ದೇಶದ ತಾರಾ ಪ್ಯಾರಾ ಅಥ್ಲೀಟ್ ಯೋಗೇಶ್‌ ಕಥುನಿಯಾ, ಪುರುಷರ ಡಿಸ್ಕಸ್‌ ಎಸೆತದ ಎಫ್‌-56 ವಿಭಾಗದ ಸ್ಪರ್ಧೆಯಲ್ಲಿ 42.22 ಮೀ. ದೂರ ದಾಖಲಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್: ಭಾರತದ ತಾರಾ ಅಥ್ಲೀಟ್‌ ಯೋಗೇಶ್‌ ಕಥುನಿಯಾ ಟೋಕಿಯೋ ಬಳಿಕ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲೂ ಪದಕ ಸಾಧನೆ ಮಾಡಿದ್ದಾರೆ. ಸೋಮವಾರ 27 ವರ್ಷದ ಯೋಗೇಶ್‌ ಪುರುಷರ ಡಿಸ್ಕಸ್‌ ಎಸೆತದ ಎಫ್‌-56 ವಿಭಾಗದ ಸ್ಪರ್ಧೆಯಲ್ಲಿ 42.22 ಮೀ. ದೂರ ದಾಖಲಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಈ ಋತುವಿನ ಶ್ರೇಷ್ಠ ಪ್ರದರ್ಶನ ನೀಡಿ ಪದಕಕ್ಕೆ ಕೊರಳೊಡ್ಡಿದರು.

ಟೋಕಿಯೋ ಗೇಮ್ಸ್‌ನಲ್ಲಿ ಯೋಗೇಶ್‌ 44.38 ಮೀ. ದೂರಕ್ಕೆ ಡಿಸ್ಕಸ್‌ ಎಸೆದಿದ್ದರು. ಆದರೆ ಈ ಬಾರಿ ತಮ್ಮ ಪ್ರದರ್ಶನ ಉತ್ತಮಪಡಿಸದಿದ್ದರೂ ಸತತ 2ನೇ ಬೆಳ್ಳಿ ಪದಕ ಗೆಲ್ಲಲು ಯಶಸ್ವಿಯಾದರು. ಬ್ರೆಜಿಲ್‌ನ ಬಾಟಿಸ್ಟಾ ಡೆಸ್‌ ಸಾಂಟೊಸ್‌ 46.86 ಮೀಟರ್‌ನೊಂದಿಗೆ ಚಿನ್ನ ಗೆದ್ದರೆ, ಗ್ರೀಸ್‌ನ ಕಾನ್ಸ್‌ಟಾಂಟಿನಸ್‌ ಟ್ಸುನಿಸ್‌(41.32 ಮೀ.) ಕಂಚಿನ ಪದಕ ಜಯಿಸಿದರು.

ಬಂಗಾರದಲ್ಲಿ ಮಿನುಗಿದ ಸುಮಿತ್‌ ಅಂತಿಲ್‌ ಜಾವೆಲಿನ್‌: ಭಾರತೀಯ ಸೇನೆ ಸೇರುವ ಗುರಿ ಆದ್ರೆ ಆಗಿದ್ದೇ ಬೇರೆ!

ಏನಿದು ಎಫ್‌-56 ವಿಭಾಗ?

ಎಫ್‌-56, ಅಂಗಗಳ ಕೊರತೆ, ಕಾಲಿನ ಉದ್ದದ ವ್ಯತ್ಯಾಸ, ದುರ್ಬಲ ಸ್ನಾಯು ಶಕ್ತಿ ಮತ್ತು ದುರ್ಬಲ ಚಲನೆ ಇರುವ ಕ್ರೀಡಾಪಟುಗಳು ಸ್ಪರ್ಧಿಸುವ ವಿಭಾಗ.

ಡಾಕ್ಟರ್‌ ಆಗಬೇಕಿದ್ದವ ಡಬಲ್‌ ಪದಕ ಗೆದ್ದ ಕಥೆ

ಹರ್ಯಾಣದ ಯೋಗೇಶ್‌ ಕಥುನಿಯಾ ಡಾಕ್ಟರ್‌ ಆಗಬೇಕೆಂದು ಅವರ ಪೋಷಕರು ಬಯಸಿದ್ದರು. ಆದರೆ 9ನೇ ವಯಸ್ಸಿನಲ್ಲಿ ಯೋಗೇಶ್‌ ಪಾರ್ಕ್‌ನಲ್ಲಿ ಬಿದ್ದ ಬಳಿಕ ಎದ್ದು ನಿಲ್ಲಲೂ ಸಾಧ್ಯವಾಗದಂತಾಗಿತ್ತು. ಅವರು ಗ್ಯುಲಿಯನ್‌ ಬೇರ್‌ ಸಿಂಡ್ರೋಮ್‌ ಎಂಬ ಕಾಯಿಲೆಗೆ ತುತ್ತಾಗಿದ್ದಾಗಿ ವೈದ್ಯರು ಹೇಳಿದ್ದರು. ಇದು ನರಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು, ದೇಹದ ಚಲನೆ ಹಾಗೂ ಸ್ನಾಯುಗಳಲ್ಲಿ ದೌರ್ಬಲ್ಯ ಉಂಟಾಗುತ್ತದೆ. ಹೀಗಾಗಿ ಯೋಗೇಶ್‌ಗೆ ಇನ್ನು ನಡೆಯಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. ಆದರೆ ಕೆಲ ವರ್ಷಗಳ ಫಿಸಿಯೋಥೆರಪಿ ಹಾಗೂ ಇತರ ಚಿಕಿತ್ಸೆ ಬಳಿಕ ಯೋಗೇಶ್‌ ಊರುಗೋಲು ಬಳಸಿ ನಿಲ್ಲಲು ಆರಂಭಿಸಿದರು. 3 ವರ್ಷಗಳ ನಡೆಯಲು ನಡೆಯಲು ಆರಂಭಿಸಿದ ಅವರು, 2016ರಲ್ಲಿ ಡಿಸ್ಕಸ್‌ ಎಸೆತ ತರಬೇತಿ ಆರಂಭಿಸಿದರು. ಅವರು ಟೋಕಿಯೋ ಪ್ಯಾರಾಲಿಂಪಿಕ್ಸ್‌ ಬೆಳ್ಳಿ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಬೆಳ್ಳಿ, 1 ಕಂಚು ಗೆದ್ದಿದ್ದಾರೆ.

ಪ್ಯಾರಾಲಿಂಪಿಕ್ಸ್‌ ಕನ್ನಡಿಗ, ಬ್ಯಾಡ್ಮಿಂಟನ್ ತಾರೆ ಸುಹಾಸ್‌ ಯತಿರಾಜ್‌ಗೆ ಒಲಿದ ಬೆಳ್ಳಿ ಪದಕ

03ನೇ ಪದಕ

ಪ್ಯಾರಾಲಿಂಪಿಕ್ಸ್‌ ಡಿಸ್ಕಸ್‌ ಎಸೆತದಲ್ಲಿ ಭಾರತಕ್ಕಿದು 3ನೇ ಪದಕ. 1984ರಲ್ಲಿ ಜೋಗಿಂದರ್‌ ಸಿಂಗ್‌ ಕಂಚು, 2020ರಲ್ಲಿ ಯೋಗೇಶ್‌ ಕಥುನಿಯಾ ಬೆಳ್ಳಿ ಪದಕ ಗೆದ್ದಿದ್ದರು.