Dharam Singh: ಉಮಾ ಭಾರತಿಗಾಗಿ ವಿಶ್ವವಿದ್ಯಾಲಯವೇ ಜೈಲಾದ ಕತೆ: ಡಾ.ಡಿ.ವಿ.ಗುರುಪ್ರಸಾದ್
‘ಧರ್ಮಾತ್ಮ- ನಾನು ಕಂಡಂತೆ ಧರ್ಮಸಿಂಗ್’ - ವಿಕ್ರಂ ಪ್ರಕಾಶನ ಪ್ರಕಟಿಸಿರುವ ಈ ಕೃತಿಯನ್ನು ಹಿರಿಯ ಅಧಿಕಾರಿ ಡಾ ಡಿ.ವಿ.ಗುರುಪ್ರಸಾದ್ ಬರೆದಿದ್ದಾರೆ. ಕೃತಿಯ ಆಯ್ದ ಭಾಗ ಇಲ್ಲಿದೆ.
- ಡಾ.ಡಿ.ವಿ.ಗುರುಪ್ರಸಾದ್
2004ರ ಆಗಸ್ಟ್ 25ರ ಬೆಳಗಿನ 9 ಗಂಟೆಗೆ ಉಮಾಭಾರತಿಯವರಿದ್ದ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬಂದಾಗ ಇಡೀ ನಿಲ್ದಾಣವೇ ಅವರ ಬೆಂಬಲಿಗರಿಂದ ಕಿಕ್ಕಿರಿದಿತ್ತು. ರಾಷ್ಟ್ರಧ್ವಜವನ್ನು ತಮ್ಮ ಕೈಯಲ್ಲಿ ಹಿಡಿದಿದ್ದ ಉಮಾಭಾರತಿ ರೈಲಿನಿಂದ ಇಳಿಯುತ್ತಾ ಅದನ್ನು ಅತ್ತಿಂದಿತ್ತ ಬೀಸಿದರು. ‘ಭಾರತ್ ಮಾತಾ ಕೀ ಜೈ’ ಎನ್ನುವ ಜೈಕಾರ ಎಲ್ಲೆಲ್ಲೂ ಮೊಳಗಿತು. ಕರ್ನಾಟಕದ ಬಿಜೆಪಿಯ ಅಂದಿನ ರಾಜ್ಯಾಧ್ಯಕ್ಷರಾದ ಹೆಚ್ ಎನ್ ಅನಂತ್ ಕುಮಾರ್ ಉಮಾಭಾರತಿಯವರನ್ನು ಎದುರುಗೊಂಡು ಅವರನ್ನು ತಮ್ಮ ಕಾರಿನಲ್ಲಿ ಕರೆದೊಯ್ದರು. ಉಮಾಭಾರತಿ ತಮ್ಮ ಧರ್ಮಗುರುಗಳಾದ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಲು ಹೋಗಿದ್ದಾಗಿ ನಂತರ ನಮಗೆ ತಿಳಿಯಿತು. ಆ ಸಮಯದಲ್ಲಿ ಸ್ವಾಮೀಜಿ ರೈಲ್ವೆ ನಿಲ್ದಾಣದ ಬಳಿ ಇದ್ದ ಒಂದು ಕಲ್ಯಾಣ ಮಂಟಪದಲ್ಲಿ ತಂಗಿದ್ದರು.
ತಮ್ಮ ಸ್ನಾನ ಹಾಗೂ ಪೂಜೆಯನ್ನು ಮಾಡಿ ಮುಗಿಸಿದ ಉಮಾಭಾರತಿ ಸ್ವಾಮೀಜಿಯವರ ಆಶೀರ್ವಾದ ಪಡೆದು ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿ ನ್ಯಾಯಾಲಯದ ಮುಂದೆ ಶರಣಾದರು. ಆಕೆ ಜಾಮೀನನ್ನು ಕೇಳದೇ ಹೋದ ಕಾರಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಮುಂದೆ ಹಲವಾರು ಬೆಳವಣಿಗೆಗಳು ನಡೆದವು. ಪೊಲೀಸರು ಉಮಾಭಾರತಿಯವರನ್ನು ಹುಬ್ಬಳ್ಳಿಯ ಉಪ ಕಾರಾಗೃಹಕ್ಕೆ ಕರೆದೊಯ್ದಾಗ ಜೈಲು ಅಧಿಕಾರಿಗಳು ಆ ಜೈಲಿನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇರದ ಕಾರಣ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆದೊಯ್ಯಲು ಸೂಚಿಸಿದರು. ಅಂತೆಯೇ ಪೊಲೀಸ್ ತಂಡವು ಅವರನ್ನು ಬೆಳಗಾವಿಯತ್ತ ಕರೆದೊಯ್ದಿತು. ಪೊಲೀಸ್ ವಾಹನಗಳ ಹಿಂದೆಯೇ ನಾನು ಹೊರಟೆ.
ದೇಶದ ಇಚ್ಛಾಶಕ್ತಿಗೆ ಸಾಕ್ಷಿ ನಮಾಮಿ ಗಂಗೆ ಯಶಸ್ಸು: ಕೇಂದ್ರ ಸಚಿವ ಗಜೇಂದ್ರ ಸಿಂಗ್
ಉಮಾಭಾರತಿಯವರಿದ್ದ ವಾಹನ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಒಳಗಡೆ ಹೊರಟಾಗ ನನಗೆ ಆಶ್ಚರ್ಯವಾಯಿತು. ನಾನೂ ಬೆಂಗಾವಲು ವಾಹನಗಳ ಹಿಂದೆಯೇ ಹೊರಟೆ. ಅವರ ವಾಹನ ವಿಶ್ವವಿದ್ಯಾಲಯದ ಅತಿಥಿ ಗೃಹದ ಮುಂದೆ ನಿಂತಿತು. ಅವರನ್ನು ಅಲ್ಲಿಗೆ ಕರೆತಂದ ಕಾರಣದ ಬಗ್ಗೆ ನಾನು ಸ್ಥಳೀಯ ಪೊಲೀಸರನ್ನು ವಿಚಾರಿಸಿದಾಗ ಉಮಾಭಾರತಿಯವರು ತಾವು ಮಧ್ಯಾಹ್ನದ ಭೋಜನವನ್ನು ಮಾಡಬೇಕೆಂದು ಕೋರಿದ್ದ ಕಾರಣಕ್ಕಾಗಿ ಅಲ್ಲಿಗೆ ಕರೆದುಕೊಂಡು ಬರಲಾಯಿತೆಂದು ಉತ್ತರ ಬಂದಿತು. ಉಮಾಭಾರತಿ ತಮ್ಮ ಕೋಣೆಯನ್ನು ಹೊಕ್ಕ ಕೆಲವೇ ನಿಮಿಷಗಳ ನಂತರ ನಾಟಕೀಯ ಬೆಳವಣಿಗೆಗಳು ನಡೆದವು. ತಾವು ಯಾವುದೇ ಕಾರಣಕ್ಕಾಗಿಯೂ ಬೆಳಗಾವಿಯ ಹಿಂಡಲಗಾ ಕಾರಾಗೃಹಕ್ಕೆ ಹೋಗುವುದಿಲ್ಲವೆಂದೂ, ತಾವಿದ್ದ ಅತಿಥಿ ಗೃಹವನ್ನೇ ಕಾರಾಗೃಹವನ್ನಾಗಿ ಪರಿಗಣಿಸಬೇಕೆಂದು ಉಮಾಭಾರತಿ ಹಠ ಹಿಡಿದರು. ಡಿಜಿಪಿ ಬೋರ್ಕರ್ ಆದಿಯಾಗಿ ಅಲ್ಲಿದ್ದ ಯಾವ ಪೊಲೀಸ್ ಅಧಿಕಾರಿಗೂ ಮುಂದೇನು ಮಾಡಬೇಕು ಎಂದು ತಿಳಿಯದೆಕೈ ಕೈ ಹಿಸುಕಿಕೊಳ್ಳುತ್ತಿದ್ದರು. ಸುದ್ದಿ ತಿಳಿದ ನಾನು ಉಮಾಭಾರತಿಯವರ ಮನೋಗತವನ್ನು ತಿಳಿಯಲು ಅವರ ಕೋಣೆಗೆ ಹೋದೆ.
ಕೋಣೆಯಲ್ಲಿ ಅವರು ನೆಲದ ಮೇಲೆ ಒಂದು ಚಾಪೆಯನ್ನು ಹಾಕಿಕೊಂಡು ಅದರ ಮೇಲೆ ಕುಳಿತು ಧ್ಯಾನ ಮಗ್ನರಾಗಿದ್ದರು. ನನ್ನನ್ನು ಕಂಡ ಕೂಡಲೇ, ‘ನೀವು ಯಾರು’ ಎಂದರು. ‘ನಾನು ಈ ರಾಜ್ಯದ ಗುಪ್ತಚರ ದಳದ ಮುಖ್ಯಸ್ಥ’ ಎಂದು ಪರಿಚಯ ಮಾಡಿಕೊಂಡೆ. ಎದುರಿಗಿದ್ದ ಕುರ್ಚಿಯಲ್ಲಿ ಕೂರಲು ಅವರು ನನಗೆ ಸೂಚಿಸಿದರು. ಆದರೆ ನಾನು ಅವರ ಮುಂದಿದ್ದ ಚಾಪೆಯ ಮೇಲೆಯೇ ಕುಳಿತೆ. ‘ನೀವು ಹಿರಿಯ ಐಪಿಎಸ್ ಅಧಿಕಾರಿಯಾಗಿ ನೆಲದ ಮೇಲೆ ಕುಳಿತಿದ್ದೀರಲ್ಲಾ’ ಎಂದರು ಅವರು. ‘ಮಾಜಿ ಮುಖ್ಯಮಂತ್ರಿಯಾಗಿ ನೀವೇ ನೆಲದ ಮೇಲೆ ಕುಳಿತಿರುವಾಗ ಪೊಲೀಸ್ ಅಧಿಕಾರಿಯಾಗಿ ನನಗೆ ಕೆಳಗೆ ಕೂರುವುದು ಕಷ್ಟವಲ್ಲ’ ಎಂದೆ. ಅವರು ಮುಗುಳ್ನಕ್ಕರು.
‘ಊಟವಾಯಿತೇ’ ಎಂದು ವಿಚಾರಿಸಿದೆ. ‘ಆಯಿತು’ ಎಂದರು. ‘ಹಾಗಾದರೆ ಇಲ್ಲಿಂದ ಬೆಳಗಾವಿ ಜೈಲಿಗೆ ಏಕೆ ಹೋಗುತ್ತಿಲ್ಲ?’ ಎಂದು ಕೇಳಿದೆ. ‘ನನಗೆ ಹಿಂಡಲಗಾ ಕಾರಾಗೃಹಕ್ಕೆ ಹೋಗಲು ಇಷ್ಟವಿಲ್ಲ. ನಾನು ಇಲ್ಲಿಯೇ ಇರಬಯಸುತ್ತೇನೆ’ ಎಂದರು. ‘ನಿಮಗೆ ಕಾರಾಗೃಹಕ್ಕೆ ಹೋಗಲು ಏಕೆ ಇಷ್ಟವಿಲ್ಲ’ ಎಂದು ಕೇಳಿದೆ. ‘ಜೈಲಿನ ವಾಸನೆ ನನಗೆ ವಾಕರಿಕೆ ತರಿಸುತ್ತದೆ. ಅಲ್ಲದೇ ಕಾರಾಗೃಹದಲ್ಲಿ ಹೆಚ್ಚಿನ ಸೊಳ್ಳೆಗಳಿರುತ್ತದೆ’ ಎಂದರು. ‘ಮೇಡಂ, ನೀವು ವಿಚಾರಣಾಧೀನ ಖೈದಿಯಾಗಿರುವುದರಿಂದ ನಿಮಗೆ ವಿಶೇಷ ಸವಲತ್ತುಗಳನ್ನು ಕೊಡಲಾಗುತ್ತದೆ. ನಿಮಗೆ ಬೇಕಾದರೆ ಸೊಳ್ಳೆಪರದೆಯನ್ನು ಕೊಡುವ ವ್ಯವಸ್ಥೆಯನ್ನು ಮಾಡಿಸುತ್ತೇವೆ. ನನಗೆ ತಿಳಿದಂತೆ ಇದೇ ಅತಿಥಿ ಗೃಹದಲ್ಲಿಯೇ ಹಿಂಡಲಗಾ ಕಾರಾಗೃಹಕ್ಕಿಂತ ಹೆಚ್ಚು ಸೊಳ್ಳೆಗಳಿವೆ’ ಎಂದೆ. ‘ನೀವು ಏನೇ ಮಾಡಿದರೂ ನಾನು ಕಾರಾಗೃಹಕ್ಕೆ ಹೋಗುವುದಿಲ್ಲ. ನೀವು ಈ ಬಗ್ಗೆ ನಿಮ್ಮ ಮುಖ್ಯಮಂತ್ರಿ ಹಾಗೂ ಮೇರೆ ಭಾಯಿಸಾಬ್ ಧರ್ಮಸಿಂಗ್ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಿ’ ಎಂದರು. ಉಮಾಭಾರತಿಯವರು ಫೋಪಾಲ್‌ನಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡುವ ಮುನ್ನವೇ ಅವರು ಮುಖ್ಯಮಂತ್ರಿ ಧರ್ಮಸಿಂಗ್ ಜೊತೆ ಮಾತನಾಡಿದ್ದಾಗಿ ನನಗೆ ತಿಳಿದಿತ್ತು. ಆದರೆ ಏನನ್ನು ಮಾತನಾಡಿದ್ದಾರೆ ಎನ್ನುವುದು ತಿಳಿದಿರಲಿಲ್ಲ.
ಆ ಸಮಯದಲ್ಲಿ ನನಗೆ ತಿಳಿಯದೆ ಹೋಗಿದ್ದ ಇನ್ನೊಂದು ವಿಷಯವೇನೆಂದರೆ ಹುಬ್ಬಳ್ಳಿ ನ್ಯಾಯಾಲಯದ ಮುಂದೆ ಉಮಾಭಾರತಿ ಹಾಜರಾಗಿ ಜಾಮೀನನ್ನು ಕೊಡದೇ ನ್ಯಾಯಾಂಗ ಬಂಧನಕ್ಕೆ ಒಳಗಾದಾಗ ಅವರ ಪರ ವಾದ ಮಾಡಿದ ವಕೀಲ ದೊರೈರಾಜು ಧಾರವಾಡ ಜಿಲ್ಲೆಯ ಯಾವುದಾದರೊಂದು ಅತಿಥಿ ಗೃಹವನ್ನೇ ಜೈಲು ಎಂದು ಘೋಷಿಸಿ ಅಲ್ಲಿಗೆ ಅವರನ್ನು ಕಳುಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದರೆಂದೂ ಈ ರೀತಿ ಮಾಡುವ ಅಧಿಕಾರ ತನಗೆ ಇಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದರು ಎಂದು. ಉಮಾಭಾರತಿ ಇದ್ದ ಕಾರು ಕೃಷಿ ವಿಶ್ವಿವಿದ್ಯಾಲಯದ ಹತ್ತಿರ ಬಂದಾಗ ಊಟ ಮಾಡುವ ನೆವದಿಂದ ಅತಿಥಿ ಗೃಹಕ್ಕೆ ಹೋಗಿದ್ದು ಅವರ ವಕೀಲರು ಮಾಡಿದ ಮಾಸ್ಟರ್ ಪ್ಲಾನ್ ಇದ್ದಿರಬಹುದು ಎಂದು ಆಗ ನನಗನ್ನಿಸಿತು.
ಉಮಾಭಾರತಿಯವರ ಕೋಣೆಯಿಂದ ನಾನು ಹೊರಬಂದ ಕೂಡಲೇ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರಿಗೆ ಫೋನ್ ಮೂಲಕ ನಡೆದ ವಿಷಯವನ್ನು ತಿಳಿಸಿದೆ. ಅವರು ತಕ್ಷಣವೇ ಯಾವ ಆದೇಶವನ್ನು ನೀಡಲಿಲ್ಲ. ಅಷ್ಟರಲ್ಲಿ ಅತಿಥಿ ಗೃಹದಲ್ಲಿದ್ದ ಹೆಚ್ ಎನ್ ಅನಂತ್ ಕುಮಾರ್ ಹಾಗೂ ಬಿ ಎಸ್ ಯಡಿಯೂರಪ್ಪ ನನ್ನನ್ನು ಕಂಡು, ‘ನೀವು ಹೇಗಾದರೂ ಮಾಡಿ ಧರ್ಮಸಿಂಗ್ ಜೊತೆ ಮಾತನಾಡಿ ಈ ಅತಿಥಿ ಗೃಹವನ್ನು ಕಾರಾಗೃಹವನ್ನಾಗಿ ಮಾಡಿ ಘೋಷಿಸುವ ಆದೇಶವನ್ನು ಹೊರಡಿಸಿ’ ಎಂದರು. ‘ಸರ್, ನಿಮ್ಮಿಬ್ಬರಿಗೂ ಸಾಹೇಬರ ಪರಿಚಯ ಚೆನ್ನಾಗಿಯೇ ಇದೆ. ತಾವೇ ಏಕೆ ಕರೆ ಮಾಡಬಾರದು’ ಎಂದೆ. ‘ಮುಖ್ಯಮಂತ್ರಿಗಳು ದೂರವಾಣಿ ಕರೆಗೆ ಸಿಗುತ್ತಿಲ್ಲ’ ಎಂದು ಅವರು ಹೇಳಿದರು.
ಅಷ್ಟರಲ್ಲಿ ಗೃಹ ಕಾರ್ಯದರ್ಶಿ ಬ್ರಹ್ಮದತ್ ನನಗೆ ಕರೆ ಮಾಡಿ ಈ ಸಮಸ್ಯೆಯ ಬಗ್ಗೆ ಡಿಜಿಪಿ ಬೋರ್ಕರ್ ಹಾಗೂ ಸುಭಾಷ್ ಭರಣಿಯವರ ಅಭಿಪ್ರಾಯ ಬೇಕು ಎಂದು ತಿಳಿಸಿದರು. ನಾನು ಈ ಇಬ್ಬರೂ ಅಧಿಕಾರಿಗಳಿಗಾಗಿ ಅಲ್ಲೆಲ್ಲಹುಡುಕಿದೆ. ಅವರು ಆ ಅತಿಥಿ ಗೃಹದಿಂದ ಆಗಲೇ ಹೊರಟುಹೋಗಿದ್ದಾರೆಂದು ತಿಳಿಯಿತು. ಕೆಲ ನಿಮಿಷಗಳ ನಂತರ ನಾನೇ ಬ್ರಹ್ಮದತ್‌ರಿಗೆ ಕರೆ ಮಾಡಿ ‘ಡಿಜಿಪಿಯಾಗಲೀ, ಭರಣಿಯವರಾಗಲೀ ನನ್ನ ಕೈಗೆ ಸಿಗುತ್ತಿಲ್ಲ’ ಎಂದು ಉತ್ತರಿಸಿದೆ. ಬ್ರಹ್ಮದತ್, ‘ಮುಖ್ಯಮಂತ್ರಿಗಳು ನನ್ನ ಪಕ್ಕದಲ್ಲಿಯೇ ಇದ್ದಾರೆ. ನೀವು ಅವರ ಜೊತೆಯೇ ಮಾತನಾಡಿ’ ಎಂದರು. ನಾನು ಧರ್ಮಸಿಂಗ್‌ರಿಗೆ ಹೇಳಿದ್ದಿಷ್ಟು,‘ಸರ್ಕಾರದ ಮುಂದಿರುವುದು ಕೇವಲ ಎರಡೇ ಆಯ್ಕೆಗಳು. ಮೊದಲನೆಯದು ಬಿಜೆಪಿ ಮುಖಂಡರು ಮಾಡಿರುವ ಮನವಿಗೆ ಓಗೊಟ್ಟು ಕೃಷಿ ವಿಶ್ವವಿದ್ಯಾಲಯದ ಅತಿಥಿ ಗೃಹವನ್ನೇ ಕಾರಾಗೃಹವೆಂದು ಘೋಷಿಸುವುದು. ಎರಡನೆಯದು ಬಲವಂತವಾಗಿ ಉಮಾಭಾರತಿಯವರನ್ನು ಅತಿಥಿ ಗೃಹದಿಂದ ಕರೆದೊಯ್ದು ಹಿಂಡಲಗಾ ಕಾರಾಗೃಹಕ್ಕೆ ಬಿಟ್ಟು ಬರುವುದು. ಒಂದು ವೇಳೆ ಬಲವಂತವಾಗಿ ಉಮಾಭಾರತಿಯವರನ್ನು ಎಳೆದುಕೊಂಡು ಹೋದರೆ ದೊಡ್ಡ ಕಾನೂನು ಸಮಸ್ಯೆ ಎದುರಾಗಬಹುದು. ನಾಳೆ ಕರ್ನಾಟಕ ಬಂದ್ ಆಚರಿಸಲು ಈಗಾಗಲೇ ಬಿಜೆಪಿ ಕರೆ ನೀಡಿರುವುದರಿಂದ, ಉಮಾಭಾರತಿಯವರನ್ನು ಬಲವಂತವಾಗಿ ಹಿಂಡಲಗಾಕ್ಕೆ ಕಳುಹಿಸಿದರೆ ತೀವ್ರ ಪರಿಸ್ಥಿತಿ ಎದುರಾಗಬಹುದು’ ಎಂದೆ.
ಸ್ವಾವಲಂಬಿ ದೇಶಕ್ಕೆ ಬುನಾದಿ ಹಾಕಿದ ವಾಜಪೇಯಿ: ಸಚಿವ ನಾಗೇಶ್
‘ಫೋನನ್ನು ನೀವು ಯಡಿಯೂರಪ್ಪನವರ ಕೈಗೆ ಕೊಡಿ’ ಎಂದರು ಧರ್ಮಸಿಂಗ್. ನಾನು ಅಲ್ಲೇ ನಿಂತಿದ್ದ ಯಡಿಯೂರಪ್ಪನವರಿಗೆ ಫೋನನ್ನು ಹಸ್ತಾಂತರಿಸಿದೆ. ಧರ್ಮಸಿಂಗ್ ಜೊತೆ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಹತ್ತು ನಿಮಿಷ ಮಾತನಾಡಿದರು. ಆ ನಂತರ ನನಗೆ ‘ಥಾಂಕ್ಯೂ’ ಎಂದು ಹೇಳಿ ಹೊರಟುಹೋದರು. ಅಷ್ಟರಲ್ಲಾಗಲೇ ಕತ್ತಲಾಗಿತ್ತು. ಸ್ಥಳದಲ್ಲಿ ಯಾವ ಹಿರಿಯ ಪೊಲೀಸ್ ಅಧಿಕಾರಿಯೂ ಹಾಜರಿರಲಿಲ್ಲ. ರಾತ್ರಿ ಸುಮಾರು ಏಳು ಗಂಟೆಗೆ ಧಾರವಾಡದ ಜಿಲ್ಲಾಧಿಕಾರಿ ನನ್ನ ಬಳಿ ಬಂದು ಸರ್ಕಾರವು ಇದೇ ಅತಿಥಿ ಗೃಹವನ್ನು ತಾತ್ಕಾಲಿಕ ಕಾರಾಗೃಹವನ್ನಾಗಿ ಪರಿವರ್ತಿಸಿ ಆದೇಶ ಹೊರಡಿಸಿದೆ ಎಂಬ ಫ್ಯಾಕ್ಸ್‌ನ್ನು ನನಗೆ ತೋರಿಸಿದರು. ಸದ್ಯ ದೊಡ್ಡದಾಗಬಹುದಾಗಿದ್ದ ಸಮಸ್ಯೆಯನ್ನು ಸರಳವಾಗಿ ನಮ್ಮ ಮುಖ್ಯಮಂತ್ರಿ ಬಗೆಹರಿಸಿದರು ಎಂದು ಅವರಿಗೆ ಉತ್ತರಿಸಿದೆ.
ಕೆಲವೇ ದಿನಗಳ ನಂತರ ರಾಜ್ಯ ಸರ್ಕಾರ ಉಮಾಭಾರತಿಯವರ ಮೇಲೆ ಹೊರಡಿಸಿದ್ದ ಆರೋಪ ಪಟ್ಟಿಯನ್ನು ಹಿಂದಕ್ಕೆ ಪಡೆಯಿತು. ಆ ನಂತರ ಉಮಾಭಾರತಿ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದಿಂದ ಪಂಜಾಬಿನ ಜಲಿಯಾನ್ ವಾಲಾ ಭಾಗ್‌ವರೆಗೆ ತಮ್ಮ ತಿರಂಗಾ ಯಾತ್ರೆಯನ್ನು ಆರಂಭಿಸಿದರು. ಆದರೆ ಅವರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯ ಪಟ್ಟತಪ್ಪಿ ಹೋಗಿತ್ತು. ವಿಶೇಷವೆಂದರೆ ರಾಣಿ ಚೆನ್ನಮ್ಮ ವೃತ್ತದ ಪಕ್ಕದಲ್ಲಿಯೇ ಹುಬ್ಬಳ್ಳಿಯ ಈದ್ಗಾ ಮೈದಾನವಿದೆ. ಉಮಾಭಾರತಿಯವರ ತಿರಂಗಾ ಯಾತ್ರೆಗೆ ಚಾಲನೆ ಕೊಟ್ಟವರೇ ಎಲ್.ಕೆ.ಅಡ್ವಾಣಿ.ಕಡೆಗೂ ಧರ್ಮಸಿಂಗ್‌ರ ಚಾಣಾಕ್ಷತನದಿಂದ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಉಮಾಭಾರತಿ ಪ್ರಕರಣ ಮುಕ್ತಾಯ ಕಂಡಿತು.