Asianet Suvarna News Asianet Suvarna News

ದೇಶದ ಇಚ್ಛಾಶಕ್ತಿಗೆ ಸಾಕ್ಷಿ ನಮಾಮಿ ಗಂಗೆ ಯಶಸ್ಸು: ಕೇಂದ್ರ ಸಚಿವ ಗಜೇಂದ್ರ ಸಿಂಗ್‌

ನಮಾಮಿ ಗಂಗೆ ಯೋಜನೆಗೆ ಲಭಿಸಿರುವ ಯಶಸ್ಸು ಇಂದು ದೇಶದ ಇತರ ನದಿಗಳ ಪುನರುಜ್ಜೀವನಕ್ಕೆ ಮಾದರಿಯಾಗಿದೆ. ಗಂಗಾನದಿಯಲ್ಲಿ ಈಗ ಡಾಲ್ಫಿನ್‌ಗಳು, ಮೊಸಳೆಗಳು, ನೀರುನಾಯಿಗಳು ಮತ್ತು ಇತರ ಜಲಚರ ಪ್ರಭೇದಗಳು ಕೂಡ ಕಾಣಸಿಗುತ್ತಿವೆ. ಗಂಗಾ ಜಲಾನಯನ ಪ್ರದೇಶದಲ್ಲಿ 30,000 ಹೆಕ್ಟೇರ್‌ ಅರಣ್ಯೀಕರಣ, ಜಲ ಪುನಶ್ಚೇತನ, ಜೌಗು ಪ್ರದೇಶ ಸಂರಕ್ಷಣೆ, ಸಾಂಪ್ರದಾಯಿಕ ಜಲಮೂಲಗಳ ಪುನಶ್ಚೇತನ ಕೂಡ ಸಾಧ್ಯವಾಗಿದೆ.

Special Article By Union Minster Gajendra Singh Shekhawat Over Namami Gange Success gvd
Author
First Published Jan 5, 2023, 6:23 AM IST

ಗಜೇಂದ್ರ ಸಿಂಗ್‌ ಶೇಖಾವತ್‌, ಕೇಂದ್ರ ಜಲಶಕ್ತಿ ಸಚಿವ

ಆಗಸ್ಟ್‌ 7, 2021 ಭಾರತಕ್ಕೆ ಒಂದು ಮಹತ್ವಪೂರ್ಣ ಕ್ಷಣ. ನೀರಜ್‌ ಚೋಪ್ರಾ ಎಂಬ ಅಥ್ಲೀಟ್‌ನ ಜಾವೆಲಿನ್‌ ಟೋಕಿಯೊ ಒಲಿಂಪಿಕ್‌ನಲ್ಲಿ ಚಿನ್ನದ ಪದಕವನ್ನು ಪಡೆಯುವ ಮೂಲಕ ನಮಗೆ ಹೆಮ್ಮೆ ತಂದಿತು. ನಮಾಮಿ ಗಂಗೆ ಯೋಜನೆಗಾಗಿ ಹರಾಜು ಮಾಡುವ ಉದ್ದೇಶಕ್ಕಾಗಿ ಈ ಚಾಂಪಿಯನ್‌ ತನ್ನ ಜಾವೆಲಿನ್‌ ಕೊಡುಗೆ ನೀಡಿದ ವಿಷಯವು ಪ್ರಚಾರಕ್ಕೆ ಬರಲಿಲ್ಲ. ಪ್ರಧಾನ ಮಂತ್ರಿಗಳು ಪ್ರಾರಂಭಿಸಿದ ಸಂಪ್ರದಾಯ ಇದು. ನಮಾಮಿ ಗಂಗೆ ಯೋಜನೆಗಾಗಿ ಪ್ರಧಾನ ಮಂತ್ರಿಗಳು ತಾವು ಸ್ವೀಕರಿಸಿದ ಉಡುಗೊರೆಗಳನ್ನು ಹರಾಜು ಮಾಡುತ್ತಾ ಬಂದಿದ್ದಾರೆ. ಈ ಯೋಜನೆಯ ಬಗ್ಗೆ ಅವರ ವೈಯಕ್ತಿಕ ಒಳಗೊಳ್ಳುವಿಕೆ, ಸರ್ಕಾರದ ಅಪಾರ ಬದ್ಧತೆ ಮತ್ತು ನಂಬಿಕೆಯನ್ನು ಇದು ಒತ್ತಿಹೇಳುತ್ತದೆ. ಅಂತೆಯೇ, 15 ಡಿಸೆಂಬರ್‌ 2022ರಂದು ವಿಶ್ವಸಂಸ್ಥೆಯು ವಿಶ್ವದ ಮೊದಲ 10 ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ ಕಾರ್ಯಕ್ರಮಗಳಲ್ಲಿ ನಮಾಮಿ ಗಂಗೆ ಯೋಜನೆಯೂ ಒಂದು ಎಂದು ಗುರುತಿಸಿತು. ಆಗ ಭಾರತದ ಬದ್ಧತೆಗೆ ಇನ್ನೊಂದು ಹಿರಿಮೆ ಲಭಿಸಿತು. ಪ್ರಧಾನಮಂತ್ರಿಗಳು ತಮ್ಮ ಮನ್‌ ಕಿ ಬಾತ್‌ ಭಾಷಣದಲ್ಲಿ ಇದು ದೇಶದ ಇಚ್ಛಾಶಕ್ತಿ ಮತ್ತು ದಣಿವರಿಯದ ಪ್ರಯತ್ನಗಳಿಗೆ ಪುರಾವೆ ಮತ್ತು ಜಗತ್ತಿಗೆ ಹೊಸ ಮಾರ್ಗವನ್ನು ತೋರಿಸುತ್ತದೆ ಎಂದು ಸರಿಯಾಗಿ ಹೇಳಿದ್ದಾರೆ.

ಏನಿದು ನಮಾಮಿ ಗಂಗೆ ಯೋಜನೆ?: ನಮಾಮಿ ಗಂಗೆಯ ಕಥೆಯು 2014ರಲ್ಲಿ ಗಂಗಾ ನದಿಯನ್ನು ಅದರ ಗತವೈಭವಕ್ಕೆ ಮರುಸ್ಥಾಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರಿಂದ ಆರಂಭವಾಗುತ್ತದೆ. ಗಂಗೆಯ ಅನಿರ್ಬಂಧಿತ ಹರಿವು ಮತ್ತು ನೈರ್ಮಲ್ಯೀಕರಣಕ್ಕಾಗಿ ಈ ಯೋಜನೆ ಆರಂಭಿಸಲಾಯಿತು. ಅದಕ್ಕೆ ಜನ್‌ ಗಂಗಾ (ಸಾರ್ವಜನಿಕ ಭಾಗವಹಿಸುವಿಕೆ ಮತ್ತು ಜನರು ಹಾಗೂ ನದಿಯ ನಡುವೆ ಸಂಪರ್ಕ), ಜ್ಞಾನ ಗಂಗಾ (ಸಂಶೋಧನೆ ಮತ್ತು ಜ್ಞಾನ ನಿರ್ವಹಣೆ) ಮತ್ತು ಅರ್ಥ ಗಂಗಾ (ಸ್ವಯಂ ಸುಸ್ಥಿರ ಆರ್ಥಿಕ ಮಾದರಿ) ಎಂಬ ಮೂರು ಮಾದರಿಗಳ ಮೂಲಕ ಇನ್ನಷ್ಟುಬಲ ತುಂಬಲಾಯಿತು. ಇದುವರೆಗೆ ನಮಾಮಿ ಗಂಗೆ ಯೋಜನೆಯಡಿ ಕೊಳಚೆ ನೀರು ಸಂಸ್ಕರಣೆ ಮೂಲಸೌಕರ್ಯ, ನದಿ ತಟದ ಅಭಿವೃದ್ಧಿ, ನದಿ ಮೇಲ್ಮೈ ಸ್ವಚ್ಛತೆ, ಜೈವಿಕ ವೈವಿಧ್ಯ ರಕ್ಷಣೆ, ಅರಣ್ಯೀಕರಣ, ಜನಜಾಗೃತಿ, ಕೈಗಾರಿಕಾ ತ್ಯಾಜ್ಯದ ಮೇಲೆ ನಿಗಾ, ಅರ್ಥ ಗಂಗಾ ಸೇರಿದಂತೆ 32,898 ಕೋಟಿ ರುಪಾಯಿಗಳ 406 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. 

ಸ್ವಾವ​ಲಂಬಿ ದೇಶಕ್ಕೆ ಬುನಾದಿ ಹಾಕಿದ ವಾಜಪೇಯಿ: ಸಚಿ​ವ ನಾಗೇ​ಶ್‌

ಈ ಪೈಕಿ 225 ಯೋಜನೆಗಳು ಪೂರ್ಣಗೊಂಡಿದ್ದು, ಉಳಿದವು ಕಾರ್ಯಗತಗೊಳ್ಳುವ ವಿವಿಧ ಹಂತಗಳಲ್ಲಿವೆ. ಗಂಗಾ ಜಲಾನಯನ ಪ್ರದೇಶದಲ್ಲಿ ದಿನಕ್ಕೆ 5,270 ದಶಲಕ್ಷ ಲೀಟರ್‌ (ಎಂಎಲ…ಡಿ) ತ್ಯಾಜ್ಯ ನೀರಿನ ಸಂಸ್ಕರಣಾ ಸಾಮರ್ಥ್ಯ ಮತ್ತು 5,211 ಕಿ.ಮೀ. ಒಳಚರಂಡಿ ಜಾಲವನ್ನು ರಚಿಸಲು ಸುಮಾರು 177 ಒಳಚರಂಡಿ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಒಳಚರಂಡಿ ನಿರ್ವಹಣೆಯ ಹಲವಾರು ಯೋಜನೆಗಳು ಈಗಾಗಲೇ ಪೂರ್ಣಗೊಂಡಿವೆ. ನವೀಕೃತ ಚೈತನ್ಯ ಮತ್ತು ಅಮೂಲ್ಯ ಅನುಭವದೊಂದಿಗೆ ಆರಂಭಿಕ ಹಂತದ ಬಹುಪಾಲು ಭಾಗವನ್ನೂ ಒಳಗೊಂಡು ನಾವೀಗ ನಮಾಮಿ ಗಂಗೆ ಭಾಗ 2 ಆರಂಭಿಸುತ್ತಿದ್ದೇವೆ. ಅದನ್ನು ಗಂಗಾ ನದಿಯ ಉಪನದಿಗಳಾದ ಯಮುನಾ ನದಿ ಮತ್ತು ಕಾಳಿ, ಗೋಮತಿ, ಹಿಂದೋನ್‌, ದಾಮೋದರ್‌ ಮುಂತಾದ ಉಪನದಿಗಳಿಗೆ ವಿಸ್ತರಿಸಲಾಗಿದೆ.

ಯೋಜನೆಯಲ್ಲಿ ಏನೇನು ಸೇರಿದೆ?: ಈ ಕಾರ್ಯಕ್ರಮದ ಯಶಸ್ಸಿನ ಹಿಂದಿನ ಪ್ರಮುಖ ಕಾರಣವೆಂದರೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಹೈಬ್ರಿಡ್‌ ಆನ್ಯುಯಿಟಿ ಮೋಡ್‌ (ಎಚ್‌ಎಎಂ-ಪಿಪಿಪಿ) ಮಾದರಿ. ಇದು ತ್ಯಾಜ್ಯನೀರಿನ ಸಂಸ್ಕರಣೆ ವಿಷಯದಲ್ಲಿ ಹೊಚ್ಚ ಹೊಸ ವಿಧಾನವಾಗಿದೆ. ಎಚ್‌ಎಎಂ ಮಾದರಿಯಲ್ಲಿ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ ವೆಚ್ಚದ ಶೇ.40ರವರೆಗೆ ಸರ್ಕಾರವು ಅದನ್ನು ನಿರ್ವಹಿಸುವವರಿಗೆ ಪಾವತಿಸುತ್ತದೆ. ಉಳಿದ ಹಣವನ್ನು 15 ವರ್ಷಗಳ ಅವಧಿಯಲ್ಲಿ ಅವರ ಕಾರ್ಯಕ್ಷಮತೆಯ ಮಾನದಂಡಗಳನ್ನು ನಿರ್ಣಯಿಸಿದ ನಂತರ ಬಿಡುಗಡೆ ಮಾಡಲಾಗುತ್ತದೆ. ಅದೇ ರೀತಿ, ಒನ್‌ ಸಿಟಿ ಒನ್‌ ಆಪರೇಟರ್‌ ಮಾಡೆಲ… (ಒಂದು ನಗರ, ಒಂದು ನಿರ್ವಹಣೆ ಮಾಡುವವರು) ಪರಿಚಯಿಸಲಾಗಿದೆ. ಅದು ನಗರದಾದ್ಯಂತ ಒಳಚರಂಡಿ ಸಂಸ್ಕರಣೆಗೆ ಒಂದೇ ಕಡೆ ಪರಿಹಾರವನ್ನು ಕಲ್ಪಿಸುತ್ತದೆ. 

ಒಂದೆಡೆ ಎಚ್‌ಎಎಂ ನಿರ್ವಾಹಕರಿಂದ ಬದ್ಧತೆ, ಕಾರ್ಯಕ್ಷಮತೆ ಮತ್ತು ಸುಸ್ಥಿರತೆಯನ್ನು ಖಾತ್ರಿಗೊಳಿಸಿದರೆ, ಒನ್‌ ಸಿಟಿ ಒನ್‌ ಆಪರೇಟರ್‌ ಮಾಡೆಲ್‌ ಏಕ ಮಾಲಿಕತ್ವ ಮತ್ತು ಹೊಣೆಗಾರಿಕೆಯನ್ನು ಖಾತ್ರಿಗೊಳಿಸುತ್ತದೆ. ಗಂಗಾ ನದಿಯ ತಟದಲ್ಲಿ ಕೈಗಾರಿಕಾ ಮಾಲಿನ್ಯ ನಿವಾರಣೆ ನಿಟ್ಟಿನಲ್ಲಿ ಹೆಚ್ಚು ಮಾಲಿನ್ಯಕಾರಕ ಕೈಗಾರಿಕೆಗಳನ್ನು (ಜಿಪಿಐ) ಗುರುತಿಸಲಾಗಿದೆ. ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಿಂದ ಅವುಗಳ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಇದು ಕೈಗಾರಿಕೆಗಳಿಂದ ತ್ಯಾಜ್ಯ ನೀರು ಗಂಗೆಗೆ ನೇರವಾಗಿ ಸೇರುವುದನ್ನು ತಪ್ಪಿಸುತ್ತಿದೆ. ಕಾನ್ಪುರದಲ್ಲಿ ಜಜಮೌ ಟ್ಯಾನರಿ ಕ್ಲಸ್ಟರ್‌ಗಾಗಿ 20 ಎಂಎಲ್‌ಡಿ ಸಾಮಾನ್ಯ ತಾಜ್ಯ ಸಂಸ್ಕರಣಾ ಘಟಕಗಳನ್ನು (ಸಿಇಟಿಪಿ) ನಿರ್ಮಿಸಲಾಗಿದೆ. ಈ ವಿಧದ ಘಟಕ ದೇಶದಲ್ಲಿಯೇ ದೊಡ್ಡದು. ಈ ಬದಲಾವಣೆಗೆ ಅನುಕೂಲವಾಗಲು, ನಮಾಮಿ ಗಂಗೆ ಕಾರ್ಯಕ್ರಮದ ಅಡಿಯಲ್ಲಿ ಮೊದಲ ಬಾರಿಗೆ ತನ್ನ ಸ್ವಂತ ನೀರಿನ ಮೇಲೆ ನದಿಗೆ ಇರುವ ಹಕ್ಕನ್ನು ಅಕ್ಟೋಬರ್‌ 2018ರಲ್ಲಿ ಗುರುತಿಸಲಾಯಿತು.

ಗಂಗೆ ಶುದ್ಧೀಕರಣಕ್ಕೆ ಯಶಸ್ಸು: ನಮಾಮಿ ಗಂಗೆ ಯೋಜನೆಗೆ ಲಭಿಸಿರುವ ಯಶಸ್ಸು ದೇಶದ ಇತರ ನದಿಗಳಿಗೆ ಮಾದರಿ ನದಿ ಪುನರುಜ್ಜೀವನ ಕಾರ್ಯಕ್ರಮವಾಗಿ ಪರಿಗಣಿತವಾಗುತ್ತಿದೆ. ಹಲವಾರು ಸ್ಥಳಗಳಲ್ಲಿ ಗಂಗೆಯ ನೀರಿನ ಗುಣಮಟ್ಟದಲ್ಲಿನ ಗಮನಾರ್ಹ ಸುಧಾರಣೆಯು ಈ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ. 2018ರಲ್ಲಿ ನದಿಯ ಮುಖ್ಯ ಪ್ರದೇಶದ ಮೇಲೆ ನಾಲ್ಕು ಕಲುಷಿತ ಭಾಗಗಳಿದ್ದವು. 2021ರಲ್ಲಿ ಈ ಕಲುಷಿತ ಪ್ರದೇಶಗಳು ಸ್ವಚ್ಛವಾಗಿವೆ. ಗಂಗೆಯ ಪರಿಸರ ಶುದ್ಧೀಕರಣವು ಭಾರತದ ಜನರ ಆಧ್ಯಾತ್ಮಿಕ ಶುದ್ಧೀಕರಣಕ್ಕೂ ಸಹಾಯ ಮಾಡಿದೆ. ಕುಂಭಮೇಳದ ಸಮಯದಲ್ಲಿ 20 ಕೋಟಿಗೂ ಹೆಚ್ಚು ಜನರು ನದಿಯಲ್ಲಿ ಮಾಡಿದ ಸ್ನಾನವೇ ಇದಕ್ಕೆ ಸಾಕ್ಷಿ. 

ಗಂಗಾನದಿಯಲ್ಲಿ ಈಗ ಡಾಲ್ಫಿನ್‌ಗಳು, ಮೊಸಳೆಗಳು, ನೀರುನಾಯಿಗಳು ಮತ್ತು ಇತರ ಜಲಚರ ಪ್ರಭೇದಗಳು ಕೂಡ ಕಾಣಸಿಗುತ್ತಿವೆ. ರಾಷ್ಟ್ರೀಯ ರಾಂಚಿಂಗ್‌ ಕಾರ್ಯಕ್ರಮ-2022ರ ಅಡಿಯಲ್ಲಿ ಸ್ಥಳೀಯ ಮೀನು ಪ್ರಭೇದಗಳನ್ನು ಪುನರುಜ್ಜೀವಗೊಳಿಸುವಂತಹ ಸೂಕ್ಷ್ಮ ಕಾರ್ಯಗಳನ್ನು ಕೂಡ ಕೈಗೆತ್ತಿಕೊಳ್ಳಲಾಗಿದೆ. ಹೆಚ್ಚು ಲಾಭದಾಯಕ ಹಿಲ್ಸಾ ಮೀನಿನ ಹೆಚ್ಚಿದ ಸಂಖ್ಯೆ ಮತ್ತು ನಂತರ ನಮ್ಮ ಮೀನುಗಾರರ ಸಮೃದ್ಧಿಯಲ್ಲಿ ಈ ವಿಧಾನದ ಫಲಿತಾಂಶವು ಹೆಚ್ಚು ಗಮನಾರ್ಹವಾಗಿದೆ. ಬಹುಮುಖಿ ಮತ್ತು ಸಮಗ್ರ ಸ್ವರೂಪದ ಕಾರ್ಯಕ್ರಮವು ಗಂಗಾ ಜಲಾನಯನ ಪ್ರದೇಶದಲ್ಲಿ 30,000 ಹೆಕ್ಟೇರ್‌ ಅರಣ್ಯೀಕರಣ, ಜಲ ಪುನಶ್ಚೇತನ, ಜೌಗು ಪ್ರದೇಶ ಸಂರಕ್ಷಣೆ, ಸಾಂಪ್ರದಾಯಿಕ ಜಲಮೂಲಗಳ ಪುನಶ್ಚೇತನ ಮತ್ತು ಸಂಸ್ಕರಿಸಿದ ನೀರಿನ ಮರುಬಳಕೆಗೆ ಕಾರಣವಾಗಿದೆ.

ಇನ್ನಷ್ಟು ಉಪಯೋಜನೆಗಳ ಸೇರ್ಪಡೆ: 2019ರಲ್ಲಿ ರಾಷ್ಟ್ರೀಯ ಗಂಗಾ ಮಂಡಳಿಯ ಮೊದಲ ಸಭೆಯಲ್ಲಿ ಪ್ರಧಾನ ಮಂತ್ರಿಯವರು ಅರ್ಥ ಗಂಗಾ ಪರಿಕಲ್ಪನೆಯನ್ನು ಪ್ರತಿಪಾದಿಸಿದರು. ಅರ್ಥ ಗಂಗಾದ ಪ್ರಮುಖ ಕಲ್ಪನೆಯು ಜನರು ಮತ್ತು ಗಂಗಾ ನದಿಯನ್ನು ಅರ್ಥವ್ಯವಸ್ಥೆಯ ಸೇತುವೆಯ ಮೂಲಕ ಜೋಡಿಸುವುದಾಗಿದೆ. ಜನ್‌ ಗಂಗಾ ಮತ್ತು ಅರ್ಥ ಗಂಗಾ ಎರಡೂ ಈಗ ನಮಾಮಿ ಗಂಗೆಯನ್ನು ಜನ ಆಂದೋಲನವನ್ನಾಗಿ ಪರಿವರ್ತಿಸುವ ಎಂಜಿನ್‌ ಆಗಿವೆ. ಕಳೆದ ಕೆಲವು ತಿಂಗಳುಗಳು ಈ ಯೋಜನೆಗೆ ಇನ್ನಷ್ಟುಉಪ ಯೋಜನೆಗಳನ್ನು ಸೇರಿಸಿವೆ. ಶೂನ್ಯ ಬಜೆಟ್‌ ನೈಸರ್ಗಿಕ ಕೃಷಿ, ಹಣ ಗಳಿಕೆ, ಕೆಸರು ಮತ್ತು ತ್ಯಾಜ್ಯನೀರಿನ ಮರುಬಳಕೆ, ಸ್ಥಳೀಯ ಉತ್ಪನ್ನಗಳ ಪ್ರಚಾರದಂತಹ ಜೀವನೋಪಾಯ ಉತ್ಪಾದನೆಯ ಅವಕಾಶಗಳ ‘ಘಾಟ್‌ ಮೇ ಹಾತ್‌’, ಆಯುರ್ವೇದ, ಔಷಧೀಯ ಸಸ್ಯಗಳು ಇತ್ಯಾದಿಗಳನ್ನು ಅರ್ಥ ಗಂಗಾ ಕಾರ್ಯಕ್ರಮದ ಅಡಿಯಲ್ಲಿ ಆರು ಹೊಸ ವಿಭಾಗಗಳಂತೆ ಗುರುತಿಸಲಾಗಿದೆ. 

ಆಯುಷ್ಮಾನ್‌ ಭಾರತಕ್ಕೆ ಡಿಜಿಟಲ್‌ ವೇಗದ ಸ್ಪರ್ಶ: ಸಚಿವ ಸುಧಾಕರ್‌

ಭಾಗಿದಾರರ ನಡುವೆ ಒಗ್ಗಟ್ಟಿನಿಂದ ಹೆಚ್ಚೆಚ್ಚು ಕೆಲಸಗಳು ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಸಹಭಾಗಿತ್ವ, ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಮುದಾಯ ಜೆಟ್ಟಿಗಳನ್ನು ಆರಂಭಿಸುವುದು, ಯೋಗ, ಸಾಹಸ ಪ್ರವಾಸೋದ್ಯಮ ಮತ್ತು ಗಂಗಾ ಆರತಿಯ ಪ್ರಚಾರ ಮತ್ತು ಉತ್ತಮ ವಿಕೇಂದ್ರೀಕೃತ ನೀರಿನ ಆಡಳಿತಕ್ಕಾಗಿ ಕಟ್ಟಡ ಮೂಲಸೌಕರ್ಯಗಳ ನಿರ್ಮಾಣದಿಂದ ಸ್ಥಳೀಯ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಮುಂತಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದಂತೆ ಜಲಜ್‌ ಕೇಂದ್ರಗಳ ಸ್ಥಾಪನೆಯು ಸುಸ್ಥಿರ ನದಿ ಕೇಂದ್ರಿತ ಆರ್ಥಿಕ ಮಾದರಿಯನ್ನು ನಿರ್ಮಿಸುವತ್ತ ಒಂದು ಹೆಜ್ಜೆಯಾಗಿದೆ. 75 ಜಲಜ್‌ ಕೇಂದ್ರಗಳ ಪೈಕಿ 26 ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ. ಇದು ನದಿ ದಂಡೆಯಲ್ಲಿ ವಾಸಿಸುವವರಿಗೆ ಸೌಲಭ್ಯಗಳನ್ನು ಸ್ಥಾಪಿಸುವ ಮೂಲಕ ಮತ್ತು ಸ್ಥಳೀಯ ಜನರಿಗೆ ಮಾರ್ಗದರ್ಶನ ನೀಡುವ ಮೂಲಕ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಉಪಕ್ರಮವಾಗಿದೆ.

ಅಟಲ್‌ಜೀ ಕನಸು ನನಸು: ನಾವು ಅಟಲ್‌ಜಿ ಅವರ ಜಯಂತಿಯ ಸಮಯದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಿದ್ದೇವೆ. ನಮಾಮಿ ಗಂಗೆಯ ಹೊಸ ಹಂತಕ್ಕೆ ಇದಕ್ಕಿಂತ ಹೆಚ್ಚು ಸೂಕ್ತ ಸಮಯ ಬೇಕಿಲ್ಲ. ಭಾರತವು ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಜೊತೆಗೆ ನಮ್ಮ ದೇಶವೀಗ ಜಿ20 ಅಧ್ಯಕ್ಷತೆಯನ್ನು ಅಲಂಕರಿಸಿದೆ. ಅಟಲ…ಜಿಯವರು, ಭಾರತವು ಒಂದು ಭೂಮಿಯ ತುಂಡು ಮಾತ್ರವಲ್ಲ, ಇಲ್ಲಿ ಪ್ರತಿ ಕಲ್ಲಿನಲ್ಲೂ ಶಿವನಿದ್ದಾನೆ ಮತ್ತು ಪ್ರತಿ ಹನಿ ನೀರು ಗಂಗಾಜಲವಾಗಿದೆ ಎಂದು ಹೇಳಿದ್ದರು. ನಾವಿಂದು ಅವರ ಕನಸನ್ನು ನನಸು ಮಾಡುತ್ತಿದ್ದೇವೆ. ಇದನ್ನು ನೋಡಿದಾಗ ಅವರು ಖಂಡಿತವಾಗಿಯೂ ಸ್ವರ್ಗದಿಂದ ಮುಗುಳ್ನಗುತ್ತಿರುತ್ತಾರೆ. ‘ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯ’ ಎಂಬ ಆದರ್ಶವನ್ನು ದೃಢವಾಗಿ ಹಿಡಿದಿಟ್ಟುಕೊಂಡು ವಸುಧೈವ ಕುಟುಂಬಕಂನ ನಿಜವಾದ ಅರ್ಥದಂತೆ ಪರಿಸರ ಚಾಂಪಿಯನ್ ಆಗಿ ವಿಶ್ವ ವೇದಿಕೆಯಲ್ಲಿ ನಾವು ಏರುತ್ತಿರುವ ಬಗ್ಗೆ ಅವರು ಖಂಡಿತವಾಗಿಯೂ ಹೆಮ್ಮೆಪಡುತ್ತಾರೆ.

Follow Us:
Download App:
  • android
  • ios