಿದ್ದಾರೆ. ಅವರು ಪ್ರವೀಣ್‌ ಅವರ ಮನೆಗೆ ಭೇಟಿ ನೀಡಲಿದ್ದಾರೆ’ ಎಂದು ತಿಳಿಸಿದರು. ಇದರಿಂದಲೂ ಸಮಾಧಾನಿತರಾಗದೆ ‘ಫ್ಲೈಟ್‌ನಲ್ಲಿ ಬರುವುದು ಯಾಕೆ ಮದುವೆಗಾ? ಮೀಡಿಯಾದವರು ಬೆಂಗಳೂರಿನಿಂದ ಬೆಳಗ್ಗೆಯೇ ಇಲ್ಲಿಗೆ ಮುಟ್ಟಿದ್ದಾರೆ. ನಮ್ಮ ಶಾಸಕರಿಗೆ ಬರಲು ಫ್ಲೈಟ್‌ ಬೇಕಾ?’ ಎನ್ನುತ್ತಾ ಆಕ್ರೋಶ ವ್ಯಕ್ತ ಪಡಿಸಿದರು.

ಬಸ್‌ಗೆ ಕಲ್ಲು ತೂರಾಟ:

ಪುತ್ತೂರು-ಮಂಗಳೂರು ಓಡಾಟ ನಡೆಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ನಗರದ ಬೊಳುವಾರು ಎಂಬಲ್ಲಿ ದುಷ್ಕರ್ಮಿಗಳು ಬುಧವಾರ ಬೆಳಗ್ಗೆ ಕಲ್ಲು ತೂರಾಟ ನಡೆಸಿದರು. ಇದರಿಂದಾಗಿ ಬಸ್ಸಿನ ಕಿಟಿಕಿಯ ಗಾಜಿಗೆ ಹಾನಿಯಾಗಿದೆ.

ತಡರಾತ್ರಿ ಪ್ರತಿಭಟನೆ, ಜಿಲ್ಲಾಧಿಕಾರಿ ಭೇಟಿ:

ಪ್ರವೀಣ್‌ ಮೃತದೇಹ ಇರಿಸಲಾಗಿದ್ದ ಪುತ್ತೂರಿನ ಪ್ರಗತಿ ಆಸ್ಪತ್ರೆಯ ಮುಂಭಾಗದಲ್ಲಿ ಪ್ರವೀಣ್‌ ಕುಟುಂಬಸ್ಥರು, ಅಭಿಮಾನಿಗಳು ನ್ಯಾಯಕ್ಕೆ ಆಗ್ರಹಿಸಿ ತಡರಾತ್ರಿಯ ತನಕ ಪ್ರತಿಭಟನೆ ನಡೆಸಿದರು. ರಾತ್ರಿ ಸುಮಾರು 9.30ರ ವೇಳೆಗೆ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಪ್ರವೀಣ್‌ ಅವರನ್ನು ತರಲಾಗಿತ್ತು. ಈ ವೇಳೆ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದರು.

ವಿವರ ತಿಳಿಯುತ್ತಿದ್ದಂತೆ ನೂರಾರು ಮಂದಿ ಆಸ್ಪತ್ರೆಯ ಮುಂದೆ ಜಮಾವಣೆಗೊಂಡಿದ್ದರು. ಮೃತರ ಕುಟುಂಬಕ್ಕೆ ಸರ್ಕಾರದಿಂದ ರು. 1 ಕೋಟಿ ಪರಿಹಾರ ನೀಡಬೇಕು ಹಾಗೂ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್‌ ನಂದನ್‌ ಹಾಗೂ ಜಿಲ್ಲಾ ಪೊಲೀಸ್‌ ಅಧೀಕ್ಷಕ ಹೃಷಿಕೇಶ್‌ ಸೋನಾವಣೆ ಅವರು ಪ್ರತಿಭಟನಾ ನಿರತರ ಜೊತೆಗೆ ಮಾತುಕತೆ ನಡೆಸಿದರು. ಆದರೆ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕು. ಇಲ್ಲದಿದ್ದಲ್ಲಿ ಮೃತದೇಹವನ್ನು ಕೊಂಡೊಯ್ಯುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು.

ತಡರಾತ್ರಿ 1.30ರ ವೇಳೆಗೆ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಪುತ್ತೂರಿಗೆ ಆಗಮಿಸಿ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದರು. ಜಿಲ್ಲಾಧಿಕಾರಿಗಳ ಭರವಸೆಯ ಬಳಿಕ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಯಿತು.

Latest Videos
Follow Us:
Download App:
  • android
  • ios