ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ ಸಿಂಗಲ್ಸ್ SH6 ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನಿತ್ಯ ಶ್ರೀ ಸಿವನ್ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ
ಪ್ಯಾರಿಸ್: ಭಾರತದ ಪ್ಯಾರಾ ಶಟ್ಲರ್ ನಿತ್ಯ ಶ್ರೀ ಸಿವನ್ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ SH6 ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ರಶ್ರೇಯಾಂಕಿತ ನಿತ್ಯ ಶ್ರೀ ಸಿವನ್, ಇಂಡೋನೇಷ್ಯಾದ ರಿನಾ ಮರ್ಲಿನಾ ಎದುರು 21-14, 21-6 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
2022ರ ವಿಶ್ವ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತೆ ರಿನಾ ಎದುರು ಸಂಪೂರ್ಣ ಪ್ರಾಬಲ್ಯ ಮೆರೆದ ನಿತ್ಯ ಶ್ರೀ ಸಿವನ್ ಕೇವಲ 23 ನಿಮಿಷಗಳಲ್ಲೇ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾದರು. ಆರಂಭದಿಂದಲೇ ನಿತ್ಯ ಶ್ರೀ ಸಿವನ್, ಆಕ್ರಮಣಕಾರಿ ಆಟವಾಡುವ ಮೂಲಕ ಎದುರಾಳಿಯ ವಿರುದ್ದ ಅಂಕಗಳ ಮುನ್ನಡೆಯನ್ನು ಕಾಯ್ದುಕೊಳ್ಳುತ್ತಲೇ ಸಾಗಿದರು. ಮೊದಲ ಗೇಮ್ ಅನ್ನು 21-14 ಅಂತರದಲ್ಲಿ ತಮ್ಮದಾಗಿಸಿಕೊಂಡರು. ಇನ್ನು ಎರಡನೇ ಗೇಮ್‌ನಲ್ಲಿ ಇಂಡೋನೇಷ್ಯಾದ ಶಟ್ಲರ್, ನಿತ್ಯ ಶ್ರೀ ಸಿವನ್‌ಗೆ ಸವಾಲು ಎನಿಸಲೇ ಇಲ್ಲ.
ಡಿಸ್ಕಸ್‌ನಲ್ಲಿ ಬೆಳ್ಳಿ ಬಾಚಿದ ಯೋಗೇಶ್; ಡಾಕ್ಟರ್ ಆಗಬೇಕಿದ್ದವ ಡಬಲ್ ಪ್ಯಾರಾಲಿಂಪಿಕ್ಸ್ ಪದಕ ಗೆದ್ದ ಕಥೆ..!
ನಿತ್ಯ ಶ್ರೀ ಸಿವನ್ ಅವರು ಕಂಚಿನ ಪದಕ ಜಯಿಸುವುದರೊಂದಿಗೆ ಭಾರತ ಸೋಮವಾರವೇ ಬರೋಬ್ಬರಿ 8 ಪದಕಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸೋಮವಾರದ ಅಂತ್ಯದ ವೇಳೆಗೆ ಭಾರತವು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ 15 ಪದಕಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಪೈಕಿ 5 ಪದಕಗಳು ಬ್ಯಾಡ್ಮಿಂಟನ್‌ನಿಂದ ಬಂದರೆ, ಎರಡು ಪದಕಗಳು ಅಥ್ಲೆಟಿಕ್ಸ್ ಹಾಗೂ ಒಂದು ಪದಕ ಆರ್ಚರಿಯಿಂದ ಸೋಮವಾರ ಭಾರತದ ಪಾಲಾಗಿವೆ.
ಪ್ಯಾರಾಲಿಂಪಿಕ್ಸ್ ಕನ್ನಡಿಗ, ಬ್ಯಾಡ್ಮಿಂಟನ್ ತಾರೆ ಸುಹಾಸ್ ಯತಿರಾಜ್‌ಗೆ ಒಲಿದ ಬೆಳ್ಳಿ ಪದಕ
ನಿತ್ಯ ಶ್ರೀ ಸಿವನ್‌ಗೂ ಮೊದಲು ಭಾರತ ಪರ ಸುಹಾಸ್ ಯತಿರಾಜ್, ನಿತೇಶ್ ಕುಮಾರ್, ಮುರುಗೇಶನ್ ತುಳಸೀಮತಿ ಹಾಗೂ ಮನೀಸಾ ರಾಮದಾಸ್ ತಮ್ಮ ತಮ್ಮ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಅಥ್ಲೆಟಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ಪಟು ಸುಮಿತ್ ಅಂತಿಲ್ ಪ್ಯಾರಾಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸುವಲ್ಲಿ ಸಫಲರಾಗಿದ್ದಾರೆ. ಇನ್ನು ಡಿಸ್ಕಸ್ ಥ್ರೋನಲ್ಲಿ ಯೋಗೇಶ್ ಕಥುನಿಯಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಇನ್ನುಳಿದಂತೆ ರಾಕೇಶ್ ಕುಮಾರ್ ಹಾಗೂ ಶೀತಲ್ ದೇವಿ ಮಿಶ್ರ ತಂಡ ವಿಭಾಗದ ಕಾಂಪೌಂಡ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿತು.
